ಸಂಸ್ಕೃತ ಪ್ರಚಾರ ಹೆಚ್ಚು ಹೆಚ್ಚು ನಡೆಯಲಿ : ಡಾ. ಶಾಲಿನಿ ರಜನೀಶ್

೨ ಜನವರಿ ೨೦೨೦, ಬೆಂಗಳೂರು: ಸಂಸ್ಕೃತ ಭಾರತಿ ಸಂಸ್ಥೆಯು ಇಂದು ಸಂಜೆ ಗಿರಿನಗರದ ತಮ್ಮ “ಅಕ್ಷರಂ” ಸಭಾಭವನದಲ್ಲಿ ಡಾ. ನಾಗರತ್ನಾ ಹೆಗಡೆ ಅವರು ರಚಿಸಿದ “ರಾಮಾಯಣೀಯಮ್”, “ರುಚಿರಾಃ ಬಾಲಕಥಾಃ”, ಡಾ. ಎಚ್. ಆರ್. ವಿಶ್ವಾಸ ಅವರ “ಮೂಲಮ್”, ಶ್ರೀ ತಂಗೇಡ ಜನಾರ್ದನ ರಾವ್ ಅವರ “ಅಂತಜ್ರ್ವಲನಮ್” ಎಂಬ ನಾಲ್ಕು ಸಂಸ್ಕೃತ ಗ್ರಂಥಗಳ ಲೋಕಾರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಪ್ರೊ. ಕೆ. ಈ. ದೇವನಾಥನ್, ಡಾ. ಶಾಲಿನೀ ರಜನೀಶ್, ಡಾ. ನಾಗರತ್ನಾ ಹೆಗಡೆ, ಶ್ರೀ ಸತ್ಯನಾರಾಯಣ ಭಟ್

ಮುಖ್ಯ ಅತಿಥಿಗಳಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಡಾ. ಶಾಲಿನೀ ರಜನೀಶ್ ಅವರು ಆಗಮಿಸಿದ್ದರು. ಇನ್‍ಫೋಸಿಸ್ ಫೌಂಡೇಷನ್‍ನ ಶ್ರೀಮತಿ ಸುಧಾಮೂರ್ತಿ ಅವರು ಆನ್ಲೈನ್ ಮುಖಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಈ. ದೇವನಾಥನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಭಾರತಿ ಸಂಸ್ಥೆಯ ವಿದ್ವಾನ್ ಸತ್ಯನಾರಾಯಣ ಭಟ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಶಾಲಿನೀ ರಜನೀಶ್ ಅವರು ತಮ್ಮ ಭಾಷಣದಲ್ಲಿ– “ಸಂಸ್ಕೃತ ಭಾಷೆ ನಮ್ಮ ಎಲ್ಲ ಭಾಷೆಗಳ ತಾಯಿ. ಈ ಭಾಷೆಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು. ತಾವು ಮೊದಲ ಬಾರಿಗೆ ಸರ್ಕಾರಿ ಸೇವೆಗೆ ನೇಮಕಗೊಂಡಾಗ ಸಂಸ್ಕೃತ ಭಾಷೆಯ ಸಹಾಯದಿಂದ ಕನ್ನಡವನ್ನು ಕಲಿಯಲು ಬಹಳ ಸಹಾಯವಾಯಿತೆಂದು ಈ ಸಂದರ್ಭದಲ್ಲಿ ಸ್ಮರಿಸಿದರು. ಸರ್ಕಾರದ ವತಿಯಿಂದಲೂ ಕೂಡ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ e book ಯೋಜನೆಯನ್ನು ಈ ಹಿಂದೆ ರೂಪಿಸಿದ್ದನ್ನು ಸ್ಮರಿಸಿ, ಈ ಕರೋನಾ ಸಂದರ್ಭದಲ್ಲಿ ಒಂದು ಕೋಟಿಗೂ ವಿದ್ಯಾರ್ಥಿಗಳು ಅದನ್ನು ಹೆಚ್ಚಾಗಿ ಉಪಯೋಗಿಸಿದರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಕೃತಭಾಷೆಯ ಗ್ರಂಥಗಳೂ ಕೂಡ e book ರೂಪದಲ್ಲಿ ಎಲ್ಲರಿಗೂ ದೊರೆಯುವಂತಾಗಲಿ ಎಂದು ಆಶಿಸಿದರು.

ಇನ್‍ಫೋಸಿಸ್ ಫೌಂಡೇಷನ್‍ನ ಅಧ್ಯಕ್ಷರಾದ ಶ್ರೀಮತಿ ಸುಧಾಮೂರ್ತಿ ಅವರು ಆನ್ಲೈನ್ ಮುಖಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ – “ತಾವು ರಚಿಸಿದ – ‘ಮಕ್ಕಳಿಗಾಗಿ ನನ್ನ ನೆಚ್ಚಿನ ಕಥೆಗಳು’ ಎಂಬ ಕನ್ನಡ ಪುಸ್ತಕದ ಅನುವಾದ (ರುಚಿರಾಃ ಬಾಲಕಥಾಃ) ಸಂಸ್ಕೃತದಲ್ಲಿ ಆಗಿರುವುದು ಬಹಳ ಖುಷಿ ತಂದಿದೆ. ಸಂಸ್ಕೃತ ಭಾರತಿ ಸಂಸ್ಥೆಯ ಸಾರಸ್ವತ ಸೇವೆ ಪ್ರಶಂಸನೀಯ. ಭಾರತದ ಈ ಸಂಸ್ಕೃತ ಜ್ಞಾನಸಂಪತ್ತನ್ನು ನಾವು ಸಂರಕ್ಷಿಸಬೇಕು. ವಾರಾಣಸಿಯಲ್ಲಿರುವ ಸರಸ್ವತೀ ಗ್ರಂಥ ಭಂಡಾರ ಮುಂತಾದ ಅನೇಕ ಕಡೆಗಳಲ್ಲಿ ಲಕ್ಷಾಂತರ ಅಮೂಲ್ಯ ತಾಳೆಗರಿಗಳ ಸಂಗ್ರಹವಿದೆ. ಅವುಗಳನ್ನು ನಾವೆಲ್ಲರೂ ಸೇರಿ ಸಂರಕ್ಷಿಸಬೇಕು” ಎಂದು ಕರೆ ಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಕೆ. ಈ. ದೇವನಾಥನ್ ಅವರು ಮಾತನಾಡಿ, ಸಂಸ್ಕೃತ ಭಾರತಿ ಸಂಸ್ಥೆಯು ಈಗಾಗಲೇ ಸುಮಾರು 350ಕ್ಕೂ ಹೆಚ್ಚು ಗ್ರಂಥಗಳನ್ನು ಜನಸಾಮಾನ್ಯರಿಗಾಗಿ ಹೊರತಂದಿದೆ. ಲೋಕಾರ್ಪಣೆಗೊಂಡ ಈ ನಾಲ್ಕು ಪುಸ್ತಕಗಳು ಅವುಗಳಿಗೆ ಹೊಸ ಸೇರ್ಪಡೆ. ಸಂಸ್ಥೆಯ ಈ ಕಾಯಕ ಪ್ರಶಂಸನೀಯವಾದುದು. ಕರ್ನಾಟಕ
ಸಂಸ್ಕೃತ ವಿಶ್ವವಿದ್ಯಾಲಯದ ಮೂಲಕವೂ ಕೂಡ ಜನಸಾಮಾನ್ಯರಿಗಾಗಿ ಅನೇಕ ಅಲ್ಪಾವಧಿ ಕೋರ್ಸುಗಳನ್ನು ರೂಪಿಸಲಾಗಿದೆ. ಸಂಸ್ಕೃತ ಭಾಷೆಯನ್ನು ಜನಭಾಷೆಯಾಗಿಸುವತ್ತ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.

ಕಾರ್ಯಕ್ರಮದಲ್ಲಿ ಲೇಖಕರಾದ ಡಾ. ನಾಗರತ್ನಾ ಹೆಗಡೆ, ಡಾ. ಎಚ್. ಆರ್. ವಿಶ್ವಾಸ (ಅನ್ಲೈನ್ ಮುಖಾಂತರ), ಶ್ರೀ ತಂಗೇಡ ಜನಾರ್ದನ ರಾವ್ (ಅನ್ಲೈನ್ ಮುಖಾಂತರ) ಅವರು ಉಪಸ್ಥಿತರಿದ್ದರು. ವಿದ್ವಾನ್ ಸೂರ್ಯ ಹೆಬ್ಬಾರ ಇವರು ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್ ಸತ್ಯನಾರಾಯಣ ಭಟ್ ಆಗಮಿಸಿದವರ ಸ್ವಾಗತ ಕೋರಿದರು. ಸಂಸ್ಕೃತ ಸಂಭಾಷಣಾ ಸಂದೇಶ ಪತ್ರಿಕೆಯ ಸಂಪಾದಕರಾದ ವಿದ್ವಾನ್ ಜನಾರ್ದನ ಹೆಗಡೆ, ಸಂಸ್ಕೃತ ಸಂಭಾಷಣಾ ಸಂದೇಶ ಪತ್ರಿಕೆಯ ಸಹ ಸಂಪಾದಕರಾದ ಡಾ. ಸಚಿನ್ ಕಠಾಳೆ, ಸಂಸ್ಕೃತ ಸಂವರ್ಧನ ಪ್ರತಿಷ್ಠಾನದ ಪದ್ಮಶ್ರೀ ಚಮೂ ಕೃಷ್ಣಶಾಸ್ತ್ರಿ, ಹಿರಿಯ ಸಂಸ್ಕೃತ ವಿದ್ವಾಂಸರಾದ ಶ್ರೀಮತಿ ಅರುಣಾ ಗೋಯಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.