ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಟ್ವಿಟರ್ ನಲ್ಲಿ ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥೂನ್ಬೆರಿ(Thunberg) ಹಂಚಿಕೊಂಡಿದ್ದ ಟೂಲ್ಕಿಟ್ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 21 ವರ್ಷದ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಶನಿವಾರವಷ್ಟೇ, ನಗರದ ಸೋಲದೇವನಹಳ್ಳಿಯ ಆಕೆಯ ಮನೆಯಿಂದ ಪೊಲೀಸರು ಆಕೆಯನ್ನು ಕರೆದೊಯ್ದು ವಿಚಾರಣೆ ನಡೆಸಿದ್ದರು. ಈಕೆ ಟೂಲ್ಕಿಟ್ ಸೃಷ್ಟಿಯ ಪ್ರಧಾನ ಸಂಚುಕೋರಳು ಎಂಬ ಆರೋಪ ಮಾಡಲಾಗಿದೆ.
ದಿಶಾ ರವಿಯನ್ನು ಪೊಲೀಸರು ಬಂಧಿಸಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಎದುರು ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯ ದಿಶಾ ಅವರನ್ನು ಐದು ದಿನಗಳ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ದಿಶಾ ರವಿ, ಬೆಂಗಳೂರಿನ ಮೌಂಟ್ ಕಾರ್ಮಲ್ ನಿಂದ ಬಿಬಿಎ ಪದವಿ ಪಡೆದು, ನಗರದ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಗಸ್ಟ್ 2018ರಲ್ಲಿ ಫ್ರೈಡೇಸ್ ಫಾರ್ ಫ್ಯೂಚರ್ ಆಂದೋಲನದ ಸ್ಥಾಪಕರಲ್ಲೊಬ್ಬಳಾದ ಈಕೆ, ಗ್ರೇಟಾ ಸ್ವೀಡನ್ ಸಂಸತ್ತಿನ ಎದುರು ಆರಂಭಿಸಿದ ಆಂದೋಲನದ ಸಮಯದಲ್ಲೇ ಪರಿಸರದ ಕಾಳಜಿಗಾಗಿ ಫ್ರೈಡೇಸ್ ಫಾರ್ ಫ್ಯೂಚರ್ ಆರಂಭಿಸಲಾಗಿತ್ತು ಎನ್ನಲಾಗಿದೆ. ದಿಶಾ ತಂದೆ ಮೈಸೂರಿನವರಾಗಿದ್ದು, ಅಥ್ಲೆಟಿಕ್ಸ್ ತರಬೇತಿದಾರರಾಗಿದ್ದಾರೆ.
ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಹಲವು ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿವೆ. ಖಲಿಸ್ತಾನಿ ಗುಂಪಿನ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂದು ಕರೆದುಕೊಳ್ಳುವ ಸಂಘಟನೆ ಈ ಟೂಲ್ಕಿಟ್ ಸೃಷ್ಟಿಸಿದೆ ಎಂದು ದೆಹಲಿ ಪೊಲೀಸರು ಹಿಂದೆ ಅನುಮಾನ ವ್ಯಕ್ತಪಡಿಸಿದ್ದರು. ವಾಟ್ಸಾಪ್ ಮೂಲಕ ಟೂಲ್ಕಿಟ್ ಸೃಷ್ಟಿ ಮಾಡುವ, ಗ್ರೇಟಾ ಥೂನ್ಬೆರಿಗೆ ಟೂಲ್ಕಿಟ್ ಒದಗಿಸುವ, ನಂತರ ಪ್ರಸಾರ ಮಾಡಿರುವ ಆರೋಪ ದಿಶಾ ಮೇಲಿದೆ. ಅಲ್ಲದೇ ಖಲಿಸ್ತಾನ್ ಸಂಘಟನೆಯ ಹೋರಾಟದಿಂದ ಪ್ರಭಾವಿತರಾಗಿದ್ದರು ಎನ್ನಲಾಗಿದೆ. ಕೋರ್ಟ್ ನಲ್ಲಿ ದಿಶಾ ಅಳುವಿಗೆ ಶರಣಾಗಿ, ಈ ಆರೋಪವನ್ನು ಒಪ್ಪಿಕೊಂಡಿದ್ದು, ಟೂಲ್ಕಿಟ್ ನ ಕೇವಲ ಒಂದೆರಡು ಸಾಲುಗಳನ್ನು ಸೇರಿಸಿದ್ದಾಗಿ ಹೇಳಿಕೊಂಡಿದ್ದಾಳೆ.
ಆಕೆಯ ಬಂಧನವಾಗುತ್ತಿದ್ದಂತೆ ಹಲವು ಬುದ್ಧಿಜೀವಿಗಳು, ಕಾಂಗ್ರೆಸ್ ನಾಯಕರು, ಮಾಧ್ಯಮದ ಕೆಲವರು ದಿಶಾ ಪರ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ದೆಹಲಿ ಪೊಲೀಸ್ ಸರಣಿ ಟ್ವಿಟ್ ಮೂಲಕ ದಿಶಾ ಮಾಡಿರುವುದು ಸಣ್ಣ ಅಪರಾಧವಲ್ಲ. ಟೂಲ್ಕಿಟ್ ಸಹಾಯದಿಂದ ದೇಶದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಪ್ರಾದೇಶಿಕ ವಲಯಗಳಲ್ಲಿ ಯುದ್ಧ ಸಾರುವ ಸಾಮರ್ಥ್ಯ ಹೊಂದಿದ್ದಾಗಿತ್ತು ಎಂದು ತಿಳಿಸಿದೆ.