17 ಮಾರ್ಚ್ 2021, ಬೆಂಗಳೂರು: ನಗರದ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದ ಶಾಲೆಯ ಆವರಣದಲ್ಲಿ ಮಾರ್ಚ್ 19 ರಿಂದ ಮಾರ್ಚ್ 20ರ ವರೆಗೆ ನಡೆಯುವ ಆರೆಸ್ಸೆಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಪತ್ರಿಕಾ ಗೋಷ್ಠಿಯಲ್ಲಿ ಆರೆಸ್ಸೆಸ್ ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಶ್ರೀ ಅರುಣ್ ಕುಮಾರ್ ಮಾತನಾಡಿದರು. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಒಳಗೊಂಡಿರುವ ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ನಾ. ತಿಪ್ಪೇಸ್ವಾಮಿಯವರು ಉಪಸ್ಥಿತರಿದ್ದರು.
ಕಳೆದ ಬಾರಿಯ ಎಬಿಪಿಎಸ್ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ನಡೆಯಲಿಲ್ಲ. ಕಳೆದ ನವೆಂಬರ್ ನಲ್ಲಿ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ (ಎಬಿಕೆಎಂ) ಕೂಡಾ ಕೋವಿಡ್ ಕಾರಣದಿಂದಾಗಿಯೇ 11 ಸ್ಥಳಗಳಲ್ಲಿ ನಡೆಯಿತು. ಕಳೆದ ವರ್ಷ ಕೆಲವು ಕಾಲ ಶಾಖೆಗಳು ಕೂಡಾ ನಡೆಯಲಿಲ್ಲ. ಸಾಮಾನ್ಯವಾಗಿ ಎಬಿಪಿಎಸ್ ನಲ್ಲಿ 1,500 ಪ್ರತಿನಿಧಿಗಳು ಪ್ರತಿ ವರ್ಷ ಭಾಗವಹಿಸುತ್ತಾರೆ. ಆದರೆ ಈ ವರ್ಷ 450 ಜನರು ಮಾತ್ರ ಇರುತ್ತಾರೆ. ಪ್ರತಿಬಾರಿಯಂತೆ ಮೂರು ದಿನಗಳ ಬದಲಾಗಿ ಈ ಬಾರಿಯ ಅಧಿವೇಶನ ಎರಡು ದಿನಗಳ ಕಾಲ ಮಾತ್ರ ನಡೆಯುತ್ತದೆ. ಮಾರ್ಚ್ 19 ರ ಬೆಳಗ್ಗೆ 8.30 ಕ್ಕೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಉದ್ಘಾಟನೆಯಾಗುತ್ತದೆ. 9 ಗಂಟೆಗೆ ಪತ್ರಿಕಾಗೋಷ್ಠಿ ಇರುತ್ತದೆ. ಅದರಲ್ಲಿ ಸಂಘದ ವಿವಿಧ ಕಾರ್ಯ ಚಟುವಟಿಕೆಗಳ ವರದಿ ಕೂಡಾ ಇರಲಿದೆ. ಈ ವರ್ಷ ಸಂಘ ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆಯೂ 19 ರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಾಮಾನ್ಯವಾಗಿ ಮೂರು ವರ್ಷಕ್ಕೊಮ್ಮೆ ಸರಕಾರ್ಯವಾಹರ ಚುನಾವಣೆ ನಡೆಯುತ್ತದೆ ಹಾಗೂ ಅದು ನಾಗಪುರದಲ್ಲಿ ನಡೆಯುತ್ತದೆ. ಈ ಬಾರಿ ಕೋವಿಡ್ ಕಾರಣದಿಂದಾಗಿ ನಾಗಪುರದಲ್ಲಿ ನಡೆಯಬೇಕಿದ್ದ ಎಬಿಪಿಎಸ್ ಅನ್ನು ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಾರ್ಚ್ 20 ರಂದು ಬೆಳಗ್ಗೆ ಸರಕಾರ್ಯವಾಹರ ಚುನಾವಣೆ ನಡೆಯಲಿದೆ. ಅದೇ ದಿನ 12.30 ಕ್ಕೆ ಪತ್ರಿಕಾಗೋಷ್ಠಿ ಇರಲಿದೆ. ಇದರಲ್ಲಿ ಕಳೆದ ಒಂದು ವರ್ಷದ ವರದಿ ಹಾಗೂ ನಿರ್ಣಯಗಳ ಬಗ್ಗೆ ಸರಕಾರ್ಯವಾಹರು ಮಾಹಿತಿ ನೀಡಲಿದ್ದಾರೆ. ಕಳೆದ ಮೂರು ವರ್ಷಗಳ ಯೋಜನೆಗಳ ಬಗ್ಗೆ ಪರಿಶೀಲನೆ ಕೂಡಾ ನಡೆಯಲಿದೆ. ಕಳೆದ ಬಾರಿ ಜಲಸಂರಕ್ಷಣೆ, ವೃಕ್ಷಾರೋಪಣ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದರ ಗುರಿ ಇತ್ತು. ಈ ಬಾರಿ ಆ ದೃಷ್ಟಿಯಿಂದ ಎಷ್ಟು ಪ್ರಗತಿ ಆಗಿದೆ ಎಂಬ ಬಗ್ಗೆ ಕೂಡಾ ಪರಿಶೀಲನೆ ನಡೆಯಲಿದೆ. ಮುಂದಿನ ಮೂರು ವರ್ಷಗಳ ಯೋಜನೆ ಕೂಡಾ ಈ ಎರಡು ದಿನಗಳ ಸಭೆಯಲ್ಲಿ ನಡೆಯಲಿದೆ ಎಂದು ಅರುಣ್ ಕುಮಾರ್ ಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ಶಾಖೆ ಹಲವು ತಿಂಗಳ ಕಾಲ ನಡೆಯಲಿಲ್ಲವಾದರೂ ಸಮಾಜದ ಜೊತೆ ಸೇವಾಕಾರ್ಯ ಉತ್ತಮವಾಗಿ ನಡೆದಿದೆ. ಹೊಸಬರನ್ನು ಜೋಡಿಸುವ ಬಗ್ಗೆ, ಸಮಾಜದಲ್ಲಿ ಪರಿವರ್ತನೆ ತರುವ ಬಗ್ಗೆ ಚರ್ಚೆ ನಡೆಯಲಿದೆ. ಇಲ್ಲಿಗೆ ಬರಲು ಸಾಧ್ಯವಾಗದೇ ಇರುವವರಿಗೆ, 44 ಪ್ರಾಂತ ಕೇಂದ್ರಗಳಲ್ಲಿ ಆನ್ ಲೈನ್ ಬೈಠಕ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಆನ್ ಲೈನ್ ನಲ್ಲಿ ಸಿಗಲಿದೆ.ಸಂಘಕಾರ್ಯದ ವಿಸ್ತಾರದ ಬಗ್ಗೆ ಚರ್ಚೆ, ಯೋಜನೆ ನಡೆಯಲಿದೆ. ಪ್ರತಿ ಕುಟುಂಬವನ್ನು ತಲುಪುವ ಬಗ್ಗೆ ಯೋಜನೆ ನಡೆಯಲಿದೆ. ಸಮಾಜಕಾರ್ಯದಲ್ಲಿ ನಮ್ಮಂತೆ ಯೋಚಿಸುವ ಇತರ ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡುವ ಬಗ್ಗೆಯೂ ಯೋಜನೆ ಇದೆ. ನಮ್ಮ ಕೆಲಸ ಕಡಿಮೆಯಿರುವ ಕಡೆಗಳಲ್ಲಿ ಹೆಚ್ಚಿನ ಗಮನ ಕೊಟ್ಟು ಎಲ್ಲ ಕಡೆಯೂ ಸಂಘಕಾರ್ಯ ನಡೆಯುವಂತೆ ಮಾಡುವುದು ನಮ್ಮ ಗುರಿ.
ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖರಾದ ಶ್ರೀ ನರೇಂದ್ರ ಠಾಕುರ್, ಶ್ರೀ ಸುನಿಲ್ ಅಂಬೇಕರ್, ಕರ್ನಾಟಕ ದಕ್ಷಿಣ ಪ್ರಾಂತದ ಪ್ರಚಾರ ಪ್ರಮುಖರಾದ ಶ್ರೀ ಈ ಎಸ್ ಪ್ರದೀಪ್ ಉಪಸ್ಥಿತರಿದ್ದರು