ಸ್ವಾತಂತ್ರ್ಯಕ್ಕಾಗಿ ಆರೆಸ್ಸೆಸ್ ಹೋರಾಡಲಿಲ್ಲವೆ?
ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತರು, ಅಂಕಣಕಾರರು.
(ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟ ಲೇಖನ)
“ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಹೋರಾಟ ಮಾಡಿಲ್ಲ. ದೇಶಕ್ಕಾಗಿ ತ್ಯಾಗ, ಬಲಿದಾನವನ್ನೂ ಮಾಡಿಲ್ಲ. ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯದ ಫಲಾನುಭವಿಗಳಾಗಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದ ಬಿಜೆಪಿಯವರು ಅಧಿಕಾರದಲ್ಲಿದ್ದಾರೆ…. ಮೊಘಲರು, ಬ್ರಿಟಿಷರ ಆಸ್ಥಾನದಲ್ಲಿ ಪ್ರಮುಖ ಹುದ್ದೆಯಲ್ಲಿದ್ದವರು ಇದೇ ಆರೆಸ್ಸೆಸ್ ಹಾಗೂ ಬಿಜೆಪಿಯ ಹಿಂದಿನ ತಲೆಮಾರಿನವರಲ್ಲವೆ?” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊನ್ನೆ ಕಾಂಗ್ರೆಸ್ ಸಭೆಯೊಂದರಲ್ಲಿ ಆಕ್ರೋಶಭರಿತರಾಗಿ ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ.
ಸಿದ್ದರಾಮಯ್ಯ ಅಥವಾ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು ಆಗಾಗ ಸಂದರ್ಭ ಸಿಕ್ಕಾಗಲೆಲ್ಲ ಇಂತಹ ಆರೋಪಗಳನ್ನು ಬಿಡುಬೀಸಾಗಿ ಬಿಜೆಪಿ ವಿರುದ್ಧ ಖಡ್ಗದಂತೆ ಝಳಪಿಸುತ್ತಲೇ ಇರುತ್ತಾರೆ. ಸಿದ್ದರಾಮಯ್ಯ ಅವರ ಆರೋಪ ಒಂದು ರೀತಿಯಲ್ಲಿ ತಾಂತ್ರಿಕವಾಗಿ ನಿಜ. ಆದರೆ ತಾತ್ವಿಕವಾಗಿ ಯೋಚಿಸಿದರೆ ಸುಳ್ಳು.
ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ ಎನ್ನುವುದು ಶೇ. ೧೦೦ಕ್ಕೆ ೧೦೦ ನಿಜ. ಏಕೆಂದರೆ ಬಿಜೆಪಿ ಪಕ್ಷ ಸ್ಥಾಪನೆಯಾಗಿದ್ದೆ ಏಪ್ರಿಲ್ ೬, ೧೯೮೦ರಲ್ಲಿ. ಬಿಜೆಪಿಯ ಪೂರ್ವಾಶ್ರಮದ ಪಕ್ಷವಾದ ಜನಸಂಘ ಕೂಡ ಸ್ಥಾಪನೆಯಾಗಿದ್ದು ಅಕ್ಟೋಬರ್ ೨೧, ೧೯೫೧ರಲ್ಲಿ. ಹೀಗಾಗಿ ಜನಸಂಘವಾಗಲಿ, ಅದರ ನಂತರದ ಅವತಾರವಾಗಿರುವ ಬಿಜೆಪಿಯಾಗಲೀ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಿಷಯ ಹೀಗಿದ್ದರೂ ಬಿಜೆಪಿ ಮುಖಂಡರನ್ನು ಅವಮಾನಿಸಲೆಂದೇ ಸಿದ್ದರಾಮಯ್ಯ, ಖರ್ಗೆ ಮತ್ತಿತರ ನಾಯಕರು ಇಂತಹುದೊಂದು ಅಸಂಗತ ಹೇಳಿಕೆ ನೀಡುತ್ತಲೇ ಇರುತ್ತಾರೆ. ತಾತ್ಕಾಲಿಕವಾಗಿ ಸಂಭ್ರಮ ಪಡುತ್ತಲೇ ಇರುತ್ತಾರೆ. ಈ ಒಂದು ಅಂಶ ಹೊರತುಪಡಿಸಿದರೆ ಕಾಂಗ್ರೆಸ್ ನಾಯಕರಿಗೆ ಸಂಭ್ರಮಿಸಲು, ಬೀಗಲು ಬೇರೆ ಯಾವುದೇ ಮಹತ್ವದ ಅಂಶಗಳು ದೊರಕುವುದಿಲ್ಲ ಎಂಬುದು ಮಾತ್ರ ಹಲವರಿಗೆ ಗೊತ್ತಿಲ್ಲ.
ಆದರೆ ಜನಸಂಘ, ಅನಂತರ ಬಿಜೆಪಿ ಪಕ್ಷಗಳ ಹುಟ್ಟಿಗೆ ಪ್ರೇರಣೆ ನೀಡಿದ ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ ಎಂಬ ಮಿಥ್ಯಾರೋಪವೂ ಆಗಾಗ ಕೇಳಿಬರುವುದುಂಟು. ನೈಜ ಇತಿಹಾಸದ ಅರಿವಿಲ್ಲದವರಿಗೆ ಇದು ಸಹ ನಿಜವಿರಬೇಕೆಂದೇ ಅನಿಸುವುದುಂಟು. ವಾಸ್ತವ ಮಾತ್ರ ಅದಲ್ಲ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಂ ಹೆಡಗೇವಾರ್ ಅವರು ಸಂಘವನ್ನು ೧೯೨೫ರಲ್ಲಿ ಆರಂಭಿಸುವುದಕ್ಕೂ ಮುನ್ನ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದರು. ನಾಗಪುರ ಪ್ರದೇಶ ಕಾಂಗ್ರೆಸ್ ಮುಖಂಡರೂ ಆಗಿದ್ದರು. ಕೊಲ್ಕತ್ತೆಯಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಹಲವು ಕ್ರಾಂತಿಕಾರಿಗಳೊಡನೆ ನಿಕಟ ಒಡನಾಟವನ್ನೂ ಇಟ್ಟುಕೊಂಡಿದ್ದರು. ಹಾಗಾಗಿ ಬ್ರಿಟಿಷ್ ಗೂಢಚಾರರ ಕಣ್ಣು ಡಾ. ಹೆಡಗೇವಾರರ ಮೇಲೂ ನೆಟ್ಟಿತ್ತು. ಕ್ರಾಂತಿಕಾರಿಗಳ ‘ಅನುಶೀಲನ ಸಮಿತಿ’ಯ ಸದಸ್ಯರಲ್ಲಿ ಅವರೂ ಒಬ್ಬರಾಗಿದ್ದರು.
೧೯೧೯-೧೯೨೪ರ ಸಂದರ್ಭದಲ್ಲಿ ನಡೆದ ಖಿಲಾಫತ್ ಚಳವಳಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಡಾ. ಹೆಡಗೇವಾರ್ ಬಂಧನಕ್ಕೊಳಗಾಗಿ ಒಂದು ವರ್ಷದ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ೧೯೩೦ರಲ್ಲಿ ನಡೆದ ಜಂಗಲ್ ಸತ್ಯಾಗ್ರಹದಲ್ಲೂ ಡಾ. ಹೆಡಗೇವಾರ್ ಪಾಲ್ಗೊಂಡಿದ್ದರು. ಕಾಂಗ್ರೆಸ್ ಸಂಪೂರ್ಣ ಸ್ವರಾಜ್ಯ ಪ್ರಾಪ್ತಿಯ ಘೋಷಣೆ ಹೊರಡಿಸಿದಾಗ ಡಾ.ಹೆಡಗೇವಾರ್ ಸಂಘದ ಎಲ್ಲಾ ಪ್ರಮುಖರಿಗೆ ಈ ಹಿನ್ನಲೆಯಲ್ಲಿ ಪತ್ರವೊಂದನ್ನು ಬರೆದಿದ್ದರು: “ಕಾಂಗ್ರೆಸ್ ಕಾರ್ಯಕಾರಿ ಸಮಿತಿ ೧೯೩೦ರ ಜನವರಿ ೨೬ನೇ ದಿನವನ್ನು ದೇಶದಾದ್ಯಂತ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲು ಘೋಷಣೆ ಹೊರಡಿಸಿದೆ. ಸ್ವಾತಂತ್ರ್ಯ ಪ್ರಾಪ್ತಿ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸುವ ಯಾವುದೇ ಸಂಸ್ಥೆಯ ಜೊತೆಗೆ ಸಹಕರಿಸುವುದು ಸಂಘದ ಕಾರ್ಯಕರ್ತರ ಕರ್ತವ್ಯ. ಹಾಗಾಗಿ ಸಂಘದ ಎಲ್ಲಾ ಶಾಖೆಗಳಲ್ಲಿ ಆ ದಿನ ಸಂಜೆ ೬ ಗಂಟೆಗೆ ಒಟ್ಟಿಗೆ ಸ್ವಯಂಸೇವಕರು ಸೇರಿ ರಾಷ್ಟ್ರೀಯ ಧ್ವಜವಾಗಿರುವ ಭಗವಾಧ್ವಜಕ್ಕೆ ಗೌರವ ಸಲ್ಲಿಸಬೇಕು. ಶಾಖೆಗಳಲ್ಲಿ ನಡೆದ ಈ ಕಾರ್ಯಕ್ರಮದ ವರದಿಯನ್ನು ನಮಗೆ ತಲಪಿಸಬೇಕು.” (ಡಾ. ಕೇಶವ ಬಲಿರಾಂ ಹೆಡಗೇವಾರ್ ಕೃತಿ. ಲೇಖಕ : ರಾಕೇಶ್ ಸಿನ್ಹಾ. ಪುಟ -೯೫)
ಡಾ. ಹೆಡಗೇವಾರ್ ಭಗವಾಧ್ವಜವನ್ನೇ ರಾಷ್ಟ್ರಧ್ವಜವೆಂದು ಕರೆದಿದ್ದೇಕೆ ಎಂದು ಕೆಲವರು ಟೀಕಿಸುವುದೂ ಇದೆ. ಅದಕ್ಕೂ ಸೂಕ್ತ ಸಮರ್ಥನೆ ಇದ್ದೇ ಇದೆ. ೧೯೩೧ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮೌಲಾನಾ ಕಲಾಂ ಆಜಾದ್ರನ್ನೊಳಗೊಂಡ ಒಂದು ಧ್ವಜಸಮಿತಿಯನ್ನು ರಚಿಸಿತ್ತು. ಆ ಸಮಿತಿ ತನ್ನ ಅಂತಿಮ ವರದಿಯಲ್ಲಿ ‘ರಾಷ್ಟ್ರಧ್ವಜವು ಒಂದೇ ಬಣ್ಣದ್ದಾಗಿರುವುದು ಸೂಕ್ತ. ಈ ದೇಶದ ಸನಾತನ ಪರಂಪರೆ, ಇತಿಹಾಸದ ಹಿನ್ನೆಲೆಯಲ್ಲಿ ಕೇಸರಿ ಅಥವಾ ಕಾವಿ ಬಣ್ಣದ ಧ್ವಜವೇ ರಾಷ್ಟ್ರಧ್ವಜ ಆಗುವುದು ವಿಹಿತ’ ಎಂದು ಅಧಿಕೃತವಾಗಿ ಸೂಚಿಸಿತ್ತು. ಆದರೆ ಗಾಂಧಿ, ನೆಹರು ಇತ್ಯಾದಿಗಳ ಓಲೈಕೆ ರಾಜಕೀಯ ಕಾರಣಗಳಿಗಾಗಿ ಭಗವಾ ಧ್ವಜ ರಾಷ್ಟ್ರಧ್ವಜ ಆಗಲಿಲ್ಲ. ತ್ರಿವರ್ಣ ಧ್ವಜ (ಕೇಸರಿ, ಬಿಳಿ, ಹಸಿರು, ನಡುವೆ ಅಶೋಕ ಚಕ್ರ ರಾಷ್ಟ್ರಧ್ವಜ)ಆಯ್ತು ಎನ್ನುವುದು ಬೇರೆಯೇ ಸಂಗತಿ. ಆದರೆ ಸಂಘ ಮಾತ್ರ ಈ ಧ್ವಜ ರಾಜಕೀಯದ ಚರ್ಚೆಗೆ ತನ್ನ ಸಮಯ ವ್ಯರ್ಥಗೊಳಿಸಲಿಲ್ಲ.
ಡಾ. ಹೆಡಗೇವಾರ್ ಸ್ವಾತಂತ್ರ್ಯಕ್ಕಾಗಿ ನಡೆದ ಅಸಹಕಾರ ಆಂದೋಲನದಲ್ಲಿ ಪಾಲ್ಗೊಂಡು ಉಗ್ರ ಭಾಷಣ ಮಾಡಿದ್ದರು. ಅದು ಅತ್ಯಂತ ಪ್ರಖರವಾಗಿತ್ತು. ಅದೇ ಕಾರಣಕ್ಕೆ ಅವರ ಬಂಧನವೂ ಆಗಿತ್ತು. ಕೋರ್ಟಿನಲ್ಲಿ ತನ್ನ ಆ ಭಾಷಣದ ಕುರಿತು ಸಮರ್ಥಿಸಿಕೊಂಡ ಡಾ. ಹೆಡಗೇವಾರರ ನುಡಿಗಳು ಇನ್ನಷ್ಟು ಜ್ವಲಂತ ಕೆಂಡದುಂಡೆಯಂತಿತ್ತು. ಅವರ ಸಮರ್ಥನಾ ಹೇಳಿಕೆಯನ್ನು ಕೇಳಿದ ಬ್ರಿಟಿಷ್ ಮ್ಯಾಜಿಸ್ಟ್ರೇಟರು ‘ಇವರ ಮೂಲ ಭಾಷಣಕ್ಕಿಂತಲೂ ಈ ಹೇಳಿಕೆಯೇ ಹೆಚ್ಚು ರಾಜದ್ರೋಹಕರವಾಗಿದೆ’ (This statement is more seditious than his speech) ಎಂದು ಉದ್ಗಾರವೆತ್ತಿದ್ದರು! ಆದರೆ ಕಾಂಗ್ರೆಸ್ನಂತಹ ಸೀಮಿತ ಉದ್ದೇಶದ ಸಂಸ್ಥೆಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂಬುದನ್ನು ಡಾ. ಹೆಡಗೇವಾರ್ ಆಗಲೇ ಅರಿತಿದ್ದರು. ಸಮಗ್ರ ಸಮಾಜದ ಏಕತೆಗೆ ಸಂಘ ಸ್ಥಾಪನೆಯೊಂದೇ ದಿವ್ಯ ಔಷಧ ಎಂದು ಭಾವಿಸಿದ ಅವರು ಸಂಘವನ್ನು ಸ್ಥಾಪಿಸಿದ್ದರು.
ನೆಹರು ಮತ್ತಿತರ ಕೆಲವರನ್ನು ಹೊರತುಪಡಿಸಿದರೆ ಆಗ ಕಾಂಗ್ರೆಸ್ನಲ್ಲಿದ್ದ ಎಲ್ಲ ಮುಖಂಡರೂ ಆರೆಸ್ಸೆಸ್ ವಿರೋಧಿಗಳೇನಾಗಿರಲಿಲ್ಲ. ನೆಹರು ಸರ್ಕಾರದಲ್ಲಿ ಉಪಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲರು ಲಕ್ನೋದ ಸಭೆಯೊಂದರಲ್ಲಿ ಆರೆಸ್ಸೆಸನ್ನು ಹೊಗಳಿ ಮಾತನಾಡಿದ್ದು ೧೯೪೮ ಜನವರಿ ೭ರ ‘ದಿ ಹಿಂದು’ ಪತ್ರಿಕೆಯಲ್ಲಿ ವರದಿಯಾಗಿತ್ತು. ಆ ವರದಿ ಹೀಗಿದೆ: “ಕಾಂಗ್ರೆಸ್ನಲ್ಲಿ ಅಧಿಕಾರದಲ್ಲಿರುವ ಕೆಲವರು ತಮ್ಮ ಪ್ರಭಾವದಿಂದ ಸಂಘವನ್ನು ಹಣಿಯಬಹುದೆಂದು ಭಾವಿಸಿದ್ದಾರೆ. ‘ದಂಡ’ವನ್ನು ಬಳಸಿ ಯಾವುದೇ ಸಂಘಟನೆಯನ್ನು ಹತ್ತಿಕ್ಕಲಾಗದು. ದಂಡ ಇರುವುದು ಕಳ್ಳರು ಮತ್ತು ಡಕಾಯಿತರಿಗಾಗಿ. ಆರೆಸ್ಸೆಸ್ನವರು ಎಷ್ಟಾದರೂ ಕಳ್ಳರು ಅಥವಾ ಡಕಾಯಿತರಲ್ಲ. ಈ ದೇಶವನ್ನು ಪ್ರೀತಿಸುವ ದೇಶಭಕ್ತರು ಅವರು.”
೧೯೬೩ರ ಜನವರಿ ೨೬ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್ನಲ್ಲಿ ಸಂಘದ ಗಣವೇಷಧಾರಿ ಸ್ವಯಂಸೇವಕರು ಪಾಲ್ಗೊಂಡಿ ದ್ದರು. ಆಕರ್ಷಕ ಪಥಸಂಚಲನ ನಡೆಸಿ ಪ್ರೇಕ್ಷಕರ ಗೌರವಾದರಗಳಿಗೆ ಪಾತ್ರರಾಗಿದ್ದರು. ಗಣರಾಜ್ಯೋತ್ಸವ ಪೆರೇಡ್ಗೆ ಸಂಘಕ್ಕೆ ಆಮಂತ್ರಣ ನೀಡಿದ್ದು ಯಾರು? ಇದೇ ರಾಹುಲ್ವಗಾಂಧಿಯ ಮುತ್ತಾತ, ಆಗಿನ ಪ್ರಧಾನಿ ಪಂ. ನೆಹರು! ಸಂಘ ಕೋಮುವಾದಿಯಾಗಿದ್ದಿದ್ದರೆ ಇಂತಹ ಗೌರವದ ಆಮಂತ್ರಣ ಅದಕ್ಕೆ ಸಿಗುತ್ತಿತ್ತೆ.
ಭಾರತರತ್ನ ಡಾ. ಭಗವಾನ್ದಾಸ್ ಆರೆಸ್ಸೆಸ್ ಕುರಿತು ಬರೆದಿರುವುದರತ್ತ ಕೊಂಚ ಕಣ್ಣು ಹಾಯಿಸಿ : “೧೯೪೭ ಸೆಪ್ಟೆಂಬರ್ ೧೦ರಂದು ಮುಸ್ಲಿಂ ಲೀಗ್ ಭಾರತ ಸರ್ಕಾರದ ಎಲ್ಲ ಪ್ರಮುಖರನ್ನು , ಹಿಂದೂ ಅಧಿಕಾರಿಗಳನ್ನು ಮತ್ತು ಸಾವಿರಾರು ಹಿಂದು ನಾಗರಿಕರನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಸಂಚು ನಡೆಸಿತ್ತು. ಕೆಂಪುಕೋಟೆಯ ಮೇಲೆ ಪಾಕ್ ಧ್ವಜ ಹಾರಿಸಲು ಹುನ್ನಾರ ನಡೆಸಿತ್ತು. ಆ ಸಂಚಿನ ಮಾಹಿತಿಯನ್ನು ಹೇಗೋ ಪಡೆದು ನೆಹರು ಮತ್ತು ಸರ್ದಾರ್ ಪಟೇಲ್ ಅವರಿಗೆ ತಿಳಿಸಿದ್ದು ಸಂಘದ ಸ್ವಯಂಸೇವಕರು ಎಂದು ನಾನು ವಿಶ್ವಾಸಾರ್ಹ ಮೂಲಗಳಿಂದ ಬಲ್ಲೆ. ನೆಹರು ಮತ್ತು ಪಟೇಲರಿಗೆ ಈ ಸ್ಫೋಟಕ ಮಾಹಿತಿಯನ್ನು ಸಕಾಲದಲ್ಲಿ ಈ ತ್ಯಾಗಶೀಲ ಯುವಕರು ಒದಗಿಸದಿದ್ದಲ್ಲಿ ಭಾರತ ಸರ್ಕಾರವೇ ಉಳಿಯುತ್ತಿರಲಿಲ್ಲ. ದೇಶದ ಹೆಸರನ್ನು ಪಾಕಿಸ್ಥಾನವೆಂದು ಬದಲಾಯಿಸಬೇಕಾಗಿತ್ತು. ಕೋಟ್ಯಂತರ ಹಿಂದುಗಳು ಬಲಾತ್ಕಾರವಾಗಿ ಮುಸ್ಲಿಮರಾಗಬೇಕಾಗಿತ್ತು. ಇಲ್ಲವೇ ಹತ್ಯೆಗೀಡಾಗಬೇಕಾಗಿತ್ತು. ಇಂತಹ ಆರೆಸ್ಸೆಸ್ನ ಲಕ್ಷಾಂತರ ದೇಶಭಕ್ತ ಯುವಕರ ಶಕ್ತಿಯನ್ನು ನಮ್ಮ ಸರ್ಕಾರ ಧನಾತ್ಮಕವಾಗಿ ಬಳಸಿಕೊಳ್ಳಬೇಕು’
ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ಸಲ್ಲದ ಆರೋಪಗಳನ್ನೆಸಗುವ ಮುನ್ನ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಹಿರಿಯರು, ಗಣ್ಯರು ಆರೆಸ್ಸೆಸ್ ಕುರಿತು ಏನು ಹೇಳಿದ್ದಾರೆ ಎಂಬುದನ್ನು ಒಮ್ಮೆಯಾದರೂ ಪರಾಂಬರಿಸಬಾರದೆ? ನಿಜ ಹೇಳಬೇಕೆಂದರೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಕಾಂಗ್ರೆಸ್ನವರು ಮಾತ್ರವಲ್ಲ, ಅದಕ್ಕಿಂತಲೂ ಮೂರ್ನಾಲ್ಕು ಪಟ್ಟು ಅದೆಷ್ಟೋ ಕ್ರಾಂತಿಕಾರಿಗಳು, ಅಜ್ಞಾತ ವೀರರು, ನೇತಾಜಿ, ಸಾವರ್ಕರ್, ಭಗತ್ಸಿಂಗ್, ನೀರಾ ಆರ್ಯೆ, ಉಧಂಸಿಂಗ್ , ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮುಂಡರಗಿ ಭೀಮರಾಯ ಮುಂತಾದ ಅಸಂಖ್ಯಾತರು ಹೋರಾಡಿದ್ದಾರೆ. ಪಾಪ, ಕಾಂಗ್ರೆಸ್ ಮುಖಂಡರಿಗೆ ಈ ಪ್ರಾತಃಸ್ಮರಣೀಯರ ಹೆಸರು ಕೂಡ ಗೊತ್ತಿರಲಿಕ್ಕಿಲ್ಲ!