ಭಾರತೀಯ ಸ್ವಾತಂತ್ರ್ಯ ಹೋರಾಟದ ಪುನರವಲೋಕನ
– ದತ್ತಾತ್ರೇಯ ಹೊಸಬಾಳೆ

ವಸಾಹತುಷಾಹಿಯ ಗುಲಾಮಗಿರಿಯಿಂದ ಬಿಡುಗಡೆಯಾದ ಸಂತಸದ ಸ್ವಾತಂತ್ರ್ಯದ ಹಬ್ಬವನ್ನು ಭಾರತವು ಇಂದು ಆಚರಿಸುತ್ತಿದೆ. ಈ ಸಂಭ್ರಮಾಚರಣೆಯ ನಡುವೆ, ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಸ್ವತಂತ್ರ ಭಾರತವು ಹೇಗೆ ಪ್ರಗತಿ ಪಥದಲ್ಲಿ ಮುಂದೆ ಸಾಗಿದೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತವೆ. ಜೊತೆಜೊತೆಗೇ, ಈ ಸ್ವಾತಂತ್ರ್ಯಗಳಿಕೆಯ ಹಾದಿಯಲ್ಲಿನ ಕಳೆದ ನಾಲ್ಕು ನೂರು ವರ್ಷಗಳ ಸಂಘರ್ಷಮಯ ಹಾಗೂ ತ್ಯಾಗಮಯ ಇತಿಹಾಸವನ್ನೂ ಸಹಜವಾಗಿಯೇ ನಾವು ಸ್ಮರಿಸುತ್ತೇವೆ.

ಸ್ವದೇಶಿ-ಸ್ವರಾಜ್ಯ-ಸ್ವಧರ್ಮ ಇವುಗಳ ಮೂಲಕ ಪ್ರಕಟವಾದ ‘ಸ್ವ’ ಎಂಬ ಭಾವವೇ ಇಡೀ ದೇಶದಲ್ಲಿ ವಿದ್ಯುತ್ ಸಂಚಾರ ಉಂಟುಮಾಡಿ, ವಸಾಹತುಷಾಹಿಯ ವಿರುದ್ಧದ ಈ ರಾಷ್ಟ್ರೀಯ ಆಂದೋಲನಕ್ಕೆ ಪ್ರೇರಣೆ ನೀಡಿದ್ದು. ಸಾಧುಸಂತರ ಸಾನ್ನಿಧ್ಯವಿದ್ದ ಪರಿಣಾಮವಾಗಿ, ಆಧ್ಯಾತ್ಮಿಕ ಪ್ರಜ್ಞೆಯು ಇಡೀ ಆಂದೋಲನದಲ್ಲಿ ಒಂದು ಸುಪ್ತಪ್ರವಾಹವಾಗಿ ಹರಿಯುತ್ತಲೇ ಇತ್ತು.

ಯುಗಯುಗಗಳಿಂದಲೂ ಭಾರತದ ಆತ್ಮವಾಗಿದ್ದ ಈ ‘ಸ್ವ’ ಎಂಬ ಪ್ರಜ್ಞೆಯು ತನ್ನೆಲ್ಲ ಶಕ್ತಿಯೊಂದಿಗೆ ಪ್ರಕಟೀಕರಣಗೊಂಡದ್ದರಿಂದ, ಪ್ರತಿ ಹೆಜ್ಜೆಯಲ್ಲಿಯೂ ವಿದೇಶೀ ಶಕ್ತಿಗಳು ತೀವ್ರ ಪ್ರತಿರೋಧವನ್ನು ಎದುರಿಸಬೇಕಾಯಿತು. ಈ ವಿದೇಶೀ ಶಕ್ತಿಗಳು ಭಾರತದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವ್ಯವಸ್ಥೆಯನ್ನು ಮಾತ್ರವಲ್ಲದೇ, ಭಾರತದ ಹಳ್ಳಿಗಳ ಸ್ವಾವಲಂಬನೆಯನ್ನೂ ನಾಶ ಮಾಡಿದವು. ವಿದೇಶೀ ಆಕ್ರಮಣಕಾರರ ಈ ನಿರಂಕುಶ ಪ್ರಭುತ್ವವನ್ನು ಎಲ್ಲ ರಂಗಗಳಲ್ಲಿಯೂ ಭಾರತವು ವಿರೋಧಿಸಿತು.

ಐರೋಪ್ಯ ಶಕ್ತಿಗಳ ವಿರುದ್ಧದ ಭಾರತದ ಈ ಹೋರಾಟವು ವಿಶ್ವದ ಇತಿಹಾಸದಲ್ಲಿಯೇ ಒಂದು ವಿಶಿಷ್ಟ ಉದಾಹರಣೆಯಾಗಿದೆ. ಈ ಬಹುಮುಖೀ ಪ್ರಯತ್ನದಲ್ಲಿ ವಿದೇಶೀ ಆಕ್ರಮಣಕಾರರ ವಿರುದ್ಧದ ಸಶಸ್ತ್ರ ಹೋರಾಟ ಒಂದೆಡೆಯಾದರೆ, ಸಮಾಜದಲ್ಲಿನ ವಿಕೃತಿಗಳನ್ನು ತೆಗೆದುಹಾಕಿ ಬಲಿಷ್ಠ ಸಮಾಜದ ಪುನರ್ನಿರ್ಮಾಣ ಮಾಡುವ ಕೆಲಸ ಇನ್ನೊಂದೆಡೆ ನಡೆಯುತ್ತಿತ್ತು.

ಭಾರತದಲ್ಲಿನ ವಿವಿಧ ರಾಜಸಂಸ್ಥಾನಗಳ ರಾಜರು ತಮ್ಮ ತಮ್ಮ ಶಕ್ತಿಗನುಗುಣವಾಗಿ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾಗ, ಇತ್ತ ವನವಾಸಿ ಬಂಧುಗಳು ತಮ್ಮ ಸಹಜ, ಸರಳ ಜೀವನದಲ್ಲಿ ಬ್ರಿಟಿಷರ ಹಸ್ತಕ್ಷೇಪ ಹಾಗೂ ತಮ್ಮ ಜೀವನಮೌಲ್ಯಗಳ ಮೇಲಿನ ದಾಳಿಯಿಂದ ಬೇಸತ್ತು ಬ್ರಿಟಿಷರ ವಿರುದ್ಧ ಸಿಡಿದೆದ್ದರು. ಇವರನ್ನು ಬ್ರಿಟಿಷರು ಅತ್ಯಂತ ಕ್ರೂರವಾಗಿ ಹತ್ಯೆಗೈದರೂ ಕೂಡಾ ತಮ್ಮ ಜೀವನಮೌಲ್ಯಗಳನ್ನು ರಕ್ಷಿಸಿಕೊಳ್ಳುವ ಈ ಹೋರಾಟದಿಂದ ಮಾತ್ರ ಅವರು ಹಿಂದೆ ಸರಿಯಲಿಲ್ಲ. ಇವೆಲ್ಲದರ ಪರಿಣಾಮವಾಗಿ 1857 ರಲ್ಲಿ ರಾಷ್ಟ್ರವ್ಯಾಪಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರು ಬಲಿದಾನ ಮಾಡಿದರು.

ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಶಾಂತಿನಿಕೇತನ, ಗುಜರಾತ್ ವಿದ್ಯಾಪೀಠ, ತಿರುನಲ್ವೇಲಿಯ ಎಂಡಿಟಿ ಹಿಂದು ಕಾಲೇಜು, ಕರ್ವೆ ಶಿಕ್ಷಣ ಸಂಸ್ಥೆ ಮತ್ತು ಡೆಕ್ಕನ್ ಎಜುಕೇಶನ್ ಸೊಸೈಟಿ ಮತ್ತು ಗುರುಕುಲ ಕಾಂಗ್ರಿ ಮುಂತಾದ ಸಂಸ್ಥೆಗಳು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸುವ ಹುನ್ನಾರಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ದೇಶಭಕ್ತಿಯ ಭಾವನೆಯನ್ನು ಸೃಷ್ಟಿಸಿದವು. ಪ್ರಫುಲ್ಲಚಂದ್ರ ರೇ ಮತ್ತು ಜಗದೀಶ್ಚಂದ್ರ ಬೋಸ್ ಅವರಂತಹ ವಿಜ್ಞಾನಿಗಳು ಭಾರತದ ಉನ್ನತಿಗಾಗಿ ತಮ್ಮ ಪ್ರತಿಭೆಯನ್ನು ಅರ್ಪಿಸಿದರೆ, ಕಲಾವಿದರಾದ ನಂದಲಾಲ್ ಬೋಸ್, ಅವನೀಂದ್ರನಾಥ ಠಾಕೂರ್ ಮತ್ತು ದಾದಾಸಾಹೇಬ್ ಫಾಲ್ಕೆ ಮೊದಲಾದವರು ಕಲಾಪ್ರಕಾರಗಳ ಮೂಲಕ ಹಾಗೂ ಮಖನ್ ಲಾಲ್ ಚತುರ್ವೇದಿ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರೀಯ ನಾಯಕರು ಪತ್ರಿಕೋದ್ಯಮದ ಮೂಲಕ ಸಾರ್ವಜನಿಕ ಜಾಗೃತಿಯಲ್ಲಿ ತೊಡಗಿದ್ದರು. ಮಹರ್ಷಿ ದಯಾನಂದ, ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಅರವಿಂದರಂತಹ ಋಷಿಸದೃಶ ಮಹಾಪುರುಷರ ಆಧ್ಯಾತ್ಮಿಕ ಪ್ರೇರಣೆಯು ಅವರೆಲ್ಲರಿಗೂ ದಾರಿದೀಪದಂತೆ ಕೆಲಸ ಮಾಡುತ್ತಿತ್ತು.

ಬಂಗಾಳದಲ್ಲಿ ರಾಜನಾರಾಯಣ ಬೋಸ್ ಅವರು ಆಯೋಜಿಸುತ್ತಿದ್ದ ಹಿಂದುಮೇಳ, ಮಹಾರಾಷ್ಟ್ರದಲ್ಲಿ ಲೋಕಮಾನ್ಯ ತಿಲಕರು ಪ್ರಾರಂಭಿಸಿದ ಗಣೇಶೋತ್ಸವ ಹಾಗೂ ಶಿವಾಜಿ ಉತ್ಸವದಂತಹ ಸಾರ್ವಜನಿಕ ಕಾರ್ಯಕ್ರಮಗಳು ಭಾರತದ ಸಾಂಸ್ಕೃತಿಕ ಬೇರುಗಳಿಗೆ ನೀರೆರೆದು ಪೋಷಿಸುತ್ತಿದ್ದವು. ಸಮಾಜಸುಧಾರಕರಾದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಆಂದೋಲನಗಳು ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸಿದ್ದಲ್ಲದೇ, ಸಮಾಜದ ಅವಕಾಶವಂಚಿತ ವರ್ಗಗಳನ್ನು ಸಶಕ್ತಗೊಳಿಸುವ ಪ್ರಯತ್ನ ಮಾಡಿದವು. ಡಾ. ಅಂಬೇಡ್ಕರ್ ಅವರು ಸಮಾಜವನ್ನು ಸಂಘಟಿಸಲು ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಹೋರಾಟದ ಮಾರ್ಗವನ್ನು ತೋರಿಸಿದರು.

ಭಾರತೀಯ ಸಾಮಾಜಿಕ ಜೀವನದ ಯಾವುದೇ ಕ್ಷೇತ್ರವು ಮಹಾತ್ಮ ಗಾಂಧಿಯವರ ಪ್ರಭಾವಕ್ಕೊಳಗಾಗದೆ ಉಳಿಯಲಿಲ್ಲ. ವಿದೇಶದಲ್ಲಿದ್ದುಕೊಂಡೇ ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಶಕ್ತಿ ತುಂಬುವ ಕೆಲಸವನ್ನು ಶ್ಯಾಮ್‌ಜಿ ಕೃಷ್ಣ ವರ್ಮಾ, ಲಾಲಾ ಹರದಯಾಳ್ ಮತ್ತು ಮೇಡಂ ಕಾಮಾ ಮೊದಲಾದವರು ಮಾಡಿದರು. ಲಂಡನ್ನಿನ ಇಂಡಿಯಾ ಹೌಸ್ ಅಂತೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಚಟುವಟಿಕೆಗಳ ಕೇಂದ್ರವಾಗಿತ್ತು. ಕ್ರಾಂತಿವೀರ ಸಾವರ್ಕರ್ ಬರೆದ 1857 ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮವು ಭಾರತೀಯ ಕ್ರಾಂತಿಕಾರಿಗಳಲ್ಲಿ ಬಹಳ ಜನಪ್ರಿಯವಾಗಿತ್ತು. ಸ್ವತಃ ಭಗತ್ ಸಿಂಗ್ ಈ ಪುಸ್ತಕದ ನೂರಾರು ಪ್ರತಿಗಳನ್ನು ಮುದ್ರಿಸಿ ಹಂಚಿದ್ದರು.

ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದ ನಾಲ್ಕು ನೂರಕ್ಕೂ ಹೆಚ್ಚು ಭೂಗತ ಸಂಸ್ಥೆಗಳಲ್ಲಿನ ಕ್ರಾಂತಿಕಾರಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಭಾರತ ಮಾತೆಯನ್ನು ಬಂಧನದಿಂದ ಮುಕ್ತಗೊಳಿಸುವ ಅಭಿಯಾನದಲ್ಲಿ ತೊಡಗಿದ್ದರು. ಬಂಗಾಳದ ಕ್ರಾಂತಿಕಾರಿ ಸಂಸ್ಥೆ ಅನುಶೀಲನ ಸಮಿತಿಯಲ್ಲಿ ಸಕ್ರಿಯರಾಗಿದ್ದ  ಡಾ. ಹೆಡಗೇವಾರ್ ಅವರು ಲೋಕಮಾನ್ಯ ತಿಲಕರ ಪ್ರೇರಣೆಯಿಂದ ಕಾಂಗ್ರೆಸ್ ಸೇರಿದರು, ಮಧ್ಯಭಾರತ ಪ್ರಾಂತದ ಕಾರ್ಯದರ್ಶಿಯಾಗಿಯೂ ಆಯ್ಕೆಯಾದರು. ಅವರು 1920 ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧಿವೇಶನದ ಸಂಘಟನಾ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಈ ಅಧಿವೇಶನದಲ್ಲಿ ಅವರು ತಮ್ಮ ಸಹಕಾರಿಗಳೊಂದಿಗೆ ಪೂರ್ಣ ಸ್ವರಾಜ್ಯದ ನಿರ್ಣಯವನ್ನು ಅಂಗೀಕರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಆದರೆ ಕಾಂಗ್ರೆಸ್ ನಾಯಕತ್ವವು ಅದಕ್ಕೆ ಸಿದ್ಧವಿರಲಿಲ್ಲ. ಅಂತಿಮವಾಗಿ, ಈ ನಿರ್ಣಯವನ್ನು ಎಂಟು ವರ್ಷಗಳ ಬಳಿಕ ಲಾಹೋರಿನ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.

ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಆಜಾದ್ ಹಿಂದ್ ಫೌಜ್ ನ ನಾಯಕತ್ವವನ್ನು ವಹಿಸಿಕೊಂಡರು. ಸ್ವತಂತ್ರ ಭಾರತದ ಮೊದಲ ಸರ್ಕಾರವು ಅವರ ನಾಯಕತ್ವದಲ್ಲಿ ರಚನೆಯಾಯಿತು. ಅಲ್ಲದೇ, ಆಜಾದ್ ಹಿಂದ್ ಫೌಜ್ ಈಶಾನ್ಯ ಭಾರತದ ಕೆಲವು ಭಾಗಗಳನ್ನು ಬ್ರಿಟಿಷರಿಂದ  ಮುಕ್ತಿಗೊಳಿಸುವಲ್ಲಿ ಯಶಸ್ವಿಯಾಯಿತು. ಕೆಂಪು ಕೋಟೆಯಲ್ಲಿ ಆಜಾದ್ ಹಿಂದ್ ಫೌಜ್ ಅಧಿಕಾರಿಗಳ ವಿಚಾರಣೆ ಇಡೀ ದೇಶವನ್ನು ಕೋಪದಿಂದ ಕುದಿಯುವಂತೆ ಮಾಡಿತು. ಇವೆಲ್ಲದರ ಜೊತೆಗೆ, ನೌಕಾಪಡೆಯ ಸಿಪಾಯಿಗಳು ಬ್ರಿಟಿಷ್ ಅಧಿಕಾರಿಗಳ ವಿರುದ್ಧ ನಡೆಸಿದ ಬಂಡಾಯವು ಬ್ರಿಟಿಷರು ಭಾರತವನ್ನು ತೊರೆಯುವಂತೆ ಮಾಡಿತು.

ಸ್ವಾತಂತ್ರ್ಯದ ಸೂರ್ಯ ಉದಯಿಸಿದ. ಆದರೆ, ವಿಭಜನೆಯ ಗ್ರಹಣವೂ ಅವನ ಮೇಲೆ ಬಿದ್ದಿತ್ತು. ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಮುನ್ನುಗ್ಗುವ ಧೈರ್ಯ ತೋರಿದ ಕೀರ್ತಿ, ನೂರಾರು ವರ್ಷಗಳ ರಾಷ್ಟ್ರೀಯ ಆಶಯವನ್ನು ಪೂರೈಸುವುದಕ್ಕಾಗಿ ತನ್ನ ರಕ್ತ ಮತ್ತು ಬೆವರನ್ನು ಹರಿಸಿದ ಪ್ರತಿಯೊಬ್ಬ ಭಾರತೀಯನಿಗೂ ಸಲ್ಲುತ್ತದೆ.

ಮಹರ್ಷಿ ಅರವಿಂದರು ಹೇಳಿದ್ದರು – “ಭಾರತ ಎಚ್ಚರಗೊಳ್ಳಬೇಕು. ತನಗಾಗಿ ಅಲ್ಲ, ಇಡೀ ಪ್ರಪಂಚಕ್ಕಾಗಿ, ಮಾನವೀಯತೆಗಾಗಿ”. ಭಾರತದ ಸ್ವಾತಂತ್ರ್ಯವು ವಿಶ್ವದ ಇತರ ದೇಶಗಳ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾದಾಗ ಅವರ ಮಾತು ನಿಜವೆಂದು ಸಾಬೀತಾಯಿತು. ಒಂದೊಂದಾಗಿ, ಎಲ್ಲಾ ವಸಾಹತುಗಳು ಸ್ವತಂತ್ರವಾದವು. ಬ್ರಿಟನ್‌ ಸಾಮ್ರಾಜ್ಯದ ಮುಳುಗದ ಸೂರ್ಯ ಶಾಶ್ವತವಾಗಿ ಮುಳುಗಿದನು.

ಮಹರ್ಷಿ ಅರವಿಂದರು

ಪೋರ್ಚುಗೀಸ್, ಡಚ್, ಫ್ರೆಂಚ್ ಮತ್ತು ಕೊನೆಯದಾಗಿ ಬ್ರಿಟಿಷರು ಭಾರತಕ್ಕೆ ಬಂದರು. ವ್ಯಾಪಾರದ ಜೊತೆಗೆ, ಅವರೆಲ್ಲರೂ ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು ಮತ್ತು ಭಾರತೀಯರನ್ನು ಮತಾಂತರಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡಿದರು. ವಸಾಹತುಷಾಹಿಯ ವಿರುದ್ಧದ ಪ್ರತೀಕಾರವು ಮೊದಲ ಯುರೋಪಿಯನ್ ಪ್ರಯಾಣಿಕ ವಾಸ್ಕೋ-ಡ-ಗಾಮಾ 1498 ರಲ್ಲಿ ಭಾರತೀಯ ಮಣ್ಣಿನ ಮೇಲೆ ಕಾಲಿಟ್ಟ ದಿನವೇ ಆರಂಭವಾಯಿತು. ತಿರುವಾಂಕೂರಿನ ಮಹಾರಾಜ ಮಾರ್ತಾಂಡವರ್ಮನ ಕೈಯಲ್ಲಿ ಸೋತು ಡಚ್ಚರು ಭಾರತವನ್ನು ತೊರೆಯಬೇಕಾಯಿತು. ಪೋರ್ಚುಗೀಸರು ಗೋವಾಕ್ಕೆ ಮಾತ್ರ ಸೀಮಿತರಾಗಿದ್ದರು. ತಮ್ಮ ಕುಟಿಲನೀತಿಯಿಂದಾಗಿ ಬ್ರಿಟಿಷರು ಭಾರತದ ಅರ್ಧಕ್ಕಿಂತ ಹೆಚ್ಚು ಭಾಗದ ಮೇಲೆ ನಿಯಂತ್ರಣವನ್ನು ಸ್ಥಾಪಿಸಿ, ಈ ಅಧಿಪತ್ಯದ ಹೋರಾಟದಲ್ಲಿ ವಿಜಯಿಗಳಾದರು. ಭಾರತದ ಉಳಿದ ಭಾಗಗಳ ರಾಜರೊಂದಿಗೆ ಬ್ರಿಟಿಷರು ಒಪ್ಪಂದಗಳನ್ನು ಮಾಡಿಕೊಂಡರು ಮತ್ತು ಆ ಭಾಗಗಳು ಭಾರತೀಯ ರಾಜರ ಆಳ್ವಿಕೆಯಲ್ಲಿಯೇ ಮುಂದುವರೆದವು. ಸ್ವಾತಂತ್ರ್ಯದ ಬಳಿಕ, ಈ ರಾಜ್ಯಗಳ ಒಕ್ಕೂಟವು ಭಾರತ ಗಣರಾಜ್ಯವಾಗಿ ಹೊರಹೊಮ್ಮಿತು.

ಭಾರತವು ಪ್ರಜಾಪ್ರಭುತ್ವದ ಮಾರ್ಗವನ್ನು ಆರಿಸಿತು. ಇಂದು ಇದು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಪ್ರಜಾಪ್ರಭುತ್ವವಾಗಿದೆ. ಭಾರತದ ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಿಸಲು ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗಿಯಾದವರೇ, ಭಾರತಕ್ಕಾಗಿ ಸಂವಿಧಾನವನ್ನು ರೂಪಿಸುವ ಕರ್ತವ್ಯವನ್ನೂ ನಿರ್ವಹಿಸಿದರು. ಈ ಕಾರಣದಿಂದಲೇ ನಮ್ಮ ಸಂವಿಧಾನದ ಮೊದಲ ಪ್ರತಿಯಲ್ಲಿ ವ್ಯಾಸ, ಬುದ್ಧ ಮತ್ತು ಮಹಾವೀರರಂತಹ ಭಾರತೀಯರ ಚಿತ್ರಗಳ ಮೂಲಕ ರಾಮರಾಜ್ಯದ ಕಲ್ಪನೆಯನ್ನು ನಮ್ಮ ಮುಂದಿಟ್ಟು, ಭಾರತದ ಸಂಸ್ಕೃತಿಯ ಪ್ರವಾಹವು ನಿರಂತರವಾಗಿರಲಿ ಎಂಬ ಆಶಯವನ್ನು ವ್ಯಕ್ತಪಡಿಸಲಾಗಿದೆ.

ಇಂದು ನಾವು ಒಂದು ಸ್ವತಂತ್ರ ರಾಷ್ಟ್ರವಾಗಿ, ವಿಶ್ವದಲ್ಲಿ ನಮಗೆ ನ್ಯಾಯವಾಗಿ ಸಿಗಬೇಕಾದ ಸ್ಥಾನವನ್ನು ಪಡೆಯುವತ್ತ ಸಾಗುತ್ತಿದ್ದೇವೆ. ಭಾರತೀಯ ಸ್ವಾತಂತ್ರ್ಯದ ಅಮೃತಮಹೋತ್ಸವದ ಈ ಸಂದರ್ಭವು, ಯಾರ ತ್ಯಾಗದಿಂದಾಗಿ ನಾವು ಈ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತಿದೆಯೋ, ಅಂತಹ ದೇಶಭಕ್ತರಿಗೆ ಕೃತಜ್ಞತೆಯನ್ನು ಸಲ್ಲಿಸಲು ಒಂದು ಸುಸಂದರ್ಭವಾಗಿದೆ. ಸ್ವಾತಂತ್ರ್ಯ ಚಳುವಳಿಗೆ ದಿಕ್ಕು ನೀಡಿದ ಮತ್ತು ಮಹತ್ತ್ವದ ಮೈಲಿಗಲ್ಲುಗಳಾದ, ಆದರೆ ಇತಿಹಾಸದಲ್ಲಿ ದಾಖಲಾಗದ ಅನೇಕ ಅವಿಜ್ಞಾತ ವೀರರು, ಚರ್ಚೆಯಿಂದ ಹೊರಗುಳಿದ ಘಟನೆಗಳು, ಸಂಸ್ಥೆಗಳು ಮತ್ತು ಸ್ಥಳಗಳಿಗೆ ಸಂಬಂಧಿಸಿದ ಜನರ ನಡುವೆ ಪ್ರಚಲಿತವಾಗಿರುವ ಕತೆಗಳನ್ನು ಪರಿಶೀಲಿಸಬೇಕು, ಮೌಲ್ಯಮಾಪನ ಮಾಡಬೇಕು ಮತ್ತು ಸಂರಕ್ಷಿಸಬೇಕು. ಅಂತಹ ಸಂಗತಿಗಳನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಬೇಕು. ಇಂದು ನಮಗೆ ಸಹಜವಾಗಿಯೇ ಲಭ್ಯವಿರುವ ಸ್ವಾತಂತ್ರ್ಯದ ಹಿಂದೆ, ಹಿಂದಿನ  ತಲೆಮಾರುಗಳ ಸಂಘರ್ಷದ ಇತಿಹಾಸವಿದೆ ಮತ್ತು ತಮ್ಮ ಕಣ್ಣೀರು, ಬೆವರು ಮತ್ತು ರಕ್ತವನ್ನು ಅವರು ರಾಷ್ಟ್ರಕ್ಕಾಗಿ ಸುರಿಸಿದ್ದಾರೆ ಎನ್ನುವುದು ನಮ್ಮ ಮುಂದಿನ ಪೀಳಿಗೆಗೂ ತಿಳಿಯಬೇಕು.

(ಲೇಖಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರು)

Leave a Reply

Your email address will not be published.

This site uses Akismet to reduce spam. Learn how your comment data is processed.