ಸಂಸ್ಕಾರ ಭಾರತೀ ಆಯೋಜಿಸಿದ್ದ ಅಮೃತ ಸ್ವಾತಂತ್ರ್ಯ ಸಂಸ್ಕೃತಿ ಉತ್ಸವ
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ 75ನೇ ವರ್ಷದ ಸಂದರ್ಭದಲ್ಲಿ ಅಮೃತಮಹೋತ್ಸವ ವರ್ಷ ಎಂದು ವರ್ಷಪೂರ್ತಿ ಆಚರಿಸುವುದು ಸಂಸ್ಕಾರ ಭಾರತೀ ನಿಲುವು. ವರ್ಷದ ಹನ್ನೆರಡು ತಿಂಗಳು, ಹನ್ನೆರಡು ವರ್ಣರಂಜಿತ ಭಾರತೀಯ ಸೊಗಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ನೆನಪಿಸುವ ಎಲ್ಲ ಕಲಾ ಪ್ರಕಾರಗಳ ಅಭಿವ್ಯಕ್ತಿ, ಪ್ರತಿ ತಿಂಗಳು ವರ್ಷಪೂರ್ತಿ ಚಲನಚಿತ್ರ, ನೃತ್ಯರೂಪಕ, ನಾಟಕ, ಜಾನಪದ, ಬೊಂಬೆ ಆಟ, ಸಾಹಿತ್ಯ, ಸಂಗೀತ, ತಾಳವಾಧ್ಯ, ಗೀತಗಾನ, ಕಿರು ಚಲನಚಿತ್ರ, ಚಿತ್ರ ರಚನೆ ಹಾಗೂ ಕಲಾ ಸಾಧಕರ ಗುರುತಿಸುವ, ಗೌರವಿಸುವ ಮಹೋನ್ನತ ಕಾರ್ಯಗಳ ಗುರಿಯಾಗಿಟ್ಟು ಕೊಂಡು, ಸಂಸ್ಕಾರ ಭಾರತೀ ಭಾರತದ ಲಲಿತಕಲೆಗಳಿಗೆ ವೇದಿಕೆಯಾಗಿ, ಎಲ್ಲ ಕಲಾವಿದರ ಸಂಪರ್ಕ ಸೇತುವಾಗಿ ಅನನ್ಯ ಕಾರ್ಯ ನಿರ್ವಹಿಸುವ ಒಂದು ಸ್ವಯಂ ಸೇವಾ ಸಂಸ್ಥೆಯಾಗಿ, ಹಾಗೂ ಕಲೆ ವಿಲಾಸಕ್ಕಾಗಿ ಅಲ್ಲ ವಿಕಾಸಕ್ಕಾಗಿ ಎಂಬ ಘೋಷವಾಕ್ಯವನ್ನು ಉಸಿರಾಗಿಸಿಕೊಂಡು ಮೇಲ್ಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮಗಳ ಉದ್ಘಾಟನೆ ಪೂಜ್ಯ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ಶ್ರೀಪಾದಂ ಅವರ ಆಶೀರ್ವಾದದೊಂದಿಗೆ ಆರಂಭಗೊಂಡಿತು. ನಗರದ ಡಾ|| ಸಿ.ಅಶ್ವತ್ಥ್ ಕಲಾಭವನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇನಾಪದಕ ಪುರಸ್ಕೃತ ಕಾರ್ಗಿಲ್ ವೀರಯೋಧರಾದ ಕ್ಯಾ|| ನವೀನ್ ನಾಗಪ್ಪ ಅವರ ವೀರೋಚಿತ ಮಾತುಗಳು ಸಭಿಕರನ್ನು ಮಂತ್ರಮುಗ್ಧ ಗೊಳಿಸಿದವು. ಸಭೆಯಲ್ಲಿ ನಿರ್ದೇಶಕ ನಾಗಾಭರಣ ಅವರು ಪ್ರಸ್ತಾವಿಕ ಮಾತುಗಳ ಆಡಿದರು, ಖ್ಯಾತ ಚಿತ್ರನಟ ನಿರ್ದೇಶಕರಾದ ಸುರೇಶ್ ಹೆಬ್ಳೀಕರ್, ಶಾಸಕರಾದ ರವಿ ಸುಬ್ರಹ್ಮಣ್ಯ, ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಬಿ.ಎಸ್.ಸತ್ಯನಾರಾಯಣ, ಆನೂರು ಅನಂತಕೃಷ್ಣ ಶರ್ಮ, ಶ್ರೀನಾಥ್ ವಶಿಷ್ಟ, ಸುನೀಲ್ ಪುರಾಣಿಕ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲ ಕಾರ್ಯಕ್ರಮ “ಮಹಾನ್ ಹುತಾತ್ಮ” ಚಲನಚಿತ್ರ ಪ್ರದರ್ಶನಗೊಂಡು ಸಂವಾದ ಕಾರ್ಯಕ್ರಮ ದೊಂದಿಗೆ ಅಮೃತವರ್ಷಾಚರಣೆ ಉದ್ಘಾಟನೆಗೊಂಡಿತು. ಸಂವಾದದಲ್ಲಿ ಸುರೇಶ್ ಹೆಬ್ಳೀಕರ್ ಅವರ ಸಿನಿಮಾ ವಿಮರ್ಶೆ ಗಮನ ಸೆಳೆಯಿತು. ಈ ಚಿತ್ರಕ್ಕಾಗಿ ದುಡಿದ ಪೂರ್ಣ ಚಿತ್ರಕಲಾವಿದರು ಹಾಗೂ ತಂತ್ರಜ್ಞರು ವೇದಿಕೆ ಮೇಲೆ ಪರಿಚಯಿಸಿಕೊಂಡರು. ತುಂಬ ಭಾವನಾತ್ಮಕ ಕಾರ್ಯಕ್ರಮವಾಗಿ ಹೊರಹೊಮ್ಮಿತು.