ನಾವಿನ್ನೂ ನಿರಾಶಾದಾಯಕ ಖೊಟ್ಟಿ ಸಮಾಜವಾದದ ಮೇನಿಯಾದಿಂದ ಹೊರಗೆ ಬಂದಿಲ್ಲ. ದೇಶದ ಆರ್ಥಿಕತೆ ವಿಕೇಂದ್ರೀಕರಣಗೊಳಿಸುವುದು, ಹೆಚ್ಚು ಹೆಚ್ಚು ಉದ್ಯಮಗಳಿಗೆ ಅವಕಾಶ ಕೊಡುವುದು ಕೇವಲ ಉದ್ಯಮಪತಿಗಳ ಲಾಭ ಹೆಚ್ಚಿಸುವುದಕ್ಕಲ್ಲ. ಇದರಿಂದ ನಾಡಿನ ಕೋಟ್ಯಂತರ ಜನರಿಗೆ ಉದ್ಯೋಗವಕಾಶಗಳ ಜೊತೆಗೆ ಉತ್ತಮ ಗುಣಮಟ್ಟದ ಸರಕು- ಸೇವೆಗಳ ವಹಿವಾಟಿಗೂ ಕೂಡಾ ದಾರಿಯಾಗುತ್ತದೆ. ಸರ್ಕಾರದ ಏಕಸ್ವಾಮ್ಯತೆ ಎನ್ನುವುದು ಅಗತ್ಯಕ್ಕೆ ತಕ್ಕಂತೆಯೇ ಇರಬೇಕೆ ಹೊರತು ಅನಿವಾರ್ಯವಾಗಬಾರದು. ಕೈಗಾರಿಕೆ ಮತ್ತು ಉದ್ಯಮಗಳ ವಿಸ್ತರಣೆಯು ಗ್ರಾಹಕರಿಗೆ ತಮಗಿಷ್ಟದ ಸರಕು ಮತ್ತು ಸೇವೆಗಳ ಆಯ್ಕೆಯ ಸ್ವಾತಂತ್ರ್ಯ ಮತ್ತು ಅನುಚಿತ ಗುಣಮಟ್ಟದ ಸರಕು – ಸೇವೆಗಳನ್ನು ತಿರಸ್ಕರಿಸುವ ಅಧಿಕಾರವನ್ನು ನೀಡುತ್ತದೆ.
1986ರಲ್ಲಿ ಆಗತಾನೆ ಆರ್ಥಿಕ ಸುಧಾರಣೆಗಳ ಅವಶ್ಯಕತೆಯ ಮಹತ್ವವನ್ನು ಮನಗಾಣುತ್ತಿದ್ದ ನಮ್ಮ ದೇಶದಲ್ಲಿ ಅಧಿಕೃತವಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದರು. 1991ರ ನಂತರ ಈ ದೇಶ ಸಂಪೂರ್ಣವಾಗಿ ಆರ್ಥಿಕ ಸುಧಾರಣೆಗಳತ್ತ ವಾಲಿದಾಗ, ಗ್ರಾಹಕ ಸಂರಕ್ಷಣಾ ಕಾನೂನುಗಳು ಅತಿಹೆಚ್ಚು ಮಹತ್ವವನ್ನು ಪಡೆದುಕೊಳ್ಳಲು ಪ್ರಾರಂಭಿಸಿದವು. ಓರ್ವ ಸಾಮಾನ್ಯ ಗ್ರಾಹಕನು ಸಹ ತನಗಾದ ನಷ್ಟಕ್ಕಾಗಿ ಕಾರ್ಪೊರೇಟ್ ದೈತ್ಯ ಶಕ್ತಿಗಳನ್ನು ಸಹ ಮಣಿಸಿ ಅವರ ಕೊರಳ ಪಟ್ಟಿ ಹಿಡಿದು ನಷ್ಟ ಪರಿಹಾರವನ್ನು ಕೇಳುವ ಅತ್ಯಮೂಲ್ಯ ಅಧಿಕಾರವನ್ನು ಈ ಗ್ರಾಹಕ ಸಂರಕ್ಷಣಾ ಕಾಯ್ದೆ ನೀಡುತ್ತದೆ.
ಪ್ರಸ್ತುತ ಕಾಲಮಾನದ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳ ಅನಿವಾರ್ಯತೆಯನ್ನು ಮನಗಂಡು 06-08-2019ರಂದು ಈ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. 09-08-2019 ರಂದು ಭಾರತದ ರಾಷ್ಟ್ರಪತಿಯವರಿಂದ ಅಂಕಿತಗೊಂಡು 20-07-2020 ರಿಂದ ಹೊಸ ತಿದ್ದುಪಡಿಗಳೊಂದಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆಯು ಜಾರಿಯಲ್ಲಿರುತ್ತದೆ. ಗ್ರಾಹಕ ವ್ಯಾಜ್ಯಗಳ ಪರಿಹಾರಕ್ಕಾಗಿ ಸಮಯೋಚಿತ ನಿರ್ಣಯ ಮತ್ತು ತೀರ್ಪನ್ನು ನೀಡುವುದರ ಮೂಲಕ ಗ್ರಾಹಕರ ಹಿತ ಕಾಯುವ ಮಹತ್ವದ ಉದ್ದೇಶವನ್ನು ಈ ಕಾಯ್ದೆ ಒಳಗೊಂಡಿರುತ್ತದೆ. ಗ್ರಾಹಕರಿಗಾಗುವ ಅನಗತ್ಯ ಕಾನೂನು ತೊಡಕುಗಳನ್ನು ನಿವಾರಿಸಲು ಪ್ರತ್ಯೇಕ ಗ್ರಾಹಕ ವ್ಯಾಜ್ಯಗಳಿಗೋಸ್ಕರವೇ ಸಂಬಂಧಪಟ್ಟ ನ್ಯಾಯಾಲಯಗಳನ್ನು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಈ ಕಾಯ್ದೆಯ ಅಂತರ್ಗತವಾಗಿ ಸ್ಥಾಪಿತವಾಗಿವೆ. ಈ ಕಾನೂನಿನ ಪ್ರಭಾವ ” ಜಾಗೋ ಗ್ರಾಹಕ್” ಎಂಬ ಮಾತಿನಿಂದ, ಇನ್ನು ಮುಂದೆ ನಿಜವಾಗಿಯೂ ಜಾಗರೂಕರಾಗಬೇಕಾದದ್ದು ಮಾರಾಟಗಾರರು ಮತ್ತು ಉತ್ಪಾದಕರು ಎನ್ನುವಂತಾಗಿದೆ. ಅಷ್ಟರಮಟ್ಟಿಗೆ ಗ್ರಾಹಕ ಕಾನೂನುಗಳು ಯಶಸ್ಸನ್ನು ಸಾಧಿಸಿವೆ ಎನ್ನಬಹುದು.
ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಮುಖಾಂಶಗಳು:-
ಹೊಸದಾಗಿ 2019ಯಾದ ತಿದ್ದುಪಡಿಗಳ ಸಹಿತ ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಮುಖಾಂಶಗಳು ಇಂತಿರುತ್ತವೆ.
1. ಕಾಯ್ದೆಯ ಸೆಕ್ಷನ್ 2(1)ರಲ್ಲಿ ವಿವರಿಸಿರುವಂತೆ ಜಾಹೀರಾತು ಯಾವುದೇ ಪ್ರಕಾರದ ಅಂದರೆ ಮಾಧ್ಯಮ, ಬಣ್ಣ, ಧ್ವನಿ, ದೃಶ್ಯ, ಮುದ್ರಣ, ಅಂತರ್ಜಾಲ ಯಾವುದೇ ಪ್ರಕಾರದ ಜಾಹೀರಾತುಗಳು ಜನರನ್ನು ಅಥವಾ ಗ್ರಾಹಕರನ್ನು ದಾರಿತಪ್ಪಿಸುವಂತಿದ್ದರೆ ಅದರ ವಿರುದ್ಧ ದೂರನ್ನು ನೀಡಿ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಬಹುದು.
2. ಕಾಯ್ದೆಯ ಸೆಕ್ಷನ್ 2(5) (vii) ಪ್ರಕಾರ ಒಂದು ವೇಳೆ ಗ್ರಾಹಕ ವಯಸ್ಕನಾಗಿರದ ಪಕ್ಷದಲ್ಲಿ ತನ್ನ ಪಾಲಕರ ಮೂಲಕ ದೂರು ದಾಖಲಿಸಬಹುದಾಗಿದೆ.
3. ಸೆಕ್ಷನ್ 2(10) ಮತ್ತು 2(11) ಸರಕು ಮತ್ತು ಸೇವೆಯಲ್ಲಿರುವ ನ್ಯೂನತೆಗಳ ಕುರಿತು ವಿವರಿಸುತ್ತವೆ. ಯಾವುದೇ ಸರಕು ಹಾಗೂ ಸೇವೆಯಲ್ಲಿ ಅನುಚಿತ ಗುಣಮಟ್ಟದ, ಪ್ರಕಟಣೆಯಲ್ಲಿ ಘೋಷಿಸದ್ದಕ್ಕಿಂತ ಕಡಿಮೆ ಗುಣಮಟ್ಟದ, ಕಡಿಮೆ ಪ್ರಮಾಣದ, ಕಳಪೆ ಯಾಗಿರುವ ಸರಕು- ಸೇವೆಗಳ ವಿರುದ್ಧ ದೂರು ದಾಖಲಿಸಿ ಸೂಕ್ತ ಪರಿಹಾರವನ್ನು ಕೇಳಬಹುದು.
4. ಇತ್ತೀಚಿನ ತಿದ್ದುಪಡಿಯನ್ವಯ ಸೆಕ್ಷನ್ 2(16) ಇ- ಕಾಮರ್ಸ್ ಕಂಪನಿಗಳ ಜವಾಬ್ದಾರಿಗಳ ಕುರಿತು ವಿವರಿಸುತ್ತದೆ. ಇತ್ತೀಚೆಗೆ ಆಗುತ್ತಿರುವ ಸೈಬರ್ ಫ್ರಾಡ್ ಗಳ ಕುರಿತು ನಿಗಾ ವಹಿಸಿ, ವೆಬ್ ಸೈಟ್ ಗಳನ್ನು ಅದಕ್ಕೆ ತಕ್ಕಂತೆ ಸುಸಜ್ಜಿತಗೊಳಿಸಿ ಗ್ರಾಹಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸುತ್ತದೆ. ಗ್ರಾಹಕರ ಯಾವುದೇ ರೀತಿಯ ವೈಯಕ್ತಿಕ ಮಾಹಿತಿಯ ಅನಧಿಕೃತ ಶೇಖರಣೆ ಅಥವಾ ಹಂಚಿಕೆಯನ್ನು ಪ್ರತಿಬಂಧಿಸುತ್ತದೆ.
5. ಸೆಕ್ಷನ್ 2(9) ರಲ್ಲಿ ವಿವರಿಸಿರುವಂತೆ ಜನರ ಜೀವನ- ಆರೋಗ್ಯಕ್ಕೆ ಹಾನಿಯಾಗುವಂತಹ ಯಾವುದೇ ರೀತಿಯ ಉತ್ಪನ್ನ-ವಸ್ತು- ಸೇವೆಗಳನ್ನು ಉತ್ಪಾದಿಸುವುದಾಗಲಿ, ವಿತರಿಸುವುದಾಗಲಿ, ಮಾರಾಟ ಮಾಡುವುದಾಗಲಿ ಮಾಡುವಂತಿಲ್ಲ. ಮತ್ತು ಯಾವುದೇ ಸರಕು ಮತ್ತು ಸೇವೆಗಳ ಕುರಿತು ಅದರ ಪ್ರಮಾಣ, ಗುಣಮಟ್ಟ, ಪರಿಶುದ್ಧತೆ, ಬೆಲೆ, ಇತ್ಯಾದಿಗಳ ಕುರಿತು ಸರಿಯಾದ ವಿವರಣೆ, ಮಾಹಿತಿಯನ್ನು ಪಡೆಯುವುದು ಪ್ರತಿಯೊಬ್ಬ ಗ್ರಾಹಕವ ಅಧಿಕಾರಯುತವಾದ ಹಕ್ಕಾಗಿರುತ್ತದೆ.
ಕೇಂದ್ರ ಗ್ರಾಹಕ ಸಂರಕ್ಷಣಾ ಆಯೋಗ:-
2019 ರ ಕಾಯ್ದೆಯ ಹೊಸ ತಿದ್ದುಪಡಿಯು ಕೇಂದ್ರ ಗ್ರಾಹಕ ಸಂರಕ್ಷಣಾ ಆಯೋಗದ ಸ್ಥಾಪನೆಗೆ ಅವಕಾಶ ನೀಡುತ್ತದೆ. ಗ್ರಾಹಕ ಸಂಬಂಧಿ ದೂರುಗಳ ವಿಚಾರಣೆ ಮತ್ತು ಸೂಕ್ತ ಕ್ರಮಗಳಿಗಾಗಿ ಈ ಆಯೋಗವನ್ನು ಸ್ಥಾಪಿಸಲಾಗುತ್ತದೆ. 1986ರ ಕಾಯ್ದೆಯನ್ವಯ ಗ್ರಾಹಕ ಬೇರೆ ಯಾವ ಮಾರ್ಗವು ಇಲ್ಲದೆ ನೇರವಾಗಿ ಗ್ರಾಹಕ ನ್ಯಾಯಾಲಯದ ಮುಂದೆ ಪ್ರಕರಣವನ್ನು ದಾಖಲಿಸಬಹುದಾಗಿತ್ತು. ಆದರೆ 2019 ರಲ್ಲಿ ಗ್ರಾಹಕರ ಹಿತವನ್ನು ಸಂರಕ್ಷಿಸಲು ಕೇಂದ್ರ ಗ್ರಾಹಕ ಸಂರಕ್ಷಣಾ ಆಯೋಗವನ್ನು ಸ್ಥಾಪಿಸುವುದರ ಮೂಲಕ ಗ್ರಾಹಕ ದೂರುಗಳ ಪರಿಶೀಲನೆ ಮತ್ತು ವಿಚಾರಣೆಗೆ ಅನುವು ಮಾಡಿಕೊಡುತ್ತದೆ.
ಕೇಂದ್ರ ಗ್ರಾಹಕ ಸಂರಕ್ಷಣಾ ಆಯೋಗ ಕೊಟ್ಟ ತೀರ್ಪನ್ನು ಪ್ರಶ್ನಿಸಿ 30 ದಿನಗಳೊಳಗೆ ರಾಷ್ಟ್ರೀಯ ಆಯೋಗದ ಮುಂದೆ ಮೇಲ್ಮನವಿ ಸಲ್ಲಿಸಬಹುದಾಗಿರುತ್ತದೆ. ಸೆಕ್ಷನ್ 17 ರ ಅಡಿಯಲ್ಲಿ ಬರವಣಿಗೆ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಅಥವಾ ನೇರವಾಗಿ ಕೇಂದ್ರಿಯ ಆಯೋಗಕ್ಕೆ ಗ್ರಾಹಕರು ತಮಗಾದ ಅನ್ಯಾಯದ ವಿರುದ್ಧ ದೂರು ಸಲ್ಲಿಸಬಹುದಾಗಿರುತ್ತದೆ. ಸೆಕ್ಷನ್ 21 ರ ಪ್ರಕಾರ ಕೇಂದ್ರಿಯ ಆಯೋಗವು ಸುಳ್ಳು ಅಥವಾ ಅಪಪ್ರಚಾರದ ಜಾಹೀರಾತುಗಳ ವಿರುದ್ಧ ಸೂಕ್ತ ನಿರ್ದೇಶನ, ದಂಡ ವಿಧಿಸಬಹುದಾಗಿರುತ್ತದೆ.
ಗ್ರಾಹಕ ನ್ಯಾಯಾಲಯಗಳು:-
ಗ್ರಾಹಕ ನ್ಯಾಯಾಲಯಗಳು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಥಾಪಿತಗೊಂಡಿರುತ್ತವೆ. ಜಿಲ್ಲೆಯಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ( ಹಿಂದೆ ‘ ವೇದಿಕೆ’ ಎಂದಾಗಿತ್ತು), ರಾಜ್ಯದಲ್ಲಿ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ಆಯೋಗದಲ್ಲಿ ಒಂದು ಕೋಟಿ ರೂಪಾಯಿಗೂ ಮೀರದ ಪ್ರಕರಣವನ್ನು, ರಾಜ್ಯ ಆಯೋಗದಲ್ಲಿ ಹತ್ತು ಕೋಟಿ ರೂಪಾಯಿಗೂ ಮೀರದ ಪ್ರಕರಣವನ್ನು, ರಾಷ್ಟ್ರೀಯ ಆಯೋಗದಲ್ಲಿ ಹತ್ತು ಕೋಟಿ ರೂಪಾಯಿ ಮೀರಿದ ಪ್ರಕರಣವನ್ನು ದಾಖಲಿಸಬಹುದಾಗಿರುತ್ತದೆ.
ಪ್ರಮುಖ ಪ್ರಕರಣಗಳು:-
1. Ernakulam Medical College Vs. P R Jayashree ( 2020 SCC Online NCDRC 490) ಯಲ್ಲಿ ವೈದ್ಯಕೀಯ ಸೇವೆಗಳಿಗೆ ಸಂಬಂಧ ಪಟ್ಟಂತೆ ” ಸತ್ತ ವ್ಯಕ್ತಿಯ ದೇಹವನ್ನು ಅವನ ಕುಟುಂಬಸ್ಥರ ಅನುಮತಿಯನ್ನು ಪಡೆಯದೆ ಮೂರನೇ ವ್ಯಕ್ತಿಗೆ ಹಸ್ತಾಂತರಿಸುವುದು ಅಸಿಂಧುವಾಗಿರುತ್ತದೆ.
2. Connat Plaza Restaurant Ltd. Vs. Kapil Mishra ( 2020 SCC Online NCDRC 192) ಪ್ರಕರಣದಲ್ಲಿ ಅನುಚಿತವಾದ ರೀತಿಯಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸಿ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಘೋಷಿತ ಬಹುಮಾನವನ್ನು ನೀಡುವಲ್ಲಿ ವಿಫಲರಾದಗ ಗ್ರಾಹಕರ ಆಯೋಗವು ಗ್ರಾಹಕರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸುವುದರ ಮೂಲಕ ಗ್ರಾಹಕರ ಹಕ್ಕನ್ನು ಎತ್ತಿ ಹಿಡಿಯುತ್ತದೆ.
3. Ashiyana Hotel & Restaurant Vs. Abhimanyu Singh ( 5 February 2021) ಪ್ರಕರಣದಲ್ಲಿ ಹೋಟೆಲ್ ಒಂದರಲ್ಲಿ ಕುಡಿಯಲು ಯೋಗ್ಯವಾದ ಮಿನರಲ್ ನೀರಿನ ಪೂರೈಕೆಗಾಗಿ ಹೆಚ್ಚುವರಿ ಶುಲ್ಕ ಕೇಳುತ್ತಿದ್ದ ಕಾರಣ ದೂರು ದಾಖಲಿಸಿದ ಗ್ರಾಹಕನಿಗೆ ಆಯೋಗವು ಸೂಕ್ತ ಪರಿಹಾರ ನೀಡಿ ಹೋಟೆಲ್ & ರೆಸ್ಟೋರೆಂಟ್ ಗೆ ದಂಡ ವಿಧಿಸುತ್ತದೆ.
4. Rajiv Agarwal Vs. SBI Bank ಪ್ರಕರಣದಲ್ಲಿ ಬ್ಯಾಂಕ್ ATMಗಳು ಸರಿಯಾಗಿ ಕಾರ್ಯ ನಿರ್ವಹಿಸದ ಸ್ಥಿತಿಯಲ್ಲಿ ಗ್ರಾಹಕನು ಬ್ಯಾಂಕ್ ನ ವಿರುದ್ಧ ದೂರು ದಾಖಲಿಸಿ ಸೂಕ್ತವಾದ ಪರಿಹಾರಕ್ಕಾಗಿ ಆಗ್ರಹಿಸಬಹುದು ಎಂದು ತೀರ್ಪು ನೀಡುತ್ತದೆ.
ಗ್ರಾಹಕರ ಹಕ್ಕುಗಳು:-
1. ಹಿತಾಸಕ್ತಿಯ ರಕ್ಷಣೆಯ ಹಕ್ಕು – ಸರಕು ಸೇವೆಯಲ್ಲಿನ ಗುಣಮಟ್ಟ, ಪ್ರಮಾಣ, ಶುದ್ಧತೆ, ಬೆಲೆಯ ಅನುಚಿತ ವಿತರಣೆ ಅಥವಾ ಮಾರಾಟದ ವಿರುದ್ಧ ಗ್ರಾಹಕರ ಹಿತರಕ್ಷಣೆ.
2. ಮಾಹಿತಿಯ ಹಕ್ಕು- ಯಾವುದೇ ಸರಕು ಮತ್ತು ಸೇವೆಯ ಕುರಿತು ಅದರ ಗುಣಮಟ್ಟ, ಪ್ರಮಾಣ, ಶುದ್ಧತೆ, ಬೆಲೆ ಇತ್ಯಾದಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯುವ ಅಧಿಕಾರ.
3. ಆಯ್ಕೆಯ ಸ್ವಾತಂತ್ರ್ಯ – ತನಗಿಷ್ಟದ ಅಥವಾ ತಮಗೆ ಕೊಳ್ಳಲು ಅನುಕೂಲವಾದ ಸರಕು ಮತ್ತು ಸೇವೆಯನ್ನು ಪಡೆಯುವ ಸ್ವಾತಂತ್ರ್ಯ.
4. ದೂರು ದಾಖಲಿಸುವ ಹಕ್ಕು- ತನಗೆ ನೀಡಲಾದ ಸರಕು ಸೇವೆಯಲ್ಲಿನ ನ್ಯೂನತೆ, ದೋಷದ ವಿರುದ್ಧ ಸೂಕ್ತ ಪರಿಹಾರಕ್ಕಾಗಿ ದೂರು ದಾಖಲಿಸುವ ಹಕ್ಕು.
5. ಪರಿಹಾರದ ಹಕ್ಕು – ತನಗಾದ ನಷ್ಟಕ್ಕೆ ಪರಿಹಾರ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರವನ್ನು ಕೇಳುವ ಹಕ್ಕು.
6. ಗ್ರಾಹಕ ಶಿಕ್ಷಣದ ಹಕ್ಕು – ಗ್ರಾಹಕರು ಕಾನೂನುಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಸರಕು ಮತ್ತು ಸೇವೆಗಳ ಕುರಿತು ಪಾರದರ್ಶಕ ವ್ಯವಹಾರ ಅಪೇಕ್ಷಿಸುವುದು ಪ್ರತಿಯೊಬ್ಬ ಗ್ರಾಹಕನ ಪ್ರಮುಖ ಅಧಿಕಾರವಾಗಿದೆ.
ಗ್ರಾಹಕ ಕಾನೂನಿನ ಮಹತ್ವ:-
1. ಗ್ರಾಹಕರ ಹಿತರಕ್ಷಣೆ- ವಿತರಕರು ಮತ್ತು ಮಾರಾಟಗಾರರು ದುರುದ್ದೇಶಪೂರಿತವಾಗಿ ಗ್ರಾಹಕರನ್ನು ಶೋಷಿಸದಂತೆ ಗ್ರಾಹಕರ ಹಿತರಕ್ಷಿಸುವಲ್ಲಿ ಸಹಕಾರಿಯಾಗಿದೆ.
2. ಏಕಸ್ವಾಮ್ಯತೆಯನ್ನು ತಡೆಗಟ್ಟುವಿಕೆ- ವಾಮಮಾರ್ಗದಿಂದ ಬೇರೆ ಬೇರೆ ಉದ್ಯಮಗಳನ್ನು ತಡೆಗಟ್ಟಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸುವುದರ ಮೂಲಕ ಗ್ರಾಹಕರ ಆಯ್ಕೆಯ ಸ್ವಾತಂತ್ರ್ಯವನ್ನು ಕಲಿಯುವುದನ್ನು ತಡೆಗಟ್ಟುತ್ತದೆ.
3. ಉತ್ತಮ ಗುಣಮಟ್ಟದ ಸರಕು ಸೇವೆಗಳು ಗ್ರಾಹಕರಿಗೆ ದೊರಕುವಲ್ಲಿ ಸಹಾಯಕ.
4. ತಮ್ಮ ಹಕ್ಕು ಅಧಿಕಾರಗಳ ಕುರಿತು ಮನವರಿಕೆ ಮಾಡಿ ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿವೆ.
ಪ್ರತಿ ವರ್ಷದ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗೋಣ.