“ನನಗಿಂದು ತಿಳಿಯಿತು ನನ್ನ ಜನ್ಮೋದ್ದೇಶ ! ಪಶ್ಚಿಮ ದೇಶಗಳಿಗೆ ಹೋಗುವೆನು. ಅಲ್ಲಿ ಭೋಗವಾದಿಗಳ ಹೃದಯದಲ್ಲಿ ಸನಾತನ ವೇದಧರ್ಮದ ಉಪನಿಷತ್ ಪ್ರಖರಜ್ಯೋತಿಯನ್ನು ಬೀರುವೆನು. ಅವರು ಭಾರತಾಂಬೆಗೆ ತಲೆಬಾಗಿ ಆಕೆಗೆ ನೆರವಾಗುವಂತೆ ಮಾಡುವೆನು. ಆಕೆಯ ದುರ್ಗತಿಯನ್ನು ಪರಿಹರಿಸಲೆಳಸುವೆನು. ಭಾವಸಮಾಧಿ ಅಲ್ಲಿರಲಿ ! ನಿರ್ವಿಕಲ್ಪ ಸಮಾಧಿ ಸದ್ಯಕ್ಕೆ ಒತ್ತಟ್ಟಿಗಿರಲಿ ! ನನ್ನಾತ್ಮಮುಕ್ತಿ ಸದ್ಯಕ್ಕೆ ಮುಕ್ತಾಯವಾಗಿರಲಿ! ನಿಜವಾದ ಧರ್ಮವನ್ನು ಜಗತ್ತಿಗೆ ಬೋಧಿಸುವೆನು. ಜಗತ್ತನ್ನು ಎಚ್ಚರಿಸುವೆನು. ಭರತಖಂಡವನ್ನು ಮೇಲೆತ್ತುವೆನು. ಹೇ ಜನನಿ, ಪುಣ್ಯಭೂಮಿ, ಆರ್ಯಮಾತೆ, ವೇದಪೂಜಿತೆ, ನನ್ನನ್ನು ಆಶೀರ್ವದಿಸು ! ಹೇ ಗುರುದೇವ, ಕೃಪಾಕರ, ನನಗೆ ಶಕ್ತಿಯನ್ನು ನೀಡು!” ಹೀಗೆಂದು ರಾಷ್ಟ್ರೊದ್ದಾರಕ್ಕಾಗಿ ಟೊಂಕಕಟ್ಟಿ ನಿಂತ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ಜನ್ಮೋದ್ದೇಶವನ್ನು ಅರಿತದ್ದು ಕನ್ಯಾಕುಮಾರಿಯ ಬಂಡೆಯ ಮೇಲೆ ಹಾಗೂ ಈ ಮಾತನ್ನು ಆಡಿದ್ದೂ ಅಲ್ಲಿಯೇ..!


ಅದು ಮಾಗಿಯ ದಿನಗಳ ಉಷಃಕಾಲ. ಸಮಸ್ತ ಹಿಂದೂಗಳಿಗೆ ಪವಿತ್ರ ಕ್ಷೇತ್ರವೆನಿಸಿದ, ಭರತಭೂಮಿಯ ತುತ್ತತುದಿ ಪುರಾಣ ಪ್ರಸಿದ್ಧ ಕನ್ಯಾಕುಮಾರಿಗೆ ಸ್ವಾಮಿ ವಿವೇಕಾನಂದರು ತಿರುವನಂತಪುರದಿಂದ ನಾಗರಕೋಯಿಲ್ ಮಾರ್ಗವಾಗಿ ಆಗಮಿಸಿದ್ದರು. ಯಾವ ಜಗನ್ಮಾತೆಯ ಕಾರ್ಯಕ್ಕೆ ಸ್ವಾಮಿಜಿ ಹೊರಟಿದ್ದರೋ ಅದೇ ದಕ್ಷಿಣೇಶ್ವರದ ಭವತಾರಿಣಿ, ಕಾಳಿಘಾಟಿನ ಕಾಳಿ ಇಲ್ಲಿ ಕನ್ನಿಕಾಪರಮೇಶ್ವರಿಯಾಗಿ- ಕನ್ಯಾಕುಮಾರಿಯಾಗಿ ವಿರಾಜಿಸುತ್ತಿದ್ದಾಳೆ. ಇಂತಹ ತೀರ್ಥಕ್ಷೇತ್ರಕ್ಕೆ ಬಂದ ಸ್ವಾಮಿಜಿ ನೇರವಾಗಿ ತಾಯ ಬಳಿಗೋಡುವ ಶಿಶುವಿನಂತೆ ಕಾತರರಾಗಿ ಮಹಾಮಾತೆಯ ದರ್ಶನಕ್ಕೆ ಧಾವಂತದಿಂದ ಮಂದಿರ ಪ್ರವೇಶಿಸಿದರು. ದೇವಿಯೆದುರು ದೀರ್ಘದಂಡ ನಮಸ್ಕಾರ ಸಮರ್ಪಿಸಿ ಭಾವಪರವಶರಾದರು. ಅವರ ಹೃದಯದಿಂದ ಪ್ರಾರ್ಥನೆಯೊಂದು ತಾನೇ ತಾನಾಗಿ ಹೊರಹೊಮ್ಮಿತು: “ಹೇ ಜಗನ್ಮಾತೆ, ನನಗೆ ಸ್ವರ್ಗ ಬೇಡ, ಮುಕ್ತಿ ಬೇಡ. ನನ್ನ ಭಾರತದ ಕೋಟಿಕೋಟಿ ದೀನ-ದಲಿತ-ದರಿದ್ರರನ್ನು ಮೇಲೆತ್ತುವ ಸನ್ಮಾರ್ಗದೋರು!”ಎಂದು. ಆಹಾ..‌! ಅದೆಂಥ ಪಾರ್ಥನೆ? ಸ್ವಾರ್ಥಕ್ಕಾಗಿಯೇ ದೇವರ ಬಳಿ ಮೊರೆಯಿಡುವ ಪ್ರಾಪಂಚಿಕರ ನಡುವೆ ತರುಣ ಸಂನ್ಯಾಸಿಯೊಬ್ಬ ಮಾತೃಭೂಮಿಯ ಮುಕ್ತಿಗಾಗಿ ಮೊರೆಯಿಡುತ್ತಿದ್ದಾನೆಂದರೆ ಆತನ ಹೃದಯ ವೈಶಾಲ್ಯತೆ ಹೇಗಿರಬೇಕು? ರಾಷ್ಟ್ರಕ್ಕಾಗಿ ಅಂತಃಕರಣ ಹೇಗೆ ತುಡಿಯುತ್ತಿದ್ದಿರಬೇಕು? ಆಲೋಚಿಸಿ.
ಧ್ಯಾನಾರೂಢನಾಗಿ ಮಾತೆಯೆದುರು ಮೊರೆಯಿಡುತ್ತ ನಿಂತಿದ್ದ ಯೋಗಿಗೆ ಒಮ್ಮೆಲೆ ಮೈತಿಳಿದೆದ್ದು ಏರೆತ್ತರದ ಅಲೆಗಳನೆಬ್ಬಿಸುತ್ತಾ ಭೋರ್ಗರೆಯುತ್ತಿದ್ದ ಸಮುದ್ರದತ್ತ ದಿಟ್ಟಿಸಲಾರಂಭಿಸಿದ. ಕ್ಷಣಮಾತ್ರದಲ್ಲಿ ಕಡಲೆಡೆಗೆ ಧಾವಿಸಿ ಅಲ್ಲಿರುವ ಅಂಬಿಗರಿಗೆ ಅನತಿ ದೂರದಲಿ ಕಾಣುವ ಬಂಡೆಯೆಡೆಗೆ ಕರೆದೊಯ್ಯಲು ಭಿನ್ನವಿಸಿಕೊಂಡ, ಆದರೆ ಅವರೋ ದುಡ್ಡಿಗಾಗಿ ದುಡಿಯುವ ಜನ, ನಿತ್ಯದ ಮಾಮೂಲಿ ಶುಲ್ಕ ಕೇಳಿದರು! ಈ ಸಂನ್ಯಾಸಿಯ ಬಳಿಯೋ ಭರಿಸಲು ಬಿಡಿಗಾಸೂ ಇರಲಿಲ್ಲ. ತಡಮಾಡದೆ ಮೊರೆವ ಕಡಲಿಗೆ ಧುಮುಕಿಯೇ ಬಿಟ್ಟರು! ಸಮುದ್ರವೋ ಅಳತೆಗೆ ನಿಲುಕದ ಆಳ, ದಡದೆಡೆಗೆ ತಳ್ಳುವ ಅಲೆಗಳು, ಭಯಂಕರ ಜಲಚರಗಳು, ಒಮ್ಮೆ ಮುಳುಗಿದರೆ ಹುಡುಕಿದರೂ ಸಿಗದಷ್ಟು ಕ್ರೌರ್ಯಭರಿತ ಸದ್ದು! ಅಬ್ಬಾ ಅಂತಹ ಸಾಗರದಲಿ ತೆರೆಗಳ ಸೀಳಿಕೊಂಡು ಎರಡು ಫರ್ಲಾಂಗ್ ದೂರದಲ್ಲಿದ್ದ ಬಂಡೆಯ ಮೇಲೆ ಶಿಲಾರೋಹಣಗೈದು ಸ್ಥಾಪಿತವಾದರು ಸ್ವಾಮಿಜಿ. ಅಕ್ಕ-ಪಕ್ಕದಲ್ಲಿ ಗಾಳ ಹಾಕಿಕೊಂಡಿದ್ದ ಮೀನುಗಾರರು, ಸಮುದ್ರ ಸ್ನಾನಕ್ಕೆಂದು ಬಂದಿದ್ದ ಚಾರಣಿಗರು, ದೇವಾಲಯದ ಅರ್ಚಕರು, ದೋಣಿಯಲ್ಲಿ ಸಾಗಿದ್ದ ಬೆಸ್ತರೆಲ್ಲಾ ಈ ಮಾನವಕೇಸರಿಯ ಗುಂಡಿಗೆಯ ಧೈರ್ಯ ನೋಡಿ ಒಂದುಕ್ಷಣ ಬೆಕ್ಕಸ ಬೆರಗಾಗಿದ್ದರು. 


ಭಕ್ತಪ್ರೀಯ ಶಿವನ ಒಲಿಸಿಕೊಳ್ಳಲು ಕನ್ಯಾಕುಮಾರಿ ದೇವಿ ಧ್ಯಾನಗೈದ ‘ಶ್ರೀಪಾದ ಶಿಲೆ’ಯ ಮೇಲೆ ಶಾಕ್ತರ ನಂಬಿಕೆಯಂತೆ ತಪಸ್ಸನ್ನಾಚರಿಸಲು ಸೂಕ್ತಸ್ಥಳವೆಂದು ಭಾವಿಸಿದ್ದ ವಿವೇಕಾನಂದರು ಅಲ್ಲಿಯೇ ಪದ್ಮಾಸನದಲ್ಲಿ ಕುಳಿತರು. ಇದೀಗ ಅವರ ಮನದಲ್ಲಿ ಹೊಯ್ದಾಡುತ್ತಿದ್ದ ಭಾವತರಂಗಗಳು ಭುಗಿಲೇಳಲಾರಂಭಿಸಿದವು, ಸ್ವಾಮಿಜಿ ಗಾಢ ಧ್ಯಾನದಲಿ ಮುಳುಗಿಬಿಟ್ಟರು. ಹಾಗಿದ್ದರೆ ಅವರ ಧ್ಯಾನದ ವಸ್ತು ಯಾವುದಿದ್ದೀತು ಹೇಳಿ? ನಾವಾಗಿದ್ದರೋ ಪ್ರೀತಿಸುವ ಹುಡುಗಿ, ಮೋಹಿಸುವ ಕುಟುಂಬ, ಆಶಿಸುವ ಸಂಬಂಧವಾಗಿರುತ್ತಿತ್ತು. ಆದರೆ ಸ್ವಾಮಿಜಿಗೆ ಧ್ಯಾನದ ವಸ್ತು ಸಾಕ್ಷಾತ್ “ಭಾರತ!”ವೇ ಆಗಿತ್ತು. ಸ್ವಾಮಿಜಿ ಭಾರತದ ಭೂತ-ವರ್ತಮಾನ-ಭವಿಷದ್ಗಳ ದೀರ್ಘಾಲೋಚನೆಯಲ್ಲಿ ಮುಳುಗಿದರು. ಭವ್ಯ ಭಾರತ ವೈಭವದ ಅಧಃಪತನಕ್ಕೆ ಕಾರಣವೇನು? ಭಾರತದ ಈ ದಾರಿದ್ಯಕ್ಕೆ ಕಾರಣರಾರು? ಎಂಬಿತ್ಯಾದಿ ವಿಚಾರಗಳ ಕುರಿತಾಗಿ ಸುದೀರ್ಘ ಚಿಂತನೆಯಲ್ಲಿ ಮುಳುಗಿದರು. ಭಾರತದ ಸ್ಥಿತಿ ನೆನೆದು ಕಣ್ಣೀರಿಟ್ಟರು; ಒಮ್ಮೊಮ್ಮೆ ಚಿಂತೆಗಳ ಭರದಲ್ಲಿ ಏದುಸಿರು ಬಿಟ್ಟರು; ಮತ್ತೊಮ್ಮೊಮ್ಮೆ “ಹೇ ಜನನಿ, ಹೇ ಭಾರತಮಾತೆ, ಹೇ ನನ್ನ ಜನನಿ, ಹೇ ನನ್ನ ಭಾರತ ಮಾತೆ” ಎಂದು ಉದ್ಘೋಷಿಸಿ ಅಶ್ರುತರ್ಪಣಗೈದರು! ಮೂರುದಿನಗಳ ಕಾಲ ನಿರಂತರ ಧ್ಯಾನದಲ್ಲಿ ಮುಳುಗಿದ ವೀರ ಸಂನ್ಯಾಸಿ ನೈಜ ಭಾರತದ ಸಾಕ್ಷಾತ್ಕಾರ ಮಾಡಿಕೊಂಡರು. ತನ್ನ ಬದುಕಿನ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸಿಕೊಂಡರು. ಧರ್ಮವೇ ಸಮಸ್ತ ಭಾರತದ ಜೀವನಾಡಿ; ಅತ್ಯುನ್ನತ ಆಧ್ಯಾತ್ಮಿಕ ಪುನರ್ಜಾಗೃತಿಯಿಂದ ಮಾತ್ರ ಭಾರತ ಮತ್ತೆ ಮೇಲೇಳಲು ಸಾಧ್ಯ ಎಂಬುದನ್ನು ಕಂಡುಕೊಂಡರು. ಭಾರತದ ಅವನತಿಗೆ ಕಾರಣ ಧರ್ಮವಲ್ಲ; ಬದಲಾಗಿ ಧರ್ಮ ಅನುಷ್ಠಾನದಲ್ಲಿ ಬಾರದಿರುವುದು – ಬಾಳಿನೊಂದಿಗೆ ಬೆರೆತಾಗ ಬೃಹದದ ಪರಿಣಾಮ ಉಂಟು ಮಾಡುವ ಮಹಾಶಕ್ತಿ ಧರ್ಮ ಎಂಬ ಸ್ಪಷ್ಟದರ್ಶನ ಅವರಿಗಾಯ್ತು. ಸಮಸ್ತ ಭಾರತದ ಚಿತ್ರಣವೊಮ್ಮೆ ಕಣ್ಮುಂದೆ ಹಾದುಹೋಯ್ತು! ಜನಸಾಮಾನ್ಯರ ಸಂಕಟಗಳಿಗೆ, ನೋವುಗಳಿಗೆ, ಆಕ್ರಂದನಕ್ಕೆ, ಅವನತಿ ಹಾಗೂ ತುಳಿತಕ್ಕೆ ಪರಿಹಾರ ತ್ಯಾಗ ಮತ್ತು ಸೇವೆ ಎಂಬ ಮಹದಾದರ್ಶಗಳೆಂದರಿತರು ಸ್ವಾಮಿಜಿ.


ಹಸಿದ ಹೊಟ್ಟೆಗೆ ಧರ್ಮ ಬೋಧನೆ ಯೋಗ್ಯವಲ್ಲ! ಮೃಗಗಳಂತೆ ವಾಸಿಸುತ್ತಿರುವ ಬಡಜನರಿಗೆ ಹಾಗೂ ಹಳ್ಳಿಯ ಜನರಿಗೆ ನಾವು ಸಂನ್ಯಾಸಿಗಳು ನಿಸ್ವಾರ್ಥದಿಂದ ವಿದ್ಯಾಭಾಸ ನೀಡುತ್ತಾ, ಚಂಡಾಲರಿಂದ ಮೊದಲ್ಗೊಂಡು ಪ್ರತಿಯೊಬ್ಬನ ಒಳ್ಳೆಯ ಮಾರ್ಗವನ್ನು ಹುಡುಕಬೇಕು; ನಮ್ಮ ದೇಶದ ಬಡವರೆಲ್ಲ ಶಾಲೆಗೆ ಹೋಗಲಾರದಷ್ಟು ದರಿದ್ರರು. ಕಾವ್ಯ, ಸಾಹಿತ್ಯ ಓದುವುದರಿಂದ ಅವರಿಗೇನೂ ಪ್ರಯೋಜನವಿಲ್ಲ ಅವರಿಗೆ ಮೂಲಭೂತ ಶಿಕ್ಷಣ ಕೊಡುವುದು ಅಗತ್ಯ. ಭಾರತದ ಎಲ್ಲ ದುರವಸ್ಥೆಗೆ ಕಾರಣ ತನ್ನತನವನ್ನು ಕಳೆದುಕೊಂಡಿರುವುದು; ದೋಷವಿರುವುದು ಧರ್ಮದಲ್ಲಲ್ಲ, ಜನರಲ್ಲಿ! ಇದನ್ನು ಸರಿಪಡಿಸಬೇಕಿದೆ. ಆದರೆ ನಾನೋ ಒಬ್ಬ ಬಡ ಸಂನ್ಯಾಸಿ, ನಾನೊಬ್ಬನೇ ಏನು ಮಾಡಲು ಸಾಧ್ಯ? ಎಂದು ಬೇಸಸುತ್ತಿದ್ದ ಸ್ವಾಮಿಜಿಯ ಮೊಗದೊಳಗಿನ ನಿರಾಷೆಯ ಚಿಹ್ನೆ ಅಳಿಸಿ ಯಾರನ್ನೋ ಕಂಡವರಂತೆ ಚಕ್ಕನೆ ಬೆಚ್ಚಿ ಕೈಮುಗಿದು “ಹೇ ಗುರುದೇವ, ಹೇ ಗುರುದೇವ ನಿನ್ನ ಕೃಪೆಯೊಂದಿರಲಿ! ನನಗೆಲ್ಲಾ ಸಾಧ್ಯವಾಗುವುದು. ಸಮಸ್ತ ಭರತಖಂಡವನ್ನು ಸಂಚರಿಸಿ ಅದರ ಹೃದಯವನ್ನು ಅರಿತಿದ್ದೇನೆ. ನೂತನ ಚೇತನಶಕ್ತಿ ಅದರ ಅಂತರಾಳದಲ್ಲಿ ಅಡಗಿದೆ. ಅದನ್ನು ಎಚ್ಚರಿಸಲು ಪ್ರಯತ್ನಪಡುತ್ತೇನೆ. ಸೊಂಟಕಟ್ಟಿ ನಿಲ್ಲುತ್ತೇನೆ. ಅರಸನ ಅರಮನೆಗಳ ಸಜ್ಜೆಯ ಮೇಲೆ ಪವಡಿಸಿದ್ದೇನೆ; ತಿರುಕನ ಗುಡಿಸಲುಗಳಲ್ಲಿ ನೆಲದ ಮೇಲೆ ಮಲಗಿದ್ದೇನೆ. ಭಾರತ ಮಾತೆಯನ್ನು ಅಪಾದಮಸ್ತಕವಾಗಿ ಅರಿತಿದ್ದೇನೆ. ಈ ಮಹಾ ಸಮುದ್ರವನ್ನು ದಾಟುವೆನು, ಐಶ್ವರ್ಯದಲ್ಲಿ ಓಲಾಡುತಿಹ ಪಶ್ಚಿಮ ದೇಶಗಳಿಗೆ ಹೋಗಿ ನನ್ನ ಮೇಧಾಶಕ್ತಿಯಿಂದ ಸಂನ್ಯಾಸ ಧರ್ಮಕ್ಕೆ ವಿರುದ್ಧವಾಗಿ ಧನಾರ್ಜನೆ ಮಾಡುವೆನು, ಮಾತೆಯ ಉದ್ದಾರಕ್ಕೆ ಯತ್ನ ಮಾಡುವೆನು. ನನಗೆ ಮುಕ್ತಿ ಬೇಡ, ಸುಖ ಬೇಡ, ದರಿದ್ರ ನಾರಾಯಣರ ಸೇವೆ ಮಾಡುವೆನು. ಹೇ ಜನನಿ, ಹೇ ಗುರುದೇವ ಕೃಪೆಮಾಡು! ನೆರವಾಗು!” ಎಂದು ದೇಶಭಕ್ತ ವಿರಾಗಿ ಪ್ರಾರ್ಥಿಸಿದನು. ಈಗ ಅವರಿಗೆ ಕಾಣುತ್ತಿದ್ದುದು ಕೇವಲ ಭಾರತದ ಕೋಟ್ಯಾನುಕೋಟಿ ದೀನ-ದಲಿತ-ದರಿದ್ರರು ಮಾತ್ರ.
ಇಷ್ಟು ದಿನ ತನ್ನಾತ್ಮ ಮುಕ್ತಿಗಾಗಿ, ಧರ್ಮಕ್ಕಾಗಿ,  ಲೋಕ ಹಿತಕ್ಕಾಗಿ ಪ್ರಾರ್ಥಿಸಿದ ಸಂನ್ಯಾಸಿಗಳ ಮಧ್ಯ ರಾಷ್ಟ್ರಕ್ಕಾಗಿ ಮೊರೆಯಿಡುವ ಸಿಡಲ ಸಂತನೊಬ್ಬ ಉದಿಸಿದ್ದ. ಸನಾತನ ವೇದಧರ್ಮದ ರಾಯಭಾರಿ ತಯಾರಾಗಿದ್ದ, ವೇದೋಪನಿಷತ್ತುಗಳ ಸಾರವನು ಪಶ್ಚಿಮಕೆ ಒಯ್ಯುವ ಸಾರಥಿ ಸಿದ್ಧನಾಗಿದ್ದ. ಈ ಕ್ಷಣದಲ್ಲೇ ಸ್ವಾಮಿಜಿಯಲ್ಲಡಗಿದ್ದ ಸಮಾಜ ಸುಧಾರಕ ಮೈದಳೆದ; ಅವರಲ್ಲಡಗಿದ್ದ ರಾಷ್ಟ್ರ ನಿರ್ಮಾಪಕ ಹೊರಬಂದ; ಅಂತರ್ಯದಲ್ಲಿದ್ದ ಜಗದ್ರೂವಾರಿ- ವಿಶ್ವಶಿಲ್ಪಿ ಜಾಗೃತನಾದ. ಇಲ್ಲಿಂದಲೇ ಸ್ವಾಮಿ ವಿವೇಕಾನಂದರು ಮುಂದೆ ಜಗತ್ತಿನಾದ್ಯಂತ ಆರ್ಯಮಾತೆಯ ವೈಭವವನ್ನು ಸಾರಲು ಪ್ರೇರಣೆ ಪಡೆದರು. ಇದು ಘಟಿಸಿದ್ದು 1892ರ ಡಿಸೆಂಬರ್ 25ರಂದು! ಈ ದಿನವನ್ನು ಇದೀಗ ಪ್ರತಿವರ್ಷ ಸನಾತನ ಧರ್ಮೀಯ ಭಾರತೀಯರೆಲ್ಲಾ “ರಾಕ್ ಡೇ” ಆಗಿ ಆಚರಿಸಲಾರಂಭಿಸಿದ್ದಾರೆ. ಆದಿಗುರು ಶಂಕರರಂತೆ ಸನಾತನ ಧರ್ಮದ ಪುನರುತ್ಥಾನಕ್ಕೆ ದೀಕ್ಷೆ ತೊಟ್ಟು ಯಶಸ್ವಿಯಾದ ವಿವೇಕಾನಂದರ ಸಾಕ್ಷಾತ್ಕಾರದ ದಿನವನ್ನು ವಿಜೃಂಭಿಸುತ್ತಿದ್ದಾರೆ. ರಾಷ್ಟ್ರದ ತಾರುಣ್ಯ ಬದಲಾಗುತ್ತಿದೆ, ದಾಸ್ಯದ ಕಪ್ಪು ಛಾಯೆ ಮರೆಯಾಗಿ ಸೂರ್ಯರಶ್ಮಿ ಭರತ ಭೂಮಿಯ‌ ಬೆಳಗುತಿದೆ. ಈ ಸಂದೇಶ ಜಗದ ಮೂಲೆ-ಮೂಲೆ ತಲುಪಲಿ, ವಿವೇಕಾನಂದರ ಸಂದೇಶ ಮನೆ- ಮನಗಳಲ್ಲಿ ಮೊಳಗಲಿ, ಅವರ ಕನಸಿನ ಧರ್ಮಾನುಷ್ಠಾನ ವಾಗಲಿ. “ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಮ್ಸಮರ್ಥಾ ಭವತ್ವಾಶಿಷಾ ತೇ ಭೃಶಮ್!!”ಎಂಬ ಪ್ರಾರ್ಥನೆಯ ಸಾಲುಗಳಂತೆ ಇಂದಿನ ನವ-ಯುವಮನಸ್ಸುಗಳೆಲ್ಲಾ ಒಂದಾಗಿ ಭಾರತ ಮಾತೆಯನ್ನು ಮತ್ತೆ ಸಿಂಹಾಸನಾರೂಢಳಾಗಿಸಿ, ಮತ್ತೆ ಆಕೆಯನ್ನು ಪರಮ ವೈಭವಕ್ಕೇರಿಸಿ “ವಿಶ್ವಗುರು”ವನ್ನಾಗಿಸುವಂತಾಗಲಿ.

Leave a Reply

Your email address will not be published.

This site uses Akismet to reduce spam. Learn how your comment data is processed.