ಅಖಿಲ ಭಾರತೀಯ ಗ್ರಾಹಕ ಪಂಚಾಯತ್ 1974 ರಿಂದ ಶೋಷಣ ಮುಕ್ತ ಸಮಾಜದ ಕನಸಿನೊಂದಿಗೆ ಕೆಲಸ ಮಾಡುತ್ತಿದೆ. ಉತ್ಪಾದನೆಯಲ್ಲಿ ಹೆಚ್ಚಳ, ಹಂಚಿಕೆಯಲ್ಲಿ ಸಮಾನತೆ, ಬಳಕೆಯ ಮೇಲೆ ಸಂಯಮ, ಎಂಬ ಪರಿಕಲ್ಪನೆಗಳೊಂದಿಗೆ ಸಮಾಜದಲ್ಲಿ ಜಾಗೃತಿ ನಡೆಸುತ್ತಿದೆ.
‘ರಾಷ್ಟ್ರ ಹಿತ, ಸಮಾಜ ಹಿತ ಹಾಗೂ ಗ್ರಾಹಕ ಹಿತ’ ಈ ಸರಪಳಿಯಲ್ಲಿ ಕೆಲಸ ಮಾಡುತ್ತಿರುವಾಗ, ಗ್ರಾಹಕರು ಸಹ ದೇಶದ ಹಿತಕ್ಕಾಗಿ ಕೊಡುಗೆ ನೀಡಬೇಕೆಂಬ ಸಂಸ್ಕಾರವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ವಾಸ್ತವದಲ್ಲಿ ಯಾರೊಂದಿಗೂ ಯಾವುದೇ ಸಂಘರ್ಷವಿಲ್ಲ. ವ್ಯಾಪಾರಿ, ಉತ್ಪಾದಕ, ಕಾರ್ಮಿಕ, ರೈತ ಮತ್ತು ಗ್ರಾಹಕ ಇದು ಆರ್ಥಿಕ ಪ್ರವಾಹದ ಕೊಂಡಿಯಾಗಿದೆ. ಆದರೆ ಈ ವಲಯದಲ್ಲಿ ಗ್ರಾಹಕ ವಂಚನೆಗೊಳಗಾಗುತ್ತಿದ್ದಾನೆ. ಗ್ರಾಹಕ ವಂಚನೆಗೀಡಾಗುವುದಕ್ಕೆ ಅವನ ಅಜ್ಞಾನ ಹಾಗೂ ಜಾಗೃತಿಯ ಅಭಾವವೇ ಕಾರಣ. ಎರಡನೆಯ ಕಾರಣವೆಂದರೆ ವ್ಯಾಪಾರಿಗಳ ಹಾಗೂ ಉದ್ಯಮಿಗಳ ದುರಾಸೆಯ, ಅನುಚಿತ ವ್ಯಾಪಾರದ ಅಭ್ಯಾಸಗಳು. ಮೂರನೆಯ ಕಾರಣವೆಂದರೆ ಅವರನ್ನು ನಿಯಂತ್ರಿಸುವ ಆಡಳಿತ ಮತ್ತು ನೀತಿಗಳ ಪರಿಣಾಮಗಳು. ಗ್ರಾಹಕ ಪಂಚಾಯತ್ ಈ ಮೂರು ಕಾರಣಗಳನ್ನು ಪರಿಗಣಿಸುತ್ತಾ ಅದರಂತೆ ತನ್ನ ಕಾರ್ಯರಚನೆಯನ್ನು ನಿಯೋಜಿಸುತ್ತಿದೆ.
“ಜಾಗೃತ ಗ್ರಾಹಕ, ಸಮರ್ಥ ಭಾರತ, ವ್ಯವಸ್ಥೆ ಸರಿಪಡಿಸುವ ಆಂದೋಲನ” (System correcting movement) ಎಂಬ ಘೋಷಾವಾಕ್ಯಗಳ ಮೂಲಕ ಗ್ರಾಹಕ ಪಂಚಾಯತ್ ಗ್ರಾಹಕರ ಜಾಗೃತಿಗಾಗಿ ಕೆಲಸ ಮಾಡುತ್ತಿದೆ. ವಿಧೇಯರಾಗಿ ಕಾನೂನನ್ನು ಅನುಸರಿಸುವ ದೃಢ ಸಂಕಲ್ಪದೊಂದಿಗೆ ಸರಕಾರ ಹಾಗೂ ಆಡಳಿತದೊಂದಿಗೆ ಸಂಘರ್ಷರಹಿತ ಸಂಬಂಧವನ್ನು ಇಟ್ಟುಕೊಂಡು, ವ್ಯಾಪಾರಿಗಳು, ಉದ್ಯಮಿಗಳು, ರೈತರು ಹಾಗೂ ಗ್ರಾಹಕರ ಕಲ್ಯಾಣದ ಸಮನ್ವಯದೊಂದಿಗೆ ನಡೆಯುವ ಆಲೋಚನೆಯನ್ನು ಇಟ್ಟುಕೊಂಡು ಆಂದೋಲನ ನಡೆಸುತ್ತಿದೆ. ಬಹಿಷ್ಕಾರ, ಲೇಖನೀ ಯುದ್ಧ (Pen War) ಇದೇ ಅಸ್ತ್ರ. ಪ್ರಸ್ತುತ ಸಮಾಜದಲ್ಲಿ ಆಂದೋಲನದ ಹೆಸರಿನಲ್ಲಿ ಪ್ರಚಲಿತವಾಗಿರುವ ಅಧಿಕಾರಿಗಳಿಗೆ ಮುತ್ತಿಗೆ, ದಾಂಧಲೆ ಇತ್ಯಾದಿಗಳಲ್ಲಿ ಗ್ರಾಹಕ ಪಂಚಾಯತ್ ವಿಶ್ವಾಸವಿಡದೆ, ಸಮನ್ವಯ ನಿಯಮಗಳ ಪಾಲನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ, ದಕ್ಷ ಕಾರ್ಯಕರ್ತರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.
1986 ರಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಅಂಗೀಕರಿಸಲಾಯಿತು. ಇದರ ಹಿಂದೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನ ಅವಿರತ ಶ್ರಮವಿದೆ. ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಈ ಕಾನೂನನ್ನು 2019 ರಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಸಾಂತ್ವಾನಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಕಳೆದ 40 ವರ್ಷಗಳಿಂದ ಭಾರತದಲ್ಲಿ ಗ್ರಾಹಕರ ಜಾಗೃತಿಯನ್ನು ಮಾಡುತ್ತಾ ಕಾರ್ಯಕರ್ತರು ಗ್ರಾಹಕ ಪಂಚಾಯತ್ ನ ಅಡಿಯಲ್ಲಿ ಒಂದಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಹಕ ಪಂಚಾಯತ್ ಸುಮಾರು 400 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಾಹಕ ಪಂಚಾಯತ್ ಕಾರ್ಯವನ್ನು ಸಕ್ರಿಯಗೊಳಿಸಲು ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ.
ಡಿಸೆಂಬರ್ 29 ಮತ್ತು 30 ರಂದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಅಕ್ಷರಂ, ಗಿರಿನಗರ ಬೆಂಗಳೂರಿನಲ್ಲಿ ನಡೆಯಿತು. ಗ್ರಾಹಕ ಹಿತಾಸಕ್ತಿ, ಸಂಘಟನೆ, ಜಾಗರಣೆ, ಮಾರ್ಗದರ್ಶನದ ಬಗ್ಗೆ ಚಿಂತನ-ಮಂಥನ ಗಳು ಯಶಸ್ವಿಯಾಗಿ ನಡೆದು ಶಾಸನ, ಅನುಶಾಸನ, ಕಾರ್ಯ ವಿಸ್ತಾರದ ದೃಷ್ಟಿಯಿಂದ, ಬರುವ 2022-23 ನ್ನು “ಗ್ರಾಹಕ ಸಂಘಟನಾ ಜಾಗೃತ ವರ್ಷ” ಎಂದು ಘೋಷಿಸಲಾಯಿತು.
2022 ರಲ್ಲಿ ಯೋಜಿತ ಕೆಲಸವನ್ನು ಮಾಡಲು ಸಭೆಯಲ್ಲಿ ಹೆಚ್ಚಿನ ಚರ್ಚೆಗಳನ್ನು ನಡೆಸಲಾಯಿತು. ರಾಷ್ಟ್ರೀಯ ವಾರ್ಷಿಕ ಸಭೆಯನ್ನು ಏಪ್ರಿಲ್ ತಿಂಗಳಲ್ಲಿ ಆಯೋಜಿಸಲಾಗುತ್ತಿದೆ. ಗ್ರಾಹಕರ ಜಾಗೃತಿ, ಶೋಷಣ ಮುಕ್ತ ಸಮಾಜ, ಶೋಷಣ ಮುಕ್ತ ಗ್ರಾಹಕ, ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಲು ಗ್ರಾಹಕ ಪಂಚಾಯತ್ ತನ್ನ ಮುಂದಿನ ಕಾರ್ಯಕ್ರಮವನ್ನು ನಿಯೋಜಿಸುತ್ತಿದೆ.
ಸಭೆಯಲ್ಲಿ ಸುಮಾರು ೨೨ ಪ್ರದರ್ಶಿನಿಗಳನ್ನು ಗ್ರಾಹಕರಿಗೆ ಜಾಗೃತಿ ಮೂಡಿಸಲು ಆಹಾರ ಅರೋಗ್ಯ, ಶಿಕ್ಷಣ, ಪರ್ಯಾವರಣ/ ವಸತಿ ಹಾಗು ವ್ಯವಹಾರ ಆಯಾಮಗಳಡಿಯಲ್ಲಿ ಸ್ವದೇಶೀ ಸ್ವಾವಲಂಬನಾ – “ವೋಕಲ್ ಫಾರ್ ಲೋಕಲ್ ” ಪರಿಕಲ್ಪನೆಯಡಿಯಲ್ಲಿ ಡಿಸೆಂಬರ್ ೨೯ರಿಂದ ೩೧ರ ವರೆಗೆ ೩ ದಿನಗಳು ನೆಡೆಸಲಾಯಿತು. CFTRI, FSSAI ನಿಂದ ಆಹಾರ ಕಲಬೆರೆಕೆಯ ಬಗ್ಗೆ ಜಾಗೃತಿ, ಆರ್ಗಾನಿಕ್ ಆಹಾರದ ಶ್ರೇಷ್ಠತೆ ಮತ್ತು ಉಪಯೋಗಗಳು, ಸ್ಥಳೀಯ ಕಸುಬುಗಾರರಿಗೆ ಮಾನ್ಯತೆ, RPI, RERA ಮತ್ತು ಸೈಬರ್ ಸೆಕ್ಯೂರಿಟಿ ಅವಶ್ಯಕತೆಗಳು ಮುಂತಾದವುಗಳಿಂದ ಗ್ರಾಹಕರಿಗೆ ಉಪಯೋಗಕಾರಿ ಮಾಹಿತಿ ಹಾಗು ಸ್ವದೇಶೀ ಖರೀದಿಗೆ ಆದ್ಯತೆ ನೀಡಲಾಯಿತು.
ಕಳೆದ 15 ದಿನಗಳಿಂದ ದೇಶಾದ್ಯಂತ ಜಾಗರಣ ಪಾಕ್ಷಿಕವನ್ನು (ಪಖ್ವಾಡ್) ಆಯೋಜಿಸಲಾಗಿತ್ತು. ಅದೇ ರೀತಿ ಕರ್ನಾಟಕ ರಾಜ್ಯದಲ್ಲೂ ಜಾಗರಣ ಪಾಕ್ಷಿಕವನ್ನು ನಡೆಸಲಾಗಿದೆ. ಇಂದು ಅದರ ಸಮಾರೋಪ ಸಮಾರಂಭ ಗೌರವಾನ್ವಿತ ಐಟಿ.ಬಿಟಿ ಸಚಿವ ಡಾ. ಶ್ರೀ ಅಶ್ವತ್ಥನಾರಾಯಣ, ಪಿಇಎಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಶ್ರೀ. ದೊರೆಸ್ವಾಮಿ, ಬೆಂಗಳೂರು ದಕ್ಷಿಣ ಸಂಸದರಾದ ಶ್ರೀಯುತ ತೇಜಸ್ವಿ ಸೂರ್ಯ, ಶಾಸಕರಾದ ಶ್ರೀ. ರವಿಸುಬ್ರಹ್ಮಣ್ಯ ಅವರ ಸಮ್ಮುಖದಲ್ಲಿ ನೆರವೇರಿದೆ. ABGP ಕರ್ನಾಟಕ ಪ್ರಾಂತ್ ವತಿಯಿಂದ ಗ್ರಾಹಕರಿಗೆ ಮಾರ್ಗದರ್ಶನ ನೀಡುವ “ಗ್ರಾಹಕ ದಿಕ್ಸೂಚಿ” ಎಂಬ ಕನ್ನಡದ ಪುಸ್ತಕವನ್ನು ಕಾರ್ಯಕ್ರಮದ ಪ್ರಾರಂಭದಲ್ಲಿ ಸನ್ಮಾನ್ಯ ಶ್ರೀ ಡಾ. ಅಶ್ವಥ್ ನಾರಾಯಣ್ ಅವರು ಬಿಡುಗಡೆ ಮಾಡಿದರು
ಅಖಿಲ ಭಾರತ ಗ್ರಾಹಕ ಪಂಚಾಯತ್ ಪರವಾಗಿ, ರಾಷ್ಟ್ರೀಯ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ನಾರಾಯಣ ಭಾಯಿ ಶಾಹ ಅಧ್ಯಕ್ಷ ಭಾಷಣದಲ್ಲಿ ಮಾತನಾಡುತ್ತಾ “ಸರ್ವೇ ಭವಂತು ಸುಖಿನಃ ” ಎನ್ನುವ ಮಹಾನ್ ತತ್ವ ಸಿದ್ಧಾಂತದ ಆಧಾರದಲ್ಲಿ ಶೋಷಣ್ ಮುಕ್ತ ಭಾರತದೆಡೆಗೆ ಸಾಗುವುದೇ ಗ್ರಾಹಕ್ ಪಂಚಾಯತ್ ನ ಉದ್ದೇಶ ಎಂದು ತಿಳಿಸಿದರು. ಪ್ರತಿಯೊಬ್ಬರೂ ನಾಗರಿಕರೇ.. ನಾಗರೀಕರೆಲ್ಲರೂ ಗ್ರಾಹಕರೇ.. ಹಾಗಾಗಿ ABGP ಪ್ರತಿಯೊಬ್ಬ ಗ್ರಾಹಕರ ಸಂಕಷ್ಟ ಪರಿಹಾರಕ್ಕೆ ಸದಾ ಸಿದ್ಧವಿದೆ ಹಾಗು ಗ್ರಾಹಕರಿಂದ ಗ್ರಾಹಕರಿಗೋಸ್ಕರ ರಾಷ್ಟ್ರಕ್ಕಾಗಿ ABGP ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಅರುಣ್ ದೇಶಪಾಂಡೆ, ಕ್ಷೇತ್ರ ಸಂಘಟನಾ ಸಚಿವರಾದ ಶ್ರೀಯುತ ದತ್ತಾತ್ರೇಯ ನಾಡಿಗ್ ಅವರು ಗ್ರಾಹಕ ಪಂಚಾಯತ್ ನ ಪಾತ್ರವನ್ನು ಪ್ರಸ್ತುತಪಡಿಸಲಿದ್ದಾರೆ. ಕರ್ನಾಟಕದ ಶ್ರೀಮತಿ ಗಾಯತ್ರಿ, ಶ್ರೀಮತಿ ಸಂಧ್ಯಾ ಬಾಗೂರು, ಶ್ರೀಮತಿ ಪ್ರಮೀಳಾ ದಾನದ, ಶ್ರೀ ದಿಲೀಪ್ ಕುಮಾರ್, ಶ್ರೀ. ಟಿ. ಸಿ ಶಿವಸ್ವಾಮಿ, ಶ್ರೀ. ರಂಗನಾಥ್ ಶ್ರೀ ನರಸಿಂಹ ನಕ್ಷತ್ರಿ ಮುಂತಾದ ಹಲವು ಕಾರ್ಯಕರ್ತರ ತಂಡ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.