ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅವಧಿಯನ್ನು ಇನ್ನು ಮೂರು ವರ್ಷಕ್ಕೆ ವಿಸ್ತರಿಸಿರುವುದಕ್ಕಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ಸಮರಸತಾ ಮಂಚ್ ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಈ ನಿರ್ಣಯ ಐತಿಹಾಸಿಕವಾಗಿದೆ. ಇದರಿಂದ ಸಫಾಯಿ ಕರ್ಮಚಾರಿಗಳ ಹಿತವನ್ನು ಕಾಪಾಡಲು ಬಹಳ ಅನುಕೂಲವಾಗಿದೆ. ಹಿಂದಿನ ಸರ್ಕಾರಗಳು ಆಯೋಗದ ಅವಧಿಯನ್ನು ಕೇವಲ ಒಂದು ವರ್ಷಕ್ಕೆ ಸೀಮಿತಗೊಳಿಸುತ್ತಿದ್ದುದರಿಂದ ಆಯೋಗವು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ.
ಭಾರತದಲ್ಲಿ ಒಟ್ಟು 43,797 ಸಫಾಯಿ ಕೆಲಸಗಾರರಿದ್ದು ಅವರಲ್ಲಿ 42,500 ಕ್ಕಿಂತ ಹೆಚ್ಚಿನವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ ಎಂದು ಕೇಂದ್ರ ಸಾಮಾಜಿಕ ಮತ್ತು ಸಶಕ್ತೀಕರಣ ಮಂತ್ರಿಗಳು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಈ ಸಫಾಯಿ ಕಾರ್ಮಿಕರನ್ನು ಅಸ್ಪೃಶ್ಯರಲ್ಲಿಯೇ ಅಸ್ಪೃಶ್ಯರಂತೆ ನೋಡಲಾಗುತ್ತಿದ್ದು, ಅವರನ್ನು ಬೇರೆ ಸಮುದಾಯದವರು ಅಮಾನವೀಯವಾಗಿ ನಡೆಸಿಕೊಳ್ಳುತ್ತಾರೆ.
1993 ರಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ರಚನೆಯಾಗಿದ್ದರೂ ಅವರ ಹಲವಾರು ಸಮಸ್ಯೆಗಳು ಪರಿಹಾರವಾಗದೆ ಹಾಗೆಯೇ ಉಳಿದಿವೆ. ಮಲ/ಕಸ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಎಷ್ಟೋ ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. 2021 ರ ಡಿಸೆಂಬರ್ ಕೊನೆಯವರೆಗೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಾಲ್ಕು ಜನ, ಗುಜರಾತನ ಅಹ್ಮದಾಬಾದನಲ್ಲಿ ಮೂರು ಜನ, ಮಧ್ಯ ಪ್ರದೇಶದ ಶಿಂಗೌಲಿಯಲ್ಲಿ ಮೂರು ಜನ, ತಮಿಳುನಾಡಿನ ಚೆನ್ನೈನಲ್ಲಿ ಒಬ್ಬರು ಮತ್ತು ಕಾಂಚಿಪುರದಲ್ಲಿ ಇಬ್ಬರು ಹೀಗೆ ಹಲವಾರು ಸಫಾಯಿ ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಗೌರವಾನ್ವಿತ ಸುಪ್ರೀಂ ಕೋರ್ಟಿನ ಆದೇಶದನುಸಾರ, ಆಯೋಗವು 671 ಸಫಾಯಿ ಕಾರ್ಮಿಕರ ಕುಟುಂಬಗಳಿಗೆ ರೂ. 10 ಲಕ್ಷದಷ್ಟು ಪರಿಹಾರ ಹಂಚಿದೆ. ಈ ಪರಿಹಾರವನ್ನು ಕೆಲಸ ಮಾಡುವಾಗ ಪ್ರಾಣ ಕಳೆದುಕೊಂಡ ಸಫಾಯಿ ಕಾರ್ಮಿಕರ ಕುಟುಂಬಗಳಿಗೆ ನೀಡಲಾಗಿದೆ.
ಹಲವಾರು ರಾಜ್ಯ ಸರ್ಕಾರಗಳು ಸ್ವಚ್ಛತಾ ಕಾರ್ಯವನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಿವೆ. ಈ ಖಾಸಗಿ ಗುತ್ತಿಗೆದಾರರು ಸುರಕ್ಷತಾ ಕ್ರಮಗಳನ್ನು ಅಳವಡಿಸದ ಕಾರಣ, ಸಫಾಯಿ ಕಾರ್ಮಿಕರು ದುರ್ಮರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕಾನೂನುಗಳಲ್ಲಿರುವ ಕೆಲವೊಂದು ಲೋಪಗಳನ್ನು ಖಾಸಗಿ ಗುತ್ತಿಗೆದಾರರು ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಸಫಾಯಿ ಕಾರ್ಮಿಕರ ಬವಣೆ ಮತ್ತು ಶೋಷಣೆ ನಿಲ್ಲುತ್ತಿಲ್ಲ. ಈ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಮನ್ವಯ ಸಾಧಿಸುವುದರ ಮುಖಾಂತರ ಶೋಷಣೆ ಮತ್ತು ದುರ್ಮರಣಗಳನ್ನು ತಡೆಯಬಹುದು. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದರಿಂದ ಕೋವಿಡ್-19 ರ ಮಹಾಮಾರಿ ಸಂದರ್ಭದಲ್ಲಿ ಸಫಾಯಿ ಕಾರ್ಮಿಕರು ಅನುಭವಿಸಿದ ಶೋಚನೀಯ ಸ್ಥಿತಿ ಇದಕ್ಕೆ ಸಾಕ್ಷಿಯಾಗಿದೆ.
ಹೀಗಾಗಿ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಸಂವಿಧಾನಾತ್ಮಕವಾಗಿ ಹೆಚ್ಚಿನ ಅಧಿಕಾರವನ್ನು ನೀಡಿ ಸಫಾಯಿ ಕಾರ್ಮಿಕರನ್ನು ರಕ್ಷಿಸುವಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಹಾಯಕವಾಗುವಂತೆ ಮಾಡಬೇಕಿದೆ. ಸಫಾಯಿ ಕಾರ್ಮಿಕರಿಗೆ ಸಾಮಾಜಿಕ ಗೌರವ, ಘನತೆ ಮತ್ತು ಸಮಾನತೆ ದೊರಕಿಸುವ ನಿಟ್ಟಿನಲ್ಲಿ ಸಾಮಾಜಿಕ ಸಮರಸತಾ ಮಂಚ್ ತನ್ನ ಪ್ರಯತ್ನ ಮತ್ತು ಹೋರಾಟವನ್ನು ಮುಂದುವರೆಸಲಿದೆ ಎಂದು ಸಾಮಾಜಿಕ ಸಮರಸತಾ ಮಂಚ್ನ ಅಖಿಲ ಭಾರತೀಯ ಸಂಯೋಜಕರಾದ ಶ್ಯಾಮಪ್ರಸಾದ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.