ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ 1967ರಡಿ ಕಾನೂನುಬಾಹಿರ ಎಂದು ಘೋಷಿಸಲಾದ ಸಿಖ್ಸ್ ಫಾರ್ ಜಸ್ಟಿಸ್ (ಎಸ್ ಜೆಎಫ್ ) ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ವಿದೇಶಿ ಮೂಲದ ‘ಪಂಜಾಬ್ ಪಾಲಿಟಿಕ್ಸ್ ಟಿವಿ’ ಯ ಅಪ್ಲಿಕೇಷನ್ಗಳು, ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ಆದೇಶಿಸಿದೆ.
ಪ್ರಸ್ತುತ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಲು ಚಾನಲ್ ಆನ್ ಲೈನ್ ಮಾಧ್ಯಮವನ್ನು ಬಳಸಲು ಪ್ರಯತ್ನಿಸುತ್ತಿದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ, ಸಚಿವಾಲಯವು ಫೆಬ್ರವರಿ 18 ರಂದು ‘ಪಂಜಾಬ್ ಪಾಲಿಟಿಕ್ಸ್ ಟಿವಿ’ಯ ಡಿಜಿಟಲ್ ಮಾಧ್ಯಮ ಸಂಪನ್ಮೂಲಗಳನ್ನು ನಿರ್ಬಂಧಿಸಲು ಐಟಿ ನಿಯಮಗಳಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿತು.
ನಿರ್ಬಂಧಿಸಲಾದ ಅಪ್ಲಿಕೇಷನ್ಗಳು, ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ವಿಷಯಗಳು ಕೋಮು ಸೌಹಾರ್ದ ಮತ್ತು ಪ್ರತ್ಯೇಕತಾವಾದ ಪ್ರಚೋದಿಸುವ ಸಾಧ್ಯತೆಯನ್ನು ಹೊಂದಿದ್ದವು; ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವೆಂದು ಕಂಡುಬಂದಿದೆ. ಸದ್ಯ ನಡೆಯುತ್ತಿರುವ ಚುನಾವಣೆಗಳ ವೇಳೆ ಲಾಭವನ್ನು ಪಡೆಯಲು ಹೊಸ ಅಪ್ಲಿಕೇಷನ್ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆರಂಭಿಸಲಾಗಿದೆ ಎಂಬುದನ್ನು ಗಮನಿಸಲಾಗಿದೆ.
ಭಾರತದಲ್ಲಿನ ಒಟ್ಟಾರೆ ಮಾಹಿತಿ ಪರಿಸರವನ್ನು ಸುರಕ್ಷಿತವಾಗಿಡಲು ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಯಾವುದೇ ಕ್ರಮಗಳನ್ನು ತಡೆಯಲು ಭಾರತ ಸರ್ಕಾರವು ಜಾಗೃತವಾಗಿದೆ ಮತ್ತು ಬದ್ಧವಾಗಿದೆ ಎಂದು ಸಚಿವಾಲಯವು ತಿಳಿಸಿದೆ.