ದ್ವಾಂಸರು ಸಿದ್ಧಾಂತ ಪಡಿಸಿದ್ದಾರೆ. ಹಿಂದಕ್ಕೆ ಬಂಗಾಲವು ಇಬ್ಬಾಗವಾದಾಗ ನಮ್ಮ ವಂಗಬಂಧುಗಳು ಹುಯಿಲ(ಗದ್ದಲ)ವನ್ನೆಬ್ಬಿಸಿದುದಕ್ಕೂ ಇದೇ ಕಾರಣವು.

ಇಂದು ಆಲೂರು ವೆಂಕಟರಾಯರ ಪುಣ್ಯಸ್ಮರಣೆ.ಕನ್ನಡದ ಕುಲಪುರೋಹಿತರೆಂದೇ ಖ್ಯಾತರಾದ ಅವರು ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದವರು.ಅಷ್ಟೇ ಅಲ್ಲದೆ ಕರ್ನಾಟಕದ ಕುರಿತಾಗಿ ಒಂದು ದೃಷ್ಟಿಕೋನವನ್ನೇ ನೀಡಿ,ರಾಷ್ಟ್ರದ ಅಭ್ಯುದಯದಲ್ಲಿ ಕರ್ನಾಟಕದ ಪಾತ್ರವನ್ನು ಎತ್ತಿ ಹಿಡಿದವರು.

ಇದಕ್ಕೊಂದು ಅದ್ಭುತವಾದ ಉದಾಹರಣೆಯೆಂದರೆ ಅದು ಅವರೇ ಬರೆದ ಕರ್ನಾಟಕ ಗತ ವೈಭವ ಪುಸ್ತಕ. ಅದರ ಮೊದಲ ಪುಟಗಳಲ್ಲಿ ಅದನ್ನು ಕರ್ನಾಟಕಾಂತರ್ಯಾಮಿಯಾದ ಭಾರತ ಭೂಮಾತೆಯ ಅಡಿದಾವರೆಗಳಿಗೆ ಅರ್ಪಿಸಿದ್ದಾರೆ.

ಕರ್ನಾಟಕದ ಜನರನ್ನ ತಮ್ಮ ಇತಿಹಾಸವನ್ನು ಅರಿಯಲು,ಆ ಮೂಲಕ ತಮ್ಮ ರಾಷ್ಟ್ರಕಾರ್ಯದ ಪ್ರೇರಣೆ ನೀಡಲು ಕರೆ ನೀಡಿ ಬರೆದ ಅವರ ಕೆಲವು ವಿಚಾರಗಳನ್ನು ಓದುವುದು, ಪ್ರೇರಣೆ ಪಡೆಯುವುದು, ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವೇ ಸರಿ.ಈ ನಿಟ್ಟಿನಲ್ಲಿ ಐತಿಹಾಸಿಕ ಪುಸ್ತಕ ಕರ್ನಾಟಕ ಗತ ವೈಭವದ ಮೊದಲ ಕೆಲವು ಪಂಕ್ತಿಗಳನ್ನು ಮುಂದೆ ಓದಬಹುದು….

ಕರ್ನಾಟಕ-ಗತವೈಭವ.

೧ನೆಯ ಪ್ರಕರಣ.

ಈ ಮೃತವಾದ ಕರ್ನಾಟಕದಿಂದೇನು?

कार्पण्यदोषोपहतः स्वभावः पृच्छामि त्वां धर्मसंमूढचेताः । यच्छ्रेयः स्थान्निश्चितं ब्रूहि तन्मे शिष्यस्तेऽहं शाधि मां त्वां प्रपन्नम् ॥

ಕಕ್ಕುಲತೆಯಿ ಕೆಟ್ಟ ಚಿತ್ರದಿ |
ಸೊಕ್ಕಿ ಧರ್ಮದ ನೆಲೆಯ ಕಾಣದ
ಚಿಕ್ಕವನು ನಾನಮ್ಮ ಕೇಳುವೆ ಲೇಸದಾವುದನು ||
ಸಿಕ್ಕರಿಯೆ ಪೇಳೆನಗೆ ನೀ ಹಿಂ
ದಿಕ್ಕಿಕೋ ಮರೆವೊಕ್ಕೆನೆನ್ನನು
ಮಕ್ಕಳೋಪಾದಿಯಲ್ಲಿ ರಕ್ಷಿಸಿ ಕಾಯಬೇಕೆಂದ ||
-ನಾಗರಸ

ಈ ಭರತಭೂಮಿಯ ಈಗಿನ ಸ್ಥಿತಿಯನ್ನು ಕಂಡು, ತಳಮಳ ಗೊಂಡು, ಅದರ ಉದ್ಘಾರಾರ್ಥವಾಗಿ ಹಲವು ಪುಣ್ಯಾತ್ಮರು ಹಲವು ಬಗೆಗಳಿಂದ ಪ್ರಯತ್ನ ಪಡುತ್ತಿರುವರಷ್ಟೆ ! ಈ ಬಗೆಯ ಪ್ರಯತ್ನಗಳಲ್ಲಿ, ನಮ್ಮ ದೇಶದ ಬುದ್ಧಿ ಸಾಮರ್ಥ್ಯವನ್ನೂ, ವೈಭವವನ್ನೂ, ಜನರ ನೆನಪಿಗೆ ತಂದುಕೊಟ್ಟು, ಅವರಲ್ಲಿ ತಮ್ಮ ಪೂರ್ವಜರ ವಿಷಯವಾಗಿಯೂ, ಪೂರ್ವಸಂಸ್ಕೃತಿಯ ವಿಷಯವಾಗಿಯೂ, ಪೂರ್ವದ ಘನತೆಯ ವಿಷಯವಾಗಿಯೂ, ಸಾನಂದಾಶ್ಚರ್ಯವಾದ ಅಭಿಮಾನ

ಪ್ರಯತ್ನಗಳಲ್ಲಿ, ನಮ್ಮ ದೇಶದ ಬುದ್ಧಿ ಸಾಮರ್ಥ್ಯವನ್ನೂ, ವೈಭವವನ್ನೂ, ಜನರ ನೆನಪಿಗೆ ತಂದುಕೊಟ್ಟು, ಅವರಲ್ಲಿ ತಮ್ಮ ಪೂರ್ವಜರ ವಿಷಯವಾಗಿಯೂ, ಪೂರ್ವಸಂಸ್ಕೃತಿಯ ವಿಷಯವಾಗಿಯೂ, ಪೂರ್ವದ ಘನತೆಯ ವಿಷಯವಾಗಿಯೂ, ಸಾನಂದಾಶ್ಚರ್ಯವಾದ ಅಭಿಮಾನವನ್ನು ಹುಟ್ಟಿಸುವದೂ ಒಂದು ಮುಖ್ಯವಾದ ಉಪಾಯವಾಗಿದೆ. ಚಂದ್ರಗುಪ್ತ, ಅಶೋಕ, ಶಿವಾಜಿ ಮುಂತಾದ ಅರಸರ ಮಹಾ ಕಾರ್ಯಗಳನ್ನೂ, ರಾಜನೀತಿಯ ಚಾತುರ್ಯವನ್ನೂ ಕೇಳಿ ಯಾವ ಭಾರತೀಯನು ಪುಲಕಿತನಾಗಲಿಕ್ಕಿಲ್ಲ ? ಬುದ್ಧ, ಶಂಕರ, ರಾಮಾನುಜ, ಮುಂತಾದ ಮಹಾತ್ಮರ ಪುಣ್ಯಚರಿತೆಗಳು ಯಾವ ಪಾಮರನ ಹೃದಯವನ್ನು ಪವಿತ್ರ ಮಾಡಲಿಕ್ಕಿಲ್ಲ ! ಸಾರಾಂಶ: – ಭಾರತೀಯರಲ್ಲಿ ತಮ್ಮ ಪೂರ್ವಜರ ವಿಷಯವಾಗಿ ಅಭಿಮಾನವನ್ನು ಹುಟ್ಟಿಸಿ, ಮುಂದೆ ವೈಭವವನ್ನು ಪಡೆಯಲು ಉತ್ತೇಜಕವಾಗುವದಕ್ಕೆ ಇತಿಹಾಸಕ್ಕಿಂತ ಬೇರೆ ಸುಲಭ ಸಾಧನ ಇಲ್ಲ. ಇಷ್ಟೇ ಅಲ್ಲ, ನಮ್ಮಲ್ಲಿಯ ಆತ್ಮವಿಶ್ವಾಸವೆಲ್ಲವೂ ಅಳಿದುಹೋಗಿ, ನಾವು ಹೀಗೆ ರಾಜ್ಯವಾದಿಗಳಾಗುವುದಕ್ಕೂ, ದುರ್ಬಲರಂತೆ ಪ್ರತಿಯೊಂದಕ್ಕೂ ಪರರ ಮೋರೆಯ ಕಡೆಗೆ ನೋಡುವದಕ್ಕೂ, ನಮ್ಮಲ್ಲಿಯ ಚೈತನ್ಯದ ಜ್ಯೋತಿಯು ನಂದಿಹೋಗಿರುವುದಕ್ಕೂ, ನಮ್ಮ ಇತಿಹಾಸಜ್ಞಾನದ ಅಭಾವವೇ- ಅಲ್ಲ -ವಿಪರ್ಯಾಸವೇ ಮೂಲಕಾರಣವು. ಸುರಾಜ ಉದ್ದೌಲನ ಕತ್ತಲೆಕೋಣೆಯ ಕಥೆಯು ನಮ್ಮ ಜನರ ವಿಷಯವಾಗಿ ನಮ್ಮವರಲ್ಲಿಯೂ, ಪರಕೀಯರಲ್ಲಿಯೂ ಎಂಥ ತಿರಸ್ಕಾರ ಬುದ್ಧಿಯನ್ನು ಹುಟ್ಟಿಸಿತ್ತು! ಆದರೆ ಅದೆಲ್ಲವೂ ಕೇವಲ ಕಟ್ಟು ಕಥೆಯೆಂದು ಈಗ ನಮಗೆಷ್ಟು ಸಮಾಧಾನವಾಗಿದೆ!

೧೮೫೭ನೆಯ ಇಸ್ವಿಯ ದಂಗೆಯಲ್ಲಿ ಪ್ರಸಿದ್ಧಿಗೆ ಬಂದ ನಾನಾಸಾಹೇಬನು ಒಬ್ಬ ದೊಡ್ಡ ರಾಕ್ಷಸ ನೆಂದು ನಮ್ಮ ಕಲ್ಪನೆಯಾಗಿತ್ತಲ್ಲವೇ! ಆದರೆ ಇತ್ತೀಚೆಗೆ ಗೊತ್ತಾಗಿರುವ ಸಂಗತಿಯಿಂದ ಆ ನಮ್ಮ ಪೂರ್ವದ ಕಲ್ಪನೆಯಲ್ಲಿ ಬಲುಮಟ್ಟಿಗೆ ಬದಲುಮಾಡಬೇಕಾಗಿರುವದಲ್ಲವೇ! ಆದುದರಿಂದ, ಕಾಲನೆ ದವಡೆಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ನಮ್ಮ ಈ ಜನ್ಮಭೂಮಿಯನ್ನು ಉದ್ಧರಿಸಲಿಕ್ಕೆ ಹೆಣಗುತ್ತಿರುವ ಪುಣ್ಯಾತ್ಮರಿಗೆ ಅವರ ಗತವೈಭವವೇ ಗತಿಯು, ನಮ್ಮೀ ದುರವಸ್ಥೆಯಲ್ಲಿ ಅದೊಂದೇ ನಮಗೆ ಸಂತಸದ ವಿಷಯವು. ಈ ಗತವೈಭವದ ಸ್ಮರಣೆಯು ನಮ್ಮನ್ನು ಈಗಿನ ನಿರಾಶಾಯುಕ್ತವಾದ ಸ್ಥಿತಿಯಿಂದ ಒಮ್ಮೆಯೇ ಎತ್ತಿಕೊಂಡು, ಕೆಲಹೊತ್ತಿನವರೆಗಾದರೂ, ಉತ್ಸಾಹಯುಕ್ತವಾದ ವಾತಾವರಣದೊಳಗೆ ತೂಗಾಡಿಸುತ್ತಿರುವುದೆಂಬದಕ್ಕೆ ಏನೂ ಸಂದೇಹವಿಲ್ಲ! ಸಾರಾಂಶ:- ನಮ್ಮ ಪೂರ್ವಜರ ಬಗ್ಗೆ ನಮ್ಮಲ್ಲಿ ಯೋಗ್ಯವಾದ ಅಭಿಮಾನ ಹುಟ್ಟಿಸುವದಕ್ಕೂ, ಅವರ ವಿಷಯವಾಗಿ ನಮ್ಮಲ್ಲಿ ನಿಷ್ಕಾರಣವಾಗಿ
ನೆಲಗೊಂಡಿರುವ ತಪ್ಪು ತಿಳುವಳಿಕೆಗಳು ಮಾಯವಾಗಲಿಕ್ಕೂ, ನಮ್ಮ ದೇಶದ ನಿಜವಾದ ಇತಿಹಾಸವನ್ನು ನಮ್ಮ ಜನರೇ ಅಭಿಮಾನಪೂರ್ವಕವಾಗಿ ಬರೆಯುವದು ರಾಷ್ಟ್ರದ ಪ್ರಗತಿಗೆ ಅತ್ಯಂತ ಅವಶ್ಯವಾದ ಸಂಗತಿಯಾಗಿದೆ.

ಆದರೆ ಈ ಕಾರ್ಯವು ಕೈಗೂಡುವುದೆಂತು! ಹಿಂದುಸ್ಥಾನವು ವಿಶಾಲವಾದ ದೇಶವಾಗಿದ್ದು, ಇದರಲ್ಲಿ ನಾನಾ ಜನಾಂಗಗಳು, ನಾನಾ ಧರ್ಮಗಳು, ನಾನಾ ಜಾತಿಗಳು ಸೇರಿರುತ್ತವೆ. ಹಿಂದುಸ್ಥಾನದ ಇತಿಹಾಸವೆಂದರೆ, ಇವೆಲ್ಲವುಗಳ ಒಟ್ಟುಗೂಡಿದ ಇತಿಹಾಸ. ಆದುದರಿಂದ, ಈ ದೇಶದ ಇತಿಹಾಸವನ್ನು ಬರೆಯುವ ಕೆಲಸವು ಅತ್ಯಂತ ಕಠಿಣವಾಗಿದೆ. ಆದರೆ ಅವಶ್ಯವಿದ್ದಲ್ಲಿ, ರಾಷ್ಟ್ರವನ್ನು ಭಾಷಾತತ್ವದ ಮೇಲೆ ವಿಭಾಗಿಸಿ, ಆಯಾ ಭಾಷಾಪ್ರಾಂತದ ಜನರು ಗುಂಪಾಗಿ ಸೇರಿ, ತಮ್ಮ ತಮ್ಮ ಉನ್ನತಿಯನ್ನು ಮಾಡಿಕೊಳ್ಳುವದು ರಾಷ್ಟ್ರೀಯತ್ವಕ್ಕೆ ಪೋಷಕವಾದ ಉಪಾಯವೆಂದೂ, ರಾಷ್ಟ್ರದ್ಧಾರಕ್ಕೆ ಅನುಕೂಲವಾದ ಸಂಗತಿಯೆಂದೂ, ಬೇರೆ ವಿಧವಾಗಿ ಭೇದಗಳನ್ನು ಕಲ್ಪಿಸುವದಾಗಲಿ, ಇದಕ್ಕಿಂತ ಚಿಕ್ಕಚಿಕ್ಕ ವಿಭಾಗಗಳನ್ನು ಮಾಡುವದಾಗಲಿ, ಅನಾವಶ್ಯಕವೂ, ರಾಷ್ಟ್ರೀಯತ್ವಕ್ಕೆ ಘಾತಕವೂ, ಆಗಿರುವದೆಂದೂ, ವಿಚಕ್ಷರಾದ ವಿದ್ವಾಂಸರು ಸಿದ್ಧಾಂತ ಪಡಿಸಿದ್ದಾರೆ. ಹಿಂದಕ್ಕೆ ಬಂಗಾಲವು ಇಬ್ಬಾಗವಾದಾಗ ನಮ್ಮ ವಂಗಬಂಧುಗಳು ಹುಯಿಲ(ಗದ್ದಲ)ವನ್ನೆಬ್ಬಿಸಿದುದಕ್ಕೂ ಇದೇ ಕಾರಣವು. ಅಂಧ್ರರು (ತೆಲುಗರು) ತಮಗೆ ಬೇರೊಂದು ಇಲಾಖೆಯೂ, ವಿಶ್ವವಿದ್ಯಾಲಯವೂ ಬೇಕೆಂದು ಕಳೆದ ನಾಲ್ಕಾರು ವರ್ಷಗಳಿಂದ ಕೂಗಿಕೊಳ್ಳುತ್ತಿರುವುದರ ಗುಟ್ಟಾದರೂ ಅದೇ ಅಲ್ಲವೇ! ಮಹಾರಾಷ್ಟ್ರ ಬಂಧುಗಳು ವಾಙ್ಮಯದ ಅಭಿವೃದ್ಧಿಗಾಗಿಯೂ, ತಮ್ಮ ರಾಜಕೀಯ ಉನ್ನತಿಗಾಗಿಯೂ ಬೇರೆ ಪ್ರಾಂತಕ್ಕೆ ಸಂಬಂಧಪಟ್ಟವರಾಗಿದ್ದ ತನ್ನ ಭಾಷಾ ಬಂಧುಗಳನ್ನೊಡಗೂಡಿಯೇ ಕೆಲಸಮಾಡಲಿಕ್ಕೆ ಮುಂದುಬೀಳುವುದರ ಇಂಗಿತವೂ ಇದೇ. ಆದುದರಿಂದ, ಇದೇ ತತ್ವವನ್ನನುಸರಿಸಿ, ಬೇರೆ ಬೇರೆ ಭಾಷಾ ಪ್ರಾಂತಗಳ ಇತಿಹಾಸವು ಮೊದಲು ಬೇರೆ ಬೇರೆಯಾಗಿ ಬರೆಯಲ್ಪಡಬೇಕು. ಹೀಗೆ ಮಾಡಿದರೆ, ಬೇರೆ ಬೇರೆ ಪ್ರಾಂತಗಳೊಳಗಿನ ಜೀವಾಳದ ಎಳೆಯು ಒಂದೇ ಆಗಿರುವುದರಿಂದ, ಹಿಂದೂದೇಶದ ಇತಿಹಾಸವನ್ನು ಬರೆಯುವ ಪ್ರಚಂಡಕಾರ್ಯವು ಅತಿಶಯವಾಗಿ ಸುಲಭವಾಗುವುದೆಂದು ನಮ್ಮ ಧೃಡಾಭಿಪ್ರಾಯವು.

ಯಾಕೆಂದರೆ, ಹಿಮಾಲಯದಿಂದ ರಾಮೇಶ್ವರದ ವರೆಗೂ ಆರ್ಯರಲ್ಲಿ, ಆರ್ಯರ ರಕ್ತ ದಲ್ಲಿ, ಆರ್ಯರ ಸಂಸ್ಕೃತಿಯಲ್ಲಿ, ಒಂದು ವಿಧದ ಸಾಮ್ಯವೂ, ಸೌಹಾರ್ದವೂ ಕಂಡುಬರುತ್ತದೆ! ಪೌರಾಣಿಕ ಶ್ರೀರಾಮಕೃಷ್ಣಾವತಾರಗಳ ವಿಷಯದಲ್ಲಿ ಆಸೇತುಹಿಮಾಚಲದ ವರೆಗೆ ಒಂದೇ ಬಗೆಯ ಪೂಜ್ಯ ಭಾವವು ತೋರಿಬರುತ್ತದಲ್ಲವೇ! ಇದೇ ತರದ ಪೂಜ್ಯಭಾವವೂ, ಅಭಿಮಾನವೂ, ಅನುರಾಗವೂ ನಮ್ಮ ಐತಿಹಾಸಿಕ ಪುರುಷರ ವಿಷಯದಲ್ಲಿಯೂ ನಮ್ಮಲ್ಲಿ ಹುಟ್ಟುವುದೇ ರಾಷ್ಟ್ರೀಯತ್ವದ ಪರಿಣತಾವಸ್ಥೆಯು. ಅಂತಹ ಸ್ಥಿತಿಯುಂಟಾಗಬೇಕಾದರೆ, ನಾವು ನಮ್ಮ ಪ್ರಾಂತಗಳಲ್ಲಿ ಮಹಾಕಾರ್ಯಗಳನ್ನೆಸಗಿದ ಮಹಾ ಪುರುಷರ ವಿಷಯವಾಗಿ ಅಭಿಮಾನವನ್ನು ತಾಳಿ, ಅವರ ಉತ್ಸವಗಳನ್ನು ಎಡೆಬಿಡದೆ ನಡೆಯಿಸಿ, ಅವರನ್ನು ರಾಷ್ಟ್ರೀಯ ಮಹಾಪುರುಷರ ಪಣಿಯಲ್ಲಿ ಕುಳ್ಳಿರಿಸಬೇಕು. ನಮ್ಮ ಸತ್ಪುರುಷರ ಅಭಿಮಾನವು ನಮಗೆ ಇಲ್ಲದ ಬಳಿಕ, ಮಿಕ್ಕ ಪ್ರಾಂತದವರಿಗೆ ಅವರ ವಿಷಯ ವಾಗಿ ಅಭಿಮಾನ ಹುಟ್ಟುವದು ಹೇಗೆ? ಶ್ರೀರಾಮದಾಸ, ಶ್ರೀಶಿವಾಜಿ ಇವರ ಹೆಸರನ್ನು ಕೇಳಿದೊಡನೆಯೇ ಮಹಾರಾಷ್ಟ್ರೀಯರ ಹೃದಯದಲ್ಲಿ ಆನಂದವು ಉಕ್ಕೇರುವಂತೆ ಅದು ಆಂಧ್ರರಲ್ಲಿ ಅಥವಾ ಬಂಗಾಲಿಯರಲ್ಲಿ ಈಗ ಉಕ್ಕೇರುವುದೇನು? ಪ್ರತಾಪರುದ್ರ ದೇವ, ನನ್ನಯಭಟ್ಟ ಮುಂತಾದವರ ಹೆಸರುಗಳು, ಆಂಧ್ರರಿಗೆ ಈಗ ಕೊಡುವಷ್ಟು ಅಭಿಮಾನವನ್ನೂ, ಉತ್ಸಾಹವನ್ನೂ, ಮರಾಠರಿಗೆ ಕೊಡುವವೋ?
ಸಾರಾಂಶ:- ರಾಷ್ಟ್ರೀಯತ್ವವು ಪೂರ್ಣವಾಗಿ ನೆಲೆಗೊಳ್ಳುವುದಕ್ಕೆ, ಆಯಾ ಪ್ರಾಂತದ ಜನರು ಮೊದಲು ತಮ್ಮ ಮಹಾಪುರುಷರ ವೈಭವ ವನ್ನು ಸ್ಮರಿಸಿ, ತಮ್ಮ ಮನಸ್ಸನ್ನು ಆನಂದಸಾಗರದಲ್ಲಿ ಎಡೆಬಿಡದ ಓಲಾಡಿಸ ಬೇಕು. ಅವರ ಮೂರ್ತಿಗಳನ್ನು ತಮ್ಮ ಕಣ್ಣ ಮುಂದಿಟ್ಟುಕೊಂಡು ಧ್ಯಾನಿಸಬೇಕು.

ಮಿಕ್ಕ ಪ್ರಾಂತಗಳೊಳಗಿನ ಈಗಿನ ಪ್ರಯತ್ನಗಳೆಲ್ಲವೂ ಈ ಮಾರ್ಗದಿಂದಲೇ ನಡೆದುಬರುವವಲ್ಲವೆ! ತಮ್ಮ ಪೂರ್ವಿಕರು ಮೊದಲು ಇಂಥಿಂಥ ಮಹಾಕೃತ್ಯಗಳನ್ನು ಮಾಡಿದರು; ತಮ್ಮ ಮೈಯಲ್ಲೆಲ್ಲ ಇಂಥಿಂಥ ಮಹಾ ಮಹಾ ವೀರರ ರಕ್ತವು ಹರಿಯುತ್ತಿದೆ; ತಮ್ಮ ನಾಡು ಇಂಥ ಪುಣ್ಯ ಪುರುಷರ ಪಾದಧೂಳಿಯಿಂದ ಪಾವನವಾಗಿದೆ;- ಎಂಬಿವು ಮೊದಲಾದುದನ್ನು ಹೇಳಿ ಪ್ರತಿಯೊಂದು ಭಾಷೆ
ಯವರು ತಮ್ಮ ಜನರನ್ನು ರಾಷ್ಟ್ರಕಾರ್ಯಕ್ಕೆ ಹುರಿಗೊಳಿಸುತ್ತಿದ್ದಾರೆ; ಯಾವ ದೇಶವು ಒಂದು ಕಾಲಕ್ಕೆ ಶ್ರೀರಾಮಚಂದ್ರ, ಚಂದ್ರಗುಪ್ತ, ಅಶೋಕ, ಹರ್ಷ ವರ್ಧನ, ಪೃಥ್ವಿರಾಜರಂತಹ ಮಹಾ ಧಾರ್ಮಿಕ ರಾಜರಿಗೆ ತವರುಮನೆಯಾಯಿತೋ, ಯಾವ ನಮ್ಮ ದೇಶವು ತುಳಸೀದಾಸ, ಕಬೀರದಾಸರಂಥ ಭಗವತ್ಭಕ್ತರಿಗೆ ಜನ್ಮಕೊಟ್ಟಿತೋ, ಆ ಹಿಂದೀರಾಷ್ಟ್ರವು ಎಂದಾದರೂ ಪ್ರಗತಿಯಲ್ಲಿ ಹಿಂದುಳಿದೀತೇ” ಎಂದು ಹಿಂದೀ ಬಂಧುಗಳು ತಮ್ಮ ಮಂದಿಯನ್ನು ಸೇರಿಸುತ್ತಿದ್ದಾರೆ; ” ಪ್ರತಾಪಾದಿತ್ಯನಂತಹ ಪ್ರತಾಪಿಯು ನಮ್ಮ ರಾಷ್ಟ್ರವನ್ನು ಅಲಂಕರಿಸಿರಲು, ಚೈತನ್ಯನಂಥ ಧರ್ಮವೀರನು ನಮ್ಮಲ್ಲಿ ಚೈತನ್ಯವನ್ನು ತುಂಬಿರಲು, ನಾವು ತಲೆ ಬಗ್ಗಿಸಿ ಸುಮ್ಮನೆ ಕುಳಿತುಕೊಳ್ಳಬೇಕೇ? ಅಂಥ ವೀರಪುರುಷರು ಮುಂದೆಯೂ ನಮ್ಮಲ್ಲಿ ಮೈದೋರಲಾರರೇ” ಎಂದು ಮುಂತಾಗಿ ಹೊಗಳಿ, ಬಂಗಾಲಿಗಳು ತಮ್ಮವರ ಬೆನ್ನು ಚಪ್ಪರಿಸುತ್ತಿರುವರು! ರಾಜರಾಜನರೇಂದ್ರ, ಪ್ರತಾಪರುದ್ರ ದೇವ, ಕೃಷ್ಣದೇವರಾಯ ಮುಂತಾದ ರಣವೀರರು ನಮ್ಮ ಪೂರ್ವಜರೇ ಅಲ್ಲವೇ? ಆಪಸ್ತಂಭ, ಕುಮಾರಿಲಭಟ್ಟ, ವಿದ್ಯಾರಣ್ಯ, ಅಪ್ಪಯ್ಯ ದೀಕ್ಷಿತ ಇವರೇ ಮೊದಲಾದ ವಿದ್ವನ್ಮಣಿಗಳು ನಮ್ಮ ದೇಶದಲ್ಲಿ ಹುಟ್ಟಲಿಲ್ಲವೇ? ಹೀಗಿದ್ದ ಬಳಿಕ ಆಂಧ್ರರಾದ ನಾವು ಅಳುವದೇತಕ್ಕೆ!” ಎಂದು ಅಂಧರು ತಮ್ಮ ಜನರಲ್ಲಿ ಪರಿಪರಿಯಾಗಿ ಆವೇಶ ತುಂಬುತ್ತಿದ್ದಾರೆ! “ನಮ್ಮದು ಬಹು ಪ್ರಾಚೀನ ಭಾಷೆ, ಚೇರ, ಚೋಳ, ಪಾಂಡ್ಯ ರಾಜ್ಯಗಳು ರಾಮಾಯಣ ಮಹಾಭಾರತ ಕಾಲದಿಂದಲೂ ಖ್ಯಾತಿಗೊಂಡಿವೆ ರಾಜರಾಜ, ಕುಲೋತ್ತುಂಗ ಮುಂತಾದ ಮಹಾವೀರರು ನಮ್ಮ ರಾಮಾನುಜ, ವೇದಾಂತದೇಶಿಕರಂಥ ಧರ್ಮಮಾರ್ತಂಡರು ನಮ್ಮ ಮಾರ್ಗದರ್ಶಕರು, ಎಂದಮೇಲೆ ದೇವದೂತರಾದ ಇಂಥ ಅಂಶಪುರುಷರ ಹೆಸ ರೆತ್ತಿದ ಮಾತ್ರದಿಂದ ನಾವು ರಾದ್ಧಾರವನ್ನು ಮಾಡಲಾರೆವೇ!” ಎಂದು ತಮಿಳರು ಆಲಸ್ಯವನ್ನು ತಳ್ಳಿ ತಲೆಯೆತ್ತಲಾರಂಭಿಸಿದ್ದಾರೆ. ಇತ್ತ, ನಮ್ಮ ನೆರೆ ಹೊರೆಯವರಾದ ಮರಾಠರಂತೂ ಶ್ರೀರಾಮದಾಸ, ಶ್ರೀ ಶಿವಾಜಿಮಹಾರಾಜರ ಭಜನೆಯಿಂದಲೂ, ಉತ್ಸವಗಳಿಂದಲೂ ತಮ್ಮ ರಾಷ್ಟ್ರವನ್ನೇ ತುಂಬಿಬಿಟ್ಟಿದ್ದಾರೆ. “ಜ್ಞಾನೇಶ್ವರ, ರಾಮದಾಸರಂಥ ಸಾಧುಗಳು ನಮ್ಮಲ್ಲಿ ಜನಿಸಿರಲು, ಶಿವಾಜಿ, ಬಾಜೀರಾಯರಂಥ ವೀರಾಗ್ರೇಸರರು ನಮ್ಮಲ್ಲಿ ಉದಯಿಸಿರಲು, ರಾಷ್ಟ್ರಗಳ ಏರಾಟಿಕೆಯಲ್ಲಿ ನಾವೇಕೆ ಹಿಂದುಳಿದೇವು? ನಾವೇನು ಕಡಿಮೆಯವರೇ? ನಮ್ಮಿಂದ ರಾಷ್ಟ್ರೋನ್ನತಿಯಾಗದಂತಿದೆಯೇ?” ಎಂದು ಮರಾಠರು ಮೈಯುಬ್ಬಿಸಿ ಮುಂದು ಮುಂದಕ್ಕೆ ಸರಿಯುತ್ತಿದ್ದಾರೆ. ಗುರ್ಜರರೂ ಸುಮ್ಮನೆ ಕುಳಿತಿಲ್ಲ. “ಭಾರತೀಯರಿಗೆಲ್ಲ ಅತ್ಯಂತ ಪೂಜ್ಯನಾದ ಶ್ರೀಕೃಷ್ಣನು ನಮ್ಮ ಭೂಮಿಯಲ್ಲಿಯೇ ವಾಸಿಸಿದ್ದನಲ್ಲವೇ? ಅವನ ದ್ವಾರಕೆಯು ಇಗೋ ಇದೇ ಅಲ್ಲವೇ? ಆ ಕೃಷ್ಣನ ವಂಶಜರಾದ ನಾವು ಕೈಲಾಗದವರೇ? ವನರಾಜ, ಮೂಲರಾಜ, ಸಿದ್ಧರಾಜ ಇವರು ನಮ್ಮ ಲ್ಲಿಯೇ ಆಳಲಿಲ್ಲವೇ? ಶ್ರೀವಲ್ಲಭಾಚಾರ್ಯರ ಅಭಿಮಾನವು ನಮಗೆ ಇರಬೇಡವೇ? ಗುರ್ಜರರಾದ ನಾವು ಲುಪ್ತವಾದ ನಮ್ಮ ಗೌರವವನ್ನು ಮರಳಿ ಪಡೆಯ ಲಾರೆವೇ?” ಎಂದು ಹೇಳಿ ತಮ್ಮ ರಾಷ್ಟ್ರವನ್ನು ಉನ್ನತಿಯ ಮಾರ್ಗಕ್ಕೆ ಹಚ್ಚಿರುವರು, ಈ ಬಗೆಯಾಗಿ ಪ್ರತಿಯೊಂದು ಭಾಷೆಯವರೂ ತಮ್ಮ ತಮ್ಮ ಪ್ರಾಂತಗಳ ಇತಿಹಾಸವನ್ನು ಅಭಿಮಾನಪೂರ್ವಕವಾಗಿ ಅಭ್ಯಾಸಮಾಡಿ, ತಮ್ಮ ಜನರನ್ನು ಚೇತನಗೊಳಿಸುತ್ತಿರಲು, ನಮ್ಮ ಕರ್ನಾಟಕವಾದರೋ! ಛೇ! ಕರ್ನಾಟಕವೆಲ್ಲಿದೆ? ಕರ್ನಾಟಕವು ಜಗತ್ತಿನ ನಾಟ್ಯರಂಗದಿಂದ ಎಂದೋ ನಾಮಶೇಷವಾಗಿ ಹೋಗಿದೆ! ಇನ್ನು ಎಲ್ಲಿಯ ಕರ್ನಾಟಕ ? ನಾಲ್ಕಾರು ಕಡೆಗೆ ಹರಿದು ಹಂಚಿಹೋದ ಕರ್ನಾಟಕವನ್ನು ಹೊಲಿದು ಅಖಂಡವಾಗಿ ಮಾಡುವರಾರು? ಅಷ್ಟೊಂದು ಅಭಿಮಾನವು ನಮ್ಮಲ್ಲಿ ಎಲ್ಲಿದೆ? ಮಿಕ್ಕ ಕಡೆಯಲ್ಲೂ ನಮ್ಮ ಭಾಷಾಬಂಧುಗಳು ವಾಸಿಸುವರು; ಅವರ ರಕ್ತವೂ ನಮ್ಮ ರಕ್ತವೂ ಒಂದೇ ; ನಮ್ಮ ಪೂರ್ವಜರೇ ಅವರ ಪೂರ್ವಜರು; ನಮ್ಮ ಅರಸರೂ, ಅವರ ಅರಸರೂ ಒಂದೇ; ನಮ್ಮ ಕವಿಗಳೆ ಅವರ ಕವಿಗಳು; ಎಂಬ ಸ್ವಾಭಿಮಾನವು ಕೂಡ ಯಾರಲ್ಲಿ ಇನ್ನೂ ಅಂಕುರಿಸಿಲ್ಲವೋ ಅವರಿಂದ ಯಾವ ಕಾರ್ಯವಾದೀತು? ಅಂಥವರು ಕೂಪಮಂಡೂಕ ನ್ಯಾಯದಿಂದ ಸಂಕುಚಿತ ವಿಚಾರಗಳುಳ್ಳವರಾದರೆ ಆಶ್ಚರ್ಯವೇನು? ಸಾರಾಂಶ: ಪ್ರತಿಯೊಂದು ನಾಡಿನವರ ನಾಲಿಗೆಯ ಮೇಲೆ, ತಮ್ಮ ಪೂರ್ವಜರ ನಾಲ್ಕಾರು ಹೆಸರುಗಳಾದರೂ ಅಭಿಮಾನದಿಂದ ನಲಿದಾಡುತ್ತಿರಲು, ಕನ್ನಡಿಗನ ನಾಲಿಗೆಗೆ ಚಟ್ಟಿನ ಒಂದಾದರೂ ಹೆಸರು ಬರದಿರುವದು ತೀರ ಲಜ್ಜಾಸ್ಪದವಾದ ಸಂಗತಿಯಾಗಿದೆ! ಹಿಂದುಸ್ಥಾನದಲ್ಲಿಯ ಪ್ರತಿಯೊಂದು ಭಾಷೆಯವರೂ ತಮ್ಮ ಪೂರ್ವದ ಇತಿಹಾಸವನ್ನು ಉತ್ಸಾಹದಿಂದ ಸಂಶೋಧಿಸುತ್ತಿರಲು, ಕರ್ನಾಟಕವು ಮಾತ್ರ ಇನ್ನೂ ಕುಂಭಕರ್ಣನಿದ್ರೆಯಲ್ಲಿಯೇ ಇದೆ, ಇದೆಂಥ ದುಃಖದ ನೋಟವು!

ಆದರೆ, ಹೀಗಾಗುವದಕ್ಕೆ ಕಾರಣವೇನಿರಬಹುದು? ಅದಕ್ಕೆ ನಮ್ಮ ಇತಿಹಾಸಜ್ಞಾನದ ಅಭಾವವೇ ಮುಖ್ಯವಾದ ಕಾರಣವೆಂದು ನಮ್ಮ ಅಭಿಪ್ರಾಯ. “ ನಮ್ಮಲ್ಲಿ ಬಲಾಢ್ಯರಾದ ಅರಸರಿರಲಿಲ್ಲ; ನಮ್ಮಲ್ಲಿ ಘನ ಪಂಡಿತರಿರಲಿಲ್ಲ; ನಾವು ಎಂದಿಗೂ ಹೇಡಿಗಳೇ, ಎಂದಿಗೂ ದಡ್ಡರೇ, ಅಂದ ಬಳಿಕ ಮುಂದಿನ ಆಶೆಯಾದರೂ ನಮಗೆಲ್ಲಿಯದು? ಎಂದು ನಮ್ಮ ಜನರ ಅಭಿಪ್ರಾಯ. ಆದುದರಿಂದಲೇ ಅವರು ಕೇಳುವುದೇನೆಂದರೆ ನಮ್ಮ ಕರ್ನಾಟಕದ ವಿಷಯಕ್ಕೆ ಅಭಿಮಾನಪಡತಕ್ಕ ಸಂಗತಿಗಳೇನಿವೆ? ನಮ್ಮದೇನು ರಾಷ್ಟ್ರವೇ ? ನಮಗೇನು ಇತಿಹಾಸವಿದೆಯೇ? ನಮ್ಮ ಕರ್ನಾಟಕವು ಎಂದಾದರೂ ವಾಙ್ಮಯವನ್ನು ಕಂಡಿತ್ತೋ? ಅದಕ್ಕೆ ಅರಸರೇನಾದರೂ ಇದ್ದರೋ? ನಮಗೆ ವಿಶಿಷ್ಟವಾದ ಸಂಸ್ಕೃತಿಯುಂಟೋ? ಹೀಗಿಲ್ಲದ ಬಳಿಕ, ಅಂಥ ಸತ್ತ ಕರ್ನಾಟಕವನ್ನು ಹೊತ್ತುಕೊಂಡು ಹೋಗುವುದೆಂತು? ಆ ನಮ್ಮ ಕೊರಳೊಳಗಿನ ಗುದಿಗೆಯನ್ನು ಹರಿದೊಗೆದು, ಮಿಕ್ಕ ಜನಾಂಗಗಳಲ್ಲಿ ಬೆರೆತುಹೋಗುವದೇ ಸರಿಯಲ್ಲವೆ?” ಇಷ್ಟೇ ಅಲ್ಲ, ಕೆಲವರಿಗಂತೂ ಕರ್ನಾಟಕಸ್ಥರೆಂದು ಹೇಳಿ ಕೊಳ್ಳುವದಕ್ಕೂ ಕೂಡ ನಾಚಿಕೆ ಬರುತ್ತದೆ. ಆದುದರಿಂದ ಅವರು ನಮ್ಮ ಜನರಿಗೆ ಉಪದೇಶಿಸುವದೇನೆಂದರೆ- “ಕನ್ನಡಿಗರೇ! ಇಗೋ, ಇಲ್ಲಿ ನಮ್ಮ ನೆರೆಹೊರೆಯವರಾದ ಮರಾಠರು, ತಲುಗರು, ತಮಿಳರು ವೇಗದಿಂದ ಸುಧಾರಣೆಯ ಮಾರ್ಗವನ್ನು ಆಕ್ರಮಿಸಹತ್ತಿದ್ದಾರೆ. ನಾವು ನಮ್ಮ ಈ ಕರ್ನಾಟಕತ್ವವನ್ನು ಸುಟ್ಟು ಬೂದಿಮಾಡಿ, ನೀರಿನಲ್ಲಿ ಕಲಸಿಬಿಡೋಣ, ಕರ್ನಾಟಕವೆಂಬ ಈ ಕಾಲ್ತೊಡಕಿನ ಬಳ್ಳಿಯನ್ನು ಕತ್ತರಿಸಿಬಿಡೋಣ. ನೀವು ಇಲ್ಲದ ಸಲ್ಲದ ವಿಚಾರಗಳನ್ನು ತೆಗೆದು ಹೊಸ ಆಟವನ್ನು ಹೂಡಬೇಡಿರಿ. ಹಿಂದುಸ್ಥಾನದಲ್ಲೆಲ್ಲ ರಾಷ್ಟ್ರೀಯತ್ವದ ದುಂದುಭಿಯು ಮೊಳಗುತ್ತಿರಲು, ನೀವು ಈ ಪ್ರಾಂತಿಕ ಅಭಿಮಾನಕ್ಕೆ ಯಾಕೆ ಬಲಿಬೀಳುವಿರಿ? ಸುಮ್ಮನೆ ಆ ಕರ್ನಾಟಕದ ಹೆಸರಿನಿಂದ ಯಾಕೆ ತೊಳಲಾಡುತ್ತೀರಿ? ಹೋಗಲಿ ಆ ಕರ್ನಾಟಕವು; ಏನೋ, ಕನ್ನಡ ನುಡಿಯು ನಮ್ಮನ್ನು ಬಿಡದು. ಅಷ್ಟರಮಟ್ಟಿಗೆ ಬೇಕಾದರೆ ಕರ್ನಾಟಕ’ರೆನ್ನಿಸಿಕೊಳ್ಳಿರಿ. ಈ ಬಗೆಯಾಗಿ ಕರ್ನಾಟಕರು ವಿಷಾದಗೊಂಡು ಒಂದೇ ಸಮನೇ ಒರಲುಹತ್ತಿದ್ದಾರೆ. ಹೀಗಾದ ಮೇಲೆ ಅವರ ನಾಲಿಗೆಯ ತುದಿಯ ಮೇಲೆ ಮಹಾ ವಿಭೂತಿಗಳ ನಾಮಾವಳಿಯು ನಲಿದಾಡುವುದೆಂತು? ಅವರಲ್ಲಿ ರಾಷ್ಟ್ರೀಯ ವಿಭೂತಿಗಳ ಉತ್ಸವಗಳಾಗುವದೆಂತು? ತಮ್ಮ ಪೂರ್ವಜರ ಅಭಿಮಾನವೇ ಇಲ್ಲದಂಥವರು ತಮ್ಮ ಜನರಲ್ಲಿ ರಾಷ್ಟ್ರೀಯತ್ವದ ಭಾವನೆಗಳನ್ನು ಬಿತ್ತುವದೆಂತು? ಇಂಥ ಜನರಲ್ಲಿ ನಿಜವಾದ ರಾಷ್ಟ್ರಾಭಿಮಾನವು ಎಂದಾದರೂ ಮೊಳೆದೋರುವದೂ? ಯಾವ ಕರ್ನಾಟಕಸ್ಥರಿಗೆ ತಮ್ಮ ಪೂರ್ವಜರ ಬಗ್ಗೆ ಸಕೌತುಕವಾದ ಅಭಿಮಾನವುಂಟಾಗಿರುವುದಿಲ್ಲವೋ, ಯಾರು ತಮ್ಮ ಜನರ ಮಹಾಕಾರ್ಯಗಳ ಜ್ಞಾನವಿಲ್ಲದೆ ಇನ್ನೂ ಕಗ್ಗತ್ತಲೆಯಲ್ಲಿ ಅಲೆದಾಡುತ್ತಿರುವರೋ ಅಂಥ ಜನರ ಭಾಷಾವೃಕ್ಷವು ಕೂಡ ಭರದಿಂದ ಬೆಳೆಯದಿದ್ದರೆ ಸೋಜಿಗವೇನು? ಕನ್ನಡಿಗರೇ, ನಿಮ್ಮ ಈ ವಿಷಾದವನ್ನು ಹೋಗಲಾಡಿಸಿ, ನಿಮ್ಮ ಮೇಲಿನ ನಿರಭಿಮಾನತೆಯ ಮುಸುಕನ್ನು ಹಾರಹೊಡೆಯಲಿಕ್ಕೆ ನೀವು ನಿಮ್ಮ ಇತಿಹಾಸಕ್ಕೆ ಶರಣುಹೋಗಿರಿ. ನಿಮ್ಮ ಮಂದದೃಷ್ಟಿಗೆ ಅದೇ ಮೇಲಾದ ಅಂಜನವು.

ಕೃತಿಯ ಹಕ್ಕು : ಮೂಲ ಲೇಖಕರು ಹಾಗು ಮೂಲ ಪ್ರಕಾಶಕರದ್ದು, ಕನ್ನಡ ನಾಡಿನ ಸಾಹಿತ್ಯದ ಹಾಗು ಆಲೂರು ವೆಂಕಟರಾಯರ ಮೇಲಿನ ಅಭಿಮಾನದಿಂದ ಇಲ್ಲಿ ಪ್ರಕಟಿಸಲಾಗಿದೆ

Leave a Reply

Your email address will not be published.

This site uses Akismet to reduce spam. Learn how your comment data is processed.