“ವ್ಯಸ್ಯತೇ ಇತಿ ವ್ಯಾಸಃ” – ವ್ಯಾಸ ಅಂದರೆ ಗೋಜಲಾಗಿದ್ದುದನ್ನು ಬಿಡಿಸುವವ ಅಂತ. ಭಗವದ್ಗೀತೆಯ ವಿಭೂತಿ ಯೋಗದಲ್ಲಿ ಶ್ರೀಕೃಷ್ಣ ಪರಮಾತ್ಮನು ‘ಮುನೀನಾಮಾಪ್ಯಹಂ ವ್ಯಾಸಃ’ – ಮುನಿಗಳಲ್ಲಿ ನಾನು (ವಿಷ್ಣುವು) ವ್ಯಾಸನೇ ಆಗಿದ್ದೇನೆ ಎಂದು ಹೇಳಿದ್ದಾನೆ.
ವೇದವ್ಯಾಸರಿಗೆ ಅನೇಕ ಬೇರೆ ಬೇರೆ ಹೆಸರುಗಳೂ ಇವೆ. ವೇದಗಳನ್ನು ವಿಭಜಿಸಿ ಒಟ್ಟುಗೂಡಿಸುದುದರಿಂದ ವ್ಯಾಸರನ್ನು ಭಗವಾನ್ ವೇದವ್ಯಾಸರೆಂದೂ, ಬದರಿಕಾಶ್ರಮದಲ್ಲಿ ವಾಸಮಾಡಿದ ಕಾರಣಕ್ಕೆ ಭಾದರಾಯಣರೆಂದೂ, ಯಮುನಾ ನದಿಯ ದ್ವೀಪವೊಂದರಲ್ಲಿ ಜನಿಸಿದ ಕಾರಣಕ್ಕೆ ಕೃಷ್ಣದ್ವೈಪಾಯನರೆಂದೂ, ಪರಾಶರ ಮಹರ್ಷಿಗಳ ಪುತ್ರರಾಗಿರುವುದರಿಂದ ಪರಾಶರ್ಯ ಎಂತಲೂ ಕರೆಯುತ್ತಾರೆ.
ವೇದ ಅಪೌರುಷೇಯ, ಒಂದಕ್ಕೊಂದು ಬೆರೆತು ಹೋಗಿದ್ದ ವೇದ ಸಂಗ್ರಹವನ್ನು ವಿಭಜಿಸಿ ವ್ಯಾಸರು ಚಂದೋಬದ್ದವಾದ ಭಾಗವನ್ನು ಋಗ್ವೇದವೆಂದೂ, ಯಜ್ಞಾನುಷ್ಠಾನಗಳಿಗೆ ಸಂಬಂಧಿಸಿದುದನ್ನು ಯಜುರ್ವೇದವೆಂತಲೂ, ರಾಗಬದ್ಧವಾದ ಗೀತರೂಪದಲ್ಲಿದ್ದುದನ್ನು ಸಾಮವೇದವೆಂತಲೂ ಈ ಇವೆಲ್ಲದಕ್ಕೂ ಹೊರತಾದ ಭಾಗವನ್ನು ಅಥರ್ವವೇಂದವೆಂದೂ ವಿಂಗಡಿಸಿ ಒಟ್ಟು ಮಾಡಿದುದಕ್ಕೆ ಅವರಿಗೆ ‘ಭಗವಾನ್ ವೇದವ್ಯಾಸ’ರೆಂದು ಹೆಸರು ಬಂತು
ಇದೇನು ಸುಲಭದ ಕೆಲಸವಲ್ಲ. ಒಂದು ವೇದದ, ಒಂದು ಶಾಖೆಯ ಒಂದು ಸಣ್ಣ ಭಾಗವನ್ನು ಅಧ್ಯಯನ ಮಾಡಲು ಅದೆಷ್ಟೋ ವರುಷಗಳನ್ನು ಸವೆಸುವ ವೇದ ವಿದ್ಯಾರ್ಥಿಗಳಿಗೆ, ಆತ್ಮಜ್ಞಾನದ ಬೋಧನೆಯಾಗಿರುವ, ಭೋದಿಸುವ ಯತಿಗಳಿಗೆ ವೇದವ್ಯಾಸರೇ ಸರ್ವೋಚ್ಛ ದೈವಸ್ವರೂಪಿ ಪ್ರಾಂಶುಪಾಲರು.
ಇಂತಹ ಬೃಹದಾಕಾರವಾದ ವೇದವನ್ನು ಎರಡು ಭಾಗ ಮಾಡಿ, ಒಂದನ್ನು ಕರ್ಮಕಾಂಡವೆಂದು ಕರೆದು, ಮತ್ತೊಂದನ್ನು ಜ್ಞಾನಕಾಂಡವೆಂದು ಕರೆದಿರುತ್ತಾರೆ. ಕರ್ಮಕಾಂಡ ಧಾರ್ಮಿಕ ಕ್ರಿಯೆಗಳು, ಯಜ್ಞ –ಯಾಗಾದಿಗಳಿಗೆ ಸಂಬಂಧಿಸಿದ್ದಾದರೆ, ಜ್ಞಾನಕಾಂಡ ಆತ್ಮಸಾಕ್ಷಾತ್ಕಾರಕ್ಕೆ ಸಂಬಂಧಿಸಿದ್ದು.
ವ್ಯಾಸರ ತಂದೆ ಪರಾಶರರು ಯಮುನಾ ನದಿಯನ್ನು ದಾಟಬೇಕಾದ ಪರಿಸ್ಥಿತಿ ಬಂದಾಗ ಅಪ್ರತಿಮ ಸುಂದರಿ ಸತ್ಯವತಿ(ಮತ್ಸ್ಯಗಂಧಿ) ಯು ದೋಣಿಯ ಸಮೇತಳಾಗಿ ಕಾಣಿಸಿಕೊಂಡಳು. ಇವರಿಬ್ಬರ ಸಮಾಗಮವಾದ ತಕ್ಷಣ ಜನಿಸಿದ ವ್ಯಾಸರು ಹುಟ್ಟಿದಾಕ್ಷಣ ತಪಸ್ಸಿಗೆ ಹೊರಟರಂತೆ ! ಅವರ ಈ ಭೂಲೋಕದ ಅವತರಣಿಕೆಯಾದ ದಿನವೇ ಇಂದು. ಆಷಾಢ ಶುದ್ಧ ಪೌರ್ಣಿಮಾ.
ವೇದವನ್ನಷ್ಟೇ ಅಲ್ಲ 18 ಪುರಾಣಗಳನ್ನು ವ್ಯಾಸರೇ ಬರೆದದ್ದು ಎಂಬ ಅಭಿಪ್ರಾಯ ಒಂದು ಕಡೆಯಾದರೆ ಇತಿಹಾಸಜ್ಞರು ಸಂಶೋಧಿಸುತ್ತಿರುವಂತೆ ಅದೆಷ್ಟೋ ಸಾವಿರಾರು ವರ್ಷಗಳ ಹಿಂದೆಯೇ ಕಂಪನಿಯೆನ್ನುವ ರೀತಿಯ ಜ್ಯೂರಿಸ್ಟಿಕ್ ಪರ್ಸನ್ ನ ಆಲೋಚನೆಯಿತ್ತು. ಕೃಷ್ಣದ್ವೈಪಾಯನಾ/ಬಾದರಾಯಣರು ವೇದವನ್ನು ವಿಂಗಡಿಸಿ ಒಟ್ಟುಗೂಡಿಸಿದ್ದು ಮಾತ್ರವಲ್ಲ ಗತಿಸಿದ ಮಹಾಭಾರತ ಯುದ್ಧವನ್ನು ಬರೆದ ಶ್ರೇಷ್ಠ ಮುನಿ. ಇಂತಹ ಮಹಾವಿಷ್ಣು ಸ್ವರೂಪಿಯೂ, ವೇದನಿಧಿಯೂ ಆದ ವ್ಯಾಸರ ಜೊತೆಗೆ ಅನೇಕ ವ್ಯಾಸರಿದ್ದರು. ಎಲ್ಲರೂ ಸೂತ್ರಕಾರರಾಗಿದ್ದು 18 ಪುರಾಣಗಳಷ್ಟೇ ಅಲ್ಲದೆ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎಂಬ ಮಾತೂ ಇದೆ. ನಮಗೆ ಗೊತ್ತಿರುತ್ತದೆ. ವೇದಗಳ ಸಾರವೇ 18 ಪುರಾಣಗಳ ಅಂಶ ಎಂದು, ಈ 18 ಪುರಾಣಗಳ ಸಾರವೇ ಭಗವದ್ಗೀತೆಯ 18 ಅಧ್ಯಾಯಗಳು ಎಂದು, ಈ ಭಗವದ್ಗೀತೆಯ 18 ಅಧ್ಯಾಯಗಳ ಮೂಲ ಪರಿಕಲ್ಪನೆ ನಮಗೆ ಸಿಗುವುದು ಈಶೋಪನಿಷತ್ತಿನ 18 ಶ್ಲೋಕಗಳಲ್ಲಿ. ಇಂತಹ ಭಗವದ್ಗೀತೆಯ ವಿಸ್ತೃತ ರೂಪವೇ 18 ಪುರಾಣಗಳು ಮತ್ತು ಅದರ ಅಂತಃಸತ್ವದ ಮೂಲ ಕಾರಣವೇ ವೇದ.
ಚತುರ್ ಪುರುಷಾದಿ, ಚತುರ್ ವರ್ಣದವರೂ (ಜಾತಿಯ ಬೇಧವಿಲ್ಲದೆ) ಆಚರಿಸಬೇಕಾದ ಚಾತುರ್ಮಾಸ ವ್ರತ ವಿಧಿಯು ಪ್ರಾರಂಭವಾಗುವ ದಿನವಿಂದು. (ಆಹಾರ, ಆಚರಣಾ ಪದ್ಧತಿ ಇದರ ವಿಶೇಷ.) ಈ ಚಾತುರ್ಮಾಸಗಳು – ಆಷಾಡ, ಶ್ರಾವಣ, ಬಾದ್ರಪದ, ಆಶ್ವಯುಜ.
ಇನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಭಗವಾಧ್ವಜವನ್ನು ಗುರುವೆಂದು ಪೂಜಿಸುವ ಪದ್ಧತಿಯಿದೆ.ವ್ಯಕ್ತಿಯನ್ನು ಗುರುವಾಗಿ ಸ್ವೀಕಾರ ಮಾಡಿದಾಗ ವ್ಯಕ್ತಿಯ ವ್ಯಕ್ತಿತ್ವಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗಬಹುದು,ಆದರೆ ತತ್ತ್ವವನ್ನು,ಮೌಲ್ಯವನ್ನು ಗುರುವಾಗಿ ಸ್ವೀಕರಿಸಿದಾಗ ಅದು ಶಾಶ್ವತವಾಗಿ ನೆಲೆನಿಲ್ಲಲು ಅಚ್ಯುತವಾಗಿ,ನಿರಂತರವಾಗಿ ಪ್ರೇರಣೆ ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿ ಗುರುಪೂರ್ಣಿಮೆಗೆ ಸಂಘದಲ್ಲಿ ಭಗವಾಧ್ವಜವನ್ನು ಗುರುವೆಂದು ನಮಿಸಿ ಪೂಜಿಸಲಾಗುತ್ತದೆ.ಈ ಪರಂಪರೆಯೂ ತಾತ್ವಿಕ ನೆಲೆಗಟ್ಟಿನಲ್ಲಿ ಸಮಾಜದ ವ್ಯವಸ್ಥೆಯೊಳಗೆ ನೈತಿಕತೆಯನ್ನು ಸ್ಥಿರವಾಗಿ ಬೇರೂರಿಸಲು ಗಟ್ಟಿಯಾದ ತಳಹದಿಯನ್ನು ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಇಡೀ ನಮ್ಮ ಹಿಂದು ಸಂಸ್ಕೃತಿಯ ಮೂಲ ಬೇರುಗಳನ್ನು ಕೊಟ್ಟ ಮಹಾಪುರುಷ ಭೂಲೋಕದಲ್ಲಿ ಅವತರಣಿಕೆಯಾದ ದಿನವನ್ನು ಗುರುಪೂರ್ಣಿಮೆಯನ್ನಾಗಿ ಆಚರಿಸದೇ ಹೇಗೆ ಇರುವುದಕ್ಕೆ ಸಾಧ್ಯ. ಬದುಕಿನ ಕತ್ತಲನ್ನು ಹೋಗಲಾಡಿಸುವ ಎಲ್ಲಾ ಗುರುಗಳನ್ನು ವ್ಯಾಸರ ಸ್ಥಾನದಲ್ಲಿ ನಿಲ್ಲಿಸಿ ವಿನೀತವಾಗಿ ಪೂಜಿಸುವ ಮಹೋನ್ನತ ದಿನವಿಂದು.
ಕೌಸ್ತುಭ ಭಾರತೀಪುರಂ, ಖ್ಯಾತ ವಕೀಲರು,ಬೆಂಗಳೂರು