ಪುಣೆ: ನಮ್ಮ ಸಂಸ್ಕೃತಿಯೊಂದೇ ಮನುಷ್ಯರು ಮಾನವ ಜೀವನವನ್ನು ನಡೆಸುವಂತೆ ಶ್ರಮಿಸುತ್ತದೆ. ನಾವು ಸಂಸ್ಕೃತಿಯೆಂದು ಸಂಬೋಧಿಸುವ ಪದ ಪೀಳಿಗೆಯಿಂದ ಪೀಳಿಗೆಗೆ ಅಳವಡಿಸಲ್ಪಟ್ಟ ನಡವಳಿಕೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದರು.
ಪುಣೆಯ ಪ್ರಸಾದ್ ಪ್ರಕಾಶನದ ವಜ್ರಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿ ಮನುಷ್ಯನ ಜೀವನದ ಗುರಿ ಸಂತೋಷವೇ ಆಗಿದೆ. ಆದರೆ ಸಂತೋಷದ ಅರ್ಥವೇನು? ಎಂದು ಸಾಕ್ಷಾತ್ಕರಿಸಲು ಜಗತ್ತು ಎರಡು ಪ್ರವಾಹಗಳ ಜೊತೆ ಸಂಚರಿಸುತ್ತಿದೆ. ಒಂದು ವಿಶ್ವದ್ದಾದರೆ ಮತ್ತೊಂದು ಭಾರತದ್ದಾಗಿದೆ. ಜಗತ್ತಿನಾದ್ಯಂತ ನಡೆದ ಸಂತೋಷದ ಅರ್ಥವನ್ನು ಹುಡುಕುವ ಪ್ರಯತ್ನದಲ್ಲಿ ಬಹಳಷ್ಟು ವಿಷ ಹೊರಬಂದಿದೆ. ಈ ವಿಷವನ್ನು ಅರಗಿಸಿಕೊಳ್ಳುವ ಸಾಮರ್ಥ್ಯವನ್ನು ಭಾರತ ಪಡೆದಿದೆ ಎಂದು ವಿಶ್ವ ಅವಿರೋಧವಾಗಿ ಅಭಿಪ್ರಾಯಪಟ್ಟಿದೆ ಎಂದರು.
ಶೋಧಕನ ಆಲೋಚನೆಗಳು ತಾನಂದುಕೊಂಡ ಫಲಿತಾಂಶವನ್ನು ಪಡೆಯದಿದ್ದಾಗ ವಿಪರೀತಕ್ಕೆ ತಿರುಗುತ್ತವೆ. ಆದರೆ ನಮ್ಮ ಸಂಸ್ಕೃತಿಯಲ್ಲಿ ರೂಢಿಯಿಂದ ಬಂದಂತಹ ಪುರುಷಾರ್ಥಗಳನ್ನು ಪಾಲಿಸಿದಾಗ ಆಲೋಚನೆಗಳು ವಿಪರೀತಕ್ಕೆ ಹೋಗುವ ಪ್ರಮೇಯವೇ ಬರುವುದಿಲ್ಲ. ಜಗತ್ತು ಕೇವಲ ವ್ಯವಹಾರಗಳ ಮೇಲೆ ನಡೆಯದೆ ಅಸ್ತಿತ್ವದ ನಂಬಿಕೆಯ ಮೇಲೂ ಅವಲಂಬಿತವಾಗಿದೆ. ಮಾನವರು ನಂಬಿಕೆಯನ್ನು ಹೊಂದಿರುವ ಮತ್ತು ಉಳಿದವರಲ್ಲೂ ನಂಬಿಕೆ ಇಡುವಂತೆ ಮಾಡುವ ಕಾರಣ ನಮ್ಮ ಸುತ್ತಮುತ್ತಲಿನ ಎಲ್ಲದಕ್ಕೂ ಕೃತಜ್ಞತೆ ಸಲ್ಲಿಕೆಯ ಭಾವ ನಮ್ಮಲ್ಲಿದೆ. ನಾವು ನದಿಗಳನ್ನು ತಾಯಿಯಂತೆ ಭಾವಿಸಿದವರು ಮತ್ತು ನಮ್ಮ ವೈದರು ಹತ್ತು ಸಾವಿರ ವರ್ಷಗಳವರೆಗೂ ಕೇವಲ ಗಿಡಮೂಲಿಕೆ ಆಧಾರಿತ ಔಷಧ ಪದ್ಧತಿಯನ್ನು ಅನುಸರಿಸಿದರೂ ಕಾಡು ಕಡೆಮೆಯಾಗಲಿಲ್ಲ. ಏಕೆಂದರೆ ತಾವು ಉಪಯೋಗಿಸಿದಕ್ಕಿಂತ ಹತ್ತುಪಟ್ಟು ಹೆಚ್ಚು ಗಿಡಗಳನ್ನು ನೆಡುವ ಮೂಲಕ ಕೃತಜ್ಞತೆ ಸಲ್ಲಿಸುವ ಗುಣ ನಮ್ಮವರಲ್ಲಿತ್ತು. ಈ ನಡವಳಿಕೆ ನಮ್ಮ ಸಂಸ್ಕೃತಿಯ ಹೆಗ್ಗುರುತು ಹಾಗೂ ಪೀಳಿಗೆಯಿಂದ ಪೀಳಿಗೆಗೆ ಇದು ರವಾನಿಸಲ್ಪಟ್ಟಿದೆ. ಈ ರವಾನೆಯ ಮೂಲಕ ಆಚರಿಸಲ್ಪಡುವ ಸಂಪ್ರದಾಯಗಳನ್ನೇ ನಾವು ಸಂಸ್ಕೃತಿಯೆಂದೆವು ಎಂದು ಅಭಿಪ್ರಾಯಪಟ್ಟರು.
ಮಾನವನು ಮಾನವ ಜೀವನ ನಡೆಸಲು ಶ್ರಮಿಸುತ್ತಿರುವ ಏಕೈಕ ಸಂಸ್ಕೃತಿ ನಮ್ಮದು. ಉಳಿದ ಸಂಸ್ಕೃತಿಗಳು ಮಾನವನನ್ನು ಸಾಮಾಜಿಕ ಜೀವಿಯಂತೆ ಕಂಡವು. ಎಲ್ಲಾ ಜೀವಿಗಳನ್ನು ಜೊತೆಗೆ ಕೊಂಡೊಯ್ಯುವ ಜವಾಬ್ದಾರಿ ಮನುಜನಿಗಿದೆ ಏಕೆಂದರೆ ಆತ ಎಲ್ಲಾ ಜೀವರಾಶಿಗಳಿಗಿಂತ ಶ್ರೇಷ್ಠನು. ತನ್ನ ಜವಾಬ್ದಾರಿಗಳ ಕಾರಣದಿಂದಲೇ ಆತ ಶ್ರೇಷ್ಠನಾಗಬೇಕು ಎಂದು ನುಡಿದರು.
ಬಾಹ್ಯ ಪ್ರಪಂಚವು ಬದಲಾಗುತ್ತಲೇ ಇರುತ್ತದೆ. ಆಧುನಿಕ ವಿಜ್ಞಾನವೂ ಸಹ ವಿಶ್ವದಲ್ಲಿ ಸೃಷ್ಟಿ ಮತ್ತು ವಿನಾಶದ ಚಕ್ರವಿದೆ ಎಂದು ಒಪ್ಪಿಕೊಳ್ಳುತ್ತದೆ. ಬಾಹ್ಯ ಪ್ರಯತ್ನಗಳು ಫಲಪ್ರದವಾಗದಿದ್ದಾಗ ನಮ್ಮ ಪೂರ್ವಜರು ಈ ಪ್ರಶ್ನೆಗೆ ಆಂತರಿಕವಾಗಿ ಉತ್ತರವನ್ನು ಹುಡುಕಲು ಪ್ರಾರಂಭಿಸಿದರು. ಬಾಹ್ಯ ಪ್ರಪಂಚವು ಒಂದು ಶಾಶ್ವತ ಸತ್ಯದ ಅಭಿವ್ಯಕ್ತಿ ಎಂದು ಅವರು ಕಂಡುಕೊಂಡರು. ಬಾಹ್ಯ ರೂಪಗಳು ಬದಲಾಗುತ್ತವೆ ಆದರೆ ಅದರ ಅಭಿವ್ಯಕ್ತಿಯಾಗಿರುವ ಆಂತರಿಕ ಸತ್ಯವು ಬದಲಾಗುವುದಿಲ್ಲ. ನಾವು ತೋರಿಕೆಗಳನ್ನು ತ್ಯಜಿಸಿ, ಶಾಶ್ವತತೆಯನ್ನು ಹಿಡಿದಿಟ್ಟುಕೊಳ್ಳಬೇಕು. ಆದರೆ ದುರದೃಷ್ಟವಶಾತ್ ಜನ ಅಪನಂಬಿಕೆಯನ್ನು ಬೆಳೆಸಿಕೊಂಡಿದ್ದಾರೆ ಎಂದು ವಿಷಾದಿಸಿದರು.
ಸಚಿವ ಸುಧೀರ್ ಮುಂಗುಂಟಿವಾರ್ ಮಾತನಾಡಿ, ಪ್ರಶ್ನೆಗಳನ್ನು ಹುಟ್ಟುಹಾಕುವುದು ನಮ್ಮ ಸಂಸ್ಕೃತಿಯಲ್ಲ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವುದು ನಮ್ಮ ಸಂಸ್ಕೃತಿ. ಅಂತಹ ಸಂಸ್ಕೃತಿಯ ಮೇಲೆ ಹಲವು ದಿಕ್ಕುಗಳಲ್ಲಿ ದಾಳಿ ನಡೆಯುತ್ತಿದ್ದು, ಇದು ದೇಶಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ನಮ್ಮ ಸಂಸ್ಕೃತಿಯನ್ನು ರಕ್ಷಿಸುವುದಕ್ಕಾಗಿ ಮತ್ತು ಪಸರಿಸುವುದಕ್ಕಾಗಿ ನಾವು ಶ್ರಮಿಸಬೇಕಾಗಿದೆ ಎಂದು ನುಡಿದರು.
ಡಾ.ದೇಗ್ಲೂರಕರ್ ಮಾತನಾಡಿ, ”ಜಗತ್ತಿನಲ್ಲಿ ಹಲವು ದಾಳಿಗಳ ನಂತರವೂ ಅಖಂಡತೆಯನ್ನು ಕಾಪಾಡಿಕೊಂಡಿರುವುದು ಭಾರತೀಯ ಸಂಸ್ಕೃತಿ ಮಾತ್ರ. ಭಾರತದ ಸಂಸ್ಕೃತಿಯಷ್ಟು ಪ್ರಾಚೀನವಾದ ಸಂಸ್ಕೃತಿ ಪ್ರಸ್ತುತ ಅಸ್ತಿತ್ವದಲ್ಲಿಲ್ಲ. ವಿದೇಶಿ ಸಂಸ್ಕೃತಿಯ ವಿಗ್ರಹಗಳನ್ನು ಈಗ ವಸ್ತುಸಂಗ್ರಹಾಲಯಗಳಲ್ಲಿ ಇರಿಸಲಾಗಿದೆ. ಆದರೆ ನಮ್ಮ ವಿಗ್ರಹಗಳು ನಮ್ಮ ಹೃದಯದಲ್ಲಿ ಮತ್ತು ದೇವಾಲಯಗಳಲ್ಲಿ ಈಗಲೂ ಇವೆ. ನಮ್ಮ ಸಂಸ್ಕೃತಿ ಸನಾತನ ಆದರೆ ನಿತ್ಯನೂತನ ಎಂದು ಅಭಿಪ್ರಾಯಪಟ್ಟರು.
ಡಾ.ಉಮಾ ಬೋದಾಸ್ ಮಾತನಾಡಿ, ”ಪ್ರಸಾದ್ ಪ್ರಕಾಶನವನ್ನು ಸ್ಥಾಪಿಸಿರುವುದು ಕೇವಲ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಮಾತ್ರವಲ್ಲದೆ ಭಾರತದ ಸಂಸ್ಕೃತಿಯನ್ನೂ ಪ್ರಚಾರ ಮಾಡುವುದಕ್ಕಾಗಿದೆ . ನಮ್ಮ ಸಂಸ್ಥಾಪಕ ವೈ.ಜಿ. ಜೋಶಿಯವರ ಆಶಯಗಳನ್ನೇ ನಾವು ಮುಂದುವರಿಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುಸ್ತಕಗಳ ಲೇಖಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರಿಂದ ಪ್ರಸಾದ್ ಪ್ರಕಾಶನ ಮತ್ತು ಅನಾಹತ ಪ್ರಕಾಶನದಿಂದ ಪ್ರಕಟಿಸಲಾದ ವಿವಿಧ ಲೇಖಕರ ಹದಿಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.