– ಕೌಶಿಕ್ ಗಟ್ಟಿಗಾರ್, ಉದ್ಯೋಗಿಗಳು, ಐಐಎಸ್ಸಿ

ಎಲ್ಲರಿಗೂ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನದ ಶುಭಾಶಯಗಳು. ನಿರ್ವೀರ್ಯವಾಗಿದ್ದ ಯುವಕರ ಹೃದಯ ಗೌಹ್ವರವನ್ನು ಹೊಡಿದೆಬ್ಬಿಸಿ , ನಿಸ್ತೇಜವಾಗಿದ್ದ ಮನಗಳನ್ನು ಜಾಗೃತಗೊಳಿಸಿ, ಮಹೇಶ್ವರನಂತೆ ಅವತರಿಸಿ , ಸೂರ್ಯನಂತೆ ಉಜ್ವಲಿಸಿ, ಕಾಮ ಕಾಂಚನಗಳನ್ನು ಜಯಿಸಿ, ಕೋಟಿ ಸೂರ್ಯ ಕಿರಣಕಾಂತಿಯಂತಹಾ ಜ್ವಲಿಸುವ ಕೌಪೀನಧಾರೀ ಪುರುಷಸಿಂಹನಾಗಿ , ಹೆದರದಿರಿ ಹೆದರದಿರಿ ಎಂಬ ದಿವ್ಯನಾದದಿಂದಲೇ ಜಗತನ್ನು ಪ್ರಚಂಡ ತಾಂಡವದಿಂದ ನಡುಗಿಸಿದ , ಮಹಾನ್ ಹಿಂದೂ ಧರ್ಮ ಪ್ರತಿಪಾದಕ , ದಾರ್ಶನಿಕ , ಅಸ್ಖಲಿತ ಸಂತ , ಪರಿವ್ರಾಜಕ ಸನ್ಯಾಸಿ , ಆಧ್ಯಾತ್ಮದ ಶಕ್ತಿಯಿಂದಲೇ ಜಗತನ್ನು ಗೆದ್ದ ಮಹಾನ್ ರಾಜಶ್ರೀ ಸ್ವಾಮಿ ವಿವೇಕಾನಂದರು. ೧೬೦ ವರ್ಷಗಳ ನಂತರವೂ ಸ್ವಾಮೀಜಿಯವರು ವೈಷವಿಕವಾಗಿ ಪ್ರಸ್ತುತವಾಗುದ್ದಾರೆ ಎಂಬುದಕ್ಕೆ ಅವರ ತತ್ವ -ಆದರ್ಶಗಳ ಪ್ರಖರತೆ ಹಾಗೂ ದೂರದರ್ಶಿತ್ವವೇ ಕಾರಣ. ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರ ಅನುಷ್ಠಾನ ಆಗುತ್ತಿರುವ ಸುಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಶಿಕ್ಷಣದ ಕುರಿತು ಆಡಿದ ಮಾತುಗಳನ್ನು ವಿಮರ್ಶಿಸೋಣ.

ಯಾಕೆ ಸ್ವಾಮೀಜಿ ಅವರು ಈಗಲೂ ಶಿಕ್ಷಣದಲ್ಲಿ ಪ್ರಸ್ತುತ ?

ಪ್ರಮುಖವಾಗಿ ಸ್ವಾಮೀಜಿ ಯುವಜನರ ಶಿಕ್ಷಣದ ಕುರಿತು ಮಾತನಾಡಿದ್ದು ಹಿಂದಿಗೂ , ಇಂದಿಗೂ ಹಾಗೂ ಎಂದೆಂದಿಗೂ ಪ್ರಸ್ತುತ.

” ಮಾನವನ ಆಂತರ್ಯದಲ್ಲಿ ಈಗಾಗಲೇ ಸುಪ್ತವಾಗಿರುವ ಪರಿಪೂರ್ಣತೆಯನ್ನು ಮುಕ್ತವಾಗಿ ಪ್ರಕಟಗೊಳಿಸುವ ಪ್ರಕ್ರಿಯೆಯೇ ಶಿಕ್ಷಣ”
ಜ್ಞಾನ ಮತ್ತು ಶಕ್ತಿ ಎಲ್ಲರಲ್ಲೂ ಸುಪ್ತವಾಗಿದೆ , ಪ್ರಕೃತಿಯ ಎಲ್ಲಾ ರಹಸ್ಯಗಳು , ಕೌತುಕಗಳು ನಮ್ಮಲ್ಲೇ ಇವೆ . ಜ್ಞಾನ ಆತ್ಮನಿಂದ ಬರುವುದು . ಮಾನವ ಜ್ಞಾನವನ್ನು ಕೇವಲ ವ್ಯಕ್ತಗೊಳಿಸುವನು. ತನ್ನಲ್ಲಿಯೇ ಕಂಡುಕೊಳ್ಳುವನು. ಇದುವೇ ಶಿಕ್ಷಣವೆಂದು ಶತಮಾನದ ಹಿಂದೆಯೇ ಶಿಕ್ಷಣದ ಸ್ವರೂಪವನ್ನು ತಿಳಿಸಿದ್ದರು. ಶಿಕ್ಷಣದ ಪ್ರಣಾಳಿಯ ಕುರಿತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ತತ್ತ್ವಗಳು ಮತ್ತು ಆದರ್ಶಗಳು ಭೂತ ಭವಿಷ್ಯತ್ ಮತ್ತು ವರ್ತಮಾನಗಳೆಂಬ ಸರ್ವಕಾಲಕ್ಕೂ ಪ್ರಸ್ತುತವಾಗಿರುವ ವೇದವಾಕ್ಯ. ಶಿಕ್ಷಣದ ಪ್ರತಿಯೊಂದು ಆಯಾಮಗಳನ್ನು ಸ್ಪರ್ಶಿಸುತ್ತಾ ಭಾರತೀಯ ಯುವಶಕ್ತಿಯನ್ನು ಜಾಗೃತಗೊಳಿಸುವ ಮತ್ತು ಸನಾತನ ಧರ್ಮದ ಸಂಸ್ಕಾರವನ್ನು , ಸಂಸ್ಕೃತಿಯನ್ನು ಶಿಕ್ಷಣದ ಮೂಲ ಉದ್ದೇಶವಾಗಿಸುವ ಕಾರ್ಯವನ್ನು ಸ್ವಾಮೀಜಿ ಮಾಡಿದ್ದರು.

” ಎಲ್ಲಾ ಶಿಕ್ಷಣದ , ತರಬೇತಿಯ ಗುರಿ ಪುರುಷಸಿಂಹರನ್ನು ನಿರ್ಮಿಸುವುದು “


ಇಚ್ಛಾಶಕ್ತಿಯು ಎಲ್ಲಕ್ಕಿಂತ ಪ್ರಭಲವಾದದ್ದು. ಇಚ್ಛಾಶಕ್ತಿಯ ಬಲದಿಂದ ಏನನ್ನು ಬೇಕಾದರೂ ಸಾಧಿಸಬಹುದು . ಆದರೆ ಈ ಇಚ್ಛಾಶಕ್ತಿಯ ಪ್ರವಾಹ ಮತ್ತು ಅಭಿವ್ಯಕ್ತಿಗಳನ್ನು ನಿಯಂತ್ರಣಕ್ಕೆ ತಂದು ಸರಿಯಾದ ದಾರಿಯಲ್ಲಿ ಪ್ರವಾಹಿಸುವುದೇ ಶಿಕ್ಷಣ. ಇಂದಿನ ಶಿಕ್ಷಣದಲ್ಲಿ ಕೇವಲ ಕೆಲವೇ ಒಳ್ಳೆಯ ಅಂಶಗಳಿವೆ. ಆದರೆ ಅದರಲ್ಲಿ ಒಂದು ಮಹಾಲೋಪವಿದೆ , ಅದು ಒಳ್ಳೆಯ ಅಂಶಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಅಂತಹಾ ಶಿಕ್ಷಣ ನಮಗೆ ಅಗತ್ಯವಿಲ್ಲ , ನಮಗೆ ಬೇಕಿರುವಂತದ್ದು ನರನಾಡಿಗಳಲ್ಲಿ ದೇಶಭಕ್ತಿಯನ್ನು ಪ್ರವಹಿಸುವಂತೆ ಪ್ರೇರೇಪಿಸುವ ರಾಷ್ಟ್ರೀಯ ಶಿಕ್ಷಣ. ವಿದ್ಯಾಭ್ಯಾಸವೆಂದರೆ ನಿಮ್ಮ ತಲೆಗೆ ತುಂಬಿದ ವಿಷಯಗಳ ಮೊತ್ತವಲ್ಲ. ಅದು ಅಲ್ಲಿ ಜೀರ್ಣವಾಗದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು . ಜೀವನವನ್ನು ನಿರ್ಮಾಣ ಮಾಡುವಂತಹಾ , ಪುರುಷಸಿಂಹರನ್ನು ಮಾಡುವಂತಹಾ, ಶೀಲಸಂಪತ್ತಿಗೆ ಸಹಾಯ ಮಾಡುವಂತಹಾ, ವಿಚಾರಗಳನ್ನು ಗ್ರಹಿಸುವಂತಹ ವಿದ್ಯಾಭ್ಯಾಸ ನಮಗೆ ಬೇಕು. ” ಅಜ್ಞಶ್ವ ಆಶ್ರದ್ಧದಾನಶ್ಚ ಸಂಶಯಾತ್ಮಾ ವಿನಷ್ಯತಿ ” ಅಜ್ಞಾನಿ , ಶ್ರದ್ಧಾಹೀನ ಮತ್ತು ಅನುಮಾಣಿಸುವವ ನಾಶವಾಗುವನು ಅರ್ಥಾತ್ ಶಿಕ್ಷಣದ ಗುರಿ ವ್ಯಕ್ತಿಯನ್ನು ಪರಿಪೂರ್ಣ ಶ್ರದ್ಧಾವಂತನನ್ನಾಗಿಸುವುದು. ಜೀವಾತ್ಮನಲ್ಲಿ ಅನಂತಶಕ್ತಿ ಸುಪ್ತವಾಗಿದೆ. ಅದನ್ನು ಆತ್ಮಜಾಗೃತಿಯ ಮೂಲಕ ಹೊರತರುವ ಕೆಲಸ ಒಳ್ಳೆಯ ಶಿಕ್ಷಣದ್ದು. ಒಮ್ಮೆ ನಿರ್ಭೀತರಾಗಿ ನಮ್ಮ ಒಳಗಿನ ಆತ್ಮವು ಜ್ಞಾನ ಒಂದೇ ಮುಕ್ತಿಯ ಮಾರ್ಗವೆಂಬುದಾಗಿ ಜಾಗೃತವಾದರೆ ವ್ಯಕ್ತಿತ್ವ ವಿಕಸನ ಕಟಿಟ್ಟಬುತ್ತಿ.

” ಯಾರ ಆಧ್ಯಾತ್ಮಿಕ ಚೇತನ ಜಾಗೃತವಾದೆಯೋ ಅವನು ಮಾತ್ರ ನಿಜವಾದ ಮನುಷ್ಯ ” ಶೀಲದ ನಿರ್ಮಾಣ , ಮನಃಶಕ್ತಿಯ ವೃದ್ಧಿ ಹಾಗೂ ಬುದ್ದಿ ವಿಕಸನ ಇವೇ ಚಾರಿತ್ರ್ಯ ನಿರ್ಮಾಣದ ಮೂಲಗಳು. ಶೀಲ ಅಥವಾ ಸಚ್ಚಾರಿತ್ರ್ಯವೆಂದರೇನು ? ಅದುವೇ ಏಕಮೇವಾದ್ವಿತೀಯ ಅಸೀಮ ಮಹಾತತ್ತ್ವದೊಡನೆ , ವಿವಿಧತೆಯನ್ನು ಸಮನ್ವಯಿಸಿ, ಕ್ಷಣಿಕ ಮತ್ತು ಸೀಮಿತ ಪ್ರಕೃತಿಯವರ ವಿಚಾರಗಳು ನಮ್ಮ ಮೇಲೆ ಆಧಿಪತ್ಯವನ್ನು ಸ್ಥಾಪಿಸದಂತೆ ವ್ಯಷ್ಟಿಯನ್ನು ಬಲಪಡಿಸುವುದು. ಚಾರಿತ್ರಬಲ, ಪರಸೇವಾತತ್ಪರತೆ , ಸಿಂಹಸಾಹಸಿಕತೆಯನ್ನು ನಿರ್ಮಿಸುವ ಶಿಕ್ಷಣ ನಮ್ಮದಾಗಬೇಕು. ನಿನಗೆ ಇಚ್ಛೆ ಇರುವ ವಿಶಯವನ್ನು ಸಂಪೂರ್ಣ ಕಲಿ , ಅದಕ್ಕೋಸ್ಕರ ತುಡಿ . ಜಾಯಸ್ಯ ಮ್ರಿಯಸ್ವ ಕೇವಲ ಹುಟ್ಟುವುದು ಸಾಯುವುದಕ್ಕೆ ಸೀಮಿತವಾಗಿರದೆ , ರಾಷ್ಟ್ರ ನಿರ್ಮಾಣದ ಅನಂತಶಕ್ತಿ ನಮ್ಮದಾಗಬೇಕು. ಜ್ಞಾನದ ಜೊತೆಗೆ ಗೌರವ ಹಾಗು ಸಂಸ್ಕೃತಿಯನ್ನು ನೀಡುವಂತಹಾ ಶಿಕ್ಷಣ ನಮ್ಮದಾಗಿರಲಿ.

ಜ್ಞಾನವನ್ನು ಪಡೆದುಕೊಳ್ಳುವ ಒಂದೇ ನಿಯಮ ಅದುವೇ ಮಾನಸಿಕ ಏಕಾಗ್ರತೆ. ವಿದ್ಯಾಭ್ಯಾಸದ ಸಾರವೇ ಮನಸ್ಸಿನ ಏಕಾಗ್ರತೆ. ಕೇವಲ ವಿಷಯದ ಸಂಗ್ರಹವಾಗದೆ ಏಕಾಗ್ರತೆಯ ಮೂಲವಾಗಬೇಕು ನಮ್ಮ ಶಿಕ್ಷಣ . ಏಕಾಗ್ರತೆಯೊಂದೇ ಜ್ಞಾನಭಂಡಾರಕ್ಕೆ ಇರುವ ಏಕಮಾತ್ರ ಬೀಗದಕೈ. ನಮ್ಮ ಈಗಿನ ದೇಹದ ಸ್ಥಿತಿಯಾಗಿರುವ ಚಂಚಲತೆಯನ್ನು ತ್ಯಜಿಸಲು ಮೊದಲು ನಾವೆಲ್ಲ ಅಂತರ್ಮುಖಿಗಳಾಗಬೇಕು ಅನಂತರ ನಮ್ಮ ಮನಸ್ಸನ್ನು ಮನೋನಿಗ್ರಹಗೊಳಿಸಿ , ಮನಸನ್ನು ನಮ್ಮ ಸ್ವಾಧೀನದಲ್ಲಿ ಇಟ್ಟುಕೊಳ್ಳಬೇಕು.

ಜ್ಞಾನಾರ್ಜನೆಗೆ ಬರುವ ಪ್ರತಿಯೊಬ್ಬ ಛಾತ್ರನಲ್ಲೂ ಪರಿಶುದ್ಧತೆ , ಜ್ಞಾನಾಕಾಂಕ್ಷೆ ಮತ್ತು ದೃಢ ಪ್ರಯತ್ನ ಇರಲೇಬೇಕು. ಜ್ಞಾನದ ಹಂಬಲದ ಎದುರು ಆಸೆಯೂ ಸೋಲಬೇಕು ಅಂತೆಯೇ ಸುಖಭೋಗವಿರಾಸಕ್ತಿಯು ಮೂಡಬೇಕು. ಬಾಹ್ಯ ಮತ್ತು ಆಂತರಿಕ ಇಂದ್ರಿಯಗಳ ನಿಗ್ರಹಗೈಯ್ಯಬೇಕು. ನಾವು ಮನಸ್ಸಿಗೆ ” ನೀನು ನನ್ನವನು, ನೀನು ಏನನ್ನು ನೋಡಬೇಡ ಅಥವ ಕೇಳಬೇಡವೆಂಬುದು ನಿನಗೆ ಅಪ್ಪಣೆ ನಾನು ಮಾಡುತ್ತೇನೆ ” ಇದುವೇ ಮನೋನಿಗ್ರಹ . ಪ್ರತಿಯೊಂದು ಸಾಧನೆಗೂ ಸಹನೆ ಮತ್ತು ಮನೋಸ್ಥಿಮಿತ ಮುಖ್ಯ . ನಿಯಮಗಳ ಅನುಷ್ಠಾನ ಹೇಗಿರಬೇಕೆಂದೆರೆ ನಮಗೆ ಮುಂದೆ ಆತ್ಮ ಸಾಕ್ಷಾತ್ಕಾರವಾಗಿ ಭವ ಕೋಟಿ ಸಾಗರವನ್ನು ದಾಟುವಂತಿರಬೇಕು.

ಭಾರತಮಾತೆಯ ಅಮೋಘ ರತ್ನವಾಗಿರುವ ಸ್ವಾಮಿ ವಿವೇಕಾನಂದರ ಶಿಕ್ಷಣದ ತತ್ತ್ವಗಳಿಗೆ ಸಹಸ್ರಾರು ಯುಗಗಳು ಕಳೆದರು ಯುವ ಜನಾಂಗವನ್ನು ಆತ್ಮವಿಸ್ಮೃತಿಯಿಂದ, ನಿರ್ವೀರ್ಯತೆಯಿಂದ ಹೊರತಳ್ಳಿ ಇಚ್ಛಾಶಕ್ತಿಯ ಪ್ರತಿರೂಪಗಳಾಗಿ ನಿರ್ಮಿಸುವ ತಾಕತ್ತು ಇದೆ.
ಸ್ವಾಮೀಜಿ ಒಂದು ಬಾರಿ ಮಾತನಾಡುತ್ತಾ ” ಒಂದು ದೃಶ್ಯ ಮಾತ್ರ ಹಗಲಿನಂತೆ ಸ್ಪಷ್ಟವಾಗಿ ನನ್ನ ಕಣ್ಣ ಮುಂದೆ ಕಾಣುತ್ತಿದೆ — ಅದೇ ಪುರಾತನ ಮಾತೆ ಪುನಃ ಜಾಗ್ರತಳಾಗಿರುವಳು , ತನ್ನ ಸಿಂಹಾಸನದ ಮೇಲೆ ಮಂಡಿಸಿರುವಳು. ಎಂದಿಗಿಂತ ಹೆಚ್ಚು ಶೋಭಾಯಮಾನಳಾಗಿರುವಳು. ಆ ಮಹಾತಾಯಿಯನ್ನು ಜಗತ್ತಿಗೆಲ್ಲ ಶಾಂತಿವಾಣಿಯಲ್ಲಿ, ಆಶೀರ್ವಾದ ವಾಣಿಯಲ್ಲಿ ಸಾರಿ” . ಈ ಸುಸಂಧರ್ಭ ನಮಗಿಂದು ಒದಗಿ ಬಂದಿದೆ. ಈ ದೇಶ ಕೇವಲ ಭೂಮಿಯ ತುಂಡಲ್ಲ , ಅದರ ಹೊರತಾಗಿ ಜೀವಿಸುತ್ತಿರುವ ಭೂಮಿ, ಅರ್ಥಾತ್ ಭಾರತಮಾತೆಯಾಗಿ ನಾವು ನಮ್ಮ ದೇಶವನ್ನು ಪೂಜಿಸುತ್ತೇವೆ. ತಾಯಿ ತನ್ನ ಸುತರನ್ನು ಎಂದಿಗೂ ಬೇಧಭಾವದಿಂದ ಕಾಣುವುದಿಲ್ಲ , ಎಲ್ಲರನ್ನು ತನ್ನ ಮಡಿಲಲ್ಲಿ ಕೂರಿಸಿ ಪೋಷಿಸುತ್ತಾಳೆ. ಮತ್ತೇಕೆ ನಮ್ಮ ನಡುವೆ ಈ ಬಿರುಕುಗಳು , ಮತ್ತೇಕೆ ನಮ್ಮ ನಡುವೆ ಈ ಬೇಧಭಾವಗಳು , ಕಿತ್ತೊಗೆಯಿರಿ ಬಂಧನಗಳ, ಅಸ್ಪೃಶ್ಯತೆಗಳ , ಸಾಧಿಸುವ ನವಭಾರತದ ಕನಸನ್ನ , ಮೊಳಗಿಸುವ ಒಂದೇ ರಾಗ , ಅದುವೇ ಸೋದರತೆಯ ತತ್ವ, ಹಿಂದುತ್ವದ ಸಾರ , ಆಧ್ಯಾತ್ಮಿಕತೆ ಹಾಗೂ ರಾಷ್ಟ್ರೀಯತೆಯ ಶಿಕ್ಷಣ ಇದೆಲ್ಲದರ ಮೂಲ ಮಂತ್ರ .

ಅಭೀಃ ಅಭೀಃ

Leave a Reply

Your email address will not be published.

This site uses Akismet to reduce spam. Learn how your comment data is processed.