ಬೆಂಗಳೂರು: ಸಮರ್ಥ ಭಾರತದ ‘ಬಿ ಗುಡ್ ಡು ಗುಡ್’ ಅಭಿಯಾನದ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ ನ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಹಾಗೂ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯ ದು.ಗು.ಲಕ್ಷ್ಮಣ್ ಅವರು ಮಾತನಾಡಿ ಬರವಣಿಗೆಗೆ ಮೂಲ ದ್ರವ್ಯ ಅಧ್ಯಯನ. ನಮ್ಮ ಪ್ರತಿ ಬರಹ ನಮ್ಮ ಅನುಭವದ ಬುತ್ತಿಯಾಗಿರಬೇಕು. ಈ ಅನುಭವವನ್ನು ಗಳಿಸುವುದಕ್ಕೆ ಲಭ್ಯವಿರುವ ಮಾಹಿತಿಗಳನ್ನು ಪ್ರಶ್ನಿಸಿ, ಪ್ರಮಾಣಿಸಿ ಸ್ವೀಕರಿಸಬೇಕು ಎಂದು ಹೇಳಿದರು.

ಬರೆವಣಿಗೆ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿರಬೇಕು. ಸಂಕ್ಷಿಪ್ತವಾಗಿ, ಚುರುಕಾಗಿ, ಜನರಿಗೆ ಹೊಸ ಆಲೋಚನೆಗೆ ಹಚ್ಚುವಂತೆ ನಮ್ಮ ಬರೆಹ ಇರಬೇಕು. ಅಂಕಿ ಅಂಶಗಳ ವಿವರಗಳನ್ನು ಬರೆಹದಲ್ಲಿ ಅಳವಡಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಬೇಕು. ಆಗ ನಮ್ಮ ಬರೆಹ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಮುಖ್ಯ ಅತಿಥಿ ಮಿಥಿಕ್ ಸೊಸೈಟಿಯ ಉಪಾಧ್ಯಕ್ಷ ಡಾ. ಎಂ.ಕೊಟ್ರೇಶ್ ಮಾತನಾಡಿ ಸ್ವಾಮಿ ವಿವೇಕಾನಂದರ ಮಾತು ಮತ್ತು ಕೃತಿ ಒಂದೇ ಆಗಿದ್ದರಿಂದಲೇ ಇಂದಿಗೂ ಅವರು ಯುವಕರಿಗೆ ಆದರ್ಶವಾಗಿದ್ದಾರೆ. ಅವರ ವ್ಯಕ್ತಿ ಶುದ್ಧತೆಯಿಂದಲೇ ಎಲ್ಲಾ ವಯೋಮಾನದವರಿಗೂ ಪ್ರೇರಣೆ ನೀಡುತ್ತಿದ್ದಾರೆ ಎಂದು ನುಡಿದರು.

ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳು ಸಾಂಕೇತಿಕವಾಗಿ ಸ್ಪರ್ಧೆಗಳು. ಆದರೆ ಅವು ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕಿರುವ ಅತ್ಯುತ್ತಮ ವೇದಿಕೆಗಳು. ನುಡಿದಂತೆ, ಬರೆದಂತೆ ನಡೆಯುವ ಬದ್ಧತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜೀವನದ ಕ್ಲಿಷ್ಟಕರ ಸಂದರ್ಭಗಳಲ್ಲಿ ಸ್ಥೈರ್ಯ ತುಂಬುವಲ್ಲಿ ಸ್ಪರ್ಧೆಗಳಿಗಾಗಿ ನಡೆಸಿದ ಅಧ್ಯಯನ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಮರ್ಥ ಭಾರತದ ವಿಶ್ವಸ್ಥ ರಾಜೇಶ್ ಪದ್ಮಾರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಮರ್ಥ ಭಾರತದ ಪ್ರಬಂಧ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಮೂಡುಬಿದರೆಯ ರಿಶೆಲ್ ಬ್ರಿಟ್ನಿ ಫೆರ್ನಾಂಡಿಸ್ , ದ್ವಿತೀಯ ಬಹುಮಾನವನ್ನು ಶೃಂಗೇರಿಯ ಸುಶ್ಮಾ ಕೆ.ಸಿ, ತೃತೀಯ ಬಹುಮಾನವನ್ನು ಮಂಗಳೂರಿನ ಶ್ರೀದೇವಿ ಕೆ ಪಡೆದುಕೊಂಡರು. ರಾಜ್ಯದ ವಿವಿಧ ಜಿಲ್ಲೆಗಳ ಇಪ್ಪತ್ತು ಮಂದಿ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನವನ್ನು ಸ್ವೀಕರಿಸಿದರು. ಪ್ರಬಂಧ ಸ್ಪರ್ಧೆಯ ವರದಿಯನ್ನು ಸಮರ್ಥ ಭಾರತದ ಕಾರ್ಯಕರ್ತ ಹರೀಶ್ ಭಾರದ್ವಾಜ್ ಪ್ರಸ್ತುತಪಡಿಸಿದರು. ಸಮರ್ಥ ಭಾರತದ ಕಾರ್ಯಕರ್ತರಾದ ಯಕ್ಷಾ ಪ್ರಾರ್ಥಿಸಿ, ಮಂಚಲ್ ಮಹೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.