-ಸುಲಕ್ಷಣಾ, ವಿದ್ಯಾರ್ಥಿನಿ, ಪುತ್ತೂರು

       ಆ ರಕ್ತ ಸಿಕ್ತ ಹತ್ಯಾಕಾಂಡವು ಪೂರ್ವ ನಿಯೋಜಿತ ಕೃತ್ಯವಾಗಿತ್ತು. ಶಾಂತಿಯುತವಾಗಿ ಸಭೆ ಸೇರಿದ್ದ ಜನರನ್ನು ರಕ್ತದ ಮಡುವಿನಲ್ಲಿ ಮಲಗಿಸಿದ ಆ ಬಿಳಿ ಮೂತಿಯ ನಿರ್ದಯಿ ‘ ಈ ಘಟನೆ ಜನರಲ್ಲಿ ನೈತಿಕ ಪರಿಣಾಮವನ್ನು ಉಂಟುಮಾಡಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ.


ವಸಾಹತುಶಾಹಿ ಆಳ್ವಿಕೆಗೆ ಕೈಗೊಂಬೆಗಳಾಗಲು ಬಯಸದ ಸ್ವಾಭಿಮಾನಿ ಭಾರತೀಯರ ಹೋರಾಟವನ್ನು ಹತ್ತಿಕ್ಕಲು ಆಂಗ್ಲರು ರೌಲಟ್ ಕಾಯ್ದೆಯನ್ನು ಜಾರಿಗೆ ತಂದಾಗ, ಅದರಿಂದ ಅಸಮಾಧಾನಗೊಂಡ ಜನರು ಅಮೃತಸರದಲ್ಲಿ ನಿರಾಯುಧರಾಗಿ ಸಭೆ ಸೇರಿದ್ದ ವೇಳೆಯಲ್ಲಿ ಆತ ಅಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಗುಂಡು ಹಾರಿಸಿ ಕಗ್ಗೊಲೆ ಮಾಡಿದ್ದ. ಆ ಪಾಪಿಯ ಹೆಸರು ಜನರಲ್ ಡಯರ್!


ಆ ಪಾಪಿಯನ್ನು ಕೊಂದು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಲ್ಲಿ ಬಲಿಯಾದವರಿಗೆ ನ್ಯಾಯ ಒದಗಿಸಲು ದೇಶಭಕ್ತನೊಬ್ಬ ಇಪ್ಪತ್ತು ವರ್ಷಗಳ ಕಾಲ ಕಾದಿದ್ದ . ನಮ್ಮ ನೆಲಕ್ಕೆ ಬಂದು ದಬ್ಬಾಳಿಕೆ ಮಾಡಿದ ಆ ಧೂರ್ತ ಡಯರ್ ಅವನ ನೆಲದಲ್ಲೇ ಸ್ವತಃ ಗುಂಡೇಟಿಗೆ ಬಲಿಯಾಗಿ ಕೊನೆಯುಸಿರೆಳೆದಿದ್ದ, ತುಂಬಿದ ಸಭೆಯಲ್ಲಿ ಅವನ ಸಂಹಾರವಾಗಿತ್ತು; ಆ ಸಂಹಾರದ ಮೂಲಕ ತಮ್ಮ ಪ್ರತಿಜ್ಞೆಯನ್ನು ನೆರವೇರಿಸಿ , ಹತ್ಯಾಕಾಂಡದಲ್ಲಿ ಮಡಿದವರಿಗೆ ನ್ಯಾಯ ಒದಗಿಸಿದ ಪಂಜಾಬಿನ ರಣಕಲಿ ಸರ್ದಾರ್ ಉಧಮ್ ಸಿಂಗ್ !!


ಜಲಿಯನ್ ವಾಲಾ ಬಾಗ್ ಕಗ್ಗೊಲೆಯನ್ನು ಕಣ್ಣಾರೆ ಕಂಡಿದ್ದ ಆ ಇಪ್ಪತ್ತರ ತರುಣ ಪಾಪಿ ಡಯರ್ ನನ್ನು ನಾಶಗೊಳಿಸುವೆನೆಂದು ಪಣ ತೊಟ್ಟಿದ್ದ. ಇಪ್ಪತ್ತು ವರ್ಷಗಳ ತಪಸ್ಸು ಮಾಡಿ ತನ್ನ ಗುರಿಯನ್ನು ಸಾಧಿಸಿದ ಆತ ಮುಂದೆ ಅನೇಕ ಕ್ರಾಂತಿಕಾರಿಗಳಿಗೆ ಸ್ಫೂರ್ತಿಯಾಗಿದ್ದ. ನಿರ್ದಯಿ ಡಯರ್ ನನ್ನು ಅವನ ನೆಲದಲ್ಲೇ ನಿರ್ಭೀತಿಯಿಂದ ಹೊಡೆದುರುಳಿಸಿದ ಸರ್ದಾರ್ ಉಧಮ್ ಸಿಂಗ್ ನನ್ನು ನೋಡಿ ಅಂದು ಇಡೀ ಬ್ರಿಟನ್ ಬೆರಗಾಗಿತ್ತು.
ಆರಂಭದ ದಿನಗಳಲ್ಲಿ ಅಮೇರಿಕಾದಲ್ಲಿ ಗದ್ದರ್ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ ಉಧಮ್ ಸಿಂಗ್ ಗೆ ಭಗತ್ ಸಿಂಗ್ ನಂತಹ ಕ್ರಾಂತಿಕಾರಿಗಳ ಒಡನಾಟದ ಭಾಗ್ಯ ದೊರಕುತ್ತದೆ. 1927ರಲ್ಲಿ ಭಗತ್ ಸಿಂಗ್ ನಿರ್ದೇಶನದಂತೆ ಬಂದೂಕುಗಳೊಂದಿಗೆ ಭಾರತಕ್ಕೆ ಮರಳಿ ಬಂದ ಉಧಮ್ ಸಿಂಗ್ ಬಳಿ ಆಯುಧಗಳಿಗೆ ಪರವಾನಗಿ ಇಲ್ಲ ಎಂಬ ಕಾರಣಕ್ಕೆ ಬಂಧನಕ್ಕೊಳಗಾಗಿ 1931ರವರೆಗೂ ಜೈಲುವಾಸದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಐದು ವರ್ಷಗಳ ಕಾಲ ಅನುಭವಿಸಿದ ಜೈಲುವಾಸವು ಅವರಲ್ಲಿದ್ದ ಕ್ರಾಂತಿಯ ಕಿಡಿಗೆ ತುಪ್ಪ ಸುರಿಯಿತು. 1934ರಲ್ಲಿ ‘ಶೇರ್ ಸಿಂಗ್ ‘ ಎಂಬ ಹೆಸರಿನ ಪಾಸ್ಪೋರ್ಟ್ ನೊಂದಿಗೆ ಬ್ರಿಟನ್ ತಲುಪಿದ ಉಧಂ ಸಿಂಗ್ ಡಯರ್ ನನ್ನು ಸಂಹರಿಸುವ ಶುಭಗಳಿಗೆ ಎದುರು ನೋಡುತ್ತಿದ್ದರು.


1940 ರ ಮಾರ್ಚ್ 13ರಂದು ಕಾಕ್ಸ್ಟನ್ ಹಾಲ್ ನಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ಸೆಂಟ್ರಲ್ ಏಷ್ಯಾ ಸೊಸೈಟಿಯ ಆಶ್ರಯದಲ್ಲಿ ನಡೆಯುವ ಸಭೆಯಲ್ಲಿ ಕ್ರಾಂತಿಕಾರಿ ಉಧಮ್ ಸಿಂಗ್ ಪಾಪಿ ಡಯರ್ ನನ್ನು ಗುಂಡಿಟ್ಟು ಕೊಲ್ಲುತ್ತಾರೆ. ತುಂಬಿದ ಸಭೆಯಲ್ಲಿ ತಮ್ಮ ಪ್ರತಿಜ್ಞೆಯನ್ನು ನೆರವೇರಿಸಿದ ಭಾರತದ ಆ ಸಿಂಹವನ್ನು ಬಿಳಿ ಮೂತಿಯ ಗುಳ್ಳೆ ನರಿಗಳು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ಯುತ್ತವೆ. ನಿರಾಯುಧರಾಗಿ ಸಭೆ ಸೇರಿದ ಜನರ ಪ್ರಾಣ ತೆಗೆದ ಹಂತಕನನ್ನು ಕೊಂದ ಅಪರಾಧಕ್ಕೆ ಪಂಜಾಬಿನ ಈ ಕ್ರಾಂತಿಕಾರಿಯನ್ನು 1940 ಜುಲೈ 31 ರಂದು ನೇಣುಕಂಬಕ್ಕೆ ಏರಿಸಲಾಗುತ್ತದೆ.


ಡಯರ್ ನನ್ನು ವಧಿಸಿದ ಪಂಜಾಬಿನ ರಣಕಲಿ ಸರ್ದಾರ್ ಉಧಮ್ ಸಿಂಗ್ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ನೀಡಿದ ಹೇಳಿಕೆ ಇದಾಗಿತ್ತು-
“ಈ ಹತ್ಯೆ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ; ಈ ರೀತಿಯ ಸಾವನ್ನು ಪಡೆಯಲಷ್ಟೇ ಅವನು ಅರ್ಹನಾಗಿದ್ದ”
ಈ ಹೇಳಿಕೆ ಮುಂದೆ ಅನೇಕ ಕ್ರಾಂತಿಕಾರಿಗಳ ಹುಟ್ಟಿಗೆ ಕಾರಣವಾಗಿತ್ತು.

Leave a Reply

Your email address will not be published.

This site uses Akismet to reduce spam. Learn how your comment data is processed.