29 ಅಕ್ಟೋಬರ್ 2023: ವಿಜಯ ದಶಮಿಯ ಪ್ರಯುಕ್ತ ಬನಶಂಕರಿ ಭಾಗದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಭಾನುವಾರದಂದು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಕಗ್ಗಲಿಪುರ ನಗರದಲ್ಲಿ ಪರಮ ಪೂಜನೀಯ ಭಗವಾ ಧ್ವಜದೊಂದಿಗೆ ಸುಮಾರು 700ಕ್ಕೂ ಹೆಚ್ಚು ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಘೋಷ್ ವಾದನ ಪತಕಗಳೊಂದಿಗೆ ಸುಮಾರು 4 ಕಿಮಿ ದೂರ ಸಾಗಿದ ಈ ಸಂಚಲನಕ್ಕೆ ಕಗ್ಗಲಿಪುರದ ನಿವಾಸಿಗಳು ಹಾಗೂ ಸಾರ್ವಜನಿಕರು ಜಯ ಘೋಷಗಳನ್ನು ಕೂಗಿ, ದಾರಿಗಳಲ್ಲಿ ರಂಗೋಲಿಗಳನ್ನು ಬಿಡಿಸಿ, ಮನೆಮನೆಗಳ ಮಹಡಿಗಳಿಂದ ಪುಷ್ಪಾರ್ಪಣೆ ಮಾಡಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಬಾಲಕ ಬಾಲಕಿಯರು ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಸಂಗೊಳ್ಳಿರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಐತಿಹಾಸಿಕ ಮಹಾನ್ ವ್ಯಕ್ತಿಗಳ ವೇಷವನ್ನು ಧರಿಸಿ ಭಾಗವಹಿಸಿದರು. ಸಂಚಲನದ ದಾರಿಯಲ್ಲಿ ನಿವಾಸಿಗಳು ಹಾಗೂ ಅಂಗಡಿಗಳ ಮಾಲೀಕರು ಭಾರತ ಮಾತೆಯ, ಸ್ವಾತಂತ್ರ ಹೋರಾಟಗಾರರ ಅಲಂಕರಿಸಿದ ಭಾವಚಿತ್ರಗಳನ್ನು ಪ್ರದರ್ಶಿಸಿ ತಮ್ಮ ರಾಷ್ಟ್ರ ಪ್ರೇಮವನ್ನು ವ್ಯಕ್ತ ಪಡಿಸಿದರು.
ಈ ಉತ್ಸವದ ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ದಕ್ಷಿಣ ವಿಭಾಗದ ಕಾರ್ಯವಾಹ ಕೃಷ್ಣ ರಾಮಸ್ವಾಮಿ ಹಾಗೂ ಬನಶಂಕರಿ ಭಾಗ ಕಾರ್ಯವಾಹ ಸಂಗಮನಾಥ್, ಬನಶಂಕರಿ ಭಾಗ ಸಹ ಕಾರ್ಯವಾಹ ವಿನಯ್ ಕುಮಾರ್ ಕೆ. ಎಸ್. ರವರು ಉಪಸ್ಥಿತರಿದ್ದರು.
ವಿಜಯ ದಶಮಿಯ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಅರಿವು ಮೂಡಿಸಲು ಪಥ ಸಂಚಲನ ನಡೆಸುತ್ತಾರೆ. ಈ ಉತ್ಸವವು ರಾಷ್ಟ್ರಪ್ರೇಮ, ಶಿಸ್ತು ಹಾಗೂ ಸಮಾಜಕ್ಕಗಿ ಸಮರ್ಪಣೆಯ ಪ್ರತೀಕವಾಗಿತ್ತು. 98 ವರ್ಷಗಳನ್ನು ಪೂರೈಸಿದ ಸಂಘವು, ಸ್ಥಾಪನೆಯಾದಾಗಿಂದ ರಾಷ್ಟ್ರದ ಸಂಘಟನೆಯಲ್ಲಿ ತೊಡಗಿದ್ದು ಹಲವಾರು ಕ್ಷೇತ್ರಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದೆ. ವಿಜಯ ದಶಮಿಯು ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರತಿ ವರ್ಷ ಆಚರಿಸುವ ಆರು ಉತವಗಳಲ್ಲಿ ಒಂದಾಗಿದ್ದು, ಯುಗಾದಿ ಉತ್ಸವ, ಹಿಂದು ಸಾಮ್ರಾಜ್ಯೋತ್ಸವ, ಗುರು ಪೂಜಾ ಉತ್ಸವ, ರಕ್ಷಾಬಂಧನ ಉತ್ಸವ, ಸಂಕ್ರಾಂತಿ ಉತ್ಸವ, ಇತರ ಉತ್ಸವಗಳಾಗಿವೆ.