– ಚೈತನ್ಯ ಹೆಗಡೆ, ಸಂಪಾದಕರು, ಹೊಸದಿಗಂತ ಡಿಜಿಟಲ್

ಇಸ್ವಿ 750

ಅರಬ್ ನೆಲವನ್ನು ತನ್ನ ಖಡ್ಗಬಲದಲ್ಲಿ ಇಸ್ಲಾಂ ಅತ್ಯಂತ ಕ್ಷಿಪ್ರಗತಿಯಲ್ಲಿ ಆವರಿಸಿಕೊಂಡಿತ್ತು. ಮೊಹಮ್ಮದ್ ಪೈಗಂಬರರ ಮರಣಾನಂತರ ರಶಿದುನ್ ಖಲೀಫತ್ ಮೆರೆದು, ನಂತರದಲ್ಲಿ ಇವತ್ತಿನ ಇರಾಕ್ ನೆಲವನ್ನು ಕೇಂದ್ರವಾಗಿರಿಸಿಕೊಂಡು ಉಮಯ್ಯದ್ ಖಲೀಫತ್ ಆಳುತ್ತಿತ್ತು. ಅದರ ಖಲೀಫ ಎರಡನೇ ಮರ್ವಾನ್. ಅಲ್ಲಿಗೆ ಪ್ರವೇಶಿಸಿದ ಅಬು ಅಲ್ ಅಬ್ಬಾಸ್ ಬಂಡಾಯ ಸೇನೆ, ಅವತ್ತು ಉಮಯ್ಯದ್ ಆಳ್ವಿಕೆಯನ್ನು ಕೊನೆಗೊಳಿಸುತ್ತದೆ. ಎರಡನೇ ಮರ್ವಾನ್ ಸಿರಿಯಾಕ್ಕೆ, ನಂತರದಲ್ಲಿ ಈಜಿಪ್ತಿಗೆ ಓಡಿಹೋದರೂ ಅಲ್ಲೆಲ್ಲೂ ಆಶ್ರಯ ಸಿಗದೇ ಮೃತನಾಗಿದ್ದಾಗಿ ಚರಿತ್ರೆ ಹೇಳುತ್ತದೆ.

ಈ ಹಂತದ ದಂತಕತೆಯೊಂದರ ಪ್ರಕಾರ, ಅಬು ಅಲ್ ಅಬ್ಬಾಸ್ ಹೀಗೆ ಯುದ್ಧ ಗೆದ್ದು ಅಬ್ಬಾಸೀದ್ ಖಲಿಫತ್ ಅನ್ನು ಪ್ರಾರಂಭಿಸಿದ ಹಂತದಲ್ಲಿ ಮುಂದೆ ಇನ್ಯಾವತ್ತೋ ಉಮಯ್ಯದ್ ಖಲೀಫತ್ತಿಗೆ ಸಂಬಂಧಿಸಿದವರು ಅಧಿಕಾರಕ್ಕೆ ಸವಾಲಾಗಬಾರದೆಂಬ ಎಚ್ಚರ ಕಾಡಿತು. ಹೀಗಾಗಿ ಉಮಯ್ಯದ್ ಖಲೀಫ ಕುಲದ ಎಲ್ಲ ಸಂಬಂಧಿಕರು, ರಾಜಕುವರರಿಗೆ ಭೋಜನಕೂಟದ ಆಹ್ವಾನ ಹೋಗುತ್ತದೆ. ಊಟಕ್ಕೆ ಕುಳಿತ ಮೇಲೆ ಅವರೆಲ್ಲರನ್ನೂ ಕತ್ತರಿಸಿ ಕೊಂದು, ಆ ಶವಗಳ ಮೇಲೆ ಕಾರ್ಪೆಟ್ ಹಾಕಿ ಉಳಿದವರ ಭೋಜನ ಮುಂದುವರಿಯುತ್ತದೆ.

ಅದೇಕೆ ಈ ಕತೆ ಎಂದಿರಾ? ಸದ್ಯಕ್ಕೀಗ ಅರಬ್ ನೆಲದಲ್ಲಾಗುತ್ತಿರುವ ವಿದ್ಯಮಾನಗಳನ್ನು, ಇಸ್ರೇಲ್ -ಹಮಾಸ್ ಸಂಘರ್ಷ ಮುಂದಿನ ದಿನಗಳಲ್ಲಿ ಹೋಗಿನಿಲ್ಲಬಹುದಾದ ಬಿಂದುವನ್ನು ಅರ್ಥಮಾಡಿಕೊಳ್ಳುವುದಕ್ಕೆ ಇಸ್ಲಾಂ ಅಂತರ್ಯುದ್ಧದ ಈ ಬಗೆಯ ವಿವರಗಳು ದಾರಿ ತೋರಿಸುತ್ತವೆ. ಈ ಕತೆಯನ್ನು ಸ್ವಲ್ಪ ಹೊತ್ತು ಬಿಟ್ಟು ಭೇಟಿಯಾಗೋಣ. ಈಗ ಗಾಜಾಪಟ್ಟಿಯ ರಣಾಂಗಣದತ್ತ ಕಣ್ಣು ನೆಡೋಣ.

ಗಾಜಾಪಟ್ಟಿಯಿಂದ ಹಮಾಸ್ ಅನ್ನು ಅಳಿಸಿಹಾಕ್ತೇನೆ ಅಂತ ಇಸ್ರೇಲ್ ಹೊರಟಿದೆ. ಅದರ ಬೆನ್ನಿಗೆ ಅಮೆರಿಕ ಇದೆ. ಸಹಜವಾಗಿಯೇ ಜಗತ್ತಿನಾದ್ಯಂತ ಇಸ್ಲಾಮಿಸ್ಟುಗಳು ಮತ್ತು ಕಮ್ಯುನಿಸ್ಟರು ಪ್ಯಾಲಸ್ಟೀನ್ ಹೆಸರು ಹೇಳಿಕೊಂಡು ಇಸ್ರೇಲ್ ವಿರೋಧಿ ಪಾಳಯದಲ್ಲಿದ್ದಾರೆ.

ಮೇಲ್ನೋಟಕ್ಕೆ ಹೆಚ್ಚಿನ ಅರಬ್ ದೇಶಗಳೆಲ್ಲ ಗಾಜಾಪಟ್ಟಿ ಮೇಲೆ ಹೆಚ್ಚು ದಿನಗಳವರೆಗೆ ಇಸ್ರೇಲ್ ಕಾರ್ಯಾಚರಣೆ ಮುಂದುವರಿಸಬಾರದು ಎನ್ನುವಂಥ ಪರೋಕ್ಷ ಒತ್ತಡವನ್ನು ಹಾಕುತ್ತಿವೆ ಎಂಬುದೇನೋ ನಿಜ. ಆದರೆ, ಕೆಲವು ದಶಕಗಳ ಹಿಂದೆ ಈ ಬಗೆಯ ಸಂಘರ್ಷ ತೆರೆದುಕೊಂಡಾಗಲೆಲ್ಲ ಇಸ್ರೇಲ್ ವಿರುದ್ಧ ನೇರವಾಗಿ ಯುದ್ಧಕ್ಕೇ ಧುಮುಕುವ ಉತ್ಸಾಹ ತೋರುತ್ತಿದ್ದವರು ಈಗ ಹಾಗೆ ಮಾಡುತ್ತಿಲ್ಲ.

ಈ ಯುದ್ಧದಲ್ಲಿ ಬಹಳ ಸ್ಪಷ್ಟವಾಗಿ ಹಮಾಸ್ ಪರವಾಗಿ ನಿಂತಿರೋ ಮುಸ್ಲಿಂ ದೇಶಗಳು ಅಂತಂದ್ರೆ ಇರಾನ್ ಮತ್ತು ಕತಾರ್. ಲೆಬನಾನ್ ಮತ್ತು ಸಿರಿಯಾಗಳು ಇವೆಯಾದರೂ ಅವು ಇರಾನಿನ ಪರವಾಗಿಯೇ ನಿಂತಿರುವ ದಂಡುಗಳೇ ಹೊರತು, ಅದಿಲ್ಲದಿದ್ದರೆ ಅವರ ದೇಶದಲ್ಲಿ ಅವಕ್ಕೆ ಸಂಭಾಳಿಸಿಕೊಳ್ಳುವುದಕ್ಕೆ ಸಾಕಷ್ಟಿದೆ. ಗಾಜಾದ ಮೇಲೆ ಇಸ್ರೇಲ್ ದಾಳಿ ನಿಲ್ಲಿಸದೇ ಹೋದರೆ ನಾವು ಮತ್ತೊಂದು ಫ್ರಂಟ್ ಅನ್ನು ಒಪನ್ ಮಾಡ್ತೇವೆ ಅಂತ ಹೇಳಿಕೆ ಕೊಟ್ಟಿರೋದು ಇರಾನ್ ಮಾತ್ರ.

ಈ ಯುದ್ಧದಲ್ಲಿ ಇಸ್ರೇಲಿಗೆ ನಿಜವಾದ ಥ್ರೆಟ್ ಇರೋದು ಉತ್ತರದಿಂದ. ಲೆಬನಾನ್ ಮತ್ತು ಸಿರಿಯಾಗಳಿಂದ. ಹೀಗಾಗಿಯೇ ಅದಾಗ್ಲೇ ಸಿರಿಯಾದ ಡಮಾಸ್ಕಸ್ ಮತ್ತೆ ಅಲೆಪ್ಪೊಗಳಿಗೆ ಒಂದೊಂದು ಕ್ಷಿಪಣಿ ಹೊಡೆದು ಇಸ್ರೇಲ್ ಒಂದು ಎಚ್ಚರಿಕೆ ಕೊಟ್ಟಿದೆ. ಆದ್ರೆ ಲೆಬನಾನ್ ಕಡೆಯಿಂದ ಬರಬಹುದಾದ ಸವಾಲು ಸ್ವಲ್ಪ ಆತಂಕದ್ದೇ ಇದೆ. ಯಾಕಂದ್ರೆ ಇಲ್ಲಿರೋರು ಹಿಜ್ಬುಲ್ಲಾ ಉಗ್ರರು. ಒಂದು ವಿಷಯದಲ್ಲಿ ಹಮಾಸ್ ಗಿಂತ ಇವ್ರು ಮುಂದಿದ್ದಾರೆ. ಹಮಾಸ್ ಎರಡು ವರ್ಷ ತಯಾರಿ ಮಾಡಿ ಇಸ್ರೇಲ್ ಮೇಲೆ 5 ಸಾವಿರ ರಾಕೆಟ್ ಉಡಾಯಿಸ್ತು. ಅದೇ ಹಿಜ್ಬುಲ್ಲಾ ಉಗ್ರರ ಬಳಿ ಲಕ್ಷಗಳ ಸಂಖ್ಯೆಯಲ್ಲಿ ಕ್ಷಿಪಣಿಗಳಿವೆ. ಇವು ಇಡೀ ಇಸ್ರೇಲ್ ಅನ್ನು ಕವರ್ ಮಾಡಬಲ್ಲವು. ಈ ಕಡೆಯಿಂದ ಹಮಾಸ್, ಆ ಕಡೆಯಿಂದ ಹಿಜ್ಬುಲ್ಲಾ ಒಂದೇ ಸಮನೆ ದಾಳಿ ಮಾಡಿದರೆ ಇಸ್ರೇಲ್ ಎದುರಿಸೋದಕ್ಕೆ ಕಷ್ಟ.

ಹೀಗಾಗಿ, ಅಮೆರಿಕದ ಯುದ್ಧನೌಕೆ ಮೆಡಿಟರೇನಿಯನ್ ಸಮುದ್ರದಲ್ಲಿ ಬಂದು ನಿಂತಿರೋದು ಈ ಇರಾನ್-ಸಿರಿಯಾ-ಲೆಬನಾನ್ ಹುಟ್ಟುಹಾಕುವಂಥ ಪರಿಸ್ಥಿತಿಯನ್ನು ಎದುರಿಸೋದಕ್ಕೆ. ಕೇವಲ ಗಾಜಾವನ್ನೋ, ವೆಸ್ಟ್ ಬ್ಯಾಂಕ್ ಅನ್ನೋ ಮ್ಯಾನೇಜ್ ಮಾಡೋದಾಗಿದ್ರೆ ಇಸ್ರೇಲಿಗೆ ಅಮೆರಿಕದ ಸಹಾಯ ಬೇಕೆ ಇರಲಿಲ್ಲ. ಇರಾನ್ ಏನಾದ್ರೂ ತನ್ನ ಮಿಲಿಟರಿ ಆಟ ಶುರು ಮಾಡೋದೆ ಆಗಿದ್ರೆ ಇವರಿಬ್ಬರ ಮೂಲಕ ಇಸ್ರೇಲಿನ ಉತ್ತರ ಭಾಗದಲ್ಲಿ ಶುರು ಮಾಡುತ್ತೆ. ಆಗ ಅಮೆರಿಕ ದೊಡ್ಡಮಟ್ಟದಲ್ಲಿ ಯುದ್ಧಪ್ರವೇಶ ಮಾಡುತ್ತೆ. ಅಮೆರಿಕ ಬ್ಯುಸಿಯಾಗಿರೋ ಇದೇ ಸಂದರ್ಭ ನೋಡಿ ಈ ಕಡೆ ಚೀನಾ ಏನಾದ್ರೂ ತೈವಾನ್ ಮೇಲೆ ಆಕ್ರಮಣ ಮಾಡಿದ್ದೇ ಆದರೆ, ಆಗ ಭಾರತವೂ ಸೇರಿದ ಹಾಗೆ ಎಲ್ಲ ದೇಶಗಳೂ ಒಂದು ನಿರ್ಧಾರ ತೆಗೆದುಕೊಳ್ಳಲೇ ಬೇಕು… ಗಾಜಾದಿಂದ ಹುಟ್ಟಿದ ಒಂದು ಸಂಘರ್ಷ ಮೂರನೇ ವಿಶ್ವಯುದ್ಧವಾಗಿಬಿಡಬಲ್ಲ ಅಪಾಯವಿರೋದು ಇಲ್ಲಿಯೇ.

ಯುಎಇ ಮತ್ತು ಬಹರೇನ್ ಗಳಂತೂ ಹಮಾಸ್ ಅನ್ನು ಸ್ಪಷ್ಟ ಶಬ್ದಗಳಲ್ಲೇ ಖಂಡನೆ ಮಾಡಿವೆ. ಇನ್ ಫ್ಯಾಕ್ಟ್-ಈ ಎರಡೂ ದೇಶಗಳು ಇಸ್ರೇಲ್ ಜೊತೆಗೆ ಅಬ್ರಾಹಂ ಅಕಾರ್ಡ್ಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ.

ಈಗ ನಿಜಕ್ಕೂ ಇಕ್ಕಟ್ಟಿನಲ್ಲಿರುವ ದೇಶವೆಂದರೆ ಸೌದಿ ಅರೇಬಿಯ. ಇಸ್ರೇಲ್ ವಿರುದ್ಧ ಚಿಕ್ಕದೊಂದು ಹೇಳಿಕೆ ನೀಡಿ ನಂತರ ಸುಮ್ಮನಾಗಿರುವ ಸೌದಿಗೆ ಈ ಸಂಘರ್ಷ ಮುಂದುವರಿದಷ್ಟೂ ಮುಸ್ಲಿಂ ದೇಶಗಳ ಜನರಿಂದ ‘ತೀವ್ರವಾದಿ’ ನಿಲುವು ತೆಗೆದುಕೊಳ್ಳಬೇಕಾದ ಒತ್ತಡ ಸೃಷ್ಟಿಯಾಗುತ್ತದೆ. ಆದರೆ ಸೌದಿ ತನ್ನ ಭವಿಷ್ಯದ ಹಾದಿಯನ್ನು ಬೇರೆಯದೇ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳುತ್ತಿರುವಾಗ ಇದು ಬಹಳ ದೊಡ್ಡ ಸವಾಲು. ಎಷ್ಟರಮಟ್ಟಿಗೆಂದರೆ, ಇದೀಗ ಇಸ್ರೇಲ್ ವರ್ಸಸ್ ಹಮಾಸ್ ಅಂತ ಶುರುವಾಗಿರುವ ಸಂಘರ್ಷ ಮುಂದಿನ ದಿನಗಳಲ್ಲಿ ಇಸ್ರೇಲ್ ವರ್ಸಸ್ ಸೌದಿ ಅಂತ ಬದಲಾಗಿ ಅರಬ್ ಪ್ರಾಂತ್ಯದ ನಾಯಕತ್ವ ನಿಜಕ್ಕೂ ಯಾರದ್ದು ಎಂಬ ಪ್ರಶ್ನೆ ಎದ್ದುನಿಲ್ಲುವಷ್ಟರಮಟ್ಟಿಗೆ.. ಇದನ್ನು ವಿವರವಾಗಿ ಮುಂದೆ ನೋಡೋಣ. ಆದರೆ, ತಕ್ಷಣಕ್ಕೆ ಗಮನಿಸಬೇಕಾದ ಸಂಗತಿ ಎಂದರೆ ಇಸ್ರೇಲ್ ವರ್ಸಸ್ ಅರಬ್ ಸಂಘರ್ಷಗಳು ಪ್ರಾರಂಭವಾದಾಗ ದಂಡುಕಟ್ಟಿಕೊಂಡು ಇಸ್ರೇಲ್ ವಿರುದ್ಧ ಹೋರಾಡಿದ್ದ ಪಕ್ಕದ ದೇಶಗಳಾದ ಈಜಿಪ್ತ್ ಮತ್ತು ಜೋರ್ಡಾನ್ ಈ ಬಾರಿ ಹೇಗೆ ನಡೆದುಕೊಳ್ಳುತ್ತಿವೆ ಎಂಬ ಅಂಶ. ಅವೇಕೆ ಹಾಗೆ ನಡೆದುಕೊಳ್ಳುತ್ತಿವೆ ಎಂಬುದರಲ್ಲೇ ಮುಸ್ಲಿಂ ಜಗತ್ತಿನ ಅಧಿಕಾರದ ಕೇಂದ್ರಗಳಲ್ಲಿರುವ ದ್ವಂದ್ವ ಮತ್ತು ಸಂದಿಗ್ಧಗಳೂ ತೆರೆದುಕೊಳ್ಳುತ್ತವೆ.

ಮೊದಲಿಗೆ, ನಾವು ಇಸ್ರೇಲಿನ ಪಕ್ಕಕ್ಕೇ ಇರುವ ಮುಸ್ಲಿಂ ದೇಶಗಳನ್ನು ಗಮನಿಸೋಣ. ಈಜಿಪ್ತ್ ಮತ್ತೆ ಜೋರ್ಡಾನ್. ಒಂದು ಕಾಲದಲ್ಲಿ ಇಸ್ರೇಲನ್ನು ಇಲ್ಲವಾಗಿಸ್ತೇನೆ ಅಂತ ಯುದ್ಧ ಮಾಡಿದ್ದ ದೇಶಗಳು ಇವು. ಇವತ್ತು ಅವು ಗಾಜಾದ ಮೇಲೆ ಇಸ್ರೇಲಿನ ದಾಳಿ ನಿಲ್ಲಬೇಕು, ಇಬ್ರೂ ಕದನವಿರಾಮಕ್ಕೆ ಬರಬೇಕು ಅಂತೇನೋ ಹೇಳ್ತಿವೆ…ಆದ್ರೆ ಈ ಕೆಸರಲ್ಲಿ ತಮ್ಮ ಕೈ ಇಡೋದಕ್ಕೆ ಮಾತ್ರ ಇವರಿಬ್ಬರೂ ಸ್ವಲ್ಪವೂ ಸಿದ್ಧರಿಲ್ಲ. ಅಷ್ಟೇ ಯಾಕೆ? ಗಾಜಾದಿಂದ ಒಬ್ಬರೇ ಒಬ್ಬರು ಪ್ಯಾಲಸ್ಟೀನ್ ನಿರಾಶ್ರಿತನನ್ನು ತಮ್ಮೊಳಗೆ ಬಿಟ್ಟುಕೊಳ್ಳಕೂ ಇವರು ಸಿದ್ಧರಿಲ್ಲ. ಗಾಜಾದ ಎದುರಿನ ಸಮುದ್ರಮಾರ್ಗ ಮತ್ತು ಮೇಲಿನ ವೈಮಾನಿಕ ಮಾರ್ಗವನ್ನು ಇಸ್ರೇಲ್ ಮುಚ್ಚಿರುವಾಗ, ನಾಗರಿಕರು ಹೊರಗೆ ಬೀಳೋಕೆ ಇರೋದು ಈಜಿಪ್ತಿನ ಗಡಿ ಮಾತ್ರ. ಅದನ್ನು ಸಂಘರ್ಷ ಆರಂಭವಾಗುತ್ತಲೇ ಈಜಿಪ್ತ್ ಸೀಲ್ ಮಾಡಿದೆ.

ಇನ್ನು ಇಸ್ರೇಲಿನ ಪೂರ್ವಕ್ಕಿರುವ ಜೋರ್ಡಾನ್. ಇದೂ ಕೂಡ ಬಾರ್ಡರ್ ಟೈಟ್ ಮಾಡಿದೆ. ಅಲ್ಲಿನ ಕೆಲವು ನಾಗರಿಕರು ಪ್ಯಾಲಸ್ಟೀನ್ ಬೆಂಬಲಕ್ಕೆ ಅಂತ ಗಡಿಬೇಲಿ ಹಾರಿ ಇಸ್ರೇಲಿಗೆ ಹೋಗುವ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಸರ್ಕಾರ ಇದರ ವಿರುದ್ಧವೇ ಇದೆ.

ಯಾಕೆ ಹೀಗೆ? ಇದೇ ಜೋರ್ಡಾನ್-ಈಜಿಪ್ತ್ ಒಂದೊಮ್ಮೆ ಇಸ್ರೆಲನ್ನು ಭೂಪಟದಿಂದಲೇ ಅಳಿಸಿ ಹಾಕಬೇಕು ಅಂತ ಹೊರಟಿದ್ವಲ್ಲ? ಹಾಗಾದ್ರೆ ಇವರ ಮುಸ್ಲಿಂ ಐಡಿಯಾಲಜಿ ಬದಲಾಯ್ತಾ? ಯಹೂದಿಗಳ ಮೇಲೆ ಸಹಾನುಭೂತಿ ಬಂತಾ? ಅಂಥದ್ದೇನೂ ಇಲ್ಲ… ಆದ್ರೆ ಮುಸ್ಲಿಂ ಏಕತೆ ಹೆಸರಲ್ಲಿ ಹಮಾಸ್ ಅನ್ನು ಬೆಂಬಲಿಸಿದ್ರೆ ನಾಳೆ ತಮ್ಮ ನೆಲದಲ್ಲೂ ಅಧಿಕಾರ ಕಳೆದುಕೊಳ್ತೇವೆ..ತಮ್ಮನ್ನೂ ಕೂಡ ಹಮಾಸ್ ಅಥವಾ ಅಂಥದೇ ತೀವ್ರವಾದಿಗಳು ರಿಪ್ಲೇಸ್ ಮಾಡ್ತಾರೆ ಅನ್ನೋ ಭಯ ಅಲ್ಲಿನ ಅಧಿಕಾರಸ್ಥರಲ್ಲಿದೆ.

ಪ್ಯಾಲಸ್ಟೀನಿಯರನ್ನು ಅಟ್ಟಾಡಿಸಿ ಹೊಡೆದಿತ್ತು ಜೋರ್ಡಾನ್!

ಜೋರ್ಡಾನಿಗೆ ಇಂಥದೊಂದು ಅನುಭವ ಅದಾಗಲೇ ಆಗಿದೆ. ಸೆಪ್ಟೆಂಬರ್ 1970. ಅವತ್ತಿನ ಜೋರ್ಡಾನ್ ರಾಜ ಹುಸೇನ್ ತನ್ನ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ಯಾಲಸ್ಟೀನಿ ನಿರಾಶ್ರಿತರಿಗೆ ಆಶ್ರಯ ಕೊಟ್ಟಿದ್ದ. ಪ್ಯಾಲಸ್ಟೀನಿಗಳೆಲ್ಲ ಸೇರಿಕೊಂಡು ಈ ಹುಸೇನನ್ನೇ ಕೆಳಗಿಳಿಸೋದಕ್ಕೆ ಕ್ರಾಂತಿ ಶುರು ಮಾಡಿದರು. ಇದಕ್ಕೆ ಅವತ್ತಿನ ಯಾಸೀರ್ ಅರಾಫತ್ ಬೆಂಬಲವೂ ಸಿಕ್ಕಿತು. ಸಿರಿಯಾ ಕೂಡ ಪ್ಯಾಲಸ್ತೀನ್ ಜತೆ ಸೇರಿಕೊಂಡ್ತು. ಆದ್ರೆ ಅಮೆರಿಕದ ಸಿಐಎ ಜೋರ್ಡಾನಿಗೆ ಸಹಕರಿಸಿದ್ದರಿಂದ ಜೋರ್ಡಾನ್ ಸೇನೆ ಪ್ಯಾಲಸ್ಟೀನಿಯರ ಮಗ್ಗಲು ಮುರಿದು ಹೊರಗಟ್ಟಿತು. ನಾಲ್ಕು ಸಾವಿರ ಪ್ಯಾಲಸ್ಟೀನಿ ಫಿದಾಯಿನ್ನರು, 600 ಸಿರಿಯಾ ಯೋಧರು, ಇತ್ತ 500 ಚಿಲ್ಲರೆ ಜೋರ್ಡಾನ್ ಯೋಧರು ಸತ್ತರು ಅನ್ನೋದು ಅಧಿಕೃತ ಲೆಕ್ಕ. ಆದರೆ, ತಮ್ಮ ಕಡೆ 25 ಸಾವಿರ ಮಂದಿ ಸತ್ತಿದ್ದಾರೆ ಅಂತ ಪ್ಯಾಲಸ್ಟೀನಿನ ಯಾಸರ್ ಅರಾಫತ್ ಹೇಳಿದ್ದ. ಇಸ್ರೇಲ್ 20 ವರ್ಷಗಳಲ್ಲಿ ಕೊಂದಿರದಷ್ಟು ಸಂಖ್ಯೆಯ ಪ್ಯಾಲಸ್ಟೀನಿಯರನ್ನು ಜೋರ್ಡಾನ್ ಕೇವಲ 11 ದಿನಗಳ ಯುದ್ಧದಲ್ಲಿ ಕೊಂದು ಹಾಕ್ತು ಅಂತ ಅವತ್ತಿನ ಇಸ್ರೇಲ್ ಸೇನಾ ಕಮಾಂಡರ್ ಒಬ್ಬ ಹೇಳಿದ್ದ. ಇಲ್ಲಿನ ಬಹಳ ಇಂಟರೆಸ್ಟಿಂಗ್ ಅಂಶ ಏನಂದ್ರೆ ಪಾಕಿಸ್ತಾನದಿಂದ ಹೋಗಿ ಜೋರ್ಡಾನ್ ಪರ ಸೇನಾಪಡೆಯನ್ನು ಮುನ್ನಡೆಸಿದ್ದು, ಆನಂತರದ ದಿನಗಳಲ್ಲಿ ಪಾಕ್ ಪ್ರಧಾನಿಯೂ ಆದಂಥ ಜಿಯಾ ಉಲ್ ಹಕ್. ಇವತ್ತು, ನಾವು ಪ್ಯಾಲಸ್ಟೀನ್ ಪರ ಅಂತ ಇಸ್ರೇಲಿನ ಧ್ವಜ ಸುಡುತ್ತಿರುವ ಪಾಕಿಸ್ತಾನಿಯರಿಗೆ ಗೊತ್ತಿರಬೇಕು- ಅತಿಹೆಚ್ಚು ಪ್ಯಾಲಸ್ಟೀನಿಯರನ್ನು ಕೊಂದ ಶ್ರೇಯಸ್ಸು ಇವರ ಖಾತೆಯಲ್ಲೇ ಇದೆ!

ಹೀಗಾಗಿ, ಮುಸ್ಲಿಮರು ಅನ್ನೋ ಕಾರಣಕ್ಕೆಪ್ಯಾಲಸ್ಟೀನ್ ಪರವಾಗಿ ಜೋರ್ಡಾನ್ ನಾಲ್ಕು ಮಾತು ಆಡಬಹುದೇ ಹೊರ್ತು ಇನ್ನೇನೂ ಮಾಡಲ್ಲ. ಏಕಂದ್ರೆ ತಾವು ಬೆಂಬಲಿಸಿದವರೇ ಬುಡಕ್ಕೆ ಇಡ್ತಾರೆ ಅನ್ನೋದು ಗೊತ್ತು.

ಈಜಿಪ್ತಿನ ಅಧಿಕಾರಸ್ಥರಿಗೆ ಬೇಕಾಗಿಲ್ಲ ಮುಸ್ಲಿಂ ಬ್ರದರ್ಹುಡ್

ಈಜಿಪ್ತಿನಲ್ಲಿ ಈಗ ಆಳುತ್ತಿರೋ ಸಿಸ್ಸಿ ಆಡಳಿತ ಕೂಡ ಮುಸ್ಲಿಂ ಬ್ರದರ್ಹುಡ್ ಅನ್ನು ಹೇಗ್ಹೋಗೋ ಪಕ್ಕಕ್ಕಿರಿಸಿ, ವಿರೋಧದ ಧ್ವನಿಗಳನ್ನೆಲ್ಲ ಹತ್ತಿಕ್ಕಿ, ಪ್ರಜಾಪ್ರಭುತ್ವ ಎಂಬ ನಾಟಕ ಕಟ್ಟಿ ಆಡಳಿತ ಮಾಡ್ತಾ ಇದೆ. ಹೀಗಿರುವಾಗ ಮುಸ್ಲಿಂ ಬ್ರದರ್ಹುಡ್ ಜತೆ ನಿಕಟ ಬಾಂಧವ್ಯ ಇರೋ ಹಮಾಸ್ ಗೆ ಅವರೇಕೆ ಸಹಾಯ ಮಾಡ್ತಾರೆ ಹೇಳಿ?

ಸುನ್ನಿ ಸೌದಿ ಮತ್ತು ಶಿಯಾ ಇರಾನ್…

ಹೀಗೆ ಅರಬ್ ದೇಶದ ಪ್ರಮುಖರ ನಿಲುವುಗಳನ್ನು ಒಂದೊಂದಾಗಿ ಸ್ಪಷ್ಟ ಮಾಡಿಕೊಳ್ಳುತ್ತ ಬಂದಾಗ ವಿಷಯ ನಿಂತುಕೊಳ್ಳುವುದು ಸುನ್ನಿ ಬಾಹುಳ್ಯದ ಸೌದಿ ಅರೇಬಿಯ ಮತ್ತು ಶಿಯಾ ಬಾಹುಳ್ಯದ ಇರಾನ್ ನಡುವೆ.

ಇಸ್ಲಾಂ ಜನಿಸಿದ ನೆಲ ಸೌದಿ ಅರೇಬಿಯ. ಇನ್ನೇನು ಇಸ್ರೇಲ್ ಜತೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದ ಆಗಿಯೇ ಹೋಯ್ತು ಅನ್ನುವ ಹಂತದಲ್ಲಿ ಸೌದಿ ಇದ್ದಾಗಲೇ ಹೀಗೊಂದು ಸಂಘರ್ಷ ತೆರೆದುಕೊಂಡಿದೆ. ಸಂಘರ್ಷ ಮುಂದುವರೆಯುತ್ತ ಹೋದ್ರೆ ಸೌದಿ ಸುಮ್ಮನೇ ಕೂರುವ ಹಾಗಿಲ್ಲ. ಯಾಕಂದ್ರೆ ಮುಸ್ಲಿಮರ ಮೇಲಾಗುತ್ತಿರುವ ದಾಳಿಯನ್ನು ನೋಡುತ್ತಲೂ ಸುಮ್ಮನೇ ಕುಳಿತಿತು ಅಂತ ಅದರ ನಾಗರಿಕರೇ ಮುನಿಸಿಕೊಳ್ತಾರೆ. ಆದರೆ, ಈ ಗಲಾಟೆಯಲ್ಲಿ ತಾನು ಸಿಕ್ಕಿಕೊಳ್ಳೋದು ಬೇಡ ಅನ್ನೋದಕ್ಕೆ ಸೌದಿಗೆ ಬಹಳ ಪ್ರಬಲ ಕಾರಣಗಳಿವೆ. ಅದು ಈಗಾಗಲೇ ತೈಲೋತ್ತರ ಆರ್ಥಿಕತೆಯನ್ನು ಹೇಗೆ ಕಟ್ಟಬೇಕು ಅಂತ ನೀಲನಕ್ಷೆ ಹಾಕಿಕೊಂಡು, ದಿನದಿಂದ ದಿನಕ್ಕೆ ಲಿಬರಲ್ ಆಗ್ತಾ, ಭಾರತ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳ ಜತೆ ಕೈಜೋಡಿಸುತ್ತ, ಭವಿಷ್ಯದಲ್ಲಿ ಆರ್ಥಿಕಶಕ್ತಿಯಾಗಿ ಉಳಿದುಕೊಳ್ಳುವುದಕ್ಕೆ ಬೇಕಾದ ಎಲ್ಲ ಕೆಲಸಗಳನ್ನೂ ಮಾಡ್ತಾ ಇದೆ. ಈ ಹಮಾಸ್, ಹಿಜ್ಬುಲ್ಲಾ ಥರದ ಜನರೆಲ್ಲ ಅದಕ್ಕೆ ಈಗ ಬೇಕಾಗಿಲ್ಲ.

ಇವರೆಲ್ಲ ಮುಂದೆ ತಮ್ಮ ಬುಡಕ್ಕೇ ಸಂಚಕಾರ ತರಬಹುದು ಅನ್ನೋ ಆತಂಕವೂ ಸೌದಿಯ ಈಗಿನ ರಾಜಮನೆತನಕ್ಕೆ ಇದ್ದೇ ಇದೆ…. ಅದೆಲ್ಲದಕ್ಕಿಂತ ಹೆಚ್ಚಾಗಿ, ಇರಾನ್ ಪ್ರಬಲವಾದಷ್ಟೂ ಸೌದಿ ಅರೇಬಿಯಾಕ್ಕೆ ಬಹಳ ದೊಡ್ಡ ಆತಂಕ. ಇರಾನ್ ಅಣ್ವಸ್ತ್ರ ಹೊಂದಬಾರದು ಅಂತ ಜಾಗತಿಕವಾಗಿ ಬಹಳ ಪ್ರಯತ್ನ ಪಡ್ತಿರೋ ದೇಶಗಳೆಂದರೆ ಇಸ್ರೇಲ್ ಮತ್ತು ಅಮೆರಿಕ. ಹಾಗೇನೇ, ಇರಾನ್ ಕೈಗೆ ಅಣ್ವಸ್ತ್ರ ಸಿಗಬಾರದು ಅಂತ ಅಷ್ಟೇ ಪ್ರಖರವಾಗಿ ಬಯಸ್ತಿರೋ ದೇಶ ಸೌದಿ ಅರೇಬಿಯಾ!

ಇನ್ ಫ್ಯಾಕ್ಟ್, ಅರಬ್ ಮುಸ್ಲಿಂ ದೇಶಗಳ ಪೈಕಿ ಅಲ್ಲಿನ ಪ್ರಾಂತೀಯ ನಾಯಕತ್ವಕ್ಕೆ ಪೈಪೋಟಿ ಇರೋದೇ ಇರಾನ್ ಮತ್ತು ಸೌದಿ ಅರೇಬಿಯಾಗಳ ನಡುವೆ.

ಅರೇ…ಇದೂ ಮುಸ್ಲಿಂ ದೇಶ, ಅದೂ ಮುಸ್ಲಿಂ ದೇಶ…ಹೀಗಿರುವಾಗ ಇಬ್ಬರೂ ಕೈಜೋಡಿಸಿದರೆ ಪಾಶ್ಚಾತ್ಯ ಜಗತ್ತೇ ಇವರಿಗೆ ಶರಣಾಗುವ ಪರಿಸ್ಥಿತಿ ಬರಬಹುದಲ್ಲ… ಇರಾನ್-ಸೌದಿ ನಡುವೆ ಏನೋ ಚಿಕ್ಕಪುಟ್ಟ ವ್ಯತ್ಯಾಸಗಳಿದ್ರೆ ಸರಿಪಡಿಸಿಕೊಳ್ಬಹುದಲ್ಲ, ಅಂತ ನೀವು ಯೋಚಿಸ್ತೀರಿ ಅಂತಾದ್ರೆ, ಗೊತ್ತಿರ್ಲಿ ಈ ಕಂದಕ ಈ ಎರಡೂ ದೇಶಗಳ ನಡುವೆ ಇರೋ ಪರ್ಷಿಯನ್ ಗಲ್ಫ್ ಥರ,,,ಹಂಗೆಲ್ಲ ಮುಚ್ಚಿಬಿಡ್ತೀನಿ ಅಂದ್ರೆ ಆಗಲ್ಲ.

ಯಾಕಂದ್ರೆ ಇದು ಇವತ್ತಿಗೆ ಹುಟ್ಟಿಕೊಂಡಿರೋದಲ್ಲ. ಇದನ್ನು ಅರ್ಥಮಾಡಿಕೊಳ್ಳೋದಕ್ಕೆ ಇಸ್ಲಾಮಿನ ರಾಜಕೀಯ ಇತಿಹಾಸವನ್ನು ಈಗ ಎದುರಿಗೆ ತರಬೇಕು. ಈಗ ಪ್ರಾರಂಭದಲ್ಲಿ 750ನೇ ಇಸ್ವಿಗೆ ಸಂಬಂಧಿಸಿದ ವಿದ್ಯಮಾನವೊಂದನ್ನು ಹೇಳಲಾಗಿತ್ತಲ್ಲ, ಅದರ ಹಿಂದು-ಮುಂದಿನ ವಿವರಗಳಿಗೆ ಹೋಗೋಣ.

ಇಸ್ಲಾಂ ಅಂತರ್ಯುದ್ಧ ಕಥನ

ಸಾಮಾನ್ಯ ಶಕೆ 610ರ ವೇಳೆಗೆ ಪ್ರವಾದಿ ಮೊಹಮ್ಮದ್ ಪೈಗಂಬರರಿಂದಾಗಿ ಈಗಿನ ಸೌದಿಯ ಬಹಳಷ್ಟು ಪ್ರದೇಶಗಳಲ್ಲಿ ಇಸ್ಲಾಂ ಪ್ರಚಲಿತಕ್ಕೆ ಬಂದಿತು. ಇಂಥ ಇಸ್ಲಾಮಿಗೆ ರಾಜಕೀಯ ನೆಲೆ ಪ್ರಬಲವಾಗಿ ಒದಗಿಬಂದಿದ್ದು 630ರಲ್ಲಿ ಮೆಕ್ಕಾವನ್ನು ಪ್ರವಾದಿ ಗೆದ್ದುಕೊಂಡಾಗ.

632ರಲ್ಲಿ ಪೈಗಂಬರರ ಮರಣವಾದ ಬೆನ್ನಲ್ಲಿ ಈ ರಾಜಕೀಯ ವಾರಸುದಾರಿಕೆ ಬಗ್ಗೆ ಭಿನ್ನಾಭಿಪ್ರಾಯ ಶುರುವಾಯ್ತು.

ಒಂದು ಗುಂಪು ಹೇಳ್ತು- ಮೊಹಮ್ಮದ್ದರ ರಕ್ತಸಂಬಂಧಿಗಳೇ ಇಸ್ಲಾಂ ಆಳ್ವಿಕೆಯ ವಾರಸುದಾರರಾಗಬೇಕು ಅಂತ. ಇನ್ನೊಂದು ಗುಂಪು ಹೇಳ್ತು, ಹಾಗೇನೂ ಇಲ್ಲ…ಪ್ರವಾದಿ ಮೊಹಮ್ಮದ್ದರ ಕಟ್ಟರ್ ಅನುಯಾಯಿಗಳಲ್ಲೇ ಸಮರ್ಥರಾದವರನ್ನು ಖಲೀಫರನ್ನಾಗಿಸಬೇಕು ಅಂತ. ಈ ಎರಡನೇ ಗುಂಪಿನವರೇ ಪ್ರಾರಂಭದಲ್ಲಿ ರಾಜಕೀಯ ಅಧಿಕಾರ ಹಿಡಿದರು. ಮೊಹಮ್ಮದ್ ಪೈಗಂಬರರ ಬಹುಕಾಲದ ಅನುಯಾಯಿ ಅಬು ಬಕರ್ ಖಲೀಫನಾಗಿ ರಶೀದುನ್ ಖಲೀಫತ್ ಪ್ರಾರಂಭವಾಯ್ತು. ಆದ್ರೆ ಮೊದಲ ಗುಂಪು ಸಹ ಪ್ರವಾದಿ ಪೈಗಂಬರರ ಅಳಿಯ ಅಲಿ ಇಬ್ನ ಅಬಿ ತಾಲಿಬರನ್ನು ತಮ್ಮ ನಾಯಕನನ್ನಾಗಿ ಆರಿಸಿಕೊಂಡ್ತು. ಶಿಯಾಗಳ ಪಾಲಿಗೆ ಅಲಿ ಅವರ ಮೊದಲ ಇಮಾಮ್.

ಅರೇಬಿಕ್ ನಲ್ಲಿ ಶಿಯಾತು ಅಲಿ – ಅಂದ್ರೆ ಅಲಿಯ ಪಕ್ಷದವರು- ಎನ್ನೋರೆಲ್ಲ ಶಿಯಾಗಳು ಅಂತ ಗುರುತಿಸಿಕೊಂಡರು. ಅದಲ್ದೇ ಮೊಹಮದ್ದರ ಮಾರ್ಗವನ್ನು ಅನುಸರಿಸ್ತೇವೆ, ಬ್ಲಡ್ ಲೈನ್ ಮುಖ್ಯ ಅಲ್ಲ ಅನ್ನೋರು ಸುನ್ನಿಗಳೆನಿಸಿಕೊಂಡರು. ಅರೇಬಿಕ್ ನ ಸುನ್ನಾ ಪದವನ್ನು ಮಾರ್ಗ ಅಂತ ಅರ್ಥೈಸಲಾಗುತ್ತದೆ.

ಅಬು ಬಕರ್ ಖಲೀಫ ಆಗಿದ್ದಾಗ, ಅಲಿ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದು, ಧಾರ್ಮಿಕ ಸಲಹೆಗಳನ್ನು ಕೊಡುತ್ತ ಉಳಿದಿದ್ದಾಗಿ ತಿಳಿದುಬರುತ್ತದೆ. ಆದರೆ ಈ ರಶುದೀನ್ ಖಲೀಫತ್ ನ ಮೂರು ಖಲೀಫರು ತೀರಿಕೊಂಡ ನಂತರ ಅಲಿಯೇ 656ರಲ್ಲಿ ಖಲೀಫರಾಗ್ತಾರೆ.

ಆದರೆ, ಅದಾಗಿ ಬಹಳ ಕಡಿಮೆ ಸಮಯದಲ್ಲೇ ಅಲಿ ಹತ್ಯೆಯಾಗಿ ಉಮಯ್ಯದ್ ಖಲೀಫತ್ ಹುಟ್ಟಿಕೊಳ್ಳುತ್ತೆ. ಇದೇ ಉಮಯ್ಯದ್ ಖಲೀಫತ್ತಿನ ಎರಡನೇ ಖಲೀಫನ ಸೇನೆ ಮುಂದೆ ಅಲಿ ಮಗ ಹುಸೆನ್ ಮತ್ತವರ ಬೆಂಬಲಿಗರನ್ನು ಇವತ್ತಿನ ಇರಾಕಿನಲ್ಲಿ ಬರುವಂಥ ಕರ್ಬಾಲಾದಲ್ಲಿ 680ರಲ್ಲಿ ಹತ್ಯೆ ಮಾಡುತ್ತಾರೆ. ಇದು ಶಿಯಾ ಮುಸ್ಲಿಮರ ಪಾಲಿಗೆ ಬಹಳ ದೊಡ್ಡ ಶೋಕದ ಘಟ್ಟ. ಇವತ್ತಿಗೂ ಶಿಯಾ ಮುಸ್ಲಿಮರು ಮೊಹರಂನಲ್ಲಿ ಆಚರಿಸುವ ಶೋಕ ಇದೇ ಘಟನೆಯ ನೆನಪಿಗಾಗಿ.

ಈ ಉಮಯ್ಯದ್ ಖಲೀಫತ್ತನ್ನು ಕೊನೆಗೊಳಿಸಿ 750ರಲ್ಲಿ ಅಬ್ಬಾಸೀದ್ ಖಲೀಫತ್ ಶುರುವಾದ ಕತೆಯನ್ನು ಪ್ರಾರಂಭದಲ್ಲಿ ಗಮನಿಸಿದೆವಲ್ಲ… ಅದರ ಪ್ರವರ್ತಕ ಅಬು ಅಲ್ ಅಬ್ಬಾಸ್ ವಂಶವು ಪ್ರವಾದಿ ಮೊಹಮ್ಮದ್ದರ ರಕ್ತಸಂಬಂಧಿ ಮತ್ತು ಅನುಯಾಯಿ ಎರಡೂ ಆಗಿದ್ದ ವ್ಯಕ್ತಿಯ ಮೂಲಕ್ಕೆ ಹೋಗಿ ನಿಲ್ಲುತ್ತದೆ.

ಇಷ್ಟೆಲ್ಲ ಚರಿತ್ರೆ ತುಣುಕುಗಳನ್ನು ಏಕೆ ಹೇಳಬೇಕಾಯ್ತೆಂದರೆ, ಇಸ್ಲಾಂ ತುಂಬ ಕ್ಷಿಪ್ರವಾಗಿ ಅರಬ್ ಮತ್ತು ಯುರೋಪಿನ ಭಾಗಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ತಿದ್ದಾಗಲೇ ಅಷ್ಟೇ ರಕ್ತಸಿಕ್ತ ಅಂತರ್ಯುದ್ಧಗಳನ್ನೂ ಕಾಣುತ್ತ ಬಂತು ಅನ್ನೋದು ವಾಸ್ತವ. ಯಾವುದು ಪರಿಶುದ್ಧ ಎಂಬ ಪ್ರಶ್ನೆಯಲ್ಲೇ ಇವೆಲ್ಲ ಅಂತರ್ಯುದ್ಧಗಳು ನಡೆದವು. ಧರ್ಮದ ಜತೆಜತೆಗೆ ಅಧಿಕಾರಹಂಚಿಕೆ ಸಂಘರ್ಷ ಉದ್ದಕ್ಕೂ ಕಾಣಸಿಗುತ್ತದೆ. ಹೀಗಾಗಿ, ಅದರ ಕಂಪನಗಳು ಮತ್ತು ಇವತ್ತಿನ ಜಿಯೊಪಾಲಿಟಿಕ್ಸ್ ವಾಸ್ತವಗಳು ಈಗಿನ ಅರಬ್ ನೆಲದಲ್ಲೂ ನಮಗೆ ಸಿಕ್ಕೇ ಸಿಗುತ್ತವೆ.

ಸೌದಿ-ಇರಾನುಗಳ ‘ಉಗ್ರ ಬೆಂಬಲ’ದ ಆಟಗಳು

ಇಷ್ಟು ಹೇಳಿದ ಮೇಲೆ, ವರ್ತಮಾನದಲ್ಲಿ ಅರಬ್ ನೆಲದ ಎರಡು ದೊಡ್ಡ ದೇಶಗಳಾದ ಇರಾನ್ ಮತ್ತೆ ಸೌದಿ ಅರೇಬಿಯಾ ನಡುವೆ ಇರುವಂಥ ಕಂದಕ ಏನು ಮತ್ತದರ ತೀವ್ರತೆ ಏನು ಅಂತ ಅರ್ಥ ಮಾಡಿಕೊಳ್ಳೋದು ಸುಲಭ. ಇರಾನ್ ಶಿಯಾ ಪ್ರಾಬಲ್ಯದ ದೇಶ. ಸೌದಿ ಅರೇಬಿಯ ಸುನ್ನಿ ಪ್ರಾಬಲ್ಯದ ದೇಶ. ಈ ಇರಾನಿನ ವಿಷಯಕ್ಕೆ ಬಂದಾಗ ಅಯತೊಲ್ಲಾ ಎಂಬ ಶಬ್ದವನ್ನು ಪ್ರಮುಖವಾಗಿ ಕೇಳ್ತೇವಲ್ಲ… ಅಂದ್ರೆ ಇರಾನಿನಲ್ಲಿ ಪ್ರಧಾನಿಯಾಗಿಯೋ, ರಾಜನಾಗಿಯೋ ಆಡಳಿತ ನಡೆಸುವವರು ಯಾರೇ ಆಗಿರಲಿ, ಅಲ್ಲಿ ಅಯತೊಲ್ಲಾ ಖೊಮೇನಿ ಹೇಳಿದ ಹಾಗೆ ಆಗುತ್ತದೆ. ಇದೊಂಥರ ಧಾರ್ಮಿಕ ಯಜಮಾನನ ಸ್ಥಾನ. ಅಗೇನ್, ಇದೂ ಸಹ ಪ್ರವಾದಿ ಮೊಹಮ್ಮದ್ದರ ಬ್ಲಡ್ ಲೈನ್ ಪರಿಕಲ್ಪನೆಯ ಮುಂದುವರಿದ ಭಾಗ. (ಶಿಯಾಗಳ ಇಮಾಮ್ ಮತ್ತು ಆಯತೊಲ್ಲ ಪರಿಕಲ್ಪನೆಗಳನ್ನು ವಿವರಿಸಹೋದರೆ ತುಂಬ ಲಂಬಿಸಿದ ಹಾಗಾಗುವುದರಿಂದ ಇಲ್ಲಿ ಬೇಡ.) ಆದರೆ ಸುನ್ನಿಗಳು ಈ ಪರಿಕಲ್ಪನೆ ಒಪ್ಪೋದಿಲ್ಲ.

ಹಾಗಂತ ಈ ಸುನ್ನಿ-ಶಿಯಾ ಫಾಲ್ಟ್ ಲೈನ್ ಒಟ್ಟಾರೆ ಮುಸ್ಲಿಂ ಸಮಾಜವನ್ನೇನೂ ಕಟ್ಟಿ ಹಾಕಿಲ್ಲ. ಜಾಗತಿಕ ರಾಜಕೀಯದಲ್ಲಿ ಇಸ್ಲಾಂ ಇಷ್ಟರಮಟ್ಟಿಗೆ ಪ್ರಭಾವ ಮತ್ತು ವಿಸ್ತರಣೆಗಳನ್ನು ಸಾಧಿಸಿರುವುದೇ ಅದಕ್ಕೆ ಸಾಕ್ಷಿ. ಆದರೆ ಅವತ್ತವತ್ತಿನ ಜಾಗತಿಕ ರಾಜಕಾರಣ ಈ ಫಾಲ್ಟ್ ಲೈನ್ ಗೆ ಜೀವ ತುಂಬುತ್ತದೆ, ತನಗೆ ಬೇಕಾದವರನ್ನು ಅಧಿಕಾರದಲ್ಲಿ ಕೂರಿಸೋಕೆ, ಬೇಡದವರನ್ನು ತೆಗೆಯೋದಿಕ್ಕೆ ಇದನ್ನು ಬಳಸಿಕೊಳ್ಳುತ್ತೆ.

ಉದಾಹರಣೆಗೆ, ಶಿಯಾಗಳ ಇರಾನಿನಿಂದ ಬೆಂಬಲ ಪಡೆಯಿತ್ತಿರೋ ಹಮಾಸ್ ವಾಸ್ತವದಲ್ಲಿ ಸುನ್ನಿ ಉಗ್ರವಾದಿಗಳ ಗುಂಪು. ಇನ್ನೊಂದು ಕಡೆ ಲೆಬನಾನಿನ ಮೂಲಕ ಇಸ್ರೇಲಿಗೆ ಅಪಾಯ ತಂದೊಡ್ಡಿರುವ ಹಿಜ್ಬುಲ್ಲ ಅನ್ನೋದು ಶಿಯಾ ಉಗ್ರರ ಗುಂಪು. ಇದಕ್ಕೂ ಇರಾನಿನದ್ದೇ ಬೆಂಬಲ. ಸಿರಿಯಾ ಎಂಬ ಸುನ್ನಿ ಬಹುಸಂಖ್ಯಾತ ದೇಶವನ್ನು ಅಲ್ಲಿನ ಎಲ್ಲ ಬಂಡಾಯಗಳ ಧ್ವನಿ ಅಡಗಿಸಿ ಅಸಾದ್ ಎಂಬ ಶಿಯಾ ಮುಸ್ಲಿಂ ಆಳುತ್ತಿರುವುದಕ್ಕೆ ಇರಾನ್ ಬೆಂಬಲವೇ ಕಾರಣ. ಸೌದಿಯ ಪಕ್ಕದಲ್ಲೇ ಇರುವ ಯೆಮೆನ್ ನಲ್ಲಿ ಶಿಯಾಕ್ಕೆ ಸೇರಿದ ಹೌತಿ ಬಂಡುಕೋರರು ಅಲ್ಲಿನ ಸರ್ಕಾರ ಉರುಳಿಸಿ ಪಾರಮ್ಯ ಸಾಧಿಸಿರೋದಕ್ಕೆ ಇರಾನ್ ಬೆಂಬಲವೇ ಕಾರಣ. ಬಹರೈನ್ ಅನ್ನು ಆಳ್ತಿರೋ ರಾಜಮನೆತನ ಸುನ್ನಿ. ಅಲ್ಲಿನ ಅಧಿಕೃತ ಲೆಕ್ಕದ ಪ್ರಕಾರ ಶಿಯಾ ಜನಸಂಖ್ಯೆಯ ಪಾಲು 49 ಶೇಕಡ. ಈ ಸಂಖ್ಯೆಯನ್ನು ಅಲ್ಲಿನ ಸುನ್ನಿ ಆಡಳಿತ ಬೇಕಂತಲೇ ಕಡಿಮೆ ಮಾಡಿ ಹೇಳ್ತಿದೆ ಅನ್ನೋ ವಾದಗಳಿವೆ. ಇಸ್ರೇಲ್ ವಿರುದ್ಧ ಹಮಾಸ್ ಕೃತ್ಯವನ್ನು ಖಂಡಿಸಿರೋ ಅರಬ್ಬರ ಪೈಕಿ ಬಹರೈನ್ ಸಹ ಒಂದು ಅನ್ನೋದನ್ನು ಗಮನಿಸಬೇಕು.

1979ರಲ್ಲಿ ತನ್ನ ನೆಲದಲ್ಲಿದ್ದ ಆಧುನಿಕತೆ ಮತ್ತು ಅಮೆರಿಕ ಪ್ರಭಾವವನ್ನು ತಿರಸ್ಕರಿಸಿ ಇರಾನ್ ಇಸ್ಲಾಮಿಕ್ ಕ್ರಾಂತಿ ಮಾಡಿದ ನಂತರ ಹಮಾಸ್ ಥರದ ಹಲವು ಸುನ್ನಿ ತೀವ್ರವಾದಿ ಗುಂಪುಗಳು ಇರಾನ್ ಕಡೆಗೆ ಆಕರ್ಷಿತವಾದವು. ಇದನ್ನು ಬ್ಯಾಲೆನ್ಸ್ ಮಾಡೋಕೆ ಸೌದಿ ವಹಾಬಿ ಉಗ್ರವಾದವನ್ನು ಬೆಳೆಸಿತು. ಸೌದಿಯು 80ರ ದಶಕದ ಇರಾನ್- ಇರಾಕ್ ಯುದ್ಧದಲ್ಲಿ ಇರಾಕನ್ನು ಬೆಂಬಲಿಸಿತು. ಅವತ್ತಿಗೆ ಇರಾಕ್ ಆಳುತ್ತಿದ್ದ ಸದ್ದಾಂ ಹುಸೇನ್ ಸುನ್ನಿ ಪಂಗಡದವನಾಗಿದ್ದುಕೊಂಡು ಶಿಯಾ ಬಹುಸಂಖ್ಯಾತ ದೇಶವನ್ನು ಆಳ್ತಾ ಇದ್ದ ಅನ್ನೋದು ಗಮನಿಸಬೇಕಾದ ಸಂಗತಿ. ಈ ಹಿಂದೆ ಪಾಕಿಸ್ತಾನದ ಮೂಲಕ ನಮಗೆ ಹೊಡೆತಕೊಟ್ಟಿದ್ದು ಇದೇ ವಹಾಬಿ ಉಗ್ರವಾದ. ಅಫಘಾನಿಸ್ತಾನದಲ್ಲಿ ಸೋವಿಯತ್ ವಿರುದ್ಧ ಹೋರಾಡಿದ್ದೂ ಹೆಚ್ಚಿನದಾಗಿ ಈ ವಹಾಬಿ ಉಗ್ರರೇ.

ಆದ್ರೆ..ಇವತ್ತಿನ ದಿನದಲ್ಲಿ, ಬಹಳ ಮುಖ್ಯವಾಗಿ 2017ರಲ್ಲಿ ಎಂಬಿಎಸ್ ಸೌದಿಯ ಚುಕ್ಕಾಣಿ ಹಿಡಿದ ನಂತರ ಆ ದೇಶ ಎಲ್ಲ ಅರ್ಥಗಳಲ್ಲಿ ಮಾಡರ್ನ್ ಆಗುವುದರತ್ತ ಹೆಜ್ಜೆ ಇಡ್ತಿದೆ. ತೈಲ ಆರ್ಥಿಕತೆ ನಂತರವೂ ಅರಬ್ ನೆಲವನ್ನು ಶಕ್ತಿಶಾಲಿಯಾಗಿರಿಸಬೇಕು ಅಂತಾದ್ರೆ ಜಗತ್ತಿನ ಎಲ್ಲ ಪ್ರತಿಭಾವಂತ ದೇಶಗಳೊಂದಿಗೆ ಕೈಜೋಡಿಸಬೇಕು ಮತ್ತೆ ಅದಕ್ಕೆ ಧಾರ್ಮಿಕ ಐಡೆಂಟಿಟಿ ಇರಿಸಿಕೊಳ್ಳುತ್ತಲೇ ಲಿಬರಲ್ ಆಗಬೇಕು ಅನ್ನೋದನ್ನು 38ರ ಹರೆಯದ ಸೌದಿಯ ಕ್ರೌನ್ ಪ್ರಿನ್ಸ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

ಬಹುಶಃ ಇದೇ ಅರಬ್ ನೆಲದ ಕಟ್ಟರ್ ಮನಸ್ಥಿತಿಗಳಿಗೆ ಸರಿಬಂದಿರಲಿಕ್ಕಿಲ್ಲ. ಅದು ಇರಾನ್ ಅನ್ನೋ ಇನ್ನೊಂದು ಧ್ರುವವನ್ನು ಸೌದಿ ಎದುರು ತಂದು ನಿಲ್ಲಿಸಿದೆ. ಯಾಕಂದ್ರೆ, 1979ರ ಇಸ್ಲಾಮಿಕ್ ರೆವಲ್ಯೂಷನ್ ಮೊದಲು ಇರಾನಿಗಿದ್ದದ್ದೂ ಮಾಡರ್ನ್ ಮುಖವೇ. ಅಲ್ಲಿ ಮಹಿಳೆಯರು ತಮಗೆ ಬೇಕಾದ ಉಡುಗೆ ಹಾಕುತ್ತಿದ್ದರು, ಸಾರ್ವಜನಿಕವಾಗಿ ಅಮೋದ-ಪ್ರಮೋದಗಳಲ್ಲಿ ಇರುತ್ತಿದ್ದರು, ಉನ್ನತ ಶಿಕ್ಷಣ ಪಡೆಯುತ್ತಿದ್ದರು. ಆಫ್ಕೋರ್ಸ್, ಅಮೆರಿಕದ ಪ್ರಭಾವ ಇದ್ದೇ ಇತ್ತು. ಅಯತೊಲ್ಲಾ ಖೊಮೆನಿ ಬಂದ ನಂತರ ಮಹಿಳೆಯರಿಗೆ ಪರದೆ ತೊಡಿಸಿದ್ದಾಯ್ತು. ಅವರೆಲ್ಲರ ಚಲನವಲನಕ್ಕೆ ಲಗಾಮು ಬಿತ್ತು. ಇತ್ತೀಚೆಗೆ ಇದೇ ಇರಾನ್ ಮಹಿಳೆಯರು ಹಿಜಾಬ್ ಕಿತ್ತೊಗೆಯುವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಅನ್ನೋದನ್ನೂ ನೆನಪಿಸಿಕೊಂಡರೆ ಅರಬ್ ನೆಲದ ಜನರ ಮಧ್ಯದಲ್ಲಿ ಏನೆಲ್ಲ ಆಕರ್ಷಣೆ-ವಿಕರ್ಷಣೆಗಳು ಕೆಲಸ ಮಾಡುತ್ತಿವೆ ಹಾಗೂ ಇವೆರಡೂ ಆಯಾಮಗಳಲ್ಲಿ ರಾಜಕೀಯ ವ್ಯಾಖ್ಯಾನಗಳನ್ನು ಕಟ್ಟುವುದಕ್ಕಿರುವ ಅವಕಾಶಗಳೇನು ಎಂಬುದರ ಹೊಳಹು ಸಿಗುತ್ತದೆ.

ಹೀಗಾಗಿ, ಹಮಾಸ್ ಮೂಲಕ ಆರಂಭ ಆಗಿರುವುದು ಒಂದರ್ಥದಲ್ಲಿ ಆಧುನಿಕತೆ ವಿರುದ್ಧದ ಇಸ್ಲಾಮಿನ ಸಂಘರ್ಷ. ಇಸ್ರೇಲ್ ವರ್ಸಸ್ ಹಮಾಸ್ ಅನ್ನೋದು ಕೇವಲ ಇದರ ಆರಂಭದ ಬಿಂದು ಮಾತ್ರ ಇರುವ ಥರ ತೋರುತ್ತಿದೆ. ಭಾರತದ ಜತೆಗೆ ಸೇರಿ ಯುರೋಪನ್ನು ಬೆಸೆಯುವಂಥ ಐಮೆಕ್ ಕಾರಿಡಾರ್ ಸೇರಿದಂತೆ ಹಲವು ಜಾಗತಿಕ ವೇದಿಕೆಗಳಲ್ಲಿ ಸೌದಿ ಮುಂಚೂಣಿಯಲ್ಲಿ ಮಿಂಚುತ್ತಾ ಇತ್ತು. ಅದೇ ಸಮಯಕ್ಕೆ ಹಲವು ನಿರ್ಬಂಧಗಳ ಉರುಳಿನಲ್ಲಿ ಬಿದ್ದ ಇರಾನಿಗೆ ಜಾಗತಿಕವಾಗಿ ಮುಖ್ಯ ವೇದಿಕೆ ಸಿಕ್ಕಿರಲಿಲ್ಲ. ಅದು ಅಲ್ಲದೇ, ಅದರ ಒಡಲಲ್ಲೇ ಮಹಿಳೆಯರು ಆಧುನಿಕತೆಗಾಗಿ ಧ್ವನಿ ಎತ್ತುತ್ತಿರೋ ವಿದ್ಯಮಾನಗಳು ವರದಿಯಾದವು.

ಈ ಎಲ್ಲ ಹಿನ್ನೆಲೆಯಲ್ಲಿ ಇಸ್ರೇಲ್-ಹಮಾಸ್ ಸಂಘರ್ಷ ಬಹಳ ನಿರ್ಣಾಯಕ. ಒಂದು ಕಡೆ, ಇದು ಅರಬ್ ಐಡೆಂಟಿಟಿಗೋಸ್ಕರ ಸೌದಿ ತನ್ನ ಹೆಜ್ಜೆ ಹಿಂದಿಡುವ ಹಾಗೆ ಮಾಡಲಿಕ್ಕೆ ಹೊರಟಿದೆ. ಜಗತ್ತಿನಾದ್ಯಂತ ಮುಸ್ಲಿಮರನ್ನು ಸಹ ಮತ್ತೆ ತಮ್ಮ ಪ್ರಖರ ಧಾರ್ಮಿಕ ಐಡೆಂಟಿಟಿಗೆ ಬದ್ಧವಾಗಿಸುವ ಧ್ರುವೀಕರಣ ಪ್ರಯತ್ನವನ್ನು ಇರಾನ್ ಮಾಡಲಿದೆ. ಇನ್ನೊಂದು ಕಡೆ, ಪಾಶ್ಚಾತ್ಯ ಶಕ್ತಿಗಳು ಈ ಮಂಥನದಲ್ಲಿ ಸ್ವತಃ ಇರಾನಿನಲ್ಲೇ ಉದಾರವಾದವು ಎದ್ದೇಳುವಂತೆ ಮಾಡುವಲ್ಲಿ ಬಹುಶಃ ತಮ್ಮ ತಮ್ಮ ದಾಳಗಳನ್ನು ಎಸೆಯಲಿಕ್ಕಿವೆ.

ರಷ್ಯ ಮತ್ತು ಚೀನಾಗಳಿಗೆ ತಮ್ಮ ತಮ್ಮ ದೇಶಗಳಲ್ಲಿ ಯಾವ ಮುಸ್ಲಿಂಪ್ರೀತಿಯೂ ಇಲ್ಲ ಅನ್ನೋದು ಆಯಾ ದೇಶಗಳಲ್ಲಿ ಅವರು ಮುಸ್ಲಿಮರನ್ನು ಉಸಿರೆತ್ತದಂತೆ ಇಟ್ಟಿರುವುದರಲ್ಲೇ ಗೊತ್ತಾಗುತ್ತದೆ. ಆದರೆ, ಜಾಗತಿಕವಾಗಿ ಅಮೆರಿಕವನ್ನು ಇಸ್ರೇಲ್ ಜತೆ ಬ್ಯೂಸಿ ಆಗಿಡುವ ಎಲ್ಲ ಪೂರಕ ಆಟಗಳನ್ನೂ ಇವು ಆಡಲಿಕ್ಕಿವೆ. ಅದಕ್ಕೆ ಅರಬ್ ನೆಲದ ಜನಮಾನಸವನ್ನು ತಮಗೆ ಬೇಕಾದ ರೀತಿ ಕದಡಲಿವೆ.

ಇನ್ನು..ಭಾರತ. ಜಾಗತಿಕವಾಗಿ ಈ ಎರಡೂ ತಂಡಗಳನ್ನು ನಿಭಾಯಿಸುವ ಕಲೆ ಭಾರತಕ್ಕೆ ಗೊತ್ತು. ಆದರೆ, ಆಂತರಿಕವಾಗಿ ಮಾತ್ರ ಭಾರತದಲ್ಲಿ ಹಲವು ಮುಸ್ಲಿಂ ಗುಂಪುಗಳು ಉನ್ಮಾದಿತರಾಗುವುದನ್ನು, ಹಲವರು ತಮ್ಮ ಮುಖವಾಡಗಳನ್ನು ಕಳಚಿ ನಿಜರೂಪ ದರ್ಶನ ನೀಡುವುದನ್ನು ನಾವು ನಿರೀಕ್ಷಿಸಬಹುದು. ಇವುಗಳನ್ನು ನಿಭಾಯಿಸುವ ಆಂತರಿಕ ಸವಾಲೇ ನಮ್ಮ ದೇಶಕ್ಕೆ ದೊಡ್ಡದು.

Leave a Reply

Your email address will not be published.

This site uses Akismet to reduce spam. Learn how your comment data is processed.