ಶಿವಮೊಗ್ಗ: ಭಾರತ ಇಂದು ಅನೇಕ ಸಾಧನೆಗಳನ್ನು ಮಾಡುತ್ತಿದ್ದು 2047 ರಲ್ಲಿ ವಿಶ್ವದ ಗುರುವಾಗಿ ಮಾರ್ಗದರ್ಶನ ಮಾಡಲಿದೆ. ಮುಂದಿನ 5 ವರ್ಷಗಳಲ್ಲಿ ಆರ್ಥಿಕತೆಯಲ್ಲಿ 3ನೇ ಸ್ಥಾನವನ್ನು ಪಡೆಯುವ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಭಾರತಾಂಬೆ ಸಿಂಹಾಸನದಲ್ಲಿ ವಿರಾಜಮಾನಳಾಗಿ ಎಲ್ಲಾ ರಂಗದಲ್ಲೂ ಮುನ್ನಡೆ ಸಾಧಿಸಿ, ಜಗತ್ತಿಗೆ ಮಾರ್ಗದರ್ಶನ ಮಾಡುವಂತಾಗಲು ನಾವು ಇನ್ನಷ್ಟು ಸೇವಾ ತತ್ಪರರು ಆಗಬೇಕು ಎಂದು ತೇಜಸ್ ಟ್ರಸ್ಟ್ (ರಿ.) ವಿಶ್ವಸ್ಥ ಮಧುಕರ್ ಹೇಳಿದರು
ಎನ್ ಎಂ ಓ ಮತ್ತು ವಿಕಾಸ ಟ್ರಸ್ಟ್ ವತಿಯಿಂದ ಒಂದೇ ದಿನ 50 ಸೇವಾ ಬಸ್ತಿಗಳಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸೇವೆಯ ಪರಿಕಲ್ಪನೆಯ ಬಗ್ಗೆ ವಿಸ್ತಾರವಾಗಿ ಮಾತನಾಡಿದ ಅವರು ಸೇವೆ ಎಂದರೆ ಪ್ರತಿಫಲಾಪೇಕ್ಷೆ ಇಲ್ಲದೆ ಎಲ್ಲರಿಗೂ ಒಳಿತನ್ನು ಬಯಸುವುದು. ಏನಾದರೂ ದಾನ ಮಾಡುವುದು ಎಂದರೆ ಅದು ನನ್ನದಲ್ಲ ಎಂಬ ಭಾವನೆಯಿಂದ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಸೆಲ್ವಮಣಿ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಒಂದು ಮಹೋನ್ನತ ಕೆಲಸವನ್ನು ಮಾಡುವ ಮೂಲಕ ಸುಮಾರು 5000 ಕ್ಕೂ ಹೆಚ್ಚು ಜನರನ್ನು ಒಂದೇ ದಿನದಲ್ಲಿ ತಪಾಸಣೆ ನಡೆಸಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ವಿದ್ಯಾರ್ಥಿ ಜೀವನ ಯಶಸ್ಸನ್ನು ಕಾಣಲು ಶುಭಾಶಯಗಳನ್ನು ತಿಳಿಸಿದರು.
ಶಿಬಿರದಲ್ಲಿ ನಗರದ ಸಿಮ್ಸ್ ವೈದಕೀಯ ಕಾಲೇಜು, ಶರಾವತಿ ದಂತ ವೈದ್ಯಕೀಯ ಕಾಲೇಜು, ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜು, ಸುಬ್ಬಯ್ಯ ವೈದ್ಯಕೀಯ ಕಾಲೇಜುಗಳಿಂದ ಸುಮಾರು 65 ವೈದ್ಯಕೀಯ ಪದವಿಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತು ಶಿವಮೊಗ್ಗದ ಪ್ರಖ್ಯಾತ ವೈದ್ಯರು ಶಿಬಿರಗಳಲ್ಲಿ ಭಾಗವಹಿಸಿ ಉಚಿತವಾಗಿ ವೈದ್ಯಕೀಯ ಸೇವೆಯನ್ನು ಸಲ್ಲಿಸಿದರು. ನಗರದ ಸುಮಾರು 4457 ಜನರಿಗೆ ವೈದ್ಯಕೀಯ ತಪಾಸಣೆಯನ್ನು ನಡೆಸಲಾಯಿತು, 65 ಮಕ್ಕಳಿಗೆ ಮತ್ತು 2257 ಜನರಿಗೆ ದಂತ ತಪಾಸಣೆಯನ್ನು ನಡೆಸಲಾಯಿತು. ಜನಸಾಮಾನ್ಯರು ಇದರ ಪ್ರಯೋಜನವನ್ನು ಪಡೆದರು. ನಗರದ 50 ಸೇವಾ ಬಸ್ತಿಗಳಲ್ಲಿ ಇರುವ ಜನರ ಮನೆಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮಧ್ಯಾಹ್ನದ ಮಾತೃ ಭೋಜನವನ್ನು ಸವಿದು ಕಾರ್ಯಕ್ರಮದ ಸಮಾರೋಪದಲ್ಲಿ ತಮ್ಮ ಅದ್ಭುತ ಅನುಭವಗಳನ್ನು ಹಂಚಿಕೊಂಡರು.