ಬೆಂಗಳೂರು: ವಸಾಹತುಶಾಹಿತ್ವದ ಕಾರಣದಿಂದಾಗಿ ಜಗತ್ತಿನಲ್ಲಿ ಅನೇಕ ಸಂಸ್ಕೃತಿಗಳು ನಶಿಸಿಹೋದವು. ಆದರೆ ಭಾರತ ವಸಾಹತು ಶಾಹಿತ್ವಕ್ಕೆ ಒಳಗಾದರೂ, ಜ್ಞಾನವನ್ನು ಎತ್ತಿ ಹಿಡಿದ ವರ್ಗದ ಕಾರಣಕ್ಕಾಗಿ ಇಂದಿಗೂ ಭಾರತೀಯತೆ ಉಳಿದಿದೆ ಎಂದು ಲೇಖಕ ಹಾಗೂ ಚಿಂತಕ ಅಜಕ್ಕಳ ಗಿರೀಶ್ ಭಟ್ ಹೇಳಿದರು.

ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಬೆಂಗಳೂರಿನ ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ಆಯೋಜಿಸಲಾಗಿರುವ ಕನ್ನಡ ಪುಸ್ತಕ ಹಬ್ಬದಲ್ಲಿ ‘ಭಾರತೀಯತೆಯ ಸತ್ತ್ವ’ ಎಂಬ ವಿಷಯದ ಕುರಿತ ಅವರು ಉಪನ್ಯಾಸ ನೀಡಿದರು.

ಜ್ಞಾನಕ್ಕೆ ಪ್ರಾಧಾನ್ಯತೆ ನೀಡಬೇಕೆನ್ನುವುದೇ ಭಾರತದ ಸತ್ವ ಮತ್ತು ಸ್ವತ್ವ. ಹಾಗಾಗಿ ಭಾರತವನ್ನು ಜ್ಞಾನಾಧಾರಿತ ರಾಷ್ಟ್ರ ಎನ್ನಲಾಗುತ್ತದೆ. ಸನಾತನ ಧರ್ಮದ ಗುಣಲಕ್ಷಣವೇ ಭಾರತೀಯತೆಯ ಗುಣಲಕ್ಷಣಗಳೂ ಆಗಿವೆ. ಅದರ ಗುಣಲಕ್ಷಣಗಳನ್ನು ಕಂಡುಕೊಳ್ಳಬೇಕಾಗಿರುವುದು ಮುಖ್ಯವಾದ ಸಂಗತಿಯಾಗಿದೆ ಎಂದರು.

ಸಮಾಜವನ್ನು ಕೂಡ ಕೇವಲ ಸಮಾಜಶಾಸ್ತ್ರದ ದೃಷ್ಟಿಯಲ್ಲಿ ನಾವು ನೋಡಲಿಲ್ಲ. ವ್ಯಕ್ತಿಯ ಅನುಭವದ ಶೋಧ, ನಿಸರ್ಗದ ಸತ್ಯದ ಶೋಧ, ಖಗೋಳದಲ್ಲಿ ಅನ್ವೇಷಣೆ, ತರ್ಕ, ತತ್ತ್ವಗಳ ಕುರಿತಾಗಿ ಶೋಧಗಳು ನಡೆದಿವೆ ಎಂದು ಅಭಿಪ್ರಾಯಪಟ್ಟರು.

ನಿರಂತರ ಸತ್ಯಶೋಧನೆಗೆ ಅವಕಾಶವಿರುವುದು ಭಾರತದ ಸತ್ತ್ವ. ಈ ಸತ್ಯಶೋಧನೆಯ ಪ್ರಕ್ರಿಯೆಯಲ್ಲಿ ಯಾವುದು ವೈಜ್ಞಾನಿಕ ಶೋಧ ಮತ್ತು ಯಾವುದು ನಂಬಿಕೆ ಎನ್ನುವುದು ನಮ್ಮ ವಿಜ್ಞಾನಿಗಳಿಗೆ ಸ್ಪಷ್ಟತೆ ಇದೆ. ಆದರೆ ಸಮಾಜ ವಿಜ್ಞಾನಿಗಳಿಗೆ ಇದು ಸ್ಪಷ್ಟವಾಗಿಲ್ಲ ಎಂದರು.

ಭಾರತೀಯ ಕ್ಷಾತ್ರಪರಂಪರೆಯಲ್ಲಿ ಪ್ರಜೆಗಳ ಸ್ವತ್ತ್ವದ ನಾಶ ಇಲ್ಲ. ನಾವು ಕಲೆ ಮತ್ತು ಆರಾಧನೆಯನ್ನು ಸಮನ್ವಯಗೊಳಿಸಿದ್ದೇವೆ. ಪ್ರತಿ ಆರಾಧನೆಯಲ್ಲಿ ಕಲಾತ್ಮಕತೆ ಇರುತ್ತದೆ‌ ಹಾಗೆಯೇ ಪ್ರತಿ ಕಲೆಯನ್ನೂ ಆರಾಧಿಸಲಾಗುತ್ತದೆ. ಇಂತಹ ಅನೇಕ ಸಂಗತಿಗಳನ್ನು ಸಮಾಜಶಾಸ್ತ್ರದ ಆಧಾರದಲ್ಲಿ ನೋಡಿದರೆ ಭಿನ್ನತೆ ಕಾಣುತ್ತದೆ. ಆದರೆ ಸತ್ತ್ವ ಅಥವಾ ಸ್ವತ್ವದ ಆಧಾರದಲ್ಲಿ ನೋಡಿದಾಗ ಏಕತೆಯ ದರ್ಶನವಾಗುತ್ತದೆ ಎಂದರು.

Leave a Reply

Your email address will not be published.

This site uses Akismet to reduce spam. Learn how your comment data is processed.