ಬೆಂಗಳೂರು: ರಂಗಭೂಮಿ ಒಂದು ಶಕ್ತಿಯುತ ಸಂವಹನ ಮಾಧ್ಯಮ. ಅನೇಕರನ್ನು ಏಕ ಕಾಲಕ್ಕೆ ತಲುಪುವ ಮತ್ತು ಒಂದು ತಂಡವಾಗಿ ಕಾರ್ಯನಿರ್ವಹಿಸುವ ಮಾಧ್ಯಮ. ರಂಗಭೂಮಿಯ ಹುಟ್ಟು ಭಾರತದಲ್ಲಾಗಿದ್ದು. ಕಾವ್ಯೇಷು ನಾಟಕಂ ರಮ್ಯಂ, ನಾಟ್ಯವೇದ ಎಂದು ನಮ್ಮ ಭಾರತೀಯ ಶಾಸ್ತ್ರಗಳಲ್ಲಿ ಗುರುತಿಸಲ್ಪಟ್ಟ ನಾಟಕದ ಮೂಲಕ ಭಾರತೀಯತೆಯನ್ನು ಕಟ್ಟಿಕೊಡುವಲ್ಲಿ ನಾವು ಸೋತಿದ್ದೇವೆ ಎಂದು ರಂಗಕರ್ಮಿ ಹಾಗೂ ಮೈಸೂರು ರಂಗಾಯಣದ ನಿಕಟಪೂರ್ವ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಹೇಳಿದರು.

ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ಆಯೋಜಿಸಲಾಗಿರುವ ಕನ್ನಡ ಪುಸ್ತಕ ಹಬ್ಬದಲ್ಲಿ ‘ಕನ್ನಡ ರಂಗಭೂಮಿ ಮತ್ತು ರಾಷ್ಟ್ರೀಯತೆ’ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿದ್ದ ಕಂಪೆನಿ ನಾಟಕಗಳಾಗಲಿ ಅಥವಾ ಪಾಶ್ಚಾತ್ಯ ನಾಟಕಗಳನ್ನು ಕನ್ನಡಕ್ಕೆ ತರುವ ಪ್ರಯತ್ನದಲ್ಲಾಗಲಿ ನಮ್ಮ ಹಿರಿಯರು ಎಂದಿಗೂ ಭಾರತೀಯತೆಯನ್ನು ಬಿಟ್ಟುಕೊಡಲಿಲ್ಲ. ಅಂದಿನ ಕಾಲದಲ್ಲಿ ನಿರ್ಮಾಣಗೊಳ್ಳುತ್ತಿದ್ದ ನಾಟಕಗಳು ಭಾರತೀಯ ಛಾಪನ್ನು ಮೂಡಿಸುತ್ತಿದ್ದವು. ಇಂದಿಗೂ ರಾಷ್ಟ್ರೀಯತೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತಿರುವ ನಾಟಕಗಳು ವೀಕ್ಷಕರ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತಿದೆ ಎಂದು ನುಡಿದರು‌.

ನಾಟಕಗಳ ಉಪಯೋಗವನ್ನು ಅರಿತ ಎಡಪಂಥಿಯರು ಅವುಗಳನ್ನು ಪ್ರತಿಭಟನೆಯ ಮಾಧ್ಯಮವಾಗಿ ಬಳಸಿಕೊಂಡರು. ಅವುಗಳ ಮೂಲಕ ಸತ್ಯದ ತಲೆಯ ಮೇಲೆ ಹೊಡೆಯುವ ರೀತಿಯಲ್ಲಿ ಅಸತ್ಯವನ್ನು ಹೇಳಲು ಪ್ರಾರಂಭಿಸಿದರು. ಅವುಗಳ ಮೂಲಕ ಸಮಾಜದ ಒಗ್ಗಟ್ಟನ್ನು ಒಡೆಯುವ, ನಾಡಿನ ಸಂಸ್ಕೃತಿಯನ್ನು ದೂರ ಮಾಡುವ ಪ್ರಯತ್ನಕ್ಕೆ ಮುಂದಾದರು ಎಂದು ಅಭಿಪ್ರಾಯಪಟ್ಟರು.

ನಾಟಕಗಳಲ್ಲಿ ಭಾರತೀಯತೆಯನ್ನು ತರುವ ಮೂಲಕ ಯುವಮನಸ್ಸುಗಳನ್ನು ಜಾಗೃತರನ್ನಾಗಿಸಬೇಕು. ನಾವು ನಾಟಕಗಳಲ್ಲಿ ಗುಣಮಟ್ಟವನ್ನು ನೀಡದೆ ಹೋದರೆ ನಮ್ಮ ತನವನ್ನು ನಾಟಕದ ಮೂಲಕ ಪ್ರಸ್ತುತಪಡಿಸುವಲ್ಲಿ ಸೋಲುತ್ತೇನೆ‌. ಆದ್ದರಿಂದ ಹೇಳಬೇಕಾದದ್ದನ್ನು ಸ್ಪಷ್ಟವಾಗಿ, ಆಕರ್ಷಕ ವೇದಿಕೆ, ಅತ್ಯುತ್ತಮ ಸಂಗೀತ, ಉತ್ತಮ ಸಾಹಿತ್ಯ, ಅದ್ಭುತ ನಿರ್ದೇಶನದ ಮೂಲಕ ಸಮಾಜದ ಮೇಲೆ ಪ್ರಭಾವ ಬೀರುವುದಕ್ಕೆ ಸಹಕಾರಿಯಾಗುವಂತೆ ಹೇಳಬೇಕು ಎಂದರು.

Leave a Reply

Your email address will not be published.

This site uses Akismet to reduce spam. Learn how your comment data is processed.