ದೆಹಲಿ: ಜಗತ್ತಿನಲ್ಲಿ ಶಾಶ್ವತ ಸುಖವನ್ನು ನೀಡುವ ಸತ್ಯ ಸರ್ವರಿಗೂ ಬೇಕಿದೆ. ಆದರೆ ಜಗತ್ತು ಹಾಗೂ ಭಾರತದ ನಡುವೆ ಇರುವ ವ್ಯತ್ಯಾಸವೆಂದರೆ ಸತ್ಯಕ್ಕಾಗಿ ಬಾಹ್ಯ ಹುಡುಕಾಟದಲ್ಲಿ ಜಗತ್ತು ನಿಂತರೆ, ನಾವು ಬಾಹ್ಯದ ಹುಡುಕಾಟದ ನಂತರ ಅಂತರಂಗದ ಶೋಧದ ಮೂಲಕ ಶಾಶ್ವತ ಸತ್ಯದೆಡೆಗೆ ಸಂಚರಿಸಿದ್ದೇವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ಭಗವಾನ್ ಮಹಾವೀರ ಸ್ವಾಮಿ ಅವರ ನಿರ್ವಾಣದ 2550ನೇ ವರ್ಷದ ನಿಮಿತ್ತ ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾದ ಕಲ್ಯಾಣಕ ಮಹೋತ್ಸವದಲ್ಲಿ ಅವರು ಮಾತನಾಡಿದರು.
ವೇದ, ಪುರಾಣ, ಎಲ್ಲಾ ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಜೈನಗ್ರಂಥ, ಬೌದ್ಧ ತ್ರಿಪೀಟಿಕಾ ಮತ್ತು ಗುರುಗ್ರಂಥ ಸಾಹಿಬ್ ನಲ್ಲಿರುವ ಸಂತರ ವಾಣಿಗಳು ಭಾರತದ ಶ್ರೇಷ್ಠ ಜ್ಞಾನ ನಿಧಿ ಎಂದು ನಾವು ನಿತ್ಯ ಪಠಿಸುವ ಏಕಾತ್ಮತಾ ಸ್ತೋತ್ರ ತಿಳಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಸಂತ ಪರಂಪರಾಚಾರ್ಯ ಶ್ರೀ ಪ್ರಜ್ಞಾಸಾಗರ ಮುನಿರಾಜರು, ಚತುರ್ಥ ಪಟ್ಟಾಚಾರ್ಯ ಶ್ರೀ ಸುನೀಲ್ ಸಾಗರ್ ಮುನಿರಾಜರು, ಪ್ರವರ್ತಕ ಡಾ. ರಾಜೇಂದ್ರ ಮುನಿ, ಆಚಾರ್ಯ ಮಹಾಶ್ರಮಣ ಅವರ ಶಿಷ್ಯೆ ಸಾಧ್ವಿ ಅಣಿಮಾ ಶ್ರೀ, ಮಹಾಸಾಧ್ವಿ ಪ್ರೀತಿರತ್ನ ಅವರೊಂದಿಗೆ ಸಕಲ ಜೈನ ಸಮಾಜದ ಪೂಜನೀಯ ಸಾಧು, ಸಂತರು ಮತ್ತು ಸಾಧ್ವಿ ಗಣ ಉಪಸ್ಥಿತರಿದ್ದರು.