ಬೆಂಗಳೂರು, ಫೆ. 19, 2024: ಕನ್ನಡದ ಖ್ಯಾತ ಸಾಹಿತಿ ಕೆ.ಟಿ.ಗಟ್ಟಿ (ಕೂಡ್ಲು ತಿಮ್ಮಪ್ಪ ಗಟ್ಟಿ)ಯವರು  ವಿಧಿವಶರಾಗಿದ್ದಾರೆ. ಅವರಿಗೆ  86 ವರ್ಷ ವಯಸ್ಸಾಗಿತ್ತು. ಅಗಲಿದ ಹಿರಿಯ ಸಾಹಿತಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದೆ.

ಕೆ. ಟಿ. ಗಟ್ಟಿಯವರು 2006ರಲ್ಲಿ ಬೆಂಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದಿದ್ದ ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದ್ದ ಶ್ರೀ ಗುರೂಜಿ ಸಮಗ್ರದ ಕನ್ನಡ ಅವತರಣಿಕೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಆರ್ ಎಸ್ ಎಸ್ ಸಂತಾಪ: ಅಗಲಿದ ಹಿರಿಯ ಸಾಹಿತಿ ಕೆ.ಟಿ.ಗಟ್ಟಿಯವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ ಎಸ್ ಉಮಾಪತಿ ಸಂತಾಪ ಸೂಚಿಸಿದ್ದಾರೆ.

ಸಂತಾಪ ಸಂದೇಶ:

ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ
ಭಾವಪೂರ್ಣ ಶ್ರದ್ಧಾಂಜಲಿ

ಆರು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ನಾಡಿನ ಖ್ಯಾತ ಕಾದಂಬರಿಕಾರ, ಭಾಷಾತಜ್ಞರಾದ ಶ್ರೀಯುತ ಕೆ.ಟಿ.ಗಟ್ಟಿಯವರು ವಿಧಿವಶರಾದ ಸುದ್ದಿ ದುಃಖಕರವಾದದ್ದು.

ಶ್ರೀ ಕೆ. ಟಿ. ಗಟ್ಟಿಯವರು ವಿದ್ಯಾರ್ಥಿಪ್ರಿಯ ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದವರು. ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ, ವೈಚಾರಿಕ ವಿಷಯಗಳಾಧಾರಿತವಾಗಿ 50ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಚೇತ್ರಕ್ಕೆ ಕೊಡುಗೆ ನೀಡಿದವರು. ಅವರ ಕಾದಂಬರಿಗಳು ನಾಡಿನ ಪ್ರಸಿದ್ಧ ವಾರಪತ್ರಿಕೆಗಳಲ್ಲಿ ಧಾರಾವಾಹಿಗಳಾಗಿ ಪ್ರಕಟಗೊಂಡಿದ್ದಷ್ಟೇ ಅಲ್ಲದೆ ಅಕ್ಷರಪ್ರೇಮಿಗಳ ಓದಿನ ಒಲವನ್ನು ಹೆಚ್ಚಿಸುವಲ್ಲಿ ಪ್ರಮುಖಪಾತ್ರವಹಿಸಿದೆ. ಕಥೆ, ಕಾದಂಬರಿ, ನಾಟಕ, ಕವಿತೆ, ಅಧ್ಯಯನಪೂರ್ಣ ಲೇಖನಗಳ ಮೂಲಕ ‘ಸಾಹಿತ್ಯ ಸವ್ಯಸಾಚಿ’ ಎನಿಸಿದ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಸಾಹಿತ್ಯ ಕೃಷಿಯ ಜೊತೆಗೆ ‘ವನಸಿರಿ’ಯ ಮೂಲಕ ಕೃಷಿಗೂ ಪ್ರಾಧಾನ್ಯತೆ ಕೊಟ್ಟ ಅವರ ನಡೆ ಮಾದರಿ.

ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಬಂಧುಗಳಿಗೆ ಆ ಭಗವಂತನು ನೀಡಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಜಿ. ಎಸ್. ಉಮಾಪತಿ
ಪ್ರಾಂತ ಸಂಘಚಾಲಕರು, ಕರ್ನಾಟಕ ದಕ್ಷಿಣ
ಬೆಂಗಳೂರು
19.02.2024

ಪರಿಚಯ: ಜುಲೈ 22, 1938ರಲ್ಲಿ ಕನ್ನಡದ ಗಡಿನಾಡು ಕಾಸರಗೋಡು ಸಮೀಪದ ಕೂಡ್ಲು ಎಂಬಲ್ಲಿ ಜನಿಸಿದ ಕೆ. ಟಿ. ಗಟ್ಟಿಯವರು ಬಾಲ್ಯದಿಂದಲೂ ಸಾಹಿತ್ಯಾಸಕ್ತಿಯನ್ನು ಒಳಗೊಂಡವರು. ಬಿ.ಎಡ್ ವಿದ್ಯಾಭ್ಯಾಸದ ನಂತರ ಕಾಸರಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇರಿದರು. ನಂತರದ ದಿನಗಳಲ್ಲಿ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕೆ.ಟಿ.ಗಟ್ಟಿಯವರು ಇಥಿಯೋಪಿಯಾಕ್ಕೆ ಭಾರತ ಸರ್ಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾದರು. 1982ರಲ್ಲಿ ಮರಳಿ ಭಾರತಕ್ಕೆ ಬಂದ ನಂತರ ಸಂಪೂರ್ಣವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡರು.

ಕಥೆ, ಕಾದಂಬರಿ, ನಾಟಕ, ಕವಿತೆ, ಸಂಶೋಧನಾ ಲೇಖನಗಳು, ವೈಚಾರಿಕ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕೆ.ಟಿ. ಗಟ್ಟಿಯವರು 50 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಶಬ್ದಗಳು’ ಅವರ ಮೊದಲ ಕಾದಂಬರಿ ಸೇರಿದಂತೆ ಮನೆ, ಅವಿಭಕ್ತರು, ಸನ್ನಿವೇಶ, ಪುನರಪಿ ಜನನಂ, ಅರಗಿನ ಅರಮನೆ, ಶಿಲಾ ತಪಸ್ವಿ, ಕಾರ್ಮುಗಿಲು, ಕರ್ಮಣ್ಯೇವಾಧಿಕಾರಸ್ತೆ, ಯುಗಾಂತರ, ಯುದ್ಧ, ಮೂರನೇಯ ಧ್ವನಿ, ನಿನ್ನೆ ನಾಳೆಗಳ ನಡುವೆ, ಝೇಂಕಾರದ ಹಕ್ಕಿ ಮುಂತಾದವು ಅವರ ಪ್ರಮುಖ ಕೃತಿಗಳು.

ಅವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಾಹಿತ್ಯ ಸವ್ಯಸಾಚಿ, ಚದುರಂಗ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

Leave a Reply

Your email address will not be published.

This site uses Akismet to reduce spam. Learn how your comment data is processed.