– ರಾಜೇಶ್ ಪದ್ಮಾರ್, ಟ್ರಸ್ಟಿ ದಿಶಾ ಭಾರತ್
ಕಾಲೇಜು ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಪೋಷಿಸಿ, ಬೆಳೆಸುವ ಹಾಗೂ ಆ ಯುವ ಮನಸ್ಸುಗಳಲ್ಲಿ ರಾಷ್ಟ್ರೀಯ ಪ್ರಜ್ಞೆ, ಜೀವನಮೌಲ್ಯಗಳು, ವ್ಯಕ್ತಿತ್ವವಿಕಸನದ ಜೊತೆಗೆ ಸಾಮಾಜಿಕ ಜಾಗೃತಿಯನ್ನು ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಮೂಡಿಸುತ್ತಿರುವ ಬೆಂಗಳೂರಿನ ಶೈಕ್ಷಣಿಕ ಸೇವಾಸಂಸ್ಥೆ ‘ದಿಶಾ ಭಾರತ್’ ಇದೀಗ 20ನೇ ವರ್ಷಕ್ಕೆ ಕಾಲಿರಿಸಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಿಸಿರುವ ದಿಶಾ ಭಾರತ್ ನ ಚಟುವಟಿಕೆಗಳು ఇದೀಗ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ವಿಸ್ತರಿಸಿದ್ದು ಅಲ್ಲಿ ಸ್ಥಾನೀಯ ಘಟಕಗಳನ್ನು ಹೊಂದಿದೆ.
2005ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಗೊಂಡ ದಿಶಾ ಭಾರತ್ನ ಪರಿಕಲ್ಪನೆಯ ಪ್ರೇರಕ ಮಾರ್ಗದರ್ಶಕರಲ್ಲೊಬ್ಬರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಸ್ವರ್ಗೀಯ ನ. ಕೃಷ್ಣಪ್ಪನವರು, “ವಿದ್ಯಾರ್ಥಿಗಳಿಗೆ ಬೇಕಾದ ಅನೇಕ ಸುವಿಚಾರಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಗೂ ರಾಷ್ಟ್ರ ಸೇವಿಕಾ ಸಮಿತಿಯ ಶಾಖೆಯಲ್ಲಿ ಸಿಗುತ್ತವೆ. ಆದರೆ ಎಲ್ಲರಿಗೂ ಶಾಖೆಗೆ ಬರಲಾಗುವುದಿಲ್ಲ, ಶಾಖೆಗೆ ಬರಲು ಸಾಧ್ಯವಾಗದವರಿಗೂ ಈ ಸುವಿಚಾರಗಳು ತಲುಪಬೇಕು ಎನ್ನುತ್ತಿದ್ದರು ನ. ಕೃಷ್ಣಪ್ಪನವರು” ಎಂದು ಸ್ಮರಿಸುತ್ತಾರೆ ದಿಶಾ ಭಾರತ್ ನ ಸಂಸ್ಥಾಪಕಿ ಹಾಗೂ ಕಾರ್ಯದರ್ಶಿ ರೇಖಾ ರಾಮಚಂದ್ರನ್.
ವಿದ್ಯಾರ್ಥಿಗಳಿಗೆ ಓದುವಿಕೆ, ಬರವಣಿಗೆ, ಅಂಕ ಗಣಿತ ಇತ್ಯಾದಿಗಳ ಜತೆಗೆ ದೇಶ, ಸಂಸ್ಕೃತಿ, ಸಮಾಜಬೋಧೆ. ವೈಯಕ್ತಿಕ ಚಾರಿತ್ಯ, ವ್ಯಕ್ತಿತ್ವ-ವಿಕಸನ ಸೇರಿದಂತೆ ಮೌಲ್ಯಾಧಾರಿತ ಆಯಾಮಗಳನ್ನು ಜೋಡಿಸಿ ಸಮಗ್ರ ಶಿಕ್ಷಣಕ್ಕೆ ಆದ್ಯತೆ ನೀಡುವುದು ಇದರ ಮೂಲ ಉದ್ದೇಶ. ಆದ್ದರಿಂದ ನಿಮ್ಮನ್ನು ನೀವೇ ಅರಿಯಿರಿ – ನಿಮ್ಮ ದೇಶವನ್ನು ತಿಳಿಯಿರಿ – ನಿಮ್ಮ ಸಂಸ್ಕೃತಿಯನ್ನು ತಿಳಿಯಿರಿ (Know Your Self, Know Your Country, Know Your Culture)ಎಂಬುದು ದಿಶಾ ಭಾರತ್ ಸಂಸ್ಥೆಯ ಆಶಯವಾಕ್ಯ.
ಬಹುಮುಖ ಚಟುವಟಿಕೆಗಳು
ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ವಿಚಾರಗಳನ್ನು, ದೇಶಭಕ್ತಿಯನ್ನು ಮೂಡಿಸಿ – ಜಾಗೃತಗೊಳಿಸುವ ಕಾರ್ಯವನ್ನು ಕಳೆದ 19 ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಶಾರೀರಿಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ, ಆಧ್ಯಾತ್ಮಿಕ ಆಯಾಮಗಳಲ್ಲಿ ಯೋಗ, ಆಪ್ತಸಲಹೆ ಮಾತುಕತೆ, ನಮಸ್ತೆ ಇಂಡಿಯಾ ಕ್ವಿಜ್, ಪ್ರೇರಕ ವಿಡಿಯೋ ವೀಕ್ಷಣೆ, ದೇಸೀ ಆಟಗಳು, ಯಶಸ್ವಿ ಸಾಧಕರ ಪ್ರೇರಣಾದಾಯಿ ಪ್ರಸಂಗಗಳು, ಸಂವಾದ, ಉಪನ್ಯಾಸ ಇತ್ಯಾದಿಗಳನ್ನೊಳಗೊಂಡ ವ್ಯಕ್ತಿತ್ವವಿಕಸನದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಜೀವನ ಕೌಶಲ್ಯ ಹಾಗೂ ನಾಯಕತ್ವ ತರಬೇತಿ ಕಾರ್ಯಕ್ರಮಗಳು, ಸೇವಾ ಇಂಟರ್ನ್ ಶಿಪ್ ಕಾರ್ಯಕ್ರಮಗಳು, ಎರಡು ದಿನಗಳ ನಿವಾಸಿ ಕಾರ್ಯಕ್ರಮಗಳು, ಸ್ವಾಮಿ ವಿವೇಕಾನಂದ ಜಯಂತಿಗೆ ಸಂಬಂಧಿಸಿ ವಿವಿಧ ಅಂತರ್ ಕಾಲೇಜು ಸ್ಪರ್ಧೆಗಳು, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳು, ಶೈಕ್ಷಣಿಕ ಕಾರ್ಯಾಗಾರಗಳು ನಿಯಮಿತವಾಗಿ ನಡೆಯುತ್ತಿವೆ.
ಕಾಲೇಜು ಪ್ರಾಧ್ಯಾಪಕರಿಗಾಗಿ 2009ರಿಂದ ಆಯೋಜಿಸಲಾಗುತ್ತಿರುವ ‘ಪ್ರೇರಣಾ – Journey from Teacher to Guru’ ಎಂಬ ವಿಶಿಷ್ಟ Faculty Development Programನಲ್ಲಿ ಸಾವಿರಾರು ಶಿಕ್ಷಕರು ಪ್ರಾಧ್ಯಾಪಕರು ಭಾಗವಹಿಸಿದ್ದಾರೆ. ತರಗತಿಯ ಒಳಗೆ ಮತ್ತು ಹೊರಗೆ ವಿದ್ಯಾರ್ಥಿಯ ಜೀವನ ರೂಪಿಸುವಲ್ಲಿ ತನ್ನ ಪಾತ್ರನಿರ್ವಹಣೆಯ ಅರಿವು ಹೆಚ್ಚುಸುವ ಈ ಕಾರ್ಯಕ್ರಮಗಳು ಶೈಕ್ಷಣಿಕ ವಲಯದಲ್ಲಿ ಬಲುಪ್ರಸಿದ್ಧ. ಇದರೊಂದಿಗೆ ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಹಲವಾರು ಶೈಕ್ಷಣಿಕ ಸೆಮಿನಾರ್ ಗಳು, ಪ್ರಾಂಶುಪಾಲರ ಸಮಾವೇಶಗಳು ಇತ್ಯಾದಿ ಬೃಹತ್ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗಿದೆ.
2020ರಿಂದ ಪ್ರತಿ ವರ್ಷ ಆಗಸ್ಟ್ 1ರಿಂದ 15ರ ತನಕ ನನ್ನ ಭಾರತ – My BHARAT ಎಂಬ 15 ದಿನಗಳ ರಾಷ್ಟ್ರಮಟ್ಟದ ಆನ್ಲೈನ್ ಅಭಿಯಾನವನ್ನು ಆಯೋಜಿಸಲಾಗುತ್ತಿದ್ದು ಕಳೆದ ನಾಲ್ಕು ಆವೃತ್ತಿಗಳಲ್ಲಿ 18 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು. ಪ್ರತಿನಿತ್ಯ ಬೆಳಗ್ಗೆ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಥಾಮಾಲಿಕೆ, ರಾಷ್ಟ್ರೀಯ ವಿಚಾರಗಳ ಕುರಿತು ಭಾಷಣ, ದೇಶಭಕ್ತಿಗೀತೆಗಳ ಗಾಯನ, ಸಾಮಾಜಿಕ ವಿಷಯಗಳ ಕುರಿತು ಏಕಪಾತ್ರಾಭಿನಯ, ರಾಷ್ಟ್ರಭಾವ ಜಾಗರಣದ ನೃತ್ಯಗಳು ಸೇರಿದಂತೆ ವಿವಿಧ ಚಟುವಟಿಕೆಗಳು ಮೂಡಿಬಂದಿವೆ. ಪ್ರತಿನಿತ್ಯ ಸಂಜೆ 7.00ಕ್ಕೆ ಉಪನ್ಯಾಸ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಗಣ್ಯ ವಿಷಯತಜ್ಞರಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರೋತ್ತರ ಭಾರತ, ಭವಿಷ್ಯದ ಭಾರತ ಇತ್ಯಾದಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸೃತಿ ಇರಾನಿ, ಚಿಂತಕರಾದ ಸಂಜೀವ್ ಸಾನ್ಯಾಲ್, ಡಾ. ಮನಮೋಹನ್ ವೈದ್ಯ, ಜೆ. ನಂದಕುಮಾರ್, ಡಾ. ಆನಂದ್ ರಂಗನಾಥ್, ಇಸ್ರೋದ ಡಾ.ಕೆ.ರಾಧಾಕೃಷ್ಣನ್ ಡಾ.ಎಸ್.ಸೋಮನಾಥ್ ಸೇರಿದಂತೆ ಅನೇಕರು ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ವರ್ಷಂಪ್ರತಿ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ವಿವಿಧ ಶಿಕ್ಷಣಸಂಸ್ಥೆಗಳ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಭಗತ್ ಸಿಂಗ್ ಕುರಿತ ನಾಟಕ, ವಾಕಥಾನ್, ಯುವಸಂವಾದ, ನನ್ನ ರಾಜ್ಯ – ಸ್ವರಾಜ್ಯ-75 ಉಪನ್ಯಾಸ, ‘ನನ್ನ ಭಾರತ’ ಕುರಿತು ಗಣ್ಯರ ಅನಿಸಿಕೆ ವಿಡಿಯೋಗಳು, ಸ್ವರಾಜ್ಯ ಸಿನೆಮಾ ಪ್ರದರ್ಶನ, ಸ್ವರಾಜ್ಯ ರಥ, ಸ್ವರಾಜ್ಯ ಸೈಕ್ಲಾಥಾನ್, ಸ್ವರಾಜ್ಯ ಬೈಕ್ ರ್ಯಾಲಿ, ಸ್ವರಾಜ್ಯ ಉತ್ಸವ್, ಸ್ವರಾಜ್ಯ ಯಾತ್ರಾ, ರಾಜ್ಯಮಟ್ಟದ ಸ್ವರಾಜ್ಯ ವಿಚಾರ ಸಂಕಿರಣ, ಸ್ವರಾಜ್ಯ ಕ್ವಿಜ್, ಸ್ವರಾಜ್ಯ ಪ್ರದರ್ಶಿನಿ, ಸ್ವರಾಜ್ಯ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನನ್ನ ಭಾರತ ಅಭಿಯಾನದಲ್ಲಿ ಆಯೋಜಿಸಲಾಗಿತ್ತು.
“ಡಿಜಿಟಲ್ ಸಂವಹನವು ವಿದ್ಯಾರ್ಥಿಗಳ ಮಧ್ಯೆ ಅತ್ಯಂತ ಪ್ರಭಾವ ಹೊಂದಿರುವುದರಿಂದ ರಾಷ್ಟ್ರೀಯ ವಿಚಾರಗಳ ಕುರಿತು ಇನ್ಫೋಗ್ರಾಫಿಕ್ಸ್, ಪೋಸ್ಟರ್ಗಳು, ವಿಡಿಯೋಗಳು, ಲೈವ್ ಭಾಷಣ, ತಜ್ಞರಿಂದ ಆನ್ಲೈನ್ ಉಪನ್ಯಾಸ ಸರಣಿಗಳನ್ನು ಫೇಸ್ಬುಕ್, ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಆಯೋಜಿಸಲಾಗುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ತಲುಪುತ್ತಿದೆ. ಪ್ರತಿನಿತ್ಯ ಬೆಳಗ್ಗೆ ಭಾರತೀಯ ಕಾಲಮಾನದ ಪಂಚಾಂಗ, ಮಹಾಪುರುಷರ ಪ್ರೇರಣಾದಾಯಿ ಸಂದೇಶದ ‘ಥಾಟ್ ಫಾರ್ ದ ಡೇ’, ದಿನ ವಿಶೇಷಗಳನ್ನು ತಿಳಿಸುವ ಸಿಗ್ನಿಫಿಕೆನ್ಸ್ ಆಫ್ ದ ಡೇ’ ಮುಂತಾದ ಡಿಜಿಟಲ್ ಉಪಕ್ರಮಗಳಿಗೆ ಉತ್ತಮ ಸ್ಪಂದನೆ ದೊರೆತಿದೆ”
ಲಾವಣ್ಯಾ ಸಂಯೋಜಕಿ, ದಿಶಾ ಭಾರತ್
2020-2021 ರಾಷ್ಟ್ರೀಯ ಶಿಕ್ಷಣ ನೀತಿಗೆ ಬೇಕಾದ ವೈಚಾರಿಕ ಸಂವಾದದ ವಿಕಸನ ‘ವಿಷನ್ ಟು ಆಕ್ಷನ್’ ಎಂಬ ವಿನೂತನ ರಾಷ್ಟ್ರಮಟ್ಟದ ಆನ್ಲೈನ್ ವೆಜಿನಾರ್ ಅನ್ನು ಪ್ರತಿ ತಿಂಗಳು ಆಯೋಜಿಸಲಾಗಿದ್ದು ಡಾ. ಎಂ. ಜಗದೀಶ್ ಕುಮಾರ್, ಡಾ. ಸುನೈನಾ ಸಿಂಗ್, ಮೋಹನ್ ದಾಸ್ ಪೈ, ಡಾ. ಅನಿಲ್ ಸಹಸ್ರಬುದ್ದೆ, ಡಾ. ಎಂ. ಕೆ. ಶ್ರೀಧರ, ಡಾ. ಗುರುರಾಜ ಕರಜಗಿ, ಡಾ. ಸಿ.ಎನ್, ಅಶ್ವಥ್ ನಾರಾಯಣ್, ತೇಜಸ್ವಿ ಸೂರ್ಯ ಸೇರಿದಂತೆ ಆನೇಕ ಶಿಕ್ಷಣತಜ್ಞರು ಪಾಲ್ಗೊಂಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾಗಿ ಸಾರ್ವಜನಿಕ, ಶೈಕ್ಷಣಿಕ ವಲಯದಲ್ಲಿ ಜಾಗೃತಿ ಮೂಡಿಸುವ ಪ್ರಾರಂಭಿಕ ಹಂತದ ಒಂದು ವರ್ಷದ ಈ ಕಾರ್ಯಕ್ರಮವು ಕರ್ನಾಟಕ ರಾಜ್ಯಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸಹಭಾಗಿತ್ವದೊಂದಿಗೆ ನಡೆದಿತ್ತು.
20ನೇ ವರ್ಷಕ್ಕೆ ಕಾಲಿಟ್ಟಿರುವ ದಿಶಾ ಭಾರತ್ನ ವಿಶೇಷ ಕಾರ್ಯಕ್ರಮವು ಫೆಬ್ರವರಿ 24, 2024ರಂದು ಬೆಂಗಳೂರಿನ ಆರ್.ವಿ. ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದ್ದು ಯುಜಿಸಿ ಅಧ್ಯಕ್ಷ ಡಾ. ಎಂ. ಜಗದೀಶ್ ಕುಮಾರ್ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ www.dishabharat.org ವೆಬ್ ಸೈಟ್ಗೆ ಭೇಟಿ ನೀಡಿ.
(ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ ಲೇಖನ)