ಇಂದು ಜಯಂತಿ
‘ಸ್ಯಾಟಲೈಟ್ ಮ್ಯಾನ್’ ಎಂದು ಖ್ಯಾತಿ ಪಡೆದಿದ್ದ ಪ್ರೊಫೆಸರ್ ಉಡುಪಿ ರಾಮಚಂದ್ರ ರಾವ್ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ನಮ್ಮ ನಾಡು ಕಂಡ ಅಪ್ರತಿಮ ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ಅವರ ಜಯಂತಿ ಇಂದು.
ಪರಿಚಯ
ಉಡುಪಿ ರಾಮಚಂದ್ರ ರಾವ್ ಅವರು ಮಾರ್ಚ್ 10, 1932ರಲ್ಲಿ ಉಡುಪಿಯ ಬಳಿ ಮಾರ್ಪಳ್ಳಿ ಎಂಬಲ್ಲಿ ಜನಿಸಿದರು. ಇವರ ತಂದೆ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ತಾಯಿ ಕೃಷ್ಣವೇಣಿಯಮ್ಮ. ರಾಮಚಂದ್ರ ಅವರು ಪ್ರಾಥಮಿಕ ಶಿಕ್ಷಣವನ್ನು ಉಡುಪಿಯಲ್ಲಿ ಮುಗಿಸಿದರು. ನಂತರ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದರು. 1953 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಅಹಮದಾಬಾದ್ನ ಗುಜರಾತ್ ವಿಶ್ವವಿದ್ಯಾನಿಲಯದ ಭೌತಿಕ ಸಂಶೋಧನೆಗೆ ಸೇರಿಕೊಂಡರು. ನಂತರ ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ನಿಂದ ಪೋಸ್ಟ್-ಡಾಕ್ಟರಲ್ ಫೆಲೋಶಿಪ್ ಪಡೆದರು. ನಂತರ ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಪಡೆದ ರಾವ್ ಅವರು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು.
ಸಾಧನೆ
ಉಡುಪಿ ರಾಮಚಂದ್ರ ರಾವ್ ಅವರು ಭಾರತದ ಕ್ಷಿಪ್ರ ಅಭಿವೃದ್ಧಿಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸುವ ಉಪಗ್ರಹವನ್ನು ನಿರ್ಮಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ನಂತರ 1966ರಲ್ಲಿ ಭಾರತಕ್ಕೆ ಮರಳಿದ ರಾಮಚಂದ್ರ ಅವರು ಆರ್ಯಭಟ ಸೇರಿದಂತೆ ಅನೇಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದ ಕೀರ್ತಿಯನ್ನು ಗಳಿಸಿದ್ದರು. ಆರ್ಯಭಟ, ಪ್ರೊಫೆಸರ್ ರಾವ್ ಅವರು ಅಭಿವೃದ್ಧಿಪಡಿಸಿದ 20ಕ್ಕೂ ಹೆಚ್ಚು ಉಪಗ್ರಹಗಳಲ್ಲಿ ಒಂದಾಗಿದೆ. 1984 ರಿಂದ 1994ರವರೆಗೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ಪ್ರೊಫೆಸರ್ ರಾವ್ ಅವರು ಬಾಹ್ಯಾಕಾಶ ಯೋಜನೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು. ರಾವ್ ಅವರ ಮೇಲ್ವಿಚಾರಣೆಯಲ್ಲಿ, ಭಾರತವು ASLV (Advanced Satellite Launch Vehicle) ರಾಕೆಟ್ ಮತ್ತು PSLV( Polar Satellite Launch Vehicle) ಯಶಸ್ವಿಯಾಗಿ ಉಡಾವಣೆ ಮಾಡಲಾಗಿತು.
1991 ರಲ್ಲಿ ರಾವ್ ಅವರು GSLV (Geosynchronous Satellite Launch Vehicle) ಅಭಿವೃದ್ಧಿ ಮತ್ತು ಕ್ರಯೋಜೆನಿಕ್ ತಂತ್ರಜ್ಞಾನದ ಅಭಿವೃದ್ಧಿಯನ್ನು ಪ್ರಾರಂಭಿಸಿದರು. ನಂತರ 2013ರಲ್ಲಿ ಸ್ಯಾಟಲೈಟ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದೇ ವರ್ಷ ಪಿಎಸ್ಎಲ್ವಿ ಭಾರತದ ಮೊದಲ ಅಂತರಗ್ರಹ ಮಿಷನ್ “ಮಂಗಳಯಾನ್” ಅನ್ನು ಪ್ರಾರಂಭಿಸಿದ್ದರು. ಬಳಿಕ ಭಾಸ್ಕರ, ಆ್ಯಪಲ್, ರೋಹಿಣಿ, ಇನ್ಸಾಟ್–1, ಇನ್ಸಾಟ್–2, ಐಆರ್ಎಸ್–1 ಎ, ಐಆರ್ಎಸ್–1ಬಿ ಸೇರಿದಂತೆ ಒಟ್ಟು 18 ಉಪಗ್ರಹಗಳ ನಿರ್ಮಾಣದಲ್ಲಿ ಮುಖ್ಯ ಮಾರ್ಗದರ್ಶಕರರಾಗಿದ್ದರು.
ಪ್ರಶಸ್ತಿ
ಉಡುಪಿ ರಾಮಚಂದ್ರರಾವ್ ಅವರ ಸಾಧನೆಗೆ ಅನೇಕ ಪ್ರಶಸ್ತಿಗಳು ಸಂದಿವೆ. 1975 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು, ಅದೇ ವರ್ಷ ವಿಕ್ರಮ್ ಸಾರಾಭಾಯ್ ಪ್ರಶಸ್ತಿ ನೀಡಲಾಯಿತು. ನಂತರ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, 1976 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ 2017 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರತಿದೆ.
ಉಡುಪಿ ರಾಮಚಂದ್ರರಾವ್ ಅವರು ಜುಲೈ 24, 2017 ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು.