ಅಖಿಲ ಭಾರತೀಯ ಪ್ರತಿನಿಧಿ ಸಭಾ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಅಭಿಮತ

ಮಹಾರಾಷ್ಟ್ರ : ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ಈ ಬಾರಿ  ನಾಗಪುರದ ರೇಶಮ್ ಬಾಗ್ ನ ಸ್ಮೃತಿಭವನದಲ್ಲಿ ಮಾರ್ಚ್ 15 – 17 ರವರೆಗೆ ನಡೆಯಲಿದೆ. ಈ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಅವರು ಇಂದು(ಫೆ.13, 2024) ರಂದು ಪತ್ರಿಕಾಗೋಷ್ಠಿ ನಡೆಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಳೆದ 99 ವರ್ಷಗಳಲ್ಲಿ ಒಂದು ಸಾಮಾಜಿಕ ಸಂಘಟನೆಯ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಈ ಕಾರ್ಯಗಳಿಗೆ ಮುಂಬರುವ 2025ರ ವಿಜಯದಶಮಿಗೆ ಶತಮಾನೋತ್ಸವ ಪೂರ್ಣಗೊಳ್ಳಲಿದೆ. ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಂಘದ ಅತ್ಯಂತ ದೊಡ್ಡ ಮತ್ತು ಮಹತ್ವದ ಸಭೆ. ಈ ಬಾರಿಯ ಎಬಿಪಿಎಸ್ 2024 ನಾಗ್ಪುರದ ರೇಶಮ್ ಬಾಗ್ ನಲ್ಲಿ ಮಾರ್ಚ್ 15, 16 ಮತ್ತು 17ರಂದು ಮೂರು ದಿನಗಳ ಕಾಲ ನಡೆಯಲಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ವಾರ್ಷಿಕ ಬೈಠಕ್‌ ನಾಗ್ಪುರದಲ್ಲಿ ನಡೆಯುವುದು ವಾಡಿಕೆ. ಆದರೆ ಕೋವಿಡ್ ಕಾರಣದಿಂದಾಗಿ ಈ ಸಭೆಯು ನಾಗ್ಪುರದಲ್ಲಿ 6 ವರ್ಷಗಳ ನಂತರ ನಡೆಯುತ್ತಿದೆ. ಈ ಹಿಂದೆ ಕೊರೋನಾಕ್ಕೂ ಮೊದಲು 2018 ರಲ್ಲಿ ನಡೆದಿತ್ತು. ಈ ಬೈಠಕ್ ನಲ್ಲಿ 1529 ಮಂದಿ ವಿವಿಧ ಜವಾಬ್ದಾರಿಗಳನ್ನು ಹೊಂದಿರುವ ಪ್ರಾಂತ, ಕ್ಷೇತ್ರ, ಅಖಿಲ ಭಾರತೀಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಈ ಮೂರು ದಿನಗಳು ನಡೆಯುವ ಸಭೆಯಲ್ಲಿ ದೇಶದಾದ್ಯಂತ ಶಾಖೆಗಳ ಮೂಲಕ ನಡೆಯುವ ಸಂಘಕಾರ್ಯದ ಸಮೀಕ್ಷೆಯನ್ನು ಪ್ರಸ್ತುತ ಪಡಿಸಲಾಗುತ್ತದೆ. ಮಾರ್ಚ್ 15ರಂದು ಸಭೆಯ ಆರಂಭದ ನಂತರ ಸರಕಾರ್ಯವಾಹರು ಇದರ ಕುರಿತು ವರದಿಯನ್ನು (ಪ್ರತಿವೇದನ್) ನೀಡಲಿದ್ದಾರೆ. ಅದರಲ್ಲಿ ವಿಸ್ತಾರವಾಗಿ ಮಾಹಿತಿಗಳನ್ನು  ನೀಡಲಾಗುವುದು. ಇದರ ಜೊತೆಗೆ ನಮ್ಮ ಸಂಘಟನೆಯ ಕಾರ್ಯವಿಸ್ತಾರ ಹೇಗೆ ಆಗುತ್ತಿದೆ, ಮುಂಬರುವ ವರ್ಷದ ಕಾರ್ಯವಿಸ್ತಾರದ ಯೋಜನೆಗಳ ಕುರಿತು ಕೂಡ ಚರ್ಚಿಸಲಾಗುತ್ತದೆ ಹಾಗೂ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಮುಂಬರುವ ಸಂಘದ ಶತಾಬ್

ದಿ ವರ್ಷದ ದೃಷ್ಟಿಯಿಂದ ವಿಶೇಷ ಯೋಜನೆಗಳನ್ನೂ ಕೈಗೊಳ್ಳಲಾಗುತ್ತಿದೆ. ಈ ಯೋಜನೆಗಳಿಗಾಗಿ ಕಾರ್ಯಕರ್ತರು ತಮ್ಮ ಮಹತ್ವಪೂರ್ಣ ಸಮಯವನ್ನೂ ನೀಡುತ್ತಿದ್ದಾರೆ. ಹಾಗಾಗಿ ಇದರ ಕುರಿತು ಕೂಡ ವಿಶೇಷ ಚರ್ಚೆ ಕೂಡ ನಡೆಯಲಿದೆ. ಈ ಸಂದರ್ಭದಲ್ಲಿ ನಮ್ಮ ನಿಯಮಿತ ಕಾರ್ಯದ ಜೊತೆಗೆ ವಿಸ್ತಾರದ ಕಾರ್ಯಕ್ಕೆ ಕೂಡ ಮಹತ್ವವನ್ನು ನೀಡಲಾಗಿದ್ದು ಈಗಾಗಲೇ ಒಟ್ಟು 68000 ಶಾಖೆಗಳು ಕಾರ್ಯ ನಿರ್ವಹಿಸುತ್ತಿದೆ. ಇನ್ನು ಮುಂದಿನ ವರ್ಷ 100 ವರ್ಷ ಪೂರೈಸುವುದರೊಳಗೆ ನಮ್ಮ ಶಾಖೆಗಳು 1 ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. ಸಂಘದ ಶತಾಬ್ದಿ ವರ್ಷ 2025ರ ವಿಜಯದಶಮಿ ಯಿಂದ 2026ರ ವಿಜಯದಶಮಿವರೆಗಿನ ಕಾಲಘಟ್ಟದಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಮುಂದಿನ ದಿನಗಳಲ್ಲಿ ಚರ್ಚಿಸಲಾಗುತ್ತದೆ ಎಂದರು.


ಈ ಬೈಠಕ್ ನಲ್ಲಿ ಸರಸಂಘಚಾಲಕರು, ಸರಕಾರ್ಯವಾಹರು ಸೇರಿದಂತೆ ದೇಶಾದ್ಯಂತ ನಡೆಯುವ ಅಖಿಲ ಭಾರತೀಯ ಅಧಿಕಾರಿಗಳ ಪ್ರವಾಸಗಳ ನಿಶ್ಚಯವಾಗುತ್ತದೆ. ಪ್ರಾಂತಗಳಿಂದ ಬಂದಿರುವಂತಹ ಪ್ರತಿನಿಧಿಗಳು ತಮ್ಮ ಪ್ರಾಂತದಲ್ಲಾಗುತ್ತಿರುವ ವಿದ್ಯಮಾನಗಳ ಕುರಿತು ಮತ್ತು ಸಾಮಾಜಿಕ ದೃಷ್ಟಿಯಿಂದ ಅದರ ಪರಿಣಾಮಗಳು ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಏನು ಪರಿಹಾರಗಳನ್ನು ಕೈಗೊಳ್ಳಬಹುದೆನ್ನುವುದನ್ನು ಇಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ಪಂಚಪರಿವರ್ತನೆಯನ್ನು ಎಲ್ಲರೊಂದಿಗೆ ಸೇರಿ ಕೆಲಸ ಮಾಡಲಾಗುತ್ತದೆ. ಹಾಗೆಯೇ ಸಂವಿಧಾನ ಜಾರಿಯಾಗಿ 75ನೇ ವರ್ಷದ ಸಂದರ್ಭದಲ್ಲಿ ಇವುಗಳಲ್ಲಿ 5ನೇ ಅಂಶವಾದ ನಾಗರಿಕ ಕರ್ತವ್ಯದ ಕುರಿತು ದೇಶವ್ಯಾಪಿ ತಿಳಿಸುವ ಅಗತ್ಯವಿದೆ. ಅದರ ಕುರಿತು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ, ಎಲ್ಲ ಸಹ ಸರಕಾರ್ಯವಾಹರು ಮತ್ತು ಸಂಘ ಪ್ರೇರಿತ ವಿವಿಧ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳೂ ಸಹ ಈ ಬೈಠಕ್ ಗೆ ಅಪೇಕ್ಷಿತರು. ಇದಲ್ಲದೆ ಎಲ್ಲಾ ಕ್ಷೇತ್ರ ಮತ್ತು ಪ್ರಾಂತಗಳ ಸಂಘಚಾಲಕರು ಮತ್ತು ಕಾರ್ಯವಾಹರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.


ಈ ಬೈಠಕ್ ನಲ್ಲಿ ಸರಕಾರ್ಯವಾಹರ ಮತ್ತು ಕ್ಷೇತ್ರೀಯ ಸಂಘಚಾಲಕರ ಆಯ್ಕೆಗೆ ಚುನಾವಣೆಯಾಗಲಿದೆ. ಪ್ರಾಂತಗಳ ಸಂಘಚಾಲಕರ ಆಯ್ಕೆ ಅದಾಗಲೇ ಆಯಾ ಪ್ರಾಂತಗಳಲ್ಲಿ ನಡೆದಿದೆ. ಮಾರ್ಚ್ 15ರಂದು ಆರಂಭವಾಗುವ ಈ ಬೈಠಕ್ ಮಾರ್ಚ್ 17ರ ವರೆಗೆ ನಡೆಯಲಿದೆ. ಮಾರ್ಚ್ 17ರಂದು ಸರಕಾರ್ಯವಾಹರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾರೆ ಎಂದು ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖರಾದ ನರೇಂದ್ರ ಕುಮಾರ್‌ ಹಾಗೂ ಅಲೋಕ್‌ ಕುಮಾರ್‌ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.