ಆರ್ ಎಸ್ ಎಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಮರು ಆಯ್ಕೆ

ನಾಗಪುರ, ಮಾರ್ಚ್ 17, 2024: ಇಲ್ಲಿನ ರೇಶಿಂಬಾಗ್ ನ ಸ್ಮೃತಿಭವನದಲ್ಲಿ ನಡೆದ ಮೂರು ದಿನಗಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಂಪನ್ನಗೊಂಡಿತು. ಸಭೆಯ ಕೊನೆಯ ದಿನ “ರಾಷ್ಟ್ರೀಯ ಪುನರುತ್ಥಾನಕ್ಕಾಗಿ ರಾಮಮಂದಿರ” ಎಂಬ ನಿರ್ಣಯವನ್ನು ಜಾರಿಗೊಳಿಸಲಾಯಿತು. ಹಾಗೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರ ಚುನಾವಣೆ ಪ್ರಕ್ರಿಯೆಯೂ ನಡೆದಿದ್ದು ದತ್ತಾತ್ರೇಯ ಹೊಸಬಾಳೆಯವರು ಸರಕಾರ್ಯವಾಹರಾಗಿ ಮರುಆಯ್ಕೆಯಾದರು.

ಸರಕಾರ್ಯವಾಹರ ಪತ್ರಿಕಾಗೋಷ್ಠಿ:

ಅಖಿಲ ಭಾರತೀಯ ಪ್ರತಿನಿಧಿ ಸಭಾದ ಕೊನೆಯ ದಿನ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್ ಎಸ್ ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ರಾಷ್ಟ್ರದ ಜನತೆಯ ಹೃದಯದೊಳಗಡೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರವೇಶಿಸುತ್ತಿದೆ ಹಾಗೂ ಸಮಾಜದಲ್ಲಿ ಸಂಘದ ಪ್ರಭಾವ ವೃದ್ಧಿಸುತ್ತಿದೆ. ಅದರ ಫಲವಾಗಿ ಸಂಘದ ಆಯಮಗಳು, ಶಾಖೆಗಳು ಮತ್ತು ಪ್ರತಿನಿಧಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ ಎಂದರು.

ಹಲವು ವರ್ಷಗಳ ಕಾಲ ಸಂಘದ ಕಾರ್ಯಕರ್ತ, ಸ್ವಯಂಸೇವಕರು ಮತ್ತು ಸಂಪೂರ್ಣ ಹಿಂದೂ ಸಮಾಜ ಈ ರಾಷ್ಟ್ರದ ಸಭ್ಯತೆ ಮತ್ತು ಸಂಸ್ಕೃತಿಯ ಅಸ್ಮಿತೆಯ ಪ್ರತೀಕವಾದ ಯಾವ ರಾಮಜನ್ಮಭೂಮಿ ಮತ್ತು ಅಲ್ಲೊಂದು ಮಂದಿರ ನಿರ್ಮಾಣದ ಕನಸನ್ನು ಕಂಡು ಆಗ್ರಹಪೂರ್ವಕವಾಗಿ ಅದಕ್ಕಾಗಿ ಶ್ರಮಿಸಿದ್ದರೋ ಅದು ಇಂದು ನನಸಾಗಿದೆ. ಶ್ರೀರಾಮ ಭಾರತೀಯ ನಾಗರಿಕತೆಯ ಸಂಕೇತ, ರಾಮಮಂದಿರ ನಮ್ಮ ಸಂಸ್ಕೃತಿಯ ಅಸ್ಮಿತೆ ಎನ್ನುವುದನ್ನು ಜನವರಿ 22, 2024ರಂದು ನಡೆದ ರಾಮಲಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ಸಾಕ್ಷೀಕರಿಸುತ್ತದೆ. ಆನಂದದ ಸಂಗತಿಯೆಂದರೆ ದೇಶಾದ್ಯಂತ ಸ್ವಯಂಸೇವಕರು ಮತ್ತು ರಾಮಮಂದಿರದ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕಾಗಿ ಕೈಜೋಡಿಸಿದವರ ಪ್ರಯತ್ನದ ಫಲವಾಗಿ ಸುಮಾರು 20 ಕೋಟಿ ಮನೆಗಳ ಸಂಪರ್ಕ ಮಾಡಲಾಗಿದೆ. ಇದರಿಂದಾಗಿ ಜಗತ್ತಿನ ಇತಿಹಾಸದಲ್ಲಿ 15 ದಿನಗಳ ಕಾಲ ನಡೆದ ಅಭಿಯಾನವೊಂದು ಇಷ್ಟು ವ್ಯಾಪಕವಾಗಿ ಜನಸಂಪರ್ಕವನ್ನು ಸಾಧಿಸುವ ದಾಖಲೆಯನ್ನು ಸಹಜವಾಗಿ ನಿರ್ಮಿಸಲು ಸಾಧ್ಯವಾಗಿದೆ. ಇದು ಸಾಧ್ಯವಾಗಿದ್ದು ಎರಡು ಕಾರಣಗಳಿಂದಾಗಿ. ಮೊದಲನೆಯದ್ದು ಮಂದಿರ ನಿರ್ಮಾಣದ ರಾಷ್ಟ್ರೀಯ ಅಭಿಯಾನದಲ್ಲಿ ರಾಷ್ಟ್ರದ ಜನ ಸಹರ್ಷದಿಂದ ಕೈಜೋಡಿಸಿದ್ದು ಮತ್ತು ಎರಡನೇ ಕಾರಣ ಪ್ರತಿ ಮನೆಗೂ ಈ ವಿಷಯವನ್ನು ತಲುಪಿಸಬಲ್ಲ ಸಂಘದ ಸಂಘಟನಾ ಸಂಪರ್ಕದ ಜಾಲ. ಹಾಗಾಗಿ ಸಮಾಜದ ಕಾರ್ಯವನ್ನು ಸಮಾಜವೇ ಮಾಡಿರುವುದರಿಂದ, ರಾಷ್ಟ್ರದ ಕಾರ್ಯವನ್ನು ರಾಷ್ಟ್ರವೇ ಜೊತೆಯಾಗಿ ಸಾಧಿಸಿದ್ದರಿಂದ ನಾವೆಲ್ಲರೂ ಪರಸ್ಪರ ಅಭಿನಂದನೆಗಳನ್ನು ಸಲ್ಲಿಸಿಕೊಳ್ಳಬೇಕಿದೆ ಎಂದರು.

ಸಂಘದ ಶತಾಬ್ದಿ ವರ್ಷದ ನಿಮಿತ್ತ ಸಂಘಟನಾ ದೃಷ್ಟಿಯಿಂದ ಸಂಘದ ಕಾರ್ಯವಿಸ್ತಾರದ ಕುರಿತು ಯೋಜನೆಗಳನ್ನು ರೂಪಿಸಲಾಗಿದೆ. ನಾವು ಸಂಘಕಾರ್ಯದ ದೃಷ್ಟಿಯಿಂದ ಇರುವ ಎಲ್ಲಾ ಮಂಡಲ, ಖಂಡ ಮತ್ತು ನಗರಗಳಲ್ಲಿ ನಿತ್ಯಶಾಖೆ ಅಥವಾ ಸಾಪ್ತಾಹಿಕ ಮಿಲನ್ ಹೊಂದುವ ಸಂಕಲ್ಪವನ್ನು ಹೊಂದಿದ್ದೇವೆ. 2025ರ ವಿಜಯದಶಮಿಯಿಂದ ಸಂಘದ ಶತಾಬ್ದಿ ವರ್ಷ ಪ್ರಾರಂಭವಾಗಲಿದ್ದು ಅದಕ್ಕೂ ಮುನ್ನ ಈ ಗುರಿಯನ್ನು ತಲುಪುವ ನಿರೀಕ್ಷೆ ಇದೆ. ಕೋವಿಡ್ ಮಹಾಮಾರಿಯ ಕಾರಣ ಸ್ವಾಭಾವಿಕವಾಗಿ ಸಂಘದ ಕಾರ್ಯವಿಸ್ತಾರದ ವೇಗ ಕುಂಠಿತಗೊಂಡಿತ್ತು. ಕೊರೋನಾ ನಂತರ ಮರಳಿ ವೇಗ ಪಡೆದುಕೊಂಡಿದೆ. ಸಂಘಕಾರ್ಯ ಸರ್ವಸ್ಪರ್ಶಿಯಾಗಬೇಕಿದೆ. ಪ್ರಸ್ತುತ ಹಿಂದೂ ಸಮಾಜದ ಎಲ್ಲಾ ಪಂಥ, ಸಂಪ್ರದಾಯ, ಜಾತಿ, ವರ್ಗಗಳ ಕಾರ್ಯಕರ್ತರ ಸಹಭಾಗಿತ್ವ ಸಂಘದಲ್ಲಿದೆ.

ದೇಶದ ಪ್ರತಿ ಭಾಗದಲ್ಲೂ ಸಂಘಕಾರ್ಯ ವ್ಯಾಪಿಸಿದೆ. ಸಮಾಜದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ದೃಷ್ಟಿಯಿಂದ ಸಂಘ ಕೇವಲ ಸಂಘಟನೆಯಾಗಿರದೆ ಅಕ್ಷರಶಃ ಒಂದು ರಾಷ್ಟ್ರೀಯ ಅಭಿಯಾನವಾಗಿದೆ. ಸಂಘಕಾರ್ಯ ಸ್ವಯಂಸೇವಕರ ಸಹಭಾಗಿತ್ವದಿಂದ ನಡೆಯುತ್ತದೆ. ಸಮಾಜದ ಯಾವುದೇ ಪ್ರಕಾರದ ಒಳ್ಳೆಯ ಕೆಲಸಕ್ಕೆ ಸಹಯೋಗವನ್ನು ನೀಡುವುದಕ್ಕಾಗಿ ಸ್ವಯಂಸೇವಕರನ್ನು ತಯಾರಿ ಮಾಡಲಾಗುತ್ತದೆ. ಪರಿವರ್ತನೆಯ ದೃಷ್ಟಿಯಿಂದ ಕುಟುಂಬದಲ್ಲಿ ಜೀವನಮೌಲ್ಯ, ಪರಿಸರ ಸಂರಕ್ಷಣೆ, ಸಾಮಾಜಿಕ ಸಮರಸತಾ, ಸಮಾಜದಲ್ಲಿನ ಕುರೀತಿಯನ್ನು ದೂರಗೊಳಿಸುವುದಕ್ಕಾಗಿ, ಭಾರತವನ್ನು ಸಮೃದ್ಧಶಾಲಿ, ಸಮರ್ಥಶಾಲಿ, ಸ್ವಾಭಿಮಾನಿ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವುದಕ್ಕಾಗಿ ಸಮಾಜದ ಪ್ರತಿ ವರ್ಗದ ಜನ ಸಂಘಕಾರ್ಯದಲ್ಲಿ ವಿಶ್ವಾಸವಿಟ್ಟು ಜೊತೆಗೂಡುತ್ತಿದ್ದಾರೆ. ಇದರಿಂದಾಗಿ ನಮ್ಮಲ್ಲಿ ಧನ್ಯತಾ ಭಾವವಿದೆ, ಸಮಾಜಕ್ಕೆ ಕೃತಜ್ಞತೆಯೂ ಇದೆ.

ಸಮಾಜ ಮತ್ತು ಸಂಘ ಬೇರೆಯಲ್ಲ. ಇದು ನಮ್ಮ ಕಲ್ಪನೆ. ಏಕೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಮಾಜದೊಳಗಿನ ಒಂದು ಸಂಘಟನೆಯಲ್ಲ ಆದರೆ ಸಂಪೂರ್ಣ ಸಮಾಜವನ್ನು ಸಂಘಟಿಸುವ ಸಂಘಟನೆ. ಸಂಘದ ಸಾಮಾಜಿಕ ಸದ್ಭಾವದ ಕಾರ್ಯದಲ್ಲಿ ಸಮಾಜದ ಎಲ್ಲಾ ವರ್ಗದ ಜನರಿದ್ದಾರೆ. ನಮ್ಮ ಎಲ್ಲಾ ಗತಿವಿಧಿಗಳು ರಾಷ್ಟ್ರೀಯ ಆಂದೋಲನದ ಭಾಗವಾಗಿವೆ. ಸಮಾಜದಲ್ಲಿ ಕುಟುಂಬದೊಳಗಡೆ ಉತ್ತಮ ಮಾತುಕತೆ ಮೂಡುವಂತೆ ಮಾಡಲು, ಪರಿಸರವನ್ನು ರಕ್ಷಿಸುವಲ್ಲಿ, ಸಾಮಾಜಿಕ ಸಮರಸತೆಯನ್ನು ಉಂಟುಮಾಡುವುದು ಯಾವುದೇ ಒಂದು ಸಂಘಟನೆಯ ಕೆಲಸವಲ್ಲ, ಅದು ಇಡೀ ಸಮಾಜದ ಕೆಲಸ. ಹಾಗಾಗಿ ಒಂದು ಸಂಘಟನೆಗಿಂತ ಹೆಚ್ಚಾಗಿ ಸಂಘ ಒಂದು ಅಭಿಯಾನವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಸಂಘದ ನಿತ್ಯಕಾರ್ಯ ಸಂಘಟನೆಯ ಮೂಲಕ ನಡೆಯುತ್ತದೆ ಆದರೆ ಪರಿವರ್ತನೆಯ ಕಾರ್ಯ ಸಮಾಜದ ಮೂಲಕವೇ ನಡೆಯಬೇಕಿದೆ. ಇಂತಹ ಪ್ರಯತ್ನಗಳು ಅದಾಗಲೇ ಸಮಾಜದಲ್ಲಿ ನಡೆಯುತ್ತಿದ್ದು ಆ ಎಲ್ಲಾ ಸಜ್ಜನಶಕ್ತಿಗಳೊಂದಿಗೆ ಸೇರಿ ಸಂಘ ಕೆಲಸ ಮಾಡುತ್ತದೆ. ಸಮಾಜದ ಕೆಲಸಕ್ಕೆ ಅವಶ್ಯಕ ಆಂತರಿಕ ಶಕ್ತಿ ಒದಗಿಸುವುದು ಸಂಘದ ಕೆಲಸ, ಅದನ್ನು ಮಾಡುತ್ತೇವೆ. ಶತಾಬ್ದಿಯ ವರ್ಷದಲ್ಲಿ ಸಮಾಜದ ಕೆಲವು ಆಯಾಮಗಳ ಜೊತೆಗೆ ನಾವು ಮುನ್ನಡೆಯಲಿದ್ದೇವೆ.

ದೇಶದ ಪ್ರಗತಿಯ ವೇಗವನ್ನು ಕುಂಠಿತಗೊಳಿಸುವ ಶಕ್ತಿಗಳು ಕಾಲಕಾಲಕ್ಕೆ ತಲೆಯೆತ್ತುತ್ತವೆ. ಸಮಾಜದಲ್ಲಿ ಸ್ಪೃಶ್ಯ- ಅಸ್ಪೃಶ್ಯ, ಉಚ್ಚ-ನೀಚ ಭಾವದಿಂದ ಕೆಲವು ಘಟನೆಗಳಾದಾಗ ಸಂಘದ ಕಾರ್ಯಕರ್ತ ಧಾರ್ಮಿಕ, ಸಾಮಾಜಿಕ ನೇತೃತ್ವವನ್ನು ವಹಿಸಿಕೊಂಡು ಅವುಗಳನ್ನು ಸರಿಪಡಿಸುವ ಪ್ರಯತ್ನವನ್ನು ಮಾಡುತ್ತಾರೆ.  ಕೆಲವು ಸಲ ಸಮಾಜದಲ್ಲಿ ಇಂತಹ ವಿಷಯಗಳ ಕುರಿತು ಇಂದಿಗೂ ಜಾಗೃತಿ ಮೂಡಿಸುವ ದೌರ್ಭಾಗ್ಯದ ಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಸಮಾಜದ ಏಕತೆ, ಸಾಮಾಜಿಕ ಸಾಮರಸ್ಯ ಸಂಘದ ಶ್ರದ್ಧೆಯ ವಿಷಯವಾಗಿದೆ. ಅದೊಂದು ತಂತ್ರವಲ್ಲ, ಸಾಂಸ್ಥಿಕ ಪ್ರಯೋಜನ ಅಥವಾ ಫಲಿತಾಂಶವಲ್ಲ. ಅದು ಈ ರಾಷ್ಟ್ರದ ಪ್ರತಿಯೊಬ್ಬರ ಶ್ರದ್ಧೆಯ ವಿಷಯವಾಗಬೇಕು ಎನ್ನುವ ದೃಷ್ಟಿಯಲ್ಲಿ ಸಂಘದ ಕೆಲಸವಾಗುತ್ತಿದೆ.

ಸಂದೇಶ್ ಖಾಲಿಯಂತಹ ಘಟನೆಗಳ ಕುರಿತು ತಿಳಿದಾಗ ಸ್ವಾಭಾವಿಕವಾಗಿ ಆಕ್ರೋಶ ಉಂಟಾಗುತ್ತದೆ. ಸಂಘದ ಸ್ವಯಂಸೇವಕ, ಕಾರ್ಯಕರ್ತ ಅದರ ವಿರುದ್ಧ ಧ್ವನಿಯೆತ್ತಿದರು. ರಾಷ್ಟ್ರಪತಿಯ ಬಳಿ ತೆರಳಿ ವಿಜ್ಞಾಪನೆಯನ್ನೂ ಮಾಡಿಕೊಂಡರು. ಈ ರೀತಿ ರಾಷ್ಟ್ರದ ವಿರುದ್ಧ ಯಾವುದೇ ಕೆಲಸಗಳಾದರೂ ಅದರ ವಿರುದ್ಧ ಧ್ವನಿಯೆತ್ತುವ ಮತ್ತು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯವನ್ನು ಸಂಘ ಮಾಡುತ್ತಿದೆ ಮತ್ತು ಮಾಡುತ್ತಿರುತ್ತದೆ. ಇವುಗಳ ಜೊತೆಗೆ ದೇಶದ ಯಾವುದೇ ಭಾಗದಲ್ಲಿ ಪ್ರಾಕೃತಿಕ ವಿಕೋಪಗಳು ಎದುರಾದಾಗ ಸಂ‍ಘದ ಸ್ವಯಂಸೇವಕರು ನೆರವಿಗೆ ಧಾವಿಸುತ್ತಾರೆ.

ಲೋಕಸಭೆ ಚುನಾವಣೆಯು ಸಮೀಪದಲ್ಲಿದೆ. ಮುಂದಿನ ದಿನಗಳಲ್ಲಿ ದೇಶವನ್ನು ಉತ್ತಮಗೊಳಿಸುವ, ಪ್ರಜಾಪ್ರಭುತ್ವವನ್ನು, ಏಕತೆಯನ್ನು ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಂಘದ ಸ್ವಯಂಸೇವಕರು ಶೇ.100ರಷ್ಟು ಮತದಾನ ಆಗುವಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಮಾಜದಲ್ಲಿ ತೊಡಗಿಕೊಳ್ಳುತ್ತಾರೆ. ಸಮಾಜದಲ್ಲಿ ಯಾವುದೇ ಪ್ರಕಾರದ ವೈಮನಸ್ಯ, ಗೊಂದಲ, ದೇಶದ ಏಕತೆಯ ವಿರುದ್ಧದ ಮಾತುಗಳು ಬರಬಾರದು. ದೇಶದ ಉನ್ನತಿ, ಪ್ರಗತಿಗಾಗಿ ಈ ಲೋಕತಂತ್ರವನ್ನು ಸಫಲ ಮತ್ತು ಸಾರ್ಥಕಗೊಳಿಸುವುದು ಕೂಡ ದೇಶದ ಕೆಲಸ, ಸಂವಿಧಾನದ ಕರ್ತವ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಜವಾಬ್ದಾರಿ ಎಂದರು.

ನಂತರ ನಡೆದ ಪ್ರಶ್ನೋತ್ತರದಲ್ಲಿ ಸಾಮರಸ್ಯದ ಕುರಿತು ಮಾತನಾಡುತ್ತಾ ಹಿಂದೂ ಸಮಾಜದ ಒಳಗಡೆ ಇರುವ  ಉಚ್ಚ-ನೀಚ, ಸ್ಪೃಶ್ಯ- ಅಸ್ಪೃಶ್ಯದ ಆಧಾರಿತವಾಗಿರುವ ಬೇಧಭಾವವನ್ನು ದೂರಗೊಳಿಸುವುದಕ್ಕಾಗಿ ಸಂಘ ಪ್ರಾರಂಭದ ದಿನಗಳಿಂದ ಕೆಲಸ ಮಾಡುತ್ತಿದೆ. ಮಂದಿರಕ್ಕೆ ಪ್ರವೇಶವಿಲ್ಲ, ನೀರು ಮುಟ್ಟುವ ಹಾಗಿಲ್ಲ, ಸ್ಮಶಾನಕ್ಕೆ ಪ್ರವೇಶ ನಿರಾಕರಣೆ ಮುಂತಾದವುಗಳು ನಗರ ಪ್ರದೇಶಗಳಲ್ಲಿ ಕಡಿಮೆಯೆನಿಸಿದರೂ, ಗ್ರಾಮೀಣ ಭಾಗದಲ್ಲಿ ಇನ್ನೂ ಇದೆ. ಅದನ್ನು ದೂರಗೊಳಿಸಬೇಕಿದೆ. ಇನ್ನು ರಾಷ್ಟ್ರೀಯ ಏಕತೆಯ ದೃಷ್ಟಿಯಿಂದ ಎಲ್ಲಾ ಪಂಥ, ಸಂಪ್ರದಾಯಗಳನ್ನೂ ಸಮಾನವಾಗಿ ಕಾಣಬೇಕು ಎನ್ನುವುದನ್ನು ಸಂಘ ಆಗ್ರಹಪೂರ್ವಕವಾಗಿ ಮಾಡುತ್ತದೆ. ಶ್ರೀರಾಮಜನ್ಮಭೂಮಿಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ಎಲ್ಲಾ ಪಂಥ ಸಂಪ್ರದಾಯಗಳು ಭಾಗವಹಿಸಿದ್ದವು. ಈ ನಿಟ್ಟಿನಲ್ಲಿ ಸರಸಂಘಚಾಲಕರು ಕೂಡ ಎಲ್ಲಾ ಪಂಥದವರೊಂದಿಗೆ ಸಂವಾದಗಳನ್ನೂ ನಡೆಸಿದ್ದಾರೆ.

ಮಹಿಳೆಯರ ಸ್ಥಾನಮಾನದ ಕುರಿತು ಮಾತನಾಡುತ್ತ ಮಹಿಳೆಯರ ವಿಷಯದಲ್ಲಿ ಆಗುತ್ತಿರುವ ಅನ್ಯಾಯಕ್ಕೆ ರಾಜಕೀಯವಾದ ಭೇಧಭಾವವನ್ನು ಬಿಟ್ಟು ಒಗ್ಗಟ್ಟಾಗಿ ನಿಲ್ಲುವ ಅಗತ್ಯವಿದೆ. ಇದರ ಕುರಿತು ಮಹಿಳೆಯರಲ್ಲಿಯೂ ಜಾಗೃತಿ ಮೂಡಿಸಬೇಕಾಗಿದೆ. ಈ ಜಾಗೃತಿಯನ್ನು ಮೂಡಿಸುವುದಕ್ಕಾಗಿ ರಾಷ್ಟ್ರವ್ಯಾಪಿ ಮಹಿಳಾ ಸಮ್ಮೇಳನಗಳನ್ನು ಆಯೋಜಿಸಲಾಗಿತ್ತು. ದೇಶವ್ಯಾಪಿ 5 ಲಕ್ಷಕ್ಕೂ ಅ‍ಧಿಕ ಮಹಿಳೆಯರು ಜಿಲ್ಲೆ ಮತ್ತು ವಿಭಾಗಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ದೇಶ ಮತ್ತು ಸಮಾಜದ ದೃಷ್ಟಿಯಿಂದ ಮಹಿಳೆಯರ ಭೂಮಿಕೆಯೇನು ಎನ್ನುವುದರ ಕುರಿತು ಚರ್ಚಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ಪ್ರಭಾವಿ ಭೂಮಿಕೆ ಮಹಿಳೆಯರದ್ದಿದೆ ಎನ್ನುವುದು ಸಂಘಕ್ಕೆ ತಿಳಿದಿದೆ. ಹಾಗಾಗಿ ಸಾಮಾಜಿಕ ಪರಿವರ್ತನೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಘದ ಗತಿವಿಧಿಗಳಲ್ಲಿ ಮಹಿಳೆಯ ಭಾಗವಹಿಸುವಿಕೆ ಹೆಚ್ಚಿದೆ, ಇನ್ನೂ ಹೆಚ್ಚಾಗಬೇಕಿದೆ.

ಮಹಿಳೆಯರ ಸುರಕ್ಷೆ ಮತ್ತು ಸಮ್ಮಾನದ ಕುರಿತು ಹಾಗೂ ಮಹಿಳೆಯರೊಂದಿಗೆ ವ್ಯವಹರಿಸಬೇಕಾದ ರೀತಿಯ ಕುರಿತು ಪ್ರತಿ ಮನೆಯ ಇಂದಿನ ಪೀಳಿಗೆಯ ಮಕ್ಕಳಿಗೂ ತಿಳಿಯುವಂತಾಗಬೇಕು. ಶಿಕ್ಷಣ, ಸಾಹಿತ್ಯ, ಸಿನೆಮಾ, ನಾಟಕ ಮುಂತಾದ ಮಾಧ್ಯಮಗಳಲ್ಲೂ ಇದರ ಕುರಿತು ತಿಳಿಸುವಂತಾಗಬೇಕು. ಮಹಿಳೆಯರ ಕರ್ತೃತ್ವ ಮತ್ತು ನೇತೃತ್ವದಿಂದ ಸಾಧಿಸಬಹುದಾದ ಎಲ್ಲಾ ಕ್ಷೇತ್ರಗಳಲ್ಲೂ ಆಕೆಯ ಭಾಗವಹಿಸುವಿಕೆ ಇರಬೇಕು. ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯ ಭಾಗವಹಿಸುವಿಕೆ ಇದೆ. ಅದರ ಸಂಖ್ಯೆಯನ್ನು ಹೆಚ್ಚುಗೊಳಿಸಬೇಕಿದೆ ಎಂದು ನುಡಿದರು.

ಚುನಾವಣ ಬಾಂಡ್ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸರಕಾರ್ಯವಾಹರು ಈ ಸಭೆಯಲ್ಲಿ ಅದರ ಕುರಿತು ನಾವು ಚರ್ಚಿಸಲಿಲ್ಲ.  ಆದರೆ ಚುನಾವಣಾ ಬಾಂಡ್ ಎನ್ನುವುದು ಅಚಾನಕ್ ಆಗಿ ಬಂದಂತಹದ್ದಲ್ಲ. ಅದರ ಕುರಿತು ರಾಷ್ಟ್ರದಲ್ಲಿ ಈ ಮೊದಲೂ ಚರ್ಚೆಗಳಾಗಿವೆ. ಪ್ರಸ್ತುತ ಚುನಾವಣಾ ಬಾಂಡ್ ಎನ್ನುವಂತಹದ್ದು ಒಂದು ಹೊಸ ಪ್ರಯೋಗದ ರೂಪದಲ್ಲಿ ಬಂದಿದೆ. ಇವಿಎಂ ಬಂದಾಗಲೂ ಅದರ ಕುರಿತಾದ ಚರ್ಚೆ ದೇಶದಲ್ಲಿ ಆಗಿತ್ತು. ಹೊಸ ಪ್ರಯೋಗಗಳು ಬಂದಾಗ ಪ್ರಶ್ನೆಗಳು ಏಳುವುದು ಸಹಜ. ಆದರೆ ಅವುಗಳ ಉಪಯೋಗ ಮತ್ತು ಪರಿಣಾಮಾತ್ಮಕತೆಯೇನು ಎನ್ನುವುದನ್ನು ಗಮನಿಸಿ ಸ್ವೀಕರಿಸಬೇಕು ಎನ್ನುವುದು ಸಂಘದ ವಿಚಾರವಾಗಿದೆ ಎಂದು ನುಡಿದರು.

ಕೃಷಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ಕುರಿತಾದ ಪ್ರಶ್ನೆ ಉತ್ತರಿಸುತ್ತಾ ಪ್ರತಿಭಟನೆಯ ನೆಪದಲ್ಲಿ ಮೊದಲ ವರ್ಷ ಕೆಲವು ಅರಾಜಕತೆ ಉಂಟಾಯಿತು. ಅದರಲ್ಲಿ ಕೃಷಿಕರ ಪರವಾಗಿರುವ ಉದ್ದೇಶಕ್ಕಿಂತ ವ್ಯವಸ್ಥೆಯನ್ನು ಅತಂತ್ರಗೊಳಿಸುವ ಉದ್ದೇಶ ಅಧಿಕವಿತ್ತು ಎಂದು ಅಭಿಪ್ರಾಯಪಟ್ಟರು. ಕಾಶಿ ಮತ್ತು ಮಥುರಾದ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ ರಾಮಮಂದಿರಕ್ಕೆ ನಡೆದ ಹೋರಾಟದಂತೆಯೇ ಎಲ್ಲಾ ಹೋರಾಟಗಳು ಆಗಬೇಕೆಂದೇನಿಲ್ಲ. ಅವುಗಳಿಗೆ ಪರ್ಯಾಯ ಮಾರ್ಗಗಳಿರುತ್ತವೆ ಎಂದರು. ಇನ್ನು ಸಮಾನ ನಾಗರಿಕ ಸಂಹಿತೆಯ ಕುರಿತು ಪ್ರಶ್ನೆಗೆ ಉತ್ತರಿಸಿದ ಸರಕಾರ್ಯವಾಹರು ಅದಾಗಲೇ ಉತ್ತರಖಂಡದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಬಂದಿದೆ. ದೇಶಾದ್ಯಂತ ಜಾರಿಗೆ ತರುವುದನ್ನು ಸಂಘ ಸ್ವಾಗತಿಸುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಉಪಸ್ಥಿತರಿದ್ದರು.

ಆರು ಸಹಸರಕಾರ್ಯವಾಹರು

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಂಪನ್ನಗೊಂಡಿದೆ. ಸಂಘದ ಕಾರ್ಯಚಟುವಟಿಕೆಗಳ ದೃಷ್ಟಿಯಿಂದ 6 ಮಂದಿ ಸಹಸರಕಾರ್ಯವಾಹರುಗಳಿರಲಿದ್ದಾರೆ.

  1. ಶ್ರೀ ಡಾ. ಕೃಷ್ಣಗೋಪಾಲ್
  2. ಶ್ರೀ ಮುಕುಂದ ಸಿ ಆರ್
  3. ಶ್ರೀ ಅರುಣ್ ಕುಮಾರ್
  4. ಶ್ರೀ ರಾಮದತ್ ಚಕ್ರಧರ್
  5. ಶ್ರೀ ಅತುಲ್ ಲಿಮಯೇ
  6. ಶ್ರೀ ಆಲೋಕ್ ಕುಮಾರ್

Leave a Reply

Your email address will not be published.

This site uses Akismet to reduce spam. Learn how your comment data is processed.