ಬೆಂಗಳೂರು: ಮೂಕನಾಯಕನಿಂದ ಪ್ರಬುದ್ಧ ಭಾರತದ ವರೆಗಿನ ಹೋರಾಟ ರಾಷ್ಟ್ರದ ಐಕ್ಯತೆಗಾಗಿ ನಡೆದಿದ್ದು. ರಾಷ್ಟ್ರದ ಮುಖ್ಯವಾಹಿನಿಗೆ ಶೋಷಿತರನ್ನು ತರುವುದು ಅಂಬೇಡ್ಕರ್ ಪ್ರಯತ್ನವಾಗಿತ್ತು. ನಾನೊಬ್ಬ ಮೊದಲು ಭಾರತೀಯ ಆನಂತರವೂ ಭಾರತೀಯ ಎಂದಂತಹ ಮಹಾನ್ ನಾಯಕನನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಎನ್ ಮಹೇಶ್ ಉಪನ್ಯಾಸ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರ ವತಿಯಿಂದ ರಾಜಾಜಿನಗರದ ಕೆ.ಎಲ್.ಇ. ಶಾಲಾ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವ ಸಮುದಾಯದಲ್ಲಿ ಎಷ್ಟೇ ದೊಡ್ಡ ಸಮಾಜ ಸುಧಾರಕ ಜನಿಸಿದರೂ, ಸಮಾಜ ಅವರನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅಂಬೇಡ್ಕರ್ ಅವರು ಮಾಡಿದ ಹೋರಾಟಗಳೂ ಕೂಡ ಅಂದಿನ ಸಮಾಜದಿಂದ ಟೀಕೆ ಟಿಪ್ಪಣಿಗಳಿಗೆ ಒಳಗಾಗಿದ್ದವು. ಆದರೆ ಎಲ್ಲಾ ವಿರೋಧಗಳನ್ನು ಎದುರಿಸಿ ಅಂಬೇಡ್ಕರ್ ಅವರು ರಾಷ್ಟ್ರಕಟ್ಟುವ ಕೆಲಸಕ್ಕೆ ಮುಂದಾದರು ಎಂದು ಅಭಿಪ್ರಾಯಪಟ್ಟರು.
ನಮ್ಮ ದೇಶದಲ್ಲಿ ಸುಮಾರು 6000 ಜಾತಿಗಳಿವೆ. ಜಾತಿಗಳು ಸೃಷ್ಟಿಯಾಗಿರುವುದು ತಪ್ಪಲ್ಲ. ಆದರೆ ಜಾತಿಯಾಧಾರಿತವಾಗಿ ಬಂದಿರುವ ತಾರತಮ್ಯ ತಪ್ಪು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಎಷ್ಟೇ ಶೋಷಣೆಗೆ ಒಳಗಾದರೂ ರಾಷ್ಟ್ರದ ವಿರುದ್ಧ ಕೆಲಸ ಮಾಡುವವರೊಂದಿಗೆ ಕೈ ಜೋಡಿಸುವುದು ಸರಿಯಲ್ಲ ಎನ್ನುವುದು ಅಂಬೇಡ್ಕರ್ ಅವರ ನಿಲುವಾಗಿತ್ತು ಎಂದರು.
ಧರ್ಮ ಮತ್ತು ಮತಾಧಾರಿತವಾಗಿ ರಾಷ್ಟ್ರ ವಿಭಜನೆಗೊಂಡಾಗ ಹಿಂದೂ ಮತ್ತು ಮುಸಲ್ಮಾನರ ಸಂಪೂರ್ಣ ಜನಸಂಖ್ಯೆ ವಿನಿಮಯವಾಗಬೇಕೆಂದು ಅಂಬೇಡ್ಕರ್ ತಿಳಿಸಿದ್ದರು. ಆದರೆ ವಿಭಜನೆಗೊಂಡ ನಂತರವೂ ಈ ನಾಡಿನಲ್ಲಿ ಉಳಿದುಕೊಂಡಿರುವ ಮುಸಲ್ಮಾನರಿಗೆ ಯಾವುದೇ ತೊಂದರೆಯಾಗದ ರೀತಿ ನೋಡಿಕೊಳ್ಳುತ್ತಿದ್ದೇವೆ. ಇಲ್ಲಿ ಉಳಿದುಕೊಂಡಿರುವ ಮುಸಲ್ಮಾನರು ಇಲ್ಲಿನ ಮೂಲನಿವಾಸಿಗಳು ಎನ್ನುವುದನ್ನು ಅರಿತು ಈ ನಾಡಿಗೆ ನಿಷ್ಠರಾಗಿರಬೇಕು ಎಂದು ತಿಳಿಸಿದರು.
ಹಿಂದೂಗಳು ಇಸ್ಲಾಂ ಮತ್ತು ಕ್ರೈಸ್ತ ಮತಗಳಿಗೆ ಮತಾಂತರಗೊಳ್ಳುವುದು ಕೇವಲ ಮತಾಂತರವಾಗಿರದೆ, ಅದು ರಾಷ್ಟ್ರಾಂತರವಾಗುತ್ತದೆ ಎಂದು ಅಂಬೇಡ್ಕರ್ ತಿಳಿಸಿದ್ದರು. ಹಾಗಾಗಿಯೇ ಸ್ವತಃ ತಾವು ಈ ನೆಲದಲ್ಲೇ ಜನಿಸಿದ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಮತಾಂತರಗೊಳ್ಳುವವರಿಗೆ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ ಎಸ್ ಉಮಾಪತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿಂತಕರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದರು.