ತಿರುಮಲೆ ತಾತಾಚಾರ್ಯ ಶರ್ಮಾ ಅವರು ಸಂಶೋಧಕ, ಸಾಹಿತಿ, ಪತ್ರಕರ್ತ, ಅಪ್ರತಿಮ ಹೋರಾಟಗಾರರಾಗಿ ಪ್ರಸಿದ್ಧಿ ಹೊಂದಿದವರು. ಬಹುಮುಖ ಪ್ರತಿಭೆಯ ಅಪೂರ್ವ ಸಂಗಮವಾಗಿದ್ದ ತಿರುಮಲೆ ತಾತಾಚಾರ್ಯ ಶರ್ಮಾ ಅವರು ಅಸಾಧಾರಣ ವ್ಯಕ್ತಿತ್ವದಿಂದಾಗಿ 20ನೆಯ ಶತಮಾನದ ಪ್ರಮುಖರಲ್ಲೊಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಕನ್ನಡ ಸಾಹಿತ್ಯ ಮತ್ತು ಪತ್ರಿಕಾರಂಗದಲ್ಲಿ ತಮ್ಮದೇಯಾದ ಛಾಫು ಮೂಡಿಸಿದವರು. ಇಂದು ಅವರ ಜಯಂತಿ.
ಪರಿಚಯ
ತಿರುಮಲೆ ತಾತಾಚಾರ್ಯ ಶರ್ಮಾ ಏಪ್ರಿಲ್ 27, 1897 ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ತಾತಾಚಾರ್ಯ ಮತ್ತು ತಾಯಿ ಜಾನಕಿ. ತಿ.ತಾ ಶರ್ಮಾ ಅವರು ಬಾಲ್ಯದಲ್ಲೇ ಸಂಸ್ಕೃತ, ತೆಲುಗು ಹಾಗೂ ತಮಿಳು ಭಾಷೆ ಕಲಿತವರು. ಇವರು ಗೌರಿಬಿದನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಶಾಲೆಯಲ್ಲಿ ಓದುತ್ತಿದ್ದಾಗಲೇ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿಗೆ ಸೇರಿದರು. ಆದರೆ ಹಣಕಾಸಿನ ತೊಂದರೆಯಿಂದ ಅವರು ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. 1919ರಲ್ಲಿ ಕೇಂದ್ರ ಶಾಸನ ಇಲಾಖೆಯಲ್ಲಿ ತೆಲುಗು ಮತ್ತು ಕನ್ನಡ ಸಹಾಯಕ ಅಧಿಕಾರಿಯಾಗಿ 5 ವರ್ಷ ಸೇವೆ ಸಲ್ಲಿಸಿದರು. ನಂತರ ಮಹಾತ್ಮ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಸೇರಿದರು. ಗಾಂಧೀಜಿಯವರನ್ನು ಭೇಟಿ ಆಗಿ ಅವರ ಆಣತಿಯಂತೆ ವಿಶ್ವಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿ ಸುಮಾರು 27 ವರ್ಷಗಳ ಕಾಲ ಅವರು ಆ ಪತ್ರಿಕೆಯನ್ನು ನಡೆಸಿದರು.
ತುಮಕೂರಿನಲ್ಲಿ ವಕೀಲರಾಗಿದ್ದ ಕೆ.ರಂಗಯ್ಯಂಗಾರ್ ಮೈಸೂರು ಕ್ರಾನಿಕಲ್ ಎಂಬ ಇಂಗ್ಲೀಷ್ ವಾರಪತ್ರಿಕೆ ನಡೆಸುತ್ತಿದ್ದರು. ಇದೇ ಹೆಸರಿನಲ್ಲಿ ಕನ್ನಡದಲ್ಲಿ ನವೆಂಬರ್ 1922ರಲ್ಲಿ ಇನ್ನೊಂದು ಪತ್ರಿಕೆ ಆರಂಭಿಸಿದರು. ಈ ಎರಡು ಪತ್ರಿಕೆಗಳನ್ನು ನಡೆಸುವುದಕ್ಕೆ ಶರ್ಮ ಅವರ ಸಹಾಯ ಪಡೆದರು. ಹೀಗಾಗಿ ಈ ಪತ್ರಿಕೆಯ ಸಂಪಾದಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡರು.ಅವರು ಬರೆದಂತಹ ಲೇಖನದಿಂದ ಆ ಪತ್ರಿಕೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು.
1943ರಲ್ಲಿ ಮೈಸೂರು ಪತ್ರಿಕೋದ್ಯಮಿಗಳ ಸಂಘದ ಅಧ್ಯಕ್ಷರಾದರು. 1944ರಲ್ಲಿ ಬೆಂಗಳೂರು ಮುನ್ಸಿಪಾಲ್ ಕೌನ್ಸಿಲ್ರಾದರು. ಬೆಂಗಳೂರಿನ ಅಮೆಚೂರ್ ನಾಟಕ ಮಂಡಳಿ ಮೂಲಕ ಟೊಳ್ಳುಗಟ್ಟಿ ನಾಟಕವನ್ನು ಪ್ರದರ್ಶಿಸಿದರು. ಬೆಂಗಳೂರು ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಶರ್ಮಾ ಅವರು 1947ರಿಂದ 1949ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಗೊಂಡರು. 1947ರಲ್ಲಿ ಕಾಸರಗೋಡಿನಲ್ಲಿ ನಡೆದ 31ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶರ್ಮಾ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿ ಸನ್ಮಾಸಿದರು. 1970ರಲ್ಲಿ ಮಂಡ್ಯ ಜಿಲ್ಲಾ ಪರಿಷತ್ತಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.
ಪತ್ರಿಕಾರಂಗದ ಭೀಷ್ಮರಾಗಿದ್ದ ಶರ್ಮಾ ಅವರ ಬರಹದಲ್ಲಿಯ ವಿಷಯ ವೈವಿಧ್ಯತೆ ವಿಶಿಷ್ಟವಾಗಿದೆ. ಶಾಸನ, ಸಾಹಿತ್ಯ, ವಿಮರ್ಶೆ, ಇತಿಹಾಸ, ಸಂಶೋಧನೆ, ಜೀವನ ಚರಿತ್ರೆ, ಅನುವಾದ, ಹಸ್ತಪ್ರತಿ ಸಂಪಾದನೆ, ನೀಳ್ಗತೆ ಹೀಗೆ 40 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ವಿಕ್ರಾಂತ ಭಾರತ’, ‘ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ’, ‘ವಿಚಾರ ಕರ್ನಾಟಕ’ ಕೃತಿಗಳ ಮೂಲಕ ಶರ್ಮಾ ಅವರ ದೇಶಾಭಿಮಾನದ ಸುದೀರ್ಘ ಅರಿವು ಮೂಡಿಸಿದ್ದಾರೆ. ಇತಿಹಾಸ ಸಂಶೋಧನೆಯಲ್ಲಿ ‘ಜಗನ್ಮೋಹನ ಬಂಗಲೆಯಿಂದ ವಿದುರಾಶ್ವತ್ಥದವರೆಗೆ’, ‘ಚಾರಿತ್ರಿಕ ದಾಖಲೆಗಳು’, ‘ಇತಿಹಾಸದ ಸಂದರ್ಭಗಳು’, ಹಾಗೂ ‘ಮೈಸೂರು ಇತಿಹಾಸದ ಹಳೆಯ ಘಟಕಗಳು’ ಗ್ರಂಥಗಳನ್ನು ಬರೆದಿದ್ದಾರೆ.
ವಿಶ್ವ ಸಂವಾದ ಕೇಂದ್ರ ಕರ್ನಾಟಕ ಮಾಧ್ಯಮ ಸಂವಹನ ಸಂಸ್ಥೆಯ ವತಿಯಿಂದ ವರ್ಷಂಪ್ರತಿ ಆಯೋಜಿಸಲಾಗುವ ವಿಎಸ್ ಕೆ ಮಾಧ್ಯಮ ಪ್ರಶಸ್ತಿ ಸಮಾರಂಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡ ಪತ್ರಕರ್ತರಿಗೆ ತಿ.ತಾ.ಶರ್ಮಾ ಅವರ ಸ್ಮರಣಾರ್ಥವಾಗಿ ತಿ.ತಾ.ಶರ್ಮಾ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಲಾಗುತ್ತದೆ.
ತಿರುಮಲೆ ತಾತಾಚರ್ಯ ಶರ್ಮಾ ಅವರು ಅಕ್ಟೋಬರ್ 20, 1973 ರಂದು ನಿಧನರಾದರು.