ಬೆಂಗಳೂರು: ಪ್ರತಿಯೊಬ್ಬರಲ್ಲೂ ಈಗಾಗಲೇ ಅಡಗಿರುವ ಪರಿಪೂರ್ಣತೆಯ ಅಭಿವ್ಯಕ್ತಿಯೇ ಶಿಕ್ಷಣ ಎಂಬ ವಿವೇಕವಾಣಿಯಂತೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿನ ಸಾಮರ್ಥ್ಯವನ್ನು ಅಭಿವ್ಯಕ್ತಿಸುವುದಕ್ಕೆ ಪ್ರೇರಣೆ ಮತ್ತು ಸಹಕಾರ ದೊರೆತಾಗ ಆ ವಿದ್ಯಾರ್ಥಿಯು ಅಮೋಘವಾದದ್ದನ್ನು ಸಾಧಿಸಬಲ್ಲನು ಎಂಬುದನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಒಂದು ಪ್ರಯತ್ನ ನಿಜವಾಗಿಸಿದೆ.
ಶೈಕ್ಷಣಿಕ, ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸುಮಾರು ಐದು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೋತ್ಥಾನ ಪರಿಷತ್ ಕಳೆದ 30 ವರ್ಷಗಳಿಂದ ಸ್ಲಂ(ಸೇವಾ ಬಸ್ತಿ)ಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಅವುಗಳ ಭಾಗವಾಗಿ ಕೋವಿಡ್ ಸಂದರ್ಭದಲ್ಲಿ ಆರಂಭವಾದ ಒಂದು ಪ್ರಯತ್ನವೇ ‘10th ಶ್ಯೂರ್ ಪಾಸ್ ’ ಕಾರ್ಯಕ್ರಮ. 13 ಸ್ಲಂ (ಸೇವಾ ಬಸ್ತಿ) ಗಳಲ್ಲಿ ವಾರಾಂತ್ಯದ ತರಗತಿಗಳನ್ನು ಆಯೋಜಿಸುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಕಾರ ಒದಗಿಸಿದೆ. ಈ ತರಗತಿಗಳಲ್ಲಿ ಪಾಠಗಳ ಜೊತೆಗೆ ವ್ಯಕ್ತಿತ್ವ ವಿಕಸನ ತರಗತಿಗಳು ಹಾಗೂ ವೃತ್ತಿ ಮಾರ್ಗದರ್ಶನದ ಕುರಿತೂ ತರಗತಿಗಳು ನಡೆದಿರುವುದು ವಿಶೇಷ.
‘10th ಶ್ಯೂರ್ ಪಾಸ್’ ಎಂಬ ಕಾರ್ಯಕ್ರಮದ ಮೂಲಕ ಆಯೋಜಿಸಲಾದ ತರಗತಿಗಳಲ್ಲಿ ತರಬೇತಿಯನ್ನು ಪಡೆದ 248 ವಿದ್ಯಾರ್ಥಿಗಳು 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿದ್ದರು. ಈ ಪೈಕಿ 228 ಮಂದಿ (ಶೇ.91) ಉತ್ತೀರ್ಣರಾಗಿರುವುದು ಗಮನಾರ್ಹ ಸಂಗತಿ. 228 ವಿದ್ಯಾರ್ಥಿಗಳಲ್ಲಿ 52 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, 1 ವಿದ್ಯಾರ್ಥಿ ವಿಶಿಷ್ಠ ಶ್ರೇಣಿಯಲ್ಲಿ ಹಾಗೂ 175 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.