ಮಹಾರಾಣಾ ಪ್ರತಾಪ್ ಎಂದೇ ಪ್ರಸಿದ್ಧಿಯಾಗಿದ್ದ ಪ್ರತಾಪ್ ಸಿಂಗ್ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ವೀರ ಅರಸ. 35 ವರ್ಷಗಳ ಕಾಲ ರಾಜಸ್ಥಾನದ ಮೇವಾರ್ ಅನ್ನು ಆಳಿದ ಅಪ್ರತಿಮ ಆಡಳಿತಗಾರ. ಇಂದು ಅವರ ಜಯಂತಿ.
ಪರಿಚಯ
ರಾಣಾ ಪ್ರತಾಪ್ ಸಿಂಗ್ ಅವರು ಮೇ 9, 1540 ರಂದು ರಾಜಸ್ಥಾನದ ಕುಂಭಲ್ಗಡದಲ್ಲಿ ಜನಿಸಿದರು. ಇವರ ತಂದೆ ಎರಡನೇ ಉದಯ್ ಸಿಂಗ್ ತಾಯಿ ರಾಣಿ ಜೈವಂತ್ ಬಾಯಿ ಸೊಂಗಾರ . ಮಹಾರಾಣಾ ಪ್ರತಾಪ್ ಅವರು ಮೊಘಲ್ ಚಕ್ರವರ್ತಿ ಅಕ್ಬರ್ ನ ವಿಸ್ತರಣಾ ನೀತಿಗಳನ್ನು ವಿರೋಧಿಸುವ ಸಲುವಾಗಿ ಹೋರಾಡಲು ಪ್ರಯತ್ನಿಸಿದರು.
ರಾಣಾ ಪ್ರತಾಪ್ ಸಿಂಗ್ ಅವರು ಮೊಘಲ್ ಸಾಮ್ರಾಜ್ಯದೊಂದಿಗೆ ಯಾವುದೇ ರಾಜಕೀಯ ಮೈತ್ರಿ ಮಾಡಿಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಅವರೊಡನೆ ಒಪ್ಪಂದಗಳಿಗೆ ನಿರಾಕರಿಸಿ, ಮೊಘಲ್ ಪ್ರಾಬಲ್ಯವನ್ನು ಪ್ರತಿರೋಧಿಸಿ, ಸ್ವರಾಷ್ಟ್ರ, ಸ್ವಧರ್ಮದ ರಕ್ಷಣೆಗೆ ನಿಂತ ಪ್ರತಾಪ್ ಸಿಂಹ ಇಂದಿಗೂ ಪ್ರಾತ: ಸ್ಮರಣೀಯರು. ಪ್ರತಾಪ್ ಸಿಂಹ ಮತ್ತು ಅಕ್ಬರ್ ನಡುವಿನ ಸಂಘರ್ಷಗಳು ಹಲ್ದಿಘಾಟಿ ಕದನಕ್ಕೆ ಕಾರಣವಾಯಿತು.
ಹಲ್ದಿಘಾಟಿ ಕದನ
ಮಹಾರಾಣಾ ಪ್ರತಾಪ್ ಸಿಂಗ್ ಜೂನ್ 18, 1576 ರಂದು ಹಲ್ದಿಘಾಟಿ ಕದನದಲ್ಲಿ ಅಂಬರ್ ನ ಮಾನ್ ಸಿಂಗ್ ನೇತೃತ್ವದ ಅಕ್ಬರನ ಪಡೆಯ ವಿರುದ್ಧ ಹೋರಾಡಿದರು.ಈ ಯುದ್ಧದಲ್ಲಿ ಸಾಕಷ್ಟು ಮಂದಿ ಮೇವಾರಿಗಳನ್ನು ಕೊಂದರು. ಆದರೆ ಅವರಿಗೆ ಮಹಾರಾಣಾರನ್ನು ಬಂಧಿಸಲು ಸಾಧ್ಯವಾಗಲಿಲ್ಲ.ನಂತರ ರಾಜಸ್ಥಾನದ ಗೋಗುಂಡಾದ ಬಳಿ ಕಿರಿದಾದ ಪರ್ವತದಲ್ಲಿ ಭೀಕರ ಹೋರಾಟ ನಡೆದಿತ್ತು. ಈ ಹೋರಾಟದಲ್ಲಿ ಪ್ರತಾಪ್ ಸಿಂಹ ಸುಮಾರು 3000 ಅಶ್ವದಳ ಮತ್ತು 400 ಭಿಲ್ ಬಿಲ್ಲುಗಾರರನ್ನು ಹೊಂದಿದ್ದರು. ಈ ಯುದ್ಧದಲ್ಲಿ ಪ್ರತಾಪ್ ಸಿಂಗ್ ಗೆ ಗಾಯ ಉಂಟಾಗಿತ್ತು. ಹೀಗಾಗಿ ಯುದ್ಧ ಮಾಡಲು ಸಾಧ್ಯವಾಗಲಿಲ್ಲ. ನಂತರ ಅವರು ಚೇತರಿಸಿಕೊಂಡು ಮತ್ತೆ ಯುದ್ಧಕ್ಕೆ ಮರಳಿದರು.
ಮೊಘಲರಿಗೆ ಉದಯಪುರದಲ್ಲಿನ ಮಹಾರಾಣಾ ಪ್ರತಾಪ್ ಸಿಂಗ್ ಅವರ ನಿಕಟ ಕುಟುಂಬದ ಸದಸ್ಯರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಹಲ್ಡಿಘಾಟಿಯನ್ನು ವಿಜಯವನ್ನಾಗಿ ಮಾಡಿದರು. ಮಾನ್ ಸಿಂಗ್ ತನ್ನ ಯುದ್ಧವನ್ನು ಕೊನೆಗೊಳಿಸಿದ ನಂತರ ಗೋಗುಂಡಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದನು.
ಹಲ್ದಿಘಾಟಿ ನಂತರ ಮೊಘಲರು ಮೇವಾರ್ನ ಪ್ರಮುಖ ಪ್ರದೇಶಗಳಾದ ಕುಂಭಲ್ ಗಢ್, ಮಂಡಲ್ ಘರ್ , ಗೋಗುಂಡಾ ಮತ್ತು ಸೆಂಟ್ರಲ್ ಮೇವಾರ್ ಗಳನ್ನು ವಶಪಡಿಸಿಕೊಳ್ಳಲು ಕಾರಣವಾಯಿತು.
ರಾಣಾ ಪ್ರತಾಪ್ ಸಿಂಗ್ ಮೊಘಲರ ವಿರುದ್ಧ ತನ್ನ ಗೆರಿಲ್ಲಾ ಯುದ್ಧವನ್ನು ಮುಂದುವರೆಸಿದ್ದನು. 1582 ರಲ್ಲಿ ನಡೆದ ದೆವೈರ್ ಕದನದಲ್ಲಿ ಮಹಾರಾಣಾ ಪ್ರತಾಪನ ಪಡೆಗಳು ಮಾನ್ ಸಿಂಗ್ ನೇತೃತ್ವದ ಮೊಘಲ್ ಸೈನ್ಯವನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಈ ವಿಜಯವು ರಜಪೂತ ಯೋಧರ ಮನೋಬಲವನ್ನು ಹೆಚ್ಚಿಸಿತು.
ರಾಣಾ ಪ್ರತಾಪ್ ಸಿಂಗ್ ಅವರು ಜನವರಿ 19, 1597 ರಂದು, 56 ನೇ ವಯಸ್ಸಿನಲ್ಲಿ ಅಪಘಾತದಿಂದ ನಿಧನರಾದರು.