ಭಾರತದ ಆರನೇ ರಾಷ್ಟ್ರಪತಿ ಮತ್ತು ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿದ್ದ ನೀಲಂ ಸಂಜೀವ ರೆಡ್ಡಿ ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡವರು.ಇವರು ರಾಜಕೀಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ನಾಯಕ ನೀಲಂ ಸಂಜೀವ ರೆಡ್ಡಿ. ಇಂದು ಅವರ ಜಯಂತಿ.
ಪರಿಚಯ
ನೀಲಂ ಸಂಜೀವ ರೆಡ್ಡಿ ಅವರು ಮೇ 19, 1913 ರಂದು ಆಂಧ್ರಪ್ರದೇಶದ ಭಾಗವಾಗಿರುವ ಇಲ್ಲೂರು ಗ್ರಾಮದಲ್ಲಿ ಜನಿಸಿದವರು. ರೆಡ್ಡಿಯವರು ತಮ್ಮ ಶಿಕ್ಷಣವನ್ನು ಮದ್ರಾಸಿನ ಅಡ್ಯಾರ್ನಲ್ಲಿರುವ ಥಿಯಾಸಾಫಿಕಲ್ ಹೈಸ್ಕೂಲ್ನಲ್ಲಿ ಪಡೆದರು. ಅನಂತಪುರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದರು. ನಂತರ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದರು. ಇವರು ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟದ ಕಡೆ ಗಮನಹರಿಸಿದ್ದರು.
ಸ್ವಾತಂತ್ರ್ಯ ಚಳವಳಿಗೆ ಕೊಡುಗೆ
ನೀಲಂ ಸಂಜೀವ ರೆಡ್ಡಿ ಅವರು ಅನಂತಪುರದಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಭೇಟಿಯಾಗಿದ್ದರು. ಗಾಂಧಿಯವರ ತತ್ತ್ವಗಳಿಂದ ಪ್ರೇರಿತರಾದ ರೆಡ್ಡಿ ತಮ್ಮ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡರು. ಇವರು 1931ರಲ್ಲಿ ಯೂತ್ ಲೀಗ್ ನೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ನಂತರ ವಿದ್ಯಾರ್ಥಿಗಳೊಂದಿಗೆ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅದಾದ ಬಳಿಕ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದರು. 1942ರಲ್ಲಿ ನೀಲಂ ಸಂಜೀವ ರೆಡ್ಡಿಯವರು ಜೈಲಿನಿಂದ ಬಿಡುಗಡೆಗೊಂಡ ನಂತರ ಅವರು ರಾಜಕೀಯದತ್ತ ಒಲವು ತೋರಿದರು.
ರಾಜಕೀಯ ಜೀವನ
ನೀಲಂ ಸಂಜೀವ ರೆಡ್ಡಿ ಅವರು 1946ರಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಮದ್ರಾಸ್ ವಿಧಾನಸಭೆಗೆ ಆಯ್ಕೆಯಾದರು. ನಂತರ ಅವರು ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1953ರಲ್ಲಿ ಆಂಧ್ರ ಪ್ರಾಂತದ ಉಪಮುಖ್ಯಮಂತ್ರಿ ಆಗಿದ್ದರು. 1956ರ ಅಕ್ಟೋಬರ್ನಲ್ಲಿ ಭಾಷಾವಾರು ರಾಜ್ಯಗಳ ರಚನೆಯಾದಾಗ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾದರು. ಅವರು 1962ರಲ್ಲಿ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾದರು. ನಂತರ ರೆಡ್ಡಿ ಮೂರು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಜೂನ್ 1964 ರಂದು ನೀಲಂ ಸಂಜೀವ ರೆಡ್ಡಿ ಅವರು ಕೇಂದ್ರ ಉಕ್ಕು ಮತ್ತು ಗಣಿ ಸಚಿವರಾದರು. ನಂತರ ಅವರು ಇಂದಿರಾ ಗಾಂಧಿಯವರ ಅವಧಿಯಲ್ಲಿ ಸಾರಿಗೆ, ನಾಗರಿಕ ವಿಮಾನಯಾನ, ಹಡಗು ಮತ್ತು ಪ್ರವಾಸೋದ್ಯಮ ಸಚಿವರಾಗಿಯೂ ಸೇವೆ ಸಲ್ಲಿಸಿದರು. 1964 ರಿಂದ 1967ರವರೆಗೆ ಪ್ರಧಾನ ಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಮಯದಲ್ಲಿ ನೀಲಂ ರೆಡ್ಡಿ ಅವರು ಕೇಂದ್ರ ಕ್ಯಾಬಿನೆಟ್ ಸಚಿವರಾಗಿದ್ದರು. ಜನತಾ ಪಕ್ಷದ ಅಭ್ಯರ್ಥಿಯಾಗಿ 1977 ರಲ್ಲಿ ಸಂಸತ್ತಿಗೆ ಚುನಾಯಿತರಾದ ರೆಡ್ಡಿ ಅವರು ಆರನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು. ಮೂರು ತಿಂಗಳ ನಂತರ ಭಾರತದ ರಾಷ್ಟ್ರಪತಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಜುಲೈ 25, 1977 ರಂದು ಭಾರತದ ಆರನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 1982ರಲ್ಲಿ ನೀಲಂ ಸಂಜೀವ ರೆಡ್ಡಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತರಾದರು. ನಂತರ ಕೃಷಿಯತ್ತ ಗಮನ ಹರಿಸಲು ಅನಂತಪುರಕ್ಕೆ ತೆರಳಿದರು. ಅಲ್ಲಿ ತಮ್ಮ ಜಮೀನಿನಲ್ಲಿ ಕೆಲಸ ಮಾಡಲು ತೀರ್ಮಾನಿಸಿದರು.
ನೀಲಂ ಸಂಜೀವ ರೆಡ್ಡಿ ಅವರು ಜೂನ್ 1, 1996 ರಂದು ತಮ್ಮ 83ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನ್ಯುಮೋನಿಯಾದಿಂದ ನಿಧನರಾದರು.