ಇಂದು ಜನ್ಮದಿನ


ಹೊ.ವೆ ಶೇಷಾದ್ರಿ ಅವರು ವಿದ್ವಾಂಸರಾಗಿ, ದೇಶಭಕ್ತರಾಗಿ, ಬರಹಗಾರರಾಗಿ, ಸಂಘಟನಕಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಪ್ರಸಿದ್ಧಿ ಹೊಂದಿದವರು. ಇವರು ಸಮಾಜ ಸೇವೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟವರು. ಶೇಷಾದ್ರಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ದೇಶದುದ್ದಗಲಕ್ಕೂ ಸಂಚಾರ ಕೈಗೊಂಡರು. ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ಇಂದು ಅವರ ಜಯಂತಿ.


ಪರಿಚಯ
ಹೊ.ವೆ ಶೇಷಾದ್ರಿ ಅವರು ಮೇ 26, 1926 ರಂದು ಬೆಂಗಳೂರಿನ ಹೊಂಗಸಂದ್ರದಲ್ಲಿ ಜನಿಸಿದರು. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಹೊ.ವೆ ಶೇಷಾದ್ರಿ ಆರಂಭಿಕ ಶಿಕ್ಷಣ ಹೊಂಗಸಂದ್ರದಲ್ಲಿ ಪ್ರಾರಂಭಿಸಿದರು. ಶೇಷಾದ್ರಿಯವರು 1946ರಲ್ಲಿ ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದರು. ನಂತರ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು.

ಆರ್‌ ಎಸ್‌ ಎಸ್‌ ನೊಂದಿಗೆ ಒಡನಾಟ
ಶೇಷಾದ್ರಿ ಅವರು ಆರ್‌ ಎಸ್‌ ಎಸ್‌ ಕಾರ್ಯಕರ್ತರಾಗಿ ಆರಂಭದಲ್ಲಿ ಬೆಂಗಳೂರು ನಗರದ ಪ್ರಚಾರಕರ ಜವಾಬ್ದಾರಿ ಹೊತ್ತಿದ್ದ ಶೇಷಾದ್ರಿಯವರು 1953-56ರ ಅವಧಿಯಲ್ಲಿ ಮಂಗಳೂರು ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. 1960ರಲ್ಲಿ ಕರ್ನಾಟಕ ಪ್ರಾಂತ ಪ್ರಚಾರಕರಾಗಿಯೂ ಹಾಗೂ 1980ರಲ್ಲಿ ಭಾರತದ ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು ರಾಜ್ಯಗಳನ್ನೊಳಗೊಂಡ ಕ್ಷೇತ್ರೀಯ ಪ್ರಚಾರಕರಾಗಿಯೂ ಸೇವೆಯನ್ನು ಸಲ್ಲಿಸಿದರು.


ಸಾಮಾಜಿಕ ಸುಧಾರಣೆ
ಹೊ.ವೆ ಶೇಷಾದ್ರಿ ಅವರು ಆರ್.ಎಸ್.ಎಸ್ ಸಂಘಟನೆಯ ಮೂಲಕ ಅಸ್ಪೃಶ್ಯತೆ, ಸಾಮಾಜಿಕ ದೋಷ ನಿವಾರಣೆ, ಮತಾಂತರ ವಿರುದ್ಧ ಹೋರಾಡಿದರು. ಸ್ವದೇಶಿ ವಸ್ತು ಬಳಕೆಯ ಆಂದೋಲನ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶವ್ಯಾಪಿ ಸಂಚರಿಸಿ ಅಪಾರ ಕಾರ್ಯ ನಿರ್ವಹಿಸುವುದರ ಜೊತೆಗೆ ಯುವ ಜನಾಂಗಕ್ಕೆ ನಿರಂತರ ಮಾರ್ಗದರ್ಶನ ನೀಡಿದರು.


ಸಾಹಿತ್ಯ ಕೊಡುಗೆ
ಶೇಷಾದ್ರಿ ಅವರು ಸಾಹಿತ್ಯದ ಕಡೆ ಹೆಚ್ಚು ಆಸಕ್ತಿ ಹೊಂದಿದ್ದರು. ಇವರು ಬರಹಗಳ ಮೂಲಕ ಸಂಘದ ವೈಚಾರಿಕತೆ ಹಾಗೂ ಸಿದ್ಧಾಂಯಗಕುರಿತು ಜನರಿಗೆ ತಿಳಿಸಿದ್ದಾರೆ. ಅವರು ಬರೆದ ಲೇಖನಗಳು ವಿಕ್ರಮ, ಉತ್ಥಾನ, ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷಿನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತಕಾಲಿಕೆಗಳಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತಿತ್ತು.ಅವರ ಲೇಖನಗಳು ವಿಮರ್ಶಾತ್ಮಕ ವಿಶ್ಲೇಷಣೆಗಳು ಜನಪ್ರಿಯಗೊಂಡಿದ್ದವು. ಶೇಷಾದ್ರಿಗಳು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ವಿಭಜನೆಯ ದುರಂತ ಕಥೆ, ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದ ‘ಭುಗಿಲು’, ಲಲಿತ ಪ್ರಬಂಧಗಳ ಸಂಗ್ರಹ ‘ತೋರ್ಬೆರಳು’; ಇಂಗ್ಲಿಷ್‌ನಲ್ಲಿ-ಬಂಚ್ ಆಫ್ ಥಾಟ್ಸ್, ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಶನ್, ಆರ್‌ಎಸ್‌ಎಸ್-ಎ ವಿಷನ್ ಇನ್ ಆಕ್ಷನ್, ಯೂನಿವರ್ಸಲ್ ಸ್ಪಿರಿಟ್ ಆಫ್ ಹಿಂದೂ ನ್ಯಾಷಲಿಸಮ್, ದಿ ವೇ, ಯೋಗ-ಎ ಸೋಷಿಯಲ್ ಇಂಪರೆಟಿವ್ ಸೇರಿದಂತೆ ಹಿಂದಿ ಮತ್ತು ಮರಾಠಿಯಲ್ಲಿ ಕೃತಿರೂಪ್ ಸಂಘ ದರ್ಶನ್, ನಾನ್ಯ ಪಂಥ್, ಉಗವೇ ಸಂಘ ಪಹಾಟ್ ಇತ್ಯಾದಿಗಳನ್ನು ಬರೆದಿದ್ದಾರೆ.


ಪ್ರಶಸ್ತಿ
ಹೊ.ವೆ ಶೇಷಾದ್ರಿ ಅವರಿಗೆ 1982ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಲಲಿತ ಪ್ರಬಂಧಗಳ ಸಂಕಲನ ತೋರ್ಬೆರಳು ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹೊ.ವೆ ಶೇಷಾದ್ರಿ ಅವರು ಆಗಸ್ಟ್‌ 14, 2005 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.