ಇಂದು ಜಯಂತಿ
ವಿನಾಯಕ ದಾಮೋದರ್‌ ಸಾವರ್ಕರ್‌ ರಾಷ್ಟ್ರ ಕಂಡಂತಹ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. ತಮ್ಮ ಇಡೀ ಜೀವನವನ್ನು ನಾಡಿನ ಸ್ವಾತಂತ್ರ್ಯಕ್ಕಾಗಿ, ಸಮಾಜ ಸುಧಾರಣೆಗಾಗಿ ಮುಡಿಪಾಗಿಟ್ಟವರು. ಸಾವರ್ಕರ್‌ ಅವರು ಲೇಖಕರಾಗಿ, ಕವಿಯಾಗಿ, ತತ್ತ್ವಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ ನಾಡಿಗೆ ನೀಡಿದ ಕೊಡುಗೆ ಅಪಾರ. ಇಂದು ಅವರ ಜಯಂತಿ.


ಪರಿಚಯ
ವೀರ್ ಸಾವರ್ಕರ್ ಮೇ 28, 1883ರಲ್ಲಿ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಭಾಗ್ರೂರ್‌ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ದಾಮೋದರ್ ಪಂತ್ ಹಾಗೂ ತಾಯಿ ರಾಧಾಬಾಯಿ. ವೀರ್‌ ಸಾವರ್ಕರ್‌ ತಮ್ಮ ಆರಂಭಿಕ ಶಿಕ್ಷಣವನ್ನು ನಾಸಿಕ್‌ನಲ್ಲಿ ಪಡೆದರು. ಬಾಲ್ಯದಿಂದಲೇ ಹೆಚ್ಚು ಓದುವ ಹವ್ಯಾಸವನ್ನು ಹೊಂದಿದ್ದ ಅವರು ಆ ಸಮಯದಲ್ಲಿ ಬಹಳ ಪ್ರಚಲಿತದಲ್ಲಿದ್ದ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್‌ ಅವರ ಕೇಸರಿ ಪತ್ರಿಕೆಯಿಂದ ಪ್ರಭಾವಿತರಾಗಿದ್ದರು.

1902 ರಲ್ಲಿ ಪುಣೆಯ ಫರ್ಗ್ಯೂಸನ್‌ ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಸೇರಿದರು. 1906 ರಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳಿದರು. ನಂತರ ಕಾನೂನು ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಸ್ವಾತಂತ್ರ್ಯ ಹೋರಾಟ
ಸಾವರ್ಕರ್‌ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸ್ವದೇಶಿ ಚಳುವಳಿಯಲ್ಲಿ ತೊಡಗಿಕೊಂಡಿದ್ದರು. ಇವರ ಅಣ್ಣ ಗಣೇಶ್ ಸಾವರ್ಕರ್ ಅಭಿನವ ಭಾರತವನ್ನು ಸ್ಥಾಪಿಸಿ ಅದರ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾದ ರಹಸ್ಯಕಾರಿ ಚಟುವಟಿಕೆಗಳನ್ನು ಮಾಡುತ್ತಿದ್ದರು. ಸಾವರ್ಕರ್‌ ವಿದ್ಯಾಭ್ಯಾಸಕ್ಕೆಂದು ಲಂಡನ್‌ ಗೆ ತೆರಳಿದಾಗ ಅಲ್ಲಿ ಭಾರತ ಭವನದ ಮೂಲಕ ಅಲ್ಲಿನ ಭಾರತೀಯ ಯುವಕರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರೇಪಿಸುತ್ತಿದ್ದರು. ಈ ಕಾರ್ಯದ ಪರಿಣಾಮವಾಗಿ ಭಾರತೀಯ ಕ್ರಾಂತಿಕಾರಿಗಳ ಹಿಂದೆ ಗೂಢಾಚಾರಿಗಳನ್ನು ಬಿಟ್ಟು‌ ಅವರನ್ನು ಬಂಧನಕ್ಕೊಳಪಡುವಂತೆ ಮಾಡುತ್ತಿದ್ದ ಕರ್ಜನ್ ವಾಯ್ಲಿಯನ್ನು ನೂರಾರು ಜನರ ನಡುವೆ ಗುಂಡಿಕ್ಕಿ ಕೊಂದ ಮದನ್ ಲಾಲ್ ಧಿಂಗ್ರ ನಂತಹ ತರುಣರು ಸಿದ್ಧರಾದರು.


1857ರ ಸ್ವಾತಂತ್ರ್ಯ ಸಂಗ್ರಾಮ
ಸಾವರ್ಕರ್‌ ಅವರು ಬ್ರಿಟಿಷ್‌ ಕುತಂತ್ರಗಳ ಬಗ್ಗೆ ಚೆನ್ನಾಗಿ ಅರಿತವರು. ನಮ್ಮ ಶೌರ್ಯದ ಇತಿಹಾಸವನ್ನು, ಹೋರಾಟಗಳನ್ನು ನಗಣ್ಯ ಮಾಡುವ ಎಲ್ಲಾ ಪ್ರಯತ್ನದಲ್ಲೂ ಬ್ರಿಟಿಷರು ಯಶಸ್ವಿಯಾದರು. 1857ರ ಹೋರಾಟವನ್ನೂ ಸಿಪಾಯಿ ದಂಗೆ ಎಂದು ಕರೆದು ಅದರ ಮಹತ್ವವನ್ನು ಭಾರತೀಯರು ಅರಿಯದಂತೆ ಮಾಡಿದರು. ಆದರೆ 1857ರಲ್ಲಿ ರಾಷ್ಟ್ರಾದ್ಯಂತ ನಡೆದ ಹೋರಾಟ ಕೇವಲ ಸಿಪಾಯಿ ದಂಗೆ ಮಾತ್ರವಲ್ಲ ಅದು ಭಾರತದ ಸ್ವಾತಂತ್ರ್ಯ ಸಂಗ್ರಾಮ ಎಂದು ಹೋರಾಟದ ಕುರಿತು ಪುಸ್ತಕ ಬರೆಯುವುದರ ಮೂಲಕ ತಿಳಿಸಿದರು. ಆದರೆ ಈ ಪುಸ್ತಕವನ್ನು ಪ್ರಕಟಿಸುವುದು ಸುಲಭದ ಕೆಲಸವಾಗಿರಲಿಲ್ಲ. ಅದಾಗ್ಯೂ ಹಲವು ಪ್ರಯತ್ನಗಳ ನಂತರ ಪುಸ್ತಕ ಬಿಡುಗಡೆ ಆಯ್ತು. ನೂರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯ ಸೋತ್ರವಾಯಿತು.


ಸಾವರ್ಕರ್ ಅವರ ಕ್ರಾಂತಿಕಾರಿ ಚಟುವಟಿಕೆಗಳು, ಪ್ರಚೋದನಾಕಾರಿ ಬರವಣಿಗೆಯ ಕಾರಣದಿಂದಾಗಿ ಬ್ರಿಟಿಷ್‌ ಸರ್ಕಾರ ಸಾವರ್ಕರ್‌ ಅವರನ್ನು 1910 ರಂದು ಲಂಡನ್‌ ನಲ್ಲಿ ಬಂಧಿಸಿದರು. ನಂತರ ಅವರನ್ನು ಹಡುಗಿನ ಮೂಲಕ ಭಾರತಕ್ಕೆ ಕರೆತರುವ ವೇಳೆ ಫ್ರಾನ್ಸ್ ನ
ಮರ್ಸೈಲ್ನ ಬಳಿ ಸಮುದ್ರಕ್ಕೆ ಹಾರಿದ್ದ ಸಾವರ್ಕರ್‌ ಈಜಿ ಫ್ರಾನ್ಸ್ ದಡ ಸೇರಿದ್ದರು. ಫ್ರಾನ್ಸ್ ನಲ್ಲಿ ಅಲ್ಲಿನ ನಿಯಮಗಳನುಸಾರ ಬ್ರಿಟಿಷರು ತಮ್ಮನ್ನು ಬಂಧಿಸಲಾಗುವುದಿಲ್ಲ ಎಂದುಕೊಂಡಿದ್ದರು. ಆದರೆ ಅವರನ್ನು ಲಂಚ ಪಡೆದ ಫ್ರಾನ್ಸ್ ಪೊಲೀಸರು ಬ್ರಿಟಿಷರಿಗೆ ಹಿಡಿದುಕೊಟ್ಟರು.


ಸಾವರ್ಕರ್ ಅವರ ಕ್ರಾಂತಿಕಾರಿ ಚಟುವಟಿಕೆಗಳಿಂದ ಅದಾಗಲೇ ಬ್ರಿಟಿಷರಿಗೆ ಆಗಿದ್ದ ತಲೆನೋವು ಎಂತಹದ್ದೆನ್ನುವುದು ಅವರಿಗೆ ನೀಡಲಾಗಿದ್ದ 50 ವರ್ಷಗಳ ಕರಿನೀರಿನ ಶಿಕ್ಷೆ ಸಾಬೀತು ಮಾಡುತ್ತದೆ.
ಸಾವರ್ಕರ್‌ ಅವರನ್ನು ಅಂಡಮಾನ್‌ನ ಕಾಲಾಪಾನಿ ಜೈಲಿಗೆ ಕಳಿಸಲಾಯಿತು. ಅವರು ಜೈಲಿನಲ್ಲಿ ಅನುಭವಿಸಿದ ಕಷ್ಟಗಳು ಹಲವಾರು. ಆದರೂ ಜೈಲಿನಲ್ಲಿದ್ದುಕೊಂಡೇ ತಂದಂತಹ ಸುಧಾರಣೆಗಳು ಅನೇಕ.


ಅಂಡಮಾನ್ ಜೈಲಿನಲ್ಲಿ ಸುಧಾರಣೆ
ಜೈಲಿನಲ್ಲಿದ್ದವರಿಗೆ ಅಕ್ಷರಭ್ಯಾಸ, ತೀವ್ರವಾಗಿ ನಡೆಯುತ್ತಿದ್ದ ಮತಾಂತರ ತಡೆ, ಜಾತಿಬೇಧದ ಕುರಿತು ಜಾಗೃತಿ, ಬಿಡುಗಡೆಯಾಗಿ ತೆರಳುತಿದ್ದ ಕ್ರಾಂತಿಕಾರಿಗಳ ಮೂಲಕ ತಮ್ಮ ಮುಂದಿನ ಯೋಜನೆಗಳ ರವಾನೆ, ಕಾಲಾಪಾನಿ ಶಿಕ್ಷೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಲು ಮುಂದಾಗುತ್ತಿದ್ದವರಿಗೆ ಪ್ರೇರಣೆ ತುಂಬಿ ರಾಷ್ಟ್ರಭಾವ ಜಾಗರಣಕ್ಕೆ ಮುಂದಾದ ಪರಿ, ಜೈಲಿನಲ್ಲಿದ್ದ ಎಲ್ಲಾ ಕ್ರಾಂತಿಕಾರಿಗಳಿಗೆ ತೊಂದರೆ ಕೊಡುತ್ತಿದ್ದ ಬಾರಿ ಎಂಬ ಕ್ರೂರಿ ಜೈಲರ್ ಕೆಲವು ವರ್ಷಗಳ ನಂತರ ಸಾವರ್ಕರ್ ನನ್ನ ತಂಟೆಗೆ ಬಾರದಿದ್ದರೆ ಸಾಕು ಎನ್ನುವಲ್ಲಿಗೆ ಬಂದು ನಿಲ್ಲಬೇಕಾದರೆ ಸಾವರ್ಕರ್ ಜೈಲಿನಲ್ಲಿದ್ದುಕೊಂಡೇ ತಂದಂತಹ ಬದಲಾವಣೆ ಅಪಾರ.1924 ರಲ್ಲಿ ಸಾವರ್ಕರ್‌ ಅವರನ್ನು ಕಾಲೇಪಾನಿ ಜೈಲಿನಿಂದ ರತ್ನಗಿರಿ ಜೈಲಿಗೆ ಸ್ಥಳಾಂತರಿಸಿದರು. ನಂತರ ಅವರು 1937ರಲ್ಲಿ ಜೈಲಿನಿಂದ ಬಿಡುಗಡೆಗೊಳಿಸಲಾಯಿತು.


ಸಮಾಜ ಸುಧಾರಣೆ
ಕ್ರಾಂತಿಕಾರಿ ಸಾವರ್ಕರ್ ಸಾಮಾಜಿಕವಾಗಿ ಬದಲಾವಣೆ ತರುವುದರಲ್ಲೂ ಕ್ರಾಂತಿಕಾರಿಯೇ ಸರಿ. ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಆ ಕಾಲದಲ್ಲಿ ಪತಿತ ಪಾವನ ಮಂದಿರವನ್ನು ನಿರ್ಮಿಸಿ ಶೋಷಿತ ವರ್ಗದ ಜನರ ದನಿಯಾದರು. ಗ್ರಾಮದಲ್ಲೊಂದು ಹೊಟೇಲ್ ನಿರ್ಮಿಸಿ ಅಲ್ಲಿ ಶೋಷಿತ ಸಮಾಜದ ಬಂಧುಗಳನ್ನು ಅಡುಗೆಯವರನ್ನಾಗಿ ನೇಮಿಸಿ ಜಾತಿ ಬೇಧದ ಅಮಲೇರಿದ್ದ ಅನೇಕರಿಗೆ ಮಾನವೀಯತೆಯ ಅರಿವು ಮಾಡಿಸಿಕೊಟ್ಟಿದ್ದರು. ಶೋಷಿತ ಸಮಾಜದೊಂದಿಗೆ ಬೆರೆಯಲೂ ಹಿಂಜರಿಕೆ ಇದ್ದ ಕಾಲದಲ್ಲಿ ಸಮಾಜದ ಇತರೆ ಮಹಿಳೆಯರು ಶೋಷಿತ ಮಹಿಳೆಯರೊಂದಿಗೆ ಮಾತನಾಡಲು ಮುಂದೆ ಬರಲು ಹಿಂದೇಟಾಕುತ್ತಿದ್ದಾಗ ತಮ್ಮ ಪತ್ನಿಯ ನೇತೃತ್ವದಲ್ಲೇ ಅರಶಿಣ ಕುಂಕುಮ ಎಂಬ ಕಾರ್ಯಕ್ರಮದ ಮೂಲಕ ಅವರ ಮನೆಗಳಿಗೇ ತೆರಳಿ ಕಾರ್ಯಕ್ರಮವನ್ನು ಆಚರಿಸುವಂತೆ ಮಾಡಿದರು.


ಪ್ರಖರ ಲೇಖಕ
ಖಡ್ಗದಂತಹ ಹರಿತವಾದ ಬರವಣಿಗೆಯ ಸರದಾರ ಸಾವರ್ಕರ್. ಕಾಲಾಪಾನಿಯಲ್ಲಿಯಲ್ಲಿ ಬರೆಯಲು ಪೆನ್ನು, ಪೇಪರ್ ಇಲ್ಲದಿದ್ದಾಗ ತಮ್ಮ ಆಲೋಚನೆಗಳನ್ನು ಬರೆಯಲು ಕೈಗೆ ತೊಡಿಸಿದ್ದ ಬೇಡಿಯನ್ನೇ ಲೇಖನವನ್ನಾಗಿಸಿ 10000 ಸಾಲುಗಳ ಕೃತಿಯನ್ನೇ ರಚಿಸಿದ್ದರು. ಗೋಮಂತಕ, ಹಿಂದು ಪದ ಪದಶಾಹಿ, ಹಿಂದೂ ಎಂದರೆ ಯಾರು?, ಹಿಂದುತ್ವ, ಮೈ ಟ್ರ್ಯಾನ್ಸ್ ಪೋರ್ಟೇಶನ್ ಫಾರ್ ಲೈಫ್, ಮೋಪ್ಲಾ, ಕಾಲಾಪಾನಿ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.
ಹಿಂದೂ ಸೈನಿಕೀಕರಣ, ಅಖಂಡ ಭಾರತ ಸ್ವಾತಂತ್ರ್ಯದ ಕನಸು, ಭಾರತೀಯ ಭಾಷೆಗಳ ಹೆಚ್ಚು ಬಳಕೆಗೆ ನೀಡಿದ ಮಹತ್ವ, ಸುಭಾಶ್ ಚಂದ್ರ ಬೋಸ್ ಆದಿಯಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಮಾರ್ಗದರ್ಶನ, ಅಂತರಾಷ್ಟ್ರೀಯ ಮಟ್ಟದಲ್ಲಿ ಅವರಿಗಿದ್ದ ಸಂಪರ್ಕಗಳೆಲ್ಲವೂ ಅವರ ಬಹುರೂಪಿ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.
ಸ್ವಾತಂತ್ರ್ಯದ ನಂತರ ಗಾಂಧಿ ಹತ್ಯೆಯ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು‌. ಆದರೆ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದೆ‌. ಸಾವರ್ಕರ್ ಅವರಿಗೆ ನ್ಯಾಯ ಸಿಗಲೇಬೇಕೆಂಬ ಹೆಬ್ಬಯಕೆಯಿಂದ ವಿಚಾರಣೆಯ ವೇಳೆ ಸ್ವತಃ ಡಾ. ಬಿ. ಆರ್ ಅಂಬೇಡ್ಕರ್ ಹಾಜರಾಗಿದ್ದು ಸಾವರ್ಕರ್ ಅವರ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತದೆ.

ನಾಡಿಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಸಾವರ್ಕರ್ ಅವರು ಅನಾರೋಗ್ಯದಿಂದ ಫೆಬ್ರವರಿ 26, 1966ರಲ್ಲಿ ಇಹಲೋಕ ತ್ಯಜಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.