ನಾಗ್ಪುರ: ವಿದ್ಯೆಯ ಉಪಯೋಗ ಪ್ರಬೋಧನೆಗಾಗಿ ಇರಬೇಕು. ಆದರೆ ವರ್ತಮಾನದಲ್ಲಿ ತಂತ್ರಜ್ಞಾನ ಎಂಬ ವಿದ್ಯೆಯು ಅಸತ್ಯವನ್ನು ಹೇಳುವುದಕ್ಕಾಗಿ ಬಳಕೆಯಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ಮೇ 16, 2024ರಂದು ನಾಗಪುರದ ರೇಶಿಂಭಾಗ್ ನಲ್ಲಿ ಆರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ವಿಕಾಸ ವರ್ಗ – ದ್ವಿತೀಯ ಇದರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಚುನಾವಣೆ ಎನ್ನುವುದು ಒಮ್ಮತ ಮೂಡಿಸುವ ಪ್ರಕ್ರಿಯೆ. ಸಂಸತ್ತಿನಲ್ಲಿ ಯಾವುದೇ ಪ್ರಶ್ನೆಗೆ ಎರಡೂ ಕಡೆಯವರು ಸಮಾನ ಮನಸ್ಕರಾಗಿ ಯೋಚಿಸಬೇಕಾದ ವ್ಯವಸ್ಥೆ ಇದೆ. ಆದರೆ ಚುನಾವಣಾ ಪ್ರಚಾರದಲ್ಲಿ ನಾವು ಪರಸ್ಪರ ಬೈಯುವುದು, ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವುದು ಮತ್ತು ಸುಳ್ಳು ಸುದ್ದಿ ಹಬ್ಬಿಸುವ ರೀತಿ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕಳೆದ ಕೆಲವು ವರ್ಷಗಳಲ್ಲಿ ದೇಶ ಪ್ರಗತಿಯ ಹಾದಿಯಲ್ಲಿರಬಹುದು. ಹಾಗೆಂದು ನಾವು ಚುನಾವಣೆಯ ಉತ್ಸಾಹದಿಂದ ಮುಕ್ತರಾಗಬೇಕು ಮತ್ತು ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸದಾ ಯೋಚಿಸುವಂತಾಗಬೇಕು ಎಂದು ನುಡಿದರು.
ಒಮ್ಮತದಿಂದ ಕೆಲಸ ಮಾಡುವುದು ನಮ್ಮ ಸಂಸ್ಕೃತಿ. ನಾವು ಶಕ್ತಿಯ ಜೊತೆಗೆ ಶೀಲ ಸಂಪನ್ನರಾಗಬೇಕು. ಶೀಲವೆನ್ನುವುದು ನಮ್ಮ ಧರ್ಮ ಮತ್ತು ಸಂಸ್ಕೃತಿಯಿಂದ ಬಂದಿದೆ. ಅಂತಹ ಸಂಸ್ಕೃತಿಯನ್ನು, ಅದರ ಮೌಲ್ಯಗಳನ್ನು ಉಳಿಸಲು ನಮ್ಮ ಪೂರ್ವಜರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜಸ್ಥಾನದ ಶ್ರೀ ಕ್ಷೇತ್ರ ಗೋದಾವರಿ ಧಾಮದ ಪೀಠಾಧೀಶ ಮಹಂತ ಗುರುದೇವ ಶ್ರೀ ರಾಮಗಿರಿ ಮಹಾರಾಜ್ ಮಾತನಾಡಿ ಅನುಕೂಲ ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಮರ್ಪಣ, ಸಮೃದ್ಧಿ ಹಾಗೂ ಸಾಮಾಜಿಕ ಸಮರಸತೆಯ ಮಾರ್ಗವನ್ನೇ ಅನುಸರಿಸಬೇಕು ಎನ್ನುವುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಕಾಣಬಹುದು. ಸಂಘದ ಈ ಸೇವಾ ಕಾರ್ಯದಿಂದ ನಾನು ಪ್ರಭಾವಿತವಾಗಿದ್ದೇನೆ. ಡಾ.ಕೇಶವ ಬಲಿರಾಮ ಹೆಡಗೇವಾರರು ಬಿತ್ತಿದ ಬೀಜ ಇಂದು ಬೃಹತ್ತಾಗಿ ಬೆಳೆಯಲು ನಿಮ್ಮಂತಹ ಕಾರ್ಯಕರ್ತರ ಶ್ರಮವಿದೆ .
ಇದು ಯುದ್ಧಭೂಮಿಯಲ್ಲ, ಬುದ್ಧನ ಭೂಮಿ, ಪ್ರಭು ರಾಮಚಂದ್ರನ ಭೂಮಿ. ರಾಮಚಂದ್ರನ ಆದರ್ಶವನ್ನು ಈ ಸಂಸ್ಕೃತಿ ನಮಗೆ ನೀಡಿದೆ. ಪಿತೃವಚನ ಪಾಲನೆಗಾಗಿ ರಾಜ್ಯವನ್ನು ತ್ಯಾಗ ಮಾಡುವ ಆದರ್ಶ, ಪ್ರಾಣ ಹೋದರೂ ಸರಿ ವಚನವನ್ನು ಬಿಡಬಾರದು ಎನ್ನುವುದನ್ನು ಈ ಸಂಸ್ಕೃತಿ ಕಲಿಸಿದೆ. ತನ್ನ ಐವರು ಪುತ್ರರನ್ನು ಕೊಂದ ಅಶ್ವತ್ಥಾಮನನ್ನು ಕೊಂದರೆ ಆತನ ತಾಯಿಗೆ ನೋವಾಗುತ್ತದೆ ಎಂದು ಹೇಳುವ ದ್ರೌಪದಿಯ ಮಾತನ್ನು ನಮ್ಮ ಸಂಸ್ಕೃತಿ ಮಾತ್ರ ಕಾಣಬಹುದು.ಆದರೆ ಇಂದು ಮಾತಾಪಿತರನ್ನು ವೃದ್ಧಾಶ್ರಮಕ್ಕೆ ಕಳಿಸುವ ಕಾರ್ಯ ನಡೆಯುತ್ತಿರುವುದು ಬೇಸರದ ವಿಚಾರ ಎಂದು ನುಡಿದರು.
ಇಂದು ಸನಾತನ ಧರ್ಮವನ್ನು ನಷ್ಟ ಮಾಡುವ ಪ್ರಯತ್ನಗಳು ನಡೆಯುತ್ತಿದ್ದು, ಸಂತ ಪರಂಪರೆ ಮತ್ತು ನಿಮ್ಮಂತಹ ದೇಶಭಕ್ತರಿಂದ ಅದರ ರಕ್ಷಣೆ ಆಗುತ್ತಿದೆ. ಯಾರಲ್ಲಿ ಅಸಂತುಷ್ಟತೆ ಇದೆಯೋ ಅವನೇ ದರಿದ್ರ ಎಂದು ಸಿಕಂದರನಿಗೆ ಹೇಳುವ ಧೈರ್ಯ ಮಾಡಿದವರು ಈ ನೆಲದ ಸಂತರು. ಈ ನೆಲದಲ್ಲಿ ಆತ್ಮವು ಸನಾತನ ಹಾಗೂ ಅಚಲವಾಗಿದೆ. ಆತ್ಮ ಕ್ಷುದ್ರವಂತೂ ಅಲ್ಲ. ಎಲ್ಲ ವ್ಯಕ್ತಿಗಳ ಶರೀರವೂ ಪಂಚಭೂತಗಳಿಂದಲೇ ಆಗಿದೆ. ಅಂದಮೇಲೆ ಸ್ಪೃಶ್ಯ ಅಸ್ಪೃಶ್ಯತೆಗೆ ಜಾಗ ಎಲ್ಲಿದೆ? ಎಂದರು.
ಸರ್ದಾರ್ ಇಕ್ಬಾಲ್ ಸಿಂಗ್ ಅವರು ಶಿಬಿರದ ಸರ್ವಾಧಿಕಾರಿಯಾಗಿದ್ದರು. ರಾಷ್ಟ್ರಾದ್ಯಂತದಿಂದ 932 ಶಿಕ್ಷಾರ್ಥಿಗಳು ವರ್ಗದಲ್ಲಿ ಭಾಗವಹಿಸಿದರು. ಕರ್ನಾಟಕ ದಕ್ಷಿಣ ಪ್ರಾಂತದ 22 ಶಿಕ್ಷಾರ್ಥಿಗಳು, ಕರ್ನಾಟಕ ಉತ್ತರ ಪ್ರಾಂತದ 22 ಶಿಕ್ಷಾರ್ಥಿಗಳು ವರ್ಗದಲ್ಲಿ ಭಾಗವಹಿಸಿದರು.