ಲೇಖನ: ನಾರಾಯಣ ಶೇವಿರೆ
ತುಂಬಾ ಚರ್ಚಿತ ಪಾತ್ರಗಳಲ್ಲಿ ಮಹಾಭಾರತದ ಕರ್ಣನದೂ ಒಂದು. ಆತನ ಒಳ್ಳೆಯತನವನ್ನು ಕೊಂಡಾಡಿದವರೂ ಇದ್ದಾರೆ. ಕೆಟ್ಟತನವನ್ನು ಹಳಿದವರೂ ಇದ್ದಾರೆ. ಆತನಿಗೆ ಬದುಕಿನಲ್ಲಿ ಅನ್ಯಾಯವೇ ಆಯಿತೆಂದು ಕೊರಗಿದವರೂ ಇದ್ದಾರೆ, ಆತನಿಂದ ಅನ್ಯಾಯಸಮಸ್ತವೇ ಘಟಿಸಿತೆಂದು ಅವಲೋಕಿಸಿದವರೂ ಇದ್ದಾರೆ.
ನಮ್ಮ ಕೆಲವು ಕವಿಗಳಂತೂ ಕರ್ಣನ ಬಗ್ಗೆ ಒಂದು ಕರುಣೆಯನ್ನು ಇರಿಸಿಯೇ ಆತನನ್ನು ಚಿತ್ರಿಸಿದ್ದಾರೆ.
ಅನ್ಯಾಯವೋ ದುರದೃಷ್ಟವೋ..?
ಅನ್ಯಾಯಕ್ಕೆ ಈಡಾದವರ ಬಗ್ಗೆ ಕರುಣೆ ಸಹಜ.
ಜತೆಗೆ; ಅನ್ಯಾಯಕ್ಕೊಳಗಾಗುವುದು ಬೇರೆ, ಪಡಕೊಂಡದ್ದು ಬೇರೆ, ದುರದೃಷ್ಟ ಬೇರೆ.
ನಿಜ ತಾಯ್ತಂದೆಯರು ಯಾರೆಂಬುದು ಗೊತ್ತಿಲ್ಲ, ಸೂತಪುತ್ರ ಎಂಬ ಅಭಿದಾನ ಹೊತ್ತುಕೊಳ್ಳಬೇಕಾಯಿತು, ಶಸ್ತ್ರವಿದ್ಯೆ ಲಭಿಸಿಯೂ ಗುರುಶಾಪಕ್ಕೆ ಗುರಿಯಾಗಬೇಕಾಯಿತು.. ಇವುಗಳನ್ನೆಲ್ಲ ಅನ್ಯಾಯದ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
ಅನ್ಯಾಯವನ್ನು ಯಾರೋ ಮಾಡಬೇಕಾಗುತ್ತದೆ. ಪ್ರತಿಕ್ರಿಯೆಯಾಗಿ ಅಲ್ಲ, ಕ್ರಿಯೆಯಾಗಿಯೇ ಮಾಡಬೇಕಾಗುತ್ತದೆ. ಈ ನೆಲೆಯಲ್ಲಿ ಆತನಿಗೊದಗಿದ್ದು ಅನ್ಯಾಯಕ್ಕಿಂತ ದುರದೃಷ್ಟವೇ ಸರಿ ಎನ್ನುವುದಾಗುತ್ತದೆ. ಪಡಕೊಂಡು ಬಂದದ್ದರ ಪಾಲೂ ಇದೆ ಎಂದು ಕಾಣುವುದಾಗುತ್ತದೆ.
ನಿಜ ತಾಯ್ತಂದೆಯರು ಗೊತ್ತಾಗುತ್ತಿದ್ದರೆ ಅದೃಷ್ಟ ಖುಲಾಯಿಸುತ್ತಿತ್ತು ಎಂಬುದು ಒಂದು ವಾದ. ಪ್ರಬಲ ವಾದವೇ.
ಈ ವಾದಕ್ಕೆ ಗಟ್ಟಿತನವಿದೆಯೇ?
ಮಾತೃತ್ವದ ಕ್ರಮ
ವಿವಾಹಕ್ಕಿಂತ ಮುಂಚೆ ಹುಟ್ಟಿದವ. ಆತನನ್ನು ಪಡೆದ ಕುಂತಿ ಲೋಕಾಪವಾದಕ್ಕೆ ಹೆದರಿ ಬಿಟ್ಟಳು. ಗಂಗೆಯಲ್ಲಿ ತೇಲಿಬಿಟ್ಟಳು.
ತೇಲಿಬಿಟ್ಟ ಕ್ರಮ ಹೇಗಿತ್ತೆಂದರೆ; ಮಗು ತನ್ನದೆಂದು ಯಾರಿಗೂ ಗೊತ್ತಾಗಬಾರದು, ಯಾವುದೇ ಕಾರಣಕ್ಕೂ ಮುಳುಗಿ ಸಾಯಬಾರದು, ಯಾರ ಕೈಗಾದರೂ ಸಿಗಬೇಕು, ಸಿಕ್ಕವರಿಗೆ ಮಗುವನ್ನು ಸಾಕಲು ಸಾಧ್ಯವಾಗಬೇಕು.
ಒಂದೆಡೆ ಮಾತೃತ್ವದ ಸಂಪನ್ನ ಭಾವ. ಮತ್ತೊಂದೆಡೆ ಲೋಕಾಪವಾದದ ಭರಪೂರ ಆತಂಕ. ಎರಡಕ್ಕೂ ತನ್ನದೇ ರೀತಿಯಲ್ಲಿ ದಾರಿ ಕಂಡುಕೊಂಡಳು ಮಹಾಮಾತೆ ಕುಂತಿ.
ಆಕೆ ಮಾತೃತ್ವವನ್ನಷ್ಟೆ ಪ್ರಕಟಗೊಳಿಸುತ್ತಿದ್ದರೆ ಮುಂದೆ ನಿಜ ಮಾತೃತ್ವವನ್ನು ಪಡೆವ ಅವಕಾಶದಿಂದಲೇ ವಂಚಿತಳಾಗುತ್ತಿದ್ದಳೇನೋ!
ಇಷ್ಟಾಗಿಯೂ ಕರ್ಣನ ಕುರಿತು ಕರುಣೆ ತೋರುವವರು ಕುಂತಿಯನ್ನು ಯೇನಕೇನ ಆಕ್ಷೇಪಿಸುವುದು ನಡೆದೇ ಇದೆ.
ಕೆಲವರ ಆಕ್ಷೇಪದಲ್ಲಿರುವುದು ತರ್ಕ. ಕೆಲವರದು ಆವೇಶ. ಭಾವಾವೇಶ. ಎರಡನ್ನೂ ಅಪ್ರಾಮಾಣಿಕ ಎನ್ನಲಾಗದೆನ್ನಿ.
ಕಡಮೆಯಿಲ್ಲದ ಅದೃಷ್ಟ
ಒಂದೊಮ್ಮೆ ಕುಂತಿ ಲೋಕಾಪವಾದಕ್ಕೆ ಸೆಡ್ಡುಹೊಡೆದು ವಾಸ್ತವವನ್ನು ಹೊರಗೆಡವಿದಳು ಅಂತಿಟ್ಟುಕೊಳ್ಳೋಣ. ಕರ್ಣನ ಅದೃಷ್ಟ ಖುಲಾಯಿಸುತ್ತಿತ್ತೆ?
ವಿವಾಹವಾಗದ ತಾಯಿಯ ಮಗ, ಕಾನೀನ ಎಂದು ಜಗ ಜರೆಯುತ್ತಿತ್ತು. ವಿದ್ಯೆಯೇ ಕನಸಾಗುತ್ತಿತ್ತು!
ಈಗ, ಅಂದರೆ ಭವಿಷ್ಯದಲ್ಲಿ; ಆತ ಕುಂತಿಪುತ್ರ, ಜ್ಯೇಷ್ಠಪಾಂಡವ ಎಂದೆಲ್ಲ ಹೇಳಲು ಬರುತ್ತದೆ. ಕಾವ್ಯವು ಹಾಗೆ ತೆರೆದುಕೊಳ್ಳುತ್ತದೆ. ಆದರೆ ವರ್ತಮಾನದ ಸಂದರ್ಭ ಇದಕ್ಕೆ ಭಿನ್ನ. ಅಲ್ಲಿ ಆತನಿಗೆ ಕಾನೀನ ಅನ್ನುವ ಜರೆಯುವಿಕೆಯೇ ಕಟ್ಟಿಟ್ಟದ್ದು. ಇಂಥ ಭೀಕರ ಜರೆಯುವಿಕೆಯಿಂದ ಪಾರಾದುದೇನು ಕಡಮೆ ಅದೃಷ್ಟವೆ!
ಕುಂತಿ ಸತ್ಯ ಉಸುರುತ್ತಿದ್ದರೆ, ಕುಂತಿ – ಪಾಂಡು ವಿವಾಹಕ್ಕೇ ತೊಡಕಾಗುತ್ತಿತ್ತು. ಹಾಗಾಗುತ್ತಿದ್ದರೆ ಕರ್ಣನಿಗೆ ಮತ್ತೆಲ್ಲಿಯ ಪಾಂಡವಜ್ಯೇಷ್ಠತ್ವ, ಮತ್ತೆಲ್ಲಿಯ ಸಿಂಹಾಸನ?
ಜತೆಗೆ; ಕುಂತಿಯು ನಿರ್ವಹಿಸಬಹುದಾಗಿದ್ದ ನಿರ್ಭೀತ ನಡೆ ಮುಂದಿನ ಪೀಳಿಗೆಯ ಸಾಂಸ್ಕೃತಿಕ ಚಿತ್ರಣವನ್ನೇ ಉಲ್ಲೋಲಕಲ್ಲೋಲ ಮಾಡುತ್ತಿತ್ತು! ತಮ್ಮ ಅಪ್ಪ-ಅಮ್ಮಂದಿರು ಜತೆಗಿಲ್ಲದ, ಬೇರೆಯವರ ಜತೆಗಿರುವ.. ಜೀವನದ ಇಂಥ ಪಶ್ಚಿಮದ ಬಗೆಯ ಕಲಬೆರಕೆ ನಡೆ ಇಲ್ಲಿಯದೂ ಆಗುತ್ತಿತ್ತು. ಜ್ಯೇಷ್ಠರು ನಡೆದದ್ದನ್ನಲ್ಲವೆ ಉಳಿದವರೂ ಅನುಸರಿಸುವುದು! ಹಾಗಾಗಿ ಕುಂತಿ ಸತ್ಯ ಹೇಳದಿರುವಲ್ಲಿ ಇರುವ ಸಾಂಸ್ಕೃತಿಕ ಅನಿವಾರ್ಯತೆಯನ್ನು ಗುರುತಿಸಬೇಕು. ಇರಲಿ.
ಒಟ್ಟಿನಲ್ಲಿ, ಈಯೆಲ್ಲ ಹಿನ್ನೆಲೆಯಲ್ಲಿ; ತಾಯ್ತಂದೆಯರು ಯಾರೆಂದು ಗೊತ್ತಾಗದೇ ಹೋದುದು ಅನ್ಯಾಯವೂ ಅಲ್ಲ, ದುರದೃಷ್ಟವೂ ಅಲ್ಲ, ಕರ್ಣನ ಅದೃಷ್ಟವೇ ಸರಿ ಎಂದು ಈ ನಿಟ್ಟಿನಲ್ಲಿ ನೋಡಲು ಬರುತ್ತದೆ.
ತೆರೆದುಕೊಂಡ ದಾರಿ
ಕವಿಗಳು ಪದೇಪದೇ ಉಲ್ಲೇಖಿಸಿಯೇ ಆತ ಸೂತಪುತ್ರ ಎನ್ನುವುದು ಬಿಂಬಿತವಾದುದು. ಪರೀಕ್ಷಾರಂಗದಲ್ಲಿ ಒಮ್ಮೆ ಭೀಮ ಸೂತಪುತ್ರನೆಂದು ಹೀಯಾಳಿಸಿದ. ಅದು ಅರ್ಜುನನ ಜತೆಗಿನ ದ್ವಂದ್ವಕ್ಕೆ ತಯಾರಾದಾಗ. ದ್ರೋಣರು ತಮ್ಮ ರಾಜಕುವರ ಶಿಷ್ಯರನ್ನು ಅವಲೋಕಿಸಲು ಏರ್ಪಡಿಸಿದ್ದ ಪರೀಕ್ಷಾಸಂದರ್ಭವದು. ‘ರಾಜಕುವರ’ನೂ ಅಲ್ಲದ, ನಿಜ ಪರೀಕ್ಷಾರ್ಥಿಯೂ ಅಲ್ಲದ ಕರ್ಣ ಅಲ್ಲಿಗೆ ಯಾಕಾದರೂ ಬಂದನೋ!
ಇರಲಿ. ಆದರೆ; ತಾಯ್ತಂದೆಯರ ಬಗೆಗೆ ಮಾಹಿತಿ ಇಲ್ಲದ ಆತನನ್ನು ಎಲ್ಲರೂ ಪರಿಗಣಿಸಿದ್ದು ಸೂತಪಾಲಿತ ಪುತ್ರನೆಂದೇ.
ಸಾಕು ತಾಯ್ತಂದೆಯರು ಆತನನ್ನು ಸ್ವಂತ ಮಗುವಿಗಿಂತ ಮಿಗಿಲಾಗಿಯೇ ಸಾಕಿದ್ದಾರೆ. ಸಂಭ್ರಮಿಸಿ ಸಾಕಿದ್ದಾರೆ. ಸಾಕಿ ಸಂಭ್ರಮಿಸಿದ್ದಾರೆ. ತಮ್ಮ ಕುಲಕಸುಬಿಗಿಂತ ಭಿನ್ನವಾಗಿ ತೊಡಗಿದ್ದಕ್ಕೆ ಆಕ್ಷೇಪಿಸದೆ ಅವಕಾಶ ನೀಡಿದ್ದಾರೆ. ಹಾಗೆ ಕ್ಷತ್ರಿಯೋಚಿತವಾದುದನ್ನು ಸಾಧಿಸಿದಾಗ ಸಂಭ್ರಮಿಸಿದ್ದಾರೆ.
ಆತನೂ, ಸೂತಕುಲದಲ್ಲಿ ಬೆಳೆದರೂ ಸಾಧನೆಯಲ್ಲಿ ಆ ಕುಲವನ್ನು ಮೀರಿನಿಂತ. ಕುಲವನ್ನು ಕುರಿತು ಸುಳ್ಳು ಹೇಳಿಯಾದರೂ ಶಸ್ತ್ರಾಸ್ತ್ರ ಹೊಂದಿದ. ಆ ಸುಳ್ಳಿಗಾಗಿ ಶಾಪದ ಬೆಲೆತೆರಬೇಕಾಯಿತಾದರೂ ಕಲಿತ ವಿದ್ಯೆ ದಕ್ಕಿತಲ್ಲ!
ಇಂಥಲ್ಲಿ; ದುರದೃಷ್ಟ ಆತನ ಬೆನ್ನುಬಿಡಲಿಲ್ಲ ಎಂದುಕೊಂಡರೂ ಅದೃಷ್ಟವೂ ಜತೆಗಿದ್ದೇ ಇತ್ತೆನ್ನುವುದನ್ನು ಅಲ್ಲಗಳೆಯುವುದಕ್ಕುಂಟೇ!
ಅನಿಂದ್ಯ ವ್ಯಕ್ತಿತ್ವ
ಸೂತಕುಲದವ ಎಂದು ಎನ್ನಿಸಿಕೊಂಡದ್ದೇ ದೊಡ್ಡ ದುರದೃಷ್ಟ ಎಂದುಕೊಳ್ಳುವಿರಾದರೆ ವಿದುರ – ಸಂಜಯರು ಅವನಿಗಿಂತ ದೊಡ್ಡ ದುರದೃಷ್ಟವಂತರು ಎಂದು ಬಿಂಬಿತವಾಗಬೇಕಿತ್ತು. ವಿದುರನಂತೂ ದಾಸೀಪುತ್ರನಾಗಿರುವುದು ಎಲ್ಲರಿಗೂ ಗೊತ್ತಿದ್ದ ವಿಷಯವಾಗಿತ್ತು. ಯಾರೂ ಆತನನ್ನು ಹಾಗೆ ಕರೆಯಲೂ ಇಲ್ಲ, ಹೀಯಾಳಿಸಲೂ ಇಲ್ಲ.
ಹ್ಞಾ! ಹೀಯಾಳಿಸಿದವರಿದ್ದಾರೆ. ಅದು ಕೌರವ ಮತ್ತವನ ಪಾಳಯದವರು. ಅದರಲ್ಲಿ ಕರ್ಣನೂ ಸೇರಿದ್ದ.
ಜಾತಿನಿಂದಕರ ಪಾಳಯದಲ್ಲಿದ್ದುಕೊಂಡು ತಾನು ಜಾತಿನಿಂದೆಗೆ ಒಳಗಾದೆನೆಂದು ಹಪಹಪಿಸುವುದಕ್ಕಿಲ್ಲವಲ್ಲ!
ಅಧರ್ಮಿಗಳನ್ನುಳಿದ ಮಿಕ್ಕವರಾರೂ ವಿದುರನನ್ನು ಜಾತಿಸೂಚಕವಾಗಿ ನಿಂದಿಸಿಲ್ಲ. ಇದಕ್ಕೆ ಆತನ ಜಾತಿಯನ್ನು ಮೀರಿನಿಲ್ಲಬಲ್ಲ ಸಾಧನೆಯಲ್ಲ, ಗುಣಸ್ವಭಾವಗಳೇ ಕಾರಣ.
ಧರ್ಮವನ್ನು ಬಿಡಲಾರ ಆತ. ಅಧರ್ಮವನ್ನು ತನ್ನವರೇ ಗೈದರೂ ಬೆಂಬಲಿಸಲಾರ. ಅಧರ್ಮದ ಕೃತ್ಯವನ್ನು ಪ್ರತಿಭಟಿಸದೆಯೂ ಇರಲಾರ. ಹೀಗಿರಲು ಯಾವ ಸಾಧನೆಯನ್ನೂ ಮಾಡಬೇಕಾಗಿಲ್ಲ. ಧರ್ಮವಿವೇಕ ಮತ್ತು ಅದರಲ್ಲಿ ಸಾಗುವ ಸ್ವಭಾವವಿಶೇಷಗಳಿದ್ದರೆ ಸಾಕು.
ಇಂಥವ ನಿಂದನೀಯ ಹುಟ್ಟನ್ನೇ ಪಡೆದರೂ ನಿಂದೆಗೊಳಗಾಗಲಾರ.
ನಿಂದನೀಯ ಕೃತ್ಯಗಳನ್ನೇ ಸ್ವಭಾವವಾಗಿಸಿಕೊಂಡವ ಎಂಥದ್ದೇ ಗೌರವಾರ್ಹ ಹುಟ್ಟನ್ನು ಎಷ್ಟೇ ಉಚ್ಚಕುಲದಲ್ಲಿ ಪಡೆದರೂ ಗೌರವವನ್ನು ಹೊಂದಲುಂಟೇ?
ನಿಂದ್ಯಕೃತ್ಯಗಳನ್ನೆಸೆದವನಿಗೆ ನಿಂದೆ ಸಂದರೆ ಪರಿತಪಿಸುವುದಕ್ಕುಂಟೇ?
ವಸ್ತ್ರಾಪಹಾರದ ಸೂಚನೆ
ದ್ರೌಪದಿ ವಸ್ತ್ರಾಪಹರಣ ಪ್ರಕರಣ ಒಂದು ಸಾಲದೆ ಕರ್ಣನ ನಿಂದ್ಯಕೃತ್ಯಗಳ ಗುಣಸ್ವಭಾವಕ್ಕೆ ಕನ್ನಡಿ ಹಿಡಿಯಲು.
ಯಾವುದೇ ಹೆಣ್ಣನ್ನು ನೋಟಮಾತ್ರದಿಂದಲೂ ಅಪಮಾನಿಸುವುದನ್ನು ಸಹಿಸಕೂಡದು. ಅಂಥಲ್ಲಿ; ಅಪಮಾನಕ್ಕೊಳಗಾದವಳು ದ್ರೌಪದಿ, ಕುಲವಧು. ರಜಸ್ವಲೆಯಾಗಿದ್ದ ಸಂದರ್ಭ ಬೇರೆ. ಆಕೆಯನ್ನು ರಕ್ಷಿಸಬೇಕಾದ ಪತಿಯರು ತಮಗಿಷ್ಟವಿಲ್ಲದ ಜೂಜಿನ ಪಣದಲ್ಲಿ ತಮ್ಮನ್ನೂ ಎಲ್ಲವನ್ನೂ ಸೋತು ನಿಸ್ಸಹಾಯಕರಾಗಿದ್ದಾರೆ. ಅಧರ್ಮವನ್ನು ನಿಗ್ರಹಿಸಬೇಕಿದ್ದ ಗುರುಹಿರಿಯರು ಕೌರವತೇಜಸ್ಸಿನ ಮುಂದೆ ಮೌನಕ್ಕೆ ಶರಣಾಗಿದ್ದಾರೆ. ಇಂತಿರ್ಪ ಸನ್ನಿವೇಶವು ಪಾಂಡವರಿಗೆ ಕ್ರೂರವಾಗಿತ್ತು, ಕೌರವರ ಕ್ರೌರ್ಯಕ್ಕೆ ಪೂರಕವಾಗಿತ್ತು.
ಗೆದ್ದವರ ದಾಸರಾಗಬೇಕಾದುದು ಸೋತವರ ‘ಕರ್ಮ’ವೇ ಇರಬೇಕು.
ಆಗ ಆಕೆಯನ್ನು ದಾಸಿಯಾದಳೆನ್ನುತ್ತ ಅಟ್ಟಹಾಸದಿಂದ ಅಪಮಾನಕಾರಕವಾಗಿ ಎಳೆತಂದ ದುಃಶಾಸನನಿಗೆ ಆಕೆಯನ್ನು ವಿವಸ್ತ್ರಗೊಳಿಸೆಂದು ಕ್ರೂರತಮವಾದ ಸೂಚನೆಯನ್ನು ಕೊಟ್ಟವ ಮತ್ತಾರೂ ಅಲ್ಲ, ನಮ್ಮ ಕೆಲವು ಕವಿಗಳ ಕರುಣೆಗೆ ಪಾತ್ರನಾದ ‘ಹೆಮ್ಮೆ’ಯ ಕರ್ಣ!
ಜೂಜಿನಲ್ಲಿ ಸೋಲುವ, ರಾಜ್ಯವಿಹೀನವಾಗುವ, ವನವಾಸವೇ ಅನಿವಾರ್ಯವಾಗುವ, ಕ್ಷಣಕ್ಷಣವೂ ಪ್ರಾಣಾಪಾಯದ ಭೀತಿಯಿರುವ, ಪ್ರಾಣಕ್ಕಿಂತ ಮಿಗಿಲಾದ ಮಾನಕ್ಕೂ ಸಂಚಕಾರ ಒದಗುವ ಪಾಂಡವರ ದುರವಸ್ಥೆಯನ್ನು ಕುರಿತು ಹೆಚ್ಚಿನ ಕವಿಗಳೇಕೋ ಮೌನವಾಗಿದ್ದಾರೆ! ಪಾಂಡವರ ಈ ದುರವಸ್ಥೆಗೆ ಉದ್ದಿಶ್ಯಪೂರ್ವಕವಾಗಿ ಹೆಮ್ಮೆಯಿಂದ ಒಂದಿಷ್ಟು ಪ್ರತ್ಯಕ್ಷ ಕಾರಣನಾದ ಕರ್ಣನ ದುರದೃಷ್ಟಕ್ಕೆ ಮರುಗದ ಕವಿಗಳಾರಿದ್ದಾರೆ?
ಆತ ದಾನದಲ್ಲಿ ಶೂರ ಎಂಬುದನ್ನು ಒಂದು ಹಂತಕ್ಕೆ ಒಪ್ಪೋಣ. ಇನಿತೂ ತಪ್ಪೆಸಗದ ಕುಲವಧುವನ್ನು ಹೀನಾಯವಾಗಿ ನಿಂದಿಸಿ ಅಪಮಾನಿಸುವಲ್ಲಿಯೂ ಶೂರನೇ ಆಗಿಹೋದನಲ್ಲ! ಈ ಕುರಿತು ಯಾಕೋ ಸ್ತ್ರೀವಾದಿಕಥನ ರೂಪುಗೊಂಡಂತೆ ಕಾಣುತ್ತಿಲ್ಲ!
ಪ್ರೇರಕನ ಸ್ಥಾನ
ತಾವು ಏನು ಮಾಡುತ್ತಿದ್ದೇವೆ ಎಂಬ ಪರಿವೆಯೇ ಇಲ್ಲದೆ ಅನ್ಯಾಯ ಮಾಡುವುದು ಬೇರೆ. ಅಂಥ ಪರಿವೆಯಿದ್ದು ಉದ್ದಿಶ್ಯಪೂರ್ವಕ ಕ್ರೌರ್ಯಮೆರೆವ ಅಧರ್ಮಿಗಳ ರೀತಿ ಬೇರೆ. ಕರ್ಣ ತುಳಿದದ್ದು ಸ್ಪಷ್ಟವಾಗಿ ಎರಡನೆಯ ದಾರಿಯನ್ನು.
ಪರಿಣಾಮ ಗೊತ್ತಿಲ್ಲದೆ ತೊಡಗಿ ಗೊತ್ತಾದಾಗ ‘ಹೀಗಾಗುತ್ತದೆಂದು ಗೊತ್ತೇ ಇರಲಿಲ್ಲ’ ಎಂದು ಮರುಗುವ ದೂರದೃಷ್ಟಿವಿಹೀನ ಸ್ವಭಾವವೊಂದಿದೆ. ದ್ರೌಪದಿ ವಸ್ತ್ರಾಪಹರಣವನ್ನು ಸಂಭ್ರಮಿಸುತ್ತಲೇ ಇದ್ದ, ಪಶ್ಚಾತ್ ತಾಪವನ್ನು ಎಂದೂ ಇನಿತೂ ಪ್ರಕಟಿಸದೇ ಹೋದ ಕರ್ಣನದ್ದು ಇಂಥ ದೂರದೃಷ್ಟಿವಿಹೀನ ಸ್ಥಿತಿಯೂ ಅಲ್ಲ.
ತಾನು ಏನು ಮಾಡಲು ಸೂಚಿಸುತ್ತಿದ್ದೇನೆ ಮತ್ತದರ ಪರಿಣಾಮ ಏನು ಎನ್ನುವುದು ಆತನಿಗೆ ಸ್ಪಷ್ಟವೇ ಇತ್ತಲ್ಲ!
ಅಪರಾಧವನ್ನು ಮಾಡಿದವನಿಗಿಂತ ಅದನ್ನು ಪ್ರೇರಿಸಿದವ ಅಧಿಕ ಅಪಾಯಕಾರಿ. ಕರ್ಣನನ್ನು ನೋಡಬೇಕಾದುದು ಈ ಹಿನ್ನೆಲೆಯಲ್ಲಿ.
ಅನ್ಯಾಯ-ಕರ್ಮ
ಇನ್ನು ಆತ ಅಭಿಮನ್ಯುವನ್ನು ಕೊಲ್ಲುವಲ್ಲಿ ಗೈದ ದುಷ್ಕೃತ್ಯವನ್ನು ಕೂಡ ಮನ್ನಿಸುವಂತಿಲ್ಲ. ನೇರ ಯುದ್ಧದಲ್ಲಿ ಆ ಬಾಲಕನಂಥವನನ್ನು ಗೆಲ್ಲಲಸಾಧ್ಯವೆಂದಾದಾಗ ಎಲ್ಲರೂ ಸೇರಿಕೊಂಡು ಹಿಂಬದಿಯಿಂದ ನುಗ್ಗಿ ಅಂಗಾಂಗಗಳನ್ನು ಒಂದೊಂದಾಗಿ ಕಡಿಯುತ್ತ ನಿಃಶಸ್ತ್ರಗೊಳಿಸುತ್ತ ಅಭಿಮನ್ಯುವನ್ನು ಬೀಭತ್ಸವಾಗಿ ಕೊಲ್ಲುವಲ್ಲಿ ಅಧರ್ಮದ ಪ್ರಧಾನ ಕೈಚಳಕ ತೋರಿದವನು ಕರ್ಣನೇ.
ಬಿಡಿ, ಯುದ್ಧದಲ್ಲಿ ಮಾಡಿದ್ದೇ ಸರಿ ಎಂಬ ಭಾವ ಅಂತಃಸಾಕ್ಷಿಯನ್ನು ಕೊಂದುಕೊಂಡ ಎಲ್ಲರದೂ. ಆದರೆ ಈ ಭಾವ ತತ್ಕ್ಷಣದ್ದು. ಸ್ಥಾಯಿಯಾಗಿರುವುದಿಲ್ಲ. ಕರ್ಣನ ಅಧರ್ಮಪ್ರಜ್ಞೆ ಅದೆಷ್ಟು ಸ್ಪಷ್ಟವಾಗಿತ್ತೆಂದರೆ ಸಂಚಾರಿಯಾಗಿರಬೇಕಿದ್ದ ಈ ಭಾವ ಆತನಲ್ಲಿ ಸ್ಥಾಯಿಯಾಗಿ ಇದ್ದುಬಿಟ್ಟಿತ್ತು.
ಮುಂದೆ ಆತನ ಅವಸಾನದ ಸಂದರ್ಭದಲ್ಲಿ ಕೃಷ್ಣ ಈ ಪ್ರಕರಣವನ್ನು ನೆನಪಿಸಿಕೊಡುತ್ತಾನೆ. ಆತನನ್ನು ರಥ ಹೂತುಹೋದ ಅಸಹಾಯಕ ಸ್ಥಿತಿಯಲ್ಲಿ ಯಾಕೆ ಹೊಡೆದು ಕೊಲ್ಲಬೇಕು ಎಂಬುದನ್ನು ವಿವರಿಸುತ್ತಾನೆ. ಕೃಷ್ಣನ ಸೂಚನೆಯಂತೆ ಅರ್ಜುನ ಆತನನ್ನು ಕೊಂದುಕಳೆಯುತ್ತಾನೆ.
ತನ್ನ ಇಂಥ ಅಸಹಾಯಕ ಸ್ಥಿತಿಯನ್ನು ಕರ್ಣ ಕಾಣುವುದು ದುರದೃಷ್ಟವೆಂದು. ತಾನು ಪಡಕೊಂಡು ಬಂದುದೆಂದಲ್ಲ! ಅಂದರೆ; ಕೊನೆಗಾಲದಲ್ಲೂ ಆತನಲ್ಲಿ ‘ಅಧರ್ಮಪ್ರಜ್ಞೆ’ ಇನಿತೂ ನಷ್ಟಗೊಳ್ಳದೆ ಅದೆಷ್ಟು ಗಟ್ಟಿಯಾಗಿದ್ದಿರಬಹುದು!
ಇನ್ನು ಆತನ ಕುರಿತು ತಪ್ಪು ಅಭಿಮಾನ ತಳೆದವರು, ಆತ ದುರದೃಷ್ಟವೆಂದು ಕಂಡದ್ದನ್ನು ಕಾಣುವುದು ಅನ್ಯಾಯವೆಂದು.
ಪಡಕೊಂಡು ಬಂದುದನ್ನು ದುರದೃಷ್ಟವೆಂದಾಗಲೀ ಅನ್ಯಾಯವೆಂದಾಗಲೀ ಕಾಣುವುದು ಒಂದು ದೃಷ್ಟಿದೋಷ. ಇದನ್ನೇ ಒಂದು ದೃಷ್ಟಿಕೋನ ಎಂದು ಬಿಂಬಿಸಲು ಬರುತ್ತದೆ. ಇಂಥ ದೃಷ್ಟಿದೋಷದ ದೃಷ್ಟಿಕೋನವುಳ್ಳವರು ಶಿಕ್ಷಕರಾದರೆ ದೃಷ್ಟಿದೋಷದ ಪೀಳಿಗೆಗಳೇ ತಯಾರಾಗುತ್ತವೆ. ಇಂಥವರು ಅಧಿಕರಾದಾಗ ಅಧಿಕಾರವುಳ್ಳವರಾಗಿ ಸುಳ್ಳು ಭ್ರಮೆಗಳು ಇನ್ನಿಲ್ಲದಂತೆ ವಿಜೃಂಭಿಸುತ್ತವೆ. ("ವಿಕ್ರಮ"ದ 'ಕಡೆಗೋಲು' ಅಂಕಣ)
ತರ್ಕಬದ್ಧ, ನ್ಯಾಯಬದ್ಧ, ಸೂತ್ರಬದ್ಧ, ನೀತಿಬದ್ಧ, ಭಾವಬದ್ಧ, ನಿಯಮಬದ್ಧ ವಿಚಾರ. ಮತ್ತೇನನ್ನೂ ಹೇಳಲು ಸಾಧ್ಯವಿಲ್ಲ…