ಬೆಂಗಳೂರು, ಡಿ.1, 2024: ಸಂಸ್ಕಾರ ಭಾರತಿ ಕರ್ನಾಟಕ ಇದರ ಅಖಿಲ ಭಾರತೀಯ ನೂತನ ಅಧ್ಯಕ್ಷರಾಗಿ ಡಾ. ಮೈಸೂರು ಮಂಜುನಾಥ್ ಅವರು ಆಯ್ಕೆ ಆಗಿದ್ದಾರೆ ಎಂದು ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷರಾದ ಡಾ. ಗುಬ್ಬಿಗೂಡು ರಮೇಶ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ನೂತನ ಅಧ್ಯಕ್ಷರಾದ ಮೈಸೂರು ಮಂಜುನಾಥ್, ಸಂಸ್ಕಾರ ಭಾರತಿ ನಮ್ಮ ಬಲಿಷ್ಠ ರಾಷ್ಟ್ರವನ್ನು ಕಟ್ಟುವಂತಹ ನಿಟ್ಟಿನಲ್ಲಿ ರಾಷ್ಟ್ರದ ಅತ್ಯಂತ ಅದ್ಭುತವಾಗಿರುವ ವಿವಿಧ ಕಲಾಪ್ರಕಾರಗಳ ಗಣ್ಯರನ್ನು ಒಗ್ಗೂಡಿಸಿ ಕಲಾಸಂಸ್ಕೃತಿಯನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಿದೆ. ಕಲಾಪ್ರಕಾರಗಳ ಪೂರಕವಾಗಿ ಬಲಿಷ್ಠ ರಾಷ್ಟ್ರ, ಸಾಮರಸ್ಯ ಸಮಾಜದ ಪರಿಕಲ್ಪನೆಯ ದೃಷ್ಟಿಯಿಂದ ಸಂಸ್ಕಾರ ಭಾರತಿ ಅನೇಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಈ ಸಂಸ್ಥೆ ಕಳೆದ 40 ವರ್ಷಗಳಿಂದ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಇಡೀ ರಾಷ್ಟ್ರದಲ್ಲಿ ಸುಮಾರು 1400ಗಿಂತಲೂ ಹೆಚ್ಚಿನ ಶಾಖೆಗಳನ್ನು ಹೊಂದಿದೆ. ಪ್ರತಿಯೊಂದು ಶಾಖೆಯಲ್ಲಿ ಕಲಾವಿದರು, ವಿದ್ವಾಂಸರು, ಸಾಹಿತಿಗಳು ಕೈ ಜೋಡಿಸಿದ್ದಾರೆ. ನಮ್ಮ ದೇಶದ ಸಂಸ್ಕಾರದ ಬಗ್ಗೆ ಬೇರೆ ಬೇರೆ ರಾಷ್ಟ್ರಗಳು ಗೌರವ ಕೊಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು.
ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷರಾದ ಕೆ. ಸುಚೇಂದ್ರ ಪ್ರಸಾದ್ ಮಾತನಾಡಿ, ಸಂಸ್ಕಾರವನ್ನು ಬಿತ್ತುವ, ತಾಯಿ ಭಾರತೀಯ ಸೇವೆಯನ್ನು ಮಾಡುವ ಕಲೆ ಮತ್ತು ಸಾಹಿತ್ಯ ಹಿತವಾದುದ್ದು. ದೇಶದೆಲ್ಲೆಡೆ ನಾಲ್ಕು ದಶಕಗಳಿಂದ ಸಂಸ್ಕಾರ ಭಾರತಿ ಕೆಲಸ ಮಾಡುತ್ತಿದೆ. ಕಲಾ ಕ್ಷೇತ್ರದ ಮೂಲಕ ರಾಷ್ಟ್ರೋತ್ಥಾನವನ್ನು ಮಾಡುವ ಕೆಲಸ ಸಂಸ್ಕಾರ ಭಾರತಿಯಿಂದಾಗುತ್ತಿದೆ ಎಂದರು.
ನಮ್ಮ ನೆಲದಲ್ಲಿ ಅನ್ಯರಾಗದೆ ಮಾನ್ಯರಾಗುವಂತಹ ಕೆಲಸಕ್ಕೆ ಸಂಸ್ಕಾರ ಭಾರತಿ ಶ್ರಮಿಸುತ್ತಿದೆ. ಕಲೆ ಮತ್ತು ಸಾಹಿತ್ಯವನ್ನೇ ಪ್ರಧಾನವಾಗಿ, ಪ್ರದರ್ಶನ ಕೇಂದ್ರಿತ ಸಂಸ್ಥೆಯಾಗದೆ ವಿಚಾರಕೇಂದ್ರಿತವಾಗಿ ಸಂಸ್ಕಾರ ಭಾರತಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರ ಹಿತದ ಚಿಂತನೆಗಳಿಗೆ ಪೂರಕವಾಗಿ ಇತರರಿಗೆ ಪ್ರಚಾರ ನಡೆಸಲಾಗುತ್ತಿದೆ. ಹೀಗಾಗಿ ಮುಂದಿನ ಪೀಳಿಗೆಗೂ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವಂತಹ ಕಾರ್ಯ ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿಗೋಷ್ಠಿಯಲ್ಲಿ ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ.ಗುಬ್ಬಿಗೂಡು ರಮೇಶ್, ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಮಹಾಮಂತ್ರಿ ಹೇಮಂತ್ ಜನಾರ್ಧನ್ ರಾವ್ ಹಾಗೂ ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಕೋಶಾಧ್ಯಕ್ಷ ಟಿ.ಆರ್ ಜಗದೀಶ್ ಉಪಸ್ಥಿತರಿದ್ದರು.