ಲೇಖಕರು: ಶ್ರೀ ಅರುಣ್ ಕುಮಾರ್, ಹುಬ್ಬಳ್ಳಿ
ಗುಕೇಶ್ ದೊಮ್ಮರಾಜು ಇಂದು (ಡಿಸೆಂಬರ್ 12, 2024) ಚದುರಂಗದ ವಿಶ್ವ ಚಾಂಪಿಯನ್ ಆಗುವ ಸಂದರ್ಭದ ಕೆಲವು ನೋಟಗಳು.
- ಸಿಂಗಾಪುರದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಗುಕೇಶ ಮತ್ತು ಹಾಲಿ ವಿಶ್ವಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಇಬ್ಬರೂ ಸಮ ಸಮ ಅಂಕ ಗಳಿಕೆಯಲ್ಲಿ ಇದ್ದರು.
- ಈ ಅಂತಿಮ ಪಂದ್ಯದಲ್ಲಿ ಗುಕೇಶನಿಗೆ ಕಪ್ಪು ಕಾಯಿ ಮತ್ತು ಡಿಂಗ್ ಗೆ ಬಿಳಿ ಕಾಯಿ ಮುನ್ನೆಡೆಸುವ ಅವಕಾಶ ಸಿಕ್ಕಿತ್ತು. ಈ ಪಂದ್ಯವೂ ಸಮ ಸಮ ರೀತಿಯ ಹೋರಾಟದಲ್ಲಿ ನಡೆದಿತ್ತು. ಒಂದು ಸಣ್ಣ ಮೈಮರೆತ ಸ್ಥಿತಿಯಲ್ಲಿ ನಡೆಸಿದ ಡಿಂಗ್ ನಡೆಯು ತಪ್ಪು ಎಂದು ಅರಿವಾಗುವ ಮೊದಲೇ ಪಂದ್ಯ ಮುಗಿದಿತ್ತು, ಗುಕೇಶ ಗೆದ್ದೂ ಆಗಿತ್ತು, ಡಿಂಗ್ ಸೋತೂ ಆಗಿತ್ತು.
- 12ನೇ ತರಗತಿ ಓದುವ 18 ವರ್ಷದ ಚಿಗುರು ಮೀಸೆಯ ಭಾರತೀಯ ಹುಡುಗ 32 ವರ್ಷದ ಪ್ರಬುದ್ಧ ಆಟಗಾರನ ಎದುರು ಗೆಲ್ಲುವುದು ಸುಲಭದ ಮಾತಲ್ಲ.
- ಡಿಂಗ್ ನ ತಪ್ಪು ನಡೆ ಆರಂಭದಲ್ಲಿ ಗುಕೇಶನಿಗೂ ಗೊತ್ತಾಗಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಅದರ ಅರಿವಾಯಿತು, ಅದರ ಪೂರ್ತಿ ಲಾಭ ಪಡೆದು ಮುನ್ನಡೆದಾಗ ಡಿಂಗ್ ನ ನಡೆ ನಿಂತು ಹೋಯಿತು. ಪಂದ್ಯಾವಳಿಯೇ ಮುಗಿದಿತ್ತು.
- ಈ ಪಂದ್ಯ ಮುಗಿದ ಬಳಿಕ ಇಬ್ಬರ ಪ್ರತಿಕ್ರಿಯೆಗಳೂ ವಿಶ್ವ ಚಾಂಪಿಯನ್ನರಿಗೆ ತಕ್ಕಂತೆ ಇವೆ. ತನ್ನ ತಪ್ಪು ನಡೆಯ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿದ ಡಿಂಗ್ ಮುಂದೆ ಚೆನ್ನಾಗಿ ಆಡುವುದು ಇದ್ದೇ ಇದೆ ಎನ್ನುತ್ತಲೇ, ವಿಶ್ವಪಟ್ಟ ಗಳಿಸಿದ ಕಿರಿಯ ಗುಕೇಶನನ್ನು ಅಭಿನಂದಿಸಲು ಮರೆಯಲಿಲ್ಲ.
- ಭಾರತೀಯರ ಹೆಮ್ಮೆಯ ಗುಕೇಶ ವಿಶ್ವ ಚಾಂಪಿಯನ್ ಆದ ಕೂಡಲೇ ಭಾವಾವೇಶಕ್ಕೆ ಒಳಗಾಗಿದ್ದು ಸಹಜ. ತಕ್ಷಣ ಚೇತರಿಸಿಕೊಂಡು ತನ್ನ ಗೆಲುವಿಗೆ ಭಗವಂತನ ದಯೆ ಕಾರಣ ಎಂದು ನಮನ ಸಲ್ಲಿಸಿದ್ದಾನೆ. ಎದುರಾಳಿ ಡಿಂಗ್ ಅವರನ್ನು ಎರಡು ಬಾರಿ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದ್ದಾನೆ. ಆಟದ ಆರಂಭದಲ್ಲಿ ಸದಾ ಹಣೆಯ ಮೇಲೆ ವಿಭೂತಿ ಧರಿಸುವ ಪರಿಪಾಠ ವಿಶ್ವನಾಥನ್ ಆನಂದ, ಪ್ರಜ್ಞಾನಂದ ಎಲ್ಲರೂ ಮುಂದುವರೆಸಿದ್ದಾರೆ. ಗೆಲುವಿನ ಮರು ಕ್ಷಣದಲ್ಲಿ ದೇವರಿಗೆ ನಮಸ್ಕರಿಸುವ ರೀತಿಯ ಗುಕೇಶನ ಹಾವ-ಭಾವ ನಿಜಕ್ಕೂ ಗುರುತಿಸಬೇಕು. ಭಗವಂತನ ಮೇಲೆ ವಿಶ್ವಾಸ ಇಡುವುದರಿಂದ ಆ ಶಕ್ತಿಯು ಅಸಾಧ್ಯ ಚಮತ್ಕಾರಗಳನ್ನು ಮಾಡುತ್ತದೆ ಎನ್ನಲು ಒಲಂಪಿಕ್ ದ್ವಿ ಪದಕ ವಿಜೇತೆ ಮನು ಭಾಕರ್ ನಂತರ ಇದು ಇನ್ನೊಂದು ಸಾಕ್ಷಿ.
- ಪಂದ್ಯ ಗೆದ್ದ ಕೂಡಲೇ ಅವನ ತಂದೆ ಡಾ. ರಜನೀಕಾಂತ್ ಅವರನ್ನು ಅಪ್ಪಿಕೊಂಡು ಮಗುವಿನಂತೆ ಅತ್ತಿದ್ದಾನೆ.
- ಗ್ಯಾರಿ ಕ್ಯಾಸ್ಪರೋ ಹೆಸರಲ್ಲಿ ಇದ್ದ ಅತಿ ಕಿರಿಯ ವಿಶ್ವ ಚಾಂಪಿಯನ್ ದಾಖಲೆ ಇದೀಗ ಗುಕೇಶನ ಪಾಲಾಗಿದೆ.
- 2013ರಲ್ಲಿ ವಿಶ್ವನಾಥನ್ ಆನಂದ ವಿಶ್ವ ಚಾಂಪಿಯನ್ ಆದಾಗ ಆ ಪಂದ್ಯವನ್ನು ವೀಕ್ಷಿಸಿದ್ದ ಗುಕೇಶ, ಆಗ 7 ವರ್ಷದ ಬಾಲಕ. ತಾನೂ ಹಾಗೆ ಆಗಬೇಕೆಂದು ಅವನ ಮನದಲ್ಲೂ ಅಂದು ಮೂಡಿತ್ತಂತೆ.
- ಅಂದಿನಿಂದ ಅವನ ಮನದಲ್ಲಿದ್ದ ಈ ಗುರಿ ಇಂದು ಈಡೇರಿದೆ.
- ರಮೇಶ ಬಾಬು ಪ್ರಗ್ಗಾನಂದ 19 ವರ್ಷದವನಾಗಿದ್ದಾಗ 34 ವರ್ಷದ ಇನ್ನೊಬ್ಬ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನನ್ನು ಸೋಲಿಸಿ ಅನಿರೀಕ್ಷಿತವಾಗಿ ಬಹಳ ಶೀಘ್ರ ಪ್ರಸಿದ್ಧಿಗೆ ಬಂದ. ಆಗ ಗುಕೇಶನ ಬಗ್ಗೆ ಯಾರೂ ಕೇಳಿರಲಿಲ್ಲ. ನಂತರ ನಿಧಾನ ನಿಧಾನವಾಗಿ ಗುಕೇಶನ ಹೆಸರು ಕೇಳುತ್ತಾ ಬಂತು. ಈಗಂತೂ ಅವನದೇ ಸುದ್ದಿ.
- ಬಹಳ ಆನಂದದ ವಿಷಯ ಏನೆಂದರೆ ಇಂತಹ ಯುವ ಪ್ರತಿಭೆಗಳಿಗೆ ತಾಂತ್ರಿಕವಾಗಿ, ಮಾನಸಿಕವಾಗಿ, ವೈಯಕ್ತಿಕವಾಗಿ ಪ್ರೇರಣೆಯ ವ್ಯಕ್ತಿ ಆಗಿರುವ ವಿಶ್ವನಾಥನ್ ಆನಂದರನ್ನು ಮರೆಯುವಂತಿಲ್ಲ. ಇತ್ತೀಚಿನ ಅನೇಕ ಪಂದ್ಯಗಳಲ್ಲಿ ವಿಶ್ವನಾಥನ್ ಆನಂದ್ ಪ್ರತ್ಯಕ್ಷ ಭಾರತೀಯ ಚದುರಂಗ ಕ್ರೀಡಾಳುಗಳ ಜೊತೆಗೆ ಇದ್ದು ಪ್ರೇರಣೆ ಮಾರ್ಗದರ್ಶನ ನೀಡಿ, ಹುರಿದುಂಬಿಸಿ ಗೆಲ್ಲಿಸಿರುವುದು ನಿಜಕ್ಕೂ ಅಭಿನಂದನೀಯ.
- ಒಟ್ಟಾರೆ ಈ ದಿನ ಎಲ್ಲಾ ಭಾರತೀಯರಿಗೆ, ಅದರಲ್ಲೂ ಕ್ರೀಡಾ ಆಸಕ್ತರಿಗೆ, ಚದುರಂಗ ಪ್ರಿಯರಿಗೆ ಚದುರಂಗದ ಮೊದಲ ಗುರು ಭಾರತ ಎನ್ನುವುದನ್ನು ನೆನಪಿಸಿದೆ, ಹೆಮ್ಮೆ ಗೌರವ ಮೂಡಿಸಿದೆ.