ಲೇಖಕರು: ನಾರಾಯಣ ಶೇವಿರೆ

ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಆಕೆಗೆ ಪಾಠ್ಯೇತರ ಓದಿನ ಪರಿಶ್ರಮವೂ ಒಂದಷ್ಟಿದೆ. ಒಮ್ಮೆ ಆಕೆಯ ಮನೆಗೆ ಹೋದಾಗ ಅವಳ ಓದಿನ ಕುರಿತಾಗಿ ತುಸು ವಿಚಾರಿಸುವುದಾಯಿತು.

‘ಇತ್ತೀಚೆಗೆ ಏನು ಓದಿದೆ’ – ಕೇಳಿದೆ.

‘ಕೆಲವು ಭಾರತ-ಭಾರತೀ ಸರಣಿಯ ಪುಸ್ತಕಗಳು’ – ಉತ್ತರಿಸಿದಳು.

‘ತುಂಬಾ ಆಪ್ತವಾದ ಪುಸ್ತಕ?’

‘ದಧೀಚಿ’

ಕೇಳಿದ್ದಕ್ಕೆ ಅದರ ಕಥೆಯನ್ನು ಹತ್ತು ನಿಮಿಷದಲ್ಲಿ ಮುಂದಿಟ್ಟಳು. ದಧೀಚಿ ಮಹರ್ಷಿ, ದೇವತೆಗಳ ಅಪೇಕ್ಷೆಯಂತೆ, ವೃತ್ರಾಸುರನನ್ನು ಸಂಹರಿಸುವ ಆಯುಧವನ್ನು ಸಿದ್ಧಪಡಿಸುವುದಕ್ಕಾಗಿ ತನ್ನ ಬೆನ್ನುಮೂಳೆಯನ್ನು ದಾನಮಾಡುತ್ತ ಇಡಿಯ ದೇಹವನ್ನೇ ಸಮರ್ಪಿಸಿಕೊಳ್ಳುತ್ತಾನೆ.

ಇದು ದೇವತೆಗಳ ಅಪೇಕ್ಷೆಯೂ ಹೌದು, ಲೋಕದ ಅಪೇಕ್ಷೆಯೂ ಹೌದು.

‘ಈ ಕಥೆ ಯಾಕೆ ಇಷ್ಟವಾಯಿತು?’

‘ದಧೀಚಿಯ ಸಮರ್ಪಣಾಭಾವಕ್ಕಾಗಿ ಇಷ್ಟವಾಯಿತು. ಆತ, ದೇವತೆಗಳು ಕೇಳಿದಾಗ ತುಸುವೂ ಹಿಂದೆಮುಂದೆ ನೋಡದೆ ತನ್ನ ಬೆನ್ನುಮೂಳೆಯನ್ನೇ ಕೊಡುತ್ತಾನೆ. ಬದುಕನ್ನೇ ಕೊನೆಗೊಳಿಸಿಕೊಳ್ಳುತ್ತಾನೆ. ಇಂಥ ಸಮರ್ಪಣೆಯ ಎತ್ತರವನ್ನು ಏರಿದವರಿರುವುದು ತೀರಾ ಅಪರೂಪ. ಅದಕ್ಕಾಗಿ ಇಷ್ಟವಾಯಿತು’ – ಉತ್ತರ ಬಂತು.

‘ಒಳ್ಳೆಯದು. ಸಮರ್ಪಣೆ ಮಾಡಿದಾಕ್ಷಣ ಒಬ್ಬ ವ್ಯಕ್ತಿಯನ್ನು ಮೆಚ್ಚಿಕೊಳ್ಳಬಹುದಾ, ಶ್ರೇಷ್ಠನೆನ್ನಬಹುದಾ; ರಾವಣನಿಗಾಗಿ ಸಾವಿರಾರು ರಾಕ್ಷಸರು ಪ್ರಾಣವನ್ನೇ ನೀಡಿದರು, ಅಮಾಯಕರನ್ನು ಕೊಲ್ಲಲು ಭಯೋತ್ಪಾದಕರು ತಾವೇ ಆತ್ಮಾಹುತಿ ಬಾಂಬುಗಳಾಗುತ್ತಾರೆ..?

ತುಸು ಅವಲೋಕನವನ್ನು ಬಯಸಿದ್ದ ಈ ಪ್ರಶ್ನೆಗೆ ಉತ್ತರಿಸಲು ಆಕೆ ತಡವರಿಸದೆ ತೊಡಗಿದಳು: ‘ದಧೀಚಿ ಒಳ್ಳೆಯವ. ಋಷಿ. ಆತ ದೇಹವನ್ನು ಸಮರ್ಪಿಸಿದ್ದು ದುಷ್ಟರ ಸಂಹಾರಕ್ಕಾಗಿಯೇ ವಿನಾ ಒಳ್ಳೆಯವರ ವಿನಾಶಕ್ಕಾಗಿ ಅಲ್ಲ. ವೃತ್ರಾಸುರನನ್ನು ಕೊಂದದ್ದರಿಂದಾಗಿ ಒಳ್ಳೆಯವರ ರಕ್ಷಣೆ ಸಾಧ್ಯವಾಯಿತು. ಆತ ದೇಹವನ್ನು ಕೊಡದೇ ಇರುತ್ತಿದ್ದಲ್ಲಿ ವೃತ್ರಾಸುರನನ್ನು ಕೊಲ್ಲಲೂ ಸಾಧ್ಯವಾಗುತ್ತಿರಲಿಲ್ಲ, ಒಳ್ಳೆಯವರು ಸುರಕ್ಷಿತವಾಗಿ ಇರಲೂ ಸಾಧ್ಯವಾಗುತ್ತಿರಲಿಲ್ಲ..’

ಏಳನೆಯ ತರಗತಿಯ ಪುಟ್ಟಿ ಪುಟ್ಟದಲ್ಲದ ಆಲೋಚನೆಯನ್ನು ಸ್ಪಷ್ಟವಾಗಿ ಹೊಂದಿದ್ದಳು. ಉತ್ತಮ ಓದಿಗಾಗಿ ತಯಾರಾದ ಆಕೆಯನ್ನು ಓದು ಉತ್ತಮವಾಗಿ ತಯಾರುಮಾಡಿತ್ತು.

ಬುದ್ಧಿಜೀವಿಗಳೆನಿಸಿಕೊಂಡವರ ಸಂಪರ್ಕಕ್ಕೆ ಬರದೇ ಹೋದಲ್ಲಿ ಆಕೆ ನಾಳಿನ ಬೌದ್ಧಿಕಕ್ಷೇತ್ರಕ್ಕೆ ಭರವಸೆಯಾಗುವುದರಲ್ಲಿ ಸಂಶಯವಿಲ್ಲ.

ನೋಡಿ, ನಮ್ಮ ಬುದ್ಧಿಜೀವಿಗಳು ಏನು ಅಪ್ಪಣೆಕೊಡಿಸುತ್ತಿದ್ದಾರೆಂದರೆ; ಕಾಶ್ಮೀರದಲ್ಲಿ ಸೈನಿಕರು ಮಾಡುತ್ತಿರುವುದು ಹಿಂಸೆ, ಅಮಾಯಕರ ಕೊಲೆ, ಅತ್ಯಾಚಾರ.. ಭಯೋತ್ಪಾದಕರು ಚಿತ್ರಹಿಂಸೆ ನೀಡಿ ಮಾಡುವ ಅಮಾಯಕರ ಕೊಲೆಯನ್ನು ಹಿಂಸೆಯೆಂದಾಗಲೀ ಮಾಡಕೂಡದೆಂದಾಗಲೀ ಎಂದೂ ಅವರು ಹೇಳರು!

ಪ್ರಾಥಮಿಕ ಶಾಲೆಯ ಪುಟ್ಟಿಗೆ ಗೊತ್ತಾಗುವ ಪುಟ್ಟ ವಿಚಾರವೊಂದು ವಿಶ್ವವಿದ್ಯಾಲಯದ ಪ್ರೊಫೆಸರುಗಳಿಗೆ ಹೊಳೆಯದೇ ಹೋಗುವುದೇಕೆ?

ಯಾವುದೋ ನಿರ್ದಿಷ್ಟ ಸಿದ್ಧಾಂತಕ್ಕೋ ಮತಕ್ಕೋ ಆತುಕೊಂಡಾಗ ಆಗುವ ವೈಚಾರಿಕ ಸಮಸ್ಯೆಯಿದು.

ಯಾವುದು ಸಿದ್ಧಾಂತ, ಯಾವುದು ವಿಚಾರ?

ವಿಚಾರಮಾಡಲು ಆಧಾರವಾಗಬೇಕಾದುದು ಧರ್ಮವೇ ವಿನಾ ಸಿದ್ಧಾಂತವಲ್ಲ.
ಧರ್ಮಕ್ಕೆ ಪೂರಕವಾಗಿ ಆಲೋಚನೆ ಹರಿದಾಗ ಅದು ವಿಚಾರವಾದೀತು. ಯಾವುದೇ ಸಿದ್ಧಾಂತವೂ ತೊಡಗಬೇಕಾದುದು ಧರ್ಮಕ್ಕೆ ಪೂರಕವಾಗಿಯೇ, ಬಿಡಿ. ಆದರೆ ಸಿದ್ಧಾಂತವು ತನ್ನ ವಾದಸಾಮರ್ಥ್ಯದಿಂದ ಧರ್ಮವನ್ನು ಅಧರ್ಮವೆಂದೂ ಅಧರ್ಮವನ್ನು ಧರ್ಮವೆಂದೂ ಕಥಿಸುವ ಸಾಧ್ಯತೆಗಳಿವೆ. ಅಹಿಂಸೆಯನ್ನು ಕ್ರೌರ್ಯವೆಂದೂ ಕ್ರೌರ್ಯವನ್ನು ಧರ್ಮವೆಂದೂ ಬಿಂಬಿಸುವ ಸಾಧ್ಯತೆಗಳಿವೆ!

ಕೇರಳದ ಮಲ್ಲಪುರಂನಲ್ಲಿ ಖಿಲಾಫತ್ ‘ಯೋಧ’ರು ಸಾವಿರಾರು ಅಮಾಯಕರನ್ನು ಕ್ರೂರವಾಗಿ ಚೆಂಡಾಡಿದಾಗ, ಅವರು ತಮ್ಮ ಧರ್ಮದಂತೆ ನಡಕೊಂಡಿದ್ದಾರೆ ಎಂದು ‘ಮಹಾತ್ಮ’ರು ಮೆಚ್ಚಿಕೊಂಡಿದ್ದರಲ್ಲವೆ! 1989-90ರ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರು ಲಕ್ಷಾಂತರ ಸಂಖ್ಯೆಯ ಪಂಡಿತರನ್ನು ಅಮಾನುಷವಾಗಿ ಕೊಲೆಗೈದಾಗ, ಅತ್ಯಾಚಾರಗೈದಾಗ, ಬುದ್ಧಿಜೀವಿಗಳು ತುಟಿಪಿಟಕ್ಕೆನ್ನದೆ ಮೌನಸಮ್ಮತಿ ಸೂಚಿಸಿದರಲ್ಲವೆ! ಇಲ್ಲಿ, ಅಹಿಂಸೆ ಮತ್ತಿತರ ಸಿದ್ಧಾಂತಗಳು ವಿಕಾರಬಗೆಯಲ್ಲಿ ತೊಡಗಿದ್ದನ್ನು ಕಾಣಬಹುದು.

ಹಿಂಸೆಯನ್ನು ಮಾಡಕೂಡದೆಂಬ ದಾರಿ ಇಲ್ಲಿಗೆ ಹೊಸದಲ್ಲ. ನೂರಾರು ದಾರಿಗಳಲ್ಲಿ ಅದೂ ಒಂದು. ಅದು ದಾರಿಯೇ ವಿನಾ ಗುರಿಯಲ್ಲ. ಧರ್ಮವೇ ಗುರಿ.

ಆಗ, ಅಹಿಂಸೆಯನ್ನು ಪರಮಧರ್ಮವೆಂದು ಹೇಳಲಾಗಿದೆಯಲ್ಲ ಎಂಬ ಪ್ರಶ್ನೆ ಹುಟ್ಟೀತು.

ಹೌದು, ಜತೆಗೆ ಧರ್ಮಕ್ಕಾಗಿ ಮಾಡುವ ಹಿಂಸೆಯೂ ಸಾಧುವೇ ಎಂದೂ ಅದೇ ಉಸಿರಿನಲ್ಲಿ ಹೇಳಲಾಗಿದೆ ಎಂಬುದನ್ನೂ ನೆನಪಿಡಬೇಕು.

ಧರ್ಮಕ್ಕಾಗಿ ಅಹಿಂಸಾಚರಣೆ, ಅಗತ್ಯ ಬಿದ್ದಲ್ಲಿ ಹಿಂಸಾಚರಣೆ ಕೂಡಾ! ಮುಖ್ಯವಾಗಬೇಕಾದುದು – ಹಿಂಸೆಯೋ ಅಹಿಂಸೆಯೋ ಅನ್ನುವುದಲ್ಲ, ಧರ್ಮ.

ಇಂದಿನ ರಾಜಕಾರಣಕೇಂದ್ರಿತ ಸನ್ನಿವೇಶದಲ್ಲಿ ಧರ್ಮವನ್ನು ರಿಲಿಜನ್ ನೆಲೆಯಲ್ಲಿ ನೋಡಲಾಗುತ್ತಿದೆ. ರಿಲಿಜನ್ನಿಗಾಗಿ ನಿಜವನ್ನು ದ್ವೇಷಿಸುವ ಈ ‘ಮಂದಿ’, ನಿಜ ಧರ್ಮದ ವಾರಸುದಾರರ ವಿರುದ್ಧ ಕ್ರೌರ್ಯವನ್ನು ಸಮರ್ಥಿಸುತ್ತಿದ್ದಾರೆ. ಸ್ಥಾನ, ಸಮ್ಮಾನ ಇತ್ಯಾದಿಗಳ ಹಿಂದೋಡುವವರು ಇವರ ಹಿಂಬಾಲಕರಂತಾಗುತ್ತಿದ್ದಾರೆ.

ಧರ್ಮದ ಕಲ್ಪನೆ ಸ್ಪಷ್ಟವಾಗಲು ಅದನ್ನು ಅಧರ್ಮದ ನೆಲೆಯಲ್ಲಿ ನೋಡಬೇಕು. ಅಂದರೆ, ಅಧರ್ಮವಿರೋಧಿಯಾದದ್ದು ಧರ್ಮ. ಧರ್ಮಿಗಳ ರಕ್ಷಣೆ ಮತ್ತು ಅಧರ್ಮಿಗಳ ನಿವಾರಣೆಗೆ ಅನುಸರಿಸುವ ದಾರಿಯು ಧರ್ಮಮಾರ್ಗವೇ ಸರಿ, ಅದು ಹಿಂಸೆಯಾದರೂ ಅಹಿಂಸೆಯಾದರೂ.

ಎಲ್ಲರ ಒಳಿತನ್ನು ಬಯಸಿ ಅಹಿಂಸೆಯನ್ನು ಅನುಷ್ಠಿಸುವುದರಲ್ಲಿ ಒಂದು ಮುಗ್ಧತೆಯಿದೆ. ಹಾಗೆ ಅನುಷ್ಠಿಸುತ್ತ ಸಂಭವನೀಯ ಕ್ರೌರ್ಯವನ್ನು ಮುಂಗಾಣದೇ ಇರುವುದಕ್ಕೆ ಕಾರಣ ವಿವೇಕದ ಕೊರತೆ. ಕ್ರೌರ್ಯವೆದುರಾದಾಗಲೂ ಅಹಿಂಸೆಯನ್ನೇ ಜಪಿಸುತ್ತ ದುರಂತವನ್ನಪ್ಪುವಲ್ಲಿ ಇರುವುದು ಮೂರ್ಖತನ. ದುಷ್ಟರ ಕ್ರೌರ್ಯವನ್ನು ಸಮರ್ಥಿಸುತ್ತ ಒಂದು ಸಮೂಹಕ್ಕಷ್ಟೆ ಅಹಿಂಸೆಯನ್ನು ಬೋಧಿಸುವಲ್ಲಿ ಇರುವುದು ಮುಗ್ಧತೆಯೂ ಅಲ್ಲ, ಮೂರ್ಖತನವೂ ಅಲ್ಲ, ಬುದ್ಧಿಹೀನತೆಯಂತೂ ಖಂಡಿತಾ ಅಲ್ಲ; ಅದು ನಿಶ್ಚಿತವಾಗಿ ಬೌದ್ಧಿಕಕ್ರೌರ್ಯ.

ಈಚಿನ ನಮ್ಮಲ್ಲಿಯ ಅಹಿಂಸಾವಾದಿಗಳದು ಈ ಕೊನೆಯ ದಾರಿ ಆಗಿದೆಯೇ?

(“ಉತ್ಥಾನ” ದ ‘ಬೊಗಸೆ’ ಅಂಕಣ)

Leave a Reply

Your email address will not be published.

This site uses Akismet to reduce spam. Learn how your comment data is processed.