ಲೇಖಕರು: ನಾರಾಯಣ ಶೇವಿರೆ, ಚಿಂತಕರು

ಎರಡು ಬಾರಿ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಈಗ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಭಾರತದಲ್ಲಿ ಒಮ್ಮೆ ಶಾಸಕನಾದವ ಐದು ಪೀಳಿಗೆಗಾಗುವಷ್ಟು ಮಾಡಿಡುತ್ತಾನೆ. ಇದು ಈಚೆಗೆ ಮುಖಪುಸ್ತಕದಲ್ಲಿ ಬಂದ ಒಂದು ಮಾಹಿತಿ.

ರಶ್ಯಾ ಅಧ್ಯಕ್ಷ ಗೋರ್ಬಚೇವ್ ನಿವೃತ್ತ ಬದುಕಲ್ಲಿ ಮಕ್ಕಳಿಗೆ ಉಪನ್ಯಾಸ ಮಾಡುತ್ತಿದ್ದರು. ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾಹಿತಿ.

ಪ್ರಪಂಚದ ಅತಿದೊಡ್ಡ ದೇಶಗಳ ಮುಖ್ಯಸ್ಥರಾದವರು ಸರಳವಾಗಿ ಬದುಕುವುದು ಯಾರಿಗೇ ಆದರೂ ಒಂದು ಮಾದರಿಯೇ ಸರಿ. ಆದರೆ ಇಂಥ ಮಾದರಿಗಳು ಅಲ್ಲಿಗಷ್ಟೇ ಸೀಮಿತವೇ! ನಾವು ಅವರಿಂದಷ್ಟೆ ಕಲಿಯಬೇಕು ಎಂಬಷ್ಟು ಬಡವರೇ?

ಹಾಗಿದ್ದೀತೆ?

ಮಾದರಿಯಲ್ಲದ ಮಾದರಿ

ಬಡಜನರಿಗಾಗಿ ಮೀಸಲಿಟ್ಟಿದ್ದ ಕಂಬಳಿಯನ್ನು ಬಳಸದೆ ಚಳಿಗೆ ಹರಿದ ಕಂಬಳಿ ಹೊದ್ದುಕೊಂಡು ಚಾಣಕ್ಯ ಹುಲ್ಲಿನ ಗುಡಿಸಲಲ್ಲಿ ವಾಸಿಸುತ್ತಿದ್ದ ಎನ್ನುವುದು ಎರಡೂವರೆ ಸಾವಿರ ವರ್ಷಗಳ ಹಿಂದಿನ ಮಾದರಿ.

ನಿಜಕ್ಕಾದರೆ ಇದು ಮಾದರಿಯಲ್ಲ. ಎಲ್ಲರ ಬದುಕೂ ಇದೇ ತೆರನಾಗಿದ್ದಾಗ ಅದನ್ನು ಮಾದರಿ ಎನ್ನುವುದಕ್ಕಾದೀತೇ?

ಸರಿ. ಇದು ಆಗಿನ ಕಾಲದ್ದಾಯಿತು. ಈಗಿನ ನಿಮ್ಮ ಸ್ಥಿತಿ ಏನು ಹೇಳಿ ಎಂದು ಕೇಳುವಿರಾ! ಅರೆ, ಲಾಲ್ ಬಹದ್ದೂರ್ ಶಾಸ್ತ್ರಿಯವರು ತುಂಬಾ ಹಿಂದಿನವರೇನಲ್ಲವಲ್ಲ! ಅವರ ಸರಳ ನಿಃಸ್ಪೃಹ ಪ್ರಾಮಾಣಿಕ ಬದುಕು ನಮಗೆಲ್ಲ ಶಾಲಾಪಾಠ್ಯದ ಭಾಗವೇ ಆಗಿತ್ತು. ದೀನದಯಾಳ ಉಪಾಧ್ಯಾಯರು ಅವರ ಸಮಕಾಲೀನರು. ಸಮಾಜದ ಸಂಘಟನೆಗಾಗಿ ಬದುಕನ್ನೇ ಮೀಸಲಿಟ್ಟಿದ್ದ ಅವರಂತೂ ಸರಳ ನಿಗರ್ವಿ ಬದುಕಿನ ಸಂಕೇತವೇ ಆಗಿದ್ದರು. ಕಮ್ಯುನಿಸ್ಟ್ ಪಕ್ಷವೂ ಸೇರಿದಂತೆ ಆಗ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಬಹುತೇಕ ಅಂಥವರೇ ಇದ್ದರು. ಮತ್ತಿದು ಸಾವಿರಾರು ಅಥವಾ ನೂರಾರು ವರ್ಷಗಳ ಹಿಂದಿನ ಮಾತಲ್ಲ, ಬರಿಯ ನಲ್ವತ್ತೈವತ್ತು ವರ್ಷಗಳ ಹಿಂದಿನ ವಾಸ್ತವ. ಎಲ್ಲರೂ ಮಾದರಿಯಾಗಿದ್ದ ಸನ್ನಿವೇಶ ಇತ್ತೀಚಿನದೂ ಆಗಿತ್ತು.

ಎಲ್ಲರೂ ಮಾದರಿಯಾಗಿರುವುದು ಅಂದರೆ ಯಾರೂ ಯಾರಿಗೂ ಮಾದರಿಯಾಗಿಲ್ಲದಿರುವುದೂ ಹೌದು. ಎಲ್ಲರೂ ಎತ್ತರದ ಬದುಕನ್ನೇ ಬಾಳುವಾಗ ಮಾದರಿ ಏಕೆ?

ಮಾದರಿ ಬೇಕೇ?

ಮಾದರಿ ಬೇಕು. ಈಗ ಹಾಗೆ ಬೇಕೆನಿಸುವಂತೆ ನಾವು ಬದುಕುತ್ತಿದ್ದೇವೆ.

ಮತ್ತು ಹೀಗೆ ಬದುಕಲು ನಾವು ತೊಡಗಿದ್ದು ಪಶ್ಚಿಮವನ್ನು ಅನುಕರಿಸಿಯೇ ಅಲ್ಲವೇ! ಅವರನ್ನು ಮಾದರಿ ಎಂದು ತಿಳಿದೇ ಅಲ್ಲವೇ!

ತಾತ್ತ್ವಿಕ ನೆಲೆಗಟ್ಟು

ಪ್ರಪಂಚದ ನಾಲ್ಕು ಶೇಕಡಾ ಜನ ನಲ್ವತ್ತು ಶೇಕಡಾ ಸಂಪನ್ಮೂಲಗಳನ್ನು ಬಳಸುತ್ತಿದೆ ಎಂದು ಕೆಲವು ವರ್ಷಗಳ ಹಿಂದೆ ಅಮೆರಿಕದ ಬಗ್ಗೆ ಆರ್ಥಿಕ ವಿಶ್ಲೇಷಣೆಯೊಂದು ಬಂದಿತ್ತು. ಪ್ರತಿಷ್ಠೆಯ ಅಮಲಿನಲ್ಲಿ ನಾವು ಮಾದರಿ ಎಂದು ಅನುಕರಿಸಹೊರಟದ್ದು, ಅಂಥ ಬದುಕನ್ನೇ ಅಲ್ಲವೇ!

ಈಗ ಅದೇ ಪಶ್ಚಿಮದ ಯಾರದೋ ಬದುಕನ್ನು ಮಾದರಿ ಎನ್ನುತ್ತಿದ್ದೇವೆ.

ಅವರ ಅಂದಿನ ಮಾದರಿಗೂ ಇಂದಿನ ಮಾದರಿಗೂ ಏನಾದರೂ ತಾತ್ತ್ವಿಕ ನೆಲೆಗಟ್ಟು ಇದೆಯೇ?

ಚಾಣಕ್ಯನಿಂದ ಶಾಸ್ತ್ರೀಜಿ ತನಕ ನಮ್ಮ ಮಾದರಿಯಲ್ಲದ ಮಾದರಿ ವ್ಯತ್ಯಾಸಗೊಳ್ಳುವಂಥದ್ದಲ್ಲ. ಅದು ಚಾಣಕ್ಯನಿಗಿಂತ ಪೂರ್ವದ್ದೂ ಹೌದು. ಶಾಸ್ತ್ರೀಜಿ ನಂತರದ್ದೂ ಹೌದು.

ಸನಾತನ; ಎಷ್ಟು ಪ್ರಾಚೀನವೋ ಅಷ್ಟೇ ಅರ್ವಾಚೀನ.

ಕಾಲದ ಮಾತಿರಲಿ. ಅದು ತಾತ್ತ್ವಿಕ ನೆಲೆಗಟ್ಟುಳ್ಳದ್ದು.

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್/ ತೇನ ತ್ಯಕ್ತೇನ ಭುಂಜೀಥಾಃ ಮಾಗೃಧಃ ಕಸ್ಯಸ್ವಿದ್ಧನಂ; ಜಗತ್ತು ಅದನ್ನು ಆವರಿಸಿಕೊಂಡಿರುವ ಈಶ್ವರನದು. ಆತನ ಪ್ರಸಾದವೆಂದು ನಮಗೆಷ್ಟು ಬೇಕೋ ಅಷ್ಟನ್ನು ಮಾತ್ರ ಸ್ವೀಕರಿಸಬೇಕು ಎಂಬ ಅರ್ಥವುಳ್ಳ ಈ ಮಾತನ್ನು ಈಶಾವಾಸ್ಯ ಉಪನಿಷತ್ತು ತನ್ನ ಪ್ರಾರಂಭದ ಶ್ಲೋಕದಲ್ಲೇ ಉಲ್ಲೇಖಿಸುತ್ತದೆ.

ಸರಳವಾಗಿ ಬದುಕಬೇಕಾದುದು ಯಾರಿಗೋ ಮಾದರಿಯಾಗಬೇಕೆಂದೂ ಅಲ್ಲ, ದೃಷ್ಟಾಂತವಾಗಬೇಕೆಂದೂ ಅಲ್ಲ, ಕರುಣೆ ಕೃತಜ್ಞತೆ ಇತ್ಯಾದಿ ದೃಷ್ಟಿಯಿಂದಲೂ ಅಲ್ಲ; ಅದು ಎಲ್ಲರೂ
ಅವಶ್ಯ ಬದುಕಬೇಕಾದ ರೀತಿ ಅಷ್ಟೆ. ಬಂದಾಗ ತಂದಿರದ, ಹೋಗುವಾಗ ಕೊಂಡೊಯ್ಯದ ನಮ್ಮ ಬದುಕಿನಲ್ಲಿ ಯಾವುದೂ ನಮ್ಮದಾಗಿರಲು ಅಸಾಧ್ಯ ಅನ್ನುವುದು ಅತ್ಯಂತ ಮೂಲಭೂತವಾದ ಸತ್ಯ. ಅನಿವಾರ್ಯವೇ ಆದರೂ ನಮ್ಮದಲ್ಲದ್ದನ್ನು ಬಳಸಬೇಕಾದುದು ಅತಿಕನಿಷ್ಠ ಪ್ರಮಾಣದಲ್ಲಿ ಎಂಬುದು ಅತ್ಯಂತ ಮೂಲಭೂತವಾದ ಸಭ್ಯತೆ.

ಸಮಗ್ರದೃಷ್ಟಿ

ಹಾಗಾಗಿ; ಸರಳವಾಗಿ ಬದುಕುವುದು ನಾವು ಪ್ರಕೃತಿಗೆ ಮಾಡುವ ಉಪಕಾರವೂ ಅಲ್ಲ, ಉಳಿದವರಿಗೆ ತೋರುವ ಮಾದರಿಯೂ ಅಲ್ಲ; ಅದು ನಮಗೆ ಯಜ್ಞ. ಹಾಗೆ ಯಜ್ಞದಂತೆ ಬದುಕುವುದು ವ್ರತ. ಅನಿವಾರ್ಯತೆಗಿಂತ ಹೆಚ್ಚಿನದನ್ನು ಅಪೇಕ್ಷಿಸುವುದು ಬೇರೆಯವರಿಗೆ ಸೇರಬೇಕಾದುದನ್ನು ಅಪೇಕ್ಷಿಸಿದಂತೆ, ಒಂದೊಮ್ಮೆ ಅದು ನಮ್ಮದೇ ಗಳಿಕೆಯಾಗಿದ್ದರೂ.

ನಾವು ಪಡೆಯುವ ಕುರಿತಾದ ಈ ದೃಷ್ಟಿಕೋನವು ಭಾರತೀಯವಾದುದು. ಉಪನಿಷತ್ತಿನಂಥ ನಮ್ಮ ಪ್ರಾಚೀನ ವಾಙ್ಮಯದಿಂದ ನಮಗೆ ವಾರಸಿಕೆಯಾಗಿ ಬಂದುದು.

ಬದುಕಿನಲ್ಲಿ ಹೊಂದಬೇಕಾದುದರ ಕುರಿತು ಇಟ್ಟುಕೊಳ್ಳಬೇಕಾದ ಈ ದೃಷ್ಟಿಕೋನವನ್ನು ಭಾರತೀಯತೆ ಎನ್ನಬಹುದು. ಹೀಗೆ ಬದುಕಿನ ಎಲ್ಲ ಮುಖಗಳಲ್ಲಿಯೂ ಭಾರತೀಯವಾದ ದೃಷ್ಟಿಕೋನವನ್ನು ಕಾಣಲು ಸಾಧ್ಯ.

ಬದುಕು ಭಾರತೀಯವಾಗಿ ಸಮಗ್ರಗೊಳ್ಳುವುದು ಅಂಥ ಎಲ್ಲ ಮುಖಗಳ ಭಾರತೀಯತೆಯಿಂದ.

ಚಾಣಕ್ಯ ಬಹುತೇಕ ಹಾಗಿದ್ದ. ತಾನು ಭಾರತೀಯನಾಗಿ, ನಿರ್ಣಾಯಕ ಕಾಲಘಟ್ಟದಲ್ಲಿ ಭವಿಷ್ಯಭಾರತಕ್ಕಾಗಿ ಮಹತ್ತ್ವದ್ದನ್ನು ಕೊಡುವವನಾಗಿ ಅಂದುಕೊಂಡದ್ದನ್ನು ಯಶಸ್ವಿಯಾಗಿ ಮಾಡಿಪೂರೈಸಿದ್ದ. ಅಂಥ ಮತ್ತೊಂದು ನಿರ್ಣಾಯಕ ಕಾಲಘಟ್ಟದಲ್ಲಿ ಶಾಸ್ತ್ರೀಜಿ ಕೂಡಾ ಇದ್ದರು. ಸ್ವಾತಂತ್ರ್ಯ ಬಂದ ನಂತರದ ಕಾಲಘಟ್ಟವದು. ರಾಷ್ಟ್ರಜೀವನದ ಎಲ್ಲ ಮುಖಗಳಲ್ಲಿಯೂ ಭಾರತೀಯತೆಯನ್ನು ಪ್ರತಿಷ್ಠಾಪಿಸಬೇಕಿದ್ದ ಕಾಲವದು. ಮತಾಂಧರ ತುಷ್ಟೀಕರಣವನ್ನು ಸ್ವಭಾವವಾಗಿಸಿಕೊಂಡಿದ್ದ ಕಾಂಗ್ರೆಸ್ಸಿನಿಂದ ಅವರು ಪ್ರಧಾನಿಯಾದರು. ತಾತ್ತ್ವಿಕ ನೆಲೆಗಟ್ಟಿನಲ್ಲಿ ಅವರು ಸಮಗ್ರ ಭಾರತೀಯತೆಯ ಪ್ರತಿನಿಧಿಯಾಗಿ ಇದ್ದಿದ್ದರೆ ತಾಷ್ಕೆಂಟಿಗೆ ಹೋಗುತ್ತಿರಲಿಲ್ಲ, ಹೆಣವಾಗಿ ಬರುತ್ತಿರಲಿಲ್ಲ. ಇರಲಿ.

ಅಂದರೆ; ಭಾರತೀಯತೆಯನ್ನು ಸರಳಜೀವನದಲ್ಲಿ ನೋಡಬಹುದು. ಜತೆಗೆ; ಜೀವನದ ಎಲ್ಲ ಮುಖಗಳಲ್ಲಿಯೂ ಅದನ್ನು ನೋಡಬಹುದು. ನೋಡಬೇಕು ಕೂಡಾ.

ಜ್ಞಾನಯುಕ್ತ ಪ್ರೀತಿ

ಭಾರತದ ಬಗ್ಗೆ ನಮ್ಮ ವಾಙ್ಮಯದಲ್ಲಿ ಸೂಚಿತವಾದ ಒಂದು ಶ್ಲೋಕವಿವರ ಹೀಗಿದೆ:
ಭಾತಿ ಸರ್ವೇಷು ಶಾಸ್ತ್ರೇಷು ರತಿ ಸರ್ವೇಷು ಜಂತುಷು ।
ತರಣಂ ಸರ್ವ ತೀರ್ಥಾನಾಂ ಯೇನ ಭಾರತಮುಚ್ಯತೇ ।।
ಎಲ್ಲ ಶಾಸ್ತ್ರಗಳ ಬೆಳಕು, ಎಲ್ಲ ಜೀವಗಳಲ್ಲಿರುವ ಪ್ರೀತಿ, ಎಲ್ಲ ಶ್ರದ್ಧೆಗಳ ಸೇತು ಯಾವುದೋ ಅದು ಭಾರತ. (ಮಹಾಭಾರತ)

ನಾವು ಶಾಸ್ತ್ರವೆಂದು ಭಾವಿಸುವುದು ವೇದವಾಙ್ಮಯವನ್ನು, ಅದರ ಆಧಾರದಲ್ಲಿ ರಚಿತವಾದ ಸ್ಮೃತಿ ಮತ್ತಿತರ ಕೃತಿಗಳನ್ನು. ಎಲ್ಲಾ ಶಾಸ್ತ್ರಗಳಿಗೂ ಮೂಲ ವೇದವೇ ಅನ್ನುವುದು ಶ್ರದ್ಧೆ.

ವೇದವೆಂದರೆ ಜ್ಞಾನ. ಜ್ಞಾನವನ್ನು ಸೂಚಿಸತಕ್ಕ ಸಂಕೇತವಾಗಿ ಬೆಳಕನ್ನು ಕಾಣುವುದಿದೆ. ಎಲ್ಲ ಶಾಸ್ತ್ರಗಳ ಬೆಳಕು ಎಂಬ ಸಾಲನ್ನು ಈ ಹಿನ್ನೆಲೆಯಲ್ಲಿ ನೋಡಬಹುದು.

ಎಲ್ಲೆಡೆ ಇರುವ ಸತ್ಯವೊಂದೇ ಮತ್ತದು ಎಲ್ಲರಲ್ಲೂ ಎಲ್ಲ ಚರಾಚರಗಳಲ್ಲೂ ಇದೆ ಎನ್ನುವುದೇ ಜ್ಞಾನಿಗಳು ಅರುಹುವ ಮುಖ್ಯ ತತ್ತ್ವವಾಗಿದೆ. ಈ ನಿಟ್ಟಿನಲ್ಲಿ ಯಾವುದನ್ನೂ ನಮಗದು ಎಷ್ಟೇ ವರ್ಜ್ಯವೆನಿಸಿದರೂ ದೂರೀಕರಿಸಲೂ ಸಾಧ್ಯವಿಲ್ಲ, ಅದರೊಂದಿಗೆ ವೈರಸಾಧಿಸಲೂ ಸಾಧ್ಯವಿಲ್ಲ. ಸಮಸ್ತ ಚರಾಚರವನ್ನು ಪ್ರೀತಿಯಿಂದ ಕಾಣುವುದೊಂದೇ ನಮ್ಮ ಮುಂದಿರುವ ಆಯ್ಕೆ.

ಯಾವುದೇ ಜಂತು/ಮನುಷ್ಯ ಅಸ್ತಿತ್ವದಿಂದ ಎಂಥದ್ದೇ ಸವಾಲು ಎದುರಾಗಿ ಅದನ್ನು ಸಮರ್ಥವಾಗಿ ನಿರ್ವಹಿಸುವಾಗಲೂ ಇರಬೇಕಾದುದು ದ್ವೇಷವಲ್ಲ, ಪ್ರೀತಿ. ಜ್ಞಾನ ಮತ್ತು ಪ್ರೀತಿಗಳು ಹೀಗೆ ಒಟ್ಟೊಟ್ಟಿಗೇ ಇವೆ.

ಸೇತುಭಾರತ

ತೀರ್ಥವೆಂದರೆ ಪವಿತ್ರವಾದುದು, ಶ್ರದ್ಧೇಯವಾದುದು. ಅದು ವ್ಯಕ್ತಿಯಿರಬಹುದು, ಸಮುದಾಯವಿರಬಹುದು, ಸ್ಥಾನವಿರಬಹುದು, ವಿಚಾರವಿರಬಹುದು.. ತೀರ್ಥವು ಹೀಗೆ ನಾನಾ ಆಯಾಮಗಳನ್ನು ಹೊಂದಿರಬಹುದು. ಅವುಗಳ ನಡುವೆ ವೈರುಧ್ಯ ಕಂಡರೂ ಅವೆಲ್ಲವುಗಳೂ ಪರಸ್ಪರವೇ. ಅವೆಲ್ಲವುಗಳ ನಡುವೆ ನಮಗೆ ಹುಟ್ಟಬೇಕಾದುದು ನಿಷ್ಪಾಕ್ಷಿಕವಾದ ಭಕ್ತಿಯೇ. ಇಂಥ ಭಕ್ತಿಭಾವದ ಮೂಲಕ ಅವುಗಳ ನಡುವೆ ಭಾರತವು ಸೇತುವಿನಂತೆ ಕೆಲಸಮಾಡುತ್ತದೆ.

ಜ್ಞಾನವೆಂದರೆ ಏಕತ್ವ. ವೈವಿಧ್ಯಮಯ ಜಗತ್ತಿನಲ್ಲಿ ವ್ಯವಹರಿಸುತ್ತ ಸಾಧಿಸಬೇಕಾದುದು ಏಕತ್ವವನ್ನೇ. ಭಾರತವು ಈ ಏಕತ್ವಸಾಧನೆಯ ವ್ಯವಹಾರವನ್ನು ಸಂಕೇತಿಸುತ್ತದೆ.

ಹೀಗೆ ಭಾರತದ ಅರ್ಥವರ್ಣನೆಯಲ್ಲಿ ಒಂದು ಏಕಾತ್ಮಭಾವದ ದ್ರವ್ಯವಿದೆ.

ಸರಳ ಅಂದರೆ ನೇರ. ಅಂಕುಡೊಂಕುಗಳಿಲ್ಲದ್ದು. ಹೊರಗೊಂದು ಒಳಗೊಂದು ಇಲ್ಲದ್ದು. ಮಾತಲ್ಲೊಂದು ಕೃತಿಯಲ್ಲೊಂದು ಇಲ್ಲದ್ದು. ಕಪಟವಿಲ್ಲದ್ದು. ಜ್ಞಾನವು ಘಟಿಸಲು ಅವಶ್ಯ ಇರಬೇಕಾದ ಮನೋದ್ರವ್ಯವಿದು.

ಜ್ಞಾನಸಂಬಂಧೀ ಅರ್ಥವುಳ್ಳ, ನಿತಾಂತ ಪ್ರೀತಿಯ ಮನೋದ್ರವ್ಯವುಳ್ಳ, ಎಲ್ಲವುಗಳ ನಡುವೆ ಸೇತುವಾಗಿರುವ ಭಾರತವನ್ನು ಅಭಿವ್ಯಕ್ತಿಸುವಲ್ಲಿ ಸರಳಜೀವನವು ಹೀಗೆ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಎಲ್ಲರನ್ನೂ ಒಳಗೊಳ್ಳುವ ಪರಿ

ಸರಳಜೀವನಕ್ಕೆ ವ್ಯತಿರಿಕ್ತವಾಗಿರುವುದು ಆಡಂಬರದ ಜೀವನ.

ಸರಳಜೀವನವು ಒಂದು ಆದರ್ಶವೇ. ಪಾಲಿಸುವವರೂ ಪಾಲಿಸದವರೂ ಒಪ್ಪಬಹುದಾದ ಆದರ್ಶವೇ. ಇಂಥ ಆದರ್ಶದ ನಡುವೆ ಶ್ರೀಮಂತಿಕೆಗೆ ಅವಕಾಶವಿಲ್ಲವೇ, ಭಾರತದಲ್ಲಿ ಅದರ ಸ್ಥಾನವೇನು ಎನ್ನುವ ಪ್ರಶ್ನೆ ಧುತ್ತನೆ ಎದುರಾಗುವುದು ಸಹಜ.

ಶ್ರೀಮಂತರು ಸರಳವಾಗಿ ಬದುಕುವ ಮತ್ತು ಬಡವರು ಶ್ರೀಮಂತವಾಗಿ ಬದುಕುವ ಎರಡೂ ಸಾಧ್ಯತೆಗಳು ಇಲ್ಲಿವೆ. ಸಾಲಮಾಡಿಯಾದರೂ ತುಪ್ಪತಿನ್ನು ಎಂದು ಬೋಧಿಸಿದ ಚಾರ್ವಾಕನೂ ಭಾರತೀಯ ತಾತ್ತ್ವಿಕತೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾನೆ. ಇದರ ಮತ್ತೊಂದು ತುದಿಯಲ್ಲಿ ಈಶಾವಾಸ್ಯದ ಮಿತಬಳಕೆಯ ಬೋಧನೆಯಿದೆ.

ಅದೂ ಭಾರತವೇ ಇದೂ ಭಾರತವೇ ಅನ್ನುವುದು ಎಲ್ಲವನ್ನೂ ಒಳಗೊಳ್ಳುವ ಧ್ವನಿ. ಎಲ್ಲವನ್ನೂ ಒಳಗೊಳ್ಳುವ ಭಾರತದ ಧ್ವನಿ. ಜ್ಞಾನೈಕದೃಷ್ಟಿಯಲ್ಲಿ ಯಾರನ್ನೂ ಹೊರತಾಗಿಸುವ ಪ್ರಶ್ನೆ ಬಾರದಷ್ಟೆ. ಎಲ್ಲವನ್ನೂ ಒಳಗೊಳ್ಳುವವನ ಬದುಕು ಸರಳವಿರಲಿಕ್ಕೇ ಬೇಕು. ಸರಳಜೀವಿ ಬಡವನನ್ನೂ ಒಳಗೊಳ್ಳುತ್ತಾನೆ, ಶ್ರೀಮಂತನನ್ನೂ ಒಳಗೊಳ್ಳುತ್ತಾನೆ.

ಶ್ರೀಮಂತಿಕೆ ತಪ್ಪಲ್ಲ

ಶ್ರೀಮಂತಿಕೆ ಎನ್ನುವ ಮಾತು ಬಂತು. ಅದು ಭಾರತೀಯವೇ. ಆದರೆ ಅಲ್ಲಿ ಆಡಂಬರ ಇರಬೇಕಿಲ್ಲ. ಆಡಂಬರ ಸಲ್ಲದು ಕೂಡಾ.

ತಾನು ಹೀಗೆ ಮಾಡಿದಾಗ ಪ್ರತಿಷ್ಠೆ ಹೆಚ್ಚುವುದು ಎಂದು ತಿಳಿಯುವುದು, ಅವರು ಮಾಡಿದರೆಂದು ಇವರೂ ಮಾಡುವುದು, ಇವರು ಮಾಡಿದರೆಂದು ಅವರೂ ಮಾಡುವುದು; ಅಹಂಕಾರ, ಸ್ಪರ್ಧೆ ಈರ್ಷ್ಯೆಗಳಿಂದ ಕೂಡಿದ ಇಂಥ ಮನೋಭಾವವೇ ಆಡಂಬರದ ಹಿಂದೆ ಕೆಲಸಮಾಡುವುದು.

ಆಡಂಬರವು ಅಭಾರತೀಯ, ಶ್ರೀಮಂತಿಕೆಯಲ್ಲ.

ಶ್ರೀಮಂತಿಕೆಯ ಮೂಲ ಮತ್ತದರ ಲಕ್ಷ್ಯಗಳನ್ನು ಲೆಕ್ಕಿಸಿ ಅದೆಂತು ಭಾರತೀಯ ಎಂದು ಅವಲೋಕಿಸಬಹುದು.

ಶ್ರೀಮಂತಿಕೆಯು ‘ಗೌರವ’ವನ್ನು, ‘ಪ್ರತಿಷ್ಠೆ’ಯನ್ನು ಅಹಂಕಾರವನ್ನು.. ತಂದುಕೊಡಬಲ್ಲದು. ಗಳಿಸುವಾಗ ಇದ್ದ ಪರಹಿತದ ಲಕ್ಷ್ಯ ಸ್ವಾರ್ಥದಲ್ಲಿ ಪರ್ಯವಸಾನವಾಗಬಹುದು. ವ್ಯಕ್ತಿಯ ಸ್ವಭಾವವನ್ನೇ ಅಹಿತಕರವಾಗಿ ಬದಲಿಸಿಬಿಡಬಹುದು. ಇದು ಅತೀವ ಅನಪೇಕ್ಷಣೀಯ.

ಅನಪೇಕ್ಷಣೀಯವಾದುದು ಅಭಾರತೀಯವೆ.

ಏಕತೆಗಾಗಿ ಸಂತುಲನ

ಎಷ್ಟೇ ಸಾಧಿಸಿದರೂ ಕೆಲವರಿಗೆ ಶ್ರೀಮಂತಿಕೆಯನ್ನು ಹೊಂದಲಾಗದು. ಯಾವ ವಿಶೇಷ ಸಾಧನೆಯೂ ಇಲ್ಲದೆ ಕೆಲವರು ಶ್ರೀಮಂತರಾಗಿಬಿಡುತ್ತಾರೆ. ಪ್ರಕೃತಿಯು ಎಲ್ಲರಲ್ಲಿಯೂ ಒಂದೇ ರೀತಿಯ ಸ್ವಭಾವ – ಸಾಮರ್ಥ್ಯವನ್ನು ಇಟ್ಟಿಲ್ಲ.

ಇಂತಿರ್ಪ ವೈವಿಧ್ಯದಲ್ಲಿ ವೈರುಧ್ಯವನ್ನು ಬೆಳೆಸದೆ ಏಕತ್ವವನ್ನು ಸಾಧಿಸಬಲ್ಲ ಸಂತುಲನವನ್ನು ಸಾಧಿಸಬೇಕಾದುದು ನಮ್ಮ ಕರ್ತವ್ಯವೇ ಆಗಿದೆ.

ಇಲ್ಲದವರಿಗೆ ಉಳ್ಳವರು ಒದಗಬೇಕು.

‘ಅನ್ನಂ ಬಹುಕುರ್ವೀತ, ತದ್‌ವ್ರತಮ್’ ಎಂದು ಉಪನಿಷತ್ ಘೋಷಿಸುತ್ತದೆ. ಆಹಾರಕ್ಕೆ ಸಂಬಂಧಿಸಿದ ಶ್ರೀಮಂತಿಕೆಯನ್ನು ಹೊಂದಬೇಕೆಂದು ಸೂಚಿಸುವ ಸಾಲಿದು. ಇದರ ಧ್ಯೇಯ ಉಳ್ಳವರು ಇತರರಿಗೆ ಒದಗುವ ಮೂಲಕ ಸಂತುಲನವನ್ನು ಸಾಧಿಸಿ ಏಕತ್ವವನ್ನು ಕಂಡುಕೊಳ್ಳುವುದೇ ಆಗಿದೆ.

ತಾತ್ತ್ವಿಕ ನೆಲೆಗಟ್ಟಿನಲ್ಲಿ ತೊಡಗಿದಾಗ ಸರಳತೆಗೂ ಅರ್ಥ ಹುಟ್ಟಿಕೊಳ್ಳುತ್ತದೆ, ಶ್ರೀಮಂತಿಕೆಗೂ ಅರ್ಥ ಹುಟ್ಟಿಕೊಳ್ಳುತ್ತದೆ; ಬಡತನಕ್ಕೂ ಸರಳತೆಗೂ ಇರುವ ಅಂತರ ಸ್ಪಷ್ಟಗೊಳ್ಳುತ್ತದೆ, ಶ್ರೀಮಂತಿಕೆಗೂ ಆಡಂಬರಕ್ಕೂ ಇರುವ ಅಂತರ ಸ್ಪಷ್ಟಗೊಳ್ಳುತ್ತದೆ.

ಏಕತೆಗೆ ಬಾಧೆಯೆನಿಸಿದ ವಿಷಯವನ್ನು ಸಮ್ಯಕ್ ಆಗಿ ನಿರ್ವಹಿಸಿ ಅನುಭವಿಸುವ ಜೀವನತತ್ತ್ವವು ಭಾರತೀಯತೆ.

("ವಿಕ್ರಮ" ವಾರಪತ್ರಿಕೆಯಲಿ ಪ್ರಕಟವಾದ ಲೇಖನ)

Leave a Reply

Your email address will not be published.

This site uses Akismet to reduce spam. Learn how your comment data is processed.