ಇಂದು ಜಯಂತಿ
ನೇತಾಜಿ ಎಂದೇ ಗೌರವದಿಂದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಕೊಂಡಿರುವ ಸುಭಾಷ್ ಚಂದ್ರ ಬೋಸ್ ಅವರು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದವರು. ಇವರು ತಮ್ಮ ಭಾಷಣಗಳ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು ಧುಮುಕುವಂತೆ ಮಾಡಿದವರು. ಆಜಾದ್ ಹಿಂದ್ ಫೌಜ್ ಮುಖಾಂತರ ಸ್ವಾತಂತ್ರ್ಯ ಚಳವಳಿಗೆ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ. ಇಂದು ಅವರ ಜಯಂತಿ. ಅವರ ಜಯಂತಿಯನ್ನು ಭಾರತದಲ್ಲಿ ಪರಾಕ್ರಮ ದಿನವನ್ನಾಗಿ ಆಚರಿಸಲಾಗುತ್ತದೆ.
ಪರಿಚಯ
ಸುಭಾಷ್ ಚಂದ್ರ ಬೋಸ್ ಅವರು ಜನವರಿ 23, 1897 ರಂದು ಒಡಿಶಾದ ಕಟಕ್ ನಲ್ಲಿ ಜನಿಸಿದರು. ಇವರ ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಅವರು ಕಟಕ್ ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. 1919ರಲ್ಲಿ ತತ್ವಶಾಸ್ತ್ರದಲ್ಲಿ ಬಿ.ಎ ಪದವಿ ಪಡೆದು ನಂತರ ಐಸಿಎಸ್ ಪರೀಕ್ಷೆಗಾಗಿ ಇಂಗ್ಲೆಂಡ್ ಗೆ ತೆರಳಿದರು. 1920 ರಲ್ಲಿ ಐಸಿಎಸ್ ಪರೀಕ್ಷೆ ಉತ್ತೀರ್ಣರಾದರೂ ಬ್ರಿಟಿಷರ ಅಡಿಯಲ್ಲಿ ಕೆಲಸ ಮಾಡಲಿಚ್ಛಿಸದೆ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.
ಬದುಕಿನ ಹಾದಿ
ಕಾಂಗ್ರೆಸ್ ನ ನೀತಿಗಳಿಂದ ಬೇಸತ್ತು ಚಿತ್ತರಂಜನ್ ದಾಸ್ ಅವರು ಸ್ವರಾಜ್ಯ ಪಕ್ಷ ಸ್ಥಾಪನೆ ಮಾಡಿದ್ದರು. ಬೋಸ್ ಈ ಸ್ವರಾಜ್ಯ ಪಕ್ಷವನ್ನು ಸೇರಿಕೊಂಡರು. ಅಲ್ಲಿ ಚಿತ್ತರಂಜನ್ ದಾಸ್ ಅವರ ಜೊತೆ ಕೆಲಸ ಮಾಡುತ್ತಿದ್ದರು. ಚಿತ್ತರಂಜನ್ ದಾಸ್ ಅವರ ‘ಫಾರ್ವರ್ಡ್’ ಪತ್ರಿಕೆಯ ನಿರ್ವಹಣೆಯನ್ನು ಸುಭಾಷ್ ಚಂದ್ರ ಬೋಸ್ ಅವರು ವಹಿಸಿಕೊಂಡರು.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅವರನ್ನು 1925 ರಲ್ಲಿ ಮ್ಯಾಂಡಲೆಯಲ್ಲಿ ಬಂಧಿಸಲಾಯಿತು. 1927ರಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.
1938ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಬೋಸ್ ಅವರ ಹೋರಾಟದ ಹಾದಿ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ನಂತರ ಅವರು ಒತ್ತಾಯಪೂರ್ವಕವಾಗಿ ರಾಜೀನಾಮೆ ನೀಡಿದರು. 1939ರಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಲು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಅನ್ನು ಸ್ಥಾಪಿಸಿದರು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ಸೇನೆಗೆ ಸೇರ್ಪಡೆಗೊಳಿಸುವ ಮುನ್ನ ಸಮಾಲೋಚನೆ ನಡೆಸದ ಬ್ರಿಟಷ್ ಸರ್ಕಾರದ ನೀತಿಯನ್ನು ಖಂಡಿಸಿದರು.
ನಂತರದ ದಿನಗಳಲ್ಲಿ ದೇಶಕ್ಕೆ ತ್ವರಿತವಾಗಿ ಸ್ವಾತಂತ್ರ್ಯ ತರಲು ಬೋಸ್ ಕ್ರಾಂತಿಯ ಹಾದಿ ಹಿಡಿದಿದ್ದರು. ಸುಭಾಷ್ ಚಂದ್ರ ಬೋಸ್ ಮೊದಲು ಪಕ್ಷವಾಗಿ ಕಟ್ಟಿದ ಆಜಾದ್ ಹಿಂದ್ ಸೇನೆ ಮುಂದೆ ಸೈನ್ಯವಾಗಿ ರೂಪಗೊಂಡಿತ್ತು. ಈ ಸೇನೆಗೆ ನಿವೃತ್ತ ಯುದ್ಧ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ಸೇನೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ವಿಸ್ತರಿಸಿತು. ಅನೇಕ ಜನರು ಸ್ವರಾಜ್ಯ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.
ಬ್ರಿಟಿಷ್ ವಿರುದ್ಧ ಹೋರಾಟ
ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷ್ ವಿರುದ್ಧ ಹೋರಾಡಲು ಎನ್ ಐಎ ಎಂಬ ಮಿಲಿಟರಿ ಪಡೆಯನ್ನು ಸಶಕ್ತಗೊಳಿಸಿದರು. 1941 ರಲ್ಲಿ ಜರ್ಮಿನಿಗೆ ಹೋಗಿ ಹಿಟ್ಲರ್ ಭೇಟಿಯಾದರು. ಅಲ್ಲಿ ಹಣಕಾಸು, ಮಿಲಿಟರಿ ಸಹಾಯ ದೊರೆತ ನಂತರ ಬರ್ಲಿನ್ ನಲ್ಲಿ ಫ್ರೀ ಇಂಡಿಯಾ ಸೆಂಟರ್ ಸ್ಥಾಪನೆ ಮಾಡಿದರು. ಜಪಾನ್ ದೇಶವೂ ಸೇನಾ ಬೆಂಬಲ ನೀಡುವುದಾಗಿ ತಿಳಿಸಿತು. 1944 ರಲ್ಲಿ ಬ್ರಿಟಿಷ್ ವಿರುದ್ದ ಐಎನ್ ಎ ದಾಳಿ ಮಾಡಿತು. ಆದರೆ ವಿಶ್ವ ಯುದ್ಧದ ಪರಿಣಾಮ ಜಪಾನ್ ಐಎನ್ ಎ ಗೆ ಬೆಂಬಲ ನೀಡಲು ಸಾಧ್ಯವಾಗಲಿಲ್ಲ.
ಆಗಸ್ಟ್ 18 , 1945 ರಲ್ಲಿ ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಿಧನರಾದರು. ಇಂದಿಗೂ ಸಹ ಕೋಟ್ಯಂತರ ಜನರಿಗೆ ಬೋಸ್ ಅವರ ಜೀವನ , ಹೋರಾಟ ಆದರ್ಶವಾಗಿದೆ.
ಪರಾಕ್ರಮ ದಿವಸ್ ಆಚರಣೆ
ರಾಷ್ಟ್ರಕ್ಕೆ ನೇತಾಜಿಯ ಅದಮ್ಯ ಮನೋಭಾವ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಸಲುವಾಗಿ ಭಾರತ ಸರ್ಕಾರ 2021ರಿಂದ ಪ್ರತಿವರ್ಷ ಅವರ ಜನ್ಮದಿನವನ್ನು ‘ಪರಾಕ್ರಮ್ ದಿವಸ್’ ಎಂದು ಗುರುತಿಸಿದೆ. ರಾಷ್ಟ್ರಾದ್ಯಂತ ಅವರ ಜೀವನಾದರ್ಶಗಳನ್ನು ಈ ದಿನ ಸ್ಮರಿಸಲಾಗುತ್ತದೆ.