
ಲೇಖನ: ನಾರಾಯಣ ಶೇವಿರೆ
ಕಳೆದ ವರ್ಷದ ಬೇಸಿಗೆ ನಾಡನ್ನು ಕಾಡಿದ್ದು ಕಡಮೆ. ನಿರೀಕ್ಷೆಗಿಂತ ಕಡಮೆ. ಬೇಗನೆ ಮಳೆ ಬಂದದ್ದು, ಆಗಾಗ ಮಳೆ ಹೊಯ್ದಿದ್ದು, ಸಹಜ ಮಳೆ ಯಾವುದು – ವಾಯುಭಾರ ಕುಸಿತದ ಮಳೆ ಯಾವುದು ಎಂದು ಗೊತ್ತಾಗದಷ್ಟು ಮಳೆ ಸುರಿದದ್ದು.. ಇವು ಭೂಮಿಯ ನಿಜ ಉಷ್ಣತೆಯನ್ನು ಒಂದಷ್ಟು ಮರೆಮಾಚಿದ್ದುವು.
ಸಹಜ ಉಷ್ಣತೆ ಹೀಗೆ ಅಸಹಜವಾಗಿ ಗೊತ್ತಾಗದಿರುವುದು ಒಳ್ಳೆಯದೇ, ಕೆಟ್ಟದೇ?
ಇದಕ್ಕೆ ಉತ್ತರ ಕಂಡುಕೊಳ್ಳಲು; ಸೂರ್ಯನನ್ನು ಮೋಡಗಳು ಒಂದಷ್ಟು ಮರೆಮಾಚುವವಲ್ಲ, ಅದು ಒಳ್ಳೆಯದೇ ಕೆಟ್ಟದೇ ಎಂಬ ಪ್ರಶ್ನೆಗೆ ಉತ್ತರವೇನೆಂದು ಕಂಡುಕೊಳ್ಳಬೇಕೆನಿಸುತ್ತದೆ.
ಸೂರ್ಯನನ್ನು ಮರೆಯಲ್ಲಿಡುವ ಮೋಡಗಳಿಂದಾಗಿ ಒಂದಷ್ಟು ಅಸಹಜ ನೆರಳು ದಕ್ಕುತ್ತದೆ. ಮಧ್ಯಾಹ್ನದ ಹೊತ್ತಿನಲ್ಲಿ ಹೊರಗಡೆ ಅಡ್ಡಾಡುವಾಗ ಹಾಯೆನಿಸುತ್ತದೆ. ಮರಗಳು ಹೂ ಬಿಡುವ ಕಾಲದಲ್ಲಿ ನಿರಂತರ ಇದೇ ಆದರೆ ಬಿಟ್ಟ ಹೂಗಳು ಕರಟಿಹೋಗುತ್ತವೆ. ಫಲವಸ್ತುಗಳು ಕಡಮೆಯಾಗುತ್ತವೆ.
ಅಂದರೆ; ಸೂರ್ಯನನ್ನು ಮರೆಮಾಡುವ ಮೋಡಗಳಿಂದ ತಾತ್ಕಾಲಿಕ ಸುಖವೂ ಇದೆ, ದೀರ್ಘ ಕಾಲದ ಹಾನಿಯೂ ಇದೆ.
ಇದು ತೋರುನೋಟದ ಮಾಹಿತಿ. ಒಳನೋಟಕ್ಕೆ ಇನ್ನೂ ಕೆಲವು ಮಾಹಿತಿಗಳು ಲಭಿಸಿಯಾವು.
ಭೂಮಿಯ ಉಷ್ಣತೆ ಭಯಾನಕವಾಗಿ ಏರುತ್ತಲೇ ಇದೆ, ಆದರೆ ಅದು ಅನುಭವಕ್ಕೆ ಬರಲಿಲ್ಲ ಎಂಬುದು ಸಂತಸಪಡುವುದಕ್ಕಿಂತ ಅಧಿಕವಾಗಿ ಆತಂಕಪಡಬೇಕಾದ ಸಂಗತಿಯೇ ಆದೀತು. ಮುಂದೆ ಅದನ್ನು ಎರಡು ಪಟ್ಟು ಅನುಭವಿಸಬೇಕಾಗಿ ಬಂದರೆ ಮುಂದೇನು ಎಂಬ ಪ್ರಶ್ನೆ ಕಾಡೀತು.
ವಿಕಾರದ ವಿಪರಿಣಾಮ
ಹೋದ ವರ್ಷ ಮಳೆಗಾಲದಲ್ಲಿಯೇ ವಾಯುಭಾರ ಕುಸಿತದ ಆರೆಂಟು ಸಂದರ್ಭಗಳು ತಲೆದೋರಿದವು. ಯಾಕೋ, ಹವಾಮಾನ ಮುನ್ಸೂಚನೆಯ ಅಂಶಗಳು ಹೆಚ್ಚುಕಡಮೆ ವಾಸ್ತವವೆನಿಸಿದವು.
ಮಳೆಗಾಲದಲ್ಲಿ ವಾಯುಭಾರ ಕುಸಿತ! ಒಟ್ಟಾರೆಯಾಗಿ ಮಳೆಗಾಲವೇ ಒಂದು ವಾಯುಭಾರ ಕುಸಿತ. ಅದರಲ್ಲಿಯೂ ಮತ್ತೆ ವಿಶೇಷವಾಗಿ ಈ ರೀತಿ ಕುಸಿತ! ಅಸಹಜ ಕುಸಿತ.
ವಿಕಾರವು ಸುಖವನ್ನು ತಂದರೂ ಅದು ಅಪಾಯವೇ! ಯಾಕೆಂದರೆ ಅದು ವಿಕಾರ.
ಅಸಹಜಕ್ಕೆ ವಿಕಾರದ ಆಯಾಮವೂ ಇದೆ, ಸಂಸ್ಕಾರದ ಆಯಾಮವೂ ಇದೆ. ಅತಿವೃಷ್ಟಿ, ಅವೇಳೆಯ ವೃಷ್ಟಿ.. ಇವೆಲ್ಲ ವಿಕಾರದ ವಿಪರಿಣಾಮಗಳು. ಮಳೆಗಾಲದಲ್ಲಿ ಬರುವ ಯಥೇಚ್ಛ ಮಳೆ, ಅದಕ್ಕಿಂತ ಮುಂಚೆ ಮತ್ತು ನಂತರ ಬರುವ ವಿರಳ ಮಳೆ, ನಕ್ಷತ್ರಾಧಾರಿತವಾಗಿ ಬರುವ ನಿರೀಕ್ಷಿತ ಪ್ರಮಾಣದ ಮಳೆ.. ಇವೆಲ್ಲ ಸಂಸ್ಕಾರದ ಸತ್ಫಲಗಳು.
ಇಲ್ಲಿ ಸಂಸ್ಕಾರವು ಲಭಿಸಿದ್ದು ಪ್ರಕೃತಿಯಿಂದಲೇ. ಅಂದರೆ; ಮಳೆಗೆ ಸಂಬಂಧಿಸಿದಂತೆ ಪ್ರಕೃತಿಯಲ್ಲೇ ಜರಗುವ ಪ್ರಕ್ರಿಯೆಯನ್ನು ಸಾಂಸ್ಕೃತಿಕ ಪರಿಭಾಷೆಯಲ್ಲಿ ಸಂಸ್ಕಾರವೆಂದೆವು. ವಿಕಾರವು ಪ್ರಕೃತಿಯಲ್ಲಿಲ್ಲ. ಪ್ರಕೃತಿಯದೇ ಕೂಸಾದ ಮಾನವನಲ್ಲಿರಲು ಸಾಧ್ಯ. ಮಾನವನಲ್ಲಿಯ ವಿಕಾರವು ಪ್ರಕೃತಿಸಂಬಂಧಿತವಾಗಿ ತೊಡಗಿದಾಗ ಅಲ್ಲಿ ಉಂಟಾಗುವ ಏರುಪೇರನ್ನು ಪ್ರಾಕೃತಿಕ ವಿಕಾರಗಳೆಂದೆವು.
ಅಂದರೆ; ಅತಿವೃಷ್ಟಿ, ಅನಾವೃಷ್ಟಿ, ಅವೇಳಾವೃಷ್ಟಿ ಇತ್ಯಾದಿ ಮಳೆ ಸಂಬಂಧಿಯಾದ ವಿಕಾರಗಳ ಮೂಲವಿರುವುದು ಬಹುತೇಕ ಮಾನವ ಚಟುವಟಿಕೆಗಳಲ್ಲಿಯೇ. ಪ್ರಕೃತಿಯ ಸಹಜ ನಡೆಯಲ್ಲಿ ಅಪರೂಪಕ್ಕೆ ಉಂಟಾಗಬಹುದಾದ ಇಂಥ ವಿಪರಿಣಾಮಗಳನ್ನು ಪೂರ್ತಿ ಅಲ್ಲಗಳೆಯಲಾಗದೆನ್ನಿ. ಆದರೆ ಈಚಿನ ದಿನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಏರುಮುಖದ ಭೂಮಿಯ ಉಷ್ಣತೆ ಇತ್ಯಾದಿ ಪ್ರಕೃತಿಸಂಬಂಧೀ ವಿಪರಿಣಾಮಗಳು ನಿತ್ಯವೆನಿಸುತ್ತಿವೆ.
ಹೆಚ್ಚೇಕೆ, ಹೋದ ವರ್ಷವೇ ಕೆಲವೆಡೆ ಅತಿವೃಷ್ಟಿಯೂ ಕೆಲವೆಡೆ ಮಿತವೃಷ್ಟಿಯೂ ಕೆಲವೆಡೆ ಅತ್ಯುಷ್ಣತೆಯೂ ನಮ್ಮ ಅನುಭವಕ್ಕೆ ಬಂತಷ್ಟೆ!
ಅರಣ್ಯಧ್ವಂಸಕ ಹಸಿರು
ಹೀಗೆ ವಿಪರಿಣಾಮವನ್ನುಂಟುಗೈವ ಮಾನವನ ಚಟುವಟಿಕೆಗಳಾದರೂ ಯಾವುವು?
ಮಾಮೂಲಿಯಾಗಿ ನಾವು ಗುರುತಿಸುತ್ತಿರುವ ಚಟುವಟಿಕೆಗಳೆಂದರೆ ಕಾರ್ಖಾನೆ, ವಾಹನ, ಕಾಂಕ್ರೀಟ್ ಕಟ್ಟಡ, ಕಾಂಕ್ರೀಟ್ ರಸ್ತೆ ಇತ್ಯಾದಿ.
ಇವೆಲ್ಲವೂ ನಗರಕೇಂದ್ರಿತವಾಗಿ ನಡೆದಿವೆ ಎಂದು ಗ್ರಾಮೀಣರು ಉಲ್ಲೇಖಿಸಲು ಸಾಧ್ಯ. ತಮ್ಮ ಚಟುವಟಿಕೆಗಳನ್ನು ನಿರುಪದ್ರವಿ, ಪ್ರಕೃತಿಪೂರಕ ಎಂದು ಸಮರ್ಥಿಸಿಕೊಳ್ಳಲೂ ಸಾಧ್ಯ. ಆದರೆ ಹಾಗೇನೂ ಭಾವಿಸಬೇಕಿಲ್ಲ. ಗ್ರಾಮೀಣರ ಜೀವನಶೈಲಿಯೂ ಇದೀಗ ದೊಡ್ಡಮಟ್ಟದಲ್ಲಿ ಪ್ರಕೃತಿಮಾರಕವಾಗಿ ಸಾಗುತ್ತಿರುವುದು ವೇದ್ಯವೇ ಇದೆ. ಜತೆಗೆ ಕೃಷಿ ಹೆಸರಿನಲ್ಲಿ ನಡೆದಿರುವ ಚಟುವಟಿಕೆಗಳು ಕೂಡಾ.
ನೋಡಿ; ಮಲೆನಾಡಿನ ಭಾಗದಲ್ಲಿ ಈಗ ಸಂಜೆ ವೇಳೆ ಅಡ್ಡಾಡಿದರೆ ಅಲ್ಲಿಲ್ಲಿ ಕಾಡಿನಲ್ಲಿ ಬೆಂಕಿಬಿದ್ದಿರುವುದು ಕಾಣುತ್ತದೆ. ಬಹುತೇಕ ಇವು ಮನುಷ್ಯನಿರ್ಮಿತ ಕಾಡ್ಗಿಚ್ಚು. ಉದ್ದಿಶ್ಯಪೂರ್ವಕ ಹಚ್ಚಿದ ಕಾಡ್ಗಿಚ್ಚು! ಮುಂದಿನ ಮಳೆಗಾಲಕ್ಕಾಗುವಾಗ ಈ ಕಾಡಿನ ಭಾಗದಲ್ಲಿ ಸಣ್ಣಪುಟ್ಟ ಮರಗಳಾವುವೂ ಇರುವುದಿಲ್ಲ. ಆ ಜಾಗವನ್ನು ಮೆಕ್ಕೆಜೋಳವೋ ಅಡಕೆಸಸಿಗಳೋ ಆಕ್ರಮಿಸಿರುತ್ತವೆ.
ಅಚ್ಚರಿಯೆನಿಸುತ್ತದೆ! ಒಂದು ಕಾಲದ ಕಾಡಬೆಳೆ ಅಡಕೆ ಇಂದು ಕಾಡನ್ನೇ ನುಂಗುತ್ತಿದೆ. ಭಾರತದ ಬೆಳೆಯೇ ಅಲ್ಲದ, ಆಹಾರದ ಬೆಳೆಯಂತೂ ಅಲ್ಲವೇ ಅಲ್ಲದ ಮೆಕ್ಕೆಜೋಳ ಪಶು-ಆಹಾರದ ಹೆಸರಿನಲ್ಲಿ ಇಲ್ಲಿಗೆ ಕಾಲಿಟ್ಟು ಇದೀಗ ಬಯಲುಸೀಮೆಯನ್ನು ದಾಟಿ ಮಲೆನಾಡನ್ನು ಆವರಿಸಿಕೊಳ್ಳುತ್ತಿದೆ. ಪರಕೀಯ ದಾಳಿಕೋರರಿಂದಾಗಿ ಯೂರೋಪಿನಿಂದ ಬಂದ ಗೋಧಿ ಈಗ ನಮ್ಮ ಪ್ರಮುಖ ಆಹಾರವೆನಿಸಿದಂತೆ ಮುಂದೊಂದು ದಿನ ಮೆಕ್ಕೆಜೋಳವೂ ನಮ್ಮ ಆಹಾರಸಂಸ್ಕೃತಿಯ ಪ್ರಮುಖಭಾಗವಾದರೂ ಅಚ್ಚರಿಯಿಲ್ಲ.
ಬಯಲುಸೀಮೆಯ ಹೊಲಗಳನ್ನು ಬಹುತೇಕ ಆವರಿಸಿಕೊಂಡ ಮೆಕ್ಕೆಜೋಳ ಈಗ ಅಲ್ಲಿಯ ಕುರುಚಲು ಬೆಟ್ಟಗುಡ್ಡಗಳನ್ನೂ ಸಪಾಟುಗೊಳಿಸಿ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುತ್ತಿದೆ. ಕರಾವಳಿಯನ್ನು ಬಹು ಹಿಂದೆಯೇ ರಬ್ಬರ್ ತೋಟಗಳು ಆಳುತ್ತ ಬಂದಿದ್ದುವು. ಮಲೆನಾಡಿಗೂ ದಾಂಗುಡಿಯಿಟ್ಟಿದ್ದುವು. ತಾನಿರುವ ಪ್ರದೇಶದ ಉಷ್ಣತೆಯನ್ನು ಅಧಿಕಗೊಳಿಸುವ ಸ್ವಭಾವವುಳ್ಳ ರಬ್ಬರಿಗೂ ಉಷ್ಣತೆಯನ್ನು ಅಧಿಕಗೊಳಿಸುವ ವಾಹನ-ಕಾರ್ಖಾನೆಗಳಿಗೂ ಬಿಡಿಸಲಾಗದ ನಂಟು. ಅಂದರೆ ರಬ್ಬರ್ ಎಂಥ ಕಾಡಲ್ಲೇ ಬೆಳೆದರೂ ಅದು ಸಾಗಬೇಕಾದುದು ಕಾರ್ಖಾನೆಗಳಿರುವ ನಗರಪ್ರದೇಶಕ್ಕೇ. ಹಾಲಿನಂತೆ ಕಾಣುವ ರಬ್ಬರಿನ ಒಂದು ತೊಟ್ಟು ದ್ರವಕ್ಕೂ ಹಳ್ಳಿಯಲ್ಲಿ ಕೆಲಸವಿಲ್ಲ.
ತಮಗೆ ಉಪಯೋಗವೇ ಇಲ್ಲದ ರಬ್ಬರನ್ನು, ಕಡಮೆ ಉಪಯೋಗಿಸಬಹುದಾದ ಅಡಕೆ-ಮೆಕ್ಕೆಜೋಳಗಳನ್ನು ರೈತರು ಆಹಾರದ ಬೆಳೆಯ ಬೆಲೆಯಲ್ಲಿ – ಬಲಿಗೊಟ್ಟು – ಬೆಳೆಯುತ್ತಾರಲ್ಲ! ಏನಿದು ಸೋಜಿಗ! ದುಡ್ಡಿನ ಕರಾಮತ್ತನ್ನು ಈ ಮಟ್ಟಕ್ಕೂ ಬೆಳೆಸುವುದೇ?
ಅಡಕೆಯಿರಲಿ, ಮೆಕ್ಕೆಜೋಳವಿರಲಿ, ರಬ್ಬರ್ ಇರಲಿ, ಕಾಫಿ-ಚಹಾಗಳೇ ಇರಲಿ; ಇವೆಲ್ಲವೂ ಆಪೋಷನ ತೆಗೆದುಕೊಂಡದ್ದು ದಟ್ಟ ಕಾನನವನ್ನು ಇಲ್ಲವೇ ಕುರುಚಲು ಕಾಡನ್ನು. ಅವು ನೀಡಿದ್ದು ಪ್ರಕೃತಿಗೆ ಪ್ರಬಲ ಆಘಾತವನ್ನು.
ಮಾಪದಂಡದ ಮಿತಿ
ಮಲೆನಾಡಿನ ಕಾಡುಗಳಿಗೆ ಮಳೆಕಾಡುಗಳೆಂದೇ ಹೆಸರು. ಈ ಕಾಡುಗಳಿದ್ದರೆ ಮಳೆ. ಅವುಗಳ ಅಸ್ತಿತ್ವಕ್ಕೆ ಧಕ್ಕೆ ಒದಗಿಸಿದರೆ ಮಳೆಗೂ ಧಕ್ಕೆಯೊದಗುವುದೇ ಸೈ.
ಮನುಷ್ಯ ವೈಜ್ಞಾನಿಕನಾಗಿ ತಂತ್ರಜ್ಞಾನಿಯಾಗಿ ಪ್ರಗತಿಹೊಂದಿದಂತೆ ಅವುಗಳ ಮಾನದಂಡದಲ್ಲೇ ಎಲ್ಲವನ್ನೂ ಅಳೆಯುವ ಮಾನಿಸುವ ಲೆಕ್ಕಾಚಾರಕ್ಕೆ ಬಿದ್ದಿದ್ದಾನೆ. ನಮ್ಮ ಪ್ರತಿಯೊಂದು ಸಾಂಸ್ಕೃತಿಕ ನಡೆಯಲ್ಲಿಯೂ ಏನಿದೆ ವೈಜ್ಞಾನಿಕತೆ ಎಂದು ಪ್ರಶ್ನಿಸುವ ಉತ್ಸಾಹ ಹಿಂದೆ ತುಂಬಾ ಕೆಲಸಮಾಡಿತ್ತು. ಅಷ್ಟಿಷ್ಟು ಈಗಲೂ ಇದೆ. ಮಳೆ ಬರುವುದಕ್ಕೂ ಬರದಿರುವುದಕ್ಕೂ ಅತಿವೃಷ್ಟಿ-ಅನಾವೃಷ್ಟಿಗಳಿಗೂ ಎಂತೆಂಬ ವಿವರಗಳನ್ನು ವೈಜ್ಞಾನಿಕ ಬಗೆಯಲ್ಲಿ ನೀಡುವ ಪರಿಪಾಠ ಇದೀಗಲೂ ನಡೆದಿದೆ. ಇದನ್ನು ಅಲ್ಲಗಳೆಯುವ ಧ್ವನಿಯಲ್ಲಲ್ಲ ಈ ಮಾತಿರುವುದು, ವಿಜ್ಞಾನವು ಗೊತ್ತುಮಾಡಿಕೊಂಡ ಮಾನದಂಡದ ಮಿತಿ ಗೊತ್ತಿರಬೇಕೆಂಬುದಷ್ಟೆ ಇಲ್ಲಿಯ ಮುಖ್ಯ ಧ್ವನಿ.
ವಿಜ್ಞಾನದ ಪ್ರಶ್ನೆಗೆ ಉತ್ತರಿಸುತ್ತ ಸಮರ್ಥಿಸುವ ಉತ್ಸಾಹದಲ್ಲಿ ನಮ್ಮ ಹಲವು ಸಾಂಸ್ಕೃತಿಕ ನಡೆಗಳಿಗೆ ವೈಜ್ಞಾನಿಕ ಮಹತ್ತ್ವವೂ ಇದೆಯೆಂಬ ಮಾಹಿತಿಯನ್ನು ತಿಳಿಯುವಂತಾಯಿತು. ಆದರೆ ಸಾಂಸ್ಕೃತಿಕ ನಡೆಯನ್ನು ಅಳೆಯಲು ಬರಿಯ ವೈಜ್ಞಾನಿಕ ಮಾಪದಂಡ ಸಾಕಾಗದು, ಸಂಸ್ಕೃತಿಯ ಮಾಪದಂಡವೂ ಅದಕ್ಕೆ ಬೇಕಾಗುತ್ತದೆ.
ಮಳೆಯ ಮುನ್ಸೂಚನೆ ನೀಡುವ ವೈಜ್ಞಾನಿಕ ಸಾಧನವು ಹಲವು ಬಾರಿ ಎಡವಿಬಿದ್ದಿರುವ ಪ್ರಸಂಗಗಳು ನಮ್ಮ ಕಣ್ಣೆದುರಿಗೇ ಇವೆ. ಈಗೀಗಂತೂ ಮಳೆ ಬರುವುದನ್ನು ಮುನ್ಸೂಚನೆಯಾಗಿ ಹವಾಮಾನ ಇಲಾಖೆ ಹೇಳಿದರೆ ಸಾಕು, ‘ಹಾಗಾದರೆ ಮಳೆ ಬರುವುದಿಲ್ಲ ಬಿಡಿ’ ಎಂದು ಜನಸಾಮಾನ್ಯರೇ ಹಾಸ್ಯಮಾಡುವಷ್ಟು ಅದರ ಮಾಪಕದ ಕರಾರುವಾಕ್ಕುತನವು ‘ಪ್ರಸಿದ್ಧಿ’ಯಾಗಿದೆ. ಇಲ್ಲಿರುವುದು ಖಂಡಿತಕ್ಕೂ ಗೇಲಿಯ ಧ್ವನಿಯಲ್ಲ, ವೈಜ್ಞಾನಿಕ ಮಾಪಕಕ್ಕೂ ಮಿತಿಯಿದೆ ಎಂದು ತಿಳಿದಿರಬೇಕು. ಮಿತಿಯಿದೆ ಎಂದಮಾತ್ರಕ್ಕೆ ಅದರ ಉಪಯೋಗವೇ ವ್ಯರ್ಥ, ಬಳಕೆ ಸಲ್ಲದು ಎಂಬ ಅತಿವಾದವೂ ಸಲ್ಲದೇ.
ಇವಿಷ್ಟನ್ನು ಉಲ್ಲೇಖಿಸಿದ್ದು ಇಷ್ಟಕ್ಕೇ; ಮೂವತ್ತಮೂರು ಶೇಕಡಾದಷ್ಟು ಕಾಡಿರಬೇಕಾದಲ್ಲಿ ಶೇಕಡಾ ಒಂಭತ್ತರಷ್ಟು ಕಾಡಿದೆ ಎಂದು ನಿಖರವಾಗಿ ಎಂಬಂತೆ ಹೇಳುವ ವೈಜ್ಞಾನಿಕ ಮಾಹಿತಿಯೂ ಮಿತಿಯುಳ್ಳದ್ದು. ಪಕ್ಷಿನೋಟಕ್ಕೆ ಶೇಕಡಾ ಒಂಭತ್ತರಷ್ಟು ಹಸಿರೇನೋ ಕಾಣಬಹುದು. ಆದರೆ ಅವೆಲ್ಲವೂ ಅರಣ್ಯದ ಹಸಿರೇ ಆಗಿರಬೇಕಿಲ್ಲ, ರಬ್ಬರ್ ಅಡಕೆ ಇತ್ಯಾದಿ ಕೃಷಿತೋಟಗಳ ಹಸಿರೂ ಇವೆ ಅದರಲ್ಲಿ, ಅಕೇಶಿಯಾ ನೀಲಗಿರಿ ಮ್ಯಾಂಜಿಯಂ ಇತ್ಯಾದಿ ನೆಡುತೋಪುಗಳ ಹಸಿರೂ ಇದೆ ಅದರಲ್ಲಿ. ಕಾಡಿಗೆ ವಿರುದ್ಧಸ್ಥಿತಿಯಲ್ಲಿರುವ ಇವುಗಳನ್ನು ಕಾಡಾಗಿ ಸ್ವೀಕರಿಸುವುದು ಕಾಡಿಗೆ ಬಗೆವ ದ್ರೋಹವೇ ಆಗುತ್ತದೆ.
ದಾರಿದೀಪದಂಥ ಮಾತು
ತೋರುನೋಟಕ್ಕೆ ನೀರು-ಬೆಂಕಿಗಳಿಗಿರುವುದು ಎಣ್ಣೆ-ಸೀಗೆ ಸಂಬಂಧ. ಆದರೆ ಹಾಗಿಲ್ಲ ಎನ್ನುತ್ತದೆ ಸೃಷ್ಟಿಯ ಕುರಿತಾದ ನಮ್ಮ ವಾಙ್ಮಯವಿವರ. ಆಕಾಶ ವಾಯುಗಳು ಸೃಷ್ಟಿಯಾದ ನಂತರ ಬಂದದ್ದು ಅಗ್ನಿ. ಅದರ ಹಿಂದೆ ಬಂದದ್ದು ಜಲ.
ಒಂದರ ಹಿಂದೆ ಮತ್ತೊಂದು ಎಂದಷ್ಟೇ ಅಲ್ಲ ಈ ವಿವರದಲ್ಲಿರುವುದು; ಒಂದರಿಂದ ಮತ್ತೊಂದು ಎಂಬ ವಿವರವೂ ಇದೆ, ಮುಂದಿನದರಲ್ಲಿ ಹಿಂದಿನ ಎಲ್ಲವೂ ಇದೆ ಎಂಬ ವಿವರವೂ ಇದೆ. ಅಂದರೆ; ಅಗ್ನಿಯಿಂದ ಜಲ ಬಂತು, ಅಷ್ಟೇ ಅಲ್ಲ, ಜಲದಲ್ಲಿ ಆಕಾಶ ವಾಯುಗಳೂ ಸೇರಿದಂತೆ ಅಗ್ನಿಯೂ ಇದೆ.
ನಮ್ಮ ಆಮ್ ಆದ್ಮಿ ಮಾತಿನಲ್ಲಿ ಹೇಳುವುದಾದರೆ; ಬೆಂಕಿಯಿಂದ ನೀರು ಬಂತು, ನೀರಿನಲ್ಲಿ ಬೆಂಕಿಯೂ ಇದೆ. ಇದು ಯಾರಿಗೇ ಆದರೂ ಅತೀವ ಅಕಲ್ಪನೀಯ ಮಾಹಿತಿ. ಸೀಗೆಯಿಂದ ಎಣ್ಣೆ ಬರಲೂ ಅಸಾಧ್ಯ, ಎಣ್ಣೆಯಲ್ಲಿ ಸೀಗೆ ಇರಲೂ ಅಸಾಧ್ಯ ತಾನೇ! ಆದರೆ ಹಾಗಿಲ್ಲ ನೀರು-ಬೆಂಕಿಗಳ ಸಂಬಂಧ. ಅಷ್ಟೇ ಅಲ್ಲ, ಅವು ಪಾರಸ್ಪರಿಕವಾಗಿವೆ.
ಭೂಮಿಯ ಉಷ್ಣತೆ ಏರಿದಂತೆ ಮಳೆಮೋಡಗಳು ಉಂಟಾಗಿ ಮಳೆಬರುತ್ತದೆ. ಬಂದ ಮಳೆಯಿಂದಾಗಿ ಬೇಯುತ್ತಿರುವಂತೆ ಇರುವ ಭೂಮಿಯ ಉಷ್ಣತೆ ಕಡಿಮೆಯಾಗುತ್ತದೆ. ಕುದಿ ನೀರಲ್ಲಿಯೂ ಬೆಂಕಿಯಂಥ ಉಷ್ಣತೆಯಿದೆ, ತಣ್ಣೀರಲ್ಲಿಯೂ ಕಡಮೆ ತಾಪವನ್ನೋ ಋಣತಾಪವನ್ನೋ ಉಳ್ಳ ಉಷ್ಣತೆಯಿದೆ.
ಪ್ರಕೃತಿಯಲ್ಲಿ ಸಹಜ ಸಂತುಲನವಿದ್ದಾಗ ಕಾಲಕಾಲಕ್ಕೆ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲಗಳು ಘಟಿಸುತ್ತವೆ. ಈ ಸಂತುಲನದಲ್ಲಿ ಏರುಪೇರಾದರೆ ಬೆಂಕಿಯಿಂದ ಅತೀವವಾದ ಮಳೆ ಸುರಿಯಬಹುದು, ಇಲ್ಲವೇ ಬೆಂಕಿಯ ಮಳೆಯೇ ಸುರಿಯಬಹುದು.
ನಮಗೆ ಅತಿಯಾದ ಮಳೆ ಬೇಕೇ ಇಲ್ಲವೇ ಬೆಂಕಿಯ ಮಳೆ ಬೇಕೇ ಇಲ್ಲವೇ ಸಹಜ ಮಳೆ ಬೇಕೇ.. ಎಲ್ಲವೂ ನಮ್ಮ ಕೈಯಲ್ಲೇ ಇದೆ.
ಭಿಲಾಯ್ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕಾಗಿ ಸುಮಾರು ನೂರು ಚದರಮೈಲಿಗಳಷ್ಟು ಭತ್ತಬೆಳೆವ ಜಮೀನನ್ನು ಬಲಿಗೊಟ್ಟಿದ್ದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಗುರೂಜಿಯವರು ಆಕ್ಷೇಪಿಸಿದ್ದರು. ‘ಕೊಳವೆಬಾವಿಗಳನ್ನು ನಿಯಂತ್ರಿಸದೇ ಹೋದಲ್ಲಿ ಭೂಮಿಯ ಅಂತರ್ಜಲ ಮಟ್ಟ ಕುಸಿದುಹೋಗುತ್ತದೆ’ ಎಂದು 1951ರಲ್ಲಿಯೇ ಅವರು ಎಚ್ಚರಿಸಿದ್ದರು. ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ ಇಂಥ ನಿಖರವಾದ ಹತ್ತುಹಲವು ಮುನ್ಸೂಚನೆಗಳನ್ನು ನೀಡುತ್ತಿದ್ದ ಅವರ ಮಾತುಗಳನ್ನು ಆಗಿನ ಆಡಳಿತದ ಮಂದಿ ಮಹತ್ತ್ವದ ಸಂಗತಿಯಾಗಿ ಕೇಳಲಿಲ್ಲ. ಹಾಗಾಗಿ ಅವರು ಪರಿಸರಸಂಬಂಧಿಯಾಗಿ ನೀಡಿದ ದೂರದೃಷ್ಟಿಯ ಮಾತುಗಳೂ ಇತಿಹಾಸದ ಪುಟಗಳಲ್ಲಿ ಹೂತುಹೋದವು. ಅವು ಇಂದಿಗೂ ನಿಜವಾದ ದಾರಿದೀಪಗಳಾಗಿವೆ. ಅವುಗಳ ಬೆಳಕಲ್ಲಿ ನಡೆಯುವವರು ಬೇಕಷ್ಟೆ.
ನಡೆಯಬಲ್ಲೆವೆ! ("ವಿಕ್ರಮ"ದ 'ಕಡೆಗೋಲು' ಅಂಕಣ)