ಇಂದು ಸ್ಮೃತಿದಿನ

ಲೇಖನ: ಚಂದ್ರಿಕಾ ಕಶ್ಯಪ್, ಬೆಂಗಳೂರು

ಶಕ್ತಿಯೇ ಮೈವೆತ್ತಂತಹ, ವೈಯಕ್ತಿಕ, ಸಾಮಾಜಿಕ ಬದುಕನ್ನು ಸಾರ್ಥಕ ಪಡಿಸಿಕೊಂಡಿರುವ ಧೀರ ಮಹಿಳೆ ವಂದನೀಯ ಸರಸ್ವತಿ ಬಾಯಿ ಆಪ್ಟೇ, ರಾಷ್ಟ್ರ ಸೇವಿಕಾ ಸಮಿತಿಯ ಸೇವಿಕೆಯರೆಲ್ಲರ ಪ್ರೀತಿಯ ‘ತಾಯೀಜೀ.’

ತಾಯೀಜೀ ಹುಟ್ಟಿದ್ದು ಫಾಲ್ಗುಣ ಬಹುಳ ಏಕಾದಶೀ, ಮಾರ್ಚ್ 17, 1910 ರಲ್ಲಿ. ಈಕೆ ಲೋಕಮಾನ್ಯ ತಿಲಕರ ಅಕ್ಕನ ಮೊಮ್ಮಗಳು. ತಾಯೀಜೀ ಅವರ ಜೀವನವನ್ನು ನೋಡುತ್ತಾ ಹೋದರೆ ಅವರ ಆ ದೇಶಭಕ್ತಿ, ರಾಷ್ಟ್ರೀಯ ಚಿಂತನೆ ಇವುಗಳ ಮೂಲ ಅವರಲ್ಲಿ ಹರಿಯುತ್ತಿದ್ದ ರಕ್ತ.

ಸರಸ್ವತಿ ಬಾಯಿ ಅವರ ವಿವಾಹ ವಿನಾಯಕ ರಾವ್ ಆಪ್ಟೆ ಅವರೊಂದಿಗೆ ನೆರವೇರಿದಾಗ ಅವರಿಗೆ ಕೇವಲ 15 ವರ್ಷ. ಆ ಚಿಕ್ಕ ವಯಸ್ಸಿನಲ್ಲೇ ವಯಸ್ಸಿಗೆ ಮೀರಿದ ಪ್ರೌಢಿಮೆ, ಬುದ್ಧಿಮತ್ತೆ, ನಡವಳಿಕೆಯಿಂದ ಅತ್ತೆಯ ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ಸೊಸೆಯಾಗಿ, ಗೃಹಿಣಿಯಾಗಿ ಎಲ್ಲರಿಂದಲೂ ಪ್ರಶಂಸೆಗೊಳಗಾದರು.

ವಿನಾಯಕರಾವ್ ಆಪ್ಟೆ ಅವರು ಪುಣೆಯಲ್ಲಿ ಪ್ರಸಿದ್ಧ ವಕೀಲರಾಗಿದ್ದರು. ಅವರು ಪೂನಾ ನಗರದ ಸಂಘಚಾಲಕರೂ ಆಗಿದ್ದರು. ಮನೆಯಲ್ಲಿ ಕಾರ್ಯಕರ್ತರ ಭೇಟಿ, ಸಮಾಲೋಚನೆ, ರಾಷ್ಟ್ರೀಯ ಚಿಂತನೆ, ಬೈಠಕ್, ಚರ್ಚೆ ಸತತವಾಗಿ ನಡೆಯುತ್ತಿತ್ತು. ಹಾಗೂ ಇವರ ಮನೆಯ ಕೆಳಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯವು ಇದ್ದುದರಿಂದ ಅಲ್ಲಿಗೆ ಭೇಟಿಕೊಡುತ್ತಿದ್ದ ಅನೇಕ ಸ್ವಯಂಸೇವಕರ ನಿಷ್ಠಾವಂತ ಕಾರ್ಯವೈಖರಿ, ತಾಯಿಜೀ ಅವರಲ್ಲಿ ಸುಪ್ತವಾಗಿದ್ದ ದೇಶಪ್ರೇಮ, ರಾಷ್ಟ್ರಮುಖಿ ಚಿಂತನೆಯನ್ನು ಉದ್ದೀಪನಗೊಳಿಸುವಲ್ಲಿ ನಾಂದಿಯಾಯಿತು. ರಾಷ್ಟ್ರಚಿಂತನೆ, ಸಂಘಟನಾ ಶಕ್ತಿ, ಸ್ವಾವಲಂಬನೆ ಮಹಿಳೆಯರಲ್ಲೂ ಜಾಗೃತವಾಗಿ ಅವರ ಸರ್ವತೋಮುಖ ಬೆಳವಣಿಗೆಯ ಅವಶ್ಯಕತೆಯನ್ನು ಮನಗಂಡು ತಮ್ಮ ಅಡುಗೆಮನೆಯಲ್ಲಿ 1936 ರಲ್ಲಿ ಮಹಿಳಾ ಸಂಘಟನೆಯನ್ನು ಪ್ರಾರಂಭಿಸಿದರು. ಪ್ರತಿ ಗುರುವಾರ ಒಟ್ಟಿಗೆ ಸೇರುತ್ತಿದ್ದ ಮಹಿಳೆಯರ ನಡುವೆ ದೇಶದ ಪರಿಸ್ಥಿತಿ, ಸಮಾಜದಲ್ಲಿ ಮಹಿಳೆಯ ಪಾತ್ರ ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚೆ, ವಿಚಾರ ಮಂಥನಗಳು ನಡೆಯುತ್ತಿದ್ದವು. ಅಷ್ಟಕ್ಕೇ ಸೀಮಿತಗೊಳಿಸದೆ ಲಾಠಿ ಅಭ್ಯಾಸ, ಶಾರೀರಿಕ ಸ್ವಾಸ್ಥ್ಯಕ್ಕಾಗಿ ವ್ಯಾಯಾಮ ಇನ್ನಿತರ ಚಟುವಟಿಕೆಗಳನ್ನು ನಡೆಸತೊಡಗಿದರು.

1936ರಲ್ಲಿ ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ (ವಂ. ಮೌಶೀಜೀ) ಅವರು ವಾರ್ಧಾದಲ್ಲಿ ‘ರಾಷ್ಟ್ರ ಸೇವಿಕಾ ಸಮಿತಿ’ಯನ್ನು ಸ್ಥಾಪಿಸಿದರು. ತಾಯಿಜೀಯವರ ಸಂಘಟನೆಯ ಬಗ್ಗೆ ತಿಳಿದ ಅವರು ತಾಯಿಜೀವರನ್ನು ಭೇಟಿ ಮಾಡಲು ಪುಣೆಗೆ ಬರುತ್ತಾರೆ. ಎರಡು ಸಂಘಟನೆಗಳ ಬಗ್ಗೆ, ಕಾರ್ಯವೈಖರಿಯ ಬಗ್ಗೆ ಚರ್ಚೆ ನಡೆಯುತ್ತದೆ. ಆಗ ತಾಯೀಜೀ ಅವರು ‘ಧ್ಯೇಯ ಒಂದೇ ಇರುವ ನಾವಿಬ್ಬರು ಯೋಗಾಯೋಗದಿಂದ ಒಂದುಗೂಡಿದ್ದೇವೆ. ನಮಗೂ ಅವಕಾಶ ಕೊಡಿ. ನಮ್ಮ ಸಂಘಟನೆಯೂ ನಿಮ್ಮೊಂದಿಗೆ ಬೆರೆತು ಬೆಳೆಯಲಿ’ ಎಂದು ಹೇಳುತ್ತಾರೆ. ‘ಇದಕ್ಕೆ ನಿಮ್ಮ ಅಭ್ಯಂತರವಿಲ್ಲವೇ’ ಎಂದು ಮೌಶೀಜೀಯವರು ಕೇಳಿದಾಗ ‘ನಾನು ನನ್ನದು ಎಂಬ ಪ್ರಶ್ನೆಗೆ ಇಲ್ಲಿ ಆಸ್ಪದವೇ ಇಲ್ಲ. ನಾವು ನಮ್ಮದು ಎನ್ನುವುದು ಸಮಂಜಸವಲ್ಲವೇ’ ಎಂದು ಹೇಳುತ್ತಾರೆ. ಅಹಂಕಾರದ ಲವಲೇಶವೂ ಇಲ್ಲದ ತಾಯೀಜೀಯವರನ್ನು ಮೌಶೀಜೀಯವರು ಹೊರಡುವಾಗ ‘ಪರಮಪೂಜ್ಯ ಡಾಕ್ಟರ್‌ಜೀ (ಸಂಘದ ಸ್ಥಾಪಕರು) ಅವರಿಗೆ ಏನಾದರೂ ಹೇಳುವುದಿದೆಯೇ’ ಎಂದು ಕೇಳಿದಾಗ, ‘ನಾವು ಮಹಿಳೆಯರೆಲ್ಲ ನಾನು ನನ್ನದು ಎಂಬ ಭಾವವನ್ನು ತೊರೆದು, ನಾವು ನಮ್ಮದು ಎಂದು, ಒಮ್ಮನಸ್ಸಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿಬಿಡಿ’ ಎಂದು ಹೇಳುತ್ತಾರೆ. ಮಹಿಳೆಯರಲ್ಲಿ ಒಮ್ಮತವಿಲ್ಲ ಎಂಬ ಅಪನಂಬಿಕೆಯನ್ನು ತೊಡೆದುಹಾಕುವಲ್ಲಿ ತಾಯೀಜೀ ತಮ್ಮ ದಿಟ್ಟ ನಿಲುವನ್ನು ಎತ್ತಿ ಹಿಡಿಯುತ್ತಾರೆ. ಹೀಗೆ ಮೌಶೀಜೀ ಹಾಗೂ ತಾಯೀಜೀ ಅವರ ಭೇಟಿ ಹಾಗೂ ಎರಡು ಸಂಘಟನೆಗಳ ವಿಲೀನ, ರಾಷ್ಟ್ರ ಸೇವಿಕಾ ಸಮಿತಿಯ ಬೃಹತ್ ಬೆಳವಣಿಗೆಗೆ ಬುನಾದಿಯಾಗುತ್ತದೆ. ತಾಯೀಜೀ, ಮೌಶೀಜೀಯವರದು ಗಂಗೆ ಯಮುನೆಯರ ಸಂಗಮವಿದ್ದಂತೆ.‌ ತಾಯೀಜೀ ಅವರ ಈ ನಿಲುವು ರಾಷ್ಟ್ರ ಸೇವಿಕಾ ಸಮಿತಿ ಎಂಬ ರಥದ ಎರಡು ಚಕ್ರಗಳನ್ನು ಬಲಿಷ್ಠವಾಗಿಸಿ ಸಮಿತಿಯ ಕಾರ್ಯ ದೇಶ ವ್ಯಾಪಿಯಾಗಲು ಸಹಕಾರಿಯಾಗುತ್ತದೆ. ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ ಅವರು ಪ್ರಮುಖ ಸಂಚಾಲಿಕಾರಾಗಿ, ವಂದನೀಯ ಸರಸ್ವತಿ ಬಾಯಿ ಆಪ್ಟೇ ಅವರು ಪ್ರಮುಖ ಕಾರ್ಯವಹಿಕಾ ಆಗಿ ಜವಾಬ್ದಾರಿ ವಹಿಸುತ್ತಾರೆ.

ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದರೂ ತಾಯೀಜಿಯವರು ಮನೆಯನ್ನು ಎಂದೂ ನಿರ್ಲಕ್ಷಿಸಿರಲಿಲ್ಲ. ಮನೆಯ ಸದಸ್ಯರಿಗೆ, ಮನೆಗೆ ಬರುತ್ತಿದ್ದ ಸಂಘ ಬಂಧುಗಳಿಗೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯಾಗಿದ್ದರು. ರುಚಿಕರ ಆರೋಗ್ಯಕರ ಊಟ ಉಪಚಾರಗಳು ನಡೆಯುತ್ತಿದ್ದವು. ಅವರ ದಿನಚರಿ ಬೆಳಿಗ್ಗೆ 4:30ಕ್ಕೆ ಪ್ರಾರಂಭವಾದರೆ ಸರಿರಾತ್ರಿವರೆಗೆ ಒಂದಿಲ್ಲೊಂದು ಚಟುವಟಿಕೆಯಲ್ಲಿ ಕಳೆಯುತ್ತಿತ್ತು. ಇಷ್ಟರ ಮಧ್ಯೆ ಅವರ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು. 45 ನಿಮಿಷಗಳ ವ್ಯಾಯಾಮ, ಪ್ರತಿದಿನವೂ ಪಾರ್ವತಿ ಬೆಟ್ಟಕ್ಕೆ ಹೋಗಿ ಬರುವುದು ಇವೆಲ್ಲವೂ ದಿನಚರಿಯ ಭಾಗವಾಗಿದ್ದವು. ಮಹಿಳೆಯರು, ಸಮಿತಿಯ ಕಾರ್ಯಕರ್ತೆಯರು ತಮ್ಮ ಆರೋಗ್ಯದ ಬಗ್ಗೆ ಗಮನ ವಹಿಸುವುದು ಬಹಳ ಮುಖ್ಯ ಎಂದು ಸದಾ ಹೇಳುತ್ತಿದ್ದರು.

ಎರಡನೇ ಮಹಾಯುದ್ಧದ ಸಮಯ. ಬ್ರಿಟಿಷರಿಗೆ ಹೆಚ್ಚು ದಿನ ಭಾರತದಲ್ಲಿ ಇನ್ನು ಇರಲು ಸಾಧ್ಯವಿಲ್ಲ ಎಂದು ತಿಳಿಯಿತು. ಪರಮ ಪೂಜ್ಯ ಗುರೂಜಿಯವರು ರಾಷ್ಟ್ರ ನಿರ್ಮಾಣ ಕಾರ್ಯಕ್ಕಾಗಿ, ಸಂಘಕಾರ್ಯ ವಿಸ್ತರಣೆಗೆ ಪ್ರಚಾರಕರನ್ನು ಹೊರಡಿಸಬೇಕೆಂದು ಕರೆಕೊಟ್ಟರು. ತಾಯೀಜೀಯವರು ‘ಸಮಿತಿಯಿಂದಲೂ ಪ್ರಚಾರಿಕೆಯರು ಹೊರಡುವ ಅವಶ್ಯಕತೆ ಇದೆ, ನಾನೇ ಮೊದಲು ಹೊರಡುತ್ತೇನೆ’ ಎಂದರು. ಆಗ ಬಾಳಾ ವಝೆಯವರು ‘ನೀವು ಪ್ರಚಾರಿಕೆಯಾಗಿ ಸಮರ್ಥ ಕಾರ್ಯ ನಿರ್ವಹಿಸಬಲ್ಲಿರಿ. ಆದರೆ ನಮ್ಮಂತಹ ಪ್ರಚಾರಕರಿಗೆ ಸಿಗುವ ಪ್ರೀತಿ, ವಾತ್ಸಲ್ಯ, ಸ್ವಾಗತ, ಸತ್ಕಾರಗಳ ಕೊರತೆಯಾಗುತ್ತದೆ. ಈ ಸ್ಥಾನವನ್ನು ಇನ್ನಾರು ತುಂಬುತ್ತಾರೆ’ ಎಂದಾಗ ನಿರ್ವಾಹವಿಲ್ಲದೆ ತಾಯೀಜೀವರು ತಮ್ಮ ನಿರ್ಧಾರವನ್ನು ಕೈಬಿಟ್ಟರು. ಆನಂತರ ಪ್ರಚಾರಿಕೆಯರಾಗಿ ಹೊರಟ ಸೇವಿಕೆಯರ ತಾಯಂದಿರನ್ನೆಲ್ಲ ಮಾತನಾಡಿಸಿ ಧೈರ್ಯ ತುಂಬಿ , ಪ್ರಚಾರಿಕೆಯರ ಅವಶ್ಯಕತೆ ಎಷ್ಟು ಮುಖ್ಯ ಎಂದು ಮನಮುಟ್ಟುವಂತೆ ಮಾನಸಿಕವಾಗಿ ಆ ತಾಯಂದಿರನ್ನು ಗಟ್ಟಿಗೊಳಿಸುತ್ತಾರೆ.

ಎಂತಹ ಕಷ್ಟದ ಪ್ರಸಂಗವಾದರೂ ತಾಯೀಜೀಯವರು ಧೈರ್ಯವಾಗಿ ಎದುರಿಸುತ್ತಿದ್ದರು. ದೇಶ ವಿಭಜನೆಯ ಸಮಯದಲ್ಲಿ ಲಾಹೋರಿನಲ್ಲಿ ಅನೇಕ ಹಿಂದೂ ಮಹಿಳೆಯರ ಅಳಿವು ಉಳಿವಿನ ಪರಿಸ್ಥಿತಿ ಇದ್ದಾಗ ‘ಅಲ್ಲಿ ನನ್ನ ಅಕ್ಕ ತಂಗಿಯರು ವಿಪತ್ತಿನಲ್ಲಿ ಸಿಲುಕಿಕೊಂಡಿದ್ದಾರೆ. ನಾನು ಮಾತ್ರ ಇಲ್ಲಿ ಹಾಯಾಗಿ ಇರಲಾದೀತೇ’ ಎಂದು ಅಲ್ಲಿಗೆ ಹೋಗಿ ಆ ಸ್ತ್ರೀಯರ ರಕ್ಷಣೆಯ ವ್ಯವಸ್ಥೆಯಾದ ನಂತರ ಪುಣೆಗೆ ಹಿಂದಿರುಗುತ್ತಾರೆ.

1949ರಲ್ಲಿ ಸಂಘದ ಮೇಲಿನ ನಿಷೇಧ ತೆಗೆದಾಗ ಪ.ಪೂ. ಗುರೂಜಿಯವರು ‘ನೀವು ಹೇಗೆ ಕಾರ್ಯನಿರ್ವಹಿಸಬೇಕೆಂದಿದ್ದೀರಿ’ ಎಂದು ತಾಯೀಜೀಯವರನ್ನು ಪ್ರಶ್ನಿಸಿದಾಗ ‘ನಾವು ಆಗಲೇ ಸಮಿತಿಯ ಕೆಲಸವನ್ನು ಪ್ರಾರಂಭಿಸಿದ್ದೇವೆ. ಸಮಿತಿಯ ಕಾರ್ಯ ತಡೆಯಿಲ್ಲದೆ ನಿರಂತರವಾಗಿ ನಡೆಯುತ್ತಿದೆ’ ಎಂದು ಜವಾಬ್ದಾರಿಯುತವಾಗಿ ಉತ್ತರಿಸುತ್ತಾರೆ.

ತಾಯೀಜೀಯವರು ಕಷ್ಟಗಳಿಗೆ, ಅನೇಕ ಸವಾಲುಗಳಿಗೆ ತಮ್ಮನ್ನು ಅರ್ಪಿಸಿಕೊಂಡು, ಧೈರ್ಯದಿಂದ ಎದುರಿಸಿದ ಸಂದರ್ಭಗಳು ಬಹಳ. ತಮ್ಮ ಕುಟುಂಬದ ಸಂತೋಷಕ್ಕಿಂತ ಸಮಾಜಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಈ ಕೆಲಸದಲ್ಲಿ ಪತಿ ವಿನಾಯಕರ ಸಹಕಾರ ಬಹಳವಾಗಿತ್ತು. ಪತಿಯ ಆರೋಗ್ಯ ಕ್ಷೀಣಿಸುತ್ತಿತ್ತು. ತಾನು ಹೆಚ್ಚು ದಿನ ಬದುಕುವುದಿಲ್ಲ ಎಂದರಿತ ಅವರು ಮಾತನಾಡಲು ಸಾಧ್ಯವಿಲ್ಲದೆ ಪತ್ನಿ ಸರಸ್ವತಿಯವರಿಗೆ ಇನ್ನು ಮುಂದೆ ನೀನು ಸಮಿತಿಯ ಜವಾಬ್ದಾರಿಯ ಜೊತೆಗೆ ನನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ ಎಂದು ಕಾಗದದ ಮೇಲೆ ಬರೆಯುತ್ತಾರೆ. ಕೆಲ ಸಮಯದಲ್ಲಿ ಪತಿಯ ವಿಯೋಗವಾಗುತ್ತದೆ. ಆ ದುಃಖದಲ್ಲಿ ಮುಳುಗಿದ್ದ ತಾಯೀಜೀಯವರನ್ನು ಹೊರ ತರಲು ರಾಮಾಯಣ ಪ್ರವಚನದ ವ್ಯವಸ್ಥೆಯ ಜವಾಬ್ದಾರಿಯನ್ನು ಮೌಶೀಜೀಯವರು, ತಾಯೀಜೀಯವರಿಗೆ ವಹಿಸುತ್ತಾರೆ. ಇದಾದ ನಂತರ ತಾಯೀಜೀಯವರು ಇನ್ನೂ ಹೆಚ್ಚಾಗಿ ತಮ್ಮನ್ನು ಸಮಿತಿಯ, ಸಮಾಜದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. 1993ರಲ್ಲಿ ಮಹಾರಾಷ್ಟ್ರದ ಭೂಕಂಪದಲ್ಲಿ ತೊಂದರೆಗೊಳಗಾದ ಅನೇಕ ಪ್ರದೇಶಗಳಿಗೆ ಭೇಟಿ ನೀಡಿ ಪುನರ್ವಸತಿ ಕಾರ್ಯಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಅಸ್ಸಾಂನಂತಹ ರಾಜ್ಯಗಳಲ್ಲೂ ಸಮಿತಿಯ ಪ್ರಚಾರಿಕೆಯರ ಅವಶ್ಯಕತೆಯನ್ನು ಪೂರೈಸಲು ಅಲ್ಲಿಯ ಬಂಧುಗಳ ಹಿತದೃಷ್ಟಿಯಿಂದ ಸೇವಿಕೆಯರೊಂದಿಗೆ ತಾವೇ ಅಲ್ಲಿಗೆ ಹೋಗಿ ಕಾರ್ಯವೈಖರಿಯನ್ನು ವಿವರಿಸಿ ಮಹಿಳೆಯರಿಗೆ ಸ್ವಾವಲಂಬನೆ, ಸ್ವರಕ್ಷಣೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.

ಮೌಶೀಜೀಯವರ ಆರೋಗ್ಯ ತೀರಾ ಹದಗೆಟ್ಟಾಗ ಸಮಿತಿಯ ನೇತೃತ್ವದ ಸಂಪೂರ್ಣ ಹೊಣೆ, ಜವಾಬ್ದಾರಿಯನ್ನು ತಾಯೀಜಿಗೆ ವಹಿಸುತ್ತಾರೆ. 1978 ರಲ್ಲಿ ಮೌಶೀಜಿಯವರು ಸ್ವರ್ಗಸ್ಥರಾಗುತ್ತಾರೆ. ನಂತರ ತಾಯೀಜಿಯವರು ಸಮಿತಿಯ ಪ್ರಮುಖ ಸಂಚಾಲಿಕಾರಾಗಿ ಕಾರ್ಯ ನಿರ್ವಹಿಸುತ್ತಾರೆ. ಸಮಿತಿಯ ಕಾರ್ಯಕರ್ತೆಯರಿಗೆ ಧೈರ್ಯ ತುಂಬಿ ಮಾರ್ಗದರ್ಶನ ಮಾಡಲು ಹಿಂದಿ ಸರಿಯಾಗಿ ಬರದಿದ್ದ ತಾಯೀಜೀ ಅವರು ಭಾಷೆ ಕಾರ್ಯವಿಸ್ತಾರದಲ್ಲಿ ತೊಡಕಾಗಬಾರದು ಎಂಬ ನಿಟ್ಟಿನಲ್ಲಿ ತಮ್ಮ 68ನೇ ವಯಸ್ಸಿನಲ್ಲಿ ಹಿಂದಿ ಕಲಿಯುತ್ತಾರೆ.

ರಾಷ್ಟ್ರ ಸೇವಿಕಾ ಸಮಿತಿಯನ್ನು ಮುನ್ನಡೆಸಲು ಬೇಕಾದಂತಹ ಎಲ್ಲಾ ಆಯಾಮಗಳನ್ನು ಚಿಂತಿಸುತ್ತ ಅವೆಲ್ಲದರಲ್ಲೂ ತಮ್ಮನ್ನು ಸಮರ್ಪಕವಾಗಿ ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿ ಪ್ರೇರಕ ಶಕ್ತಿಯಾಗುತ್ತಾರೆ. ರಾಷ್ಟ ಸೇವಿಕಾ ಸಮಿತಿ ಎಂಬ ರಥವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ವಿಶಿಷ್ಟ ಪಾತ್ರವಹಿಸುತ್ತಾರೆ.‌ ‘ಸರಸ್ವತಿ ಸಮಿತಿಯ ಸಾರಥಿ’ ಎಂದು ನಮ್ಮ ಸಮಿತಿಯ ಹಿರಿಯ ಕಾರ್ಯಕರ್ತೆ ತಾಯೀಜೀ ಅವರ ಬಗ್ಗೆ ಬರೆದಿರುವ ಗೀತೆ ಎಷ್ಟು ಸಮಂಜಸಲ್ಲವೇ.

ಮರಾಠಿಯಲ್ಲಿ ತಾಯೀಜೀ ಅವರ ಬಗ್ಗೆ ಪುಸ್ತಕ ಬರೆದಿರುವ ವೈಶಾಲಿ ಜೋಶಿಯವರು ತಾಯೀಜೀ ಅವರನ್ನು ಒಮ್ಮೆ ‘ನಿಮ್ಮ ಬಗ್ಗೆ ಪುಸ್ತಕ ಬರೆಯಬೇಕೆಂದಿದ್ದೇನೆ. ವಿಷಯಗಳನ್ನು ಹೇಳಿ’ ಎಂದಾಗ ತಾಯೀಜೀವರು ‘ಎಲ್ಲವನ್ನು ನಾನು ಮಾಡಿದೆ ಎಂದು ಹೇಳಿಕೊಳ್ಳುವುದು ನನಗೆ ಇಷ್ಟವಿಲ್ಲ. ಜನರಿಂದ ಸಿಕ್ಕಿರುವ ವಿಶ್ವಾಸ, ಪ್ರೀತಿಯಿಂದ ನಾನು ಕೃತಾರ್ಥಳಾಗಿದ್ದೇನೆ. ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ನಿಮಗೇನು ಗೊತ್ತಿದೆಯೋ ಅದನ್ನೇ ಬರೆಯಿರಿ’ ಎಂದಿದ್ದರು. ಎಂತಹ ಮಾತು. ಅವರ ಮಾತುಗಳೇ ಆದ ‘ಕೃತಾರ್ಥಮೀ ಕೃತಜ್ಞಮೀ’ ಎಂಬುದನ್ನೇ ಪುಸ್ತಕಕ್ಕೆ ಹೆಸರಿಟ್ಟು ತಾಯೀಜೀಯವರ ಬಗ್ಗೆ ಬರೆಯುತ್ತಾರೆ. ಅದು ಕನ್ನಡದಲ್ಲಿ ‘ನಾನು ಕೃತಾರ್ಥಳು ನಾನು ಕೃತಜ್ಞಳು’ ಎಂಬ ಶೀರ್ಷಿಕೆಯಲ್ಲಿ ಅನುವಾದಗೊಂಡಿದೆ.

ಹೀಗೆ ರಾಷ್ಟ್ರೀಯ ಚಿಂತನೆಗಳ ಮೂಲಕ, ರಾಷ್ಟ್ರದ ಭದ್ರತೆಗೆ, ದೇಶದ ಉನ್ನತಿಗೆ, ಸ್ವಸ್ಥ ಸಮಾಜಕ್ಕೆ, ಸದೃಢ ಮಹಿಳೆಯರನ್ನು ತಯಾರು ಮಾಡುವಲ್ಲಿ ಸತತವಾಗಿ ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸೇವಿಕೆಯರಿಗೆ ಪ್ರೇರಣೆ ನೀಡುತ್ತಾ, ಸಾರ್ಥಕ ಬದುಕನ್ನು ಕಂಡುಕೊಂಡ ನಮ್ಮೆಲ್ಲರ ಪ್ರೀತಿಯ ತಾಯೀಜೀ, ವಂದನೀಯ ಸರಸ್ವತಿ ತಾಯಿ ಆಪ್ಟೇ ಅವರು ಮಾಘ ಬಹುಳ ದ್ವಾದಶಿಯಂದು (9-3-1994) ನಮ್ಮನ್ನಗಲಿ 32 ವರ್ಷಗಳು ಕಳೆದಿವೆ. ಅವರ ಸ್ಮೃತಿದಿನವನ್ನು ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಸೇವಾದಿನವೆಂದು ಆಚರಿಸುತ್ತೇವೆ.

ಅವರ ಧೈರ್ಯ, ಸಂಕಲ್ಪಶಕ್ತಿ, ಆದರ್ಶ ಗುಣಗಳು ನಮ್ಮೆಲ್ಲರಿಗೂ ಪ್ರೇರಣೆ ನೀಡಿ, ಸಮಿತಿಯ ಕಾರ್ಯ ವಿಸ್ತಾರದಲ್ಲಿ ಸಮಿತಿಯ ಸೇವಿಕೆಯರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ದಾರಿದೀಪವಾಗಿದೆ. ಆ ದೀಪ ಇನ್ನಷ್ಟು ಪ್ರಜ್ವಲಿಸಿ ತನ್ನ ಬೆಳಕನ್ನು ಎಲ್ಲೆಡೆ ಹರಡಲಿ. ಈ ಕಾರ್ಯ ನಿರಂತರ ನಡೆಯುವಂತೆ ಪ್ರೀತಿಯ ತಾಯೀಜೀ ನಮ್ಮೆಲ್ಲರನ್ನು ಹರಸಲಿ.

Leave a Reply

Your email address will not be published.

This site uses Akismet to reduce spam. Learn how your comment data is processed.