
ಲೇಖನ: ದು.ಗು.ಲಕ್ಷ್ಮಣ, ಹಿರಿಯ ಪತ್ರಕರ್ತ
ಸ್ಥಳೀಯ,
ರಾಜ್ಯ,
ರಾಷ್ಟ್ರಮಟ್ಟದಲ್ಲಿ, ಅಷ್ಟೇಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಳ್ಳೆಯ/ಕೆಟ್ಟ ಕಾರಣಗಳಿಗಾಗಿ ಆರೆಸ್ಸೆಸ್ ಪ್ರಚಾರ ಪಡೆದಷ್ಟು ಜಾಗತಿಕ ಮಟ್ಟದ ಯಾವ ಸಂಸ್ಥೆಯೂ ಪಡೆದಿರಲಿಕ್ಕಿಲ್ಲ. ಆರೆಸ್ಸೆಸ್ ಬಗ್ಗೆ ಆದರ, ಗೌರವ ವ್ಯಕ್ತಪಡಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು, ಹಿತೈಷಿಗಳು ಇರುವಂತೆ, ಆ ಸಂಘಟನೆಯನ್ನು ನಖಶಿಖಾಂತ ವಿರೋಧಿಸುವವರ ಸಂಖ್ಯೆಗೂ ಕೊರತೆ ಇಲ್ಲ. ಆದರೆ ಹಾಗೆ ವಿರೋಧಿಸುವವರಲ್ಲಿ ಶೇ. ೯೦ರಷ್ಟು ಜನರಿಗೆ ಅದೊಂದು ಒಳ್ಳೆಯ ಸಂಘಟನೆ ಎಂಬ ಭಾವ ಅಂತರಂಗದಲ್ಲಿ ಇದ್ದೇ ಇರುತ್ತದೆ. ರಾಜಕೀಯ ಕಾರಣಗಳಿಗಾಗಿ ಅಥವಾ ಇನ್ನಾವುದೋ ಸ್ವಾರ್ಥಪರ ಉದ್ದೇಶಗಳಿಗಾಗಿ ಆರೆಸ್ಸೆಸ್ಅನ್ನು ವಿರೋಧಿಸುವ ಮಂದಿಯೇ ಹೆಚ್ಚು.
ಇಂಥವರ ಬಳಿ ಗುಟ್ಟಾಗಿ ‘ಆರೆಸ್ಸೆಸ್ ಬಗ್ಗೆ ಏನು ನಿಮ್ಮ ಅಭಿಮತ?’ ಎಂದು ಪ್ರಶ್ನಿಸಿದರೆ ‘ಏ ಬಿಡ್ರಿ, ಅದೊಂದು ಒಳ್ಳೇ ಸಂಘಟನೆ. ಅದಿಲ್ಲದೆ ಇದ್ದಿದ್ರೆ ದೇಶದ ಪರಿಸ್ಥಿತಿ ಏನೇನೋ ಆಗ್ತಿತ್ತು’ ಎಂದು ಪಿಸುಮಾತಿನಲ್ಲಿ ಹೇಳುತ್ತಾರೆ. ಸುತ್ತಮುತ್ತ ಮಾಧ್ಯಮದ ಮಂದಿ ಪೆನ್ನು, ಕ್ಯಾಮೆರಾ, ಮೊಬೈಲ್ ಹಿಡಿದು ಎಲ್ಲಿ ತಮ್ಮ ಈ ಅಂತರಂಗದ ಹೇಳಿಕೆಯನ್ನು ಸೆರೆಹಿಡಿದು ಬಿಡುತ್ತಾರೋ ಎಂಬ ಆತಂಕವೂ ಅಂಥವರನ್ನು ಕಾಡುತ್ತಿರುತ್ತದೆ. ಒಂದು ವೇಳೆ ಅವರ ಈ ಅಂತರಂಗದ ಹೇಳಿಕೆಯನ್ನು ತಲೆಕೆಟ್ಟ ಯಾವನೋ ಪತ್ರಕರ್ತ ರೆಕಾರ್ಡ್ ಮಾಡಿ, ಪತ್ರಿಕೆಯಲ್ಲೋ ಟಿ.ವಿ. ಮಾಧ್ಯಮದಲ್ಲೋ ಪ್ರಸಾರ ಮಾಡಿದರೆ ‘ನಾನು ಹಾಗೆ ಹೇಳಲೇ ಇಲ್ಲ. ಅದು ನನ್ನ ಧ್ವನಿಯೇ ಅಲ್ಲ’ ಎಂದು ಜಾರಿಕೊಳ್ಳುವವರೂ ಇದ್ದಾರೆ. ಸೈದ್ಧಾಂತಿಕವಾಗಿ ಆರೆಸ್ಸೆಸ್ಅನ್ನು ವಿರೋಧಿಸುವ ಬೆರೆಳೆಣಿಕೆಯ ಮಂದಿ ಮಾತ್ರ ಆರೆಸ್ಸೆಸ್ ಅನ್ನು ಎಲ್ಲ ಕಾರಣಗಳಿಗಾಗಿ ದಿನನಿತ್ಯ ದೂಷಿಸುತ್ತಲೇ ಇರುತ್ತಾರೆ. ದೇಶದಲ್ಲಿ ಪ್ರವಾಹ ಬರಲಿ, ರೈಲ್ವೇ ಅಪಘಾತ ಸಂಭವಿಸಲಿ, ರಾಜಕೀಯ ಮುಖಂಡನೊಬ್ಬನ ಹತ್ಯೆಯಾಗಲಿ, ಕೊರೊನಾ ಹೆಮ್ಮಾರಿ ಬಂದೊದಗಲಿ … ಅದಕ್ಕೆಲ್ಲ ಆರೆಸ್ಸೆಸ್ ಸಂಘಟನೆಯೇ ಹೊಣೆ ಎಂದು ಪೂರ್ವಾಪರ ಯೋಚಿಸದೆಯೇ ದಿಢೀರ್ ಹೇಳಿಕೆ ನೀಡಿಬಿಡುತ್ತಾರೆ. ಆರೆಸ್ಸೆಸ್ ಅನ್ನು ವಿರೋಧಿಸುವಲ್ಲಿ ಇಂಥವರು ಯಾವುದೇ ಅವಕಾಶಗಳನ್ನು ಸುಮ್ಮನೆ ಕಳೆದುಕೊಳ್ಳುವುದೇ ಇಲ್ಲ.
ಜಗದಗಲ ಆರೆಸ್ಸೆಸ್
ಜಾಗತಿಕ ಮಟ್ಟದ ಕ್ವಿಜ್ ಕಾರ್ಯಕ್ರಮದಲ್ಲಿ "ಜಗತ್ತಿನಲ್ಲಿ ಅತಿದೊಡ್ಡ ಖಾಸಗಿ ಸ್ವಯಂಸೇವಾ ಸಂಸ್ಥೆ ಯಾವುದು?"ಎಂಬ ಪ್ರಶ್ನೆಗೆ ‘ಆರೆಸ್ಸೆಸ್’ ಎಂದು ಉತ್ತರ ಬಂದಾಗ ತೀರ್ಪುಗಾರರು ಎದ್ದುನಿಂತು ಆ ಉತ್ತರವನ್ನು ಚಪ್ಪಾಳೆಯೊಂದಿಗೆ ಸ್ವಾಗತಿಸಿದ್ದರಂತೆ. ಆ ಮಟ್ಟದ ಜನಪ್ರಿಯತೆ ಆರೆಸ್ಸೆಸ್ನದು. ಈಗಂತೂ ಆರೆಸ್ಸೆಸ್ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ವಿವಿಧ ನಾಮಧೇಯಗಳಿಂದ ಚಿರಪರಿಚಿತ. ಯುರೋಪ್ ಮತ್ತಿತರ ಕಡೆ ಹೆಚ್ಚೆಸ್ಸೆಸ್ (ಹಿಂದು ಸ್ವಯಂಸೇವಕ ಸಂಘ), ಇನ್ನಿತರ ಕೆಲವು ದೇಶಗಳಲ್ಲಿ ವಿಶ್ವ ಹಿಂದು ಪರಿಷತ್ ಹೆಸರಿನಲ್ಲಿ ಸಂಘ ಕಾರ್ಯ ನಿರ್ವಹಿಸುತ್ತಿದೆ. ವಿಕಿಪೀಡಿಯಾ ಮತ್ತು ಗೂಗಲ್ ಮಾಹಿತಿ ಪ್ರಕಾರ, ೧೫೬ ದೇಶಗಳಲ್ಲಿ ೩೨೮೯ ಶಾಖೆಗಳನ್ನು ವಿದೇಶಗಳಲ್ಲಿ ಆರೆಸ್ಸೆಸ್ ಹೊಂದಿದೆ. ಕೆನ್ಯಾದಲ್ಲಿ ೧೯೪೦ರಷ್ಟು ಹಿಂದೆಯೇ ಹೆಚ್ಚೆಸ್ಸೆಸ್ ಆರಂಭವಾಯಿತು. ಇಂತಿಪ್ಪ ಆರೆಸ್ಸೆಸ್ನ ಪೂರ್ಣ ಹೆಸರನ್ನು ಮತ್ತು ಅದರ ಸಂಸ್ಥಾಪಕರ ಹೆಸರನ್ನು ಮಾಧ್ಯಮಗಳು ಮತ್ತು ಹಲವು ಮಂದಿ ವಿದ್ವಾಂಸರೆನಿಸಿಕೊಂಡವರು. ಈಗಲೂ ತಪ್ಪುತಪ್ಪಾಗಿ ಉಚ್ಚರಿಸುವುದು, ಬರೆಯುವುದು ಮಾತ್ರ ಚೋದ್ಯವೇ ಸರಿ. ಮೂರಕ್ಷರದ ಆರೆಸ್ಸೆಸ್ (RSS)ಅನ್ನು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಎಂದು ಕೆಲವರು ಬರೆದರೆ, ಇನ್ನು ಕೆಲವರು ‘ರಾಷ್ಟ್ರ ಸೇವಾ ಸಂಘ’ ಎಂದೂ ಬರೆಯುವುದುಂಟು.’ ರಾಷ್ಟ್ರೀಯ ಸ್ವಯಂಸೇವಕ ಸಂಘ’ ಎಂದು ನಿಖರವಾಗಿ, ಸ್ಪಷ್ಟವಾಗಿ ಬರೆಯುವವರು ವಿರಳ.
ಪ್ರಸಿದ್ಧಿಗೆ ಬೆನ್ನು ತಿರುಗಿಸಿದ ಸಂಸ್ಥಾಪಕ
ಅದೇ ರೀತಿ, ಸಂಘ ಸಂಸ್ಥಾಪಕರ ಹೆಸರು ಡಾ. ಕೇಶವ ಬಲಿರಾಂ ಹೆಡ್ಗೇವಾರ್ ಎಂದಿದ್ದರೂ ಅದನ್ನು ‘ಡಾ. ಕೇಶವ ಬಲಿರಾಂ ಹೆಗ್ಡೇವಾರ್’ ಎಂದೇ ಹಲವರು ತಪ್ಪಾಗಿ ಬರೆಯುವುದುಂಟು. ಅದೇ ಸರಿಯಾದ ಉಚ್ಚಾರಣೆ ಎಂದು ವಾದಿಸುವವರೂ ಕೆಲವರಿದ್ದಾರೆ. ಕರ್ನಾಟಕದಲ್ಲಂತೂ ರಾಮಕೃಷ್ಣ ಹೆಗಡೆ, ಕೆ.ಎಸ್. ಹೆಗ್ಡೆ, ವೀರೇಂದ್ರ ಹೆಗ್ಗಡೆ ಮೊದಲಾದ ಸೆಲೆಬ್ರಿಟಿ ಹೆಸರುಗಳನ್ನು ಆಗಾಗ ಕೇಳುತ್ತಲೇ ಇರುವುದರಿಂದ ಸಂಘಸ್ಥಾಪಕರ ಹೆಸರು ಕೂಡ ‘ಹೆಗ್ಡೇವಾರ್’ ಇರಬಹುದು ಎಂದು ತರ್ಕಿಸುವುದೂ ಉಂಟು. ಸಂಘದ ಸಂಸ್ಥಾಪಕರಾಗಿದ್ದರೂ ಹೆಡ್ಗೇವಾರ್ ಅವರು ಪ್ರಸಿದ್ಧಿ ಪರಾನ್ಮುಖರಾಗಿದ್ದರಿಂದ, ಜೀವನದ ಯಾವುದೇ ಕ್ಷಣದಲ್ಲೂ ಪ್ರಚಾರ ಬಯಸದೆ ತೆರೆಮರೆಯಲ್ಲೆ ಉಳಿದಿದ್ದರಿಂದ, ಅವರಿದ್ದ ಕಾಲದಲ್ಲಿ ಡಿಜಿಟಲ್ ತಂತ್ರಜ್ಞಾನದ ಆವಿಷ್ಕಾರ ಆಗಿರಲಿಲ್ಲವಾದ್ದರಿಂದ ಹೆಡ್ಗೇವಾರ್ ಅವರ ಕುರಿತು ಹೆಚ್ಚು ಪ್ರಚಾರವಾಗಲೇ ಇಲ್ಲ. ಅವರೂ ಅದನ್ನು ಸುತರಾಂ ಬಯಸಿರಲಿಲ್ಲ. ಏಕೆಂದರೆ ಸಂಘದ ಉದ್ದೇಶಕ್ಕೆ ಅದು ಪೂರಕವಾಗಿರಲಿಲ್ಲ. ‘ರಾಷ್ಟ್ರಾಯ ಸ್ವಾಹಾ. ರಾಷ್ಟ್ರಾಯ ಇದಂ, ನ ಮಮ’ (ಎಲ್ಲವೂ ರಾಷ್ಟ್ರಕ್ಕೆ ಅರ್ಪಿತ ,ನನ್ನದೇನಿಲ್ಲ) ಎಂಬ ಮೂಲ ಭಾವ ಸಂಘದ್ದು. ‘ಸ್ವಂತಕ್ಕೆ ಸ್ವಲ್ಪ; ಸಮಾಜಕ್ಕೆ ಸರ್ವಸ್ವ’ ಎಂಬ ಸಮಾಜಮುಖಿ ಚಿಂತನೆ ಸಂಘದ ಆದ್ಯ ಉದ್ದೇಶ.
ಹಲವು ಅಗ್ನಿಪರೀಕ್ಷೆಗಳು
೧೯೨೫ರಲ್ಲಿ ಪ್ರಾರಂಭವಾದ ಸಂಘವು ಹಲವಾರು ಕಷ್ಟ-ಸಂಕಟಗಳಿಗೆ ಮುಖಾಮುಖಿಯಾಗಿದೆ. ಬಹುಶಃ ಸಂಘವು ಎದುರಿಸಿದಷ್ಟು ಸವಾಲುಗಳನ್ನು, ಸಮಸ್ಯೆಗಳನ್ನು ದೇಶದ ಇನ್ನಾವ ಸಂಘಟನೆಯೂ ಎದುರಿಸಿರಲಿಕ್ಕಿಲ್ಲ. ಹಿಂದು ಸಮಾಜದ ಸರ್ವಾಂಗೀಣ ಉನ್ನತಿಯ ಅನುಪಮ ಆದರ್ಶವಿಟ್ಟುಕೊಂಡು ಆರಂಭಗೊಂಡ ಸಂಘಕ್ಕೆ ಹೆಜ್ಜೆಹೆಜ್ಜೆಗೂ ಸವಾಲುಗಳೇ ಎದುರಾದವು. ಆರಂಭದಲ್ಲಿ ಶೈಶವಾವಸ್ಥೆಯಲ್ಲಿದ್ದಾಗ ಉಪಹಾಸ ಎಲ್ಲರಿಂದ ವ್ಯಕ್ತವಾಯಿತು. ಎಂಟು-ಹತ್ತು ತರುಣರು, ಬಾಲಕರು ಒಟ್ಟಿಗೆ ಸೇರಿ ಕಬಡ್ಡಿ ಆಡಿಬಿಟ್ಟರೆ ಹಿಂದು ಸಂಘಟನೆ ಆಗಿಬಿಡುತ್ತಾ ಎಂದು ಕಿಚಾಯಿಸಿದವರಿಗೇನೂ ಕೊರತೆ ಇರಲಿಲ್ಲ. ಹೆಡ್ಗೇವಾರ್ ಅವರಿಗೆ ‘ಹೆಡ್ ಗವಾರ್’ (ಹುಚ್ಚರಿಗೆಲ್ಲ ಮುಖ್ಯಸ್ಥ) ಎಂದು ಕಟಕಿಯಾಡಿದವರೂ ಇದ್ದರು. ‘ನಾಗಪುರದ ನಿಮ್ಮ ಕಿತ್ತಳೆ ಈ ಊರಲ್ಲಿ ಖರ್ಚಾಗುವುದಿಲ್ಲ’ ಎಂದು ಬೇರೆ ಊರುಗಳಿಗೆ ಶಾಖೆ ಮಾಡಲು ತೆರಳಿದವರಿಗೆ ಧಮಕಿ ಹಾಕಿದವರೂ ಇದ್ದರು. ಆದರೆ ಡಾ. ಹೆಡ್ಗೇವಾರ್ ಇಂತಹ ಯಾವುದೇ ಟೀಕೆಗಳಿಗೂ ತಲೆಕೆಡಿಸಿಕೊಳ್ಳದೆ ಗುರಿ ಸಾಧನೆಯತ್ತ ಮಾತ್ರ ಗಮನ ಹರಿಸಿದ್ದರ ಪರಿಣಾಮವಾಗಿ ಅವರ ಜೀವಿತಾವಧಿಯಲ್ಲೇ ಸಂಘ ಸಾಕಷ್ಟು ವ್ಯಾಪಕವಾಗಿ ದೇಶದೆಲ್ಲೆಡೆ ತನ್ನ ಬೇರುಗಳನ್ನೂರಲು ಸಾಧ್ಯವಾಯಿತು. ಬ್ರಿಟಿಷ್ ಸರ್ಕಾರ ಒಮ್ಮೆ ಹಾಗೂ ಸ್ವಾತಂತ್ರ್ಯ ಬಂದ ಬಳಿಕ ನಮ್ಮದೇ ಕೇಂದ್ರ ಸರ್ಕಾರ ಮೂರು ಬಾರಿ (೧೯೪೮-ಗಾಂಧಿ ಹತ್ಯೆ ನಡೆದಾಗ; ೧೯೭೫-೭೭ರ ತುರ್ತುಪರಿಸ್ಥಿತಿ ಅವಧಿಯಲ್ಲಿ ಹಾಗೂ ೧೯೯೨ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಕಟ್ಟಡ ನೆಲಸಮವಾದಾಗ) ಸಂಘದ ಮೇಲೆ ನಿಷೇಧ ಹೇರಿದ್ದವು. ನಿಜಕ್ಕೂ ಸಂಘದ ಪಾಲಿಗೆ ಅತಿ ಕಷ್ಟಕರ ದಿನಗಳವು. ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ ಸಂಘದ ಸ್ವಯಂಸೇವಕನೆಂದು ಆರೋಪ ಹೊರಿಸಿ ಸಂಘವನ್ನು ನಿಷೇಧಿಸಿದಾಗ ಆಗ ಸಂಘಚಾಲಕರಾಗಿದ್ದ ಶ್ರೀ ಗುರೂಜಿಯವರನ್ನಲ್ಲದೆ ಸಾವಿರಾರು ಸ್ವಯಂಸೇವಕರನ್ನು ಬಂಧಿಸಲಾಗಿತ್ತು. ಸಿಕ್ಕಸಿಕ್ಕ ಸ್ವಯಂಸೇವಕರ ವಿರುದ್ಧ ಆಳುವ ಕಾಂಗ್ರೆಸ್ ಪಕ್ಷದ ಗೂಂಡಾಗಳು ಹಲ್ಲೆ, ಲೂಟಿ, ಹಿಂಸಾಚಾರ ನಡೆಸಿದ್ದರು. ಇಷ್ಟೆಲ್ಲ ಅಹಿತಕರ ವಿದ್ಯಮಾನಗಳು ಕಣ್ಣೆದುರು ನಡೆದಾಗಲು ಜೈಲಿನಲ್ಲಿದ್ದ ಗುರೂಜಿಯವರ ಆದೇಶ ಮಾತ್ರ Be calm at all cost(ಎಂಥದ್ದೇ ಪರಿಸ್ಥಿತಿ ಎದುರಾಗಲಿ, ಶಾಂತವಾಗಿರಿ) ಎಂದಾಗಿತ್ತು. ಬಿಸಿರಕ್ತದ ಕೆಲವು ಸ್ವಯಂಸೇವಕರಿಗಂತೂ ಗುರೂಜಿ ಹೀಗೇಕೆ ಸೂಚನೆ ಕೊಡುತ್ತಿದ್ದಾರೆ? ನಮ್ಮ ಮೇಲೆ ವಿನಾಕಾರಣ ಹಲ್ಲೆ ನಡೆಸುವ ವಿರೋಧಿಗಳ ವಿರುದ್ಧ ನಾವೇಕೆ ಕೈಯೆತ್ತಬಾರದು? ಎಂದು ತಮ್ಮಲ್ಲೇ ಗೊಣಗಿಕೊಳ್ಳುತ್ತಿದ್ದರು. ಗುರೂಜಿಯವರ ಮನದಲ್ಲಿ ಮಾತ್ರ ಈ ಬಗ್ಗೆ ಸ್ಪಷ್ಟತೆ ಇತ್ತು. ಈಗಿರುವುದು ನಮ್ಮದೇ ಸರ್ಕಾರ. ಸಂಘ ಮಾಡಹೊರಟಿರುವುದು ಹಿಂದು ಸಂಘಟನೆಯ ಕಾರ್ಯವನ್ನು. ನಮ್ಮವರ ವಿರುದ್ಧ ನಾವೇ ತಿರುಗಿ ಬೀಳುವುದು ಉಚಿತವಲ್ಲ ಎಂಬುದು ಅವರ ನಿಲುವಾಗಿತ್ತು. ನಾಲಿಗೆಯನ್ನು ಹಲ್ಲು ಕಡಿಯಿತೆಂದು ಹೇಳಿ ನಮ್ಮ ಬಾಯಿಯಿಂದ ಹಲ್ಲನ್ನು ನಾವು ಕಿತ್ತು ಹಾಕುವುದಿಲ್ಲ. ಹಾಗೆಯೇ ಇದು ಎಂದು ಸ್ವಯಂಸೇವಕರಿಗೆ ದಿಶಾದರ್ಶನ ಮಾಡಿದರು. ಕೊನೆಗೂ ನ್ಯಾಯಾಲಯದಲ್ಲಿ ಗಾಂಧಿ ಹತ್ಯೆಗೂ ಆರೆಸ್ಸೆಸ್ಗೂ ಯಾವುದೇ ಸಂಬಂಧವಿಲ್ಲವೆಂದು ಸಾಬೀತಾಗಿ ನಿಷೇಧ ತಾನಾಗಿ ರದ್ದಾಯಿತು.
೧೯೭೫ರಲ್ಲಿ ಸಂಘದ ಮೇಲೆ ನಿಷೇಧ ವಿಧಿಸಿದ್ದ ಇಂದಿರಾಗಾಂಧಿ ಸರ್ಕಾರವೇ ೧೯೭೭ರ ಚುನಾವಣೆಯಲ್ಲಿ ಧೂಳೀಪಟವಾಯಿತು. ೧೯೯೨ರ ನಿಷೇಧವಂತೂ ಲೆಕ್ಕಕ್ಕುಂಟು, ಆಟಕ್ಕಿಲ್ಲ ಎನ್ನುವಂತಾಗಿತ್ತು. ಈ ಎಲ್ಲ ನಿಷೇಧಗಳ ಸಂದರ್ಭದಲ್ಲಿ ಆರೆಸ್ಸೆಸ್ ಮಾತ್ರ ಹಿಂಸೆಗಿಳಿಯದೆ, ಅಹಿಂಸಾತ್ಮಕ ಹೋರಾಟದ ಮೂಲಕವೇ ಸವಾಲು ಎದುರಿಸಿ ಯಶಸ್ವಿಯಾಯಿತೆನ್ನುವುದು ಗಮನಿಸಬೇಕಾದ ಸಂಗತಿ. ಸಂಘದ ಉದ್ದೇಶ ರಾಷ್ಟ್ರಹಿತಕ್ಕೆ ಪೂರಕವೇ ಹೊರತು ರಾಷ್ಟ್ರವಿರೋಧಿಯಲ್ಲ ಎಂಬ ಸಂದೇಶವೂ ಈ ಎಲ್ಲ ಸಂದರ್ಭಗಳಲ್ಲಿ ರವಾನೆಯಾಗಲು ಸಾಧ್ಯವಾಗಿದೆ.ಸ್ವಾತಂತ್ರ್ಯ ಪ್ರಾಪ್ತಿ ಮತ್ತು ನಿಷೇಧವನ್ನು ತೆಗೆದ ಬಳಿಕ ಅನೇಕ ಸ್ಥಾನಗಳಲ್ಲಿ ಕಾರ್ಯಕರ್ತರು ನಿರುತ್ಸಾಹಿತರಾಗಿದ್ದರು. ಸಂಘಕ್ಕೆ ಹೋದರೆ ಸರ್ಕಾರಿ ನೌಕರಿ ಸಿಗುವುದಿಲ್ಲ. ಇದೇ ಭಯದಿಂದ ಕೆಲವು ಪಾಲಕರು ತಮ್ಮ ಮಕ್ಕಳನ್ನು ಸಂಘಕ್ಕೆ ಕಳಿಸುತ್ತಿರಲಿಲ್ಲ. ಕೆಲವರು ಸಂಘ ನೇರವಾಗಿ ರಾಜಕೀಯಕ್ಕೆ ಇಳಿಯಬೇಕೆಂಬ ಸಲಹೆಯನ್ನು ನೀಡಿದ್ದರು. ಸ್ವಯಂಸೇವಕರ ಈ ಎಲ್ಲ ಜಿಜ್ಞಾಸೆಗಳಿಗೆ ಆಗ ಸರಕಾರ್ಯವಾಹರಾಗಿದ್ದ ಭೈಯ್ಯಾಜೀ ದಾಣಿ ನೀಡಿದ ಉತ್ತರ: “ಸಂಘವು ರಾಜಕೀಯಕ್ಕೆ ಇಳಿದು ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರವನ್ನು ಪಡೆಯಿತೆಂದು ಕೊಳ್ಳಿ. ಆಗ ಸಂಘಕ್ಕೆ ಬರುವವರ ಸಂಖ್ಯೆ ಹೆಚ್ಚಿದರೂ ಅವರು ಸಂಘದ ಅಪೇಕ್ಷೆಗೆ ತಕ್ಕಂತೆ ಇರುವ ಆದರ್ಶ ಸ್ವಯಂಸೇವಕರಾಗಿರದೇ ಹೇಡಿ, ವಿಲಾಸಿ, ಸ್ವಾರ್ಥಿಗಳಾಗಿರುತ್ತಾರೆ. ಆದ್ದರಿಂದ ಅಂತಹ ಜನರು ಸಂಘಕ್ಕೆ ಬೇಡ. ಸ್ವಾರ್ಥಿ, ಹೇಡಿ, ಜಿ ಹುಜೂರ್ ಎನ್ನುವ ಜನರು ಎಂದೂ ಇತಿಹಾಸ ನಿರ್ಮಾಣ ಮಾಡಿಲ್ಲ. ಒಂದು ವೇಳೆ ಮಾಡಿದ್ದರೂ ಅದು ಅಧಃಪತನದ ಇತಿಹಾಸವೇ ಹೊರತು ಮತ್ತೇನಲ್ಲ. ಇಂತಹ ಜನರು ಎಂದೂ ಶಕ್ತಿ ಕೇಂದ್ರವಾಗಲಾರರು. ಬದಲಾಗಿ ಅವರು ದುರ್ಗಂಧ ಹರಡುವವರೇ ಆಗುತ್ತಾರೆ .... ಇಂದು ಸಂಘದೊಳಗೆ ಹೆದರುಪುಕ್ಕರು, ಸ್ವಾರ್ಥಿಗಳು ಸೇರಿಕೊಂಡಿದ್ದಿರಬಹುದು. ಅಂಥವರು ಈಗ ಕಷ್ಟ ಬಂದಿದೆ ಎಂದು ಸಂಘಕ್ಕೆ ಬರುವುದನ್ನು ನಿಲ್ಲಿಸಿದರೆ ಅದರಿಂದ ಕೆಟ್ಟದ್ದೇನೂ ಆಗುವುದಿಲ್ಲ. ಅವರು ಸಂಘದಿಂದ ದೂರ ಹೋದಲ್ಲಿ ಸಂಘದ ಶಕ್ತಿಯೇ ಹೆಚ್ಚುತ್ತದೆ.........” (ಸಂಘ ಮಂದಿರದ ಅಡಿಗಲ್ಲುಗಳು, ಪುಟ: ೧೮). ಸಂಘದ ಸ್ವಯಂಸೇವಕರು ರಾಷ್ಟ್ರ ಜೀವನದ ವಿವಿಧ ಕ್ಷೇತ್ರಗಳನ್ನು ಪ್ರವೇಶಿಸತೊಡಗಿದ ಸಂದರ್ಭದಲ್ಲಿ ಇದೇ ಭೈಯಾಜಿ ಅವರು ಹೇಳಿದ್ದು: “ಸ್ವಯಂಸೇವಕರು ರಾಜಕೀಯವನ್ನು ಪ್ರವೇಶಿದೊಡನೆಯೇ ಭ್ರಷ್ಟರಾಗುತ್ತಾರೆ ಅಥವಾ ಸಂಘದ ದೃಷ್ಟಿಯಿಂದ ಉಪಯೋಗವಿಲ್ಲದವರಾಗುತ್ತಾರೆ ಎಂಬ ಕ್ಷÄದ್ರ ಚಿಂತನೆ ಸಂಘದ್ದಲ್ಲ. ಬದಲಾಗಿ ಸ್ವಯಂಸೇವಕರು ರಾಷ್ಟ್ರಜೀವನದ ಎಲ್ಲ ಕ್ಷೇತ್ರಗಳಲ್ಲೂ ಪ್ರವೇಶಿಸಿ ರಾಷ್ಟ್ರೋಪಕಾರಿಯಾದ ಪರಿವರ್ತನೆ ತರಬೇಕೆಂಬುದು ಸಂಘದ ಬಯಕೆ. ಸಮಾಜದ ಪ್ರಗತಿಗಾಗಿ ಅದರ ಎಲ್ಲ ಕಾರ್ಯಗಳಲ್ಲೂ ಶ್ರೇಷ್ಠ ಗುಣಸ್ತರದ ನಿರ್ಮಾಣದ ಅಗತ್ಯವಿದೆ. ಪ್ರಾಮಾಣಿಕ, ಯೋಗ್ಯ, ಕರ್ತವ್ಯದಕ್ಷ ಹಾಗೂ ತ್ಯಾಗೀ ಕಾರ್ಯಕರ್ತರು ಅವಶ್ಯಕ.....” (ಸಂಘಮಂದಿರದ ಅಡಿಗಲ್ಲುಗಳು, ಪುಟ: ೧೯) ಇಂದು ರಾಜಕೀಯ ಕ್ಷೇತ್ರವೂ ಸೇರಿದಂತೆ, ಧಾರ್ಮಿಕ, ಶೈಕ್ಷಣಿಕ, ಕಾರ್ಮಿಕ, ಕೃಷಿಕ, ವನವಾಸಿ, ವಿಕಲಾಂಗ, ವಿದ್ಯಾರ್ಥಿ, ಕ್ರೀಡೆ, ವೈದ್ಯಕೀಯ, ಆರೋಗ್ಯ, ಸೈನಿಕ, ಸಂಸ್ಕೃತ ಪ್ರಚಾರ, ಸಾಂಸ್ಕೃತಿಕ ... ಹೀಗೆ ನೂರಾರು ಕ್ಷೇತ್ರಗಳಲ್ಲಿ ಸ್ವಯಂಸೇವಕರು ಪಾಲ್ಗೊಂಡು ಅಲ್ಲೊಂದು ರಾಷ್ಟ್ರಹಿತದ ಪರಿವರ್ತನೆಯತ್ತ ದಾಪುಗಾಲು ಹಾಕಿದ್ದಾರೆ. ರಾಜಕೀಯ ಕ್ಷೇತ್ರದಲ್ಲಂತೂ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಗೃಹಸಚಿವ, ಹಲವು ರಾಜ್ಯಗಳ ರಾಜ್ಯಪಾಲರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಸಂಘದ ಸ್ವಯಂಸೇವಕರೇ ಆಗಿದ್ದಾರೆ. ಅಷ್ಟಾದ ಮಾತ್ರಕ್ಕೆ ಸಂಘವೇನೂ ಹಿರಿಹಿರಿ ಹಿಗ್ಗಿಲ್ಲ; ತನ್ನ ಮೂಲ ಉದ್ದೇಶವನ್ನು ಮರೆತಿಲ್ಲ. ಸಮಗ್ರ ರಾಷ್ಟ್ರ ಜೀವನದ ಸರ್ವಾಂಗೀಣ ಉನ್ನತಿಯ ಹೆಬ್ಬಯಕೆಗೆ ಪೂರ್ಣವಿರಾಮ ಹಾಕಿಲ್ಲ. ಸಂಘಕಾರ್ಯ ನಿರಂತರ. ಕಾಲ ಸರಿದಂತೆ ಹೊಸ ಹೊಸ ಸವಾಲುಗಳನ್ನೆದುರಿಸಿ, ಜನಮನದಲ್ಲಿ ಭರವಸೆಯ ಭವಿಷ್ಯದ ಆಶಾಕಿರಣವಾಗುತ್ತಾ ಸಂಘ ಸಾಗಿದೆ.
ಸೇವೆ ಎಂಬ ಯಜ್ಞದಲ್ಲಿ…
ಕೋವಿಡ್ ಹೆಮ್ಮಾರಿ ಬಂದೆರಗಿದ ದುರಿತ ಕಾಲದಲ್ಲಿ ಉಳಿದವರೆಲ್ಲ ದಿಗ್ಭ್ರಮಿತರಾಗಿದ್ದಾಗ ಸಂಘದ ಸ್ವಯಂಸೇವಕರು ಹೆದರದೆ, ಹೇಡಿಗಳಾಗದೆ ಕೋವಿಡ್ ಪೀಡಿತರ ಕಣ್ಣೀರು ಒರೆಸಲು ಧಾವಿಸಿದರು. ಮೃತ ವ್ಯಕ್ತಿಗಳ ಕಳೇಬರದ ಅಂತ್ಯಸಂಸ್ಕಾರಕ್ಕೆ ನಿಕಟ ಸಂಬಂಧಿಕರೇ ಹೆದರಿ ಹಿಂದೆ ಸರಿದಾಗ, ಸಂಘದ ಕಾರ್ಯಕರ್ತರು ನಿರ್ಭೀತಿಯಿಂದ ತಂಡ ರಚಿಸಿಕೊಂಡು, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮೃತ ವ್ಯಕ್ತಿಗಳಿಗೆ ಗೌರವದ ಅಂತ್ಯಸಂಸ್ಕಾರ ನೆರವೇರಿಸಿದರು. ಸ್ವಯಂಸೇವಕರ ಈ ಮಾನವೀಯ ನಡೆಗೆ ಇಡೀ ದೇಶವೇ ಉಘೇ ಎಂದಿದೆ.ಸ್ವಯಂಸೇವಕರು ಕೋವಿಡ್ ದುರಿತ ಕಾಲದಲ್ಲಿ ಮಾಡಿದ ಈ ಮಹಾನ್ ಮಾನವೀಯ ಕಾರ್ಯಗಳಿಗೆ ಯಾವ ಟಿವಿ ವಾಹಿನಿಯೂ ಪ್ರಚಾರ ನೀಡಲಿಲ್ಲ. ಸ್ವಯಂಸೇವಕರು ಕೂಡ ಅದನ್ನು ನಿರೀಕ್ಷಿಸಲಿಲ್ಲ. ಏಕೆಂದರೆ ಪ್ರಚಾರಕ್ಕಿಂತ ಪ್ರತ್ಯಕ್ಷ ಕೃತಿಯಲ್ಲೇ ಸಂಘಕ್ಕೆ ನಂಬಿಕೆ ಮತ್ತು ಅದೇ ಮಹತ್ವದ್ದು ಎಂಬ ನಿಲುವು.
.
ಕಟ್ಟರ್ ವಿರೋಧಿಗಳಲ್ಲೂ ಸಂಘದ ಬಗ್ಗೆ ಗೌರವ
“ನಾನು ಕಟ್ಟರ್ ಅಂಬೇಡ್ಕರ್ವಾದಿ. ಅಂಬೇಡ್ಕರ್ ಅವರನ್ನು ನಾನು ಆಧುನಿಕ ಬುದ್ಧ ಎಂದೇ ಭಾವಿಸುತ್ತೇನೆ. ನಾನು ಆರೆಸ್ಸೆಸ್ನ ಕಟ್ಟರ್ ವಿರೋಧಿ. ಎಷ್ಟೆಂದರೆ ಇವತ್ತಿನವರೆಗೆ ನಾನು ಆ ಖಾಕಿ ನಿಕ್ಕರ್ಗೆ ಎಂದೂ ನಿಕ್ಕರ್ ಎಂದು ಹೇಳಿಲ್ಲ. ಅದನ್ನು ಚಡ್ಡಿ ಎಂದೇ ಲೇವಡಿ ಮಾಡಿರುವೆ. ಉತ್ತರಾಖಂಡ ದುರ್ಘಟನೆ ಸಂಭವಿಸಿತು. ಕೆಲವೇ ಗಂಟೆಗಳಲ್ಲಿ ಖಾಕಿ ಚಡ್ಡಿಗಳು ಸೇವೆಗೆ ಹಾಜರಾಗಿದ್ದವು. ಈ ಆರೆಸ್ಸೆಸ್ ಬಗ್ಗೆ ಉಳಿದಿದ್ದು ಏನೇ ಇರಲಿ, ಆದರೆ ಸೇವೆಯ ಬಗೆಗಿರುವ ಅವರ ಕಾಳಜಿ ಹಾಗೂ ವ್ಯವಸ್ಥೆ ಮೆಚ್ಚುವಂತಹುದೇ ... ಅದು ಲಾತೂರ್ ಭೂಕಂಪವಿರಲಿ, ಗುಜರಾತಿನ ಭೂಕಂಪ ಇರಲಿ, ಸುನಾಮಿಯ ಹೊಡೆತವಿರಲಿ, ಅಲ್ಲೆಲ್ಲ ಖಾಕಿ ಚಡ್ಡಿ ಎಲ್ಲರಿಗಿಂತ ಮುಂಚೆ ಹಾಜರ್. ಭಾರತೀಯ ಸೈನ್ಯದ ಹೆಗಲಿಗೆ ಹೆಗಲು ಕೊಟ್ಟು ಈ ಚಡ್ಡಿಗಳು ನೆರವು ನೀಡುತ್ತಾರೆ. ಇದೆಲ್ಲ ಅವರಿಗೆ ಹೇಗೆ ಸಾಧ್ಯ? ಉತ್ತರ ಸರಳವಾಗಿದೆ. ಸಂಘ ದೇಶಾದ್ಯಂತ ಹಬ್ಬಿದೆ. ಸಂಘದ ಕಾರ್ಯಾಲಯವಿಲ್ಲದ ಅಥವಾ ಕಾರ್ಯಕರ್ತನಿಲ್ಲದ ತಾಲೂಕು ದೇಶದಲ್ಲಿ ಇರಲಿಕ್ಕಿಲ್ಲ ..... ಇವರ ಹಿಂದುತ್ವದ ಬಗ್ಗೆ ಎಷ್ಟೇ ಸಿಟ್ಟು ಇದ್ದರೂ ಇವರ ಈ ನಿಸ್ವಾರ್ಥ ಸೇವಾಗುಣವನ್ನು ಮಾತ್ರ ಮೆಚ್ಚಲೇ ಬೇಕು. ಈ ಸತ್ಯವನ್ನು ನಿರಾಕರಿಸಲಾಗದು” ಪುಣೆಯ ದಲಿತ ಸಾಹಿತಿ, ಸಂಘದ ಕಟ್ಟರ್ ವಿರೋಧಿ ಎಂ.ಡಿ. ರಾಂಟೆಕೆ ೨೦೧೩ರಲ್ಲಿ ಮರಾಠಿ ಪತ್ರಿಕೆಗಳಾದ ‘ವಿಜಯಂತ್’ ಹಾಗು ‘ವೀರವಾಣಿ’ಯಲ್ಲಿ ಬರೆದ ಲೇಖನದ ಕೆಲವು ತುಣುಕುಗಳಿವು. ಸಂಘಕ್ಕೆ ನೂರು ರೂ. ಕೊಟ್ಟರೆ ಅದು ಸಂತ್ರಸ್ತರಿಗೆ ನೂರೈದು ರೂಪಾಯಿಗಳಾಗಿ ನೇರವಾಗಿ ತಲುಪುತ್ತದೆ ಎಂದೂ ರಾಂಟೆಕೆ ತಮ್ಮ ಆ ಲೇಖನದಲ್ಲಿ ಬಣ್ಣಿಸಿದ್ದಾರೆ. ಸಂಘವನ್ನು ಸೈದ್ಧಾಂತಿಕವಾಗಿ ಕಟುವಾಗಿ ವಿರೋಧಿಸುತ್ತಿದ್ದ ಸಮಾಜವಾದಿ, ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಕೂಡ ಸಂಘದ ಸೇವಾ ಭಾವನೆಗೆ ಮಾರು ಹೋಗಿ ಸಂಘದತ್ತ ಕೊನೆಯ ದಿನಗಳಲ್ಲಿ ಆಕರ್ಷಿತರಾಗಿದ್ದರು. ಪ್ರಾಕೃತಿಕ ದುರಂತಗಳು ಸಂಭವಿಸಿದಾಗ ಸಂಘದ ಸ್ವಯಂಸೇವಕರು ಯಾರ ಸೂಚನೆಗೂ ಕಾಯದೆ, ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ನೊಂದವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಪರಿಯನ್ನು ಕಂಡು ಅವರೂ ಬೆರಗಾಗಿದ್ದರು. ಖSS ಎಂದರೆ ಖeಚಿಜಥಿ ಜಿoಡಿ Seಟಜಿಟess Seಡಿviಛಿe ಎಂದು ಉದ್ಗರಿಸಿದ್ದರು. ಸಂಘ ಮತ್ತು ಸಂಘಪರಿವಾರದವರೆಂದು ಬಿಂಬಿಸಿಕೊಳ್ಳುವ ಕೆಲವರು ಭ್ರಷ್ಟಾಚಾರ, ದುರಾಚಾರ ಮತ್ತಿತರ ಬಾನಗಡಿಗಳಲ್ಲಿ ಸಿಲುಕಿ ಸಂಘಕ್ಕೆ ಕೆಟ್ಟ ಹೆಸರು ತರುವ ಪ್ರಸಂಗಗಳು ಅಲ್ಲೊಂದು ಇಲ್ಲೊಂದು ಈಚೆಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವುದುಂಟು. ಸಂಘದ ಕಾರ್ಯವೆಂದರೆ ಸಚ್ಚಾರಿತ್ರö್ಯವಂತ ವ್ಯಕ್ತಿಯ ನಿರ್ಮಾಣ. ಒಂದು ರೀತಿಯಲ್ಲಿ ಹಾಲಿನಿಂದ ತುಪ್ಪ ಪಡೆದಂತೆ. ಹಾಲಿನಿಂದ ನೇರವಾಗಿ ತುಪ್ಪ ಸಿಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಹಾಲನ್ನು ಕಾಯಿಸಿ, ಹೆಪ್ಪುಹಾಕಿ, ಅದು ಮೊಸರಾಗಿ, ಮೊಸರನ್ನು ಕಡೆದಾಗ ಬೆಣ್ಣೆ ತೇಲಿಬಂದು, ಆ ಬೆಣ್ಣೆಯನ್ನು ಹದವಾಗಿ ಕಾಯಿಸಿದಾಗ ಸಿಗುವ ಕೊನೆಯ ಶ್ರೇಷ್ಠ ಉತ್ಪನ್ನವೇ ತುಪ್ಪ. ಇದೊಂದು ಪ್ರಕ್ರಿಯೆ. ಒಂದು ಬಗೆಯ ಸಂಸ್ಕಾರ. ಈ ಪ್ರಕ್ರಿಯೆಯಲ್ಲಿ ಒಂದು ಹಂತ ತಪ್ಪಿದರೂ ಹೆಚ್ಚುಕಡಿಮೆಯಾದರೂ ತುಪ್ಪ ದೊರಕದು. ಸಂಘಕ್ಕೆ ಬಂದ ಸ್ವಯಂಸೇವಕ ಶಾಖೆಯ ಕ್ರಮಬದ್ಧ, ಶಿಸ್ತುಬದ್ಧ ಸಂಸ್ಕಾರಕ್ಕೊಳಪಟ್ಟಾಗ ಮಾತ್ರ ಉತ್ತಮ ಚಾರಿತ್ರö್ಯವಂತ ಕಾರ್ಯಕರ್ತನಾಗಬಲ್ಲ. ತೋರುಗಾಣಿಕೆಗೆ ಶಾಖೆಗೆ ಬಂದಂತೆ ಮಾಡಿ, ‘ನಾನೂ ಸ್ವಯಂಸೇವಕ’ ಎಂದು ಹೇಳಿಕೊಳ್ಳುವವರು ಸಂಘದ ನಿಜವಾದ ಸ್ವಯಂಸೇವಕ ಎಂದಿಗೂ ಆಗಲಾರರು.
ಆದರೆ ಅಂಥವರ ಹಾದಿ ತಪ್ಪಿದ ನಡವಳಿಕೆಗೆ ಸಂಘವಾಗಲಿ, ಸಂಘಪರಿವಾರದ ವಿವಿಧ ಸಂಘಟನೆಗಳಾಗಲಿ ಖಂಡಿತ ಹೊಣೆಯಲ್ಲ. ಸಂಘದ ಕಾರ್ಯಕರ್ತನೊಬ್ಬ ತಪ್ಪು ಮಾಡಿದರೆ ಅದಕ್ಕೆ ಸಂಘ ಉತ್ತರದಾಯಿ ಆಗದು. ಆತ ತಪ್ಪು ಮಾಡಿದ್ದಕ್ಕೆ ಸಂಘ ಕಾರಣವಲ್ಲ; ಆದರೆ ಆತನ ವೈಯಕ್ತಿಕ ಗುಣದೋಷಗಳೇ ಕಾರಣ. ಸಂಘದ ಸಂಸ್ಕಾರ ಆತನಲ್ಲಿ ನಿರೀಕ್ಷೆಯಷ್ಟು ಪಡಿಮೂಡಿಲ್ಲವೆಂದೇ ಅರ್ಥ. ಸಂಘಗಂಗೆಯಲ್ಲಿ ಆತ ಸರಿಯಾಗಿ ಮಿಂದಿಲ್ಲವೆಂದೇ ಹೇಳಬೇಕಾಗುತ್ತದೆ.ಸಂಘದ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿಯವರೊಮ್ಮೆ ಕಾರ್ಯಕರ್ತರ ಬೈಠಕ್ನಲ್ಲಿ ಮಾತನಾಡುತ್ತಾ, “ಸಂಘದ ವಿನಾಶಕ್ಕೆ ಪಂ. ನೆಹರೂ ಸೇರಿದಂತೆ ಹಲವರು ಇನ್ನಿಲ್ಲದ ಹುನ್ನಾರ ನಡೆಸಿದರು. ಗಾಂಧೀಜಿ ಹತ್ಯೆಯಂಥ ಘೋರ ಆರೋಪವನ್ನೂ ಸಂಘದ ಮೇಲೆ ಹೊರಿಸಲಾಗಿತ್ತು. ಆದರೆ ಸಂಘ ಆ ಎಲ್ಲ ಅಗ್ನಿಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾಯಿತು. ಹಾಗಾಗಿ ಸಂಘವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಒಬ್ಬರಿಂದ ಮಾತ್ರ ಸಾಧ್ಯ” ಎನ್ನುತ್ತಾ ಕಾರ್ಯಕರ್ತರೆಡೆಗೆ ಬೊಟ್ಟು ಮಾಡಿ ‘and that is you’ ಎಂದರು. ಅಲ್ಲಿದ್ದ ಕಾರ್ಯಕರ್ತರಿಗೆಲ್ಲ ಆಶ್ಚರ್ಯ! ಆಘಾತ! ಕಾರ್ಯಕರ್ತರು ಅಡ್ಡಹಾದಿ ತುಳಿದರೆ ಮಾತ್ರ ಆರೆಸ್ಸೆಸ್ ನಾಶ ಸಾಧ್ಯ ಎಂಬುದು ಗುರೂಜಿಯವರ ಮಾತಿನ ತಾತ್ಪರ್ಯವಾಗಿತ್ತು.
ನಿರಂತರ ಕಾರ್ಯ
ಕಳೆದ ಒಂದು ನೂರುವರ್ಷಗಳಿಂದ ಆರೆಸ್ಸೆಸ್ ಅವನತಿ ಕಾಣದೆ ಉನ್ನತಿಯತ್ತ ದಾಪುಗಾಲು ಹಾಕುತ್ತಿರುವುದು ಇದೇ ಕಾರಣದಿಂದಾಗಿ. ಆರೆಸ್ಸೆಸ್ ಆರಂಭಗೊಂಡಾಗ ಅದನ್ನು ಉಪಹಾಸ ಮಾಡಿದರು. ಅನಂತರ ಅದು ಬೆಳೆಯುವ ಹಂತ ತಲುಪಿದಾಗ ವಿರೋಧಿಸಿದರು. ಆದರೀಗ ಆರೆಸ್ಸೆಸ್ ಬಗ್ಗೆ ಎಲ್ಲೆಡೆ ಗೌರವಾದರ ಭಾವ ಹೆಚ್ಚುತ್ತಿದೆ. ಸಮಾಜ ಆರೆಸ್ಸೆಸ್ಅನ್ನು ಮನಸಾ ಸ್ವೀಕರಿಸಿರುವುದರ ಸಂಕೇತ ಅದು. (ಒಂದಿಷ್ಟು ವಿರೋಧ ಇರುವುದು ನಿಜ. ಅದು ಇರಬೇಕು. ಇದ್ದಾಗಲೇ ಆರೆಸ್ಸೆಸ್ ಸರಿದಾರಿಯಲ್ಲಿ ಸಾಗಬಲ್ಲುದು) ದೇಶದ ಅಖಂಡತೆ, ಅಸ್ಮಿತೆ, ಸಾಂಸ್ಕೃತಿಕ, ಧಾರ್ಮಿಕ ಪರಂಪರೆ, ಇತಿಹಾಸ ರಕ್ಷಣೆಯ ಹಿನ್ನೆಲೆಯಲ್ಲಿ ಆರೆಸ್ಸೆಸ್ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ತುರ್ತಾಗಿದೆ. ಶತಮಾನೋತ್ಸವ ಆಚರಿಸಿದ ಬಳಿಕವೂ ಆರೆಸ್ಸೆಸ್ನ ಕಾರ್ಯ ಮುಗಿಯುವುದಿಲ್ಲ.