ಬೆಂಗಳೂರು ನ.30: ಸಂಘಕ್ಕೆ ಯಾವಾಗಲೂ ಯುವ ಪೀಳಿಗೆಯ ಮೇಲೆ ಭರವಸೆ ಇದೆ. ದೇಶವನ್ನು ಕಟ್ಟುವ ಧ್ಯೇಯ, ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವ ಮನಸ್ಥಿತಿ ಮತ್ತು ನೂತನ ಸವಾಲುಗಳನ್ನು ಎದುರಿಸುವ ಧೈರ್ಯ ಅವರಲ್ಲಿದೆ ಎಂದು ಸಂಘ ನಂಬಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಸಿ.ಆರ್ ಮುಕುಂದ ಹೇಳಿದರು.

ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಥಿಂಕರ್ಸ್ ಫೋರಮ್ ವತಿಯಿಂದ ಆಯೋಜಿಸಿದ್ದ 4ನೇ ಯಂಗ್ ಥಿಂಕರ್ಸ್ ಮೀಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂದಿನ ಕಾಲದಲ್ಲಿ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಕೂಡ ಯುವಶಕ್ತಿಯನ್ನು ಕೇಂದ್ರೀಕರಿಸಿಯೇ ಸಂಘವನ್ನು ಆರಂಭಿಸಿದ್ದರು. ಇಂದಿಗೂ ಹೊಸ ಪೀಳಿಗೆ ಸಂಘಕ್ಕೆ ಬರುತ್ತಲೇ ಇದೆ. 100 ವರ್ಷ ಆಗಿರುವ ಸಂಘದಲ್ಲಿ ತರಬೇತಿ ತೆಗೆದುಕೊಳ್ಳುವವರ ಸರಾಸರಿ ವಯಸ್ಸು 16. ಸಂಘದಲ್ಲಿ ಶಿಶು, ಕಿಶೋರ, ವಿದ್ಯಾರ್ಥಿ ಹೀಗೆ ಯಾವ ವರ್ಗವೂ ದುರ್ಲಕ್ಷ್ಯವಲ್ಲ ಎಂದರು.
ಸಂಘದ ಚಿಂತನೆಯನ್ನು ಸಮಾಜ ತನ್ನದಾಗಿಸಿಕೊಳ್ಳಬೇಕು. ಸಂಘದ ವಿಚಾರ ಸಮಾಜದ್ದಾಗಬೇಕು. 100ನೇ ವರ್ಷದ ಆಚರಣೆಗಿಂತ ಹೆಚ್ಚಾಗಿ ಸಂಘದ ವಿಚಾರದ ಪ್ರಚಾರವಾಗುವುದು ಮುಖ್ಯವಾಗಿದೆ ಎಂದರು.

ಮುಂದುವರಿಸಿ, ಸಂಘ ಸಮಾಜದಲ್ಲಿ ಒಂದು ಸಂಘಟನೆಯಲ್ಲ. ಅದು ಸಮಾಜದ ಸಂಘಟನೆ. ಎಲ್ಲರನ್ನೂ ಒಳಗೊಳ್ಳಬಹುದಾದ ರಚನೆ ಸಂಘದಲ್ಲಿದೆ ಎಂಬುದು ಸತ್ಯ. ಸಜ್ಜನಶಕ್ತಿಯ ಸಹಭಾಗಿತ್ವವನ್ನು ಹೆಚ್ಚಿಸಿಕೊಂಡು ಮುಂದುವರಿಯುವುದು ಸಂಘದ ಕಾರ್ಯವಾಗಿದೆ. ದೇಶದಲ್ಲಿ ನಡೆಯುವ ಎಲ್ಲಾ ಶಾಖೆಗಳಲ್ಲಿ ಪ್ರತಿನಿತ್ಯ ಇದೇ ಪ್ರಯತ್ನವಾಗುತ್ತಿದೆ ಎಂದು ನುಡಿದರು.
ಪ್ರತಿಯೊಬ್ಬ ಸ್ವಯಂಸೇವಕನ ಕರ್ತವ್ಯ ತನ್ನನ್ನು ತಾನು ದೇಶಕ್ಕಾಗಿ ಹೇಗೆ ಸಿದ್ಧಗೊಳಿಸುವುದು ಎಂದು ಯೋಟಿಸುವುದಾಗಿದೆ. ಸಮಾಜದಲ್ಲಿ ಒಂದು ಪ್ರತಿಶತ ವ್ಯಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ ಯೋಚಿಸುವಂತೆ ದೇಶದ ಬಗ್ಗೆ ಯೋಚನೆ ಮಾಡುವ ಸೃಷ್ಟಿಶೀಲ, ಸೃಜನಶೀಲ ಗುಣಗಳನ್ನು ರೂಢಿಸಿಕೊಂಡರೆ ಆಗ ಸಂಘದ ಅಗತ್ಯವೇ ಇರುವುದಿಲ್ಲ. ಅಂತಹ ವ್ಯಕ್ತಿಗಳು ಸಮಾಜದಲ್ಲಿ ತಯಾರಾಗಬೇಕು ಎಂದು ಅಭಿಪ್ರಾಯಪಟ್ಟರು.

Wanted Man, Wanted Man ಎಂಬ ಜನಪ್ರಿಯ ಇಂಗ್ಲಿಷ್ ಕವಿತೆಯ ಸಾಲುಗಳಲ್ಲಿ ಹೇಳಿದಂತೆ, ನಾವು ಏನನ್ನೇ ಮಾಡಿದರೂ ಕೊನೆಗೆ ಅದನ್ನು ಉಪಯೋಗಿಸುವ ವ್ಯಕ್ತಿ ಸರಿಯಾಗಿದ್ದರೆ ಮಾತ್ರ ಮಾಡಿದ ಕಾರ್ಯವು ಮಹತ್ವವೆನಿಸಿಕೊಳ್ಳುತ್ತದೆ. ನಗರೀಕರಣ ವಿಚಾರಕ್ಕೆ ಒಳಗಾದ ಮತ್ತು ಒಳಗಾಗದ Gen Z ಜನರೇಶನ್ ನ ಮಧ್ಯೆ ಯೋಚನೆಗಳಲ್ಲಿ ವ್ಯತ್ಯಾಸ ಇರದೇ ಇದ್ದರೂ ಬಳಸುವ ಶಬ್ದಗಳಲ್ಲಿ ವ್ಯತ್ಯಾಸವಿರುತ್ತವೆ. ಈ ಎರಡೂ ರೀತಿಯ ಯುವ ಪೀಳಿಗೆಗಳು ಸಂಘದ ಮುಂದಿನ ಕಾರ್ಯಗಳನ್ನು ಚರ್ಚಿಸುವಂತೆ, ತಮ್ಮದಾಗಿಸಿಕೊಳ್ಳುವಂತೆ ಮಾಡಬೇಕಿದೆ. ಅವರನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ನಿರೂಪಣೆಯನ್ನು ಕೊಡುವುದು ಸಂಘದ ಕೈಯಲ್ಲಿದೆ ಎಂದು ಹೇಳಿದರು.
ಥಿಂಕರ್ಸ್ ಫೋರಮ್ ಕರ್ನಾಟಕದ ಸಂಯೋಜಕಿ ಸ್ಫೂರ್ತಿ ಮುರಳೀಧರ್ ಉಪಸ್ಥಿತರಿದ್ದರು.

ರಾಮರಾಜ್ಯದಲ್ಲಿ ರಾಮನಿಗೂ ವಿರೋಧಿಗಳಿದ್ದರು: ರಾಮ್ ಮಾಧವ್
ಬೆಂಗಳೂರು ನ.30: ಸಂಸ್ಕೃತಿಯ ಬೇರಿನಿಂದಲೇ ದೇಶವನ್ನು ಕಟ್ಟುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮೊದಲಿನಿಂದಲೂ ಮಾಡುತ್ತಿದೆ. ದೇಶ ನಿರ್ಮಾಣದ ಕಾರ್ಯ ಇಂತಹ ಸಂಘಟನೆಗಳಿಂದ ಆಗಿದೆಯೇ ಹೊರತು ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರಗಳಿಂದಲ್ಲ ಎಂದು ಚಿಂತಕ, ಲೇಖಕ ರಾಮ್ ಮಾಧವ್ ಹೇಳಿದರು.

ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಥಿಂಕರ್ಸ್ ಫೋರಮ್ ವತಿಯಿಂದ ಆಯೋಜಿಸಿದ್ದ 4ನೇ ಯಂಗ್ ಥಿಂಕರ್ಸ್ ಮೀಟ್ ಕಾರ್ಯಕ್ರಮದಲ್ಲಿ ‘ಸಂಘ ಶತಾಬ್ದಿ: ಕಲ್ಪನೆಗಳು, ಆದರ್ಶಗಳು ಮತ್ತು ಜೆನ್ ಝಿ’ ವಿಷಯದ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಗುರುತಿಸಿಕೊಳ್ಳುತ್ತಿರುವ ಬದಲಾದ ಭಾರತಕ್ಕೆ ಆರ್ ಎಸ್ ಎಸ್ ನ ಕೊಡುಗೆ ಮಹತ್ವದ್ದಾಗಿದೆ. ಸಂಘದಿಂದ ಬೆಳೆದು ಬಂದ ಮೋದಿಯಂತ ನಾಯಕರು ಎಲ್ಲರಿಗೂ ಕಾಣಿಸಿಕೊಳ್ಳುವವರಾದರೆ, ಕಾಣದ ಕೈಗಳ ಪರಿಶ್ರಮ ಬಹಳಷ್ಟಿದೆ ಎಂದರು.

ಸಮಾಜ ಸಂಘವನ್ನು ಅರ್ಥೈಸಿಕೊಳ್ಳುವ ಬಗ್ಗೆ ಹೇಳಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದರೆ ಅಪಾರ್ಥ ಮಾಡಿಕೊಳ್ಳುವುದು ಬಹಳಷ್ಟು ಸುಲಭ. ಲೇಖನಗಳನ್ನು ಓದುವುದರಿಂದಾಗಲೀ, ಇತಿಹಾಸವನ್ನು ತಿಳಿದುಕೊಳ್ಳುವುದರಿಂದಾಗಲೀ ಸಂಘವನ್ನು ಸಂಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಸಂಘದೊಳಗೆ ಬಂದು ಅಲ್ಲಿನ ಕಾರ್ಯಗಳಲ್ಲಿ ಬೆರೆತಾಗ ಮಾತ್ರ ಸಂಘವೇನೆಂಬುದು ಅರ್ಥವಾಗುತ್ತದೆ ಎಂದರು.
ಸಂಘ ನಡೆದು ಬಂದ ಹಾದಿಯ ಕುರಿತು ಮಾತನಾಡಿದ ಅವರು, 1925ರಿಂದ 50ರ ಮೊದಲ 25 ವರ್ಷಗಳು ಸಂಘಕ್ಕೆ ವಿರೋಧವೇ ಹೆಚ್ಚಿತ್ತು. ಬ್ರಿಟಿಷರಿಂದ ಹಿಡಿದು ಸ್ವತಂತ್ರ ಭಾರತದ ಮೊದಲ ಸರ್ಕಾರದವರೆಗೂ ಸಂಘ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಮುಂದಿನ 25 ವರ್ಷಗಳಲ್ಲಿ ಸಂಘವು ಸ್ವೀಕಾರಾರ್ಹವಾಗಿ, ದೃಢವಾಗಿ ಬೆಳೆಯಿತು. 1962ರಲ್ಲಿ ಚೀನಾ-ಭಾರತ ಯುದ್ಧವಾದ ನಂತರ 1963ರಲ್ಲಿ ಸ್ವತಃ ನೆಹರೂ ಅವರೇ ಅಂದಿನ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸೈನಿಕರೊಡನೆ ಭಾಗವಹಿಸಲು ಸಂಘದ ಸ್ವಯಂಸೇವಕರನ್ನು ಕರೆದಿದ್ದರು. ಸಂಘವನ್ನು ವಿರೋಧಿಸಿದ್ದ ಜಯಪ್ರಕಾಶ್ ನಾರಾಯಣ್ ಅವರು ಕೂಡ ‘ಸಂಘವೇ ಭಾರತದ ಭರವಸೆ’ ಎಂದಿದ್ದರು. ನಂತರದ 25 ವರ್ಷಗಳಲ್ಲಿ ಒಬ್ಬ ಸ್ವಯಂಸೇವಕ ದೇಶದ ಪ್ರಧಾನಿಯಾದರು. ಇಂದು ನೂರನೇ ವರ್ಷದ ಸಮಯದಲ್ಲಿ ಇನ್ನೊಬ್ಬ ಸ್ವಯಂಸೇವಕ ದೇಶಕ್ಕೆ ಮಾತ್ರವಲ್ಲದೆ ವಿಶ್ವದ ನಾಯಕನೂ ಆಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಘ ವಿರೋಧಿಗಳ ಬಗೆಗಿನ ನಿಲುವು ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿರೋಧಿಗಳು ಎಲ್ಲಾ ಸಮಾಜದಲ್ಲೂ ಇರುತ್ತಾರೆ. ರಾಮರಾಜ್ಯದಲ್ಲೂ ರಾಮನಿಗೆ ವಿರೋಧಿಗಳಿದ್ದರು. ಸಮಾಜಕ್ಕೆ ನಿಧಾನವಾಗಿ ಅರ್ಥ ಮಾಡಿಸುವುದು ನಮ್ಮ ಕೈಯಲ್ಲಿದೆ. ದೇಶದ ಕೇಂದ್ರವಾಗಿರುವ ಯುವಜನತೆಯನ್ನು ಸಂಘ ಇಂದು ತಲುಪಿದೆ. ಇಂತಹ ಸಮಾಜವನ್ನು ತಲುಪಿರುವಾಗ ಪಂಚ ಪರಿವರ್ತನೆಯ ಹಾದಿಯಲ್ಲಿ ಎಲ್ಲರನ್ನೂ ಸಂಘಟಿಸುವ ಕಾರ್ಯದಲ್ಲಿ ಮುಂದುವರಿಯಬೇಕಿದೆ. ವಿಭಕ್ತ ಕುಟುಂಬ, ವೋಕಿಸಂನಂತಹ ಸಮಸ್ಯೆಗಳ ಮಧ್ಯೆ ಮಹಿಳೆ ಮತ್ತು ಪುರುಷ ಸಮಾನವಾಗಿ ಸ್ಥಾನ ಪಡೆಯುವ ಕುಟುಂಬಗಳು ನಿರ್ಮಾಣವಾಗಬೇಕಿದೆ ಎಂದರು.
ಸ್ವದೇಶೀ ವಸ್ತು ಬಳಕೆಯ ಕುರಿತಂತೆ, ಭಾರತ ವಿಶ್ವದ ಅತಿ ದೊಡ್ಡ ಮೊಬೈಲ್ ಮಾರಾಟದ ಮಾರುಕಟ್ಟೆ. ಆದರೆ ನಮ್ಮದೇ ಆದ ಒಂದೇ ಒಂದು ಮೊಬೈಲ್ ಕಂಪೆನಿ ನಮ್ಮ ದೇಶದಲ್ಲಿ ಇಲ್ಲ. ಯಾಕೆಂದರೆ ಭಾರತೀಯ ಉತ್ಪನ್ನಗಳನ್ನು ಭಾರತೀಯರು ಖರೀದಿಸುವುದಿಲ್ಲ ಎಂಬ ಭಾವನೆ ಇನ್ನೂ ನಮ್ಮಲ್ಲಿದೆ. ನಮ್ಮ ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ಭಾರತದಲ್ಲಿ ಮೂಲಭೂತ ಹಕ್ಕುಗಳಿಗೆ (51ನೇ ವಿಧಿಗೆ) ಸಂಪೂರ್ಣವಾಗಿ ಒತ್ತು ನೀಡುವ ಒಂದೇ ಒಂದು ಸಂಘಟನೆ ಎಂದರೆ ಅದು ಆರ್ ಎಸ್ ಎಸ್. ಹಕ್ಕುಗಳಂತೆ ಕರ್ತವ್ಯಗಳಿಗೂ ಮಹತ್ವವನ್ನು ನೀಡುವ ಕಾರ್ಯವನ್ನು ಸಂಘ ಮಾಡುತ್ತಿದೆ ಎಂದರು.

ವಿಷಯಗಳ ಲಭ್ಯತೆಯ ವೇಗದಿಂದಾಗಿ ನಮ್ಮ ಸುತ್ತಮುತ್ತಲಿನ ವಿಚಾರಗಳಿಂದ ಹಿಡಿದು ಎಲ್ಲವೂ ನಮ್ಮನ್ನು ಬೇಗ ತಲುಪುತ್ತವೆ. ಈ ಕಾಲದಲ್ಲಿ ವಿಚಾರವನ್ನು ಒಪ್ಪುವಂತೆ ಮಾಡುವುದು ಅಷ್ಟು ಸುಲಭವಲ್ಲ. ನಾವು ಆಧುನಿಕ ತಂತ್ರಗಳನ್ನು ಒಂದಷ್ಟು ಬಳಸಬೇಕಾಗುತ್ತದೆ. ನಮ್ಮ ಯುವಜನತೆ ನಿರುಪಯೋಗಿಗಳಲ್ಲ. ನಾವು ಅವರನ್ನು ಬಳಸಿಕೊಳ್ಳುವುದರಲ್ಲಿ ಹಿಂದಿದ್ದೇವೆ ಎಂಬುದನ್ನು ಮನಗಂಡು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಥಿಂಕರ್ಸ್ ಫೋರಮ್ ಕರ್ನಾಟಕದ ಸಂಯೋಜಕಿ ಸ್ಫೂರ್ತಿ ಮುರಳೀಧರ್ ಉಪಸ್ಥಿತರಿದ್ದರು.
ಸರ್ವರಿಗೂ ಸಂಘದ ಬಾಗಿಲು ಸದಾ ತೆರೆದಿರುತ್ತದೆ: ರಾಜೇಶ್ ಪದ್ಮಾರ್
ಬೆಂಗಳೂರು ನ.30: ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂವಿಧಾನವನ್ನು ಬಲಪಡಿಸುವ ಸಂಘಟನೆ. ಸಂಘ ಸಂವಿಧಾನದ ವಿರೋಧಿಯಲ್ಲ. ಸ್ವದೇಶೀ ಭಾವಜಾಗರಣ, ನಾಗರಿಕ ಶಿಷ್ಟಾಚಾರ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸಾಮರಸ್ಯ ಮುಂತಾದ ಸಂವಿಧಾನದ ತತ್ವಗಳನ್ನು ಅನುಸರಿಸುತ್ತಾ ಸಂಘ ಮುಂದುವರಿಯುತ್ತಿದೆ ಎಂದು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.
ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಥಿಂಕರ್ಸ್ ಫೋರಮ್ ವತಿಯಿಂದ ಆಯೋಜಿಸಿದ್ದ 4ನೇ ಯಂಗ್ ಥಿಂಕರ್ಸ್ ಮೀಟ್ ನ ಮೂರನೇ ಅವಧಿಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತ್ಯಾತೀತ ಹಿಂದೂರಾಷ್ಟ್ರದ ಕುರಿತಂತೆ ಮಾತನಾಡಿದ ಅವರು ಧರ್ಮ, ಸಂಸ್ಕೃತಿ, ಸಮಾಜ, ರಾಷ್ಟ್ರ ಎಂಬ ನಾಲ್ಕು ಘಟಕಗಳನ್ನು ನಮ್ಮ ದೇಶದಲ್ಲಿ ನೋಡುತ್ತೇವೆ. ಧರ್ಮ ಪಾಲನೆಗೆ ಸಂಸ್ಕೃತಿಯ ಅವಶ್ಯಕತೆ ಇದೆ. ಸಂಸ್ಕೃತಿಯನ್ನು ಆಚರಿಸಲು ಸಮಾಜದ ಅಗತ್ಯವಿದೆ. ಈ ಸಮಾಜದ ವಿಸ್ತೃತ ರೂಪವೇ ರಾಷ್ಟ್ರವಾಗಿದೆ ಎಂದು ನುಡಿದರು.
ಹಿಂದೂ ಎನ್ನುವುದು ಇಡಿಯ ಭಾರತದ ಸಮುದಾಯವನ್ನು ಪ್ರತಿನಿಧಿಸುವ ಶಬ್ದ. ಎಲ್ಲರನ್ನೂ ಸ್ವೀಕಾರ ಮಾಡುವವನೇ ನಿಜವಾದ ಹಿಂದೂ. ಭಾರತದಲ್ಲಿರುವವರೆಲ್ಲರೂ ಮೂಲದಲ್ಲಿ ಹಿಂದೂಗಳೇ ಆಗಿದ್ದವರು. ತನ್ನ ಹುಟ್ಟಿನಿಂದ, ಯೋಚನೆಗಳಿಂದ, ಪ್ರಾಯೋಗಿಕ ನಡೆಗಳಿಂದ ಹಿಂದೂ ಜಾತ್ಯತೀತನಾಗಿರುತ್ತಾನೆ ಎಂದರು.

ವೋಕಿಸಂ ಮತ್ತು ಡೀಪ್ ಸ್ಟೇಟ್ಸ್ ಕುರಿತಾಗಿ ಮಾತನಾಡಿದ ಅವರು, ಇವೆರಡೂ ಒಂದು ದೇಶದ ಬಹುದೊಡ್ಡ ಶತ್ರುಗಳೇ ಹೌದು. ವೋಕಿಸಂನ ಪ್ರಭಾವಕ್ಕೊಳಗಾದ ಮಕ್ಕಳು ಪೂರ್ಣ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಭಾರತದ ಬಹಳಷ್ಟು ಕುಟುಂಬದಲ್ಲಿ ಈ ಸಮಸ್ಯೆ ಇದೆ. ಸಣ್ಣ ಸಣ್ಣ ವಿಷಯಗಳಿಂದ ಶುರುವಾಗಿ ದೇಶವನ್ನು ವಿರೋಧಿಸುವ ತನಕ ಇದು ಬೆಳೆಯುತ್ತಿದೆ. ಆದರೂ ಭಾರತದ ಜೆನ್ ಝಿ ಪೀಳಿಗೆ ಜವಾಬ್ದಾರಿಯುತ ನಡೆಯನ್ನೂ ಅನುಸರಿಸುತ್ತಿರುವುದು ಸಂತಸದ ವಿಷಯ ಎಂದರು.
ಸಂಘ ಮೇಲ್ವರ್ಗಕ್ಕೆ ಸೀಮಿತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವರ್ಗ ಮತ್ತು ವೃತ್ತಿಯನ್ನು ಮೀರಿ ಸಂಘ ನಿಲ್ಲುತ್ತದೆ. ಸರ್ವರಿಗೂ ಸಂಘದ ಬಾಗಿಲು ಸದಾ ತೆರೆದಿರುತ್ತದೆ. ಸಂಘ ಮೇಲ್ವರ್ಗಕ್ಕೆ ಮಾತ್ರ ಸೀಮಿತವೆಂಬ ಆರೋಪ ಶುದ್ಧ ಸುಳ್ಳು. ಸಮಾಜದ ಎಲ್ಲರೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಬರಬೇಕೆಂಬುದೇ ಸಂಘದ ಅಪೇಕ್ಷೆಯಾಗಿದೆ ಎಂದು ನುಡಿದರು.
ಹಾಗೆಯೇ ಸಂಘದ ಹಿಂದಿನ ಸರಸಂಘಚಾಲಕರೆಲ್ಲರೂ ಒಂದೇ ವರ್ಗದವರೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂಘದ ಹಿಂದಿನ ಆರೂ ಸರಸಂಘಚಾಲಕರು ಮೇಲ್ವರ್ಗದವರಲ್ಲ. ಸಂಘದ ಮನೆಯಲ್ಲಿ ಜಾತಿಯೆಂಬುದಿಲ್ಲ. ಎಲ್ಲಾ ರೀತಿಯ ಭೇದ ಭಾವವನ್ನು ಅಳಿಸಿ ಸಂಘ ಕಾರ್ಯನಿರತವಾಗಿದೆ ಎಂದರು.

ಸಂಘ ರಾಷ್ಟ್ರಧ್ವಜವನ್ನು ವಿರೋಧಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲೆಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ, ಅಪಮಾನವಾಗಿದೆಯೋ ಅಲ್ಲಿ ಸಂಘ ರಾಷ್ಟ್ರಧ್ವಜದ ಪರವಾಗಿ ನಿಂತಿದೆ. ತ್ರಿವರ್ಣ ಧ್ವಜಕ್ಕೆ ಕೊಡುವ ಗೌರವವನ್ನು ಸಂಘ ಮೊದಲಿನಿಂದಲೂ ನೀಡುತ್ತಲೇ ಬಂದಿದೆ. ತ್ರಿವರ್ಣ ಧ್ವಜವನ್ನು ಎಲ್ಲೆಡೆ ಹಾರಿಸುವುದು 2002ರಿಂದ ಚಾಲ್ತಿಗೆ ಬಂತು. ಹಾಗಿರುವಾಗ ಈ ಮೊದಲು ಸಂಘ ಹೇಗೆ ತ್ರಿವರ್ಣ ಧ್ವಜವನ್ನು ಹಾರಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಸಮಾಜವಾದದ ಪ್ರಶ್ನೆಯ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾಜವಾದ ಈ ನೆಲದ ಶಾಶ್ವತ ವಿಚಾರವಲ್ಲ. ಭಾರತದ ನೆಲ ಎಲ್ಲವನ್ನೂ ಗೌರವಿಸುತ್ತದೆ. ಹಿಂದುತ್ವ ಈ ನೆಲದ ವಿಚಾರವಾಗಿದೆ. ಗುಂಪಿನಲ್ಲಿ ಭಜನೆ, ಜೊತೆಯಲ್ಲಿ ಭೋಜನ, ಮನೆಯವರೆಲ್ಲರೂ ದೇವಸ್ಥಾನಕ್ಕೆ ಜೊತೆಯಾಗಿ ಹೋಗುವುದು (ಭ್ರಮಣ), ಎಲ್ಲರನ್ನೂ ಒಳಗೊಂಡ ಮನೆ (ಭವನ) ಇದು ಭಾರತೀಯರ ದೈನಂದಿನ ಜೀವನದಲ್ಲಿ ಇರಬೇಕಾದದ್ದು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಯುವಲೇಖಕಿ ರಶ್ಮಿ ಸಾಮಂತ್ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇತರರಿಗೆ ಸಹಾಯ ಮಾಡುವುದರಲ್ಲಿ ಮುಂದೆ ಇರುತ್ತದೆ. ತನ್ನನ್ನು ತಾನು ರಕ್ಷಣೆ ಮಾಡುವುದರಲ್ಲಿ ಕೊನೆಯದಾಗಿರುತ್ತದೆ. ಎಲ್ಲವನ್ನೂ ಮರೆತು ದೇಶಕ್ಕಾಗಿ ದೀರ್ಘಕಾಲದಿಂದ ಸೇವೆಯಲ್ಲಿರುವ ಸಂಘದ ಕುರಿತಂತೆ ಸಕಾರಾತ್ಮಕ ಪರಿಣಾಮಗಳನ್ನು ಇಂದು ನಾವು ಜಗತ್ತಿನಲ್ಲಿ ಕಾಣಬಹುದು ಎಂದು ಹೇಳಿದರು.

ಪ್ರಾಯೋಗಿಕ ಜೀವನ ಸಂಪಾದನೆಗಿರುವ ಮಾರ್ಗ. ನಮ್ಮ 20ರ ಆಸುಪಾಸಿನಲ್ಲಿ ನಾವು ಕಮ್ಯುನಿಸ್ಟ್ ವಾದವನ್ನು ಒಪ್ಪುತ್ತೇವೆ. 30ರ ನಂತರ ರಾಷ್ಟ್ರೀಯವಾದಿಗಳಾಗುತ್ತೇವೆ ಎಂಬ ನಾಣ್ನುಡಿಯಿದೆ. ಬೆಳೆಯುವಾಗ ಮನೆಯಲ್ಲಿ ಹೇಳಿದ್ದಷ್ಟನ್ನೇ ಕೇಳುತ್ತಿರುತ್ತೇವೆ. ಬೆಳೆಯುತ್ತಾ ಮನೆಯಲ್ಲಿ ಹೇಳುವುದು ಯಾವುದೂ ಇಷ್ಟವಾಗುವುದಿಲ್ಲ. ನಮ್ಮದೇ ದಾರಿ ಹಿಡಿಯುತ್ತೇವೆ. ಮುಂದೊಂದು ದಿನ ಸರಿ ತಪ್ಪುಗಳು, ಸರಿಯಾದ ಮಾರ್ಗ ಎಲ್ಲವೂ ಅರ್ಥವಾದಾಗ ಮತ್ತೆ ಮರಳಿ ಬರುತ್ತೇವೆ ಎಂದರು.

ದೇಶದಲ್ಲಿ ಹಲವು ಬದಲಾವಣೆಗಳು ಕಾಲ ಕಾಲಕ್ಕೆ ಆಗುತ್ತಲೇ ಇರುತ್ತದೆ. ಒಬ್ಬರ ನಂತರ ಒಬ್ಬರಂತೆ ನಾಯಕರು ಬಂದು ಹೋಗುತ್ತಾರೆ. ಆದರೆ ಇದೊಂದು ಸಂಘಟಿತ ಸಮಾಜ. ಇಲ್ಲಿ ನಾಯಕರಿಗಿಂತ ನಾಗರಿಕತೆಯನ್ನುವುದು ಉಳಿಯಬೇಕಾದದ್ದು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರ ಟೋಳಿ ಸದಸ್ಯೆ ತನ್ಮಯಿ ಮತ್ತು ಯುವ ಲೇಖಕ ಕಿರಣ್ ಕುಮಾರ್ ವಿವೇಕವಂಶಿ ಸಂವಾದವನ್ನು ನಡೆಸಿಕೊಟ್ಟರು.
ಬೌದ್ಧಿಕ ಗುಲಾಮಿತನದ ನಿರ್ಮೂಲನೆ ಆಗಬೇಕಿದೆ: ರಾಮ್ ಮಾಧವ್
ಬೆಂಗಳೂರು: ರಾಮಮಂದಿರ ನಿರ್ಮಾಣದ ಪರಾಕಾಷ್ಠೆ ಮಂದಿರದ ಶಿಖರದಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ಪೂರ್ಣಗೊಂಡಿತು. ಇದು ರಾಮ ರಾಜ್ಯದ ಆರಂಭವನ್ನೂ ಸೂಚಿಸಿದಂತಾಗಿದೆ ಎಂದು ಚಿಂತಕ ಮತ್ತು ಲೇಖಕ ರಾಮ್ ಮಾಧವ್ ಹೇಳಿದರು.

ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಥಿಂಕರ್ಸ್ ಫೋರಮ್ ವತಿಯಿಂದ ಆಯೋಜಿಸಿದ್ದ 4ನೇ ವರ್ಷದ ಯಂಗ್ ಥಿಂಕರ್ಸ್ ಮೀಟ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಮಾಯಣದ ಕುರಿತು ಬೆಳಕು ಚೆಲ್ಲಿದ ಅವರು, ರಾಮಾಯಣ ಹಲವು ಉದಾಹರಣೆಗಳ ಆಗರ. ನಿಷ್ಠೆಗೆ ಹನುಮ, ವಿಶ್ವಾಸಕ್ಕೆ ವಿಭೀಷಣ, ಸ್ವಾಭಿಮಾನಕ್ಕೆ ಸೀತೆ ಹೀಗೆ ಒಂದೊಂದು ಪಾತ್ರವೂ ಒಂದೊಂದು ರೀತಿಯಲ್ಲಿ ವಿಶಿಷ್ಟ ಎಂದರು.
ಯುವಶಕ್ತಿಯ ಕುರಿತಂತೆ ಮಾತನಾಡುತ್ತಾ, ನಮ್ಮದು ಯುವಪೀಳಿಗೆಯ ದೇಶ ಎಂಬುದನ್ನು ಪೂರ್ಣವಾಗಿ ಹೇಳಲಾಗದು. ಏಕೆಂದರೆ ದೇಶದ ಯುವಶಕ್ತಿ ಸರಿಯಾದ ದಾರಿಯಲ್ಲಿರದಿದ್ದರೆ ಅದು ದೇಶಕ್ಕೆ ಮಾರಕವಾಗಬಲ್ಲದು. ಇಂದಿನ ಯುವಕರನ್ನು ನಾವು ಎಚ್ಚರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಭಯೋತ್ಪಾದನೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೊರಗಿನಿಂದ ಬರುವ ಭಯೋತ್ಪಾದಕರಿಗಿಂತ ನಮ್ಮೊಳಗೆ ತಯಾರಾಗುತ್ತಿರುವ ಭಯೋತ್ಪಾದಕರೇ ಹೆಚ್ಚಾಗುತ್ತಿದ್ದಾರೆ. ಬಡತನ, ಅನಕ್ಷರತೆ ಇವೆಲ್ಲಾ ಭಯೋತ್ಪಾದನೆಗೆ ಮುಖ್ಯ ಕಾರಣವೆಂಬುದು ಮೊದಲ ಸುಳ್ಳು. ಹಾಗೆ ನೋಡಿದರೆ ಒಸಾಮ ಬಿನ್ ಲಾಡೆನ್ ಇಂಜಿನಿಯರಿಂಗ್ ಓದಿ ಭಯೋತ್ಪಾದಕನಾಗಲಿಲ್ಲವೇ ಎಂದು ನುಡಿದರು.
ಇನ್ನು ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುವುದು ಎರಡನೇ ಸುಳ್ಳು. ಧರ್ಮದಲ್ಲಿ ಭಯೋತ್ಪಾದನೆ ಇಲ್ಲ ಎನ್ನುವುದಷ್ಟೇ ಸತ್ಯ. ಹಾಗೆಂದು ಎಲ್ಲ ಮುಸ್ಲಿಮರನ್ನೂ ಭಯೋತ್ಪಾದಕರಂತೆ ಕಾಣಬೇಕಿಲ್ಲ. ಅಲ್ಲದೆ ನಾವು ಕೂಡ ತಪ್ಪಿತಸ್ಥರನ್ನು ದೂಷಿಸುವ ಬದಲು ಇಡಿಯ ಸಮುದಾಯವನ್ನೇ ದೂಷಿಸುತ್ತೇವೆ. ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಧರ್ಮದಲ್ಲಿ, ನಮ್ಮಲ್ಲಿ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಒಳಗೊಳ್ಳುವಿಕೆಯ ಕೊರತೆಯ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಇಂದು ಹಳೆಯ ಅಸ್ಪೃಶ್ಯತೆಯನ್ನು ತೊರೆದು ರಾಜಕೀಯದ ಪರದೆ ಹಾಕಿರುವ ಹೊಸ ಅಸ್ಪೃಶ್ಯತೆಗೆ ಒಗ್ಗಿಕೊಂಡಿದ್ದೇವೆ. ಇದು ಬದಲಾಗಬೇಕಿದೆ. ಇಂದು ಯಾವುದೇ ಜಾತಿ ವ್ಯವಸ್ಥೆಯ ಅಗತ್ಯವಿಲ್ಲ. ಆದರೂ ರಾಜಕೀಯವು ಅದನ್ನು ಮುಂದುವರಿಸುತ್ತಾ ಹೋಗುತ್ತಿದೆ. ಅದೊಂದು ವ್ಯವಸ್ಥೆಯಷ್ಟೇ. ಆಳವಾಗಿ ನೋಡುವ ಅಗತ್ಯವಿಲ್ಲ ಎಂದರು.

ಪ್ರಚಾರಕ ಜೀವನದ ಕುರಿತಂತೆ ಮಾತನಾಡಿದ ಅವರು, ಪ್ರಚಾರಕರು ಹುಟ್ಟಿದ್ದಾರೆಯೇ ಹೊರತು ತಯಾರಾಗಿಲ್ಲ. ಪ್ರಚಾರಕ ಎನ್ನುವುದು ಒಂದು ವಿಶೇಷ ಜೀವನ ಮತ್ತು ಚಿಂತನೆಯಾಗಿದೆ. ನಾವು ಯಾರನ್ನೂ ಪ್ರಚಾರಕರಾಗಲು ಉತ್ತೇಜಿಸಬೇಕಿಲ್ಲ, ನಮ್ಮ ನಡುವೆ ಇರುವ ಪ್ರಚಾರಕರನ್ನು ಹುಡುಕಬೇಕಷ್ಟೇ ಎಂದು ನುಡಿದರು.
ಆಂಗ್ಲ ಭಾಷಾ ಗುಲಾಮಿತನದ ಬಗ್ಗೆ ಮಾತನಾಡಿದ ಅವರು, ಗುಲಾಮಿತನ ನಮ್ಮದೇ ನಡೆಯಿಂದ ಶುರುವಾಗುತ್ತದೆ. ನಾವು ದೋಸೆಯನ್ನು ಚಮಚದ ಮುಖಾಂತರ ತಿನ್ನಲು ಪ್ರಯತ್ನಿಸುತ್ತೇವೆ. ಕೈಯಿಂದ ತಿಂದರೆ ಮಾತ್ರ ಅದರ ನಿಜವಾದ ರುಚಿ ಅನುಭವಕ್ಕೆ ಬರುತ್ತದೆ. ಹಾಗೆಯೇ ಆಂಗ್ಲ ಭಾಷೆಯನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸೋಣ. ಆದರೆ ನಾವೇ ಪಾಶ್ಚಾತ್ಯರಾಗಬೇಕಿಲ್ಲ. ಬೌದ್ಧಿಕ ಗುಲಾಮಿತನದ ನಿರ್ಮೂಲನೆ ಆಗಬೇಕಿದೆ ಎಂದರು.
ಗಾಂಧಿ ಏಕೆ ಪ್ರಧಾನರು ಎಂಬ ಕುರಿತಂತೆ ಪ್ರತಿಕ್ರಿಯಿಸಿದ ಅವರು, ತಪ್ಪು ಎಲ್ಲರಲ್ಲೂ ಸಹಜ. ನಾವು ಸರಿಯಾದದ್ದನ್ನು ಹುಡುಕಬೇಕು. ಭಾರತ ವಿಶ್ವಕ್ಕೆ ನೀಡಿರುವ ಕೊನೆಯ ತತ್ವವೇ ಅಹಿಂಸೆ ಮತ್ತು ಸತ್ಯ. ಗಾಂಧೀಜಿಯವರು ಇದನ್ನು ನೀಡಿದ್ದರು. ತದನಂತರ ನಮ್ಮ ದೇಶದಿಂದ ಯಾವುದೇ ತತ್ವ ಸಿದ್ಧಾಂತಗಳು ಜಗತ್ತಿಗೆ ರವಾನೆಯಾಗಿಲ್ಲ ಎಂದರು.
ಥಿಂಕರ್ಸ್ ಫೋರಮ್ ಸದಸ್ಯೆ ಸುರಭಿ ಸಂವಾದ ನಡೆಸಿಕೊಟ್ಟರು.
