ಸಮಾಲ್ಖಾ, ಹರಿಯಾಣ ಮಾ.11,2026: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಕುರಿತು ಪೂರ್ವಭಾವಿ ಪತ್ರಿಕಾಗೋಷ್ಠಿ ಸಮಾಲ್ಖಾದ ಮಾಧವ ಸೃಷ್ಟಿ ಆವರಣದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿವರ್ಷ ನಡೆಯುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಮಾರ್ಚ್ 13, 14 ಮತ್ತು 15 2026 ಹರಿಯಾಣದ ಸಮಾಲ್ಖಾದ ಮಾಧವ ಸೃಷ್ಟಿ ಆವರಣದಲ್ಲಿ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಸಭೆಯಲ್ಲಿ ಆರೆಸ್ಸೆಸ್ ಸರಸಂಘಚಾಲಕ ಡಾ|| ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಉಪಸ್ಥಿತರಿರಲಿದ್ದಾರೆ. 6 ಮಂದಿ ಸಹಸರಕಾರ್ಯವಾಹರುಗಳು, ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಲಿ, ವಿವಿಧ ಪ್ರಾಂತಗಳ ಪ್ರಾಂತ ಸಂಘಚಾಲಕರು, ಕಾರ್ಯವಾಹರು, ಪ್ರಚಾರಕರು ಭಾಗವಹಿಸಲಿದ್ದಾರೆ. ವಿಶ್ವ ಹಿಂದು ಪರಿಷದ್, ಭಾರತೀಯ ಮಜ್ದೂರ್ ಸಂಘ, ರಾಷ್ಟ್ರ ಸೇವಿಕಾ ಸಮಿತಿ ಸೇರಿದಂತೆ ವಿವಿಧ ಕ್ಷೇತ್ರದ ಸಂಘಟನೆಗಳ ಅಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಸಭೆಯಲ್ಲಿರುತ್ತಾರೆ.
ಮಾರ್ಚ್ 13, 2026ರಂದು ಬೆಳಗ್ಗೆ 9:00ಕ್ಕೆ ಭಾರತ ಮಾತೆಗೆ ಪುಷ್ಪಾರ್ಚನೆಯ ಮೂಲಕ ಸಭೆ ಪ್ರಾರಂಭವಾಗಲಿದೆ. ಈ ವರ್ಷದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಸಂಘ ಶತಾಬ್ದಿಯ ನಿಮಿತ್ತ ಆಯೋಜನೆಗೊಂಡ ಕಾರ್ಯಕ್ರಮಗಳು ಮುಖ್ಯ ವಿಷಯವಾಗಿ ಚರ್ಚೆಗೆ ಒಳಪಡಲಿದೆ. ಕಳೆದ ವರ್ಷದ ವಿಜಯದಶಮಿಯಿಂದ ವಿವಿಧ ಪ್ರಾಂತಗಳಲ್ಲಿ ಸಂಘ ಶತಾಬ್ದಿಯ ನಿಮಿತ್ತ ವಿವಿಧ ಕಾರ್ಯಕ್ರಮಗಳು ನಡೆದಿವೆ. ಆ ಕಾರ್ಯಕ್ರಮಗಳ ಕುರಿತು ವಿಶೇಷ ಅನುಭವಗಳನ್ನು ವಿವಿಧ ಪ್ರಾಂತಗಳ ಪ್ರತಿನಿಧಿಗಳು ಪ್ರಸ್ತುತ ಪಡಿಸುತ್ತಾರೆ. ಶತಾಬ್ದಿ ವರ್ಷದ ಯೋಜನೆಯಂತೆ ಉಳಿದ ಕಾರ್ಯವನ್ನು ಮುಂದುವರೆಸುವುದಕ್ಕೆ ಜನರ ಸಹಭಾಗಿತ್ವ, ಕಾರ್ಯಕರ್ತರ ಯೋಜನೆಗಳ ಕುರಿತು ವಿಚಾರ ವಿಮರ್ಶೆ ಆಗಲಿದೆ.
ದೇಶದಾದ್ಯಂತದ ಕಾರ್ಯಕರ್ತರು ಈ ವರ್ಷ ಪೂರ್ತಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಪರಿಸ್ಥಿಯ ಅನುಭವವನ್ನು ಗಳಿಸಿದ್ದಾರೆ. ಅವುಗಳ ಕುರಿತಾದ ವರ್ತಮಾನದ ಪರಿದೃಶ್ಯವನ್ನು ಅಖಿಲ ಭಾರತೀಯ, ಪ್ರಾಂತೀಯ ಸ್ತರದಲ್ಲಿ ನಡೆಯಲಿದೆ.
ಸಾಮಾಜಿಕ ಸಮರಸತೆಯ ದೃಷ್ಟಿಯಿಂದ ಅನೇಕ ಮಹಾನ್ ಪುರುಷರು ಕೊಡುಗೆಗಳನ್ನು ನೀಡಿದ್ದಾರೆ. ಸಾಮಾಜಿಕ ಸಮರಸತೆಗಾಗಿ ವಿಶೇಷ ಪ್ರಯತ್ನ ಮಾಡಿದ ಸಂತ ರವಿದಾಸರ 650ನೇ ಜಯಂತಿಯ ವರ್ಷವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ವಿಶೇಷ ಕಾರ್ಯಕ್ರಮಗಳ ಮೂಲಕ ರವಿದಾಸರ ಜೀವನವನ್ನು ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ. ಕಳೆದ ವರ್ಷ ನಡೆದ ಸಂಘದ ವಿವಿಧ ಕಾರ್ಯಕ್ರಮಗಳ ವರದಿ ಪ್ರತಿವೇದನವನ್ನು ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಪ್ರಸ್ತುತಪಡಿಸಲಿದ್ದಾರೆ.
ಸಂಘಕ್ಕೆ ಶಾಖೆಯ ಮಾಧ್ಯಮದಿಂದ ಸ್ವಯಂಸೇವಕರು ಬರುತ್ತಾರೆ. Join RSS ವೆಬ್ ಸೈಟ್ ಮೂಲಕ ಪ್ರತಿ ವರ್ಷ ಸಾವಿರಾರು ಸ್ವಯಂಸೇವಕರು ಸಂಘದ ಚಟುವಟಿಕೆಗಳಲ್ಲಿ ಕೈ ಜೋಡಿಸಲು ನೋಂದಾಯಿಸಿಕೊಳ್ಳುತ್ತಾರೆ. ಪ್ರತಿವರ್ಷ ಸರಾಸರಿ ಒಂದುವರೆ ಲಕ್ಷ ಸ್ವಯಂಸೇವಕರು ನೋಂದಾಯಿಸಿಕೊಳ್ಳುತ್ತಿದ್ದಾರೆ.2025ರಲ್ಲಿ ಜನವರಿ ತಿಂಗಳಲ್ಲಿ ಸುಮಾರು 16000 ಮಂದಿ ಸ್ವಯಂಸೇವಕರು, ಈ ವರ್ಷ ಜನವರಿ ತಿಂಗಳಲ್ಲಿ ಸುಮಾರು 26000 ಮಂದಿ ಸ್ವಯಂಸೇವಕರು ನೋಂದಾಯಿಸಿಕೊಂಡಿದ್ದಾರೆ. ಇದು ಸಂಘದಲ್ಲಿ ಪ್ರತ್ಯಕ್ಷವಾಗಿ ಮತ್ತು ಅಪ್ರತ್ಯಕ್ಷವಾಗಿ ಸಂಘದೊಂದಿಗೆ ಜೋಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಪ್ರತಿವರ್ಷ ಸಂಘದಲ್ಲಿ ಪ್ರಶಿಕ್ಷಣ ವರ್ಗಗಳ ಆಯೋಜನೆ ಆಗುತ್ತವೆ. ಸುಮಾರು 97 ವರ್ಗಗಳನ್ನು ಆಯೋಜಿಸಲಾಗುತ್ತದೆ. ಅವುಗಳಲ್ಲಿ 73 ವರ್ಗಗಳು (ಸಂಘಶಿಕ್ಷಾವರ್ಗ ಮತ್ತು ಕಾರ್ಯಕರ್ತ ವಿಕಾಸ ವರ್ಗ) 40ವರ್ಷ ಒಳಗಿನವರಿಗೆ ಆಯೋಜಿಸಲಾಗಿದ್ದರೆ, 40ವರ್ಷ ಮೇಲ್ಪಟ್ಟವರಿಗಾಗಿ ಉಳಿದ 24 ವರ್ಗಗಳನ್ನು ವಿಶೇಷ ವರ್ಗಗಳಾಗಿ ಆಯೋಜಿಸಲಾಗುತ್ತದೆ. ಅದಲ್ಲದೇ ಹೊಸಬರಿಗಾಗಿ 3ದಿನಗಳ ಸಂಘ ಪರಿಚಯವರ್ಗ ಮತ್ತು ನಂತರದ ಹಂತದಲ್ಲಿ 7 ದಿನಗಳ ಪ್ರಾಥಮಿಕ ಶಿಕ್ಷಾವರ್ಗವನ್ನು ಜಿಲ್ಲಾ ಸ್ತರದಲ್ಲಿ ದೊಡ್ಡ ಸಂಖ್ಯೆಯಲ್ಲಿ ನಡೆಯಲಿದೆ.
ಇವೆಲ್ಲವನ್ನು ಸೇರಿಸಿ ಸಂಘ ಕಾರ್ಯ ವಿಸ್ತಾರವಾಗುತ್ತಿದೆ. ವ್ಯಾಪಕವಾಗಿ ಕಾರ್ಯಕ್ರಮಗಳ ಯೋಜನೆಗಳೂ ನಡೆದಿವೆ. ಸರಸಂಘಚಾಲಕರ ದೇಶವ್ಯಾಪಿ ಪ್ರವಾಸ ನಡೆದಿತ್ತು. ಅವರು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಸಮಾಜ ಜೀವನದ ವಿವಿಧ ಕ್ಷೇತ್ರಗಳ ಹೊಸ ಹೊಸ ವ್ಯಕ್ತಿಗಳು ಇದರಲ್ಲಿ ಭಾಗಿಯಾದರು. ನಮ್ಮ ಸ್ವಯಂಸೇವಕರ ಮೂಲಕ ಅವರ ಸಂಪರ್ಕವನ್ನೂ ಮಾಡಲಾಗಿತ್ತು. ಒಂದು ವ್ಯಾಪಕ ರೂಪದಲ್ಲಿ ಶತಾಬ್ದಿ ವರ್ಷದಲ್ಲಿ ಸಂಪರ್ಕವನ್ನು ಮಾಡಲಾಗಿತ್ತು. ಸಮಾಜದ ಮೂಲಕ ವ್ಯಾಪಕ, ಸಮರ್ಥ ಸಹಭಾಗಿತ್ವ ಹೆಚ್ಚಾಗಿದೆ. ಇವುಗಳ ಕುರಿತು ವಿಮರ್ಶೆ, ಮುಂದಿನ 6 ತಿಂಗಳ ಕಾರ್ಯಕ್ರಮಗಳ ಕುರಿತು ಚರ್ಚೆ, ಮುಂದಿನ ವರ್ಷದ ಸರಸಂಘಚಾಲಕರ ದೇಶವ್ಯಾಪಿ ಪ್ರವಾಸಗಳ ಯೋಜನೆ ಆಗುತ್ತದೆ. ಮುಂದಿನ ನಮ್ಮ ಯೋಜನೆಗಳ ದಿಕ್ಕಿನ ಕುರಿತು ಚರ್ಚೆಯಾಗಲಿದೆ. ಎಲ್ಲಾ ಸ್ವಯಂಸೇವಕರಿಗೂ ನೀಡಬೇಕಾದ ನಿರ್ದೇಶನವನ್ನು ಇಲ್ಲಿಗೆ ಆಗಮಿಸಿದ ಕಾರ್ಯಕರ್ತರು ಪಡೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕ್ಷೇತ್ರದ ಸಂಘಚಾಲಕ ಪವನ್ ಜಿಂಧಲ್, ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖರಾದ ನರೇಂದ್ರ ಠಾಕೂರ್, ಪ್ರದೀಪ್ ಜೋಶಿ ಉಪಸ್ಥಿತರಿದ್ದರು.