ಬೆಂಗಳೂರು ಜುಲೈ 10, 2026: ಯುವಕರು ನಮ್ಮ ದೇಶದ ಪರಂಪರೆ ಮತ್ತು ಸಂಸ್ಕೃತಿಯ ಕುರಿತು ಹೆಮ್ಮೆಯ ಜೊತೆಗೆ ಇಪ್ಪತ್ತೊಂದನೇ ಶತಮಾನದ
ಬೆಂಗಳೂರು ಜುಲೈ 10, 2026: ಯುವಕರು ನಮ್ಮ ದೇಶದ ಪರಂಪರೆ ಮತ್ತು ಸಂಸ್ಕೃತಿಯ ಕುರಿತು ಹೆಮ್ಮೆಯ ಜೊತೆಗೆ ಇಪ್ಪತ್ತೊಂದನೇ ಶತಮಾನದ ಸವಾಲುಗಳನ್ನು ಕುರಿತು ಅವರು ಯೋಚಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕು. ಭಾರತೀಯ ಮಾದರಿಗಳ ಆಧಾರದ ಮೇಲೆ ಭಾರತದ ಬೆಳವಣಿಗೆ ಆಗಬೇಕು. ಅದರ ಕುರಿತು ಯುವಜನತೆ ಅಧ್ಯಯನ ಮಾಡಬೇಕು. ಇತಿಹಾಸದಿಂದ ಕಲಿತು, ಇಂದು ಅಳವಡಿಸಿ, ಮುಂದಿನ ಭವಿಷ್ಯವನ್ನು ಸುಂದರವಾಗಿಸಲು ಶ್ರಮವಹಿಸಬೇಕು ಎಂದು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಸುಶಾಂತ್ ಜೋಶಿ ಹೇಳಿದರು.

ರಾಜ್ಯದ ಪ್ರಮುಖ ಶೈಕ್ಷಣಿಕ ಸೇವಾ ಸಂಸ್ಥೆ ದಿಶಾಭಾರತ್ ವತಿಯಿಂದ ಆಯೋಜಿಸಲಾದ ‘ಮೈಭಾರತ್ – ಯುವ ಅಭಿಯಾನ’ದ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಎಲ್ಲಾ ಕ್ಷೇತ್ರಗಳು ಶಿಸ್ತು ಮತ್ತು ನಂಬಿಕೆಯ ಆಧಾರದ ಮೇಲೆ ನಿಲ್ಲುತ್ತದೆ. ಆದ್ದರಿಂದ ಕೆಲವು ವರ್ಷಗಳಲ್ಲಿ ಕಾಣೆಯಾಗುವ ಅಂತರಾಷ್ಟ್ರೀಯ ಸಂಸ್ಥೆಗಳ ನಡುವೆ ಭಾರತೀಯ ಉದ್ಯಮಗಳು ಶತಮಾನಗಳನ್ನು ಆಚರಿಸುತ್ತಿವೆ. ಭಕ್ತಿ, ಶ್ರದ್ಧೆ ಭಾರತದ ಪೂರ್ತಿ ತುಂಬಿವೆ. ಇದನ್ನು ಯುವಜನತೆ ಅರಿತು ಮುಂದುವರೆಯಬೇಕು. ಮೈ ಭಾರತ್ ಅಭಿಯಾನದ ಮೂಲಕ ಭಾರತೀಯ ಮೂಲದ ಸುಸ್ಥಿರ ಅಭಿವೃದ್ಧಿಯ ಚಿಂತನೆಗಳು ಯುವಜನತೆಗೆ ಸಿಗುವಂತಾಗಲಿ. ವಿಶ್ವದ ಸಮಸ್ಯೆಗಳಿಗೆ ಪರಿಹಾರಗಳನ್ನು ಭಾರತೀಯ ಚಿಂತನೆಯ ಆಧಾರದಲ್ಲಿ ಕೊಡುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿಮ್ಹಾನ್ಸ್ ನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಅರವಿಂದ ಎಚ್ ಆರ್ ಅವರು ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂದ ದೇಶ ನಮ್ಮದು. ಆದರೆ ಈ ಮೌಲ್ಯವನ್ನು ನಾವು ಮರೆತ ಕಾರಣ ದಿಶಾಭಾರತದ ಮೈಭಾರತ್ ನಂತಹ ಅಭಿಯಾನಗಳು ಆರಂಭಗೊಳ್ಳಬೇಕಾಯಿತು. ಕಲಿಯುಗದಲ್ಲಿ ಸಂಘಶಕ್ತಿಯು ಪ್ರಾಮುಖ್ಯತೆಯನ್ನು ವಹಿಸುತ್ತದೆ. ಆದ್ದರಿಂದ ಸಂಘಟಿತವಾಗಿ ದೇಶಕ್ಕಾಗಿ ಕಾರ್ಯನಿರ್ವಹಿಸಬೇಕಿದೆ. ಯುವಕರಲ್ಲಿ ರಾಷ್ಟ್ರಭಾವಜಾಗರಣವನ್ನು ಮಾಡುವ ಮೂಲಕ ಬದಲಾವಣೆಯನ್ನು ತರಬೇಕಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಮತ್ತು ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷ ವಿ ನಾಗರಾಜ್ ಮಾತನಾಡಿ ಆಹಾರ, ನಿದ್ರೆ, ಭಯ ಮತ್ತು ಸಂತಾನೋತ್ಪತ್ತಿ ಪಶು ಮತ್ತು ಮನುಷ್ಯರಲ್ಲಿ ಸಮಾನವಾದದ್ದು. ಆದರೆ ಮನುಷ್ಯನನ್ನು ಭಿನ್ನವಾಗಿಸುವುದು ಆಚರಿಸುವ ಧರ್ಮ. ದೇಶವನ್ನು ಸಂಸ್ಕೃತಿಯನ್ನು ಮತ್ತು ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದೇ ಧರ್ಮ. ಸಮಾಜದ ಋಣವು ನಮ್ಮ ಮೇಲಿದೆ. ಸಮಾಜದ ಋಣವನ್ನು ತೀರಿಸಬೇಕಾದದ್ದು ನಮ್ಮ ಕರ್ತವ್ಯ ಎನ್ನುವುದನ್ನು ಕಾಲೇಜುಗಳಲ್ಲಿ ಯುವಕರಿಗೆ ತಿಳಿಸುವ ಕಾರ್ಯವನ್ನು ದಿಶಾಭಾರತ್ ಮಾಡುತ್ತಿದೆ. ಅದರ ಭಾಗವಾಗಿ ‘ನನ್ನ ಭಾರತ’ ಅಭಿಯಾನ ಆಯೋಜನೆಗೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಿಶಾಭಾರತ್ ನ ಅಧ್ಯಕ್ಷ ರಘುರಾಮ್ ಅವರು ಮಾತನಾಡಿ ಎಲ್ಲಾ ದೇಶಗಳಿಗೂ ಅವುಗಳದ್ದೇ ಆದ ಸಂಸ್ಕೃತಿಗಳಿವೆ. ಭಾರತದ ಸಂಸ್ಕೃತಿ ಅಧ್ಯಾತ್ಮದ ತಳಹದಿಯ ಮೇಲೆ ನಿಂತಿದೆ. ದಿಶಾಭಾರತ ಅದರ ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ದೇಶವು ತನ್ನದೇ ಆದ ಸಂಸ್ಕೃತಿಯ ತಳಹದಿಯ ಮೇಲೆ ಅವಲಂಬಿತವಾಗಬೇಕಿದೆ. ತನ್ನ ಹಿರಿಮೆಯನ್ನು ಅರಿತುಕೊಳ್ಳಬೇಕಿದೆ. ನಮ್ಮ ಬಗ್ಗೆ ನಾವು ಅರಿತುಕೊಳ್ಳಲು ಪ್ರಯತ್ನಿಸಬೇಕಿದೆ. ಇವುಗಳ ಕುರಿತು ತಿಳಿಸುವ ಕೆಲಸವನ್ನು ದಿಶಾಭಾರತದ ಮೈಭಾರತ್ ಅಭಿಯಾನದ ಮೂಲಕ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ದಿಶಾಭಾರತ್ ಸಂಸ್ಥಾಪಕಿ ರೇಖಾ ರಾಮಚಂದ್ರನ್, ದಿಶಾಭಾರತ್ ನ ಟ್ರಸ್ಟಿಗಳಾದ ಪೂರ್ಣಿಮಾ ಪುರೋಹಿತ್, ಖಜಾಂಚಿ ಶ್ರೀಲತಾ, ಕ್ಷಮಾ ನರಗುಂದ, ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಣತಜ್ಞರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಬಾರಿಯ ಮೈಭಾರತ್ ಅಭಿಯಾನದಲ್ಲಿ 7 ಕಾರ್ಯಕ್ರಮಗಳು ನಡೆಯಲಿದ್ದು ಅವುಗಳು ಈ ಕೆಳಗಿನಂತಿವೆ.

- ನನ್ನ ಭಾರತ ನನ್ನ ಕರ್ತವ್ಯ – ವಿದ್ಯಾರ್ಥಿಗಳಿಂದ ಆನ್ಲೈನ್ ಭಾಷಣ (ಜುಲೈ – ಆಗಸ್ಟ್)
- ನನ್ನ ಭಾರತ ಆನ್ಲೈನ್ ಉಪನ್ಯಾಸ ಮಾಲಿಕೆ (ಆಗಸ್ಟ್ 01 – ಆಗಸ್ಟ್ 15)
- ನನ್ನ ಭಾರತ ಕಾನ್ಕ್ಲೇವ್ – ಆಗಸ್ಟ್ – 1, 2026
- ವಾಕಥಾನ್- ಆಗಸ್ಟ್ 9 (12 ಕಡೆಗಳಲ್ಲಿ)
- ಅಂತರ ಕಾಲೇಜು ಸ್ಪರ್ಧೆಗಳು – ಆಗಸ್ಟ್ 12, 2026
- ‘ವಂದೇಮಾತರಂ – 150’ ವಿಷಯದ ಕುರಿತು ಕಾಲೇಜು ಉಪನ್ಯಾಸ ಕಾರ್ಯಕ್ರಮಗಳು
- ಚಾಂಪಿಯನ್ಸ್ ಆಫ್ ಚೇಂಜ್ (ಜುಲೈ – ಆಗಸ್ಟ್)