ಇಂದು ಜಯಂತಿ

ಲೇಖನ: ಶ್ರೀಮತಿ ತೇಜಸ್ವಿನಿ ಸಂದೀಪ್, ಶಿವಮೊಗ್ಗ

ಭಾರತೀಯ ಇತಿಹಾಸದಲ್ಲಿ ಸಾಮಾನ್ಯ ಕುಟುಂಬದಿಂದ ಬಂದು ತನ್ನ ಶೌರ್ಯ, ಧೈರ್ಯ ಮತ್ತು ಸಮರ್ಥ ಸೇನಾ ನೇತೃತ್ವದ ಮೂಲಕ ಮಹಾನ್ ವ್ಯಕ್ತಿತ್ವವಾಗಿ ಹೊರಹೊಮ್ಮಿದ ಅನೇಕ ಮಹನೀಯರು ಇದ್ದಾರೆ. ಅಂತಹ ಮಹನೀಯರಲ್ಲಿ ಪ್ರಮುಖ ಸ್ಥಾನ ಪಡೆದವರು ಮಲ್ಹಾರ್ ರಾವ್ ಹೋಳ್ಕರ್ (1693–1766). ಹಿಂದವಿ ಸಾಮ್ರಾಜ್ಯದ ವಿಸ್ತರಣೆ, ಶಕ್ತಿಶಾಲಿ ಆಡಳಿತ ವ್ಯವಸ್ಥೆ ಮತ್ತು ಪ್ರಜಾಹಿತದ ಕಾರ್ಯಗಳ ಮೂಲಕ ಅವರು ಇತಿಹಾಸದಲ್ಲಿ ಅಜರಾಮರ ಸ್ಥಾನವನ್ನು ಗಳಿಸಿದ್ದಾರೆ. ಇಂದೋರ್‌ನ ಹೋಳ್ಕರ್ ರಾಜವಂಶದ ಸ್ಥಾಪಕರಾಗಿ ಅವರು ಭಾರತೀಯ ಇತಿಹಾಸದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.

1693ರ ಮಾರ್ಚ್ 16ರಂದು ಮಹಾರಾಷ್ಟ್ರದ ಧನಗರ್ ಸಮುದಾಯದ ಕುಟುಂಬದಲ್ಲಿ ಮಲ್ಹಾರ್ ರಾವ್ ಜನಿಸಿದರು. ಬಾಲ್ಯದಿಂದಲೇ ಧೈರ್ಯ, ಚುರುಕುತನ ಮತ್ತು ಪರಿಶ್ರಮದ ಗುಣಗಳನ್ನು ಹೊಂದಿದ್ದ ಅವರು ಸೈನಿಕ ಜೀವನದತ್ತ ಆಕರ್ಷಿತರಾದರು. ಆ ಕಾಲದಲ್ಲಿ ಮರಾಠಾ ಸಾಮ್ರಾಜ್ಯ ತನ್ನ ಪ್ರಭಾವವನ್ನು ಭಾರತದ ವಿವಿಧ ಭಾಗಗಳಿಗೆ ವಿಸ್ತರಿಸುತ್ತಿದ್ದ ಸಂದರ್ಭವಾಗಿತ್ತು. ಈ ಹಿನ್ನೆಲೆಯಲ್ಲಿ ಮಲ್ಹಾರ್ ರಾವ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶವನ್ನು ಪಡೆದುಕೊಂಡರು. ಪೇಶ್ವೆ ಬಾಜಿರಾವ್ ಅವರ ಸೇನೆಗೆ ಸೇರಿರುವುದು ಮಲ್ಹಾರ್ ರಾವ್ ಅವರ ಜೀವನದ ಮಹತ್ವದ ತಿರುವಾಗಿತ್ತು.

1724ರಲ್ಲಿ ಅವರು 500 ಕುದುರೆಗಳ ಪಡೆಯ ಅಧಿಪತಿಯಾಗಿ ನೇಮಕಗೊಂಡರು. ತಮ್ಮ ಶೌರ್ಯ, ಚತುರ ಯುದ್ಧತಂತ್ರ ಮತ್ತು ಸಮರ್ಥ ಸೇನಾ ನೇತೃತ್ವದ ಮೂಲಕ ಅವರು ಶೀಘ್ರದಲ್ಲೇ ಪೇಶ್ವೆಯ ವಿಶ್ವಾಸವನ್ನು ಗಳಿಸಿದರು. ಮೊಘಲ್ ಸಾಮ್ರಾಜ್ಯದ ವಿರುದ್ಧ ನಡೆದ ಅನೇಕ ಯುದ್ಧಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡು ಮರಾಠಾ ಸಾಮ್ರಾಜ್ಯದ ಪ್ರಭಾವವನ್ನು ಉತ್ತರ ಭಾರತದಲ್ಲಿ ವಿಸ್ತರಿಸಲು ಮಹತ್ವದ ಪಾತ್ರ ವಹಿಸಿದರು.

ಮಲ್ಹಾರ್ ರಾವ್ ಹೋಳ್ಕರ್ ಅವರ ಯುದ್ಧತಂತ್ರಗಳಲ್ಲಿ ಗೆರಿಲ್ಲಾ ಶೈಲಿ ಪ್ರಮುಖವಾಗಿತ್ತು. ವೇಗದ ದಾಳಿ, ಅಚ್ಚರಿಯ ದಾಳಿ ಹಾಗೂ ತಕ್ಷಣದ ಹಿಂತಿರುಗುವಿಕೆಯಂತಹ ತಂತ್ರಗಳನ್ನು ಅವರು ಅತ್ಯಂತ ಚಾತುರ್ಯದಿಂದ ಬಳಸುತ್ತಿದ್ದರು. ಈ ತಂತ್ರಗಳಿಂದ ಅವರು ಅನೇಕ ಯುದ್ಧಗಳಲ್ಲಿ ಜಯ ಸಾಧಿಸಿ ಮರಾಠಾ ಸೇನೆಯ ಕೀರ್ತಿಯನ್ನು ಹೆಚ್ಚಿಸಿದರು.

1732ರಲ್ಲಿ ಮಲ್ಹಾರ್ ರಾವ್ ಹೋಳ್ಕರ್ ಅವರಿಗೆ ಮಾಳ್ವಾ ಪ್ರದೇಶದ ಸುಬೇದಾರರ ಸ್ಥಾನ ದೊರೆಯಿತು. ಅವರು ಇಂದೋರ್ ನಗರವನ್ನು ತಮ್ಮ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡು ಹೋಳ್ಕರ್ ರಾಜವಂಶವನ್ನು ಸ್ಥಾಪಿಸಿದರು. ಅವರ ಆಡಳಿತದಲ್ಲಿ ಇಂದೋರ್ ನಗರವು ವ್ಯಾಪಾರ, ಕೃಷಿ ಮತ್ತು ಆಡಳಿತದ ದೃಷ್ಟಿಯಿಂದ ವೇಗವಾಗಿ ಅಭಿವೃದ್ಧಿ ಕಂಡಿತು. ಶಿಸ್ತಿನ ಆಡಳಿತ ಮತ್ತು ಜನಪರ ನೀತಿಗಳ ಮೂಲಕ ಅವರು ತಮ್ಮ ರಾಜ್ಯವನ್ನು ಬಲಿಷ್ಠವಾಗಿ ರೂಪಿಸಿದರು.

1761ರಲ್ಲಿ ನಡೆದ ಮೂರನೇ ಪಾಣಿಪತ್ ಯುದ್ಧ ಮರಾಠಾ ಸಾಮ್ರಾಜ್ಯದ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿತ್ತು. ಈ ಯುದ್ಧದಲ್ಲಿ ಮಲ್ಹಾರ್ ರಾವ್ ಹೋಳ್ಕರ್ ಪ್ರಮುಖ ಮರಾಠ ನಾಯಕರಾಗಿ ಭಾಗವಹಿಸಿದರು. ಯುದ್ಧದ ಫಲಿತಾಂಶ ಮರಾಠರಿಗೆ ಅನುಕೂಲಕರವಾಗದಿದ್ದರೂ ಅವರ ಧೈರ್ಯ ಮತ್ತು ನಾಯಕತ್ವ ಎಲ್ಲರ ಗೌರವಕ್ಕೆ ಪಾತ್ರವಾಯಿತು.

ಮಲ್ಹಾರ್ ರಾವ್ ಹೋಳ್ಕರ್ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಮಹತ್ತಾಗಿಸಿದ ಸಂಗತಿಯೆಂದರೆ ಮಹಿಳೆಯರ ಸಾಮರ್ಥ್ಯದ ಮೇಲಿನ ಅವರ ವಿಶ್ವಾಸ. ತಮ್ಮ ಸೊಸೆ ಅಹಲ್ಯಾಬಾಯಿ ಹೋಳ್ಕರ್ ಅವರಲ್ಲಿದ್ದ ಧರ್ಮನಿಷ್ಠೆ, ಬುದ್ಧಿವಂತಿಕೆ ಮತ್ತು ದೂರದೃಷ್ಟಿಯನ್ನು ಅವರು ಆರಂಭದಲ್ಲೇ ಗುರುತಿಸಿದ್ದರು. ತಮ್ಮ ಮಗ ಖಂಡೇರಾವ್ ಹೋಳ್ಕರ್ ಯುದ್ಧದಲ್ಲಿ ಮೃತಪಟ್ಟ ನಂತರ ಅಹಲ್ಯಾಬಾಯಿ ಸತಿ ಆಗುವುದನ್ನು ಅವರು ದೃಢವಾಗಿ ತಡೆದು ಮಾನವೀಯತೆ ಮತ್ತು ಜೀವನದ ಮೌಲ್ಯವನ್ನು ಉಳಿಸಿದರು. ಅವರು ತಮ್ಮ ಸೊಸೆ ಅವರನ್ನು ಗಂಡು ಸಂತಾನದಂತೆ ಸಮಾನ ಗೌರವದಿಂದ ನೋಡಿಕೊಂಡು, ರಾಜ್ಯಕಾರ್ಯ, ಧರ್ಮನಿಷ್ಠೆ ಮತ್ತು ಆಡಳಿತ ನಡೆಸುವ ಎಲ್ಲಾ ವಿದ್ಯೆಗಳನ್ನು ಕಲಿಸಿ ಬೆಳೆಸಿದರು. ಅವರಲ್ಲಿ ಧೈರ್ಯ, ಜವಾಬ್ದಾರಿ ಮತ್ತು ಪ್ರಜಾಹಿತದ ಮನೋಭಾವವನ್ನು ಬೆಳೆಸುವಂತೆ ಮಾರ್ಗದರ್ಶನ ನೀಡಿದರು. ನಂತರ ಅವರು ಆಡಳಿತ, ನ್ಯಾಯವ್ಯವಸ್ಥೆ ಮತ್ತು ಪ್ರಜಾಸೇವೆಯ ವಿಷಯಗಳಲ್ಲಿ ಅಹಲ್ಯಾಬಾಯಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ಸಮರ್ಥ ಆಡಳಿತಗಾರ್ತಿಯಾಗಿ ರೂಪಿಸಿದರು. ಮುಂದಿನ ದಿನಗಳಲ್ಲಿ ಅಹಲ್ಯಾಬಾಯಿ ಹೋಳ್ಕರ್ ಆದರ್ಶ ಮತ್ತು ಜನಪರ ಆಡಳಿತಗಾರ್ತಿಯಾಗಿ ಪ್ರಸಿದ್ಧರಾದದ್ದು ಮಲ್ಹಾರ್ ರಾವ್ ಅವರ ದೂರದೃಷ್ಟಿಯ ಫಲವೆಂದು ಹೇಳಬಹುದು.

ಅವರು ಕೇವಲ ಶೌರ್ಯವಂತ ಯೋಧರಷ್ಟೇ ಅಲ್ಲದೆ ಸಮರ್ಥ ಆಡಳಿತಗಾರ ಮತ್ತು ಸಮಾಜಹಿತಚಿಂತಕರೂ ಆಗಿದ್ದರು. ಪ್ರಜೆಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡರು. ಆಭರಣಕಾರರು ಮತ್ತು ವಿವಿಧ ಕೈಗಾರಿಕೆಗಳಲ್ಲಿ ತೊಡಗಿದ್ದವರಿಗೆ ಪ್ರತ್ಯೇಕ ಬಡಾವಣೆಗಳನ್ನು ನಿರ್ಮಿಸಿ ಅವರಿಗೆ ಸ್ಥಿರವಾದ ಜೀವನೋಪಾಯದ ಅವಕಾಶ ಕಲ್ಪಿಸಿದರು. ರಾಜ್ಯದ ರಕ್ಷಣೆಯಲ್ಲಿ ತೊಡಗಿದ್ದ ಸೈನಿಕರಿಗಾಗಿ ಸಹ ಪ್ರತ್ಯೇಕ ಬಡಾವಣೆಗಳನ್ನು ನಿರ್ಮಿಸಿ ಅವರ ಕುಟುಂಬಗಳ ಸುರಕ್ಷತೆ ಮತ್ತು ನೆಲೆಸುವ ವ್ಯವಸ್ಥೆಯನ್ನು ಒದಗಿಸಿದರು. ಮಾಳ್ವಾ ಪ್ರಾಂತ್ಯದಲ್ಲಿ ಕೃಷಿ ಮತ್ತು ವ್ಯಾಪಾರಕ್ಕೆ ಉತ್ತೇಜನ ನೀಡುವ ಮೂಲಕ ಆರ್ಥಿಕ ಸ್ಥಿರತೆಯನ್ನು ತಂದರು. ರೈತರಿಗೆ ನೀರಾವರಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಂತೆ ಪ್ರೋತ್ಸಾಹಿಸಿ ಕೃಷಿ ಉತ್ಪಾದನೆ ಹೆಚ್ಚಾಗುವಂತೆ ಕ್ರಮಗಳನ್ನು ಕೈಗೊಂಡರು. ವ್ಯಾಪಾರಿಗಳು ಸುಗಮವಾಗಿ ವ್ಯವಹಾರ ನಡೆಸಲು ಮಾರುಕಟ್ಟೆಗಳು ಮತ್ತು ವ್ಯಾಪಾರ ಮಾರ್ಗಗಳನ್ನು ಅಭಿವೃದ್ಧಿಪಡಿಸಿದರು. ಜೊತೆಗೆ ಮಹಿಳೆಯರಿಗೂ ಆಸ್ತಿ ಹಕ್ಕು ದೊರಕುವಂತೆ ಕ್ರಮ ಕೈಗೊಂಡು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಬಲಪಡಿಸಿದರು. ಧರ್ಮ, ನೀತಿ ಮತ್ತು ಪ್ರಜಾಹಿತವನ್ನು ಆಧಾರವನ್ನಾಗಿಸಿಕೊಂಡು ಆಡಳಿತ ನಡೆಸಿದ ಅವರ ಕಾರ್ಯಗಳು ಜನಮನಗಳಲ್ಲಿ ಅಪಾರ ಗೌರವವನ್ನು ಗಳಿಸಿವೆ. ಈ ಕಾರಣದಿಂದಲೇ ಮಲ್ಹಾರ್ ರಾವ್ ಹೋಳ್ಕರ್ ಅವರು ದೂರದೃಷ್ಟಿಯುಳ್ಳ, ಪ್ರಜಾಪ್ರೇಮಿ ಮತ್ತು ಸಮಾಜ ಸುಧಾರಕ ಆಡಳಿತಗಾರರಾಗಿ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.

1766ರ ಮೇ 20ರಂದು ಮಲ್ಹಾರ್ ರಾವ್ ಹೋಳ್ಕರ್ ಅವರ ನಿಧನ ಸಂಭವಿಸಿತು. ಆದರೆ ಅವರ ಸಾಧನೆಗಳು ಮತ್ತು ಸೇವೆಗಳು ಭಾರತೀಯ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿವೆ. ಮರಾಠಾ ಸಾಮ್ರಾಜ್ಯದ ವಿಸ್ತರಣೆ, ಇಂದೋರ್ ರಾಜ್ಯದ ಸ್ಥಾಪನೆ ಮತ್ತು ಸಮರ್ಥ ಆಡಳಿತ ವ್ಯವಸ್ಥೆ ನಿರ್ಮಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ.
ಮಲ್ಹಾರ್ ರಾವ್ ಹೋಳ್ಕರ್ ಅವರ ಜೀವನವು ಪರಿಶ್ರಮ, ಧೈರ್ಯ ಮತ್ತು ದೇಶಸೇವೆಯ ಉತ್ಕೃಷ್ಟ ಮಾದರಿಯಾಗಿದೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬನು ತನ್ನ ಸಾಮರ್ಥ್ಯ, ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಮಹಾನ್ ನಾಯಕನಾಗಬಹುದು ಎಂಬುದನ್ನು ಅವರು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಆದ್ದರಿಂದ ಅವರ ವ್ಯಕ್ತಿತ್ವ ಮತ್ತು ಸಾಧನೆಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿ ಉಳಿದಿವೆ.

Leave a Reply

Your email address will not be published.

This site uses Akismet to reduce spam. Learn how your comment data is processed.