ಬೆಂಗಳೂರು, ಮಾರ್ಚ್ 17, 2026: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ನೀತಿ ನಿರೂಪಕ ಮಹಾಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಕುರಿತು ಪತ್ರಿಕಾಗೋಷ್ಠಿ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ ನ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು

- ವಾರ್ಷಿಕ ವರದಿಯ ಪ್ರಮುಖ ಅಂಶಗಳು
ಆರೆಸ್ಸೆಸ್ ರಾಷ್ಟ್ರೀಯ ಶಾಖಾ ದತ್ತಾಂಶ 2026: ದೇಶಾದ್ಯಂತ ಒಟ್ಟು 55,683 ಸ್ಥಾನಗಳಲ್ಲಿ 88,949 ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳು ನಡೆಯುತ್ತಿದ್ದು ಕಳೆದ ವರ್ಷಕ್ಕಿಂತ 5820 ಶಾಖೆಗಳು ಹೆಚ್ಚಾಗಿವೆ. ವಾರಕ್ಕೊಮ್ಮೆ ನಡೆಯುವ ಮಿಲನ್ ಸಂಖ್ಯೆ ಕಳೆದ ಬಾರಿಗಿಂತ 459 ಹೆಚ್ಚಾಗಿದ್ದು, ಪ್ರಸ್ತುತ ದೇಶವ್ಯಾಪಿ 32,606 ಮಿಲನ್ ಗಳು ಜರುಗುತ್ತಿವೆ. ತಿಂಗಳಿಗೊಮ್ಮೆ ನಡೆಯುವ ಮಂಡಲಿಗಳು ಒಟ್ಟು 13,211 ಇವೆ. ಒಟ್ಟು 1,34,766 ಶಾಖೆ, ಮಿಲನ್ ಮತ್ತು ಮಂಡಲಿಗಳು ನಡೆಯುತ್ತಿವೆ.

ಕಾರ್ಯಕರ್ತ ಪ್ರಶಿಕ್ಷಣ ವರ್ಗ: ದೇಶಾದ್ಯಂತ ಕಾರ್ಯಕರ್ತರ ಪ್ರಶಿಕ್ಷಣ ವರ್ಗಗಳು ನಡೆದಿದ್ದು ಒಟ್ಟು 63 ಸಂಘ ಶಿಕ್ಷಾ ವರ್ಗಗಳಲ್ಲಿ 14,024 ಶಿಕ್ಷಾರ್ಥಿಗಳು ಭಾಗವಹಿಸಿದ್ದರು. 11 ಕಾರ್ಯಕರ್ತ ವಿಕಾಸ ವರ್ಗ – 1 (ಸಾಮಾನ್ಯ) ವರ್ಗಗಳು ನಡೆದಿದ್ದು 2401 ಶಿಕ್ಷಾರ್ಥಿಗಳು ಭಾಗವಹಿಸಿದ್ದರೆ, 11 ಕಾರ್ಯಕರ್ತ ವಿಕಾಸ ವರ್ಗ – 1 (ವಿಶೇಷ) ನಡೆದಿದ್ದು 2067 ಶಿಕ್ಷಾರ್ಥಿಗಳು ಭಾಗವಹಿಸಿದ್ದರು. ನಾಗಪುರದಲ್ಲಿ ನಡೆದ ಕಾರ್ಯಕರ್ತ ವಿಕಾಸ ವರ್ಗ – 2 (ಸಾಮಾನ್ಯ) ದಲ್ಲಿ ಒಟ್ಟು 831 ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದರು.
ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಗಣ್ಯರಿಗೆ ಶ್ರದ್ಧಾಂಜಲಿ ಸಂತಾಪ: ಪ್ರತಿವರ್ಷ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ರಾಷ್ಟ್ರಕ್ಕೆ ಮತ್ತು ಸಮಾಜಕ್ಕೆ ಕೊಡುಗೆಯನ್ನು ನೀಡಿ ನಮ್ಮನ್ನಗಲಿದ ನಾಡಿನ ಪ್ರಮುಖರಿಗೆ, ಆರೆಸ್ಸೆಸ್ ಹಿರಿಯ ಕಾರ್ಯಕರ್ತರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಗುತ್ತದೆ. ಈ ಬಾರಿ ವಿದರ್ಭದ ಸದ್ಗುರುದಾಸ ಮಹಾರಾಜ್, ರಾಷ್ಟ್ರದ ಮಾಜಿ ಗೃಹಮಂತ್ರಿ ಶಿವರಾಜ್ ಪಾಟೀಲ್, ಪುರಾತತ್ವ ಇಲಾಖೆಯ ಅಧ್ಯಕ್ಷರಾಗಿದ್ದ ಪದ್ಮಭೂಷಣ ಕೆ ಎನ್ ದೀಕ್ಷಿತ್, ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್, ನಟ ಧರ್ಮೇಂದ್ರ, ನಿರ್ಮಾಪಕ ಎವಿಎನ್ ಸರವಣನ್, ಮಾಜಿ ಕೇಂದ್ರ ಸಚಿವ ಕಬೀಂದ್ರ ಪುರ್ಕಾಯಸ್ಥಾ, ಕೇರಳದ ಸಿನೆಮಾ ನಟ ಶ್ರೀನಿವಾಸನ್, ಮಿಜೋರಾಂನ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್, ಓಡಿಶಾದ ಭಾಷಾತಜ್ಞೆ ಮಾಲತಿ ಮುರ್ಮು, ಉತ್ತರ ಅಸ್ಸಾಂನ ಕಲಾವಿದ ಸಮರ್ ಹಜಾರಿಕಾ, ಬಂಗಾಳದ ಸಾಹಿತಿ ಮಣಿಶಂಕರ್ ಮುಖರ್ಜಿ ಸೇರಿದಂತೆ ಅನೇಕ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಕರ್ನಾಟಕದ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ವಿಜ್ಞಾನಿ ಡಾ. ಮಾಧವ ಗಾಡ್ಗೀಲ್, ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ ಭೀಮಣ್ಣ ಖಂಡ್ರೆ, ಶಿಕ್ಷಣತಜ್ಞ ಮತ್ತು ಉದ್ಯಮಿ ಡಾ. ಎನ್ ವಿನಯ ಹೆಗ್ಡೆ, ಹಿರಿಯ ರಾಜಕಾರಣಿ ಅಖಿಲ ಭಾರತೀಯ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಹಿಂದುಸ್ಥಾನಿ ಗಾಯಕ ಅಶೋಕ ಹುಗ್ಗಣ್ಣವರ್, ಹುಬ್ಬಳ್ಳಿಯ ಉದ್ಯಮಿ ಭರತ್ ಖಿಮ್ಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
2. ಕರ್ನಾಟಕದ ವಿಶೇಷ ವರದಿಗಳು
- ಕರ್ನಾಟಕ ದಕ್ಷಿಣ ಪ್ರಾಂತದಲ್ಲಿ 18ರಿಂದ 25 ವರ್ಷದೊಳಗಿನ ಯುವಕರಿಗಾಗಿ ನವೆಂಬರ್ 16-23ರೊಳಗೆ ‘ನವೋನ್ಮೇಷ ಕಾರ್ಯಕ್ರಮ’ 48 ಸ್ಥಾನಗಳಲ್ಲಿ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಯುವಕರಿಗೆ ಸಂಘದ ಕುರಿತು ಮಾಹಿತಿಯನ್ನು ನೀಡಲಾಯಿತು ಮತ್ತು ‘ನಾವು ಏನು ಮಾಡಬಹುದು?’ ಎಂಬುದರ ಕುರಿತು ಚರ್ಚೆಯಾಯಿತು. ದೀಪೋತ್ಸವ, ಕಬಡ್ಡಿ ಸ್ಪರ್ಧೆ, ಬೈಕ್ ರ್‍ಯಾಲಿ ಸೇರಿದಂತೆ 17 ವಿವಿಧ ಉಪಕ್ರಮಗಳ ಮಾಧ್ಯಮದೊಂದಿಗೆ ಯುವಕರ ಸಂಪರ್ಕ ಮಾಡಲಾಯಿತು. 13 ಸ್ಥಾನಗಳಲ್ಲಿ ‘JOIN RSS’ ಅಭಿಯಾನ ಮತ್ತು 2815 ಸಣ್ಣಸಭೆಗಳು ನಡೆದವು. ಕಾರ್ಯಕ್ರಮದಲ್ಲಿ ಭಾರತದ ಮಹಾನತೆಯ ಕುರಿತಾದ ಪ್ರದರ್ಶಿನಿಯನ್ನು ಹಾಕಲಾಗಿತ್ತು. ಅನೇಕ ಸ್ಥಳಗಳಲ್ಲಿ ರಾಣಿ ಅಬ್ಬಕ ಅವರ ಕುರಿತಾದ ವೀಡಿಯೋ ಪ್ರದರ್ಶಿಸಲಾಯಿತು, ಮಾತೃಭಾಷೆಯಲ್ಲಿ ಸಹಿ ಅಭಿಯಾನ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 8799 ವಿದ್ಯಾರ್ಥಿಗಳು ಮತ್ತು 3973 ತರುಣ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿದ್ದರು.
- ಕೋಲಾರ ವಿಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾರೀರಿಕ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿದರು. ಪ್ರತಿ ತಾಲೂಕಿಗೂ ನಿರಂತರವಾಗಿ ಅಭ್ಯಾಸ ಇರುವ ಒಂದು ಶಾರೀರಿಕ ವಿಷಯವನ್ನು ನೀಡಲಾಗಿತ್ತು. ನವೆಂಬರ್ 30, 2025ರಂದು ದೊಡ್ಡಬಳ್ಳಾಪುರದಲ್ಲಿ ನಡೆದ ಪ್ರದರ್ಶನದಲ್ಲಿ ಯೋಗಾಸನ, ಸಮತಾ ಮತ್ತು ಇತರೆ ಶಾರೀರಿಕ ಪ್ರದರ್ಶನಗಳನ್ನು ಪ್ರದರ್ಶಿಸಿದರು. ಕಾರ್ಯಕರ್ತರು ಸಾಂಘಿಕ್ ಶ್ಲೋಕವನ್ನು ಸಾಮೂಹಿಕ ಕಂಠಪಾಠಮಾಡಿ ಹಾಡಿದರು. 93 ಮಂದಿ ಕಾರ್ಯಕರ್ತರು ಭಾಗವಹಿಸಿದರು.
- ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಉಪಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನು ಆಹ್ವಾನಿಸಲಾಗಿದ್ದ ಬೃಹತ್ ಸಂವಾದ ಕಾರ್ಯಕ್ರಮ ಧಾರವಾಡದ ಗರಗದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ 31 ಜನವರಿ 2026ರಂದು ಆಯೋಜಿಸಲಾಗಿತ್ತು. 191 ಸ್ಥಾನಗಳಿಂದ 540 ಸಂಸ್ಥೆಗಳಿಂದ 920 ಪ್ರಮುಖರು ಭಾಗವಹಿಸಿದರು.
- ವಿಜಯಪುರಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಅರ್ ಅವರ ಭೇಟಿಯ ಸಂದರ್ಭದಲ್ಲಿ ‘ಯುವ ಸಾಧು ಸಂತ ಸಂವಾದ’ ಕಾರ್ಯಕ್ರಮವನ್ನು ಡಿಸೆಂಬರ್ 16-17, 2025ರಂದು ಆಯೋಜಿಸಲಾಗಿತ್ತು. ವಿವಿಧ ಪಂಥಗಳ 230 ಮಂದಿ ಸಂತರು ಭಾಗವಹಿಸಿದ್ದರು.
3. ಸರಸಂಘಚಾಲಕರ ಬೆಂಗಳೂರು ಕಾರ್ಯಕ್ರಮ:ಶತಾಬ್ದಿಯ ನಿಮಿತ್ತ ದೇಶದ 4 ಮಹಾನಗರಗಳಲ್ಲಿ ಸರಸಂಘಚಾಲಕರ ವ್ಯಾಖ್ಯಾನಮಾಲೆ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಕಾರ್ಯಕ್ರಮವು ನವೆಂಬರ್ 8 ಮತ್ತು 9, 2025ರಂದು ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಭಾಂಗಣದಲ್ಲಿ ನಡೆಯಿತು.ವಿಜ್ಞಾನಿಗಳು, ಶಿಕ್ಷಣತಜ್ಞರು, ಚಿಂತಕರು, ಕ್ರೀಡಾಪಟುಗಳು, ಕಲಾವಿದರು ಸೇರಿದಂತೆ 13 ವಿವಿಧ ಕ್ಷೇತ್ರಗಳಿಂದ ಗಣ್ಯರನ್ನು ಆಹ್ವಾನಿಸಲಾಗಿತ್ತು. ನವೆಂಬರ್ 8, 2025ರಂದು ಎರಡು ಅವಧಿಗಳಲ್ಲಿ ಸರಸಂಘಚಾಲಕರು ವ್ಯಾಖ್ಯಾನಮಾಲೆಯಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ನವೆಂಬರ್ 9, 2025ರಂದು ಪ್ರಶ್ನೋತ್ತರದಲ್ಲಿ ಭಾಗವಹಿಸಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಒಟ್ಟು ಸಂಖ್ಯೆ 1228.
4. ಶತಾಬ್ದಿ ಕಾರ್ಯಕ್ರಮಗಳ ರಾಷ್ಟ್ರೀಯ ಅಂಕಿ ಅಂಶ
ವಿಜಯದಶಮಿ ಉತ್ಸವ ಮತ್ತು ಪಥಸಂಚಲನ: ದೇಶಾದ್ಯಂತ ಒಟ್ಟು ವಿಜಯದಶಮಿ ಉತ್ಸವಗಳು 62,555. ಭಾಗವಹಿಸಿದ ತರುಣರು 27,08,186, ಬಾಲಕರು 5,36,955. ಭಾಗವಹಿಸಿದವರ ಒಟ್ಟು ಸಂಖ್ಯೆ 32,45,141. ಒಟ್ಟು 22,656 ಸ್ಥಾನಗಳಲ್ಲಿ ವಿಜಯದಶಮಿ ಸಂಚಲನ ನಡೆಯಿತು. 21,62,155 ತರುಣರು, 3,83,663 ಬಾಲಕರು ಭಾಗವಹಿಸಿದ್ದಾರೆ. ವಿಜಯದಶಮಿ ಪಥಸಂಚಲನದಲ್ಲಿ ಭಾಗವಹಿಸಿದ ಒಟ್ಟು ಸಂಖ್ಯೆ 25,45,818.
ಗೃಹಸಂಪರ್ಕ ಅಭಿಯಾನ: ಸಂಘ ಶತಾಬ್ದಿಯ ನಿಮಿತ್ತ ಕೈಗೊಂಡ ಗೃಹಸಂಪರ್ಕ ಅಭಿಯಾನದಲ್ಲಿ ಒಟ್ಟು 3,89,465 ಗ್ರಾಮಗಳು, 31143 ವಸತಿಗಳಲ್ಲಿ 10, 02, 12,162 ಮನೆಗಳನ್ನು ಸಂಪರ್ಕಿಸಲಾಗಿದೆ. 9,11,88,203 ಕರಪತ್ರಗಳನ್ನು ಮತ್ತು 84,13,552 ‘ಸಂಘಯಾತ್ರೆ’ ಕಿರುಪುಸ್ತಕವನ್ನು ಮಾರಾಟ ಮಾಡಲಾಗಿದೆ.
ಹಿಂದು ಸಮಾಜೋತ್ಸವ: ಸಂಘದ 46 ಪ್ರಾಂತಗಳಲ್ಲಿ 37 ಪ್ರಾಂತಗಳ ವರದಿಯನ್ವಯ ಒಟ್ಟು 23143 ಮಂಡಲ ಸಮ್ಮೇಳನಗಳು, 13905 ವಸತಿ ಸಮ್ಮೇಳನಗಳು ನಡೆದಿವೆ. ಈ ಸಮ್ಮೇಳನಗಳಲ್ಲಿ 1,55,95,124 ಮಹಿಳೆಯರು, 1,93,40,087 ಪುರುಷರು ಸೇರಿದಂತೆ ಒಟ್ಟು 3, 49,35,211 ಮಂದಿ ಭಾಗವಹಿಸಿದ್ದರು.
ಪಂಚಪರಿವರ್ತನೆಯ 5 ವಿಷಯಗಳಾದ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ, ನಾಗರಿಕ ಶಿಷ್ಟಾಚಾರ ವಿಷಯಗಳಿಗೆ ಒತ್ತುಕೊಡಲಾಗಿದೆ. ಸಮಾಜದಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿದೆ.
ಶತಾಬ್ದಿ ವರ್ಷದ ಕಾರ್ಯಕ್ರಮಗಳಲ್ಲಿ ಇನ್ನುಮುಂದೆ ಎಪ್ರಿಲ್-ಮೇ ತಿಂಗಳಲ್ಲಿ ಸಾಮಾಜಿಕ ಸದ್ಭಾವ ಗೋಷ್ಠಿ ಹಾಗೂ ಜೂನ್-ಜುಲೈ ತಿಂಗಳಲ್ಲಿ ಪ್ರಮುಖ ನಾಗರಿಕ ಗೋಷ್ಠಿ ನಡೆಯಲಿದೆ. ಸೆಪ್ಟೆಂಬರ್ 20-27ರವರೆಗೆ ಶಾಖಾ ಸಪ್ತಾಹವನ್ನು ಆಯೋಜಿಸಲಾಗಿದೆ.
ಭೌಗೋಳಿಕ ಪುನರ್ರಚನೆ: ಸಂಘಕಾರ್ಯದ ವಿಸ್ತಾರ ಹಾಗೂ ಗುಣಾತ್ಮಕತೆಯ ವೃದ್ಧಿಯನ್ನು ಗಮನದಲ್ಲಿರಿಸಿ ಶತಾಬ್ದಿ ವರ್ಷದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಭೌಗೋಳಿಕ ರಚನೆಯಲ್ಲಿ ಬದಲಾವಣೆ ಇರಲಿದೆ. ಇದುವರೆಗೆ ಅಸ್ತಿತ್ವದಲ್ಲಿದ್ದ ಪ್ರಾಂತ ರಚನೆಯ ಬದಲು ಅದಕ್ಕಿಂತಲೂ ಚಿಕ್ಕದಾದ ‘ಸಂಭಾಗ’ ಎಂಬ ನೂತನ ರಚನೆಯು ಕಾರ್ಯನಿರ್ವಹಿಸಲಿದೆ. ಪ್ರಸ್ತುತ 46 ಪ್ರಾಂತಗಳಿದ್ದು ಈ ರಚನೆಯ ಬದಲು ಮುಂದೆ ದೇಶಾದ್ಯಂತ 85 ಸಂಭಾಗಗಳು ಇರಲಿವೆ. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಎಂಬ 4 ಸಂಭಾಗಗಳ ರಚನೆಯಾಗಲಿದೆ. ಸರ್ಕಾರಿ ವ್ಯವಸ್ಥೆಯಲ್ಲಿರುವ ರಾಜ್ಯಗಳು “ಪ್ರದೇಶ”ಗಳಾಗಿ ಕಾರ್ಯನಿರ್ವಹಿಸಲಿವೆ. ಅದರಂತೆ ಕರ್ನಾಟಕವು ನೂತನ ಪ್ರದೇಶವಾಗಿ ಕಾರ್ಯನಿರ್ವಹಿಸಲಿದೆ. ಅಖಿಲ ಭಾರತೀಯ, ಕ್ಷೇತ್ರ, ಪ್ರದೇಶ, ಸಂಭಾಗ ರಚನೆಗಳ ಮೂಲಕ ನೂತನ ಭೌಗೋಳಿಕ ಪುನರ್ರಚನೆ ಸಂಘಕಾರ್ಯದ ವಿಸ್ತರಣೆ ಹಾಗೂ ಕಾರ್ಯದ ಗುಣಾತ್ಮಕ ವೃದ್ಧಿಗೆ ಸಹಕಾರಿಯಾಗಲಿದೆ.




5. ಕರ್ನಾಟಕದ ಶತಾಬ್ದಿ ಕಾರ್ಯಕ್ರಮಗಳ ಅಂಕಿಅಂಶ:

6. ರಾಣಿ ಅಬ್ಬಕ್ಕ 500 – ಕಾರ್ಯಕ್ರಮಗಳು
ರಾಣಿ ಅಬ್ಬಕ್ಕ ಅವರ 500ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಅವರ ಇತಿಹಾಸವನ್ನು ರಾಜ್ಯಾದ್ಯಂತ ತಿಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (KRMSS)ದ ವತಿಯಿಂದ ಮಂಗಳೂರು ವಿಭಾಗದ ಮೂರು ಜಿಲ್ಲೆಗಳಲ್ಲಿ ರಾಣಿ ಅಬ್ಬಕ್ಕ ಅವರ ಕುರಿತು 100 ಉಪನ್ಯಾಸ ಕಾರ್ಯಕ್ರಮಗಳನ್ನು ನೂರು ಕಡೆಗಳಲ್ಲಿ ವೈವಿಧ್ಯಮಯ ಚಟುವಟಿಕೆಗಳೊಂದಿಗೆ ಆಯೋಜಿಸಲಾಗಿದೆ. ಸುಮಾರು 125 ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳು ನಿರಂತರವಾಗಿ ಸಾಗಿ ಬಂದವು. 75 ಜನ ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೇರೆ ಬೇರೆ ವಿದ್ಯಾಸಂಸ್ಥೆಗಳಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡು 300 ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮೂಲಕ ಸುಮಾರು 23000 ವಿದ್ಯಾರ್ಥಿಗಳನ್ನು ತಲುಪುವುದಕ್ಕೆ ಸಾಧ್ಯವಾಯಿತು. 2500 ಶಿಕ್ಷಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಕಾರ್ಯಕ್ರಮದಲ್ಲಿ ಅಬ್ಬಕ್ಕರ ಕುರಿತು ಉಪನ್ಯಾಸ ಹಾಗೂ ಜೀವನಗಾಥೆಯ ಕುರಿತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಅಬ್ಬಕ್ಕ ಅವರ ಕುರಿತಾದ ಹರಿಕಥಾ ಕೀರ್ತನ, ಅಬ್ಬಕ್ಕ ಅವರ ಕುರಿತಾದ ರೂಪಕ, ನೃತ್ಯ ಪ್ರದರ್ಶನವನ್ನು ಮಾಡಲಾಗಿತ್ತು. ಅಬ್ಬಕ್ಕ ಅವರ ಕುರಿತಾದ ಅಷ್ಟಾವಧಾನ, ಅಬ್ಬಕ್ಕ ಅವರ ವರ್ಣಚಿತ್ರವನ್ನು ಬಿಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಲಾಗಿತ್ತು. 99ನೇ ಕಾರ್ಯಕ್ರಮದಲ್ಲಿ ಅಂಚೆಚೀಟಿಗಳ ಪ್ರದರ್ಶನ, ಅಬ್ಬಕ ಅವರ ಕುರಿತಾಗಿ ಇದುವರೆಗೆ ಕೆಲಸ ಮಾಡಿದ ಗಣ್ಯರನ್ನು ಕಾರ್ಯಕ್ರಮಗಳಲ್ಲಿ ಗುರುತಿಸಿ ಗೌರವಿಸಿದ್ದು ವಿಶೇಷ. ಮಹಿಳಾ ಸಾಧಕರಿಗೆ ಅಬ್ಬಕ್ಕ ಅವರ ಹೆಸರಿನಲ್ಲಿ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕಾರ್ಯಕ್ರಮಗಳನ್ನು ವಿವಿಧ ಸಂಸ್ಥೆಯವರು, ಸರಕಾರಿ ಅಕಾಡೆಮಿಯವರು ನಡೆಸುತ್ತಿದ್ದಾರೆ. ಇತಿಹಾಸವನ್ನು ಓದದ ಅದೆಷ್ಟೋ ಮಂದಿಗೆ ರಾಣಿ ಅಬ್ಬಕ್ಕ ಅವರ ಹಾಗೂ ತುಳುನಾಡಿನ ಇತಿಹಾಸವನ್ನು ಅರಿಯಲು ಕಾರ್ಯಕ್ರಮ ಪ್ರೇರಣೆಯಾಗಿದೆ. ರಾಜ್ಯದಲ್ಲಿ 500 ಗಂಟೆಗಳಲ್ಲಿ (21 ದಿನ) 500 ಕಾರ್ಯಕ್ರಮಗಳನ್ನು KRMSS ವತಿಯಿಂದ ಆಯೋಜಿಸಲಾಗಿದೆ.
ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ – 2025 – 26
ಪರಿವರ್ತನಾ ಟ್ರಸ್ಟ್ ಬೆಂಗಳೂರು, ಇವರಿಂದ ಕರ್ನಾಟಕ ದಕ್ಷಿಣದ 23 ಜಿಲ್ಲೆಯ 86 ತಾಲ್ಲೂಕುಗಳಲ್ಲಿ ಡ್ರಗ್ಸ್ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿತ್ತು. ಡ್ರಗ್ಸ್ ಜಾಗೃತಿ ರಥ, ಜಾಗೃತಿ ಸಭೆಗಳು, ಲಕ್ಷ ಕರಪತ್ರಗಳನ್ನು ಹಂಚುವ ಯೋಜನೆಯನ್ನು ಡಿಸೆಂಬರ್ 9 ರಿಂದ ಜನವರಿ 30ರವರೆಗೆ, 55 ದಿನಗಳ ಅವಧಿಯಲ್ಲಿ 181 ಜಾಗೃತಿ ಸಭೆ ಯೋಜನೆ ಮಾಡಲಾಗಿತ್ತು. ಇದರಲ್ಲಿ 52 ವಿವಿಧ ಸಂಘಟನೆಗಳು, 187 ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ 60500 ವಿದ್ಯಾರ್ಥಿಗಳು, 6,865 ಸಾರ್ವಜನಿಕರು ಭಾಗವಹಿಸಿದ್ದರು. 3,675 ಕಿಲೋಮೀಟರು ಜಾಥಾ ಇದಾಗಿತ್ತು. ಸರಕಾರಿ ವ್ಯವಸ್ಥೆಗಳಾದ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, NCC, NSS ಜಿಲ್ಲಾಡಳಿತಗಳು ಸಹಕಾರವನ್ನು ಕೊಟ್ಟಿತ್ತು.
ಅಭಿಯಾನದ ಸಮಿತಿಯಲ್ಲಿ ವೈದ್ಯರು, ಸಂಘ-ಸಂಸ್ಥೆಗಳ ಪ್ರಮುಖರು, ಸಾಮಾಜಿಕ ಕಾರ್ಯಕರ್ತರು, ಸಜ್ಜನ ಶಕ್ತಿ, ಗಣ್ಯ ವ್ಯಕ್ತಿಗಳ ಸಮಿತಿ ರಚನೆ ಮಾಡಿಸಲಾಗಿತ್ತು . ಪ್ರತಿ ಜಿಲ್ಲೆಯಲ್ಲೂ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಲಾಗಿತ್ತು. ಪ್ರತಿ ಜಿಲ್ಲೆಯಲ್ಲೂ ಆಗ್ರಹ ಪತ್ರ ಹೊರಡಿಸಲಾಗಿತ್ತು, ಅಭಿಯಾನದ ನಂತರ ಆಗ್ರಹ ಪತ್ರವನ್ನು ಜಿಲ್ಲಾಧಿಕಾರಿಗಳವರಿಗೆ ನೀಡಲಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದ TASKFORCEನಲ್ಲಿ, ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಸಮಿತಿ ಅಧಿಕಾರಿಗಳು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮುಂದಾಗಿದ್ದಾರೆ.
ಒಂದು ಟ್ಯಾಬ್ಲೋ ಮಾಡಿ ಅದರಲ್ಲಿ ಡ್ರಗ್ಸ್ ವ್ಯಸನಿಗಳ ಸಂಪರ್ಕದ ಭೀಕರತೆ, ಡ್ರಗ್ಸ್ ಜಾಲದಲ್ಲಿ ಸಿಕ್ಕಿದರೆ ಕಾನೂನು ಕುಳಿಕೆ ಮತ್ತು ಶಿಕ್ಷೆ, ಡ್ರಗ್ಸ್ ನಿಂದ ಯುವಶಕ್ತಿ ನಾಶ, ಇದರ ಹಣ ಭಯೋತ್ಪಾನೆಗೆ ಬಳಕೆ. ವಿದ್ಯಾಭ್ಯಾಸದಲ್ಲಿ ಮಕ್ಕಳಿಗೆ ಹಣ ನೀಡುವುದು ಮತ್ತು ಅದರ ದುರ್ಬಳಕೆ ಎಂಬ ವಿಷಯಗಳ ಚಿತ್ರ ಸಹಿತ ಮಾದರಿ ತಯಾರಿ ಮಾಡಲಾಗಿತ್ತು
ಮುಂದಿನ ಐದು ವರ್ಷದವರೆಗೆ ದೀರ್ಘಾವಧಿ ಜಾಗೃತಿ ಅಭಿಯಾನ ನಡೆಸುವ ಬಗ್ಗೆ ಯೋಚಿಸಲಾಗಿದೆ. ಮುಂದಿನ ದಿನಗಳಲ್ಲಿ ಜಾಗೃತಿ ನಡಿಗೆ, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಸ್ಲೋಗನ್ ಬರೆಯುವ ಸ್ಪರ್ಧೆ, ಭಾಷಣ, ಡಿಬೇಟ್, ಸೆಮಿನಾರ್ ಇತ್ಯಾದಿಗಳನ್ನು ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾಸಂಸ್ಥೆಗಳು ಮತ್ತು ಇಲಾಖೆಗಳ ಸಹಕಾರದೊಂದಿಗೆ ಶಾಲಾ ಕಾಲೇಜುಗಳ ದಾಖಲಾತಿ ಸಂದರ್ಭದಲ್ಲಿ ಟೆಸ್ಟಿಂಗ್ ಹಾಗೂ ವ್ಯಸನಿಗಳಿಗೆ ಚಿಕಿತ್ಸೆ ಇತ್ಯಾದಿ ಯೋಜನೆ ಹಮ್ಮಿಕೊಳ್ಳಲಾಗಿದೆ.
| ಸಂತ ರವಿದಾಸರ 650ನೇ ಜಯಂತಿ ಸರಕಾರ್ಯವಾಹರ ಹೇಳಿಕೆ |

ಸಂತ ಶಿರೋಮಣಿ ಸದ್ಗುರು ಶ್ರೀ ರವಿದಾಸ್ ಅವರ 650ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ನೀಡಿದ ಹೇಳಿಕೆ: ಸಂತ ಶಿರೋಮಣಿ ಸದ್ಗುರು ರವಿದಾಸ್ ಅವರ 650ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರಿಗೆ ಶ್ರದ್ಧೆಯ ಸುಮನಗಳನ್ನು ಅರ್ಪಿಸುತ್ತದೆ. ನಮ್ಮ ಶ್ರೇಷ್ಠ ಸಂತ ಪರಂಪರೆಯು ಭಾರತಕ್ಕೆ ದೇವರು ನೀಡಿದ ವಿಶೇಷ ಕೊಡುಗೆಯಾಗಿದೆ. ನಮ್ಮ ಸುದೀರ್ಘ ಇತಿಹಾಸದ ಪ್ರವಾಹದಲ್ಲಿ ಈ ಮಹಾನ್ ಸಂತ ಪರಂಪರೆಯು ಯಾವ ಸಮಾಜದಲ್ಲಿ ದೇವರ ಉಪಾಸನೆ ಮತ್ತು ಭಕ್ತಿಭಾವದ ಜಾಗರಣವನ್ನು ಮಾಡಿತೋ, ಅಲ್ಲಿಯೇ ಸಾಮಾಜಿಕ ಕುರೀತಿಗಳು ಮತ್ತು ಬೇಧಭಾವವನ್ನು ನಿರ್ಮೂಲನೆ ಮಾಡುವ ಮೂಲಕ ಸಾಮರಸ್ಯದ ಸಮಾಜವನ್ನು ಬಲಪಡಿಸುವ ಪ್ರಯತ್ನಗಳನ್ನು ಮಾಡಿತು. ಇದರ ಜೊತೆಗೆ ವಿದೇಶಿ ಆಡಳಿತಗಾರರ ದೌರ್ಜನ್ಯಗಳ ವಿರುದ್ಧ ಸಂಘರ್ಷಕ್ಕಾಗಿ ಸಮಾಜವನ್ನು ಜಾಗೃತಗೊಳಿಸಿತು ಮತ್ತು ಸಿದ್ಧಪಡಿಸಿತು.
ಈ ಮಹಾನ್ ಸಂತ ಪರಂಪರೆಯಲ್ಲಿ ಸಂತ ಶ್ರೀ ರವಿದಾಸ ಅವರಿಗೆ ವಿಶಿಷ್ಟ ಸ್ಥಾನವಿದೆ. ಅವರ ಕ್ರಿಯಾಶೀಲ ಜೀವನ ಮತ್ತು ಕಾರ್ಯ ನಮಗೆಲ್ಲರಿಗೂ ಪ್ರೇರಣೆಯ ಸ್ರೋತವಾಗಿದೆ. ಗೃಹಸ್ಥರಾಗಿದ್ದರೂ, ಸಾಂಸಾರಿಕ ವಿಷಯಗಳಲ್ಲಿ ಅಲಿಪ್ತರಾಗಿದ್ದು ಸಾಧು-ಸಂತರ ಮೇಲಿನ ಶ್ರದ್ಧೆ ಮತ್ತು ದೀನ-ಹೀನರ ಸೇವೆ ಅವರ ಸಹಜ ಸ್ವಭಾವವಾಗಿತ್ತು, ಆಧ್ಯಾತ್ಮಿಕ ದೃಷ್ಟಿಯಿಂದ ಪರಿಪೂರ್ಣವಾಗಿತ್ತು. ತಮ್ಮ ಜೀವನದ ಮೂಲಕ ಅವರು ಶ್ರಮದ ಘನತೆ ಮತ್ತು ಸಮಾಜದಲ್ಲಿ ಶುದ್ಧ, ಸಾತ್ವಿಕ ಮತ್ತು ಪಾರದರ್ಶಕ ಆಚರಣೆಯ ಮಹತ್ವವನ್ನು ಪುನಃಸ್ಥಾಪಿಸಿದರು.
ಸಂತ ಶ್ರೀ ರವಿದಾಸ್ ಅವರು ಸಮಾಜದಲ್ಲಿ ಒಂದು ಹೊಸ ಚೇತನವನ್ನು ಪ್ರವಹಿಸಿದ ಭಕ್ತಿಪ್ರಜ್ಞೆಯ ಮಹಾನ್ ಸಂತರಾಗಿದ್ದರು. ಅವರು ಜನ್ಮದ ಆಧಾರದ ಮೇಲೆ ರಚಿತಗೊಂಡ ವ್ಯತ್ಯಾಸವನ್ನು ತಿರಸ್ಕರಿಸಿದರು ಮತ್ತು ನಡವಳಿಕೆಯನ್ನು ಶ್ರೇಷ್ಠತೆಯ ಮಾನದಂಡವೆಂದು ಪರಿಗಣಿಸಿದರು. ರೂಢಿಗಳಿಂದ ಮತ್ತು ಕುರೀತಿಗಳಿಂದ ಸಮಾಜವನ್ನು ಮುಕ್ತಗೊಳಿಸುವುದು, ಕಾಲಬಾಹ್ಯ ಪರಂಪರೆಯ ತ್ಯಾಗ ಹಾಗೂ ಕಾಲ ಸುಸಂಗತ ಸಾಮಾಜಿಕ ಪರಿವರ್ತನೆಯ ಅಂಗೀಕಾರ ಮಾಡುವಲ್ಲಿ ಸಮಾಜದ ಮನಸನ್ನು ರೂಪಿಸುವಲ್ಲಿ ಅವರು ಐತಿಹಾಸಿಕ ಪಾತ್ರವನ್ನು ವಹಿಸಿದ್ದಾರೆ. ಅವರ ಚಿಂತನೆಗಳ ಮಹತ್ವವನ್ನು ಅರ್ಥೈಸಿಗೊಂಡು ಅವರ 41 ವಾಣಿಗಳನ್ನು ಶ್ರೀ ಗುರು ಗ್ರಂಥ ಸಾಹಿಬ್‌ನಲ್ಲಿ ‘ಶಾಬಾದ್’ ರೂಪದಲ್ಲಿ ಸೇರಿಸಲಾಗಿದೆ.
ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಸಂತ ಶ್ರೀ ರವಿದಾಸರು, ಅವರ ಶಿವಭಕ್ತಿ, ಸೇವಾ ಮನೋಭಾವ ಹಾಗೂ ಸಮಾಜದ ಮೇಲಿನ ನಿಶ್ಚಲಪ್ರೇಮದ ಕಾರಣ ಕಾಶಿಯ ವಿದ್ವತ್ ಜನರ ಸಹಿತ ಸಮಾಜದ ಎಲ್ಲಾ ವರ್ಗಗಳ ಜನರು ಅವರ ಮಹಾನತೆಯನ್ನು ಸ್ವೀಕರಿಸಿದರು. ಕಾಶಿ ನರೇಶ, ಝಾಲಿ ರಾಣಿ ಹಾಗೂ ಮೀರಾಬಾಯಿಯಂತಹ ರಾಜಮನೆತನದ ಸದಸ್ಯರು ಕೂಡ ಅವರನ್ನು ತಮ್ಮ ಗುರು ಎಂದು ಪರಿಗಣಿಸಿದರು. ಗುರು ಮತ್ತು ಶಿಷ್ಯರ ರೂಪದಲ್ಲಿ ಸಂತ ಶ್ರೀ ರವಿದಾಸರು ಮತ್ತು ಮೀರಾಬಾಯಿಯವರ ಬಾಂಧವ್ಯವು ನಿರ್ಗುಣ ಮತ್ತು ಸಗುಣ ಭಕ್ತಿ ಧಾರೆಗಳ ಮಿಲನವಾಗಿದೆ ಮತ್ತು ಜಾತಿಭೇದವನ್ನು ನಂಬುವವರಿಗೆ ಇದು ಅನುಕರಣೀಯ ಕಲಿಕೆಯೂ ಆಗಿದೆ.
ಮುಸ್ಲಿಂ ಆಕ್ರಮಣಕಾರರ ಭಯೋತ್ಪಾದನೆಯ ಆ ಕಠಿಣ ಸಮಯದಲ್ಲಿ, ಭಕ್ತಿಯ ನಿರ್ಮಲ ಧಾರೆಯ ಪ್ರವಹಿಸಿಸುತ್ತಾ ಸಂತ ಶ್ರೀ ರವಿದಾಸ ಅವರು ಧರ್ಮದ ಶ್ರೇಷ್ಠತೆಯನ್ನು ಉದ್ಘೋಷಿಸಿದರು ಮತ್ತು ಜನರಿಂದ ಧರ್ಮಪಾಲನೆ ಮಾಡುವುದಕ್ಕೆ ಆಗ್ರಹಿಸಿದರು. ಸದ್ಗುರು ಸಂತ ಶ್ರೀ ರವಿದಾಸ ಅವರನ್ನು ಇಸ್ಲಾಂಗೆ ಮತಾಂತರಿಸಿ ಮುಸ್ಲಿಮರಾಗಿಸುವುದಕ್ಕೆ ಹಲವಾರು ಪ್ರಯತ್ನಗಳು ನಡೆದವು. ಆದರೆ ಅವರ ಭಕ್ತಿ ಮತ್ತು ಆಧ್ಯಾತ್ಮಿಕ ಸಾಧನೆಯಿಂದ ಪ್ರಭಾವಿತರಾಗಿ ಅವರನ್ನು ಮತಾಂತರಗೊಳಿಸಬೇಕಾದವರು ಅವರ ಅನುಯಾಯಿಗಳಾದರು.
ವರ್ತಮಾನದ ಸಮಯದಲ್ಲಿ ವಿವಿಧ ವಿಭಜನಕಾರಿ ಶಕ್ತಿಗಳು ಜನಮಾನಸವನ್ನು ವರ್ಗ ಮತ್ತು ಜಾತಿಯ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿರುವಾಗ, ಪೂಜ್ಯ ಸಂತ ಶ್ರೀ ರವಿದಾಸ್ ಅವರ ಜೀವನ ಸಂದೇಶದ ಸಾರವನ್ನು ಅರ್ಥಮಾಡಿಕೊಳ್ಳುವ ಮೂಲಕ, ನಾವೆಲ್ಲರೂ ದೇಶ ಮತ್ತು ಸಮಾಜದ ಏಕತೆಗಾಗಿ ಕಾರ್ಯಮಾಡುವ ಸಂಕಲ್ಪವನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯಿದೆ.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್.ಉಮಾಪತಿ, ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು.